samachara
www.samachara.com
ನನಗೇಕೆ ಗಾಂಧಿ ಪದೇ ಪದೇ ನೆನಪಾಗುತ್ತಾರೆ?: ಎಸ್. ಆರ್. ಹಿರೇಮಠ್
ವಿಚಾರ

ನನಗೇಕೆ ಗಾಂಧಿ ಪದೇ ಪದೇ ನೆನಪಾಗುತ್ತಾರೆ?: ಎಸ್. ಆರ್. ಹಿರೇಮಠ್

ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆ ಏನಿರುತ್ತೆ ಎಂಬುದನ್ನು ಅವರು ಬರೆಯುತ್ತಾ ಹೋಗುತ್ತಾರೆ. ಗಾಂಧಿ ತಮ್ಮ ಸಂಪರ್ಕಕ್ಕೆ ಬಂದ ವೃತ್ತಪರರ ಜತೆಗಿನ ಒಡನಾಟದ ಅನುಭವದಲ್ಲಿ ನಿರೂಪಿಸಿದ ಕರ್ತವ್ಯಗಳು ವಾಸ್ತವಕ್ಕೆ ಹತ್ತಿರವಾಗಿವೆ.

samachara

samachara

ಕರ್ನಾಟಕದ ಸಾಮಾಜಿಕ ಚಳವಳಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ಎಸ್. ಆರ್. ಹಿರೇಮಠ್. ಕಳೆದ ಮೂರೂವರೆ ದಶಕಗಳಲ್ಲಿ ಅವರು ತೊಡಗಿಸಿಕೊಂಡ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಹೋರಾಟಗಳು ಇವತ್ತಿಗೂ ಉತ್ತರ ಕರ್ನಾಟಕದ ತಳಮಟ್ಟದ ಹಳ್ಳಿಗಳಲ್ಲಿ ಕಾಣಸಿಗುತ್ತವೆ. ಗಣಿಗಾರಿಕೆ ವಿರುದ್ಧ ಜನಾಂದೋಲದ ಜತೆಗೆ ಕಾನೂನು ಹೋರಾಟದ ಮೂಲಕ ಹಿರೇಮಠ್ ಹೆಸರು ಚಿರಪರಿಚಿತ. ಅಮೆರಿಕಾರದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ಅವರು ಅದನ್ನು ಬಿಟ್ಟು ಭಾರತಕ್ಕೆ ಬಂದಿದ್ದು 70ರ ದಶಕದ ಅಂತ್ಯದಲ್ಲಿ. ಅವತ್ತಿಗೂ, ಇವತ್ತಿಗೂ ಗಾಂಧಿ ಮತ್ತುವರ ವಿಚಾರಗಳನ್ನು ಆಳವಾಗಿ ಅಧ್ಯಯನ ಮಾಡಿದ ಮತ್ತು ಕೃತಿಯಲ್ಲೂ ಅನುಸರಿಸಿಕೊಂಡು ಬಂದವರು ಅವರು. ಗಾಂಧಿ ಜಯಂತಿ' ನೆಪದಲ್ಲಿ 'ಸಮಾಚಾರ'ಕ್ಕಾಗಿ ಅವರು ನಿರೂಪಿಸಿದ ಲೇಖನ ಇಲ್ಲಿದೆ.

-ಎಸ್. ಆರ್. ಹಿರೇಮಠ್.

ನನಗೆ ಗಾಂಧಿ ಕುರಿತು ಮೊದಲ ನೆನಪುಗಳು ಹೀಗೆ ಶುರುವಾಗುತ್ತವೆ. ಅವರು 'ಸೂರ್ಯ ಮುಳಗದ ಸಾಮ್ರಾಜ್ಯ' ಎಂದು ಅಹಂಕಾರದಿಂದ ಹೇಳಿಕೊಳ್ಳುತ್ತಿದ್ದ ಬ್ರಿಟಿಷರ ಸಾಮ್ರಾಜ್ಯವನ್ನು ತೊಲಗುವಂತೆ ಮಾಡಿದರು. ಭಾರತದಂತಹ ವಿಶಾಲ ದೇಶದಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದರು. ಅತ್ಯಂತ ಕ್ರೂರ ಹಾಗೂ ಬಲಶಾಲಿಯಾಗಿದ್ದ ಆಡಳಿತವನ್ನು ಕಿತ್ತೊಗೆದರು. ಉಪ್ಪಿನ ಸತ್ಯಾಗ್ರಹ ನಡೆಸಿದರು. ಹೀಗೆ, ತುಂಬಾ ಆಳದಲ್ಲಿ ಅಲ್ಲದಿದ್ದರೂ, ಮೇಲ್ಮಟ್ಟದಲ್ಲಿ ಒಂದಷ್ಟು ಗಾಂಧಿಯ ಬಗ್ಗೆ ವಿಚಾರಗಳನ್ನು ತಿಳಿದುಕೊಂಡಿದ್ದೆ.

ಸ್ವತಂತ್ರ ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ನಾನು ಅಮೆರಿಕಾರದಲ್ಲಿದ್ದೆ. ಅವತ್ತಿನ ಪ್ರಧಾನಿ ಇಂದಿರಾಗಾಂಧಿ ಕೂಡ ಬಲಶಾಲಿಯಾಗಿದ್ದರು. ಪರಮ ಅಧಿಕಾರವನ್ನು ಹೊಂದಿದ್ದರು. ನಾವೆಲ್ಲ ತುರ್ತು ಪರಿಸ್ಥಿತಿಯನ್ನು ವಿರೋಧಿಸಲು ಶುರುಮಾಡಿದಾಗ ಗಾಂಧಿ ಹೆಚ್ಚು ಹೆಚ್ಚು ನೆನಪಾದರು; ಹತ್ತಿರವಾದರು. ಇಂದಿರಾ ಗಾಂಧಿ ಅಧಿಕಾರ ದುರುಪಯೋಗವನ್ನು ತಡೆಯಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಹೋರಾಟವನ್ನು ರೂಪಿಸಿದಾಗ ನೆರವಿಗೆ ಬಂದವರು ಗಾಂಧಿ. ಅವರ ಕುರಿತು ಆಳವಾದ ಅಧ್ಯಯನಕ್ಕೆ ಮೊರೆಹೋದೆ.

ಗಾಂಧಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದ್ದರು. ಸತ್ಯಾಗ್ರಹ ಎಂದರೇನು? ಸತ್ಯಾಗ್ರಹಿಗಳು ಎಂದರೆ ಯಾರು? ಅವರು ಏನು ಮಾಡಬೇಕು? ಹೀಗೆ ಗಾಂಧಿ ಶಾಂತಿಯುತ ಹೋರಾಟದ ಸ್ವರೂಪವನ್ನು ನಿರೂಪಿಸಿದ್ದವರು. ಸಾಮಾನ್ಯ ಮಹಿಳೆಯರು, ಪುರುಷರು ತಮ್ಮ ಮೇಲಾಗುವ ಅನ್ಯಾಯಗಳ ವಿರುದ್ಧ ಯಾವ ಮಾದರಿಯಲ್ಲಿ ಹೋರಾಟವನ್ನು ಮಾಡಬಹುದು ಎಂಬುದಕ್ಕೆ ಒಂದು ದಾರಿಯನ್ನು ಹಾಕಿಕೊಟ್ಟವರು.

ಮುಂದೆ 1979ರ ಜುಲೈನಲ್ಲಿ ಗ್ರಾಮೀಣಾಭಿವೃದ್ಧಿಯ ಕನಸು ಇಟ್ಟುಕೊಂಡು ಭಾರತಕ್ಕೆ ವಾಪಾಸಾದೆ. ಆ ಸಮಯದಲ್ಲಿ ಗಾಂಧಿ ಬರೆದ ಹಲವು ಪುಸ್ತಕಗಳನ್ನು ಓದಲು ಶುರುಮಾಡಿದೆ. ಗಾಂಧಿ ಪೀಸ್ ಪೌಂಡೇಶನ್ ಗಾಂಧಿ ವಿಚಾರಗಳನ್ನು, ಅವರ ಪುಸ್ತಕಗಳನ್ನು ಸಾಮಾನ್ಯ ಜನರ ಕೈಗೆಟಕುವ ಬೆಲೆಯಲ್ಲಿ ಪ್ರಕಟಿಸಿದ್ದು ಅನುಕೂಲವಾಯಿತು. ಅವರ 'ಹಿಂದ್ ಸ್ವರಾಜ್ಯ' ಪುಸ್ತಕ ನನ್ನನ್ನು ಪ್ರಭಾವಿಸಿದ ಪುಸ್ತಕಗಳಲ್ಲಿ ಒಂದು. ಹಿಂದೆ ಒಮ್ಮೆ ಅದನ್ನು ಓದಿದ್ದೆನಾದರೂ, ಎರಡನೇ ಓದಿನಲ್ಲಿ ನನಗೆ ಹೊಸ ಹೊಳವುಗಳು ಸಿಕ್ಕಿದ್ದವು. ಅದರಲ್ಲಿ ಗಾಂಧಿ, ಪ್ರತಿಯೊಬ್ಬ ವೃತ್ತಿಪರರ ಕರ್ತವ್ಯಗಳು ಏನಿರಬೇಕು ಎಂಬುದನ್ನು ವಿವರವಾಗಿ ನಿರೂಪಿಸಿದ್ದಾರೆ.

ಒಬ್ಬ ಪತ್ರಕರ್ತ, ಎಂಜಿನಿಯರ್, ವೈದ್ಯ, ವಕೀಲ ಹೀಗೆ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆ ಏನಿರುತ್ತೆ ಎಂಬುದನ್ನು ಅವರು ಬರೆಯುತ್ತಾ ಹೋಗುತ್ತಾರೆ. ಗಾಂಧಿ ತಮ್ಮ ಸಂಪರ್ಕಕ್ಕೆ ಬಂದ ವೃತ್ತಪರರ ಜತೆಗಿನ ಒಡನಾಟದ ಅನುಭವದಲ್ಲಿ ನಿರೂಪಿಸಿದ ಕರ್ತವ್ಯಗಳು ವಾಸ್ತವಕ್ಕೆ ಹತ್ತಿರವಾಗಿವೆ.ಇದರ ಜತೆಗೆ, ಗಾಂಧಿ ಬರೆದ 'ಸತ್ಯಾಗ್ರಹ ಇನ್ ಸೌತ್ ಆಫ್ರಿಕಾ' ಪುಸ್ತಕವೂ ನನಗೆ ಸಹಾಯ ಮಾಡಿದೆ. ಒಳ್ಳೆಯ ಶಿಕ್ಷಣ, ಕೆಲಸ, ಸಂಬಳ ಎಲ್ಲವೂ ಇದ್ದ ಗಾಂಧಿ ಅದನ್ನೆಲ್ಲಾ ಬಿಟ್ಟು ಸೌತ್ ಆಫ್ರಿಕಾದಲ್ಲಿ ಕಟ್ಟಿಕೊಂಡ ಬದುಕಿನ ವಿವರಗಳು ಇಲ್ಲಿ ನಮಗೆ ಸಿಗುತ್ತವೆ. ವಿಶೇಷ ಅಂದರೆ ಅವರು ಅಲ್ಲಿ ನಡೆಸಿದ ಹಲವು ಪ್ರಯೋಗಗಳು ಇವತ್ತಿಗೂ ಮಾದರಿಯೇ. ಅವರೊಂದು ಆಶ್ರಮ ಕಟ್ಟಿಕೊಂಡು ಹೋರಾಟವನ್ನು ಮುನ್ನಡೆಸಿದರು. ಅವರ 'ಟಾಲ್ ಸ್ಟಾಯ್ ಫಾರ್ಮ್' ಸೌತ್ ಆಫ್ರಿಕಾದಲ್ಲಿ ಜನಾಂಗೀಯ ಶೋಷಣೆಗಳ ವಿರುದ್ಧ ಹೋರಾಟವನ್ನು ಕಟ್ಟುವ ಪ್ರಯತ್ನ ಮಾಡುತ್ತಿತ್ತು. ಅಲ್ಲಿಂದಲೇ ಅವರು ಪತ್ರಿಕೆಯನ್ನೂ ಹೊರತರುತ್ತಿದ್ದರು. ಇದನ್ನು ಓದುತ್ತಿದ್ದರೆ ಗಾಂಧಿ ಅವರಿಗೆ ಅವರ ಹೋರಾಟದ ಬಗ್ಗೆ ಇದ್ದ ಕಮಿಟ್ಮೆಂಟ್ ಎಂಥದ್ದು ಎಂಬುದು ಅರ್ಥವಾಗುತ್ತದೆ. ಅವರ ಆಳವಾದ ತಿಳಿವಳಿಕೆ ಮತ್ತು ಜೀವನ ಶೈಲಿ ನನ್ನ ಮೇಲೆ ಪ್ರಭಾವವನ್ನು ಬೀರುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಇವತ್ತು ಗಾಂಧಿ ಜಯಂತಿ. ಅವರನ್ನು ನೆನಪು ಮಾಡಿಕೊಳ್ಳಲು ಒಂದು ನೆಪ ಸಿಕ್ಕಿದೆ. ಇವತ್ತಿನ ಬದಲಾದ ಕಾಲಘಟ್ಟದಲ್ಲಿ ಗಾಂಧಿ ಹೇಗೆ ಪ್ರಸ್ತುತ ಎಂಬುದನ್ನು ನಾವು ವಿಚಾರ ಮಾಡಬೇಕಿದೆ. ಇವತ್ತು ದೊಡ್ಡ ಮಟ್ಟದ ಬದಲಾವಣೆ ಎಲ್ಲಾ ಕ್ಷೇತ್ರಗಳಲ್ಲೂ ಆಗಿದೆ. ವಾಜಿಪೇಯಿ ಕಾಲದಿಂದ ಶುರುವಾದ ಆರ್ಥಿಕ ನೀತಿಗಳ ಬದಲಾವಣೆಯ ವೇಗ ಯುಪಿಎ- 1 ಹಾಗೂ ಯುಪಿಎ- 2ರ ಕಾಲಘಟ್ಟದಲ್ಲಿ ನಂತರ ಈಗ ಮೋದಿ ಅವರ ಆಡಳಿತದ ಅವಧಿಯಲ್ಲಿ ಮನ್ವಂತರಗಳನ್ನು ಸೃಷ್ಟಿಸುತ್ತಿದೆ. ಮಹಿಳೆಯರು, ಕಾರ್ಮಿಕರು, ಕೃಷಿ ಕೂಲಿಗಳು, ದಲಿತರು ಹೀಗೆ ಹಲವು ಸಮುದಾಯಗಳಿಗೆ ಈ ಸಮಯದಲ್ಲಿ ಸಂಕಷ್ಟಗಳು ಎದುರಾಗುವೆ. ಶೋಷಣೆ ಹೊಸ ಆಯಾಮದಲ್ಲಿ ನಡೆಯುತ್ತಿದೆ. ಇಂತಹ ಸಮಯದಲ್ಲಿ ನಮ್ಮ ನೆರವಿಗೆ ಬರುವುದು ಗಾಂಧಿ.ಬದಲಾದ ಆರ್ಥಿಕ ಪರಿಸ್ಥಿತಿ, ಹೆಚ್ಚುತ್ತಿರುವ ಸ್ವಾರ್ಥದ ಮನೋಭಾವ ಮತ್ತು ಕಳೆದು ಹೋಗುತ್ತಿರುವ ಸಂಸ್ಕೃತಿಗಳ ಸಮಯದಲ್ಲಿ ಗಾಂಧಿ ನಮಗ ದಾರಿದೀಪವಾಗುತ್ತಾರೆ.

ಇವತ್ತು ಬೆರಳೆಣಿಕೆಯ ಜನ ನಿಸ್ವಾರ್ಥವಾಗಿ ಯೋಚನೆ ಮಾಡುತ್ತಿದ್ದಾರೆ. ಅವರ ಮಿತಿಗಳಲ್ಲಿ ಸಮಾಜಮುಖಿಯಾಗಿ ಆಲೋಚನೆ ಮಾಡುತ್ತಿದ್ದಾರೆ. ಈ ಸಂಖ್ಯೆ ಹೆಚ್ಚ ಬೇಕು. ಹಿಂದಿಗಿಂತಲೂ ಇವತ್ತು ಅಂತಹ ಅಗತ್ಯವಿದೆ. ಅದಕ್ಕಾಗಿ ನಾವು ವಿಚಾರ ಮಾಡಬೇಕಿದೆ. ಹೊಸ ತಲೆಮಾರಿನ ಯುವಕ ಯುವತಿಯರು ಆಲೋಚನೆ ಮಾಡಬೇಕಿದೆ. ಅದಕ್ಕೂ ಮೊದಲು ಯಾವುದರ ಬಗ್ಗೆಯೇ ಆಗಲೀ, ಆಳವಾಗಿ ಯೋಚಿಸುವ, ತಿಳಿದುಕೊಳ್ಳುವ ಜರೂರು ಇದೆ. ಇಂತಹ ಸಮಯದಲ್ಲಿ ನಮಗೆ ಗಾಂಧಿ ನೆನಪಾಗುತ್ತಾರೆ. ಅವರು ನಡೆದು ಬಂದ ಹಾದಿ, ನಿರೂಪಿಸಿದ ವಿಚಾರಗಳು ನೆರವಾಗುತ್ತವೆ.