‘ದಿ ರೈಸ್‌ ಆಫ್‌ ನಲಪಾಡ್‌ ಡೈನಸ್ಟಿ’: ಮಜ್ಜಿಗೆ ವ್ಯಾಪಾರದಿಂದ ಕೃಷ್ಣಾ ಮೇಲ್ದಂಡೆವರೆಗೆ, ಹೋಟೆಲ್‌ನಿಂದ ರಾಜಕೀಯದೆಡೆಗೆ!
INSIDE STORY

‘ದಿ ರೈಸ್‌ ಆಫ್‌ ನಲಪಾಡ್‌ ಡೈನಸ್ಟಿ’: ಮಜ್ಜಿಗೆ ವ್ಯಾಪಾರದಿಂದ ಕೃಷ್ಣಾ ಮೇಲ್ದಂಡೆವರೆಗೆ, ಹೋಟೆಲ್‌ನಿಂದ ರಾಜಕೀಯದೆಡೆಗೆ!

ಬಡತನದಲ್ಲಿದ್ದ ಹ್ಯಾರಿಸ್‌ ಪೂರ್ವಜರು ಆರ್ಥಿಕವಾಗಿ ಸದೃಢರಾಗಿದ್ದು ಹೇಗೆ ? ಉತ್ತರ ಹುಡುಕುತ್ತ ಹೊರಟಾಗ ಕಂಡಿದ್ದು ಮಜ್ಜಿಗೆ ವ್ಯಾಪಾರ, ಸ್ಕ್ರ್ಯಾಪ್‌ ವ್ಯವಹಾರ, ಕೃಷ್ಣಾ ಮೇಲ್ದಂಡೆ ಯೋಜನೆ ಕೊನೆಗೆ ಹ್ಯಾರಿಸ್‌ಗೆ ದೊರೆತ ರಾಜಕೀಯ ಅಧಿಕಾರ 

ಇವತ್ತಿಗೆ ಕರ್ನಾಟಕದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ನಲಪಾಡ್‌ ಹ್ಯಾರಿಸ್‌ ಕುಟುಂಬ 1960ರ ಆರಂಭದಲ್ಲಿ ಹೀಗಿರಲಿಲ್ಲ.

ಕಡುಬಡತನದಲ್ಲಿದ್ದ ಹ್ಯಾರಿಸ್‌ ಪೂರ್ವಜರು ಆರ್ಥಿಕವಾಗಿ ಸದೃಢರಾಗಿದ್ದು ಹೇಗೆ ?ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟ 'ಸಮಾಚಾರ'ಕ್ಕೆ ಸಿಹಿ ಮಜ್ಜಿಗೆ ವ್ಯಾಪಾರ, ಸ್ಕ್ರ್ಯಾಪ್‌ ವ್ಯವಹಾರ, ಕೃಷ್ಣಾ ಮೇಲ್ದಂಡೆ ಯೋಜನೆಯ ಟೆಂಡರ್‌, ಬೆಂಗಳೂರು ಇಂಟರ್‌ನ್ಯಾಷನಲ್‌ ಹೋಟೆಲ್‌, ಕೊನೆಗೆ ಎನ್‌.ಎ. ಹ್ಯಾರಿಸ್‌ಗೆ ದೊರೆತ ರಾಜಕೀಯ ಅಧಿಕಾರ ಹೀಗೆ ನಾನಾ ಮಜಲುಗಳ ಪರಿಚಯವಾಯಿತು. ಹೈಟೆಕ್ ವೇಶ್ಯಾವಾಟಿಕೆಯೂ ಆರ್ಥಿಕತೆಯ ಉನ್ನತೀಕರಣಕ್ಕೆ ಕಾರಣ ಎಂಬ ಮಾತುಗಳು ಹ್ಯಾರಿಸ್‌ ಕುಟುಂಬದ ಏಳುಬೀಳುಗಳನ್ನು ಹತ್ತಿರದಿಂದ ಕಂಡವರು ಹೇಳುವ ಮಾತು. ಒಟ್ಟಾರೆ ಇದು 'ದಿ ರೈಸ್‌ ಆಫ್‌ ನಲಪಾಡ್‌ ಹ್ಯಾರಿಸ್‌ ಡೈನಸ್ಟಿ'ಯ ಕತೆ.

ಎನ್‌. ಎ. ಹ್ಯಾರಿಸ್‌, ಶಾಂತಿನಗರದ ಕಾಂಗ್ರೆಸ್‌ ಶಾಸಕ. ವಿವಾದಗಳಿಂದ ಆದಷ್ಟು ದೂರ ಉಳಿಯುವ ಪ್ರಯತ್ನವನ್ನು ಹ್ಯಾರಿಸ್‌ ಮಾಡುತ್ತಲೇ ಬಂದರೂ, ಪುತ್ರರಿಬ್ಬರ ಕಾರಣದಿಂದ ಆಗಾಗ ಸುದ್ದಿ ಕೇಂದ್ರದಲ್ಲಿ ಇರುತ್ತಾರೆ. ಈಗ ಆಗಿರುವುದೂ ಅದೇ. ಪುತ್ರ ನಲಪಾಡ್‌ ಹ್ಯಾರಿಸ್‌ ನಡೆಸಿರುವ ಹಲ್ಲೆಯಿಂದ ಹ್ಯಾರಿಸ್‌ ಸುತ್ತಲೂ ಈಗ ವಿವಾದ ಸುತ್ತಿಕೊಂಡಿದೆ. ವಿಧಾನಸಭೆಯಲ್ಲಿ ಮಂಗಳವಾರ  ಹ್ಯಾರಿಸ್‌ ಇಂಥಾ ಮಕ್ಕಳಿಂದ ಹೆತ್ತವರು ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ರೀತಿ ಮಾತನಾಡಿದ್ದಾರೆ. ಒಂದು ರೀತಿಯಲ್ಲಿ ಸಹಾನೂಭೂತಿ ಪಡೆಯುವ ಪ್ರಯತ್ನದಂತೆಯೂ ಇದು ಕಾಣಿಸುತ್ತಿದೆ.

ಆದರೆ ಪುತ್ರ ಮಾಡುತ್ತಿದ್ದ ತಪ್ಪುಗಳು ಹ್ಯಾರಿಸ್‌ಗೆ ತಿಳಿದೇ ಇರಲಿಲ್ಲವೇ? ಈ ಹಿಂದೆ ಬೌರಿಂಗ್‌ ಕ್ಲಬ್‌ನಲ್ಲಿಯೂ ಇಂಥದ್ದೇ ಒಂದು ಘಟನೆ ನಡೆದಿತ್ತು. ನಲಪಾಡ್‌ ಮೊಹಮ್ಮದ್‌ ಹ್ಯಾರಿಸ್‌ ಆಗಲೂ ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದ. ರಾಜಕೀಯ ಪ್ರಭಾವ ಪ್ರಯೋಗಿಸಿದ್ದ ಹ್ಯಾರಿಸ್‌, ಪ್ರಕರಣವನ್ನು ಮುಚ್ಚುಹಾಕಿದ್ದರು ಎನ್ನುತ್ತವೆ ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು. ಇಂತಹ ಒಂದೊಂದು ಪ್ರಕರಣಗಳನ್ನು ಪಕ್ಕಕ್ಕಿಟ್ಟು, ಹ್ಯಾರಿಸ್‌ ಕುಟುಂಬ ಶ್ರೀಮಂತ ಕುಟುಂಬವಾಗಿ, ಪ್ರಭಾವಿ ಕುಟುಂಬವಾಗಿ ಬೆಳೆದುಬಂದ ಬಗೆಯಲ್ಲಿ ಇಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಬದುಕಿಗಾಗಿ ವಲಸೆ ಬಂದ ಕುಟುಂಬ:

ಅದು 1960ರ ಆರಂಭದ ದಿನಗಳು. ಹೊಟ್ಟೆಪಾಡಿಗಾಗಿ ಕೇರಳದ ಕಾಸರಗೋಡಿನಿಂದ, ಎನ್‌. ಎ. ಹ್ಯಾರಿಸ್‌ ತಂದೆ ಎನ್‌. ಎ. ಮೊಹಮ್ಮದ್‌ ಕುಟುಂಬ ಸಮೇತರಾಗಿ ಕರ್ನಾಟಕದ ಭದ್ರಾವತಿಗೆ ಬಂದಿದ್ದರು. ಆಗಿನ್ನೂ ಎನ್‌.ಎ. ಹ್ಯಾರಿಸ್‌ ಜನಿಸಿರಲಿಲ್ಲ. ಊರು ಬಿಟ್ಟು ಬಂದ ಎನ್‌.ಎ. ಮೊಹಮ್ಮದ್‌ ನೆಲೆ ನಿಲ್ಲಲು ಪರದಾಡುತ್ತಿದ್ದರು. ಯಾವುದೇ ಉದ್ಯೋಗ ಅಥವಾ ವ್ಯಾಪಾರವಿರಲಿಲ್ಲ. ಆದರೆ ಕ್ರಮೇಣ, ಸ್ಕ್ರ್ಯಾಪ್‌ ವಸ್ತುಗಳ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. "ಹಾಗೆ ಮೊಹಮ್ಮದ್‌ ಭದ್ರಾವತಿಯ ಸ್ಕ್ರ್ಯಾಪ್‌ ಉದ್ಯಮದ ಮಾಫಿಯಾದ ಪಾಲುದಾರರಾದರು. ಅಲ್ಲಿನ ಮಾಫಿಯಾ, ಗೂಂಡಾಗಳು ಮತ್ತು ಹಫ್ತಾ ವಸೂಲಿಗಳೂ ಮೊಹಮ್ಮದ್‌ರಿಗೆ ಅರ್ಥವಾಗಿತ್ತು. ಸಣ್ಣಪುಟ್ಟ ಗಲಾಟೆಗಳು, ಹೊಡೆದಾಟಗಳಲ್ಲಿ ಇವರೂ ಸೇರಿಕೊಂಡಿದ್ದರು," ಎನ್ನುತ್ತಾರೆ ಮೊಹಮ್ಮದ್‌ ಅವರನ್ನು ಬಲ್ಲ ಶಾಂತಿನಗರದ ನಿವಾಸಿಯೊಬ್ಬರು.

ಆದರೆ ಭದ್ರಾವತಿಯ ದುಡಿಮೆ ಮೊಹಮ್ಮದ್‌ಗೆ ಸಾಕು ಎನಿಸಿತ್ತು. ದೊಡ್ಡಮಟ್ಟದ ಯೋಜನೆಗೆ ಕೈಹಾಕಬೇಕು ಎಂಬ ನಿರ್ಧಾರಕ್ಕೆ ಮೊಹಮ್ಮದ್‌ ಬಂದಿರಬಹುದು. ಅದಕ್ಕಾಗಿಯೇ ಅವರು ಭದ್ರಾವತಿಯನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದರು.ಭದ್ರಾವತಿಗೆ ಗುಡ್‌ ಬೈ ಹೇಳಿದ ಮೊಹಮ್ಮದ್‌ ಬೆಂಗಳೂರಿನ ವಿಜಯನಗರಕ್ಕೆ ಬಂದರು. ಕುಟುಂಬ ನಿರ್ವಹಣೆಗಾಗಿ ಬೆಂಗಳೂರಿನ ವಸಂತನಗರ ಬಳಿಯ ಕಂಟೋನ್‌ಮೆಂಟ್‌ ರೈಲು ನಿಲ್ದಾಣದಲ್ಲಿ ಸಿಹಿ ಮಜ್ಜಿಗೆ ವ್ಯಾಪಾರವನ್ನು ಆರಂಭಿಸಿದರು. ಆ ಸಮಯದಲ್ಲಿ ಚಲ್ಲಂ ಎಂಬ ವ್ಯಕ್ತಿಯೊಬ್ಬರು ಮೊಹಮ್ಮದ್‌ ಅವರ ನಿಕಟವರ್ತಿಗಳಾಗಿದ್ದರು. ಈಗ ಚಲ್ಲಂ ನಿಧನರಾಗಿದ್ದಾರೆ. ಆದರೆ ಸಾಯುವ ಕೊನೆ ಘಳಿಗೆವರೆಗೂ ಅವರು ಎನ್‌. ಎ. ಹ್ಯಾರಿಸ್‌ ಬಗ್ಗೆ ಸಿಟ್ಟು ಹೊಂದಿದ್ದರು ಎನ್ನುತ್ತಾರೆ, ಚಲ್ಲಂರನ್ನು ಬಲ್ಲವರು.

"ಮಜ್ಜಿಗೆ ಮಾರುತ್ತಿದ್ದವರೆಲ್ಲಾ ಇಂದು ರಾಜಕೀಯದಲ್ಲಿ ಪ್ರಭಾವಿಗಳಾಗಿದ್ದಾರೆ. ಅವರ ಜತೆಗಿದ್ದ ತಪ್ಪಿಗೆ ನಾನು ಹೀಗೇ ಉಳಿದಿದ್ದೇನೆ," ಎಂಬುದಾಗಿ ಚಲ್ಲಂ ಹೇಳುತ್ತಿದ್ದರು ಎನ್ನುತ್ತಾರೆ ಶಾಂತಿನಗರದ ರಾಜಕೀಯ ಮುಖಂಡರೊಬ್ಬರು.

ಕೃಷ್ಣಾ ಮೇಲ್ದಂಡೆಯ ಫಲ:

ಕಂಟೋನ್‌ಮೆಂಟ್‌ನಲ್ಲಿ ಮಜ್ಜಿಗೆ ಮಾರಾಟ ಒಂದು ಕಡೆಗಾದರೆ, ದೊಡ್ಡ ಕೆಲಸಕ್ಕೆ ಕೈ ಹಾಕಬೇಕೆಂಬ ಬಯಕೆ ಇನ್ನೊಂದು ಕಡೆ. ಮಜ್ಜಿಗೆ ವ್ಯಾಪಾರದಿಂದ ಕುಟುಂಬ ನಿರ್ವಹಣೆ ಸಾಧ್ಯವಿತ್ತೇ ವಿನಃ ಮಹಾತ್ವಾಕಾಂಕ್ಷಿ ಬದುಕಿನ ಕನಸನ್ನು ತೃಪ್ತಿ ಪಡಿಸಲು ಸಾಧ್ಯವಿರಲಿಲ್ಲ. ಅದೇ ವೇಳೆಗೆಲ್ಲಾ ಅಂದರೆ 1964ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕರಡು ಸಿದ್ಧವಾಗಿತ್ತು. ಅಂದಿನ ಪ್ರಧಾನ ಮಂತ್ರಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗೆ ಶಂಕುಸ್ಥಾಪನೆಯನ್ನೂ ಮಾಡಿದ್ದರು. ಆಗ ಎನ್‌. ಎ. ಮೊಹಮ್ಮದ್‌ರಲ್ಲಿದ್ದ ಉದ್ಯಮಿಯೊಬ್ಬ ಜಾಗೃತಗೊಂಡಿದ್ದ. ಕೃಷ್ಣಾ ಮೇಲ್ದಂಡೆ ಯೋಜನೆಯ ಬಹುತೇಕ ಉಪ ಒಪ್ಪಂದಗಳನ್ನು ಮತ್ತು ಕೆಲ ನೇರ ಒಪ್ಪಂದಗಳನ್ನು ಮೊಹಮ್ಮದ್‌ ಪಡೆದಿದ್ದರು.

ಟೆಂಡರ್‌ ಪಡೆದದ್ದೇನೋ ನಿಜ, ಆದರೆ ಅದನ್ನು ಪಡೆದ ರೀತಿ ಕಾನೂನಾತ್ಮಕವಾಗಿರಲಿಲ್ಲ ಎನ್ನುತ್ತಾರೆ ಮೊಹಮ್ಮದ್‌ರನ್ನು ಹತ್ತಿರದಿಂದ ಕಂಡವರೊಬ್ಬರು.ಕೃಷ್ಣಾ ಮೇಲ್ದಂಡೆ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಆಗಿದ್ದವರ ಹೆಸರು ಅಶೋಕ್‌. 60ರ ದಶಕದಲ್ಲಿ ಮೊಹಮ್ಮದ್‌ರನ್ನು ಹತ್ತಿರದಿಂದ ನೋಡಿದ್ದ ವ್ಯಕ್ತಿಯೊಬ್ಬರು ಹೇಳುವ ಪ್ರಕಾರ, ಇದೇ ಅಶೋಕ್ ಸೀನಿಯರ್‌ ಹ್ಯಾರೀಸ್‌ಗೆ 'ಭ್ಯಾಗ್ಯದ ಬಾಗಿಲು' ತೆರೆದವರು.

"ಒಂದೆಡೆ ಸ್ಕ್ರ್ಯಾಪ್‌ ಉದ್ಯಮ, ಮಜ್ಜಿಗೆ ವ್ಯಾಪಾರ ನಡೆಯುತ್ತಿತ್ತು. ಆಗ ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ತಿಳಿಯುತ್ತಿದ್ದಂತೆ ಆಕಾಶಕ್ಕೆ ಏಣಿ ಹಾಕಲು ಮೊಹಮ್ಮದ್‌ ಸಿದ್ಧರಾದರು. ಅಶೋಕ್‌ಗೆ ಅವರಿಗೆ ಲಂಚದ ಆಮಿಷವೊಡ್ಡಿದರು. ಅಷ್ಟೆ ಅಲ್ಲ ಹೆಂಡ, ಹಣ, ಹುಡುಗಿ ಎಲ್ಲವೂ ಸೇರಿ ದೊಡ್ಡ ಯೋಜನೆ ಮೊಹಮ್ಮದ್‌ ಕೈಸೇರಿತ್ತು. ಯೋಜನೆಯ ಉಪ ಗುತ್ತಿಗೆಗಳಿಂದ ಅವರ ಬದುಕೇ ಬದಲಾಯಿತು. ಅವತ್ತಿಗೆ ನೂರು, ಸಾವಿರಗಳಲ್ಲಿದ್ದ ಮೊಹಮ್ಮದ್‌ ಸಾಮ್ರಾಜ್ಯ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಟೆಂಡರ್‌ಗಳನ್ನು ಪಡೆದ ಕೆಲವೇ ವರ್ಷಗಳಲ್ಲಿ ಲಕ್ಷ, ಕೋಟಿಯಲ್ಲಿತ್ತು.

ಅದಾದ ನಂತರ ಅವರು ಆರಂಭಿಸಿದ್ದೇ ಬೆಂಗಳೂರು ಇಂಟರ್‌ನ್ಯಾಷನಲ್‌ ಹೋಟೆಲ್‌. ಬೆಂಗಳೂರಿನ ಹೃದಯಭಾಗವಾದ ಮಾಧವ ನಗರ (ಶಿವಾನಂದ ಸರ್ಕಲ್‌)ದಲ್ಲಿ ಹೋಟೆಲ್‌ ಕಟ್ಟಿದರು. ಅದರ ಹಿಂದೆಯೇ ನಲಪಾಡ್‌ ಕನ್ಸ್ಟ್ರಕ್ಷನ್‌, ನಲಪಾಡ್‌ ಹೋಟೆಲ್‌ಗಳು ಕರ್ನಾಟಕದ ಹಲವು ಭಾಗಗಳಲ್ಲಿ ಆರಂಭವಾದವು," ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಸ್ಥಳೀಯರೊಬ್ಬರು.


       ಬೆಂಗಳೂರಿನ ಮಾಧವನಗರದಲ್ಲಿರುವ ಬೆಂಗಳೂರು ಇಂಟರ್‌ನ್ಯಾಷನಲ್‌ ಹೋಟೆಲ್‌ನ ಸಾಂದರ್ಭಿಕ ಚಿತ್ರ
ಬೆಂಗಳೂರಿನ ಮಾಧವನಗರದಲ್ಲಿರುವ ಬೆಂಗಳೂರು ಇಂಟರ್‌ನ್ಯಾಷನಲ್‌ ಹೋಟೆಲ್‌ನ ಸಾಂದರ್ಭಿಕ ಚಿತ್ರ

ಟೆಂಡರ್‌ ಪಡೆಯುವ ಸಲುವಾಗಿ ಹುಡುಗಿಯರನ್ನು ಮೊಹಮ್ಮದ್‌ ಬಳಸಿದರೋ ಇಲ್ಲವೋ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ನಿರ್ಮಾಣ ಕಾರ್ಯದಲ್ಲಿ ಅನುಭವವೇ ಇಲ್ಲದಿದ್ದರೂ ನಲಪಾಡ್‌ ಕನ್ಸ್ಟ್ರಕ್ಷನ್‌ ದೊಡ್ಡ ಯೋಜನೆಯಲ್ಲಿ ಸಿಂಹ ಪಾಲು ಪಡೆದುಕೊಂಡಿದ್ದಂತೂ ಇತಿಹಾಸ. ಅದಕ್ಕೆ ಸಾಕ್ಷಿಗಳು ಸಿಗುತ್ತವೆ.

ಅಧಿಕಾರದ ಕೇಂದ್ರಕ್ಕೆ:

ಹೀಗೆ, ಆರಂಭವಾದ ನಲಪಾಡ್‌ ಸಮೂಹ ಸಂಸ್ಥೆಗಳು ಇಂದಿಗೆ 100 ಕೋಟಿ ರೂಪಾಯಿಯ ವ್ಯವಹಾರವನ್ನು ಅಧಿಕೃತವಾಗಿ ದಾಟಿದೆ. 2013ರ ವಿಧಾನಸಭೆ ಚುನಾವಣೆಯ ವೇಳೆ ಎನ್‌. ಎ. ಹ್ಯಾರಿಸ್‌ ಘೋಷಿಸಿದ ಆಸ್ತಿಯೇ ಬರೋಬ್ಬರಿ 133 ಕೋಟಿ ರೂ. ಅದು ಈಗ 200 ಕೋಟಿ ರೂಪಾಯಿಗಳನ್ನು ದಾಟಿರುವ ಅನುಮಾನಗಳಿವೆ.ಅವತ್ತಿನ ಕಾಲಕ್ಕೇ ಎನ್‌. ಎ. ಮೊಹಮ್ಮದ್‌ ರಾಜಕೀಯದಲ್ಲಿ ನೆಲೆ ನಿಲ್ಲುವ ಪ್ರಯತ್ನ ಮಾಡಿದರಾದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.

ಹೋಟೆಲ್‌, ಕಟ್ಟಡ ನಿರ್ಮಾಣ, ಸರಕಾರಿ ಕಾಮಗಾರಿಗಳ ಜತೆಗೆ ಹೈಪ್ರೊಫೈಲ್‌ ಮಾಂಸದ ದಂಧೆಯೂ ಉದ್ಯಮದ ಭಾಗವಾಗಿತ್ತು ಎಂಬ ಆರೋಪಗಳನ್ನು ಅವರು ಹೊತ್ತುಕೊಂಡಿದ್ದರು. ಉದ್ಯಮಿಗಳಿಗೆ, ರಾಜಕಾರಣಿಗಳಿಗೆ, ಮಾಫಿಯಾ ದೊರೆಗಳಿಗೆ ಮತ್ತು ಸಿನೆಮಾ ಮಂದಿಗೆ ಸೇವೆಗಳನ್ನು ಒದಗಿಸುತ್ತಿದ್ದರು ಎಂಬ ಗಂಭೀರ ಆರೋಪ ಶಾಂತಿನಗರ ಕ್ಷೇತ್ರದಲ್ಲಿ ಇವತ್ತಿಗೂ ಕೇಳಿ ಬರುತ್ತದೆ. ಮಗ ತಂದೆಯ ಹಾದಿಯಲ್ಲಿ ರಾಜಕೀಯಕ್ಕೆ ಬಂದು ಅಧಿಕಾರಕ್ಕೇರಿದರೂ, 'ಮತ್ತದೇ ಮಾಂಸ ಮಾರಾಟದ ಕಳಂಕ'ವನ್ನು ಹೊತ್ತುಕೊಂಡೇ ಸಾಗುತ್ತಿದ್ದಾರೆ.

ಶಾಂತಿನಗರದ ಕ್ಷೇತ್ರದ ಎನ್‌. ಎ. ಹ್ಯಾರಿಸ್‌ ಪ್ರತಿಸ್ಪರ್ದಿ ಕೆ. ವಾಸುದೇವ ಮೂರ್ತಿ ಹೇಳುವ ಪ್ರಕಾರ, ಸುಮಾರು ಆರೇಳು ವರ್ಷಗಳ ಹಿಂದೆ ವೇಶ್ಯಾವಾಟಿಕೆಯ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದರು. "ಆದರೆ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿರಲಿಲ್ಲ. ಅದರ ಹಿಂದೆ ರಾಜಕೀಯ ಪ್ರಭಾವವಿರಬಹುದು. ಕೆಲ ಪತ್ರಿಕೆಗಳು ಕಾಂಗ್ರೆಸ್‌ ಶಾಸಕರೊಬ್ಬರು ನಡೆಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ಎಂದಷ್ಟೇ ಸುದ್ದಿ ಪ್ರಕಟವಾಗಿತ್ತು," ಎನ್ನುತ್ತಾರೆ.

‘ದಿ ರೈಸ್‌ ಆಫ್‌ ನಲಪಾಡ್‌ ಡೈನಸ್ಟಿ’: ಮಜ್ಜಿಗೆ ವ್ಯಾಪಾರದಿಂದ ಕೃಷ್ಣಾ ಮೇಲ್ದಂಡೆವರೆಗೆ, ಹೋಟೆಲ್‌ನಿಂದ ರಾಜಕೀಯದೆಡೆಗೆ!

ಮುಂದುವರೆಯುವ ಅವರು, ಹ್ಯಾರಿಸ್‌ ಪುತ್ರ ನಲಪಾಡ್‌ ಗೂಂಡಾಗಿರಿ ಇದು ಮೊದಲೇನಲ್ಲ ಎನ್ನುತ್ತಾರೆ. "ಹ್ಯಾರಿಸ್‌ ಅವರ ಎರಡನೇ ಪುತ್ರನ ಕಾಟವನ್ನು ತಡೆಯಲಾಗದೇ ಕ್ಷೇತ್ರದ ಜನ ಬೇಸತ್ತಿದ್ದರು. ಅದಕ್ಕಾಗಿಯೇ ಅವರನ್ನು ದುಬೈಗೆ ಕಳಿಸಿದ್ದಾರೆ. ಕ್ಷೇತ್ರದ ಜನರಿಗೆ ಹ್ಯಾರಿಸ್‌ ಯಾವುದೇ ಕೆಲಸ ಮಾಡಿಲ್ಲ. ಚುನಾವಣೆ ವಾರವಿದೆ ಎಂದಾಗ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಈ ಬಾರಿ ಹ್ಯಾರಿಸ್‌ ಕುಟುಂಬದ ಕರಾಳ ಮುಖಗಳು ಹ್ಯಾರಿಸ್‌ ಪುತ್ರನ ಮುಖಾಂತರ ಅನಾವರಣವಾಗಿದೆ," ಎಂದರು.

ಶಾಂತಿನಗರ ವಿಧಾನ ಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಬರುವ ಹೊನ್ನಾರಪೇಟೆ ವಾರ್ಡ್‌ನ ಬಿಜೆಪಿ ಕಾರ್ಪೊರೇಟರ್‌ ಶಿವಕುಮಾರ್‌ ಹೇಳುವ ಪ್ರಕಾರ, ರಾಜ್ಯದ ಕೆಲವೇ ಕೋಟ್ಯಾಧಿಪತಿ ಶಾಸಕರಲ್ಲಿ ಒಬ್ಬರಾದ ಹ್ಯಾರಿಸ್‌ ಹಲವು ಕಾನೂನು ಬಾಹಿರ ಉದ್ಯಮದಲ್ಲಿ ತೊಡಗಿದ್ದಾರೆ. "ಇದುವರೆಗೂ ಅವರ ಬೇನಾಮಿ ಆಸ್ತಿಗಳ ವಿವರ ಸಿಕ್ಕಿಲ್ಲ. ಮತ್ತು ಅವರ ಮೇಲಿರುವ ವೇಶ್ಯಾವಾಟಿಕೆ ದಂಧೆ ಆರೋಪದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ ಜನ ಆ ರೀತಿ ಹೇಳುತ್ತಾರೆ," ಎಂದು ಆರೋಪಿಸುತ್ತಾರೆ.

ಒಂದೇ ಒಂದು ಹೈಪರ್ ಲಿಂಕ್:

ನಲಪಾಡ್ ಕುಟುಂಬ, ಅದರ ಪುರುಷ ಸದಸ್ಯರುಗಳ ಮೇಲೆ ತಳಮಟ್ಟದಲ್ಲಿ ಕೇಳಿ ಬರುತ್ತಿರುವ ಈ ವೇಶ್ಯಾವಾಟಿಕೆ ದಂಧೆಯ ಆರೋಪದ ಸುತ್ತ ಕೆದಕಿದರೆ, ಹೈಪ್ರೊಫೈಲ್‌ ಮಾಂಸದ ಅಡ್ಡೆಯೊಂದಕ್ಕೆ ಈ ಹಿಂದೆ ಹ್ಯಾರಿಸ್‌ ಹೆಸರು ಥಳುಕು ಹಾಕಿಕೊಂಡ ಮಾಹಿತಿ ಸಿಗುತ್ತದೆ. ಅಶೋಕನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ತ್ರೀ ಸ್ಟಾರ್‌ ಹೋಟೆಲ್‌ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದರ ಮಾಹಿತಿಯ ಅನ್ವಯ ಬೆಂಗಳೂರು ಕೇಂದ್ರ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಪ್ರಕರಣದ ತನಿಖೆಯ ವೇಳೆ ಶಾಸಕ ಹ್ಯಾರಿಸ್‌ ಮನೆಯನ್ನು ದಂಧೆಗೆ ಲ್ಯಾಂಡ್‌ಮಾರ್ಕ್‌ ಆಗಿ ಬಳಸುತ್ತಿರುವುದು ಪತ್ತೆಯಾಗಿತ್ತು.ಪಿಂಪ್‌ ಒಬ್ಬ ಮೊಬೈಲಿನಲ್ಲಿ ಕಳಿಸಿರುವ ಸಂದೇಶ ಹೀಗಿತ್ತು. "ಎನ್‌.ಎ. ಹ್ಯಾರಿಸ್‌ ಅವರ ಮನೆಯ ಮುಂದೆ ಕಾಯುತ್ತಿರಿ. ಹುಡುಗಿ ನಿಮಗೆ ಕರೆಮಾಡಿ ಎಲ್ಲಿಗೆ ಬರಬೇಕೆಂದು ತಿಳಿಸುತ್ತಾರೆ," ಈ ರೀತಿಯ ಸಂದೇಶ ವೇಶ್ಯಾವಾಟಿಕೆಯ ಕಸ್ಟಮರ್‌ ಒಬ್ಬರಿಗೆ ಕಳುಹಿಸಲಾಗಿತ್ತು. ಮುಂದುವರೆದ ತನಿಖೆಯಲ್ಲಿ ಪ್ರತೀ ಬಾರಿಯೂ ಹ್ಯಾರಿಸ್‌ ಮನೆಯನ್ನು ಲ್ಯಾಂಡ್‌ಮಾರ್ಕ್‌ ಆಗಿ ಬಳಸಿಕೊಂಡು ದಂಧೆಯನ್ನು ನಡೆಸುತ್ತಿರುವುದಾಗಿ ತಿಳಿದುಬಂದಿತ್ತು.

ಇದಕ್ಕೆ ಆಗ ಪ್ರತಿಕ್ರಿಯಿಸಿದ್ದ ಎನ್‌.ಎ. ಹ್ಯಾರಿಸ್‌ "ನನ್ನ ಮನೆಯನ್ನು ಲ್ಯಾಂಡ್‌ ಮಾರ್ಕ್‌ ಆಗಿ ಬಳಸಿಕೊಂಡರೆ ನಾನೇನು ಮಾಡಲು ಸಾಧ್ಯ. ಹಲವು ಜಾಗಗಳನ್ನು ಲ್ಯಾಂಡ್‌ಮಾರ್ಕ್‌ ಗಳಾಗಿ ಬಳಸಿಕೊಳ್ಳಲಾಗುತ್ತದೆ. ಒಳ್ಳೆಯ ಕೆಲಸಕ್ಕೆ ಬಳಸುತ್ತಾರೋ, ಕೆಟ್ಟ ಕೆಲಸಕ್ಕೆ ಮಾಡುತ್ತಾರೋ ಎಂಬುದನ್ನು ಯಾರು ಅರಿಯಲು ಸಾಧ್ಯ. ನನಗೂ ವೇಶ್ಯಾವಾಟಿಕೆಗೂ ಯಾವುದೇ ಸಂಬಂಧವಿಲ್ಲ," ಎಂಬುದಾಗಿ ಪ್ರತಿಕ್ರಿಯಿಸಿದ್ದರು.

ಬೆಂಗಳೂರು ಎಂಜಿ ರಸ್ತೆ ಬಳಿಯ ಹ್ಯಾರಿಸ್‌ ನಿವಾಸ
ಬೆಂಗಳೂರು ಎಂಜಿ ರಸ್ತೆ ಬಳಿಯ ಹ್ಯಾರಿಸ್‌ ನಿವಾಸ

ವಿಶೇಷ ಅಂದರೆ, ಅಶೋಕ ನಗರ ಪೊಲೀಸ್‌ ಸಿಬ್ಬಂದಿಗಳು ಈಗಲೂ ದಾಳಿ ಮಾಡಿದ್ದ ಆ ಹೋಟೆಲ್‌ ಹ್ಯಾರಿಸ್‌ ಅವರ ಒಡೆತನದ್ದೇ ಎಂದು ನಂಬಿದ್ದಾರೆ.ಆ ಪ್ರಕರಣದ ತನಿಖೆಗೂ ಪ್ರಭಾವ ಬೀರಲಾಗಿತ್ತು ಎನ್ನಲಾಗುತ್ತಿದೆ. ಮುಂಬೈ, ದೆಹಲಿ, ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌ ಮತ್ತು ವಿದೇಶಿ ಮಹಿಳೆಯರನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಲಾಗಿತ್ತು ಎನ್ನುತ್ತವೆ ಪೊಲೀಸ್‌ ಮೂಲಗಳು. ಬ್ರಿಗೇಡ್‌ ರಸ್ತೆಯ ತ್ರೀ ಸ್ಟಾರ್‌ ಹೋಟೆಲಿನಲ್ಲಿ ಗಂಟೆಯೊಂದಕ್ಕೇ ಲಕ್ಷಾಂತರ ರೂಪಾಯಿಗಳನ್ನು ಕಸ್ಟಮರ್‌ಗಳಿಂದ ವಸೂಲಿ ಮಾಡಲಾಗುತ್ತಿತ್ತು ಎಂಬುದು ತನಿಖೆಯಿಂದ ಬಹಿರಂಗವಾಗಿತ್ತು. ಆದರೆ, ಲ್ಯಾಂಡ್‌ಮಾರ್ಕ್‌ ಆಗಿ ಹ್ಯಾರಿಸ್‌ ಮನೆ ಬಳಕೆಯಾಗಿದೆ ಎಂಬ ಒಂದೇ ಕಾರಣಕ್ಕೆ ಹ್ಯಾರಿಸ್‌ರನ್ನು ದೂರಲು ಸಾಧ್ಯವಿಲ್ಲ.

ಪ್ರತಿಕ್ರಿಯೆ ಪ್ರಯತ್ನ:

ವೇಶ್ಯಾವಾಟಿಕೆಯ ಹೇಳಿಕೆಗಳು, ಎನ್‌. ಎ. ಮೊಹಮ್ಮದ್‌ ಕಟ್ಟಿದ ಸಾಮ್ರಾಜ್ಯ, ಕಳಂಕ ತಂದ ಮಗ ಹಾಗೂ ಇನ್ನಿತರ ಗುರುತರ ಆರೋಪಗಳಿಗೆ ಪ್ರತಿಕ್ರಿಯೆ ಪಡೆಯಲು 'ಸಮಾಚಾರ' ಶಾಸಕ ಹ್ಯಾರಿಸ್‌ರನ್ನು ಸಂಪರ್ಕಿಸಿದಾಗ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದರು. "ದಯವಿಟ್ಟು ನಾನು ಯಾವುದೇ ಪ್ರತಿಕ್ರಿಯೆಯನ್ನೂ ನೀಡುವ ಸ್ಥಿತಿಯಲ್ಲಿಲ್ಲ. ನನ್ನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿ. ನನ್ನ ಮಗ ಮಾಡಿರುವ ಕೆಲಸದಿಂದ ನಾನು ಸಾಕಷ್ಟು ಮಾನಸಿಕ ನೋವನ್ನು ಅನುಭವಿಸುತ್ತಿದ್ದೇನೆ. ನೀವು ನನ್ನ ಸ್ಥಿತಿಯನ್ನು ಅರಿತು ನನಗೆ ಸಹಕರಿಸಬೇಕು," ಎಂದರು.

ತಂದೆಯ ಸಹಜ ನೋವುಗಳಿವು. ಬುಧವಾರ ನ್ಯಾಯಾಲಯ ನ್ಯೂ. ನಲಪಾಡ್‌ಗೆ ನ್ಯಾಯಾಂಗ ಬಂಧನ ವಿಧಿಸಿದೆ. "ಬೆಂಗಳೂರಿನ ಭವಿಷ್ಯದ ಸ್ವಾಸ್ಥ್ಯದ ದೃಷ್ಟಿಯಿಂದ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸುವ ಅವಶ್ಯಕತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ," ಎಂದು ಹಲ್ಲೆಗೊಳಗಾದ ವಿದ್ವತ್ ಪರ ಪೋಷಕರು ಮಾಡಿಕೊಂಡು ಮನವಿ ಹಿನ್ನೆಲೆಯಲ್ಲಿ ನೇಮಕಗೊಂಡ ವಿಶೇಷ ಸರಕಾರಿ ಅಭಿಯೋಜಕರು ಹೇಳಿದ್ದಾರೆ.

ನಲಪಾಡ್ ಕುಟುಂಬದ ಮೂರು ತಲೆಮಾರಿನ ಸಂಕ್ಷಿಪ್ತ ಇತಿಹಾಸ ನೋಡಿದರೆ, ಬೆಂಗಳೂರಿನ ಸ್ವಾಸ್ಥ್ಯ ಈ ಹಿಂದೆಯೂ ಇವರಿಂದಾಗಿ ಕೆಟ್ಟಿತ್ತು. ಜತೆಗೆ, ಅಧಿಕಾರದ ದರ್ಪವೂ ಈಗ ಸೇರಿಕೊಂಡು ಗಾಯ ದೊಡ್ಡದಾಗಿ ಕಾಣಿಸುತ್ತಿದೆ. ಇಷ್ಟೆಲ್ಲಾ ಆರೋಪಗಳು ತಳಮಟ್ಟದಲ್ಲಿ ಕೇಳಿ ಬರುತ್ತಿವೆ. ಸತ್ಯವೇ ಆಗಿದ್ದರೆ, ಬೆಂಗಳೂರಿಗೆ ವಲಸೆ ಬಂದ ಕುಟುಂಬವೊಂದು ಶ್ರೀಮಂತರಾಗುವ ಭರಾಟೆಯಲ್ಲಿ ಸಮಾಜದ ಆರೋಗ್ಯವನ್ನು ಕೆಡಿಸಿದ್ದರು ಎಂಬುದಕ್ಕೆ ಯಾವುದೇ ಅನುಮಾನಗಳು ಬೇಕಿಲ್ಲ. ಅದಕ್ಕೂ ಮೊದಲು ಸೂಕ್ತ ತನಿಖೆ ನಡೆಯಬೇಕಿದೆ. ಅದು ಯುಬಿ ಸಿಟಿಯಲ್ಲಿ ನಡೆದ ಪ್ರಕರಣದ ಆಚೆಗೂ ಇರುವ ಸತ್ಯಗಳನ್ನು ಬಯಲಿಗೆಳೆಯುವಷ್ಟು ಪರಿಣಾಮಕಾರಿಯಾಗಿ ಇರಬೇಕಿದೆ.ಅಧಿಕೃತ ಮಾಹಿತಿ ಪ್ರಕಾರ ಎನ್‌.ಎ. ಹ್ಯಾರಿಸ್‌ ಒಡೆತನದಲ್ಲಿ ಸುಮಾರು

15 ಸಂಸ್ಥೆಗಳಿವೆ

ಶ್ರೀಮಂತಿಕೆಯಲ್ಲಿ ಸಾಮಾಜಿಕ ಕೊಡುಗೆ ನೀಡುವ ಕೆಲಸವನ್ನೂ ಜ್ಯೂ. ನಲಪಾಡ್ ಮಾಡಿದ್ದ. ಹೀಗಾಗಿಯೇ ಪ್ರಕಾಶ್‌ ರೈ ತರಹದ ನಟ ಕೂಡ ಈತನಿಗೆ 'ಉತ್ತಮ ಸಂಸ್ಕಾರದ ಹುಡುಗ' ಎಂಬ ಬಿರುದು ಕೊಟ್ಟಿದ್ದರು. ತಿಂಗಳು ಕಳೆಯುವುದರೊಳಗೇ 'ಸಂಸ್ಕಾರ'ದ ಚಿತ್ರಣವೇ ಬದಲಾಗಿದೆ. ಹ್ಯಾರಿಸ್ ಕುಟುಂಬ ಚರ್ಚೆಯ ಕೇಂದ್ರದಲ್ಲಿದೆ. ಸಹಜವಾಗಿಯೇ ಸ್ಥಳೀಯ ಮಟ್ಟದಲ್ಲಿ ಹ್ಯಾರಿಸ್ ಕುಟುಂಬ ಬೆಳೆದು ಬಂದ ಕತೆಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ. ಈ ಸಮಯದಲ್ಲಿ ಸೂಕ್ತ ತನಿಖೆ ನಡೆಸಲು ಒತ್ತಾಯವೊಂದರ ಅಗತ್ಯ ಎಲ್ಲಾ ಕಡೆಗಳಿಂದ ಇದೆ.