ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್‌ಐಟಿ ದೋಷಾರೋಪ ಪಟ್ಟಿಗೆ ಸಾಂದರ್ಭಿಕ ಸಾಕ್ಷಿಗಳೇ ಆಧಾರ
INSIDE STORY

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್‌ಐಟಿ ದೋಷಾರೋಪ ಪಟ್ಟಿಗೆ ಸಾಂದರ್ಭಿಕ ಸಾಕ್ಷಿಗಳೇ ಆಧಾರ

ಕೆಲವು ವಿಶೇಷತೆಗಳನ್ನು ಒಳಗೊಂಡ ಗೌರಿ ಲಂಕೇಶ್ ಹತ್ಯೆ ಪ್ರಕರಣದ ದೋಷಾರೋಪ ಪಟ್ಟಿಯ ಸಂಪೂರ್ಣ ಮಾಹಿತಿ ‘ಸಮಾಚಾರ’ಕ್ಕೆ ಲಭ್ಯವಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದ್ದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಸುಮಾರು 650 ಪುಟಗಳನ್ನು ಮೀರಿರುವ ಈ ದಾಖಲೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಾಂದರ್ಭಿಕ ಸಾಕ್ಷಿಗಳನ್ನೇ ಆಧಾರವಾಗಿಟ್ಟುಕೊಂಡು ಎಸ್‌ಐಟಿ ಆರೋಪಿಗಳನ್ನು ಅಪರಾಧಿಗಳು ಎಂದು ನ್ಯಾಯಾಲಯದ ಮುಂದೆ ನಿಲ್ಲಿಸುವ ಪ್ರಯತ್ನ ಮಾಡಿದೆ.

ಒಟ್ಟು 134 ಸಾಕ್ಷಿಗಳು (ಇದರಲ್ಲಿ 50ಕ್ಕೂ ಹೆಚ್ಚು ಪೊಲೀಸ್‌ ಇಲಾಖೆಯವರು), 224 ದಾಖಲೆಗಳನ್ನು ಒಳಗೊಂಡ ಮೊದಲ ಹಂತದ ದೋಷಾರೋಪ ಪಟ್ಟಿಯಲ್ಲಿ, ಇಬ್ಬರು ಶಂಕಿತರ ಬಗೆಗಿನ ಆರೋಪಗಳಿಗೆ ಪುರಾವೆಗಳನ್ನು ನೀಡಲಾಗಿದೆ.

ಕೆಲವು ವಿಶೇಷತೆಗಳನ್ನು ಒಳಗೊಂಡ ಗೌರಿ ಲಂಕೇಶ್ ಹತ್ಯೆ ಪ್ರಕರಣದ ದೋಷಾರೋಪ ಪಟ್ಟಿಯ ಸಂಪೂರ್ಣ ಮಾಹಿತಿ ‘ಸಮಾಚಾರ’ಕ್ಕೆ ಲಭ್ಯವಾಗಿದೆ.

ಇಷ್ಟು ದಿನಗಳ ತನಿಖೆ ನಂತರವೂ ಎಸ್‌ಐಟಿ ನ್ಯಾಯಾಲಯದ ಮುಂದೆ ಗೌರಿ ಹತ್ಯೆ ಎಸಗಿದವರು ಎಂದು ಆರೋಪಿಗಳನ್ನು ನಿಲ್ಲಿಸಲು ವಿಫಲವಾಗಿದೆ. ಆದರೆ ಹತ್ಯೆಗೆ ಸಹಕಾರ ನೀಡಿದ್ದರು ಎಂಬ ಆಧಾರದ ಮೇಲೆ ಇಬ್ಬರು ಆರೋಪಿಗಳ ಮೇಲೆ ದೋ‍ಷಾರೋಪ ಮಾಡಿದ್ದು, ಅದರಲ್ಲಿ ಕೆ. ಟಿ. ನವೀನ್ ಎಂಬಾತ ಬಂಧನದಲ್ಲಿ ಇರುವುದಾಗಿ ಹೇಳಿದೆ.

ಗೌರಿ ಲಂಕೇಶ್ ಹತ್ಯೆಗೆ ಗೌಪ್ಯ ಸಹಕಾರ ನೀಡಿದ ಆರೋಪ ಹೊತ್ತಿರುವ ನವೀನ್. 
ಗೌರಿ ಲಂಕೇಶ್ ಹತ್ಯೆಗೆ ಗೌಪ್ಯ ಸಹಕಾರ ನೀಡಿದ ಆರೋಪ ಹೊತ್ತಿರುವ ನವೀನ್. 

ಇನ್ನೊಬ್ಬ ಆರೋಪಿ ಪ್ರವೀಣ್ (ಈತ ಕೂಡ ಹತ್ಯೆಗೆ ಸಹಕಾರ ನೀಡಿದ್ದ ಆರೋಪ ಹೊತ್ತಿದ್ದಾನೆ) ತಲೆಮರೆಸಿಕೊಂಡಿದ್ದಾನೆ ಎಂದು ಚಾರ್ಜ್‌ ಶೀಟ್ ಹೇಳುತ್ತದೆ. ಸದ್ಯ ಲಭ್ಯ ಮಾಹಿತಿಗಳ ಪ್ರಕಾರ, ಚಿಂತಕ ಭಗವಾನ್ ಹತ್ಯೆ ಯತ್ನದ ಪ್ರಕರಣದಲ್ಲಿ ಪ್ರವೀಣ್ ಈಗಾಗಲೇ ಪೊಲೀಸರ ಬಂಧನದಲ್ಲಿದ್ದಾನೆ.

ಸಾಂದರ್ಭಿಕ ಸಾಕ್ಷಿಗಳೇ ಆಧಾರ:

ಒಟ್ಟು 224 ದಾಖಲೆಗಳ ಪಟ್ಟಿಯೊಂದಿಗೆ ಆರಂಭವಾಗುವ ಈ ದೋಷಾರೋಪ ಪಟ್ಟಿಯಲ್ಲಿ ಕಾಲಂ 7 ಎಂದು ಕಾನೂನು ಭಾಷೆಯಲ್ಲಿ ಕರೆಸಿಕೊಳ್ಳುವ, ದೋಷಾರೋಪಣೆಯ ಪ್ರಮುಖ ಘಟ್ಟಕ್ಕೆ ಹೆಚ್ಚು ಒತ್ತು ನೀಡಿದಂತೆ ಕಂಡು ಬರುವುದಿಲ್ಲ. ಬದಲಿಗೆ, ಆರೋಪಿಗಳಿಗೆ ಜಾಮೀನು ನೀಡದಂತೆ ತಡೆಯುವ ಉದ್ದೇಶವನ್ನು ಇಟ್ಟುಕೊಂಡು, ಲಭ್ಯ ಇರುವ ದಾಖಲೆಗಳನ್ನೇ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವ ಪ್ರಯತ್ನ ಎಸ್‌ಐಟಿಯಿಂದ ನಡೆದಿದೆ.

ಇನ್ನು, ಆರೋಪಿ ಕೆ. ಟಿ. ನವೀನ್ ಮೇಲೆ ನಡೆಸಿದ ಪಾಲಿಗ್ರಫಿ ಪರೀಕ್ಷೆ, ಸುಳ್ಳು ಪತ್ತೆ ಪರೀಕ್ಷೆ, ನಾರ್ಕೋ ಅನಾಲಿಸಿಸ್ ಹಾಗೂ ಬ್ರೈನ್ ಎಲೆಕ್ಟ್ರಿಕಲ್ ಆಸಿಲೇಶನ್ ಸಿಗ್ನೇಚರ್ ಪ್ರೊಫೈಲಿಂಗ್ (ಬಿಇಓಎಸ್‌) ಪರೀಕ್ಷೆಗಳನ್ನೇ ಮೂಲ ಆಧಾರವಾಗಿದೆ.

ಈ ರಾಸಾಯನಿಕ ಪರೀಕ್ಷೆಗಳನ್ನು ಆರೋಪಿಯ ಒಪ್ಪಿಗೆ ಮೇರೆಗೆ ನಡೆಸಲಾಗಿದೆ ಎಂಬುದನ್ನು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಅದೇ ವೇಳೆ, ‘ಆರೋಪಿ 1 ದ್ವಂದ್ವ ಹೇಳಿಕೆಗಳನ್ನು ನೀಡುತ್ತ ತನಿಖೆಗೆ ಸಹಕರಿಸದೆ ಇದ್ದು, ಮಂಪರು ಪರೀಕ್ಷೆಗೂ ಕೂಡ ಸಹಕರಿಸದೆ ನಿರಾಕರಿಸಿರುತ್ತಾನೆ’ ಎಂದು ದೋಷಾರೋಪ ಪಟ್ಟಿಯ ಕಾಲಂ 7ರಲ್ಲಿ ಹೇಳಲಾಗಿದೆ.

ಸೆಲ್ವಿ ವರ್ಸಸ್‌ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದಲ್ಲಿ ಆರೋಪಿಗಳಿಗೆ ಇಂತಹ ಪರೀಕ್ಷೆಗಳನ್ನು ನಡೆಸುವಾಗ ಯಾವ ಮಾನದಂಡಗಳನ್ನು ಅನುಸರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟ ಮಾರ್ಗಸೂಚಿಗಳಿರುವ ಆದೇಶ ನೀಡಿದೆ. ಆರೋಪಿಗಳಿಂದ ರಾಸಾಯನಿಕ ಪರೀಕ್ಷೆಗಳಿಗೆ ಬಲವಂತದ ಒಪ್ಪಿಗೆ ಪಡೆಯಲು ಇಲ್ಲಿ ಅವಕಾಶಗಳಿಲ್ಲ ಎಂಬುದನ್ನು ಗಮನಿಸಬೇಕಿದೆ.

ಇವುಗಳ ಜತೆಗೆ, ಆರೋಪಿ 1 (ನವೀನ್) ಅಕ್ರಮ ಮದ್ದುಗುಂಡುಗಳನ್ನು ಮಾರಾಟ ಮಾಡುವವನಾಗಿದ್ದು, ಈತನು ಯಾರಿಂದ ಮದ್ದುಗುಂಡುಗಳನ್ನು ಖರೀದಿಸಿದ್ದಾನೆ ಎಂಬುದನ್ನು ಎಸ್‌ಐಟಿ ಸಾಕ್ಷಿ ಸಮೇತ ನ್ಯಾಯಾಲಯ ಮುಂದಿಟ್ಟಿದೆ. ‘ಇತರೆಯವರನ್ನು’ ಬಳಸಿಕೊಂಡು ಗೌರಿ ಲಂಕೇಶ್ ಹತ್ಯೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿರುವ ಎಸ್‌ಐಟಿ, ಅದಕ್ಕಾಗಿ ಮೂರು ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಇದರ ಜತೆಗೆ, ಆತನ ಮೊಬೈಲ್‌ನಲ್ಲಿ ಗೌರಿ ಲಂಕೇಶ್ ಹತ್ಯೆ ಕುರಿತು ಸಂಭಾಷಣೆ ನಡೆಸಿರುವ ಮಾಹಿತಿ ತಾಂತ್ರಿಕ ಸಹಾಯದಿಂದ ಸಾಭೀತಾಗಿದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ತಿಳಿಸಿದೆ.

ಇವೆಲ್ಲವೂ ಸಾಂದರ್ಭಿಕ ಸಾಕ್ಷಿಗಳಾಗಿ ಕಾಣಿಸುತ್ತಿವೆ ಮತ್ತು ಎಸ್‌ಐಟಿ ದೋಷಾರೋಪ ಪಟ್ಟಿಯಲ್ಲಿ ಕೃತ್ಯಕ್ಕೆ ಸಹಕಾರ ನೀಡಿದ ಆರೋಪವನ್ನು ನವೀನ್ ಮೇಲೆ ಹೊರಿಸಲಾಗಿದೆ. ಐಪಿಸಿ ಸೆಕ್ಷನ್‌ 302, 114, 118, 120 (ಬಿ), 35ರ ಜತೆಗೆ ಅಕ್ರಮ ಶಶಸ್ತ್ರ ಕಾಯ್ದೆ ಅಡಿಯಲ್ಲೂ ಶಿಕ್ಷೆಗೆ ಒಳಪಡಿಸಲು ನ್ಯಾಯಾಲಯವನ್ನು ತನಿಖಾ ತಂಡ ಕೋರಿದೆ.

ಇಂತಹ ಕೆಲವು ಮಾಹಿತಿಗಳ ಜತೆಗೆ ಕೆಲವು ವಿಶೇಷ ಅಂಶಗಳನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣದ ದೋಷಾರೋಪ ಪಟ್ಟಿ ಒಳಗೊಂಡಿದೆ. ಈ ವಿವರಗಳನ್ನು ‘ಸಮಾಚಾರ’ ಒಂದೊಂದಾಗಿ ನಿಮ್ಮ ಮುಂದಿಡಲಿದೆ.