- ಸಾಂದರ್ಭಿಕ ಚಿತ್ರ
INSIDE STORY

‘ದೊಡ್ಡಗೌಡರ ದೈವಭಕ್ತಿ’: ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ಸಂಖ್ಯಾಶಾಸ್ತ್ರ!

ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ನ ವರಿಷ್ಠರ ಕುಟುಂಬದೊಳಗೆ ನಡೆಯುವ ದೈವ ನಂಬಿಕೆಯ ಆಚರಣೆಗಳು ಹಾಗೂ ನಂಬಿಕೆಗಳು ಯಾವ ಸನಾತನವಾದಿಯ ಆಚರಣೆಗಳಿಗಿಂತ ಕಡಿಮೆ ಏನಿಲ್ಲ.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ ಬೆಂಬಲವನ್ನು ಒಪ್ಪಿಕೊಂಡಿರುವುದನ್ನು ಖಚಿತಪಡಿಸಲು ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ‘ಶೃಂಗೇರಿ ಗುರು’ಗಳ ಪ್ರಸ್ತಾಪವಿತ್ತು. ಕುಮಾರಸ್ವಾಮಿ ಜತೆಗೆ ಪತ್ರಿಕಾಗೋಷ್ಠಿಯಲ್ಲಿದ್ದ ಎಚ್‌.ಡಿ. ರೇವಣ್ಣ ಕುತ್ತಿಗೆಯಲ್ಲಿ ಏಲಕ್ಕಿಸರದ ಜತೆಗೆ ದಪ್ಪದಾರದ ಎಳೆಗಳು ಇಣುಕುತ್ತಿದ್ದವು. ಇತ್ತ ಶಾಂಗ್ರಿಲಾ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯುತ್ತಿದ್ದರೆ ಅತ್ತ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಎಚ್‌.ಡಿ. ದೇವೇಗೌಡರು ಹೋಮ ನಡೆಸುತ್ತಿದ್ದರು.

ಅಧಿಕಾರ ಎಂಬುದು ತಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿರುವ ಹೊತ್ತಿನಲ್ಲಿ ದೇವೇಗೌಡರ ಕುಟುಂಬದ ದೈವಭಕ್ತಿ ದೊಡ್ಡಮಟ್ಟದಲ್ಲಿ ಹೊರಜಗತ್ತಿಗೆ ಕಾಣುತ್ತಿದೆ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಗೆ ದೇವೇಗೌಡರು ಬರುವ ನಿರೀಕ್ಷೆ ಇತ್ತು. ಆದರೆ, ದೇವೇಗೌಡರು ಹೋಮ ಕಾರ್ಯದಲ್ಲಿ ನಿರತರಾಗಿದ್ದರು.

ಹಾಗೇ ನೋಡಿದರೆ ‘ಜಾತ್ಯತೀತ’ ಪಕ್ಷದ ವರಿಷ್ಠರಾದ ದೇವೇಗೌಡರ ದೈವನಂಬಿಕೆಯೇನು ಈಗ ಹೊರಕ್ಕೆ ಕಾಣುತ್ತಿರುವುದಲ್ಲ. ಜೆಡಿಎಸ್‌ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಿಸುವ ಮೊದಲು ಅವನ್ನು ಶೃಂಗೇರಿ ಮಠದ ಸ್ವಾಮೀಜಿಯ ಪಾದದ ಕೆಳಗಿಟ್ಟು ಪೂಜೆ ಮಾಡಿಸಿಕೊಂಡು ಬಂದವರು ದೇವೇಗೌಡರು. ಜಾತ್ಯತೀತ ಪಕ್ಷವನ್ನು ತಮ್ಮ ಕುಟುಂಬದ ಹಿಡಿತದಲ್ಲೇ ಇಟ್ಟುಕೊಂಡಿರುವ ದೇವೇಗೌಡರ ಕುಡಿಗಳಲ್ಲೂ ದೈವನಂಬಿಕೆ ಎದ್ದು ಕಾಣುವ ಮಟ್ಟಕ್ಕೆ ಪ್ರದರ್ಶನಗೊಳ್ಳುತ್ತಿದೆ.

ಶೃಂಗೇರಿಯಲ್ಲಿ ದೇವೇಗೌಡ ಕುಟುಂಬದ ಹೋಮ
ಶೃಂಗೇರಿಯಲ್ಲಿ ದೇವೇಗೌಡ ಕುಟುಂಬದ ಹೋಮ

ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊದಲು ಮಾತನಾಡಿದ ಎಚ್‌.ಡಿ. ರೇವಣ್ಣ, “ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ 11.30ಕ್ಕೆ ಸರಿಯಾಗಿ ಆಯ್ಕೆ ಮಾಡಿದ್ದೇವೆ” ಎಂದರು. ರೇವಣ್ಣ 11.30ಕ್ಕೆ ಸರಿಯಾಗಿ ಎನ್ನುತ್ತಿದ್ದಂತೆ ಕುಮಾರಸ್ವಾಮಿ ಮತ್ತು ಜಿ.ಟಿ. ದೇವೇಗೌಡ ಇಬ್ಬರೂ ನಕ್ಕರು.

“11.30ಕ್ಕೇ ಯಾಕೆ” ಎಂಬ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, “ಇದನ್ನೆಲ್ಲಾ ಟೈಮ್‌ ನೋಡಿ ಮಾಡಬೇಕಲ್ಲ. ಅದಕ್ಕೇ ಸರಿಯಾಗಿ 11.30ಕ್ಕೆ ಆಯ್ಕೆ ಮಾಡಿದ್ದು” ಎಂದು ಮೈಕ್‌ ಅನ್ನು ಜಿ.ಟಿ.ದೇವೇಗೌಡರ ಕೈಗಿಟ್ಟರು. ರೇವಣ್ಣ 11.30ರ ಬಗ್ಗೆ ಮಾತನಾಡುತ್ತಿದ್ದಾಗ ಶಾಸಕರೊಬ್ಬರು, “ಅದೆಲ್ಲಾ ಗೊತ್ತಿರೋದೆ ಅಲ್ವಾ” ಎಂದರು. ರೇವಣ್ಣ 11.30ರ ವಿಷಯದೊಂದಿಗೇ ಮಾತು ಮುಗಿಸಿದಾಗ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ ಶಾಸಕರೆಲ್ಲರೂ ನಕ್ಕರು.

‘ದೊಡ್ಡಗೌಡರ ದೈವಭಕ್ತಿ’: ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ಸಂಖ್ಯಾಶಾಸ್ತ್ರ!

ರೇವಣ್ಣ ಮಾತಿಗೆ ಅದೆಲ್ಲಾ ಗೊತ್ತಿರೇದೇ ಅಲ್ವಾ ಎಂಬ ಮಾತು ರೇವಣ್ಣ ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ ಎಂಬುದು ಜೆಡಿಎಸ್‌ ವಲಯದಲ್ಲೆಲ್ಲಾ ಗೊತ್ತು ಎಂಬುದನ್ನು ದೃಢಪಡಿಸುವಂತಿತ್ತು. ರೇವಣ್ಣ ಮತ್ತು ಕುಮಾರಸ್ವಾಮಿ ಬಲಗೈಯಲ್ಲಿ ಕಾಣುತ್ತಿದ್ದ ಮಂತ್ರದ ದಾರಗಳು, ಜಿ.ಟಿ. ದೇವೇಗೌರ ಹಣೆಯಲ್ಲಿ ಹೊಳೆಯುತ್ತಿದ್ದ ಕುಂಕುಮ, ರೇವಣ್ಣ ಹಣೆಯಲ್ಲಿದ್ದ ಭಸ್ಮ ಇವೆಲ್ಲವೂ ಜೆಡಿಎಸ್ ಪಾಳಯದ ದೈವನಂಬಿಕೆಯನ್ನು ಸಾಬೀತು ಪಡಿಸುತ್ತಿದ್ದವು.

ಪತ್ರಿಕಾಗೋಷ್ಠಿಯ ನಡುವೆ ಕುಮಾರಸ್ವಾಮಿ, “ನಮಗೆ ಅಧಿಕಾರ ಪಡೆಯುವ ಅವಕಾಶ ಸಿಕ್ಕಿರುವುದಕ್ಕೆ ನಾನು ಮತ್ತು ನಮ್ಮ ಕುಟುಂಬದವರು ನಂಬಿರುವ ಗುರುಗಳ ಆಶೀರ್ವಾದ, ಶೃಂಗೇರಿ ಮಠದ ಗುರುಗಳ ಆಶೀರ್ವಾದ, ಶೃಂಗೇರಿ ಶಾರದಾಂಬೆಯ ಆಶೀರ್ವಾದವೂ ಕಾರಣ” ಎಂದರು.

ದೇವೇಗೌಡರಿಂದ  ಶೃಂಗೇರಿ ಸ್ವಾಮೀಜಿ ಭೇಟಿ
ದೇವೇಗೌಡರಿಂದ ಶೃಂಗೇರಿ ಸ್ವಾಮೀಜಿ ಭೇಟಿ

ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ನ ವರಿಷ್ಠರ ಕುಟುಂಬದೊಳಗೆ ನಡೆಯುವ ದೈವ ನಂಬಿಕೆಯ ಆಚರಣೆಗಳು ಯಾವ ಸನಾತನವಾದಿಯ ಆಚರಣೆಗಳಿಗಿಂತ ಕಡಿಮೆ ಏನಿಲ್ಲ. ಮಠದ ಸ್ವಾಮೀಜಿಗಳ ಕಾಲಿಗೆ ಬೀಳುವ, ದೇವಸ್ಥಾನ ಮತ್ತು ಮನೆಯಲ್ಲಿ ಪೂಜೆ, ಹವನ, ಹೋಮ ಮಾಡಿಸುವ ವಿಚಾರದಲ್ಲಿ ದೊಡ್ಡ ಗೌಡರ ಕುಟುಂಬ ಒಂದು ಹೆಜ್ಜೆ ಮುಂದೆಯೇ ಇದೆ ಎಂದರೆ ತಪ್ಪಲ್ಲ.