‘ತ್ರಿವಳಿ ತಲಾಕ್ ವಿರುದ್ಧ ಹೋರಾಟ, ಮುಸ್ಲಿಂ ಸಮುದಾಯದ ಸುಧಾರಣೆಗೆ ನಡೆಯುತ್ತಿರುವ ಆಂದೋಲನ’: ನಸ್ರೀನ್ ಮಿಠಾಯಿ
ವಿಚಾರ

‘ತ್ರಿವಳಿ ತಲಾಕ್ ವಿರುದ್ಧ ಹೋರಾಟ, ಮುಸ್ಲಿಂ ಸಮುದಾಯದ ಸುಧಾರಣೆಗೆ ನಡೆಯುತ್ತಿರುವ ಆಂದೋಲನ’: ನಸ್ರೀನ್ ಮಿಠಾಯಿ

ನಸ್ರೀನ್ ಮಿಠಾಯಿ.

ತ್ರಿವಳಿ ತಲಾಕ್ ನಿಷೇಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಮುಸ್ಲಿಂ ಸಮುದಾಯದ ಸುಧಾರಣೆಯ ದೃಷ್ಟಿಯಿಂದ ಅದರಲ್ಲೂ ಮುಸ್ಲಿಂ ಮಹಿಳೆಯರ ದೃಷ್ಟಿಯಿಂದ ಅತ್ಯಂತ ಮಹತ್ವವಾದದ್ದು. ಇಂತಹ ಒಂದು ತೀರ್ಪು ಇದ್ದಕ್ಕಿದ್ದಂತೆ ಆಕಾಶದಿಂದ ಉದುರಿದ್ದಲ್ಲ. ಇದರ ಹಿಂದೆ ಹಲವು ವರ್ಷಗಳ ಕಾಲ ನೊಂದ ಮಹಿಳೆಯರೇ ಮುಂದಾಳತ್ವ ವಹಿಸಿ ನಡೆಸಿದ ಹೋರಾಟವಿದೆ; ಅಪಾರ ಶ್ರಮವಿದೆ. ಪವಿತ್ರ ಖುರಾನ್ ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ತಮಗೆ ನ್ಯಾಯವನ್ನು ಕೇಳಿ ಯಶಸ್ವಿಯೂ ಆಗಿದ್ದಾರೆ.

ತಾವು ಮತ್ತೆ ಮತ್ತೆ ಅನ್ಯಾಯಕ್ಕೊಳಗಾದಾಗಲೆಲ್ಲ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಸುಧಾರಣೆಯ ಅವಶ್ಯಕತೆಯನ್ನು ಮುಸ್ಲಿಂ ಸಮುದಾಯದ ವಕ್ತಾರರಿಗೆ ನೆನಪಿಸಿದ್ದಾರೆ. ಆದರೆ ಅವರು ಯಾವುದೇ ಬದಲಾವಣೆಗೆ ಒಪ್ಪಿಕೊಳ್ಳದೇ ಇದ್ದಾಗ, ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಲೇಬೇಕಾಗಿ ಬಂತು. ಆದರೆ ಸುಪ್ರಿಂ ಕೋರ್ಟ್‌ನಲ್ಲಿ ತೀರ್ಪು ಬರಲು ಬಿಜೆಪಿ ಸರ್ಕಾರವೇ ಕಾರಣ ಅನ್ನುವ ರೀತಿಯಲ್ಲಿ ಈ ಮುಸ್ಲಿಂ ಪುರಷ ಪ್ರಧಾನತೆಯ ವಕ್ತಾರರೂ, ಹಿಂದುತ್ವದ ವಕ್ತಾರರೂ ಒಂದೇ ಸಮನೇ ಚೀರುತ್ತಿದ್ದಾರೆ. ಮುಸ್ಲಿಂ ಮಹಿಳೆಯರ ಹೆಸರಲ್ಲಿ (ಅ)ಧರ್ಮ ರಾಜಕಾರಣ ನಡೆಸುತ್ತಿರುವುದು ಮುಸ್ಲಿಂ ಮಹಿಳೆಯರ ಶ್ರಮ, ಹೋರಾಟಗಳನ್ನು ಕಡೆಗಣಿಸಿ ತಂತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವ ಹುನ್ನಾರವಾಗಿ ಇದು ತೋರುತ್ತಿದೆ.

ಮತ್ತೊಂದು ಕಡೆ ತ್ರಿವಳಿ ತಲಾಕ್ ವಿಷಯವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯರು ಮತ್ತು ಭಾರತೀಯ ಮುಸ್ಲಿಂ ಮಹಿಳಾ ಆಂದೋನಲದ (ಬಿಎಂಎಂಎ) ಸದಸ್ಯರಿಗೆ ಇವರೆಲ್ಲಾ ಬಿಜೆಪಿ-ಆರ್.ಎಸ್.ಎಸ್ ಏಜೆಂಟರೆಂಬಂತೆ ಬಿಂಬಿಸಿ ಅಪಮಾನಿಸುವ ಎಂದು ಕೆಲಸ ಮಾಡಲಾಗ್ತಿದೆ.

ಈ ಹಿನ್ನೆಲೆಯಲ್ಲಿ ವಾಸ್ತವದಲ್ಲಿ ಇಂತಹ ಒಂದು ಚಾರಿತ್ರಿಕ ತೀರ್ಪು ಬರಲು ಕಾರಣವಾದ ದೀರ್ಘ ಹೋರಾಟದ ಬಗ್ಗೆ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಕರ್ನಾಟಕದ ರಾಜ್ಯ ಸಂಚಾಲಕಿಯಾಗಿ ನನ್ನ ಅನುಭವವನ್ನು ಮತ್ತು ಅದರ ಹಿನ್ನೆಲೆಯನ್ನು ಹಂಚಿಕೊಳ್ಳಲು ಬಯಸಿದ್ದೇನೆ.

2012ರಲ್ಲಿ ಟ್ರಿಪಲ್ ತಲಾಕ್‌ನ್ನು ವಿರೋಧಿಸಿ ರಾಷ್ಟ್ರಮಟ್ಟದ ಸಮಾವೇಶ ಮುಂಬೈಯಲ್ಲಿ ನಡೆಯಿತು. ಅಂದು ದೇಶದ ನಾನಾ ಭಾಗಗಳಿಂದ ಬಂದಿದ್ದ 400ಕ್ಕಿಂತಲೂ ಹೆಚ್ಚು ಮುಸ್ಲಿಂ ಮಹಿಳಾ ಪ್ರತಿನಿಧಿಗಳು ಸೇರಿದ್ದರು. ಗಂಡನಿಂದ ತ್ರಿವಳಿ ತಲಾಕ್ ಪಡೆದ ಮಹಿಳೆಯರು ತಮ್ಮ ಸಂಕಷ್ಟವನ್ನು ವೇದಿಕೆಯ ಮೇಲೆ ಬಂದು ಹಂಚಿಕೊಂಡು, ಕಣ್ಣೀರಿಟ್ಟಿದ್ದನ್ನು ನಾನಂದು ಕಂಡೆ. ಇಸ್ಲಾಂನಲ್ಲಿ ಮಹಿಳಾ ಸಮಾನತೆ ವಿಷಯವನ್ನಿಟ್ಟುಕೊಂಡು ಅಷ್ಟೊಂದು ಮುಸ್ಲಿಂ ಮಹಿಳೆಯರು ಒಂದು ಕಡೆ ಸೇರಿದ್ದು ನೋಡಿ ನನಗೆ ಆಶ್ಚರ್ಯವೂ, ಸಂತೋಷವೂ ಏಕಕಾಲಕ್ಕೆ ಆಗಿತ್ತು.

ನಾನು ಆಗ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಸದಸ್ಯೆಯಾಗಿ ಹೋಗಿರಲಿಲ್ಲ. ನಾನು Center for Peace Studies (CPS) ಫೆಲೋ ಆಗಿ ಅಲ್ಲಿ ಭಾಗವಹಿಸಿದ್ದೆ. ನಮ್ಮ ಕೋ-ಆರ್ಡಿನೇಟರ್ ಆದ ಜಕಿಯಾ ಸೋಮನ್, ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಈ ಸಿಪಿಎಸ್‌ ಮತ್ತು ಬಿಎಂಎಂಎ ಎರಡನ್ನೂ ಹುಟ್ಟು ಹಾಕಿದ್ದು ಜಕಿಯಾ ಸೋಮನ್. ನಾನು ಆ ಸಂದರ್ಭದಲ್ಲಿ ಸಿಪಿಎಸ್‌ ಫೆಲೋ ಆಗಿ ಸಚಾರ್ ವರದಿಯ 7 ವರ್ಷದ ನಂತರದ ಭಾರತೀಯ ಮುಸಲ್ಮಾನರ ಸಮಜೋ-ಆರ್ಥಿಕ ಸ್ಥಿತಿಗತಿ ಅಧ್ಯಯನದ ಭಾಗವಾಗಿ ಕರ್ನಾಟದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೆ. ಯಾವಾಗ ನಾನು ಸಿಪಿಎಸ್‌ ಭಾಗವಾಗಿ ಇಡೀ ರಾಜ್ಯ, ದೇಶದ ಮಟ್ಟದಲ್ಲಿ ಸುತ್ತಾಟ ಪ್ರಾರಂಭಿಸಿದೆನೋ, ಅಂದಿನಿಂದ ಮುಸ್ಲಿಂ ಸಮುದಾಯದ ಶೋಚನೀಯ ಸ್ಥಿತಿ, ಅಭದ್ರತೆ, ಅನಕ್ಷರತೆ, ಬಡತನ, ಹಿಂದುಳಿದಿರುವಿಕೆಗಳಿಗೆ ಸಾಕ್ಷಿಯಾಗತೊಡಗಿದೆ. ನಾನು ನನ್ನ ಸಮುದಾಯಕ್ಕಾಗಿ ತಳಮಟ್ಟದಲ್ಲಿ ಇಳಿದು ಕೆಲಸ ಮಾಡಬೇಕೆಂಬ ಬಯಕೆ, ತುಡಿತ ನನ್ನಲ್ಲಿ ಒಡಮೂಡಿತು. ನಂತರ ನನ್ನ ಇತರೆಲ್ಲಾ ಕಾರ್ಯಗಳೊಂದಿಗೆ ಮುಸ್ಲಿಂ ಸಮುದಾಯದ ಶಿಕ್ಷಣ, ಸಬಲೀಕರಣ, ಸೌಹಾರ್ದತೆ, ಲಿಂಗಸಮಾನತೆಯ ಮೇಲೆ ನಿರಂತರವಾಗಿ ತೊಡಗಿಕೊಂಡು ಕೆಲಸ ಮಾಡುತ್ತಿದ್ದೇನೆ.

2007 ರಲ್ಲಿ ಜನ್ಮತಳೆದ ಬಿಎಂಎಂಎ ಇಂದು ಒಂದು ಲಕ್ಷಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆಯಾಗಿದೆ. ಈ ಸಂಘಟನೆಯಲ್ಲಿ ಕೇವಲ ಮುಸ್ಲಿಂ ಮಹಿಳೆಯರಷ್ಟೇ ಅಲ್ಲದೆ, ಮುಸ್ಲಿಂ ಪುರುಷರು, ಇತರೆ ಸಮುದಾಯದವರೂ ಇದ್ದಾರೆ. ಇದರ ರಾಜ್ಯ ಸಂಚಾಲಕಿಯರು ಕೋಮು ಗಲಭೆಗಳಲ್ಲಿ ತಮ್ಮ ಮಕ್ಕಳನ್ನು, ಕುಟುಂಬದವರನ್ನು ಕಳೆದುಕೊಂಡವರೂ, ಆಗಿದ್ದು ಕೋಮುವಾದದ ವಿರುದ್ದದ ಧ್ವನಿ ಎತ್ತುತ್ತಲೇ, ಲಿಂಗ ಸಮಾನತೆಗಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸದ ಜೊತೆಗೆ ಅವರ ಕುಟುಂಬದ ಎಲ್ಲಾ ಸದಸ್ಯರು ಬೆಂಬಲಕ್ಕೆ ನಿಂತಿದ್ದಾರೆ. ಇವರು ಯಾರೂ ಕುಟುಂಬವನ್ನು ಧಿಕ್ಕರಿಸಿ ಬಂದು, ಮಹಿಳೆಯರ ಹಕ್ಕಿನ ಬಗ್ಗೆ ಮಾತಾಡುತ್ತಿರುವರಲ್ಲ. ಈ ಸಂಘಟನೆಯು ಇಷ್ಟೂ ವರ್ಷಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಬದುಕನ್ನು ನರಕಸದೃಶಗೊಳಿಸುವ ತ್ರಿವಳಿ ತಲಾಕ್‌ನ್ನು ವಿರೋಧಿಸಿ ಎಲ್ಲಾ ಸರ್ಕಾರಗಳಿಗೂ ಮನವಿಯನ್ನು ಸಲ್ಲಿಸಿದೆ. ಇದರ ರಾಜ್ಯಮಟ್ಟದ ವಾರ್ಷಿಕ ಸಮಾವೇಶಗಳಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ತ್ರಿವಳಿ ತಲಾಕ್‌ಗೆ ಒಳಗಾದ ಮಹಿಳೆಯರು ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ. ಸಂಘಟನೆಯಿಂದ 2014ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ಸುಧಾರಣೆ ಕುರಿತು ಮುಸ್ಲಿಂ ಮಹಿಳೆಯರ ದೃಷ್ಟಿಕೋನವನ್ನು ಸಂಗ್ರಹಿಸಲು ರಾಷ್ಟ್ರಮಟ್ಟದಲ್ಲಿ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಈ ಅಧ್ಯಯನಕ್ಕಾಗಿ ಸಂಘಟನೆಯ ಮಹಿಳೆಯರು ಪ್ರತಿ ರಾಜ್ಯದಲ್ಲಿಯೂ ಬೇರೆ ಬೇರೆ ಜಿಲ್ಲೆಗಳಲ್ಲಿ ಓಡಾಡಿ ಮಹಿಳೆಯರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ.

ನಾನು ಬಿಜಾಪುರ, ಮೈಸೂರು, ಬೆಂಗಳೂರು, ಬೆಳಗಾಂ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳನ್ನು ಓಡಾಡಿ ಮಹಿಳೆಯರೊಂದಿಗೆ ಮಾತಾಡಿದ್ದೇನೆ. ತ್ರಿವಳಿ ತಲಾಕ್‌ಗೆ ಒಳಗಾದ ನೂರಾರು ಮಹಿಳೆಯರ ಸಂದರ್ಶನವನ್ನು ಮಾಡಿದ್ದೇನೆ. ಎಲ್ಲಾ ರಾಜ್ಯಗಳಿಂದ ಕ್ರೋಢೀಕರಿಸಿದ ಮಾಹಿತಿ-ಅಧ್ಯಯನದ ವರದಿಯನ್ನು ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಲು ಸಲ್ಲಿಸಲಾಗಿದೆ. ಈ ಅಧ್ಯಯನದ ಹಿಂದೆ ಸುಮಾರು ಸಂಘಟನೆಗಳ ಶ್ರಮ ಇದೆ.

ಮುಖ್ಯವಾಗಿ, ಬಿಜಾಪುರದ ಸ್ವರಾಜ್ ನ್ಯಾಯ ಚಾವಡಿಯ ಸಾಹೆರಾ ಅಕ್ಕ ಮತ್ತು ಅವರ ತಂಡ, ಸ್ವರಾಜ್ ಸಂಘಟನೆ, ವಿಮೋಚನಾ, ಸ್ಲಂ-ಜನಾಂದೋಲನ ಕರ್ನಾಟಕ ಹೀಗೆ ಹಲವರು ಸಹಕರಿಸಿದ್ದಾರೆ. ಇಂದು ಬಿಎಂಎಂಎ 15 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಪ್ರತಿಯೊಂದು ರಾಜ್ಯಗಳಲ್ಲಿಯೂ ತ್ರಿವಳಿ ತಲಾಕ್‍ಗೆ ಒಳಗಾದ ಸಾವಿರಾರು ಮಹಿಳೆಯರ ಕೇಸುಗಳಿವೆ. ಆದರೆ ನಾನಾ ಕಾರಣಗಳಿಂದ ಸಮಾಜಕ್ಕೆ ತಮ್ಮ ನೋವನ್ನು ತಿಳಿಸಲಾಗದೇ ಒದ್ದಾಡುತ್ತಿರುವ ಮಹಿಳೆಯರೆಷ್ಟೋ? ಇಂತಹ ತ್ರಿವಳಿ ತಲಾಕ್ ನೀಡುವ ಸಂದರ್ಭದಲ್ಲಿ ದೊಡ್ಡ ದೊಡ್ಡ ಮೌಲ್ವಿಗಳು, ಉಲೇಮಗಳೂ ಸಮ್ಮತಿ ನೀಡಿದ ತಲಾಕ್ ಪತ್ರಗಳೂ ನಮಗೆ ಲಭ್ಯವಾಗಿವೆ. ತಂತಮ್ಮ ಲೆಟರ್ ಹೆಡ್‍ಗಳಲ್ಲಿರುವ ಪತ್ರಗಳೇ ಅವು. ಆದರೆ ಸಮುದಾಯದ ಹಿತದೃಷ್ಟಿಯಿಂದ ನಾವು ಅಂತವನ್ನು ಬಹಿರಂಗಪಡಿಸಿಲ್ಲ ಅಷ್ಟೇ.

1984ರಲ್ಲಿ ಶಾಬಾನುವಿನಿಂದ ಮೊದಲಗೊಂಡು ಇಲ್ಲಿವರೆಗೂ ಸಾವಿರಾರು ಮಹಿಳೆಯರು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಬದಲಾವಣೆ ಬಯಸಿ ಒತ್ತಾಯಿಸಿದ್ದಾರೆ. ಲಿಂಗ ಸಮಾನತೆಗಾಗಿ ಧ್ವನಿ ಎತ್ತಿದ್ದಾರೆ. ಸಂಘಟನೆಯು ಸಾವಿರಾರು ಮಹಿಳೆಯರೊಂದಿಗೆ, ಪ್ರಾಧ್ಯಾಪಕರೊಂದಿಗೆ, ವಕೀಲರೊಂದಿಗೆ, ಧಾರ್ಮಿಕ ಪಂಡಿತರೊಂದಿಗೆ ವಿಶ್ವವಿದ್ಯಾಲಯಗಳಲ್ಲಿ ಕುಳಿತು ಚರ್ಚಿಸಿ ಮುಸ್ಲಿಂ ಕೌಟುಂಬಿಕ ಕಾನೂನಿನ ಕುರಿತು ಸಲಹೆಗಳನ್ನು ಸಂಗ್ರಹಿಸಿ ಕರಡನ್ನು ರಚಿಸಿದೆ. ಮುಖ್ಯವಾಗಿ ಭಾರತದ ಸಂವಿಧಾನ ಮತ್ತು ಖುರಾನ್‌, ಎರಡರ ಆಶಯದ ಮೇಲೆ ಕರಡನ್ನು ತಯಾರಿಸಿ 2015ರಿಂದಲೇ ಎಲ್ಲಾ ಸಂಸದರು, ಶಾಸಕರು ಹಾಗೂ ಆಯೋಗಗಳಿಗೆ ಕಳಿಸಲಾಗಿತ್ತು. ನಾನು ನಮ್ಮ ಕರ್ನಾಟಕದ ಎಲ್ಲಾ ಮುಸ್ಲಿಂ ಶಾಸಕರಿಗೆ ಈ ಕರಡಿನ ಪ್ರತಿಯನ್ನು ಕಳುಹಿಸಿದ್ದಲ್ಲದೆ ಅವರ ಮನೆಗಳ ಬಾಗಿಲು ತಟ್ಟಿ, ಭೇಟಿ ಮಾಡಿ ಮಾತನಾಡಿಸಲು ಹೋಗಿದ್ದೆನು. ಅವರೆಲ್ಲರ ಪ್ರತಿಕ್ರಿಯೆ ಮಾತ್ರ ನಿರಾಶಾದಾಯಕವಾಗಿತ್ತು.

"ಅತೀ ಪಾಂಡಿತ್ಯ ಇರುವ ಮೌಲ್ವಿಗಳು ಸಮ್ಮತಿ ಕೊಟ್ಟರೆ ಮಾತ್ರ ನಮ್ಮ ಕರಡನ್ನು ನೋಡಲು, ಸಲಹೆ ಕೊಡಲು ತಯಾರಿದ್ದೇವೆ. ಮೊದಲು ನಮ್ಮ ಮೌಲ್ವಿಗಳ ಹತ್ತಿರ ಹೋಗಿ ಬನ್ನಿ," ಎಂದು ಹೇಳಿ ನಮ್ಮ ವಿಚಾರ, ಕೆಲಸಗಳನ್ನು ನೋಡುವುದಕ್ಕೆ ಮೊದಲೇ ಬಿಜೆಪಿಯವರು ಈ ಕೆಲಸ ಮಾಡೋಕೆ ಕಳುಹಿಸಿದ್ದಾರೆ ಎಂದು ನಮ್ಮನ್ನು ಹೊರಹಾಕಿದ್ದರು. ಆ ಶಾಸಕರು, ಸಂಸದರ ಹೆಸರುಗಳನ್ನು ನಾನು ಹೇಳಬಯಸುವುದಿಲ್ಲ. ಆದರೆ ಅವರು ನನ್ನನ್ನೂ, ನನ್ನ ಜೊತೆ ಬಂದ ಮಹಿಳೆಯರನ್ನು ಅವಮಾನ ಮಾಡಿ ಕಳಿಸಿದ್ದಂತೂ ನಿಜ.

ಇಡೀ ಮುಸ್ಲಿಂ ಸಮುದಾಯ ಅಭದ್ರತೆಯನ್ನು ಅನುಭವಿಸುತ್ತಿದ್ದರೆ, ಅಲ್ಲಿನ ಮಹಿಳೆಯರು ಎರಡೆರಡು ಬಗೆಯ ಅಭದ್ರತೆಗೆ ಒಳಗಾಗಿದ್ದಾರೆ. ತಾವು ಮುಸ್ಲಿಮರಾಗಿರುವ ಕಾರಣಕ್ಕೆ ಮುಸ್ಲಿಂ ದ್ವೇಷಿ ಮತಾಂಧರಿಂದ ಒಂದು ಬಗೆಯ ಅಭದ್ರತೆಯಾದರೆ, ಮುಸ್ಲಿಂ ಮಹಿಳೆಯರಾಗಿರುವ ಕಾರಣಕ್ಕೆ ಧರ್ಮವನ್ನು ತಮ್ಮ ಮೂಗಿನ ನೇರಕ್ಕೆ ದುರ್ಬಳಕೆ ಮಾಡಿಕೊಳ್ಳುವ ಪುರುಷರಲ್ಲಿನ ಕರ್ಮಠರಿಂದ ಮತ್ತೊಂದು ಬಗೆಯಲ್ಲಿ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮುಸ್ಲಿಂ ಮಹಿಳೆಯರು ಸಮುದಾಯದ ಮೇಲಿನ ಪೂರ್ವಾಗ್ರಹ, ದಾಳಿ, ದೌರ್ಜನ್ಯಗಳ ವಿರುದ್ಧ ಮುಸ್ಲಿಂ ಪುರುಷರೊಂದಿಗೆ ಜೊತೆಯಾಗಿ ತಮ್ಮ ಮಾನವ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಅದರ ಜೊತೆಜೊತೆಯಲ್ಲೇ ಮುಸ್ಲಿಂ ಮಹಿಳೆಯು ಸಮುದಾಯದೊಳಗೇ ಗಂಡಾಳ್ವಿಕೆಯ, ಗಂಡಿನ ಯಾಜಮಾನ್ಯದ, ಪುರುಷ ಅಹಂಕಾರದಿಂದಾಗಿ ತೀರದ ಸಂಕಷ್ಟ, ಸಂಕೋಲೆಗಳನ್ನು ಬಿಡಿಸಿಕೊಂಡು ಗೌರವಯುತ ಬದುಕು ನಡೆಸಲಿಕ್ಕಾಗಿ ಸಹ ಹೋರಾಟಕ್ಕೆ ಮುಂದಾಗಿದ್ದಾಳೆ. ಇದರ ಭಾಗವಾಗಿಯೇ ಈ ತ್ರಿವಳಿ ತಲಾಕ್ ವಿರುದ್ಧದ ಮುಸ್ಲಿಂ ಮಹಿಳೆಯರ ಕಾನೂನು ಹೋರಾಟವನ್ನು ನೋಡಬೇಕಾಗಿದೆ.

ತ್ರಿವಳಿ ತಲಾಕ್ ನಿಷೇಧಿಸಿದ ಸುಪ್ರೀಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಈ ಕುರಿತು ಕಾಯ್ದೆ ಮಾಡುವ ಅವಕಾಶವು ಸಂಸತ್ತಿನ ಅಂಗಳಕ್ಕೆ ಹೋಗಿದೆ. ಅಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಈ ಅವಕಾಶವನ್ನು ಬಳಸಿಕೊಂಡು ಕಾಯ್ದೆ ರಚಿಸಿ ಲೋಕಸಭೆಯಲ್ಲಿ ಮಂಡಿಸಿದೆ. ಇಲ್ಲಿ ಒಂದು ಪ್ರಶ್ನೆ ಎದುರಾಗುತ್ತಿದೆ. ಈಗ ಕೋಮುವಾದಿ ಬಿಜೆಪಿಯ ಕಾರಣದಿಂದ ಇದರ ವಿರುದ್ಧ ಮಾತಾಡುವವರು ಇಷ್ಟು ದಿನ ಯಾಕೆ ಕಾಯ್ದೆ ರಚಿಸಲಿಲ್ಲ? ಕಾಂಗ್ರೆನ್‌ನಲ್ಲಿರುವ ಮುಸ್ಲಿಂ ಶಾಸಕರು, ಸಂಸದರಿಗೆ ಮುಸ್ಲಿಂ ಮಹಿಳೆಯರ ಧ್ವನಿ ಮುಖ್ಯ ಆಗಲಿಲ್ಲವೇಕೆ? ಮುಸ್ಲಿಂ ಮಹಿಳೆಯರ ಹೋರಾಟವನ್ನು ಬಿಜೆಪಿ ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಯಾಕೆ ಅವಕಾಶ ಕೊಟ್ಟಿದ್ದೀರಿ? ಈ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ.

ಕೆಲವು ಮೂಢರ ಪ್ರಕಾರ, ಇಸ್ಲಾಂ ಧರ್ಮ ಕೇವಲ ಪುರುಷರಿಗಾಗಿ ಮಾತ್ರ ಇರುವುದು. ಅದು ಮಹಿಳೆಯರದ್ದಲ್ಲ ಅನ್ನುವ ಹುಸಿ ನಂಬಿಕೆ ಅವರಿಗಿದೆ. ಇವರಿಗೆ ಮತ್ತೆ ಮತ್ತೆ ಹೇಳಬೇಕಿದೆ - 'ಮೂರ್ಖರಾ, ಇಸ್ಲಾಂ ಧರ್ಮದ ಮೊದಲ ಅನುಯಾಯಿ ಒಬ್ಬ ಮಹಿಳೆ, ಅದು ನಮ್ಮ ಪೈಗಂಬರ್ ಅವರ ಪತ್ನಿಯಾದ ಖದೀಜಾ. ಇವತ್ತು ಜೀವಪರವಾಗಿ ಆಲೋಚಿಸಿ ಖುರಾನ್‍ನ ವ್ಯಾಖ್ಯಾನ ಮಾಡಿದರೆ ಮಾತ್ರ ಇಸ್ಲಾಂನಲ್ಲಿ ಮಹಿಳೆಯ ಸ್ಥಾನಮಾನ ತಿಳಿಯೋಕೆ ಸಾಧ್ಯ. ತ್ರಿವಳಿ ತಲಾಕ್ ವಿರುದ್ದದ ತೀರ್ಪನ್ನು ವಿರೋಧಿಸುವವರಿಗೆ, ಇಸ್ಲಾಂ ಕುರಿತು ಸರಿಯಾದ ತಿಳುವಳಿಕೆಯೇ ಇಲ್ಲ ಮತ್ತು ಹೀಗೆ ತಿಳುವಳಿಕೆ ಇಲ್ಲದ ಕಾರಣದಿಂದಾಗಿಯೇ ಅವರು ತ್ರಿವಳಿ ತಲಾಕ್ ವಿರುದ್ಧದ ಕಾನೂನು ಹೋರಾಟವನ್ನು ಬೆಂಬಲಿಸುತ್ತಿಲ್ಲ ಎಂದೇ ನನ್ನ ಅಭಿಪ್ರಾಯ.

ಬಿಎಂಎಂಎನ ರಾಜ್ಯ ಸಂಚಾಲಕಿಯಾಗಿ ನಾನು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದು ನನ್ನ ಕುಟುಂಬದ ಸದಸ್ಯರ ಮೇಲೆ ಆದ ಆಘಾತ ಮತ್ತು ಸುತ್ತಮುತ್ತಲಿನ ಗೆಳತಿಯರ ಬದುಕನ್ನು ಹತ್ತಿರದಿಂದ ನೋಡಿ ಅನುಭವಿಸಿರುವುದರಿಂದ. ಆ ಕಾರಣದಿಂದಲೇ ಈ ವಿಚಾರಗಳು ನನಗೆ ತುಂಬಾ ಹತ್ತಿರದಿಂದ ಕನೆಕ್ಟ್ ಆಗಿದೆ. 'ಕಾರ್ವಾನ್' ಹೆಸರಿನಡಿಯಲ್ಲಿ (ಉರ್ದು ಪದ - ಒಂದು ಉದ್ದೇಶಕ್ಕಾಗಿ ಎಲ್ಲರೂ ಜೊತೆಗೂಡಿ ಸಾಗುವುದು ಎಂಬ ಅರ್ಥ) ಅಡಿಯಲ್ಲಿ ಸಂಘಟನೆಯು ಸಮುದಾಯದ ಶಿಕ್ಷಣ, ಸಬಲೀಕರಣ, ಕೌಶಲ್ಯ, ಸೌಹಾರ್ದತೆ, ಲಿಂಗಸಮಾನತೆಯ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಸಮುದಾಯದಲ್ಲಿ ಮಹಿಳೆಯರಿಗೆ ಫ್ಯಾಷನ್ ಡಿಸೈನಿಂಗ್, ಯುವಜನರಿಗೆ ಕಂಪ್ಯೂಟರ್, ಜೀವನ ಕೌಶಲ್ಯ ತರಭೇತಿಗಳು, ಉನ್ನತ ಶಿಕ್ಷಣಕ್ಕಾಗಿ ಪ್ರೇರಣೆ - ಮಾಹಿತಿ, ಅಡ್ವೋಕೆಸಿ ಕೆಲಸ ನಡೆಸುತ್ತಿದೆ. ಮುಖ್ಯವಾಗಿ ದೌರ್ಜನ್ಯಕ್ಕೊಳಗಾದ ಮಹಿಳೆಯರ ಜೊತೆ ನಿಂತು ಆಪ್ತಸಮಾಲೋಚನೆ, ಕಾನೂನು ಸಲಹೆಯನ್ನು ಕೊಡಲಾಗುತ್ತಿದೆ. ಈ ಮಹಿಳೆಯರೊಂದಿಗೆ ಪೋಲಿಸ್ ಸ್ಟೇಷನ್, ಕೋರ್ಟಿಗೆ ಹೋಗಲು ಜೊತೆಯಾಗುತ್ತೇವೆ. ಬೇರೆ ಬೇರೆ ಜಿಲ್ಲೆಯ ಮುಸ್ಲಿಂ ಮಹಿಳೆಯರು ಅದರಲ್ಲೂ ತ್ರಿವಳಿ ತಲಾಕ್ ಪಡೆದ ಮಹಿಳೆಯರು ನಮಗೆ ಕರೆ ಮಾಡುತ್ತಾರೆ. ಅವರಿಗೆ ಸಾಧ್ಯವಾದಷ್ಟು ನ್ಯಾಯ ಕೊಡಿಸಲು ಜೊತೆ ನಿಲ್ಲುತ್ತೇವೆ.

ನಮ್ಮದು ಒಂದು ಚಿಕ್ಕ ತಂಡವಾಗಿರುವುದರಿಂದ, ಎಲ್ಲಾ ಭಾಗದ ಮಹಿಳೆಯರ ಜೊತೆ ನಿಲ್ಲಲು ಆಗುತ್ತಿಲ್ಲ. ಕೆಲವೊಮ್ಮೆ ನಿರಾಶರಾಗಿದ್ದೇವೆ. ಕೆಲವೊಮ್ಮೆ ಜಮಾತ್‌ನವರಿಗೆ ಅವರ ಜವಾಬ್ದಾರಿಯನ್ನು ನೆನಪಿಸಿದ್ದೇವೆ. ಆದರೂ ಕೆಲವರು ಜಮಾತ್ ಹಿಡಿತಕ್ಕೂ ಸಿಗದೆ, ಧೈರ್ಯದಿಂದ ತ್ರಿವಳಿ ತಲಾಕನ್ನು ಕಾಗದದ ತುಂಡಿನ ಮೂಲಕ ಕಳುಹಿಸಿಕೊಡುತ್ತಿದ್ದಾರೆ. ಕೆಲವೊಮ್ಮೆ ಯಾವ ದಾಖಲೆಯೂ ಕೊಡದೆ ಬಾಯಿಂದ ತಲಾಕ್ ಎಂದು ಸಂಬಂಧವನ್ನು ಕಡಿದು ಮಹಿಳೆಯರಿಗೆ ರಾತ್ರೋರಾತ್ರಿ ಮನೆಯಿಂದ ಹೊರಹಾಕಲಾಗುತ್ತಿದೆ. ಮಹಿಳೆಯರ ಪೋಷಕರಿಗೂ ಯಾರಿಗೂ ಮಾತಾಡಲು ಅವಕಾಶ ಕೊಡದೆ ಹೊರದೂಡಲಾಗುತ್ತಿದೆ. ಮಹಿಳೆ ತನ್ನ ಬದುಕನ್ನು ಸಾಗಿಸಲು ಯಾವುದೇ ಪರಿಹಾರವಿಲ್ಲದೆ ಮನೆಯಿಂದ ಹೊರದಬ್ಬಲ್ಪಡುತ್ತಿದ್ದಾಳೆ.

ಮುಸ್ಲಿಂ ಸಮುದಾಯದ ಮಹಿಳೆಯರು ತಮ್ಮ ಬದುಕನ್ನು ನಿರ್ಬಿಢೆಯಿಂದ ಸ್ವತಂತ್ರವಾಗಿ ಬದುಕಲು ಅವರಿಗೆ ಶಿಕ್ಷಣ ಇಲ್ಲ, ಸಮಾಜದ ಚೌಕಟ್ಟುಗಳಲ್ಲೇ ಅವಳ ಬದುಕು ಕಟ್ಟಲಾಗಿರುತ್ತದೆ. ಇಂತಹ ವಾತಾವರಣದಲ್ಲಿ ಮದುವೆಯ ಬಗ್ಗೆ ಕನಸು ಹೊತ್ತು ಹೋದ ಮಹಿಳೆಗೆ ಯಾವುದೇ ಕಾರಣ ಕೊಡದೆ ಅವಳ ಸಮ್ಮತಿಯನ್ನೂ ಕೇಳದೆ ತಲಾಕ್ ಕೊಟ್ಟರೆ ಹೇಗೆ ತಾನೆ ಅವಳು ತನ್ನ ಬದುಕು ಕಟ್ಟಿಕೊಳ್ಳಬೇಕು? ಎಷ್ಟು ಜನ ಪುರುಷರು ಇವತ್ತು ತಲಾಕ್ ಆದ, ವಿಧವೆ ಆದ ಮಹಿಳೆಯರಿಗೆ ಮದುವೆ ಆಗಲು ಮುಂದೆ ಬರುತ್ತಿದ್ದಾರೆ? ಹುಟ್ಟಿನಿಂದಲೇ ಚೌಕಟ್ಟುಗಳ ಬೇಡಗಳ ನಡುವೆ, ಭಯದಲ್ಲಿಯೇ ಹುಡುಗಿಯರು ಬೆಳೆಯುವ ವ್ಯವಸ್ಥೆ ಇರುವಾಗ ಈ ಮಹಿಳೆಯರ ಒಟ್ಟು ಕುಟುಂಬ ಎಲ್ಲರ ಮನೆ ಬಾಗಿಲುಗಳಿಗೆ ಅಲೆದಾಡಿ ಹತಾಶ ಸ್ಥಿತಿಗೆ ಬಂದಿರುತ್ತದೆ. ಈ ಮಹಿಳೆಯರ ಜೊತೆ ನಿಲ್ಲುವ ಅಪ್ಪ, ಅಣ್ಣ, ತಮ್ಮ ಇವರು ಪುರುಷರು, ಮಹಿಳೆಯ ಬದುಕಿನ ಅಸ್ತವ್ಯಸ್ತತೆ ಪುರುಷರ ಬದುಕಿನ ಮೇಲೆಯೂ ಪರಿಣಾಮವನ್ನು ತಂದಿಡುತ್ತೆ ಅನ್ನೊದನ್ನು ಹೇಗೆ ಮರೀತಾರೆ ಅಂತ ನನ್ನ ಪ್ರಶ್ನೆ.

2013ರಲ್ಲಿ ಮುಜಫ್ಫರ್ ನಗರದಲ್ಲಿ ಕೋಮುದಂಗೆಗಳಾದ ಸಂದರ್ಭದಲ್ಲಿ ಇದೇ ಸಿಪಿಎಸ್‌ ಮತ್ತು ಬಿಎಂಎಂಎ ಸಂಚಾಲಕರು ಸೇರಿ ಸತ್ಯಶೋಧನೆ ನಡೆಸಿ ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿತ್ತು. ಅಲ್ಲಿ ನಡೆದ ಕೋಮುಗಲಭೆಗಳ ವಿರುದ್ದ ಧ್ವನಿಯನ್ನು ಎತ್ತಲಾಗಿತ್ತು. ಸಿಪಿಎಸ್‌ನಲ್ಲಿ ನಾನು, ಜಕಿಯಾ ಮತ್ತು ನಮ್ಮ ಜೊತೆ ಇನ್ನು ಇಬ್ಬರು ಗೆಳೆಯರು ಸೇರಿ ಲಕ್ನೋ, ಅಹಮದಾಬಾದ್, ದೆಹಲಿಯಲ್ಲಿ ಪಿಐಎಲ್ ಸಹ ದಾಖಲಿಸಿದ್ದೇವೆ. ಮುಖ್ಯವಾಗಿ ಉರ್ದು ಭಾಷೆಯನ್ನು ತೆಗೆದು ಹಾಕುವುದರ ವಿರುದ್ದ, ವಕ್ಫ್ ಆಸ್ತಿ, ಮುಜಫ್ಫರ್‌ ನಗರದ ಕೋಮು ದಂಗೆ, ಅಲ್ಪಸಂಖ್ಯಾತ ಆಯೋಗವನ್ನು ಬಲಪಡಿಸುವುದರ ಕುರಿತು ಪಿಐಎಲ್ ದಾಖಲಿಸಿದ್ದೇವೆ. ಗುಜರಾತ್ ಕೋಮುಗಲಭೆಗಳಾದ ಸಂದರ್ಭದಲ್ಲಿ ಸಂತ್ರಸ್ತ ಮುಸ್ಲಿಂ ಸಮುದಾಯದ ಜೊತೆ ನಿಂತು ಅವರ ಹಕ್ಕಿಗಾಗಿ ಹೋರಾಡಿದವರು, ಕೋಮುಗಲಭೆಗಳ ವಿರುದ್ದ ಧ್ವನಿ ಎತ್ತಿದವರು, ಗುಜರಾತ್ ಸರ್ಕಾರ ಪೋಟಾ ಕಾಯ್ದೆ ಅಡಿಯಲ್ಲಿ ನೂರಾರು ಮುಸ್ಲಿಂ ಯುವಕರನ್ನು ಸುಳ್ಳು ಕೇಸ್‌ಗಳಲ್ಲಿ ಬಂಧಿಸಿ ಜೈಲಿಗೆ ಹಾಕಿದಾಗ ಆ ಯುವಕರ ತಾಯಂದಿರ ಜೊತೆ ನಿಂತು ಮೋದಿ ಸರ್ಕಾರದ ವಿರುದ್ದ ಧ್ವನಿ ಎತ್ತಿ ಆ ಯುವಕರನ್ನು ಬಿಡುಗಡೆಗೊಳಿಸಲು ಕೆಲಸ ಮಾಡಿದವರು ನಾವು. ಶಾಂತಿ-ಸೌಹಾರ್ದತೆ-ನ್ಯಾಯಕ್ಕಾಗಿ ಕೆಲಸ ಮಾಡಿದವರು, 'ಆಹಾರ ನಮ್ಮ ಆಯ್ಕೆ-ಈ ಭೂಮಿ ನಮ್ಮ ಹಕ್ಕು' ಘೋಷಣೆ ಅಡಿಯಲ್ಲಿ ನಡೆದ 'ಚಲೋ ಉಡುಪಿ'ಯಲ್ಲಿಯೂ ನಮ್ಮ ಸಂಘಟನೆ ಭಾಗವಹಿಸಿದೆ. ಎಲ್ಲಾ ಜೀವಪರವಾದ, ಸಮಾನತೆಯ, ಸೌಹಾರ್ದತೆಯ ಎಲ್ಲಾ ಆಶಯಗಳ ಜೊತೆ ಬಿಎಂಎಂಎ ನಿಂತಿದೆ.

ದುರಂತದ ಸಂಗತಿಯೆಂದರೆ ಜಕಿಯಾ ಸೋಮನ್ ಮತ್ತು ನೂರ್ಜಹಾನ್ ಸಫಿಯಾ ನಾಜ್ ಮತ್ತು ಇತರ ಮಹಿಳೆಯರು ಟ್ರಿಪಲ್ ತಲಾಕ್ ವಿಷಯದಲ್ಲಿ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಬಿಜೆಪಿ- ಆರೆಸ್ಸೆಸ್ ಏಜೆಂಟರು ಎಂಬ ಹಣೆಪಟ್ಟಿಯನ್ನು ಕೆಲವು ಮೂಲಭೂತವಾದಿ ಶಕ್ತಿಗಳಿಂದ ಹೊರುವ ವಿಪರ್ಯಾಸವನ್ನೂ ಕಾಣುತ್ತಿದ್ದೇವೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋಲವು ಈ ನೆಲದ ಕಾನೂನು ಮತ್ತು ಪವಿತ್ರ ಖುರಾನ್ನಲ್ಲಿ ನಂಬಿಕೆ ಇರಿಸಿಕೊಂಡಿದೆ. ಹೀಗಾಗಿ ಇಲ್ಲಿವರೆಗೆ, ಸಾರ್ವಜನಿಕ ಸ್ಥಳಗಳಲ್ಲಿನ ಮಹಿಳೆಯರ ನಿರಾಕರಣೆ ವಿರೋಧಿಸಿ ನಡೆಸಿದ ಹೋರಾಟದ ಭಾಗವಾಗಿ ಹಾಜಿಅಲಿ ದರ್ಗಾದಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಮಹಿಳೆಯರ ಪರ ತೀರ್ಪು ಬರುವ ನಿಟ್ಟಿನಲ್ಲಿ ಹೋರಾಟ ನಡೆಸಿ ಗೆಲುವು ಪಡೆದಿದೆ. ಈಗ ನಡೆಯುತ್ತಿರುವ ತ್ರಿವಳಿ ತಲಾಕ್ ವಿರುದ್ಧದ ಹೋರಾಟ ಇಡೀ ಮುಸ್ಲಿಂ ಸಮುದಾಯವನ್ನು ಸುಧಾರಣೆಯತ್ತ ಕೊಂಡೊಯ್ಯುವ ಆಂದೋಲನವೇ ಆಗಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಪ್ರೀತಿ, ಸಹಬಾಳ್ವೆ ಹಾಗೂ ಎಲ್ಲಕ್ಕಿಂದ ಮುಖ್ಯವಾಗಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಉಳಿಸುವ ನಿಟ್ಟಿನಲ್ಲಿ ಈ ಅಂದೋಲವನ್ನು ಎಲ್ಲರೂ ಬೆಂಬಲಿಸಬೇಕಿದೆ. ತ್ರಿವಳಿ ತಲಾಕ್ ನಿಷೇಧಿಸುವ ನಿಟ್ಟಿನಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕಠಿಣ ಕಾಯ್ದೆಗಳು ರಚನೆಯಾಗಿ ಜಾರಿಗೊಳ್ಳಬೇಕಿದೆ.

(ಲೇಖಕಿ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ರಾಜ್ಯ ಸಂಚಾಲಕಿ ಹಾಗೂ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ರಾಜ್ಯ ಸಮನ್ವಯ ಸಮಿತಿ ಸದಸ್ಯೆಯಾಗಿದ್ದಾರೆ.)