samachara
www.samachara.com
‘ರೀಲ್’ ಉಪೇಂದ್ರ ‘ರಿಯಲ್’ ಪಾಲಿಟಿಕ್ಸ್: ಸ್ಟಾರ್‌ ನಟನ ರಾಜಕೀಯ ಪ್ರವೇಶದ ಸುತ್ತ...
ವಿಚಾರ

‘ರೀಲ್’ ಉಪೇಂದ್ರ ‘ರಿಯಲ್’ ಪಾಲಿಟಿಕ್ಸ್: ಸ್ಟಾರ್‌ ನಟನ ರಾಜಕೀಯ ಪ್ರವೇಶದ ಸುತ್ತ...

ಮಂಜುನಾಥ ಎಂ. ಆನೇಕಲ್

ಮಂಜುನಾಥ ಎಂ. ಆನೇಕಲ್

ರೀಲ್ ಸಿನಿಮಾಗಳ ಕಾರಣಕ್ಕಾಗಿಯೇ 'ರಿಯಲ್ ಸ್ಟಾರ್' ಎಂದು ಕರೆಸಿಕೊಂಡಿರುವ ಉಪೇಂದ್ರ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಪಕ್ಷಕ್ಕೆ 'ಕರ್ನಾಟಕ' ಎನ್ನುವ ಪ್ರಾದೇಶಿಕ ಐಡೆಂಟಿಯನ್ನು ಸೇರಿಸಿಕೊಂಡು 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' ಎನ್ನುವ ಹೆಸರಿನಲ್ಲಿ ರಾಜಕೀಯ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

ಉಪೇಂದ್ರರಿಗೆ 'ಕರ್ನಾಟಕ' ಎನ್ನುವ ಪದ ಭಾವುಕ ಮತ್ತು ಪ್ರಾದೇಶಿಕ ರಾಜಕಾರಣದ ಲೆಕ್ಕಾಚಾರಕ್ಕೆ ಸಹಾಯ ಮಾಡಬಹುದಾದರು, ಈ ಹೆಸರೇ ಚುನಾವಣೆಯಲ್ಲಿ ಮುಖ್ಯವಾಗಲಾರದು. ತೀರ ಇತ್ತೀಚಿನ ಸಿನಿಮಾ ನಟರ ಚುನಾವಣಾ ರಾಜಕಾರಣ ಪ್ರವೇಶಗಳು ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳನ್ನೇನು ತರುತ್ತಿಲ್ಲವಾದರು, ಕರ್ನಾಟಕದ ಸಂದರ್ಭದಲ್ಲಿ ಮಾತ್ರ ಉಪೇಂದ್ರರ ಅಭಿಮಾನಿಗಳಿಗೆ ಮತ್ತು ಮಾಧ್ಯಮಗಳಿಗೆ ವಿಚಿತ್ರ ಹುಮ್ಮಸ್ಸು ನೀಡುತ್ತಿವೆ. ಅವರ ಅಭಿಮಾನಿಗಳಿಗೆ ಸಿನಿಮಾಗಳ ಮೂಲಕ ತೋರಿಸಿದ್ದ ಒಂದಷ್ಟು ಕಲ್ಪಿತ ವಾಸ್ತವಗಳು ನಿಜವಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ತಮಾಷೆ ಎನಿಸುವಂತೆ, ದೃಶ್ಯ ಮಾಧ್ಯಮಗಳೂ ಕೂಡ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಬಿಡುಗಡೆಯ ಕವರೇಜ್ ರೀತಿಯಲ್ಲಿ ರಾಜಕೀಯ ವರದಿಗಾರಿಕೆ ಮೆರೆಯುತ್ತಿವೆ.

ಉಪೇಂದ್ರರಂತಹ ಜನಪ್ರಿಯ ಸಿನಿಮಾ ನಟನೊಬ್ಬ ಸಕ್ರಿಯ ಚುನಾವಣ ರಾಜಕಾರಣಕ್ಕೆ ಬಂದು ಪಕ್ಷ ಕಟ್ಟುವುದು, ಹಣವಿಲ್ಲದೆಯೂ ರಾಜಕಾರಣ ಮಾಡುತ್ತೇನೆ ಎನ್ನುವುದು, ಆದರ್ಶವಾಗಿಯೂ, ಸ್ವಾಗತಾರ್ಹವಾಗಿಯೂ ಕಾಣಿಸುತ್ತದೆ. ಜೊತೆಗೆ ಪ್ರಶ್ನೆಗಳನ್ನೂ ಹುಟ್ಟಿಸುತ್ತದೆ. ಸ್ವಾಗತಾರ್ಹ ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಚುನಾವಣಾ ರಾಜಕಾರಣ ಇಂತಹ ಪ್ರಯೋಗಗಳಿಗೆ ಒಳಗಾಗುವುದರಿಂದ ಹಲವು ಯಶಸ್ಸು ಮತ್ತು ವೈಫಲ್ಯಗಳನ್ನು ಕಲಿಯಬಹುದಾಗಿದೆ. ಸಿನಿಮಾ ನಟರ ರಾಜಕೀಯ ಪ್ರವೇಶದ ಮಾದರಿಗಳ ಸಾಧನೆ ಮತ್ತು ವೈಫಲ್ಯಗಳು ನಮ್ಮ ಕಣ್ಣಮುಂದಿವೆ. ರಾಷ್ಟ್ರೀಯ ರಾಜಕಾರಣದ ಗರ್ವಭಂಗ ಮಾಡುವ ಮೂಲಕ ಆಂಧ್ರದಲ್ಲಿ ಎನ್ ಟಿ ಆರ್, ತಮಿಳುನಾಡಿನಲ್ಲಿ ಎಂಜಿಆರ್ ತರಹದ ನಾಯಕ ನಟರು ಪ್ರಾದೇಶಿಕ ನೆಲೆಯಲ್ಲಿ ಬಹಳಷ್ಟು ಒಪ್ಪುವ ವಿಚಾರಗಳ ಮೂಲಕ ಚುನಾವಣ ರಾಜಕಾರಣಕ್ಕೆ ಹಠಾತ್ ಪ್ರವೇಶ ಮಾಡಿ ಗೆದ್ದದ್ದು ಯಶಸ್ಸು. ಆದರೆ ಒಂದು ಕಡೆ ಎನ್ ಟಿ ಆರ್ ತೆಲುಗುದೇಶಂನ್ನು ಕುಟುಂಬದ ಒಡೆತನಕ್ಕೆ ಬಿಟ್ಟುಹೋಗಿದ್ದು, ತಮಿಳುನಾಡಿನಲ್ಲಿ ಎಂಜಿಆರ್ ತನ್ನ ನಂತರದ ನಾಯಕತ್ವವನ್ನು ಬೆಳೆಸದೆ ಹೋಗಿದ್ದು, ಇವು ವೈಫಲ್ಯಗಳು.

ಕರ್ನಾಟಕದ ಮಟ್ಟಿಗೆ ಉಪೇಂದ್ರ ಜನಪ್ರಿಯ ನಟ. ಆದರೆ ಜನಸಂಸ್ಕೃತಿಗಳನ್ನು ಆಳವಾಗಿ ಎನ್ ಟಿ ಆರ್, ಎಂಜಿಆರ್ ರೀತಿಯಲ್ಲಿ ಪ್ರಭಾವಿಸಲಾಗದ ನಟ. ಕರ್ನಾಟಕದ ಮಟ್ಟದಲ್ಲಿ ಆ ಶಕ್ತಿಯಿದ್ದದ್ದು ಡಾ. ರಾಜಕುಮಾರರಿಗೆ ಮಾತ್ರ ಎನ್ನುವ ಮಾತು ಕ್ಷೀಷೆಯಾದರೂ ಇವತ್ತಿನ ದಕ್ಷಿಣ ಭಾರತದ ರಾಜಕಾರಣದ ಏರಿಳಿತಗಳ ಸಂದರ್ಭದಲ್ಲಿ ಚರ್ಚಿಸಲೇಬೇಕಿದೆ. ಎನ್ ಟಿ ಆರ್, ಎಂಜಿಆರ್ ರಂತೆ ಒಂದು ವೇಳೆ ಡಾ. ರಾಜಕುಮಾರ್ ಸಹಾ ಚುನಾವಣ ರಾಜಕಾರಣ ಪ್ರವೇಶಿಸಿ ಗೆದ್ದು ಬಂದಿದ್ದರೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಇಂದಿಗೂ ಪೂರ್ಣ ಪ್ರಮಾಣದ ಅಧಿಕಾರಕ್ಕೇರುವುದು ಅನುಮಾನವಿತ್ತು. ಇದಕ್ಕೆ ಉದಾಹರಣೆ ಇಂದಿನ ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ತನ್ನ ಇರುವಿಕೆಯನ್ನು ಸಾಬೀತು ಪಡಿಸಲು ಹೆಣಗುತ್ತಲೇ ಇದೆ.

ಉಪೇಂದ್ರರಂತಹವರ ಚುನಾವಣಾ ರಾಜಕಾರಣದ ಪ್ರವೇಶ ಸ್ವಾಗತಾರ್ಹಕ್ಕಿಂತ ಪ್ರಶ್ನಾರ್ಹವೇ ಹೆಚ್ಚು. ಇಲ್ಲಿ ಪ್ರಶ್ನಾರ್ಹ ಅಂದರೆ ಉಪೇಂದ್ರರು ರಾಜಕೀಯ ಪ್ರವೇಶ ಮಾಡಬಾರದು ಅಂತಲ್ಲ. ರಾಜಕೀಯ ಪ್ರವೇಶದ ಪರಿಣಾಮದ ಕಾರಣಕ್ಕಾಗಿ. ಏಕೆಂದರೆ ಭಾರತದ ಜನಪ್ರಿಯ ಸಿನಿಮಾಗಳು ಭಾರತದ ವರ್ತಮಾನದ ಸಾಮಾಜಿಕ ಸನ್ನಿವೇಶಗಳನ್ನು ಸರಳವಾಗಿ ಗ್ರಹಿಸಿ ಅವನ್ನೇ ಎಲ್ಲರ ಕಾಮನ್ ಸೆನ್ಸ್ ನ ಭಾಗವಾಗಿಸಿಬಿಟ್ಟಿರುವ ಪರಿಣಾಮಗಳ ಬಗ್ಗೆ ಇನ್ನು ಗಂಭೀರವಾದ ಚರ್ಚೆಗಳು ನಡೆಯುತ್ತಿಲ್ಲ. ಜನಪ್ರಿಯ ಸಿನಿಮಾಗಳು ಸಾಮಾಜಿಕ ಸನ್ನಿವೇಶಗಳನ್ನು ಅಪಕ್ವವಾಗಿ ಗ್ರಹಿಸುವುದಕ್ಕೆ ಜನಪ್ರಿಯ ಉದಾಹರಣೆ, ಭಾರತದಲ್ಲಿ ಬಡತನ, ಮತ್ತು ಹಸಿವಿನ ಮೂಲವೇನು ಎಂಬ ಪ್ರಶ್ನಗೆ ಇವು ಭ್ರಷ್ಟಾಚಾರದಲ್ಲಿ ಕಾರಣಗಳನ್ನು ಹುಡುಕುವುದು. ಮತ್ತು ಭ್ರಷ್ಟಾಚಾರದ ಲೆಕ್ಕಾಚಾರಗಳನ್ನು ಭಾರತದ ಆಡಳಿತ ವರ್ಗಗಳ ಮೇಲೆ ಸಲಿಸಾಗಿ ಆರೋಪಿಸುತ್ತವೆ. ಭ್ರಷ್ಟಾಚಾರದ ಆಸೆಗೆ, ಅಧಿಕಾರದ ಆಸೆಗೆ ರಾಜಕೀಯ ಪಕ್ಷಗಳು ಅರ್ಹತೆಯ ಆಚೆಗೆ ಜಾತಿ ಓಲೈಕೆ, ಉಳ್ಳವರ ಓಲೈಕೆ ಮಾಡುತ್ತವೆ, ಓದಲು ಬರೆಯಲು ಬಾರದಿದ್ದರು ರಾಜಕಾರಣ ಮಾಡಿ ಭಾರತದ ಅಭಿವೃದ್ಧಿಯನ್ನೇ ರಾಜಕಾರಣಿಗಳು ಹಾಳು ಮಾಡಿದ್ದಾರೆಂಬ ಸರಳ ತೀರ್ಮಾನಗಳಿಗೆ ಬರುವ ತತ್ವಕ್ಕೆ ಇಂದಿಗೂ ಅಂಟಿಕೊಂಡೇ ಇವೆ.

ಉಪೇಂದ್ರರಿಗೆ ರಿಯಲ್ ಸ್ಟಾರ್ ಪಟ್ಟ ದಕ್ಕಿಸಿಕೊಟ್ಟ ಅವರ ಎಲ್ಲಾ ಸಿನಿಮಾಗಳಲ್ಲೂ ಈ ಸರಳ ತರ್ಕದ ಎಳೆಯಿದೆ. ಭಾರತದಂತಹ ಜಾತಿ, ಲಿಂಗ ಅಸಮಾನತೆಯ ಕಾರಣಕ್ಕಾಗಿಯೇ ಚಾರಿತ್ರಿಕವಾಗಿ ಸಂಪತ್ತಿನ ಮತ್ತು ಅಧಿಕಾರಗಳ ಅಸಮಾನ ಹಂಚಿಕೆಗಳಿರುವ, ಹಲವು ಶ್ರೇಣಿಕರಣಗಳಿರುವ ದೇಶದಲ್ಲಿ ಬಡತನಕ್ಕೆ , ರಾಜಕಾರಣದ ವೈಫಲ್ಯಗಳಿಗೆ ಭ್ರಷ್ಟಾಚಾರ, ಮತ್ತು ಓದಲು ಬರೆಯಲು ಬಾರದವರ ರಾಜಕಾರಣಗಳಂತಹವೇ ಪ್ರಧಾನ ಕಾರಣಗಳೆನ್ನುವುದರ ಹಿಂದೆ ಜನಪ್ರಿಯ ಸಿನಿಮಾ ಸಂಸ್ಕೃತಿಯ ಅಪ್ರಬುದ್ಧತೆ ಮತ್ತು ಉದ್ದೇಶ ಪೂರ್ವಕ ದಾರಿತಪ್ಪಿಸುವ ಹುನ್ನಾರವೂ ಇದೆ. ಏಕೆಂದರೆ ಭಾರತದ ಸಾರ್ವಜನಿಕ ಜೀವನದ ಬೇರೆ ಬೇರೆ ವಲಯಗಳ ಮಾಲೀಕತ್ವಗಳು ಪ್ರಬಲ ಜಾತಿಗಳ ತೆಕ್ಕೆಯಲ್ಲಿರುವಂತೆ ಸಿನಿಮಾ ವಲಯವೂ ಕೂಡ ಅವರ ಕೈಯಲ್ಲೇ ಇರುವುದು ಜನಪ್ರಿಯ ಸಿನಿಮಾಗಳಲ್ಲಿ ಇಂದಿನ ವಾಸ್ತವದ 'ಸಾಮಾಜಿಕ ಅಪಮೌಲೀಕರಣ'ಕ್ಕೆ ಪ್ರಧಾನ ಕಾರಣವಾಗಿದೆ.

ಹಾಗಾಗಿ ಭಾರತದ ಜಾತಿ ತಾರತಮ್ಯ, ಧಾರ್ಮಿಕ ಮೇಲಾಟಗಳ ಕ್ರೌರ್ಯ- ಮಹಿಳಾ ಶೋಷಣೆ, ಸಂಪತ್ತಿನ ಅಸಮಾನ ಹಂಚಿಕೆಯಂತಹ ಸಾಮಾಜಿಕ ದುರಂತಗಳ ಆಳ ಅರಿವಿಲ್ಲದ ಮತ್ತು ಪ್ರಾಮಾಣಿಕ ಕಾಳಜಿಯಿಲ್ಲದ ಯಾವುದೇ ಜನಪ್ರಿಯ ವ್ಯಕ್ತಿ ಚುನಾವಣೆ ಪ್ರವೇಶಿಸಿದರೂ, ಎಲ್ಲ ಸಾಮಾನ್ಯರು ನಿರೀಕ್ಷೆ ಮಾಡುವ ತಮ್ಮ ಬದುಕಿನ ವ್ಯವಸ್ಥಿತ ಸುಧಾರಣೆ ಮತ್ತು ಆಮೂಲಾಗ್ರ ಬದಲಾವಣೆಗಳು ಭಾರತೀಯ ಸಮಾಜದಲ್ಲಿ ಘಟಿಸಲಾರವು. ಇದಕ್ಕೆ ರಿಯಲ್‌ಸ್ಟಾರ್ ಉಪೇಂದ್ರ ಮತ್ತು ಅವರ ಸಿನಿಮಾಗಳು ಹೊರತಲ್ಲ. ಹಾಗಾಗಿಯೇ ಉಪೇಂದ್ರರ ರಾಜಕಾರಣದ ಪ್ರವೇಶ ಪ್ರಶ್ನಾರ್ಹವೆಂದದ್ದು.

ಉಪೇಂದ್ರರು ತಾವು ಯಾವುದನ್ನು ಇದು ಸಮಾಜದ ರಿಯಲ್ ಗಳೆಂದು ರೀಲ್ ನಲ್ಲಿ ತೋರಿಸಹೊರಟರೋ ಅವೇ ಅನ್ ರಿಯಲ್ ಗಳಾಗಿವೆ. ಹಾಗಿದ್ದಾಗ, ವಾಸ್ತವದಲ್ಲಿ ಅವರು ರಿಯಲ್ ಸ್ಟಾರ್ ಆಗುವುದಾದರು ಹೇಗೆ? ಉಪೇಂದ್ರರ ಸಿನಿಮಾಗಳನ್ನು ನೋಡಿ ಅವರನ್ನು ರಿಯಲ್ ಸ್ಟಾರ್ ಎಂದು ಕರೆಯಲು ಮಾಧ್ಯಮಗಳು ಮತ್ತು ಪ್ರೇಕ್ಷಕ ವಲಯ ಸಂಕಲಿಸಿಕೊಂಡ ಸಂಗತಿಗಳಲ್ಲಿ ಸಮಾಜದ ಮತ್ತು ತಮ್ಮ ಮನಸ್ಸಿನ ಒಳತೋಟಿಗಳ ವಿಚಿತ್ರ ಅಭಿವ್ಯಕ್ತಿಯಂತೆ ತೆರೆಯ ಮೇಲೆ ಅನುಭವಿಸಿ ಖುಷಿಪಟ್ಟಿರುವುದೇ ಮುಖ್ಯ ಕಾರಣ. ಅರಾಜಕ ಎನ್ನಿಸುವ ಪ್ರೇಮ, ಕಾಮದ ಮನೋಬಯಕೆಗಳು, ಕ್ರೋಧ, ಸಮಾಜದ ಅಸಂಗತ‌ ಅಸ್ಪಷ್ಟತೆಯ ವಿಚಿತ್ರ ಕಾರಣಗಳನ್ನು ಮೊದಲಬಾರಿಗೆ ಕನ್ನಡದ ತೆರೆಯ ಮೇಲೆ ಚಿತ್ರವಿಚಿತ್ರವಾಗಿ ಮನರಂಜನಿಯವಾಗಿ ತೋರಿಸಿ ಉಪೇಂದ್ರರಿಗೆ ರಿಯಲ್ ಸ್ಟಾರ್ ಪಟ್ಟಕ್ಕೆ ಕಾರಣವಾದ A , ಉಪ್ಪಿಯಂತಹ ಅಪ್ರಬುದ್ದ ಸಿನಿಮಾಗಳೇ ಸಾಮಾಜಿಕ ಅವಾಸ್ತವಿಕ ಗ್ರಹಿಕೆಗಳಿಗೆ ಉದಾಹರಣೆ. ನಿಜವಾಗಿಯೂ ಇದರಾಚೆಗೆ ಉಪೇಂದ್ರರು ನಿಜವಾದ ರಿಯಲ್ ಸ್ಟಾರ್ ಆಗುವುದಕ್ಕೆ ಅವರು ಮುಂದಿನ ಯಾವ ಸಿನಿಮಾಗಳಲ್ಲೂ ಪ್ರಯತ್ನಿಸಲಿಲ್ಲಾ ಮತ್ತು ಈಗ ಚುನಾವಣ ರಾಜಕಾರಣದಲ್ಲೂ ಪ್ರಯತ್ನಿಸುವ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ.

ಏಕೆಂದರೆ ಉಪೇಂದ್ರರ ಸಿನಿಮಾಗಳಾದ ಎ, ಉಪ್ಪಿ, ಉಪ್ಪಿ೨, ಸೂಪರ್ ನಂತಹ ಸಿನಿಮಾಗಳಲ್ಲಿ ಕಾಣಿಸುವ ಐಡಿಯಾಲಜಿಗಳೇ ಅವರ ಚುನಾವಣ ರಾಜಕಾರಣದ ಐಡಿಯಾಲಜಿಗಳಾಗಿಯೂ ಮುಂದವರೆಯುತ್ತಿರುವುದು ಅವರ ರಾಜಕೀಯ ಪಕ್ಷದ ನಿಲುವುಗಳಲ್ಲೂ ಅವರ ಸಂದರ್ಶನಗಳಲ್ಲೂ ಕಾಣಿಸುತ್ತಿದೆ. ಉಪೇಂದ್ರರ 'ಭ್ರಷ್ಟಾಚಾರ ರಹಿತ' ಚುನಾವಣೆ ಎದುರಿಸುವ ಪ್ರಾಮಾಣಿಕ ಕಾಳಜಿಯನ್ನು ಸದ್ಯಕ್ಕೆ ಪ್ರಶ್ನಿಸುವ ಅಗತ್ಯವಿಲ್ಲದಿದ್ದರು, ಸಿನಿಮಾ ನಟನೊಬ್ಬ ಸಿನಿಮಾ ಕ್ಷೇತ್ರದಿಂದ ಹಠಾತ್ ರಾಜಕೀಯ ಕ್ಷೇತ್ರಕ್ಕೆ ಲಾಂಗ್ ಜಂಪ್ ಮಾಡುವ ಮಧ್ಯೆ ಇರುವ ವರ್ತಮಾನದ ಸಾಮಾಜಿಕ ಸನ್ನಿವೇಶಗಳಿಗೆ, ಸಮಸ್ಯೆಗಳಿಗೆ ತೀವ್ರವಾಗಿ ಮುಖಾಮುಖಿಯಾಗದೆ ಮುಂದಕ್ಕೋಗಿರುವುದು ಕಾಣಿಸುತ್ತಿದೆ. ಆಂಧ್ರದಲ್ಲೂ ಚಿರಂಜೀವಿ ಈ ಹೈಜಂಪ್ ಮಾಡಿದ್ದರು. ಜೊತೆಗೆ ಉಪೇಂದ್ರರ ಸಾಫ್ಟ್ 'ಬಲ'ವಾದ ಮತ್ತು ಸಾಮಾಜಿಕ ವ್ಯವಸ್ಥೆಯ ಕುರಿತಾದ ಆಳವಾದ ಅರಿವಿಲ್ಲದ ಕಾರಣವಾಗಿ ರಾಜಕಾರಣದ ರಿಯಲ್ ಸ್ಟಾರ್ ಗಿರಿಯೂ ಬಹುಬೇಗ ಸೊರಗಿ ಹೋಗುವ ಸಾಧ್ಯತೆಯೂ ಇದೆ.

ಸದ್ಯಕ್ಕೆ ಉಪೇಂದ್ರರ ಪ್ರಾದೇಶಿಕ KPJP ಪಕ್ಷವು ಕರ್ನಾಟಕದ ಮುಂದಿನ ಚುನಾವಣೆಯವರೆಗೂ ಹೈಪರ್ ಆಕ್ಟಿವ್ ಆಗಿದ್ದರೆ, ಎಲ್ಲ ಪಕ್ಷಗಳಿಗೂ ಒಂದಷ್ಟು ಮತಗಳು ಲಾಸ್ ಆಗುವುದು ಖಚಿತ. ಪೂರ್ಣಪ್ರಮಾಣದಲ್ಲಿ ಗೆದ್ದು ಅಧಿಕಾರ ಹಿಡಿಯುವ ಮಟ್ಟಿಗೆ ಉಪೇಂದ್ರರ ಜನಪ್ರಿಯತೆಯೂ ಜನಸಮುದಾಯಗಳ ಮನದಲ್ಲಿ ಇಲ್ಲವಾದ ಕಾರಣ ಹಾಗೂ ಸಿನಿಮಾ ಜನಪ್ರಿಯತೆಯೊಂದೆ ರಾಜಕಾರಣದಲ್ಲಿ ಮತಗಳಾಗಿ ಪರಿವರ್ತನೆಯಾಗುವ ಸಾಧ್ಯತೆಯೂ ಇಲ್ಲದ ಕಾರಣ ತಳಮಟ್ಟದಿಂದಲೇ ಪಕ್ಷವನ್ನು ಕಟ್ಟಿ‌ಮುನ್ನಡೆಸುವ ತಾಳ್ಮೆ‌ ಅವರಲ್ಲಿ ಇದ್ದರೆ ರಾಜಕಾರಣದಲ್ಲಿ ಬೇರೂರಲೂಬಹುದು. ಅಥವಾ ಆಂತರ್ಯದಲ್ಲೂ, ಬಾಹ್ಯದಲ್ಲೂ ಮೋದಿ ಅಭಿಮಾನಿಯಾಗಿರುವ ಕಾರಣ, ಮತ್ತು ಐಡಿಯಾಲಜಿಯಲ್ಲಿ ಬಿಜೆಪಿಗೆ ಬಹುತೇಕ ಸಂಗತಿಗಳಲ್ಲಿ ಸಮೀಕರಣಗೊಳ್ಳುವ ಕಾರಣಕ್ಕೆ , ಪ್ರೀತಿ ಮತ್ತು ಅಭಿಮಾನದ ಮರ್ಜಿಗೆ ಒಳಗಾಗಿ, ಯಡಿಯೂರಪ್ಪನವರು ಸ್ವಾಭಿಮಾನದ KJPಯನ್ನು BJPಯಲ್ಲಿ ವಿಲೀನಗೊಳಿಸಿದಂತೆ ಉಪೇಂದ್ರರು KPJPಯನ್ನು ಚುನಾವಣೆಗೂ ಮುನ್ನವೋ ಅಥವಾ ನಂತರವೋ ವಿಲೀನಗೊಳಿಸಲೂಬಹುದು, ಅಥವಾ ಆಂಧ್ರಪ್ರದೇಶದಲ್ಲಿ ಚುನಾವಣೆಯ ನಂತರ ಮೆಗಾಸ್ಟಾರ್ ಚಿರಂಜೀವಿಯವರಿಗಾದಂತೆ ಭ್ರಮನಿರಸನವಾಗಿ ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿ‌ ಪಶ್ಚಾತ್ತಾಪದ ಭಾವದಿಂದ ಸಿನಿಮಾ ಜಗತ್ತಿನ ಕಡೆಗೆ ಹಿಂದಿರುಗಿದಂತೆ, ಮುಂದಿನ ಚುನಾವಣೆಯಲ್ಲಿ ಗೆದ್ದ ಪಕ್ಷದೊಂದಿಗೆ ವಿಲೀನಗೊಳಿಸಿ ಸಿನಿಮಾ ಕ್ಷೇತ್ರಕ್ಕೆ ಹಿಂದಿರುಗಲೂಬಹುದು.

ಆದರೆ ಈ ಎಲ್ಲಾ ಅಥವಾಗಳ ಮಧ್ಯೆ ಕರ್ನಾಟಕದ‌ ಮಟ್ಟಿಗೆ ಜನಪ್ರಿಯ ಸಿನಿಮಾ ನಾಯಕನಟನೊಬ್ಬ ಹೊಸ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿ ಚುನಾವಣ ರಾಜಕಾರಣದಲ್ಲಿ ತನ್ನನ್ನು ಪರೀಕ್ಷಗೆ ಒಡ್ಡಿಕೊಂಡಿರುವುದು ಇದೇ ಮೊದಲು. ಅದು ಗಮನ ಸೆಳೆಯುತ್ತಿರುವ ಅಂಶ.

ಲೇಖಕರು 'ಬದುಕು ಕಮ್ಯುನಿಟಿ ಕಾಲೇಜಿ'ನ Center for Creative and Critical Media ವಿಭಾಗದ ಪ್ರಾಧ್ಯಾಪಕರು. ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಅವರ ವೈಯಕ್ತಿಕ ಒಳನೋಟಗಳು.