samachara
www.samachara.com
‘ಸಂವಿಧಾನ ಉಳಿವಿಗಾಗಿ ಕರ್ನಾಟಕ’: ಜನ ರಾಜಕಾರಣವೋ? ಕಾಂಗ್ರೆಸ್ ರಾಜಕಾರಣವೋ?
ವಿಚಾರ

‘ಸಂವಿಧಾನ ಉಳಿವಿಗಾಗಿ ಕರ್ನಾಟಕ’: ಜನ ರಾಜಕಾರಣವೋ? ಕಾಂಗ್ರೆಸ್ ರಾಜಕಾರಣವೋ?

‘ಕೋಮುವಾದಿ ಫ್ಯಾಸಿಸ್ಟ್ ಬಿಜೆಪಿಯನ್ನು ಸೋಲಿಸಿ’ ಎಂಬ ಕರೆಯೊಂದಿಗೆ ಕೆಲವು ವ್ಯಕ್ತಿಗಳು, ಸಂಘಟನೆಗಳು ಚಟುವಟಿಕೆ ಶುರು ಮಾಡಿವೆ. ಇವರಲ್ಲಿ ಹಲವರು ಕಾಂಗ್ರೆಸ್‌ ಗೆಲ್ಲಿಸಿ ಎಂದು ಪರೋಕ್ಷ ಹಾಗೂ ಬಹಿರಂಗವಾಗಿ ಅಲ್ಲಲ್ಲಿ ಹೇಳುತ್ತಾ ಬಂದಿದ್ದಾರೆ.

ನಂದಕುಮಾರ್ ಕೆ. ಎನ್‌

ನಂದಕುಮಾರ್ ಕೆ. ಎನ್‌

ಕರ್ನಾಟಕದ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಪ್ರಕ್ರಿಯೆಗಳು ಗರಿಗೆದರಿವೆ.

ಚುನಾವಣಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಹುರಿಯಾಳುಗಳನ್ನು ಆಯ್ಕೆ ಮಾಡುವುದು, ಚುನಾವಣೆಯಲ್ಲಿ ಸ್ಪರ್ಧಿಸುವುದು, ಪ್ರಮುಖ ಪಕ್ಷಗಳೊಂದಿಗೆ ವ್ಯವಹಾರ ಕುದುರಿಸುವುದು, ಹುಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತಗಳು ಹಂಚಿ ಹೋಗುವಂತೆ ಮಾಡಿ ಅದರ ಲಾಭವನ್ನು ತಮ್ಮ ಗೆಲುವನ್ನಾಗಿ ಮಾಡುವ ಕುತಂತ್ರಗಾರಿಕೆ ಮಾಡುವುದು, ಮಠಪೀಠಗಳಿಗೆ ಕಪ್ಪ ಕಾಣಿಕೆ ಕೊಟ್ಟು; ಕಾಲು ಹಿಡಿದು ಆಯಾ ಸಮುದಾಯದ ಮತಗಳು ತಮಗೇ ಹಾಕಿಸಬೇಕೆಂದು ಬೇಡುವುದು, ಸಿನಿಮಾ ತಾರೆಯರನ್ನು ದುಡ್ಡುಕೊಟ್ಟು ಪ್ರಚಾರಕ್ಕೆ ಇಳಿಸುವುದು, ಹಣ ಎಲ್ಲೆಲ್ಲಿ ಎಷ್ಟೆಷ್ಟು ಹಂಚಬೇಕೆಂದು ಯೋಜನೆ ರೂಪಿಸುವುದು, ಹಣ ಎಲ್ಲೆಲ್ಲಿಂದ ಸಂಗ್ರಹಿಸುವುದು, ಅಭ್ಯರ್ಥಿಗಳಾಗಬಯಸುವವರು ಯಾರಾರು ಹೆಚ್ಚು ಹಣ ನೀಡಬಲ್ಲರು ಎಂದು ಲೆಕ್ಕಾಚಾರ ಹಾಕುವುದು..

ಹೀಗೆ ಹತ್ತು ಹಲವು ಬಿರುಸಿನ ರಾಜಕೀಯ (?) ಚಟುವಟಿಕೆಗಳಲ್ಲಿ ಮುಳುಗಿಹೋಗಿವೆ.

ಇವೆಲ್ಲದರ ಮದ್ಯೆ ಇನ್ನೊಂದು ವಿದ್ಯಮಾನ ಗಮನ ಸೆಳೆಯುತ್ತಿದೆ. ಅದೇನೆಂದರೆ ‘ಕೋಮುವಾದಿ ಫ್ಯಾಸಿಸ್ಟ್ ಬಿಜೆಪಿಯನ್ನು ಸೋಲಿಸಿ’ ಎಂಬ ಕರೆಯೊಂದಿಗೆ ಕೆಲವು ವ್ಯಕ್ತಿಗಳು, ಸಂಘಟನೆಗಳು ಚಟುವಟಿಕೆ ಶುರು ಮಾಡಿವೆ. ಇವರಲ್ಲಿ ಹಲವರು ಕಾಂಗ್ರೆಸ್‌ ಗೆಲ್ಲಿಸಿ ಎಂದು ಪರೋಕ್ಷ ಹಾಗೂ ಬಹಿರಂಗವಾಗಿ ಅಲ್ಲಲ್ಲಿ ಹೇಳುತ್ತಾ ಬಂದಿದ್ದಾರೆ. ಇದಷ್ಟೇ ಅಲ್ಲದೇ ತಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮಾತುಗಳೊಂದಿಗೆ ಇತರ ವ್ಯಕ್ತಿಗಳಿಗೆ ಬೆಂಬಲಿಸುವ ಮಾತುಗಳನ್ನೂ ಆಡುತ್ತಿದ್ದಾರೆ. ಇದನ್ನು ‘ ಕರ್ನಾಟಕ ಜನಾಂದೋಲನಗಳ ಮಹಾಮೈತ್ರಿ’ ಬೆಂಬಲಿತ ಅಭ್ಯರ್ಥಿಗಳೆಂದು ಘೋಷಿಸುತ್ತಿದ್ದಾರೆ. ಇದಕ್ಕೆ ಕೆಲವು ಪ್ರತಿಷ್ಠಿತ ಬುದ್ಧಿಜೀವಿಗಳು ಹಾಗೂ ಸಾಹಿತಿಗಳ ಬೆಂಬಲವೂ ಇದೆ.

ಕರ್ನಾಟಕ ಕೋಮು ಸೌಹಾರ್ಧ ವೇದಿಕೆ, ಕರ್ನಾಟಕ ಜನಶಕ್ತಿ, ಸಮಾನತೆಗಾಗಿ ಜನಾಂದೋಲನ, ಸ್ವರಾಜ್ ಅಭಿಯಾನ, ಸಂವಿದಾನ ಉಳಿವಿಗಾಗಿ ಕರ್ನಾಟಕ, ಮಹಿಳಾ ಮುನ್ನಡೆ ಮೊದಲಾದ ಸಂಘಟನೆಗಳು ಮುಂಚೂಣಿಯಲ್ಲಿ ನಿಂತು ಈ ಪರ್ಯಾಯ ಜನರಾಜಕಾರಣವೆಂಬ ಚುನಾವಣಾ ಅಭಿಯಾನವನ್ನು ನಡೆಸುತ್ತಿವೆ.

‘ಸಂವಿದಾನ ಉಳಿವಿಗಾಗಿ ಕರ್ನಾಟಕ’ ಹೊರಡಿಸಿರುವ ಕರಪತ್ರದಲ್ಲಿ ಈ ರೀತಿ ತಮ್ಮ ನಿಲುವುಗಳನ್ನು ಹೇಳಲಾಗಿದೆ:

  1. ನಮ್ಮ ಮೊದಲ ಆದ್ಯತೆ ಜನರ ದನಿಯನ್ನು ನಾಳೆಯ ವಿದಾನ ಸಭೆಯಲ್ಲಿ ಎತ್ತಬಲ್ಲ ಜನಪರ ಅಭ್ಯರ್ಥಿಗಳೇ. ಆದರೆ ಈ ಪ್ರಯತ್ನವನ್ನು ಭ್ರಮೆಯಿಲ್ಲದೆ ವಾಸ್ತವಿಕ ನೆಲಗಟ್ಟಿನ ಮೇಲೆ ನಡೆಸಬೇಕು. ಗೆಲ್ಲುವ ಸಾಧ್ಯತೆ ಇರುವ, ಜನರ ನೋವಿಗೆ ದನಿಯಾಗಬಲ್ಲ ಅಭ್ಯರ್ಥಿ ಯಾವುದೇ ಪರ್ಯಾಯ ಪಕ್ಷಕ್ಕೆ ಸೇರಿದ್ದರೂ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದರೂ ತಾರತಮ್ಯ ಮಾಡದೇ ಸಂಪೂರ್ಣ ಬೆಂಬಲ ನೀಡಬೇಕು. ಅಂತಹವರನ್ನು ಗುರುತಿಸಿ ಅವರ ಗೆಲುವಿಗಾಗಿ ಎಲ್ಲರೂ ಶ್ರಮಿಸಬೇಕು.
  2. ಗೆಲ್ಲುವ ಸಾಧ್ಯತೆ ಇಲ್ಲದ ಪರ್ಯಾಯ ಅಭ್ಯರ್ಥಿಯ ಸ್ಪರ್ಧೆ ಸಂವಿಧಾನ ಶಕ್ತಿಗಳ ಗೆಲುವಿಗೆ ಸಹಕಾರಿಯಾಗುವ ಅಪಾಯವಿದ್ದಲ್ಲಿ ಕಣದಿಂದ ಹಿಂದೆ ಸರಿಯುವಂತೆ ವಿನಂತಿಸಿಕೊಳ್ಳಬೇಕು. ಒಂದು ವೇಳೆ ಅವರು ಸ್ಪರ್ಧಿಸಿದಲ್ಲಿ, ಅವರು ನಮಗೆಷ್ಟೇ ಆಪ್ತರಾಗಿದ್ದರೂ, ಅಂತಹ ಅಭ್ಯರ್ಥಿಯನ್ನು ದೇಶದ ಭವಿಷ್ಯದ ದೃಷ್ಠಿಯಿಂದ ಬೆಂಬಲಿಸದಿರುವ ನಿಷ್ಠೂರ ತೀರ್ಮಾನ ತೆಗೆದುಕೊಳ್ಳಬೇಕು.
  3. ಮಿಕ್ಕ ಕ್ಷೇತ್ರಗಳಲ್ಲಿ ಸಂವಿಧಾನ ವಿರೋಧಿ ಪಕ್ಷವನ್ನು ಹೊರತುಪಡಿಸಿ ಗೆಲ್ಲುವ ಸಾಧ್ಯತೆ ಇರುವ ಇತರೆ ಪಕ್ಷಗಳ ಅಭ್ಯರ್ಥಿಗೆ ಓಟು ನೀಡುವಂತೆ ಜನರನ್ನು ಕೋರಬೇಕು. ಆದರೆ ಈ ಪಕ್ಷಗಳು ಚುನಾವಣೆ ನಂತರ ಸಂವಿಧಾನ ವಿರೋಧಿ ಪಕ್ಷದ ಜೊತೆ ಯಾವುದೇ ಕಾರಣಕ್ಕೂ ಕೈಗೂಡಿಸುವುದಿಲ್ಲ ಎಂಬ ಬಹಿರಂಗ ವಾಗ್ದಾನವನ್ನು ಜನತೆಗೆ ನೀಡಬೇಕು.
  4. ಅಷ್ಟೇ ಅಲ್ಲದೆ, ಗೆಲ್ಲುವ ಸಾಧ್ಯತೆ ಇರುವ ಜನಪರ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಕಣದಿಂದ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಹಿಂತೆಗೆದುಕೊಳ್ಳಿ ಎಂದು ಪರಂಪರಾನುಗತ ಬಲಾಢ್ಯ ಪಕ್ಷಗಳ ಮೇಲೆ ನೈತಿಕ ಒತ್ತಡ ಹಾಕುವ ಪ್ರಯತ್ನವನ್ನೂ ನಾವು ಮಾಡಬೇಕು
  5. ಗೆಲ್ಲುವ ಸಾಧ್ಯತೆ ಇರುವ ಜನಪರ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಕಣದಿಂದ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಹಿಂತೆಗೆದುಕೊಳ್ಳಿ ಎಂದು ಪರಂಪರಾನುಗತ ಬಲಾಢ್ಯ ಪಕ್ಷಗಳ ಮೇಲೆ ನೈತಿಕ ಒತ್ತಡ ಹಾಕುವ ಪ್ರಯತ್ನವನ್ನೂ ನಾವು ಮಾಡಬೇಕು.

ಮೇಲಿನ ಐದು ಅಂಶಗಳನ್ನು ‘ಸಂಉಕ’ ಮುಂದಿಟ್ಟಿದೆ. ಅಷ್ಟೆ ಅಲ್ಲ, “ಒಟ್ಟಿನಲ್ಲಿ ನಮ್ಮ ಪ್ರಯತ್ನ ಸಂವಿಧಾನ ವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸುವುದಾಗಿರಬೇಕು. ಕನಿಷ್ಠ ಹತ್ತು ಜನರಾದರೂ ಜನಪರ ಚಳುವಳಿಗಳ ಪರವಾಗಿ ದನಿಯೆತ್ತುವ ಅಭ್ಯರ್ಥಿಗಳು ಗೆದ್ದು ಬರುವಂತೆ ಮಾಡುವುದಾಗಿರಬೇಕು ಮತ್ತು ಜನಸಾಮಾನ್ಯರ ಹಕ್ಕೊತ್ತಾಯಗಳು ಮುನ್ನಲೆಗೆ ಬಂದು ಅಧಿಕಾರಕ್ಕೆ ಬರುವ ಪಕ್ಷ ಯಾವುದೇ ಆಗಿದ್ದರೂ ಅವನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಸಾಮಾಜಿಕ ಒತ್ತಡವನ್ನು ಸೃಷ್ಟಿಸುವುದಾಗಿರಬೇಕು” ಎಂಬ ಆಶಯವೂ ಈ ನಾಯಕರು ಮುಂದಿಟ್ಟಿದ್ದಾರೆ. ಇದರ ಜತೆಗೆ ಅವರೇ ಹೇಳಿದ ಇನ್ನೊಂದು ಸಾಲು ಗಮನಾರ್ಹವಾಗಿದೆ. “...ಆದರೆ ಇದುವರೆಗಿನ ಯಾವ ಆಳುವ ಪಕ್ಷಗಳೂ ಸಂವಿಧಾನದ ಆಶಯಗಳಿಗನುಸಾರ ನಡೆದುಕೊಳ್ಳಲಿಲ್ಲ...” ಎಂದೂ ‘ಸಂಉಕ’ ಹೇಳುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಆಳುವವರು ಸಂವಿಧಾನದ ಆಶಯಗಳಿಗೆ ಬದ್ಧರಾಗಿಲ್ಲ ಎಂದು ಅಂದುಕೊಂಡರೂ, ಚುನಾವಣೆ ವಿಚಾರದಲ್ಲಿ ಅವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ, ಸಂಉಕದ ನಾಯಕರು ಗೆಲ್ಲುವ ಕುದುರೆಯನ್ನು ಹಿಡಿದು ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ.

ಅದರ ಭಾಗವಾಗಿ, ಮಾಜಿ ಪ್ರಧಾನಿ ದೇವೇಗೌಡರನ್ನು, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ನಂತ ನಡೆದ ಪ್ರಹಸನಗಳು ಈಗ ರಾಜ್ಯದ ಮುಂದಿವೆ.

‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ದ ನಿಲುವುಗಳು ಹಾಗೂ ಕಾರ್ಯಗಳಲ್ಲಿ ಹಲವು ಗೊಂದಲಗಳು ಹಾಗೂ ವೈರುಧ್ಯಗಳು ಕಾಣುತ್ತವೆ. ಈ ಸಮಯದಲ್ಲಿ ಕೇಳಲೇಬೇಕಾದ ಹಲವು ಪ್ರಶ್ನೆಗಳಿವೆ.

ಒಂದೆಡೆ ಇದುವರೆಗಿನ ಯಾವ ಆಳುವ ಪಕ್ಷಗಳೂ ಸಂವಿಧಾನದ ಆಶಯಗಳಿಗನುಸಾರವಾಗಿ ನಡೆದುಕೊಳ್ಳಲಿಲ್ಲ ಎಂದು ಹೇಳುತ್ತಾ ಕಾಂಗ್ರೆಸಿಗೆ ಅನುಕೂಲ ಮಾಡಿಕೊಡಲು ಜೆಡಿಎಸ್ ಜತೆ ಮಾತುಕತೆ ನಡೆಸಿ ಸೀಟು ಹೊಂದಾಣಿಕೆ ಕುದುರಿಸಲು ಹೋಗುತ್ತಾರೆ. ಅದೇ ವೇಳೆಯಲ್ಲಿ ಇವರು ಹೇಳುತ್ತಿರುವ ಗೆಲ್ಲುವ ಸಾಧ್ಯತೆ ಇರುವ ಜನಪರ ಅಭ್ಯರ್ಥಿಗಳು ಸೆಣಸುತ್ತಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಹಿಂಪಡೆಯುವ ಕುರಿತಾದ ಒಪ್ಪಂದ ಮಾಡಿಕೊಂಡ ಬಗ್ಗೆ ಯಾವುದೇ ಚಕಾರ ಎತ್ತುವುದಿಲ್ಲ.

ಸಹಜವಾಗಿಯೇ ಕಾಂಗ್ರೆಸ್ಸಿನೊಂದಿಗೆ ಒಳ ಒಪ್ಪಂದಗಳೇನಾದರೂ ಮಾಡಿಕೊಂಡಿದ್ದಾರೆಯೇ? ಎಂಬ ಅನುಮಾನ ಸಹಜವಾಗಿಯೇ ಮೂಡುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನೂ ಈ ನಿಯೋಗ ಭೇಟಿ ಮಾಡಿ ಕೋಮುವಾದಿ ಮತಾಂಧ ಶಕ್ತಿಗಳನ್ನು ಅಧಿಕಾರಕ್ಕೇರದಂತೆ ತಡೆಯಬೇಕೆಂದು ಮನವಿ ಸಲ್ಲಿಸಿ ಚರ್ಚಿಸಿತು ಎಂಬ ಸುದ್ಧಿಗಳು ಕೂಡ ಪ್ರಕಟವಾದವು.

ಇದು ಕೂಡ ಒಂದು ರೀತಿಯ ತಮಾಷೆಯ ವಿಚಾರ. ಕೋಮುವಾದಿ ಮತಾಂಧ ಶಕ್ತಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದೇ ತಾನೇ ಅರ್ಥ? ಯಾಕೆಂದರೆ ಬೇರೆ ಯಾವ ಪಕ್ಷಗಳಿಗೂ ಸದ್ಯದ ಪರಿಸ್ಥಿತಿಯಲ್ಲಿ ಅಧಿಕಾರಕ್ಕೆ ಬರುವಷ್ಟು ಶಕ್ತಿ ಇಲ್ಲ ಎಂಬ ಗ್ರಹಿಕೆ ಇದರ ಹಿಂದಿರಬೇಕು ಅಲ್ವಾ? ಅದನ್ನು ನೇರವಾಗಿ ಹೇಳದೇ ಈ ರೀತಿ ಏನೋ ಹೊಸತನ್ನು, ಪರ್ಯಾಯವನ್ನು ಸೃಷ್ಟಿಸಿ ಬಿಡುತ್ತೇವೆ ಎಂಬ ಭ್ರಮೆ ಮೂಡಿಸುವ ಅಗತ್ಯವಾದರೂ ಏನಿದೆ?

ಇವರ ಪ್ರಕಾರ ಗೆಲ್ಲಬಹುದಾದ ಅಭ್ಯರ್ಥಿ ಯಾರು? ಮತಗಳು ಹಂಚಿ ಹೋಗಿ ಮತಾಂಧ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಏರದಂತೆ ತಡೆಯುವುದೆಂದರೆ ಬಿಜೆಪಿಯನ್ನು ಮಾತ್ರವೇ ಅಧಿಕಾರಕ್ಕೇರದಂತೆ ತಡೆಯುವುದೆ? ಇತರ ಪಕ್ಷಗಳು ಕೋಮುವಾದವನ್ನು ಮತಾಂಧತೆಯನ್ನು ಬಳಸಿಕೊಳ್ಳುತ್ತಿಲ್ಲವೇ? ಚುನಾವಣೆಯಲ್ಲಿ ಒಂದಷ್ಟು ಅಭ್ಯರ್ಥಿಗಳನ್ನು ಗೆಲ್ಲಿಸಿ ಶಾಸನ ಸಭೆಗಳಲ್ಲಿ ಪ್ರತಿಷ್ಠಾಪಿಸುವ ಮೂಲಕ ಕೋಮುವಾದಿ ಮತಾಂಧ ಶಕ್ತಿಗಳನ್ನು ತಡೆಯಲು ಸಾಧ್ಯವೇ? ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಕೋಮು, ಮತ ಸಂಬಂಧಿತ ಹಿಂಸೆಗಳಲ್ಲಿ ಕರ್ನಾಟಕ ಇಡೀ ಭಾರತದಲ್ಲಿ ಎರಡನೆಯ ಸ್ಥಾನ ಯಾಕೆ ಪಡೆಯಿತು? ಅಧಿಕಾರ ಇದ್ದಾಗಲೂ ಕಾಂಗ್ರೆಸ್ಸಿಗೆ ಕೋಮು ಹಿಂಸೆಗಳನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ?

ಬಿಜೆಪಿ ಮುಖಂಡರ ಮಕ್ಕಳು ಸೇರಿಕೊಂಡು ನಡೆಸಿದ್ದೆನ್ನಲಾದ ವಿಜಯಪುರದ ದಾನಮ್ಮನ ಅತ್ಯಾಚಾರ ಕೊಲೆ ಪ್ರಕರಣವನ್ನು ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರವೇ ಮುಚ್ಚಿಹಾಕಿ ಅತ್ಯಾಚಾರಿಗಳು ಮತ್ತು ಕೊಲೆಗಡುಕರನ್ನು ರಕ್ಷಿಸಿತಲ್ಲವೆ? ಅದರ ವಿರುದ್ಧ ಹೋರಾಡಿದ ಭಾಸ್ಕರ್ ಪ್ರಸಾದ್, ವಿ. ಆರ್. ಕಾರ್ಪೆಂಟರ್ ಮತ್ತಿತರರನ್ನು ಸುಳ್ಳು ಕೇಸುಗಳಡಿ ಬಂಧಿಸಿ ದಾನಮ್ಮಳ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಆಯೋಜಿಸಿದ್ದ ‘ಚಲೋ ವಿಜಯಪುರ’ ಕಾರ್ಯಕ್ರಮವನ್ನು ಸಂಪೂರ್ಣವಾಗಿ ದಮನಿಸಿದ ಗರಿಮೆ ಸಿದ್ಧರಾಮಯ್ಯ ಸರ್ಕಾರದ್ದೇ ತಾನೆ?

ಪರಿಸ್ಥಿತಿ ಹೀಗಿರುವಾಗ, ಈ ನಡೆಗಳನ್ನು ‘ಜನರಾಜಕಾರಣ’ ಅನ್ನಲು ಹೇಗೆ ಸಾಧ್ಯ? ಇವು ಸದ್ಯ ಹುಟ್ಟಿಕೊಂಡಿರುವ ಪ್ರಶ್ನೆಗಳು. ಚುನಾವಣೆ ಫಲಿತಾಂಶ ಖಂಡಿತಾ ಇದಕ್ಕೆ ಉತ್ತರ ಆಗಲಾರದು.