‘ಅರ್ಥ ವ್ಯವಸ್ಥೆಯನ್ನು ಕಟ್ಟಿ ಬೆಳೆಸುವುದಕ್ಕಿಂತ; ಕುಟ್ಟಿ ಬೀಳಿಸುವುದು ಸುಲಭ’: ಯಶವಂತ್ ಸಿನ್ಹಾ
ವಿಚಾರ

‘ಅರ್ಥ ವ್ಯವಸ್ಥೆಯನ್ನು ಕಟ್ಟಿ ಬೆಳೆಸುವುದಕ್ಕಿಂತ; ಕುಟ್ಟಿ ಬೀಳಿಸುವುದು ಸುಲಭ’: ಯಶವಂತ್ ಸಿನ್ಹಾ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರ ಬಂದ ನಂತರ ತೆಗೆದುಕೊಂಡ ಆರ್ಥಿಕ ನೀತಿಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಹಿರಿಯ ಬಿಜೆಪಿ ನಾಯಕ, ಆರ್ಥಿಕ ಸಚಿವರೂ ಆಗಿದ್ದ ಯಶವಂತ ಸಿನ್ಹಾ 'ಇಂಡಿಯನ್‌ ಎಕ್ಸ್‌ಪ್ರೆಸ್‌' ಪತ್ರಿಕೆಗೆ ಬರೆದ ಅಂಕಣ ಚರ್ಚೆಯನ್ನು ಹೊಸ ಆಯಾಮಕ್ಕೆ ಕೊಂಡೊಯ್ದಿದೆ. ಈ ಹಿನ್ನೆಲೆಯಲ್ಲಿ, ಸಿನ್ಹಾ ಬರೆದ ಅಂಕಣವನ್ನು ಯಥಾವತ್ತಾಗಿ ಅರುಣ ಕಾಸರಗುಪ್ಪೆ 'ಸಮಾಚಾರ' ಓದುಗರಿಗಾಗಿ ಕನ್ನಡಕ್ಕೆ ತಂದಿದ್ದಾರೆ.

ದೇಶದ ಅರ್ಥವ್ಯವಸ್ಥೆಗೆ ಕೇಂದ್ರ ಹಣಕಾಸು ಸಚಿವರು ತಂದಿಟ್ಟಿರುವ ಸ್ಥಿತಿ ನೋಡಿದ ಮೇಲೂ ಎದ್ದು ನಿಂತು ಸತ್ಯ ನುಡಿಯದಿದ್ದರೆ ನನ್ನ ದೇಶದ ಕುರಿತ ನನ್ನ ಹೊಣೆಗಾರಿಕೆಗೆ ನ್ಯಾಯ ಒದಗಿಸಲಾಗುವುದಿಲ್ಲ. ನಾನು ಮುಂದೆ ಆಡುವ ಮಾತುಗಳೆಲ್ಲಾ, ಅವ್ಯಕ್ತ ಭಯದಿಂದ ಮೌನವಾಗಿರುವ ಬಿಜೆಪಿಯೊಳಗಿನ ಮತ್ತು ಹೊರಗಿನ ಬಹುತೇಕ ವ್ಯಕ್ತಿಗಳ ಭಾವನೆಗಳಿಗೆ ಕನ್ನಡಿ ಹಿಡಿಯುತ್ತವೆ ಎಂಬುದಂತೂ ಖಚಿತ.

ಅರುಣ್‌ ಜೇಟ್ಲಿ ಅವರನ್ನು ಪ್ರಸ್ತುತ ಸರ್ಕಾರದಲ್ಲಿರುವ ಅತ್ಯಂತ ಮೇಧಾವಿ ಎಂದೇ ಪರಿಗಣಿಸಲಾಗುತ್ತದೆ. ಅವರು ಹಣಕಾಸು ಸಚಿವರಾಗುವುದು 2014ರ ಚುನಾವಣೆಗಿಂತ ಸಾಕಷ್ಟು ಮೊದಲೇ ತೀರ್ಮಾನವಾಗಿತ್ತು. ಆದರೆ, ಅವರು ಅದೇ ಚುನಾವಣೆಯಲ್ಲಿ ಅಮೃತಸರದಿಂದ ಸ್ಪರ್ಧಿಸಿ, ಸೋಲು ಕಂಡಿದ್ದರು. ಆದರೆ ಆ ಸೋಲು ಹಣಕಾಸು ಸಚಿವರಾಗುವ ಅವರ ಹಾದಿಗೆ ಅಡ್ಡಿಯುಂಟು ಮಾಡಲಿಲ್ಲ. 1998ರ ಸರ್ಕಾರ ರಚನೆಯಲ್ಲಿ ಇಂಥದ್ದೇ ಒಂದು ಸನ್ನಿವೇಶ ಎದುರಾಗಿದ್ದನ್ನು ನಾವಿಲ್ಲಿ ಜ್ಞಾಪಿಸಿಕೊಳ್ಳಬಹುದು. ಚುನಾವಣೆಯಲ್ಲಿ ಸೋತ ಕಾರಣಕ್ಕೆ ತಮ್ಮ ಅತ್ಯಂತ ಆತ್ಮೀಯ ಸಹೋದ್ಯೋಗಿಗಳಾಗಿದ್ದ ಜಸ್ವಂತ್‌ ಸಿಂಗ್‌ ಮತ್ತು ಪ್ರಮೋದ್‌ ಮಹಾಜನ್‌ ಅವರನ್ನು ಅಟಲ್‌ ಬಿಹಾರಿ ವಾಜಪೇಯಿ ಅವರು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಈ ಬಾರಿ ಪ್ರಧಾನ ಮಂತ್ರಿಗಳು ಅರುಣ್‌ ಜೇಟ್ಲಿ ಅವರಿಗೆ ಹಣಕಾಸು ಖಾತೆ ನೀಡುವುದರ ಜೊತೆ ಜೊತೆಗೇ ಅಪಹೂಡಿಕೆ ಇಲಾಖೆ, ಅದೂ ಸಾಲದೆಂಬಂತೆ, ರಕ್ಷಣಾ ಖಾತೆ ಮತ್ತು ಕಾರ್ಪೊರೇಟ್‌ ವ್ಯವಹಾರ ಖಾತೆಗಳನ್ನೂ ಅವರ ಹೆಗಲಿಗೇರಿಸಿದರು. ಆ ಮೂಲಕ ಜೇಟ್ಲಿ ಅವರು ಸರ್ಕಾರಕ್ಕೆ ಎಷ್ಟರ ಮಟ್ಟಿಗೆ ಅನಿವಾರ್ಯ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ಒಟ್ಟು ನಾಲ್ಕು ಖಾತೆಗಳು - ಈಗ ಅದರಲ್ಲಿ ಒಂದು ಹೋಗಿ - ಮೂರು ಖಾತೆಗಳು. ನನಗೂ ಕೂಡ ಹಣಕಾಸು ಖಾತೆ ನಿರ್ವಹಿಸಿದ ಅನುಭವವಿದೆ. ಹಾಗೆಯೇ, ಅದೊಂದೇ ಖಾತೆ ನಮ್ಮಿಂದ ಅದೆಷ್ಟು ಕಠಿಣ ಪರಿಶ್ರಮ ಬೇಡುತ್ತದೆ ಎಂಬುದರ ಅನುಭವ ಕೂಡ ನನಗಿದೆ.

ಸಂದರ್ಭಗಳು ಸಕಾರಾತ್ಮಕವಾಗಿದ್ದಾಗಲೂ ಕೂಡ, ಪ್ರತಿಯೊಂದು ಕಾರ್ಯ ಸಾಂಗವಾಗಿ ಸಾಗಲು ಆ ಖಾತೆಯ ಚುಕ್ಕಾಣಿ ಹಿಡಿದ ವ್ಯಕ್ತಿಯ ಅಷ್ಟೂ ಏಕಾಗ್ರತೆಯನ್ನು ಅದು ಬೇಡುತ್ತದೆ. ಕ್ಲಿಷ್ಟಕರ ಸಂದರ್ಭಗಳಲ್ಲಂತೂ 24/7 ಕೆಲಸ ಕೂಡ ಕಡಿಮೆಯೇ. ವಾಸ್ತವ ಹೀಗಿರುವಾಗ, ಜೇಟ್ಲಿ ರೀತಿಯ ಸೂಪರ್‌ಮ್ಯಾನ್‌ ಕೂಡ ತನ್ನ ಕರ್ತವ್ಯಕ್ಕೆ ಸಂಪೂರ್ಣ ನ್ಯಾಯ ಒದಗಿಸಲಾರರು.

ಹಾಗೆ ನೋಡಿದರೆ, ಜೇಟ್ಲಿ ಒಬ್ಬ ಅದೃಷ್ಟವಂತ ಹಣಕಾಸು ಸಚಿವ. ಅಷ್ಟೇ ಏಕೆ, ಉದಾರೀಕರಣದ ನಂತರದ ದಿನಗಳಲ್ಲಿ ಬಂದ ಅತ್ಯಂತ ಅದೃಷ್ಟವಂತ ಸಚಿವ ಎಂದರೆ ಉತ್ಪ್ರೇಕ್ಷೆಯಾಗಲಾರದು. ಜಾಗತಿಕ ಮಟ್ಟದಲ್ಲಿ ಕಚ್ಛಾ ತೈಲದ ಬೆಲೆ ಕುಗ್ಗಿದ್ದರಿಂದ ಲಕ್ಷಾಂತರ ಕೋಟಿ ಹಣ ಜೇಟ್ಲಿಗೆ ಅನಾಯಾಸವಾಗಿ ಒದಗಿಬಂದಿತ್ತು. ಈ ಅಭೂತಪೂರ್ವ ಅವಕಾಶವನ್ನು ಸಚಿವರು ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿತ್ತು. ಅಂತ್ಯ ಕಾಣದ ಯೋಜನೆಗಳು ಮತ್ತು ಬ್ಯಾಂಕ್‌ನ ಅನುಪಯುಕ್ತ ಸ್ವತ್ತು (ಎನ್‌ಪಿಎ) ರೀತಿಯ ತಲೆಮಾರುಗಳಿಂದ ಬಳುವಳಿಯಾಗಿ ಬಂದ ಸಮಸ್ಯೆಗಳು ಈಗಲೂ ಹೇರಳವಾಗಿದ್ದವು ಮತ್ತು ಅವುಗಳನ್ನು ಈ ಕಚ್ಛಾ ತೈಲ ಒದಗಿಸಿದ ದೊಡ್ಡ ಪ್ರಮಾಣದ ಸಂಪನ್ಮೂಲದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿತ್ತು. ಆದರೆ, ಆ ಹಣ ವಿವೇಚನಾರಹಿತವಾಗಿ ವೆಚ್ಚವಾಯಿತು. ಪರಿಣಾಮ, ಆ ಪರಂಪಾರಾನುಗತ ಸಮಸ್ಯೆಗಳು ಹಾಗೆಯೇ ಉಳಿದವು. ಮಾತ್ರವಲ್ಲ, ಅವುಗಳು ಮಿತಿ ಮೀರಿ ಉಲ್ಭಣಿಸಲು ಅವಕಾಶ ಮಾಡಿಕೊಟ್ಟಂತಾಯಿತು.

ಹಾಗಾದರೆ, ಇಂದಿನ ಭಾರತೀಯ ಅರ್ಥವ್ಯವಸ್ಥೆಯ ನೈಜ ಚಿತ್ರಣವೇನು? ಖಾಸಗಿ ಹೂಡಿಕೆಯು ಎರಡು ದಶಕಗಳಲ್ಲಿ ಕಂಡರಿಯದಂತ ಕುಸಿತ ಕಂಡಿದೆ. ಕೈಗಾರಿಕಾ ಉತ್ಪಾದನಾಶೀಲನೆ ಕ್ಷಯಿಸಿದೆ. ಕೃಷಿ ವಲಯ ಸಂಕಷ್ಟದಲ್ಲಿದೆ. ಅತಿ ಹೆಚ್ಚು ಉದ್ಯೋಗ ನೀಡುವ ಕಟ್ಟಡ ನಿರ್ಮಾಣ ವಲಯ ಡೋಲಾಯಮಾನ ಸ್ಥಿತಿಯಲ್ಲಿದೆ. ಬಾಕಿ ಸೇವಾ ವಲಯ ಮಂದಗತಿಯಲ್ಲಿ ಸಾಗುತ್ತಿದೆ. ರಫ್ತು ಉದ್ಯಮ ನಿತ್ರಾಣಗೊಂಡಿದೆ. ಅರ್ಥ ವ್ಯವಸ್ಥೆಯ ಸಕಲ ವಲಯಗಳು ನಿಸ್ತೇಜಗೊಂಡಿವೆ. ಅಮಾನ್ಯೀಕರಣ ಎಂಬುದು ಭರಿಸಲಾಗದ ಆರ್ಥಿಕ ದುರಂತ ಎಂಬುದು ಸಾಬೀತಾಗಿದೆ. ಅಸಮರ್ಪಕ ರೂಪದಲ್ಲಿರುವ ಹಾಗೂ ಅಷ್ಟೇ ಅಸಮಪರ್ಕವಾಗಿ ಜಾರಿಯಾಗಿರುವ ಜಿಎಸ್‌ಟಿ ಎಲ್ಲಾ ಉದ್ಯಮ-ವ್ಯವಹಾರಗಳನ್ನು ಉಸಿರುಗಟ್ಟಿಸುತ್ತಿದೆ. ಅದರ ದೆಸೆಯಿಂದ ಕೆಲವು ಉದ್ಯಮಗಳು ನೆಲಕಚ್ಚಿವೆ. ಅಸಂಖ್ಯಾತ ಜನ ಕೆಲಸ ಕಳೆದುಕೊಂಡು, ಬೀದಿಗೆ ಬಂದಿದ್ದಾರೆ. ಕಾರ್ಮಿಕ ಉದ್ಯಮಕ್ಕೆ ಕಾಲಿಡುವ ಹೊಸಬರಿಗೆ ಅವಕಾಶದ ಬಾಗಿಲುಗಳು ಮುಚ್ಚುತ್ತಿವೆ.

ದಿನ ಕಳೆದಂತೆ, ಅರ್ಥವ್ಯವಸ್ಥೆಯ ಬೆಳವಣಿಗೆ ಅಧೋಮುಖವಾಗಿ ಚಲಿಸುತ್ತಿದೆ. ಅದೀಗ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಅತಿ ಕೆಳಗೆ ಅಂದರೆ, 5.7 ತಲುಪಿದೆ. ಅದು ಈ ಮೂರು ವರ್ಷಗಳಲ್ಲಿ ಕಂಡ ಅತ್ಯಂತ ದೊಡ್ಡ ಕುಸಿತ. ಈ ಕುಸಿತಕ್ಕೆ ನೋಟುಗಳ ಅಮಾನ್ಯೀಕರಣ ಕಾರಣವಲ್ಲ ಎಂದು ಸರ್ಕಾರದ ವಕ್ತಾರರು ಹೇಳುತ್ತಿದ್ದಾರೆ. ಅವರು ಹೇಳುವುದರಲ್ಲಿ ಸತ್ಯವೂ ಇದೆ. ತುಂಬಾ ಹಿಂದಿನಿಂದಲೇ ಪ್ರಾರಂಭಗೊಂಡಿದ್ದ ಈ ಕುಸಿತವನ್ನು ಅಮಾನ್ಯೀಕರಣ ಇನ್ನಷ್ಟು ತ್ವರಿತಗೊಳಿಸಿ, ಉರಿಯುವ ಬೆಂಕಿಗೆ ತುಪ್ಪ ಸುರಿಯಿತಷ್ಟೇ.ಇಲ್ಲಿ ಒಂದು ವಿಷಯ ನಿಮ್ಮ ಗಮನದಲ್ಲಿರಬೇಕು. ಈ ಸರ್ಕಾರವು ಜಿಡಿಪಿಯನ್ನು ಅಳೆಯುವ ವಿಧಾನವನ್ನು 2015 ರಲ್ಲಿಯೇ ಬದಲಾಯಿಸಿದೆ. ಇದರ ಪರಿಣಾಮವಾಗಿ, ಅಂಕಿ-ಅಂಶಗಳ ಪ್ರಕಾರ ಅಭಿವೃದ್ಧಿಯ ಸೂಚ್ಯಂಕ ಪ್ರಾರಂಭದಲ್ಲಿ  200 ಮೂಲ ಪಾಯಿಂಟ್‌ಗಳಿಗಿಂತ ಹೆಚ್ಚು ಮೇಲೇರಿತ್ತು.

ಹಳೆಯ ಲೆಕ್ಕಾಚಾರದ ಪ್ರಕಾರ, 5.7 ಇರುವ ಅಭಿವೃದ್ಧಿ ಸೂಚ್ಯಾಂಕ ವಾಸ್ತವದಲ್ಲಿರುವುದು ಶೇ.3.7 ಅಥವಾ ಅದಕ್ಕಿಂತ ಕಡಿಮೆ!ನಮ್ಮ ದೇಶದ ಸಾರ್ವಜನಿಕ ವಲಯದ ಅತ್ಯಂತ ದೊಡ್ಡ ಬ್ಯಾಂಕ್‌ ಎಂದು ಪರಿಗಣಿಸಲಾಗುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಈ ಕುಸಿತ ‘ಕ್ಷಣಿಕ’(Transient) ಬದಲಾವಣೆಯೇನೂ ಅಲ್ಲ ಮತ್ತು “ತಾಂತ್ರಿಕ” (Technical) ಅಂತೂ ಖಂಡಿತಾ ಅಲ್ಲ ಎಂದಿದೆ. ಮಾತ್ರವಲ್ಲ, ಇದು ಸದ್ಯದ ಪರಿಸ್ಥಿತಿಯಲ್ಲಿ ಹೀಗೆಯೇ ಮುಂದುವರಿಯಲಿದೆ. ಬೇಡಿಕೆಯ ಕುಸಿತ ಈ ಸಂದಿಗ್ಧ ಸನ್ನಿವೇಶವನ್ನು ಇನ್ನಷ್ಟು ಪ್ರಕ್ಷುಬ್ಧಗೊಳಿಸಿದೆಯಷ್ಟೇ ಎಂದೂ ಹೇಳಿದೆ. ಎಸ್‌ಬಿಐ ಇಷ್ಟು ಮುಕ್ತವಾಗಿ ಮತ್ತು ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಅಪರೂಪ. ಅದೇನೇ ಇರಲಿ, ಕೆಲವು ದಿನಗಳ ಹಿಂದಷ್ಟೇ ಬಿಜೆಪಿಯ ಅಧ್ಯಕ್ಷರು ಹೇಳಿದ, ಈ ಕುಸಿತ ಒಂದು ತಾಂತ್ರಿಕ ಸಮಸ್ಯೆಯಷ್ಟೆ ಮತ್ತು ಅದನ್ನು ಆದಷ್ಟು ಬೇಗ ಸರಿಪಡಿಸಲಾಗುವುದು ಎಂಬ ಮಾತಿಗೆ ಇದು ವ್ಯತಿರಿಕ್ತವಾಗಿರುವುದಂತೂ ಹೌದು. ಎಸ್‌ಬಿಐ ಮುಖ್ಯಸ್ಥರ ಪ್ರಕಾರ, ಈಗಾಗಲೇ ಬಸವಳಿಯುತ್ತಿರುವ ಉದ್ಯಮಗಳ ಪಟ್ಟಿಗೆ ಟೆಲಿಕಾಂ ವಲಯ ಇತ್ತೀಚಿಗಿನ ಸೇರ್ಪಡೆ.

ಈ ಕುಸಿತದ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಮತ್ತು ಅವು ಅಚಾನಕ್‌ ಆಗಿ ಕಾಣಿಸಿಕೊಂಡ ಸಮಸ್ಯೆಗಳಲ್ಲ. ನಮ್ಮ ಅರ್ಥವ್ಯವಸ್ಥೆಯಲ್ಲಿ ಹಲವು ವರ್ಷಗಳಿಂದ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿದ್ದ ಈ ಸಮಸ್ಯೆಗಳನ್ನು ಹಾಗೇ ಬೆಳೆಯಲು ಬಿಟ್ಟಿದ್ದರಿಂದ ಅವು ಈ ಸಂಕಷ್ಟಕರ ಸನ್ನಿವೇಶವನ್ನು ಸೃಷ್ಟಿಸಿವೆ. ಇವುಗಳನ್ನು ಸಾಕಷ್ಟು ಮುಂಚಿತವಾಗಿಯೇ ಅಂದಾಜು ಮಾಡುವುದಾಗಲೀ, ಸೂಕ್ತ ರೀತಿಯಲ್ಲಿ ನಿಭಾಯಿಸುವುದಾಗಲೀ ಕಷ್ಟವಿರಲಿಲ್ಲ. ಆದರೆ, ಅದಕ್ಕೆ ಸಾಕಷ್ಟು ಸಮಯ ನೀಡಬೇಕಾಗಿತ್ತು. ನಮ್ಮ ಚಾಕ್ಯಚಕ್ಯತೆಯನ್ನು ಪ್ರದರ್ಶಿಸಬೇಕಾಗಿತ್ತು. ಸಮಸ್ಯೆಗಳನ್ನು ಅವುಗಳ ಮೂಲದಲ್ಲಿಯೇ ಅರ್ಥ ಮಾಡಿಕೊಂಡು, ಅವುಗಳನ್ನು ದಕ್ಷತೆಯಿಂದ ಎದುರಿಸಲು ಯೋಜನೆ ರೂಪಿಸಬೇಕಾಗಿತ್ತು. ಆದರೆ, ಬೇರೆಲ್ಲಾ ಜವಾಬ್ದಾರಿಗಳ ಭಾರದಲ್ಲಿ ನಲುಗುತ್ತಿದ್ದ ವ್ಯಕ್ತಿಯಿಂದ ಇದನ್ನೆಲ್ಲಾ ನಿರೀಕ್ಷಿಸುವುದಾದರೂ ಹೇಗೆ? ಈಗ, ನಮ್ಮೆದುರು ಇರುವುದು ಅದರ ಫಲಿತಾಂಶ.

ಈಗ ನಮ್ಮ ಪ್ರಧಾನ ಮಂತ್ರಿಗಳಿಗೆ ಆತಂಕ ಶುರುವಾಗಿದೆ. ಅವರು ಹಣಕಾಸು ಸಚಿವರು ಮತ್ತು ಅವರ ಅಧಿಕಾರಿಗಳ ಸಭೆ ಕರೆದಿದ್ದಾರೆ. ಆದರೆ ಆ ಸಭೆ ಅನಿರ್ಧಿಷ್ಟ ಕಾಲ ಮುಂದೂಡಲ್ಪಟ್ಟಿದೆ. ಅಭಿವೃದ್ಧಿಗೆ ಚುರುಕು ಮುಟ್ಟಿಸಲು ಹಣಕಾಸು ಸಚಿವರು ಪ್ಯಾಕೇಜ್‌ ಒಂದನ್ನು ಘೋಷಿಸುವ ಭರವಸೆ ನೀಡಿದ್ದಾರೆ. ಹಾಗೂ, ಆ ಪ್ಯಾಕೇಜ್‌ಗಾಗಿ ನಾವೆಲ್ಲ ಉಸಿರು ಬಿಗಿ ಹಿಡಿದು ಕಾಯುತ್ತಿದ್ದೇವೆ. ಆದರೆ ಆ ಪ್ಯಾಕೇಜ್‌ ಈವರೆಗೆ ಘೋಷಣೆಯಾಗಿಲ್ಲ.

ಸದ್ಯದ ಹೊಸ ಬೆಳವಣಿಗೆ ಎಂದರೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಪುನರ್‌ರಚನೆ ಮಾತ್ರ. ಪಂಚಪಾಂಡವರಂತೆ ನಮ್ಮೆದುರಿನ ಈ ಹೊಸ ಮಹಾಭಾರತವನ್ನು ಗೆದ್ದು ಬರುವ ನಿರೀಕ್ಷೆಯಲ್ಲಿ ಅವರಿದ್ದಾರೆ.ಆ ಬಾರಿಯ ಮಾನ್ಸೂನ್‌ ಅಷ್ಟೇನೂ ಸುಖಪ್ರದವಾಗಿಲ್ಲ. ಇದು ಈಗಾಗಲೇ ಬೆಂದು ಬಸವಳಿದಿರುವ ಗ್ರಾಮೀಣ ಭಾಗವನ್ನು ಇನ್ನಷ್ಟು ಹೈರಾಣಾಗಿಸಲಿದೆ. ಕೆಲವು ರಾಜ್ಯದ ರೈತರು ತಮ್ಮ ಸರ್ಕಾರಗಳು ದಯಪಾಲಿಸಿದ ಒಂದು ಪೈಸೆಯಿಂದ ಹಿಡಿದು ಹಲವು ರುಪಾಯಿಗಳವರೆಗಿನ 'ಅಪಾರ ಪ್ರಮಾಣದ' ಸಾಲ ಮನ್ನದ ಫಲಾನುಭವಿಗಳಾಗಿದ್ದಾರೆ. ದೇಶದ ಉದ್ಯೋಗ ವಲಯದಲ್ಲಿ ಮುಂಚೂಣಿಯಲ್ಲಿದ್ದ ಸುಮಾರು ನಲವತ್ತು ಕಂಪನಿಗಳು ದಿವಾಳಿಯ ಮೊಕದ್ದಮೆ ಎದುರಿಸುತ್ತಿವೆ.

ಇನ್ನೂ ಕೆಲವು ಕಂಪನಿಗಳು ಸದ್ಯದಲ್ಲಿಯೇ ನ್ಯಾಯಾಲಯದ ಮುಖ ನೋಡಲಿವೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ ವಲಯ ಹಿಂದೆಂದೂ ಕಾಣದಂಥ ಅಸ್ತಿತ್ವ ಸಮಸ್ಯೆಗಳಿಂದ ಬಳಲುತ್ತಿದೆ. ಜಿಎಸ್‌ಟಿ ಅಡಿಯಲ್ಲಿ 95 ಸಾವಿರ ಕೋಟಿ ಇರಬೇಕಾಗಿದ್ದ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಬೇಡಿಕೆ 65 ಸಾವಿರ ಕೋಟಿ ತಲುಪಿದೆ. ಈಗಾಗಲೇ ದೊಡ್ಡ ಪ್ರಮಾಣದ ತೆರಿಗೆ ಘೋಷಣೆ ಮಾಡಿದವರ ಬೆನ್ನು ಬೀಳುವಂತೆ ಸರ್ಕಾರ ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಿದೆ. ಬಹುತೇಕ ಕಂಪನಿಗಳಲ್ಲಿ, ಅದರಲ್ಲೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ವಲಯದಲ್ಲಿ ಹಣದ ಹರಿವಿನ ಕುರಿತೇ ಸಮಸ್ಯೆಗಳೆದ್ದಿವೆ. ಇಂದಿನ ಹಣಕಾಸು ಸಚಿವಾಲಯ ಕಾರ್ಯನಿರ್ವಹಿಸುತ್ತಿರುವ ರೀತಿ ಇದು. ನಾವು ವಿರೋಧ ಪಕ್ಷದಲ್ಲಿದ್ದಾಗ ಈ 'ರೇಡ್‌ ರಾಜ್‌'ನ್ನು ವಿರೋಧಿಸಿ, ಪ್ರತಿಭಟಿಸಿದ್ದೆವು. ಆದರೆ ಅದೀಗ ಇಂದು ನಮ್ಮ ದೈನಂದಿನ ಕಾರ್ಯ. ಅಮಾನ್ಯೀಕರಣದ ನಂತರದ ದಿನಗಳಲ್ಲಿ ಅಸಂಖ್ಯಾತ ಮಂದಿಯ ಹಣೆಬರಹ ನಿರ್ಧರಿಸುವಂಥ ಲಕ್ಷಾಂತರ ಕೇಸುಗಳ ವಿಚಾರಣೆಯ ಜವಾಬ್ದಾರಿ ಆದಾಯ ತೆರಿಗೆ ಇಲಾಖೆಯ ಹೆಗಲೇರಿದೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗಳ ಕೈಗಳಲ್ಲೂ ಸಾಕಷ್ಟು ಕೇಸುಗಳಿವೆ. ಜನರ ಮನದಲ್ಲಿ ಭಯ ಬಿತ್ತುವುದು ಈ ಆಟದ ಹೊಸ ವರಸೆ.

ಅರ್ಥವ್ಯವಸ್ಥೆಗಳನ್ನು ಕಟ್ಟಿ ಬೆಳೆಸುವುದಕ್ಕಿಂತ, ಕುಟ್ಟಿ ಬೀಳಿಸುವುದು ಸುಲಭ. 1998 ರಲ್ಲಿ ನಮಗೆ ಬಳುವಳಿಯಾಗಿ ಬಂದಿದ್ದ ಕೃಶಕಾಯ ಅರ್ಥ ವ್ಯವಸ್ಥೆಯನ್ನು ಹಂತ ಹಂತವಾಗಿ ಪುನಶ್ಚೇತನಗೊಳಿಸಲು, ತೊಂಬತ್ತರ ದಶಕದ ಕೊನೆಗೆ ಮತ್ತು 2000ದಲ್ಲಿ ನಾವು ಸುಮಾರು ನಾಲ್ಕು ವರ್ಷಗಳ ಕಾಲ ಎಡೆಬಿಡದೇ ಶ್ರಮಿಸಿದ್ದೆವು, ಬೆವರು ಹರಿಸಿದ್ದೆವು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆರ್ಥಿಕತೆಯನ್ನು ಉಜ್ವಲಗೊಳಿಸಿಬಿಡುವ ಯಾವ ಮಾಯಾದಂಡವೂ ಇಲ್ಲ. ಇವತ್ತು ನಾವು ತೆಗೆದುಕೊಳ್ಳುವ ಕ್ರಮಗಳು ನಿರೀಕ್ಷಿತ ಫಲ ನೀಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ. ವಾಸ್ತವ ಹೀಗಿರುವುದರಿಂದ, ಈಗಿನ ಆರ್ಥಿಕತೆ ಮುಂದಿನ ಲೋಕಸಭಾ ಚುನಾವಣೆಯೊಳಗೆ ಪುನಶ್ಚೇತನಗೊಳ್ಳುವುದು ಬಹುತೇಕ ಅಸಾಧ್ಯ. ಒಂದು ಕಟ್ಟುನಿಟ್ಟಾದ ಕ್ರಮದ ಅನಿವಾರ್ಯವಿದೆ ಎಂದೆನಿಸುತ್ತಿದೆ. ಆಕರ್ಷಕ ಸುಳ್ಳುಗಳು, ಭರವಸೆಯ ಕನ್ನಡಿ ಗಂಟುಗಳು ಚುನಾವಣೆಗೆ ಮಾತ್ರ ಲಾಯಕ್ಕು. ವಾಸ್ತವದಲ್ಲಿ ಅವೆಲ್ಲವೂ ನೀರ ಮೇಲಣ ಗುಳ್ಳೆ.

ಪ್ರಧಾನ ಮಂತ್ರಿಗಳು ತಾವು ಬಡತನವನ್ನು ಅತ್ಯಂತ ಹತ್ತಿರದಿಂದ ನೋಡಿ, ಅನುಭವಿಸಿ ಬಲ್ಲೆ ಎನ್ನುತ್ತಿರುತ್ತಾರೆ. ಈಗ ಅವರ ಹಣಕಾಸು ಸಚಿವರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆ ಬಡತನವನ್ನು ದೇಶವಾಸಿಗಳೆಲ್ಲಾ ಇನ್ನಷ್ಟು ಹತ್ತಿರದಿಂದ ನೋಡಿ, ಅನುಭವಿಸಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ.

ಇದು 'ಇಂಡಿಯನ್‌ ಎಕ್ಸ್‌ಪ್ರೆಸ್' ಪ್ರಕಟಿಸಿದ ಅಂಕಣದ ಕನ್ನಡಾನುವಾದ. ಮೂಲ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.