‘ಜಾತ್ರೆಲಿ ಪೀಪಿ; ಸಮ್ಮೇಳನದಲ್ಲಿ ಪುಸ್ತಕ’: ಸಾಹಿತ್ಯದ ಹಬ್ಬಬದಲಾಗುವುದು ಯಾವಾಗ?
ವಿಚಾರ

‘ಜಾತ್ರೆಲಿ ಪೀಪಿ; ಸಮ್ಮೇಳನದಲ್ಲಿ ಪುಸ್ತಕ’: ಸಾಹಿತ್ಯದ ಹಬ್ಬಬದಲಾಗುವುದು ಯಾವಾಗ?

83ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಮುಗಿಯುವುದರ ಜೊತೆಯಲ್ಲೇ ಅನೇಕ ವಿವಾದ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರತಿ ಬಾರಿಯೂ ಒಂದಿಲ್ಲೊಂದು  ಚರ್ಚೆ, ವಾದ ವಿವಾದ, ಸಂವಾದಗಳು ಸಮ್ಮೇಳನದ ಆರಂಭದಲ್ಲೋ, ಮುಕ್ತಾಯದಲ್ಲೋ ಎದುರಾಗುವುದು ಸಂಪ್ರದಾಯವಾಗುತ್ತಿದೆ.

ಚಂಪಾರ ಅಧ್ಯಕ್ಷ ಭಾಷಣದಲ್ಲಿ 'ಕೋಮುವಾದಿ ಪಕ್ಷಗಳಿಗೆ ಮತ ನೀಡದೆ, ಜಾತ್ಯತೀತರಿಗೆ ಮತ ನೀಡಿ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಮಾತು ಬಿಜೆಪಿಗೆ ತನ್ನನ್ನು ತಾನು ಕೋಮುವಾದಿ  ಎಂದು ಅರ್ಥೈಸಿಕೊಳ್ಳುವಂತೆಯೂ, ಜಾತ್ಯತೀತ ಎಂದರೆ ಕಾಂಗ್ರೆಸ್ ಎಂದು ಅರ್ಥೈಸಿಕೊಳ್ಳುವಂತೆಯು ಮಾಧ್ಯಮಗಳು ಆರೋಪಿಸಿ, ಚರ್ಚೆಯನ್ನು ವಿವಾದವನ್ನಾಗಿಸಿದವು.

ಭಾರತದ ರಾಜಕಾರಣವನ್ನು ಸೋಗಲಾಡಿತನಕ್ಕೆ ದೂಡಿದ ಈ ಜಾತ್ಯಾತೀತ ಮತ್ತು ಕೋಮುವಾದಿ ಎಂಬ ಎರಡು ಪದಕಾರಣಗಳ ಆಳಕ್ಕಿಳಿದು ಚರ್ಚೆಯನ್ನು ಬೆಳೆಸುವಷ್ಟು ಪ್ರಬುದ್ಧತೆಯನ್ನು ಮಾಧ್ಯಮಗಳು ಸೇರಿದಂತೆ ಪಾಲ್ಗೊಂಡವರು ತೋರಿಸಲೇ  ಇಲ್ಲ.  ಅಸೂಕ್ಷ್ಮತೆ,  ಅಪ್ರಬುದ್ಧತೆ ಮತ್ತು ಅರಚಾಟಗಳೇ ನಮ್ಮ ಅಭಿವ್ಯಕ್ತಿಯ ಯುಗಧರ್ಮವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹುದನ್ನು ನಿರೀಕ್ಷಿಸುವುದು ಸಾಧ್ಯವೂ ಇಲ್ಲ.

ಇನ್ನು 26 ವರ್ಷಗಳ ನಂತರ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ  ಸ್ಥಾಪನೆಗೆ ಕಾರಣರಾದ ನಾಲ್ವಡಿ ಕೃಷ್ಣರಾಜ  ಒಡೆಯರನ್ನು ಮತ್ತು ಮೈಸೂರು ಸಂಸ್ಥಾನದ ರಾಜವಂಶಸ್ಥರನ್ನು ಕಡೆಗಣಿಸಿದ್ದಾರೆಂಬ ಪ್ರಶ್ನೆಗಳು ಕೇಳಿಬಂದಿವೆ. ಇದು ನಿಜ ಕೂಡ. ಆದರೆ ಸಾಹಿತ್ಯ ಪರಿಷತ್ತಿನ ಸಮ್ಮೇಳನದಂತಹವುಗಳಲ್ಲೂ  ರಾಜಪ್ರತಿನಿಧಿಗಳ ಸಂಕೇತಗಳೇಕೆ? ಎಂದು ಕೆಲವರು ಅಂದುಕೊಂಡರು.

ಆದರೆ ರಾಜಶಾಹಿಯ ನೆನಪುಗಳನ್ನು ದಸರಾ ಸಂದರ್ಭದಲ್ಲಿ ವಿಜೃಂಭಿಸುವ ಪ್ರಜಾಪ್ರಭುತ್ವದ ಸರ್ಕಾರ, ಮತ್ತು ಇದನ್ನು ಮನ್ನಿಸುವ ಪ್ರಜೆಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ರಾಜ ಸಂಕೇತಗಳ ಉದ್ದೇಶಪೂರ್ವಕ ಕಡೆಗಣನೆಗಳಿಗೆ ಕೂಡ ರಾಜಕೀಯದ ಭಾಗ ಎಂದು ಅಂದುಕೊಳ್ಳದಷ್ಟು ದಡ್ಡರೇನಲ್ಲ ಜನ.

ಮೈಸೂರಿನ ಜನ ಈ ಕಾರಣವಾಗಿ ಸಾಹಿತ್ಯಪರಿಷತ್ತಿನ ಮರೆವನ್ನು ಮೈಸೂರು ಅರಸರಿಗೆ ಬಗೆದ ದ್ರೋಹ, ವಂಚನೆ ಎಂದೆಲ್ಲ ಮಾತಾಡಿದ್ದಾರೆ. "ಮೈಸೂರಿನ ರಾಜರು ನಾಡಿಗಾಗಿ ತಮ್ಮ ಬದುಕನ್ನೆ ಮುಡುಪಾಗಿಟ್ಟಿದ್ದರು. ತಮ್ಮ ಚಿನ್ನಾಭರಣಗಳನ್ನೆಲ್ಲಾ ಮಾರಿ ಅಣೆಕಟ್ಟು  ಕಟ್ಟಿಸಿದವರು,  ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ್ದೇ ನಾಲ್ವಡಿಯವರು. ಇಂತಹ ರಾಜ ವಂಶಸ್ಥರನ್ನು ಮರ್ಯಾದೆಗಾದರು  ಸಾಹಿತ್ಯ ಪರಿಷತ್ತು ಕರೆದು ವೇದಿಕೆ ಕೊಡದೆ ಅವಮಾನ ಮಾಡಿದ್ದಾರೆ" ಎನ್ನುವುದು ಮೈಸೂರಿನಲ್ಲೇ ಶಿಕ್ಷಕಿಯಾಗಿರುವ ಉಷಾರವರ ಮಾತು. ಇದು ಬಹುತೇಕ ಮೈಸೂರಿನ  ಜನರ ಅಭಿಪ್ರಾಯವು ಆಗಿತ್ತು.

‘ಜಾತ್ರೆಲಿ ಪೀಪಿ; ಸಮ್ಮೇಳನದಲ್ಲಿ ಪುಸ್ತಕ’: ಸಾಹಿತ್ಯದ ಹಬ್ಬಬದಲಾಗುವುದು ಯಾವಾಗ?

ಕರ್ನಾಟಕದ ಎಲ್ಲ ಮೂಲೆಗಳಿಂದಲೂ ಸಮ್ಮೇಳನಕ್ಕೆ ಪ್ರತಿ ದಿನವೂ ಕನಿಷ್ಠ 4೦,೦೦೦ ಜನ ಬಂದು ಹೋಗುತ್ತಿದ್ದರು. ಒಳ್ಳೇ ಊಟದ ವ್ಯವಸ್ಥೆಯೂ ಆಗಿತ್ತು. ಸರ್ಕಾರದಿಂದ  8 ಕೋಟಿ ಅನುದಾನ ಪಡೆದುಕೊಂಡಿದ್ದ ಈ ಬಾರಿಯ ಸಾಹಿತ್ಯ ಸಮ್ಮೇಳನ ಹಿಂದಿನ ಎಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ಕೊಟ್ಟಿದ್ದ ಅನುದಾನದ ದಾಖಲೆಗಳನ್ನು  ಮುರಿದಿತ್ತು.  ಜೊತೆಗೆ ಮೈಸೂರು ಜಿಲ್ಲೆಯ ಸರ್ಕಾರಿ ಶಿಕ್ಷಕರ  ಒಂದು ದಿನದ ಸಂಬಳವನ್ನು ಸರ್ಕಾರವೇ ಅಘೋಷಿತವಾಗಿ, ಒಪ್ಪಿಗೆ ಪಡೆಯದೇ ಮುರಿದುಕೊಂಡಿದೆ ಎಂಬುದು  ಅಲ್ಲಿನ ಶಿಕ್ಷಕರ  ಮಾತಾಗಿತ್ತು.

ಮೂರು ದಿನಗಳ ಸಮ್ಮೇಳನದಲ್ಲಿ ಸೇರಿದ್ದ ಸಾವಿರಾರು ಜನ, ವೇದಿಕೆಯ ಮುಂದಿದ್ದ ಸಾವಿರಾರು ಕುರ್ಚಿಗಳಲ್ಲಿ ಕೂರದೆ, ಖಾಲಿ ಹೊಡೆಯುತ್ತಿದ್ದವು. ಮುಂಭಾಗದಲ್ಲೇ ಹಾಕಿದ್ದ ವಿಐಪಿ ಕುರ್ಚಿಗಳು ಬಹುತೇಕ ಮ್ಯೂಸಿಕಲ್ ಚೇರಾಗಿದ್ದವು. ಮಾಧ್ಯಮ ವಿಭಾಗದಲ್ಲಿ ಮಾತ್ರ ವರದಿಗಾರಿಕೆಯ ಒತ್ತಡದ ಕಾರಣಕ್ಕೆ ಬೆಳಗಿನಿಂದ ಸಂಜೆವರೆಗೂ ಕುರ್ಚಿಗಳು ಭರ್ತಿ ಇರುತ್ತಿದ್ದವು. ನನ್ನ ಪತ್ರಕರ್ತ ಗೆಳೆಯನೊಬ್ಬ 'ಕೇಳಿಸಿಕೊಳ್ಳುವುದು ಅನಿವಾರ್ಯ ಕರ್ಮ' ಎಂದು ನಕ್ಕ ಕೂಡ.

ಸಮ್ಮೇಳನಕ್ಕೆ ಬರುತ್ತಿದ್ದ ಬಹುತೇಕ ಜನ ವೇದಿಕೆಯ ಸುತ್ತಲಿದ್ದ ತರೇಹವಾರಿ ಅಂಗಡಿಗಳ ಮುಂದೆ ಸೇರಿ ವಸ್ತುಗಳನ್ನು ಕೊಳ್ಳುವುದೋ, ತಿನ್ನುವುದೋ ಮಾಡುತ್ತಿದ್ದರು. ಸಾವಿರಾರು ಜನ ಸೇರಿದ್ದರಿಂದ ಊಟದ ವ್ಯವಸ್ಥೆಯಲ್ಲೂ ಒತ್ತಡಗಳಾಗಿತ್ತು. ಜನ ಅಲ್ಲಿಯೂ ಸಾಲುಗಟ್ಟಿ ನಿಲ್ಲುವುದು ಮಾಮೂಲಾಗಿತ್ತು. ಸಮ್ಮೇಳನದ ಮೊದಲನೇ ದಿನದ ಆಕರ್ಷಣೆಯಾಗಿದ್ದ ಅಧ್ಯಕ್ಷ ಭಾಷಣ ಆರಂಭವಾಗುವ ಕಾಲಕ್ಕೆ ಊಟದ ಸಮಯ ದಾಟಿತ್ತು.

ಬಹುತೇಕ ಜನ ಊಟದ ಜಾಗವನ್ನು  ಹುಡುಕಿ ಹೊರಟಿದ್ದರು. ಅಧ್ಯಕ್ಷರ ಭಾಷಣ  ಮುಗಿಯುವ ಕಾಲಕ್ಕೆ, ಹಾಕಿದ್ದ ಕುರ್ಚಿಗಳೆಲ್ಲಾ ಬಹುತೇಕ ಖಾಲಿಯಾಗಿದ್ದವು ಮತ್ತು ಮೂರು  ದಿನವೂ ಖಾಲಿಯೇ ಇದ್ದವು. ಅದ್ಧೂರಿ  ವೇದಿಕೆಯ, ಎಂಟು ಕೋಟಿ ಖರ್ಚಿನ, ಪ್ರತಿ ದಿನವೂ ನಲವತ್ತು  ಸಾವಿರಕ್ಕಿಂತಲೂ ಹೆಚ್ಚು ಜನರ ಪಾಲ್ಗೊಳ್ಳುವಿಕೆಯಿದ್ದ ಸಮ್ಮೇಳನ ಆ ಕಡೆ  ಸಂಪೂರ್ಣ ಜಾತ್ರೆಯಾಗುವುದರಲ್ಲೂ, ಈ ಕಡೆ ಕನ್ನಡ ಮೇಷ್ಟ್ರುಗಳ ಸೆಮಿನಾರ್ ಆಗುವುದರಲ್ಲೂ ಸೋತಿತ್ತು.

ಇದು ಈ ಸಾರಿಯ ಸಮ್ಮೇಳನದ ವಿಚಾರವಲ್ಲ. ಪ್ರತಿ ಬಾರಿಯೂ ಹೀಗೆ ಆಗುತ್ತದೆ. ವೇದಿಕೆ ಮೇಲೆ ಕೂತು ಟಿಪಿಕಲ್ ಸಾಹಿತ್ಯಗೋಷ್ಠಿಗಳಲ್ಲಿ ಭಾಷಣ ಮಾಡುವಂತೆ ಪತ್ರಿಕೆಗಳನ್ನು ಮಂಡಿಸುವುದು. ಸಂವಾದಕ್ಕೆ ಅವಕಾಶವೇ  ಇಲ್ಲದ ಮತ್ತು ಇಡೀ ಸಮ್ಮೇಳನವನ್ನೇ ಸೆಮಿನಾರಿನ ಗೋಷ್ಠಿಗಳ ಮಾದರಿಯಲ್ಲೇ ರೂಪಸಿ ನಡೆಸುವುದು.

ಜನ ತಮ್ಮ ಪಾಡಿಗೆ ತಾವು ಬಂದು  ಕೂರಬೇಕೆನಿಸಿದರೆ ಕೂತು, ಬೇಸರವಾಗಿ ತಮಗೆ ಸಂಬಂಧವೇ ಇಲ್ಲದವರಂತೆ ಎದ್ದು ಹೋಗುವುದು ಎಲ್ಲ ಸಮ್ಮೇಳನಗಳಲ್ಲೂ  ನಡೆಯುತ್ತಲೇ ಇದೆ. ಸಾಹಿತ್ಯ ಸಮ್ಮೇಳನಗಳು ಮೇಲುನೋಟಕ್ಕೆ ಜನರ ಸ್ವ ಇಚ್ಚಾ ಪಾಲ್ಗೊಳ್ಳುವಿಕೆಯ ಪ್ರದರ್ಶನದಂತೆ  ಕಾಣಿಸಿದರೂ, ಸಾಮಾನ್ಯ ಜನರ ಪಾಲ್ಗೊಳ್ಳುವಿಕೆಯನ್ನು  ಒಳಗೊಳ್ಳಿಸಿಕೊಳ್ಳುವ ಮಾದರಿಗಳನ್ನು ಕಂಡುಕೊಳ್ಳುವುದರಲ್ಲಿ ಪರಿಷತ್ತು ಸೋಲುತ್ತಿದೆ.

ಪ್ರತಿ ಬಾರಿಯೂ ಜನರ  ಪಾಲ್ಗೊಳ್ಳುವಿಕೆಯಿದ್ದು ಒಳಗೊಳ್ಳುವಿಕೆ ಇಲ್ಲದಿರುವುದರ ಕುರಿತು ಪ್ರಶ್ನೆಗಳು ಬಂದಾಗಲೂ "ಸಮ್ಮೇಳನ ಜಾತ್ರೆಯಿದ್ದಂತೆ, ಕನ್ನಡದ ಹಬ್ಬವಿದ್ದಂತೆ, ಜನ ಬರುವುದು ಹೋಗುವುದು ಮಾಮೂಲೂ" ಎಂದೆಲ್ಲ ಸಬೂಬು  ಹೇಳಲಾಗುತ್ತದೆ. ಇದಕ್ಕೆ ಕಾರಣ ಸಾಹಿತ್ಯ ಸಮ್ಮೇಳನಗಳ ಸಾಂಪ್ರದಾಯಿಕ ರಚನಾಕ್ರಮವನ್ನೆ ಮುಂದುವರೆಸಿಕೊಂಡು ಬಂದಿರುವುದು.

ಕನ್ನಡಸಾಹಿತ್ಯ ಸಮ್ಮೇಳನಗಳನ್ನು ಆರಂಭಿಸಿದ ಹಿನ್ನೆಲೆಯಲ್ಲಿ ಇದ್ದ ಉದ್ದೇಶಗಳು ಬದಲಾಗಿವೆ, ಮತ್ತು ಬೆಳೆಯುತ್ತಲೇ ಇವೆ. ಆರಂಭದ ಸಮ್ಮೇಳನಗಳಲ್ಲಿ 5೦ರಿಂದ 7೦ಜನ ಪ್ರತಿನಿಧಿಗಳಷ್ಟೇ ಸೇರಿ ಸೆಮಿನಾರಿನ ಮಾದರಿಯ ವೇದಿಕೆಗಳಲ್ಲಿ ಕನ್ನಡವನ್ನು ಕಟ್ಟುವ ಗಂಭೀರ ವಿಷಯಗಳನ್ನಿಟ್ಟುಕೊಂಡು ಚರ್ಚಿಸುತ್ತಿದ್ದ ಮಾದರಿಯನ್ನೇ  5೦ಸಾವಿರ ಜನ ಸೇರುವ ಈ ಕಾಲದಲ್ಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ.

ಸಮ್ಮೇಳನದಲ್ಲಿ ಕನ್ನಡ ಪ್ರೇಮಿ. (ಸಾಂದರ್ಭಿಕ ಚಿತ್ರ)
ಸಮ್ಮೇಳನದಲ್ಲಿ ಕನ್ನಡ ಪ್ರೇಮಿ. (ಸಾಂದರ್ಭಿಕ ಚಿತ್ರ)

ಈ ಸಾಂಪ್ರದಾಯಿಕ ಜಡ ಮಾದರಿಯನ್ನು ಬದಲಾಯಿಸಿಕೊಳ್ಳುವ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಗಂಭೀರವಾಗಿ ಯೋಚಿಸಬೇಕಿದೆ. ಸಾಹಿತ್ಯ ಪರಿಷತ್ತಿನ ಆರಂಭದ ಉದ್ದೇಶ ಮತ್ತು ಅದು ಇಂದು ತಲುಪಿರುವ ಸ್ಥಿತಿಗತಿಗಳ ಬಗೆಗೆ ನೂರಾರು ಪ್ರಶ್ನೆಗಳಿವೆ. ಅವೆಲ್ಲ ಇಲ್ಲಿ ಚರ್ಚಿಸುವುದು ಸದ್ಯಕ್ಕೆ ಅಗತ್ಯವಿಲ್ಲವಾದರು ಕನ್ನಡದ ಸಾಂಸ್ಥಿಕ ಪ್ರೇಮದ ಸಂಕೇತದಂತಿರುವ ಸಮ್ಮೇಳನವನ್ನು, ಜಂಗಮಪ್ರೇಮದ ಸಂಕೇತವಾಗಿ ಬದಲಾಯಿಸುವ ಕೆಲಸ ಆಗಬೇಕಿದೆ. ಧಾರ್ಮಿಕ ಮೂಲಭೂತವಾದಂತೆ, ಭಾಷಾಮೂಲಭೂತವಾದವು ತಲೆ ಎತ್ತುತ್ತಿರುವ ಈ ಕಾಲದಲ್ಲಿ,  ಕನಿಷ್ಠವೆಂದರೂ ಲಕ್ಷ ಜನ ಯಾವುದೇ ಲಾಭಪೇಕ್ಷೆಯಿಲ್ಲದೆ ಕನ್ನಡದ ಅಭಿಮಾನಕ್ಕಾಗಿಯೇ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದಾರೆ.

ಅವರಿಗೆ ಕನ್ನಡ ಸಂಸ್ಕೃತಿಯ ಸೌಹಾರ್ದ ಪರಂಪರೆಯ ಅರಿವನ್ನು ವಿಸ್ತರಿಸಿಕೊಂಡು ಹೋಗಲು ಸಹಾಯವಾಗುವಂತಹ ಮಾದರಿಗಳನ್ನು ಪರಿಚಯಿಸಬೇಕಿದೆ. ಕನ್ನಡದ ನೆಲ ಮತ್ತು ಕನ್ನಡ ಭಾಷೆಯ ಕುರಿತು ಆಗಿರುವ ಸಂಶೋಧನೆ, ಚರಿತ್ರೆಯ ಹೆಮ್ಮೆ ಪಡುವ ಮಾದರಿಗಳು, ಕನ್ನಡದ ಬದುಕಿಗಿರುವ ಸವಾಲುಗಳ ಕುರಿತಾಗಿ ತೋರಿಸುವ,ಯೋಚಿಸುವಂತೆ ಮಾಡುವ ಮಾದರಿಗಳನ್ನು ಹುಡುಕಾಡಬೇಕಿದೆ. (ಉದಾಹರಣೆಗೆ ಇಂತಹ ಉದ್ದೇಶಗಳಿಗೆ ತಾತ್ಕಾಲಿಕ ವಸ್ತುಸಂಗ್ರಹಾಲಯಗಳನ್ನು  ಮಾಡುವುದು.)

ಯಾವುದೇ ಚರ್ಚೆವಿಚಾರಗಳು ಸಾವಿರ ಕುರ್ಚಿಗಳ ಆಚೆಗೆ ಜನರನ್ನು ಆಲೋಚಿಸುವಂತೆ ಮಾಡಬಲ್ಲವು ಎಂಬುದೇ  ಅನುಮಾನ. ಹಾಗಾಗಿ ಸಂವಾದಕ್ಕೆ ಸಾಧ್ಯವಿರುವಂತಹ ಇನ್ನೂರರಿಂದ ಮುನ್ನೂರು ಜನ ಪಾಲ್ಗೊಳ್ಳಬಹುದಾದ  ಸಣ್ಣ ಸಣ್ಣ  ವೇದಿಕೆಗಳನ್ನು ಸಮ್ಮೇಳನದಲ್ಲಿಯೇ ಸ್ಥಾಪಿಸಿ, ಆಸಕ್ತಿ ಇರುವವರು ಆಸಕ್ತಿ ಇರುವ ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವಂತೆ ಮಾಡಬಹುದಾಗಿದೆ. ಇದು ಜನರನ್ನು ಒಳಗೊಳ್ಳುವ ಮಾದರಿಗಳ ಉದಾಹರಣೆಗಳಷ್ಟೇ. ಇಂತಹ ನೂರಾರು ಮಾದರಿಗಳನ್ನು ಕನ್ನಡದ ಬಗೆಗೆ ಕಾಳಜಿ ಇರುವವರೆಲ್ಲ ಹುಡುಗಾಡಬೇಕಿದೆ.

ಎಂಟುಕೋಟಿಯ ಅಖಿಲಭಾರತ ಕನ್ನಡ ಸಾಹಿತ್ಯ  ಸಮ್ಮೇಳನ ಮುಗಿದಿರುವ ಈ ಹೊತ್ತಿನಲ್ಲೇ ಸರ್ಕಾರ 35 ಕೋಟಿ ಅನುದಾನ ನೀಡಿ ಮುಂದಿನ  ಎರಡ್ಮೂರು ತಿಂಗಳಲ್ಲಿ 'ವಿಶ್ವ ಕನ್ನಡ ಸಮ್ಮೇಳನ' ನಡೆಸ ಹೊರಟಿದೆ. ಅಲ್ಲೂ ಇದೇ ಜಾತ್ರೆಯ, ಮನರಂಜನೆಯ ಮಾದರಿಗಳೇ ಮರುಕಳಿಸಬಹುದು. ಅದನ್ನೂ ಮತ್ತೊಂದು ದೊಡ್ಡ ಜಾತ್ರೆ ಎಂದು ಕನ್ನಡದ ಹೆಸರಲ್ಲಿ ಸಂಭ್ರಮಿಸ ಹೊರಡುವುದು ಕನ್ನಡದ ನಿಜವಾದ ಕಾಳಜಿಗೆ ದ್ರೋಹ ಬಗೆದಂತಾಗುತ್ತದೆ.

ಹೇಗೂ ತೆರಿಗೆ ಹಣದಲ್ಲಿ ಕನ್ನಡ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಬಂದು ಪೀಪಿ ಕೊಂಡು ಹೋಗುವ ಹಾಗೆ, ಸಮ್ಮೇಳನಗಳು ಪುಸ್ತಕ ಮಾರಾಟಕ್ಕೆ ಸೀಮಿತವಾಗದಿರಲಿ. ಚರ್ಚೆ- ಸಂವಾದಕ್ಕೆ ಹೊಸ ಮಾದರಿಯ, ರಚನಾತ್ಮಕ, ಕ್ರಿಯಾಶೀಲ ಹಾಗೂ ಭಿನ್ನ ಅಭಿಪ್ರಾಯಗಳಿಗೆ ಅವಕಾಶ ಕಲ್ಪಿಸುವ ಸಣ್ಣ ಸಣ್ಣ ವೇದಿಕೆಗಳ ಗುಚ್ಛವೊಂದು ಮುಂದಿನ ದಿನಗಳಲ್ಲಿ ಸೃಷ್ಟಿಯಾಗಲಿ. ಪರಿಷತ್ ಈ ನಿಟ್ಟಿನಲ್ಲಿ ತೆರೆದ ಮನಸ್ಸಿನಿಂದ ಆಲೋಚನೆ ಮಾಡುವಂತಾಗಲಿ. ಅದಕ್ಕಿಂತ ಹೆಚ್ಚಾಗಿ ಅದು ತನ್ನ ಜಡತ್ವವನ್ನು ಕಳಚಿಕೊಳ್ಳಲಿ.