‘ಬಾಟಲಿ ಹಳೇದೆ, ಕುಡಿಸಲು ಬಂದವರು ಹೊಸಬರು ಅಷ್ಟೆ’: ಸಂವಿಧಾನ ತಿದ್ದುಪಡಿ ಅಜೆಂಡಾ ಮತ್ತು ಮಾಧ್ಯಮಗಳ ಗಳಗಂಟ!
ವಿಚಾರ

‘ಬಾಟಲಿ ಹಳೇದೆ, ಕುಡಿಸಲು ಬಂದವರು ಹೊಸಬರು ಅಷ್ಟೆ’: ಸಂವಿಧಾನ ತಿದ್ದುಪಡಿ ಅಜೆಂಡಾ ಮತ್ತು ಮಾಧ್ಯಮಗಳ ಗಳಗಂಟ!

"ಡಾ.ಬಿ.ಆರ್.ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರಾಗಿ ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮ್ರತಿಯಿಂದ ಏನೂ ಪಡೆದಿಲ್ಲ. ಹೀಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ." ಇದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಹೊರಟಿರುವ ಆರ್ಎಸ್‌ಎಸ್ 1949ರಲ್ಲಿ ತನ್ನ ಮುಖವಾಣಿ ಪತ್ರಿಕೆಯಲ್ಲಿ ಬರೆದುಕೊಂಡದ್ದು.

"ಹಿಂದೂಗಳಿಗೆ ಪ್ರಜಾಪ್ರಭುತ್ವ ತತ್ವಗಳು ಹೊರಗಿನವು. ಇಡೀ ಮನುಕುಲದ ಅತಿ ಶ್ರೇಷ್ಟ ಮತ್ತು ಮಹಾನ್ ಕಾನೂನು ರಚನೆಕಾರ ಮನು," ಹೀಗೆ ಬರೆದುಕೊಂಡಿದ್ದು ಸಂಘಪರಿವಾರದ ಗುರೂಜಿ ಗೋಳ್ವಾಲ್ಕರ್. ಹಾಗೆಯೇ, ಸಂಘಪರಿವಾರದ ಮತ್ತೊಬ್ಬ ಸಂಸ್ಥಾಪಕ, 'ಹಿಂದುತ್ವ'ಪದ ಹುಟ್ಟು ಹಾಕಿದ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದು ಕೊಟ್ಟಿದ್ದ ಸಾವರ್ಕರ್, "ವೇದಗಳ ನಂತರ ಅತ್ಯಂತ ಪೂಜನೀಯ ಗ್ರಂಥ ಮನುಸ್ಮ್ರತಿ ಹಾಗೂ ದೇಶವನ್ನು ಅದರ ಆಧಾರದಲ್ಲಿ ನಡೆಸಬೇಕು," ಎಂದು ಹೇಳಿದ್ದರು. ಅಂತೆಯೇ ನಿವೃತ್ತ ನ್ಯಾಯಾಧೀಶ ಶಂಕರ‌ ಸುಬ್ಬಾ ಐಯರ್, 1950ರ ಜನವರಿ 25 ರಂದು ಅಂದರೆ ಭಾರತ ಗಣರಾಜ್ಯವಾಗುವ ಒಂದು ದಿನ ಮೊದಲು RSS ಪತ್ರಿಕೆ Organizer ನಲ್ಲಿ "ಮನು ನಮ್ಮ ಹೃದಯವನ್ನಾಳುತ್ತಾನೆ," ಎನ್ನುವ ಹೆಸರಿನಲ್ಲಿ ಒಂದು ಲೇಖನ ಬರೆದಿದ್ದರು. ಮನುಸ್ಮೃತಿಯನ್ನೇ ಈ ದೇಶದ ಸಂವಿಧಾನವಾಗಿ ಜಾರಿ ಮಾಡಬೇಕು ಎಂದು ಪ್ರತಿಪಾದಿಸಿದ್ದರು.

ಇವು ಭಾರತ ಗಣರಾಜ್ಯವಾಗಿ ಸಂವಿಧಾನವನ್ನು ರಚಿಸಿಕೊಂಡು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿದ್ದಾಗಲೇ, ಇಂದಿನ ಬಿಜೆಪಿಯ ತಾಯಿಬೇರಾದ ಆರ್‌ಎಸ್‌ಎಸ್‌ಗೆ; ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ಶ್ರೇಷ್ಠ ಸಂವಿಧಾನ ಎಂದು ಕರೆಸಿಕೊಂಡಿದ್ದ ಭಾರತದ ಸಂವಿಧಾನದ ಕುರಿತು ಇದ್ದ ಅಸಮಾಧಾನಕ್ಕೆ ಸಾಕ್ಷಿಗಳು. 1951ರಲ್ಲಿ ಭಾರತೀಯ ಜನ ಸಂಘ (ಇಂದಿನ 'ಭಾರತೀಯ ಜನತಾ ಪಕ್ಷ') ಎನ್ನುವ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಹಿನ್ನೆಲೆಯಲ್ಲಿಯೂ ಸಂವಿಧಾನದ ರಾಜಕೀಯ, ಧಾರ್ಮಿಕ‌ ಮತ್ತು ಸಾಮಾಜಿಕ ಸಮಾನತೆಯ ಮೌಲ್ಯಗಳನ್ನು ನಿರಾಕರಿಸುವ ಮತ್ತು  ದೇಶವನ್ನು ಸಂಪೂರ್ಣ ಹಿಂದುತ್ವವಾದಿ ರಾಷ್ಟ್ರವನ್ನಾಗಿಸುವ ರಾಜಕೀಯ ಉದ್ದೇಶವಿತ್ತು.

ಸಂವಿಧಾನ ಜಾರಿಗೊಂಡ 66 ವರ್ಷಗಳ ನಂತರ ಬಿಜೆಪಿ ಅಭಿವೃದ್ಧಿ ಮತ್ತು ಹಿಂದುತ್ವದ ರಾಜಕಾರಣದ ಮೇಲೆಯೇ ಕೇಂದ್ರದಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಇದರ ಭಾಗವಾಗಿಯೇ ಮೋದಿಯವರ ಜಾಣ ಮೌನದ ಧ್ವನಿಯಂತೆ ಕಾಣುವ ಅನಂತ ಕುಮಾರ್ ಹೆಗಡೆ "ಸಂವಿಧಾನ ಬದಲಾಯಿಸಲಿಕ್ಕಾಗಿಯೇ ನಾವು ಇರುವುದು, ಬಂದಿರುವುದು" ಎಂದು ನೇರವಾಗಿಯೇ ಘೋಷಿಸಿದ್ದಾರೆ. ಜೊತೆಗೆ ತಮ್ಮ ಎಂದಿನ ಸಭ್ಯತೆಯನ್ನು ಮೀರಿ ನಡೆದುಕೊಳ್ಳುವ ಭಾಷೆಯಲ್ಲೇ "ಜಾತ್ಯತೀತರಿಗೆ ಅಪ್ಪ ಅಮ್ಮ ಯಾರೆಂದು ಗೊತ್ತಿಲ್ಲ" ಎನ್ನುವ ಮೂಲಕ ರಕ್ತ ಪರಿಶುದ್ದತೆ ಮತ್ತು ಲೈಂಗಿಕ ಪಾವಿತ್ಯತ್ರೆಯನ್ನಷ್ಟೇ ಬಯಸುವ ಮೇಲು ಜಾತಿವಾದಿ ಎಂಬುದನ್ನು ನಿರೂಪಿಸಿದ್ದಾರೆ. ಸಂವಿಧಾನ ಮತ್ತು ಜಾತ್ಯತೀತ ಮೌಲ್ಯಗಳ ಬಗೆಗೆ ಇರುವ ಅಸಹನೆ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಏಕೆಂದರೆ ಸಂವಿಧಾನ ಮತ್ತು ಜಾತ್ಯಾತೀತ‌ ಮೌಲ್ಯಗಳು ಭಾರತದ ಮೇಲು ಜಾತಿಗಳಿಗೆ ಮತ್ತು ಬ್ರಾಹ್ಮಣ್ಯಕ್ಕೆ ಒಂದೇ ಕತ್ತಿಯ ಎರಡು ಅಲಗುಗಳು ಎನ್ನುವುದು ಮೊದಲಿನಿಂದಲೂ ಗೊತ್ತಿದೆ‌. ಹಾಗಾಗಿಯೇ ಸಂವಿಧಾನ ಮತ್ತು ಜಾತ್ಯತೀತ ಎನ್ನುವ ಒಂದೇ ಕತ್ತಿಯ ಎರಡು ಅಲಗುಗಳನ್ನು ಸಹಜವಾಗಿಯೆ ನಿವಾರಿಸಿಕೊಳ್ಳುವ ಅಗತ್ಯ ಸಂಘಪರಿವಾರಕ್ಕಿದೆ.

ಮೇಲುನೋಟಕ್ಕೆ ಆರ್‌ಎಸ್‌ಎಸ್‌ ಮುಸ್ಲಿಂರನ್ನು ವಿರೋಧಿಸುವಂತೆ ಕಂಡರು, ಆಳದಲ್ಲಿ ಅದಕ್ಕಿರುವ ನಿಜವಾದ ಸವಾಲು ಈ ದೇಶದ ಎಲ್ಲ ಜಾತಿಯ ಮಹಿಳೆಯರು ಮತ್ತು ಕೆಳಜಾತಿಯ ಜನ‌. ಹಿಂದೂ ಧರ್ಮ ಎಂದು ಕರೆಸಿಕೊಳ್ಳುವ ಬ್ರಾಹ್ಮಣ್ಯದ ಧಾರ್ಮಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳ ಪರಂಪರಾಗತ ಕಾಲಾಳುಗಳಾದ ಇವರು, ತಮ್ಮ‌ ಸಾಮಾಜಿಕ ನಿಯಂತ್ರಣಗಳನ್ನು ದಾಟಿಕೊಂಡು ಮೇಲೇಳುವುದೇ ಜಾತಿ ವ್ಯವಸ್ಥೆಯ ಬುಡಮೇಲು.‌ ಹಾಗಾಗಿಯೇ ಮಹಿಳೆಯರ ಸ್ವಾತಂತ್ರ್ಯವನ್ನು ಸಂಸ್ಕೃತಿಯ ಹೆಸರಿನಲ್ಲಿ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಜೊತೆಗೆ ಸ್ವಾವಲಂಭಿಗಳಾಗುತ್ತಿರುವ ದಲಿತರ ಬದುಕಿನ ಮೇಲೂ ಬೇರೆ ಬೇರೆ ರೀತಿಯ ದಬ್ಬಾಳಿಕೆಗಳು ಹೆಚ್ಚುತ್ತಲೇ ಇವೆ.

ಆರ್‌ಎಸ್‌ಎಸ್ ತನ್ನ ರಾಜಕೀಯ ಉಳಿವಿಗೆ ದೇಶ ಭಕ್ತಿ, ಧರ್ಮ ಭಕ್ತಿ, ವೈದಿಕ ಭಕ್ತಿ ಮತ್ತು ದೇಶಾಭಿವೃದ್ಧಿ ಎನ್ನುವ ಅಸಂಬದ್ಧಗಳನ್ನು ವಿಚಿತ್ರವಾಗಿ ಸಂಕರಿಸುತ್ತಿದೆ. ಸಂಪೂರ್ಣ ರಾಜಕೀಯ ಅಧಿಕಾರ ದೊರೆಯುತ್ತಿರುವ ಈ ಕಾಲಘಟ್ಟದಲ್ಲಿ ಸಂವಿಧಾನವನ್ನೇ ಬುಡಮೇಲೂ ಮಾಡುವ ತನ್ನ 70 ವರ್ಷಗಳ ಅಂಜೆಂಡಾವನ್ನು ನಿಧಾನಕ್ಕೆ ಜಾರಿಗೊಳಿಸಲು ಅಣಿಯಾಗುತ್ತಿದೆ. ಈ ಆಟದ ಭಾಗವಾಗಿಯೇ ಅನಂತ ಕುಮಾರ್ ಹೆಗಡೆಯಂತಹ ಅನ್ಯಮತದ್ವೇಷಿಗಳನ್ನು ಅಖಾಡಕ್ಕೆ ತಂದಿದೆ. ಆಗಾಗ ಪ್ರಯೋಗಾತ್ಮಕವಾಗಿ ಮತ್ತು ಪ್ರತಿಕ್ರಿಯೆಯನ್ನು ಎದುರು ನೋಡುವ ತರ್ಕದಲ್ಲಿ ಆರ್‌ಎಸ್‌ಎಸ್‌ ಈ ಮಾತುಗಳ ದಾಳ ಉರುಳಿಸುತ್ತಲೇ ಇರುತ್ತದೆ.

ಇನ್ನು ಮಾತಿಗೆ ಮೊದಲು 'ಮುಸ್ಲಿಂರು ನನಗೆ‌ ಮತ ಹಾಕುವುದೇ ಬೇಡ,‌ ದೇಶ ಬಿಟ್ಟು ತೊಲಗಲಿ,' ಎಂದೆಲ್ಲ ಹೀಯಾಳಿಸುವ ಅನಂತ ಕುಮಾರ ಹೆಗಡೆಯ ದುರಹಂಕಾರ ಮತ್ತು ಸಂವಿಧಾನ ವಿರೋಧಿಯಾದ ಮಾತುಗಳನ್ನು ಮಾದ್ಯಮಗಳು ಪ್ರಶ್ನೆ ಮಾಡುತ್ತಿಲ್ಲ. ಬದಲಿಗೆ ಸುದ್ಧಿ ಮಾಧ್ಯಮದವರು ತರ್ಕಾತೀತವಾಗಿ ಸಿನಿಮಾ‌ದ ನಾಯಕ‌ ನಟನೊಬ್ಬನಿಗೆ ನೀಡುವ ಸ್ಟಾರ್ ಗಿರಿಯಂತೆ‌ 'FireBrand' ಎಂದು ಕರೆದು ಆತನ ಒಳಕ್ರೌರ್ಯಕ್ಕೆ‌ ಮೊದಲಿನಿಂದಲೂ ತುಪ್ಪ ಸುರಿದಿವೆ. ಅನಂತ ಕುಮಾರ ಹೆಗಡೆಯ ಈ ರೀತಿಯ ಅವಿವೇಕದ ಮಾತುಗಳಿಗೆ, ಕೇಳಬೇಕಿದ್ದ ಮೂಲಭೂತ ಪ್ರಶ್ನೆಗಳನ್ನು ಕೇಳದೆ ಮೌನವಹಿಸಿವೆ. ಬದಲಿಗೆ ಈತನ ಸಂವಿಧಾನ ತಿದ್ದುಪಡಿಯ ಮಾತುಗಳಿಗೆ ಪೂರಕವಾಗಿ ಬಹುತೇಕ ಸುದ್ದಿವಾಹಿನಿಗಳು ಜನರನ್ನು ಮನವೊಲಿಸುವವಂತೆ‌ ಮಾತನಾಡತೊಡಗಿವೆ.

"ಸಂವಿಧಾನವೇನು ಧರ್ಮ ಗ್ರಂಥವಲ್ಲ. ಧರ್ಮ‌ಗ್ರಂಥಗಳಾದರೆ ಬದಲಾಯಿಸಲಾಗಲ್ಲ. ಸಂವಿಧಾನವನ್ನು ಈಗಾಗಲೇ 101ಕ್ಕೂ ಹೆಚ್ಚು ಬಾರಿ ಬದಲಾಯಿಸಲಾಗಿದೆ. ಹಾಗಾಗಿ ಹೆಗಡೆಯವರ ಸಂವಿಧಾನ ತಿದ್ದುಪಡಿಯ ವಿಚಾರ ವಿಶೇಷವಲ್ಲ" ಎನ್ನುತ್ತ ವಕೀಲಿ ತರ್ಕಕ್ಕೂ ಬಿದ್ದಿವೆ. ಇದು ಮಾಧ್ಯಮಗಳ ಆಲೋಚನೆಯ ಮಿತಿಯನ್ನು, ನಿಷ್ಕ್ರಿಯತೆಯನ್ನು ಸೂಚಿಸುವುದೋ ಅಥವಾ ಇವು ಕೂಡ ಒಂದು ಸಿದ್ಧಾಂತದ ಮುಸುಕು ಮುಖಾವಾಣಿಗಳಾಗಿ ಜನರನ್ನು ವಂಚಿಸತೊಡಗಿರುವುದೋ? ಒಟ್ಟಿನಲ್ಲಿ ಇಂತಹ ಕಣ್ಪಟ್ಟಿಗಳೇ ಸದ್ಯದ‌ ಪತ್ರಿಕೋದ್ಯಮದ ದುರಂತ. ಇದರ ಜೊತೆಯಲ್ಲೆ ಸಂವಿಧಾನದಲ್ಲಿಯೇ ಸಂವಿಧಾನವನ್ನು ತಿದ್ದುಪಡಿ ಮಾಡಲು ಅವಕಾಶ ನೀಡಿರುವುದು ನಮ್ಮ ಪ್ರಜಾಪ್ರಭುತ್ವದ ಘನತೆಯ ಒಂದು ಭಾಗ ಎಂಬುದನ್ನು ಯೋಚಿಸಲು ಸಹಾ ಪುರುಸೊತ್ತಿಲ್ಲವೆಂಬಂತೆ ಮಾಧ್ಯಮಗಳು ವರ್ತಿಸುತ್ತಿರುವುದು ಅವುಗಳ ಸಂವೇದನಾ ಶೂನ್ಯತೆಯನ್ನು ಬಿಂಬಿಸುತ್ತಿದೆ.

ಅಲ್ಲಮ ಒಂದು ಕಡೆ 'ಅಳಿಸಲಾಗದ ಲಿಪಿಯನ್ನು ಬರೆಯಬಾರದು ಎನ್ನುತ್ತಾನೆ' ಯಾಕೇ? ಅಳಿಸಲಾಗದ ಲಿಪಿಗಳು ಕಾಲದ ಒತ್ತಡಕ್ಕೆ ಎಂತಹ ದುರಂತಗಳನ್ನು ಸೃಷ್ಟಿಬಲ್ಲವೂ ಎಂಬುದಕ್ಕೆ ಇಂದು ಧರ್ಮ ಗ್ರಂಥಗಳೇ ಸಾಕ್ಷಿಯಾಗಿ ನಿಂತಿವೆ. ಸಂವಿಧಾನದಲ್ಲಿಯೆ ತಿದ್ದುಪಡಿ ಮಾಡಲು ನೀಡಿರುವ ಅವಕಾಶದ ಉದ್ದೇಶ, ಕಾಲಕ್ಕೆ ತಕ್ಕಂತೆ ಈ ದೇಶದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಮತ್ತಷ್ಟು ಪ್ರಬುದ್ಧವಾಗಿಸಿಕೊಳ್ಳುವ ದಾರಿಯಾಗಿ ಎಂಬುದನ್ನು ಜನಕ್ಕೆ ಅರ್ಥಮಾಡಿಸುವುದು ಮಾಧ್ಯಮಗಳ ಕಾರ್ಯವಾಗಬೇಕು. ಇಲ್ಲವಾದಲ್ಲಿ ತಮ್ಮನ್ನು ತಾವೇ ಪ್ರಜಾಪ್ರಭುತ್ವದ ಕಾವಲು ನಾಯಿಗಳು ಎಂದು ಕರೆದುಕೊಳ್ಳುವ ಮೌಲ್ಯಕ್ಕೆ ಅವಮಾನ ಮಾಡಿಕೊಂಡಂತೆ. ಇನ್ನು ಸಂವಿಧಾನದಲ್ಲಿ ಇದುವರೆಗೂ ನಡೆದಿರುವ ತಿದ್ದುಪಡಿಗಳು ಕೂಡ ಕೆಲವು ಲೋಪಗಳ ಹೊರತಾಗಿಯೂ ಸಂವಿಧಾನದ ಮೂಲಭೂತ ಆಶಯಗಳಾದ ಸಾತಂತ್ರ್ಯ, ಸಮಾನತೆ, ಜಾತ್ಯತೀತೆಯ ಮೌಲ್ಯಗಳಿಗೆ ಅಪಾಯ ಮಾಡದ ರೀತಿಯ ಘನತೆಯ ತಿದ್ದುಪಡಿಗಳಾಗಿವೆ.

ಈಗಾಗಲೇ 101 ಬಾರಿ ತಿದ್ದುಪಡಿಯಾಗಿದೆ, ನಾವು ತಿದ್ದುಪಡಿ ಮಾಡಿಯೇ ತೀರುತ್ತೇವೆ ಎನ್ನುವುದೇಯಾದರೂ ಆರ್ಎಸ್‌ಎಸ್‌, ಬಿಜೆಪಿ, ಅಥವಾ ಅನಂತ ಕುಮಾರ್ ಹೆಗಡೆಯಂತವರಿಗೆ ಸಂವಿಧಾನದ ತಿದ್ದುಪಡಿ ಎನ್ನುವುದು ಅಲ್ಪಸಂಖ್ಯಾತರ, ಕೆಳಜಾತಿಗಳ, ಮಹಿಳೆಯರ ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರ್ಯಗಳ ಆಶಯ ರೂಪವಾದ 'ಅಂಬೇಡ್ಕರ್ ಸ್ಮೃತಿ'ಯನ್ನು ನಾಶಮಾಡುವುದು. ಇದನ್ನು ಅಂದು ಗೋಳ್ವಾಲ್ಕರ್, ಸಾರ್ವರ್ಕರ್, ಇಂದುಹೆಗಡೆಯವರೇ ಹೇಳಿದ್ದಾರೆ ಕೂಡ. ಇದರ ಭಾಗವಾಗಿಯೇ ಸಮಾನ ನಾಗರಿಕ ಕಾನೂನೂಗಳು ಬೇಕೆ ಬೇಕು ಎನ್ನುವ ಮತ್ತು ಮೀಸಲಾತಿಯಿಂದ ಪ್ರತಿಭೆ ನಾಶವಾಗುತ್ತದೆಂಬ ಜನಪ್ರಿಯ ಭ್ರಮೆಯನ್ನು ಜನರ ತಲೆಯಲ್ಲಿ ತುಂಬಲಾಗಿದೆ ಮತ್ತು ಈ ಸಂಗತಿಗಳೆ ದೇಶ ಹಿಂದುಳಿಯಲು ಕಾರಣ ಎನ್ನುವ ಕಲ್ಪಿತ ಶತ್ರುತ್ವವನ್ನು ಸಂವಿಧಾನದ ಆಶಯಗಳ ಮೇಲೆಯೇ ಸೃಷ್ಟಿಸಲಾಗಿದೆ.

ಒಂದು ವೇಳೆ ಆರ್ಎಸ್‌ಎಸ್ 1949ರಲ್ಲಿಯೇ ಸಂವಿಧಾನ ಜಾರಿಯಾಗುವ ಸಂದರ್ಭದಲ್ಲಿ ಹೇಳಿಕೊಂಡಂತೆ, ಅಂಬೇಡ್ಕರ್ ಬರೆದ ಸಂವಿಧಾನ ನಮಗೆ ಒಪ್ಪಿಗೆ ಇಲ್ಲ‌ ಎಂದು ತಿದ್ದುಪಡಿ ತಂದರೆ? ಅದರ ತಿದ್ದುಪಡಿಗಳು ಎಂದರೆ, ಸಾಮಾಜಿಕ ನ್ಯಾಯದ ಜಾತಿ ಮೀಸಲಾತಿಯನ್ನು ತೆಗೆದು ಹಾಕುವುದು, ಧರ್ಮ ನಿರಪೇಕ್ಷತೆ, ಜಾತ್ಯತೀತ ರಾಷ್ಟ್ರ ಎನ್ನುವ ಆಶಯಗಳನ್ನು ಬದಲಾಯಿಸಿ ಇದು ಹಿಂದೂ ರಾಷ್ಟ್ರ, ರಾಷ್ಟ್ರ ಭಾಷೆ ಹಿಂದಿ, ಇಂತಹದ್ದೇ ಆಹಾರ ಈ ನೆಲದಲ್ಲಿ ತಿನ್ನಬೇಕು ಇತ್ಯಾದಿ ಇತ್ಯಾದಿ. ಈ ಅಜೆಂಡಾಗಳನ್ನೆಲ್ಲ ಸಂವಿಧಾನದ ತಿದ್ದುಪಡಿಯ ಹೆಸರಲ್ಲಿ ಜಾರಿಗೊಳಿಸಿ ಬಹುಸಂಖ್ಯಾತರನ್ನು ಎರಡನೇ‌ ದರ್ಜೆಯ ಪ್ರಜೆಗಳನ್ನಾಗಿಸುವುದರ ಪರಿಣಾಮಗಳು ಈ ದೇಶದಲ್ಲಿ ಏನಾಗಬಹುದೆಂದು ಊಹಿಸಬಹುದಾ?

*ಲೇಖಕರು ಸಮುದಾಯ ಪತ್ರಿಕೋದ್ಯಮ ಕಾಲೇಜಿನಲ್ಲಿ ಉಪನ್ಯಾಸರು. ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಅವರ ವೈಯಕ್ತಿಕ ನಿಲುವುಗಳು.