samachara
www.samachara.com
ಮಂಡ್ಯ ಮದುವೆಯಲ್ಲಿ ಉಂಡೋರೆಲ್ಲಾ ಜಾಣರಲ್ಲ; ಒಕ್ಕಲಿಗರು ದಾರಿ ತಪ್ಪಿದರಲ್ಲಾ?
ವಿಚಾರ

ಮಂಡ್ಯ ಮದುವೆಯಲ್ಲಿ ಉಂಡೋರೆಲ್ಲಾ ಜಾಣರಲ್ಲ; ಒಕ್ಕಲಿಗರು ದಾರಿ ತಪ್ಪಿದರಲ್ಲಾ?

samachara

samachara

  • ಕೆ. ಎನ್. ಮಂಗಳೂರು

ವಿವಾದ ಸೃಷ್ಠಿಸಿದ್ದ ಮಂಡ್ಯದ ಅಂತರ್ ಧರ್ಮೀಯ ವಿವಾಹ ಬಲಪಂಥೀಯರ ವಿರೋಧದ ಮಧ್ಯೆ ಸಾಂಗವಾಗಿಯೇನೋ ನಡೆದಿದೆ. ಮದುವೆಗೆ ಬೆಂಬಲ ನೀಡಿದ್ದ ಎಡಪಂಥೀಯರು, ಕೇವಲ ಬಲಪಂಥೀಯರ ವಿರೋಧವನ್ನು ಖಂಡಿಸುವ ನಡವಳಿಕೆ ತೋರಿಸಿದರು. ಆದರೆ, ಹಲವು ಭವಿಷ್ಯದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ವಿಫಲರಾದರು.

ಇದನ್ನು ಪಕ್ಕಕ್ಕಿಟ್ಟು, ಮಂಡ್ಯದಲ್ಲಿ ಶಕೀಲ್ ಮತ್ತು ಅಶಿತಾ ವಿವಾಹದಲ್ಲಿ ಎದ್ದಿರುವ ವಿವಾದ, ರಾಜಕೀಯ ಚರ್ಚೆಗೆ ಕಾರಣವಾಗಬೇಕಿತ್ತು. ಮದುವೆಯನ್ನು ವಿರೋಧಿಸಿದವರು ಭಜರಂಗದಳವೋ, ವಿಶ್ವ ಹಿಂದೂ ಪರಿಷತ್ತೋ, ಹಿಂದೂಜಾಗರಣಾ ವೇದಿಕೆಯೋ ಅಲ್ಲ. ಬದಲಾಗಿ 'ಒಕ್ಕಲಿಗರ ಸ್ವಾಭಿಮಾನಿ ವೇದಿಕೆ' ಎಂಬುದನ್ನು ಗಮನಿಸಬೇಕಿದೆ. ಈ ವೇದಿಕೆಯ ಪ್ರತಿಭಟನೆಯ ಹಿಂದೆ, ಹಿಂದೂ ಸಂಘಟನೆಗಳಿದ್ದರೂ ಬೀದಿಗಿಳಿದಿದ್ದು ಒಕ್ಕಲಿಗರು. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ.

ನಾವು ಹಳೇ ದಿನಗಳನ್ನು ನೆನಪಿಸಿಕೊಳ್ಳೋಣ. ಇಂದಿರಾಗಾಂದಿಯವರು 'ಗರೀಭಿ ಹಠಾವೋ' ಘೋಷಣೆ ಕೂಗಿದರು. ಜೊತೆಗೆ 'ಭೂ ಸುಧಾರಣಾ ಕಾಯ್ದೆ' ಜಾರಿಗೆ ತಂದು ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿಗೆ ತಂದರು. ಆಗ ಈ ಲ್ಯಾಂಡ್ ರಿಫಾರ್ಮ್ ಆ್ಯಕ್ಟ್ ಹೆಚ್ಚು ಯಶಸ್ವಿಯಾಗಿ ಜಾರಿಯಾಗಿದ್ದು ಕರ್ನಾಟಕದ ಕರಾವಳಿಯಲ್ಲಿ. ಈ ಯಶಸ್ಸು ಇಂದು ಕಡಲ ತಡಿಯ ಜಿಲ್ಲೆಯನ್ನು, ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಬಡತನದ ಪ್ರಮಾಣ ಕಡಿಮೆಯಾಗಿರಲು ಕಾರಣ.

ಬಡವರು, ರೈತ ಕೂಲಿಗಳು ಭೂಮಿ ಪಡೆದುಕೊಂಡರು. ಅಷ್ಟೇ ಅಲ್ಲ; ಕೆಳ ಜಾತಿಗಳು, ಮೇಲ್ಜಾತಿಗಳ ಸರಿ ಸಮಾನಕ್ಕೆ ಬೆಳೆಯಲು ಇದು ಕಾರಣವಾಯ್ತು. ಉದಾಹರಣೆಗೆ, ಅತ್ಯಂತ ಹೆಚ್ಚು ಜಮೀನು ಹೊಂದಿದ್ದ ಬಂಟರ(ಶೆಟ್ಟಿ) ಭೂಮಿ, ಈ ಕಾಯ್ದೆಯಿಂದಾಗಿ ಬಿಲ್ಲವರು, ಮೂಲ್ಯರು ಮತ್ತಿತರ ಶೋಷಿತ ಸಮುದಾಯಗಳಿಗೆ ದೊರೆಯುವಂತಾಯಿತು. ಅಂದಿನ ರಾಜಕೀಯವೂ ಅದಕ್ಕೆ ಪೂರಕವಾಗಿ ನಡೆಯಿತು. ಇಂದಿರಾಗಾಂಧಿಯ ಫೋಟೋದ ಪಕ್ಕದಲ್ಲಿ, ಲೈಟ್ ಕಂಬದ ಫೋಟೋ ಹಾಕಿ ಚುನಾವಣಾ ಪ್ರಚಾರ ಮಾಡಿದ್ರೂ, ಜನ ಲೈಟ್ ಕಂಬಕ್ಕೆ ಓಟು ಹಾಕುತ್ತಾರೆ ಎಂಬಂತ ಸ್ಥಿತಿ ಅಂದು ನಿರ್ಮಾಣವಾಗಿತ್ತು. ಇಂದಿರಾಗಾಂಧಿಯನ್ನು ಬಡವರು ಮತ್ತು ಬಹುಸಂಖ್ಯಾತ ಹಿಂದುಳಿದ ವರ್ಗ ಆ ಮಟ್ಟಕ್ಕೆ ಬೆಂಬಲಿಸುತ್ತಿತ್ತು.

ಇಂದು ಅದೇ ಹಿಂದುಳಿದ ವರ್ಗವಾಗಿರೋ ಬಿಲ್ಲವರ ಮನೆಗಳನ್ನೊಮ್ಮೆ ಸಂದರ್ಶಿಸಬೇಕು. ಅಲ್ಲಿ ತಾತ ಅಥವಾ ಮುತ್ತಾತರಿದ್ದರೆ ಕೇಳಿ ನೋಡಿ. ಅವರೀಗಲೂ ಇಂದಿರಾಗಾಂಧಿಯ ಕನವರಿಕೆಯಲ್ಲಿರುತ್ತಾರೆ. ಆದರೆ ಅದೇ ಮನೆಯ ಯುವ ಸಮುದಾಯ ಅಥವಾ ಹೊಸ ತಲೆಮಾರು ಭಜರಂಗದಳ ಅಥವಾ ಯಾವುದಾದರೂ ಹಿಂದೂ ಸಂಘಟನೆಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಅಷ್ಟೇ ಅಲ್ಲದೆ ಬಹುತೇಕ ಹಿಂದುಳಿದ ಸಮುದಾಯಗಳು ಬಿಜೆಪಿಯ ಅನುಯಾಯಿಗಳಾಗಿವೆ.

'ಲೈಟ್ ಕಂಬ ನಿಲ್ಲಿಸಿದರೂ' ಕಾಂಗ್ರೆಸ್ ಗೆ ಓಟು ಅನ್ನುತ್ತಿದ್ದ ಸಮುದಾಯಗಳು ಬದಲಾಗಿದ್ದು ಹೇಗೆ ? ಯಾವಾಗ ? ಇಂದಿರಾಗಾಂಧಿಯನ್ನು ಕಣ್ಣುಮುಚ್ಚಿ ಫಾಲೋ ಮಾಡುತ್ತಿದ್ದವರು ಒಮ್ಮಿಂದೊಮ್ಮೆಲೆ ಅಡ್ವಾನಿಯವರನ್ನು ಅನುಸರಿಸಿದ್ದೇಕೆ ? ಇಂತಹ ಪಲ್ಲಟಗಳು ನಡೆಯುವ ಸಂದರ್ಭದಲ್ಲಿ ಸಮಾಜ ವಿಜ್ಞಾನಿಗಳು ಅನಿಸಿಕೊಂಡ ಬುದ್ದಿಜೀವಿ ವರ್ಗ ಗಮನಿಸಲಿಲ್ಲವೇಕೆ ?

ಈಗ ಒಕ್ಕಲಿಗರ ವಿಚಾರಕ್ಕೆ ಬರೋಣಾ. "ಎಚ್. ಡಿ. ದೇವೇಗೌಡ ಮತ್ತು ಕುಟುಂಬ ಅದೆಷ್ಟು ಪಾಳೇಗಾರ ಮನಸ್ಥಿತಿಯವರಾದರೂ, ಅರ್. ಎಸ್. ಎಸ್ ಮತ್ತು ಹಿಂದೂ ಸಂಘಟನೆಗಳು ಬೆಳೆಯದಂತೆ ಮಾಡಿದವರು. ಜೆಡಿಎಸ್ ಬಲಿಷ್ಠವಾಗಿರೋ ಕಡೆ ಭಜರಂಗದಳ, ರಾಮಸೇನೆಯ ಕಾಟವಿಲ್ಲ. ಒಕ್ಕಲಿಗರು ಕೋಮುವಾದಿಗಳಲ್ಲ,'' ಎಂಬ ಮಾತನ್ನು ಈ ಹಿಂದೆ ಹಲವಾರು ಬಾರಿ ಪ್ರಗತಿಪರರು ಭಾಷಣದಲ್ಲಿ ಉಲ್ಲೇಖಿಸಿದ್ದಿದೆ.

ದೇವೇಗೌಡರು ಒಕ್ಕಲಿಗರ ರಾಜಕಾರಣದಲ್ಲೇ ಹಲವರನ್ನು ರಾಜಕೀಯಕ್ಕೆ ತಂದವರು. ಕ್ಷೇತ್ರಗಳಲ್ಲಿ ಹಿಡಿತವಿಲ್ಲದೆಯೂ ಅಭ್ಯರ್ಥಿಗಳು, ದೇವೇಗೌಡರ ಪ್ರಚಾರದಿಂದಾಗಿ ಗೆಲುವು ಸಾಧಿಸುತ್ತಿದ್ದ ದಿನಗಳಿದ್ದವು. ಅದರೆ ಕಳೆದ ಒಂದು ವರ್ಷದಲ್ಲಿ ನಡೆದ ಚುನಾವಣೆಯನ್ನು ಗಮನಿಸಿದರೆ ಒಕ್ಕಲಿಗರು ಜೆಡಿಎಸ್ ಪಕ್ಷದಿಂದ ಹೊರ ಬಂದಿರೋದು ಸ್ಪಷ್ಟ. ಮೊನ್ನೆ ಮೊನ್ನೆ ನಡೆದ ಉಪಚುನಾವಣೆಯಲ್ಲಿ, ಹೆಬ್ಬಾಳ ಕ್ಷೇತ್ರದ ಒಕ್ಕಲಿಗರು ಸಂಖ್ಯಾಧಾರಿತವಾಗಿ ಎರಡನೇ ಸಂಖ್ಯೆಯಲ್ಲಿದ್ದರೂ ಜೆಡಿಎಸ್ ಅಭ್ಯರ್ಥಿ ಠೇವಣಿ ಕಳೆದುಕೊಳ್ಳಬೇಕಾಯ್ತು. ಹಾಗಾದ್ರೆ ಜೆಡಿಎಸ್ ಸಾಂಪ್ರದಾಯಿಕ ಮತದಾರರಾದ ಒಕ್ಕಲಿಗರು ಎತ್ತ ಹೋಗಿದ್ದಾರೆ ? ಒಕ್ಕಲಿಗರೇನಾದರೂ ಜಾತ್ಯಾತೀತ ಪಕ್ಷ ಎಂದು ಕರೆಸಿಕೊಳ್ಳುವ ಜೆಡಿಎಸ್ ಬಿಟ್ಟು ಮತ್ತೊಂದು ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೇಸ್ ಸೇರಿದರೇ ? ಅಥವಾ ಬಿಜೆಪಿ ಸೇರಿಕೊಂಡು ಸಂಘಪರಿವಾರದ ಸಂಘಟನೆಗಳ ಜೊತೆ ಹೋಗಿದ್ದಾರೆಯೇ ? ಎಂಬ ಬಗ್ಗೆ ರಾಜಕೀಯ ತಜ್ಞರು ಅಧ್ಯಯನ ನಡೆಸಲೇ ಇಲ್ಲ.

ಅಂದು ಇಂದಿರಾಗಾಂಧಿ ಪಕ್ಷದ ಜೊತೆ ಗುರುತಿಸಿಕೊಂಡ ಬಡವರು ಮತ್ತು ಹಿಂದುಳಿದ ವರ್ಗಗಳು ಇಂದು ಆರ್.ಎಸ್. ಎಸ್ ಕಾಲಾಳುಗಳಾಗಿ, ಅಲ್ಪಸಂಖ್ಯಾತರು ಮತ್ತು ಕೋಮು ಸೌಹಾರ್ದತೆಯ ಮೇಲೆ ದಾಳಿ ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕೋಮು ಗಲಭೆಗಳಲ್ಲಿ ಗುರುತಿಸಿಕೊಳ್ಳದ ಒಕ್ಕಲಿಗರು ಇದೀಗ, 'ಸ್ವಾಭಿಮಾನಿ ಒಕ್ಕಲಿಗರ ವೇದಿಕೆ' ಹೆಸರಿನಲ್ಲಿ ನೈತಿಕ ಪೊಲೀಸ್ ಗಿರಿ ಶುರುವಿಟ್ಟುಕೊಂಡಿದೆ. ಜಾತಿಗಳ ರಾಜಕೀಯ ಧೋರಣೆಗಳು ಅಥವ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿ ತಕ್ಷಣ ಪರಿಹಾರ ಕಂಡುಕೊಳ್ಳದೇ ಇದ್ದರೆ ಇಂತಹ ಇನ್ನಷ್ಟು ಅನಾಹುತಗಳನ್ನು ನಿರೀಕ್ಷಿಸಬಹುದು.

ಮತ್ತೊಂದೆಡೆ ಅಶಿತಾ ಮತ್ತು ಶಕೀಲ್ ಮದುವೆ ಹಿನ್ನೆಲೆಯಲ್ಲಿ ಗಮನಿಸಬೇಕಾದ ಎರಡು ಪ್ರಮುಖ ಅಂಶಗಳಲ್ಲಿ ಒಂದು ಒಕ್ಕಲಿಗ ಮನಸ್ಥಿತಿಯಲ್ಲಿ ಕಾಣಿಸುತ್ತಿರುವ ಈ ಸ್ಥಿತ್ಯಂತರ. ಇನ್ನೊಂದು, ಮೊದಲೇ ಹೇಳಿದಂತೆ- ಧರ್ಮದ ಚೌಕಟ್ಟಿಗೇ ತಲೆಬಾಗಿದ ಮದುವೆಯೊಂದರಲ್ಲಿ ಪ್ರಗತಿಪರರು ಕಾಣುತ್ತಿರುವ ಆದರ್ಶತೆಯ ಸೋಗಲಾಡಿತನ. ಎರಡೂ ಭವಿಷ್ಯಕ್ಕೆ ಮಾರಕ.