‘ಸೂಪರ್ ಬ್ಲೂ ಬ್ಲಡ್ ಮೂನ್’: ಒಂದೆಡೆ ಜ್ಯೋತಿಷ್ಯ, ಮತ್ತೊಂದೆಡೆ ವಿಜ್ಞಾನ; ನಿಮ್ಮ ಆಯ್ಕೆ ಯಾವುದು?
INSIDE STORY

‘ಸೂಪರ್ ಬ್ಲೂ ಬ್ಲಡ್ ಮೂನ್’: ಒಂದೆಡೆ ಜ್ಯೋತಿಷ್ಯ, ಮತ್ತೊಂದೆಡೆ ವಿಜ್ಞಾನ; ನಿಮ್ಮ ಆಯ್ಕೆ ಯಾವುದು?

ಖಂಡಗ್ರಾಸ ಸಂಪೂರ್ಣ ಚಂದ್ರಗ್ರಹಣ, ಎಂಟು ರಾಶಿಯವರ ಬದುಕು ಆಗಲಿದೆ ನರಕ. ಚಂದ್ರಗ್ರಹಣ ಹೊತ್ತು ತರಲಿದೆ ಸಾಲು ಸಾಲು ಕಂಟಕ. ಕೆಟ್ಟ ಗ್ರಹಣದಿಂದ ಜನರೊಳಗೆ ಉಂಟಾಗಿದೆ ನಡುಕ. ಈ ಭಯಂಕರ ಚಂದ್ರಗ್ರಹಣ ರಾಶಿ, ನಕ್ಷತ್ರಗಳ ಮೇಲೆ ಬೀರಲಿರುವ ಫಲಾಫಲಗಳೇನು? ತಿಳಿಯಲು ಮುಂದೆ ಓದಿ...

ಇದು ಕನ್ನಡ ವೆಬ್‌ಸೈಟ್‌ ಒಂದರಲ್ಲಿನ ಲೇಖನದ ಮೊದಲ ಭಾಗ. ಗುರುವಾರ ನಡೆಯಲಿರುವ ಚಂದ್ರಗ್ರಹಣದ ಬಗ್ಗೆ ಜೋತಿಷ್ಯ ಏನು ಹೇಳುತ್ತದೆ ಎಂಬ ಲೇಖನದ ಆರಂಭಿಕ ಸಾಲುಗಳಿವು. ಪ್ರಾರಂಭದಲ್ಲೇ ದಂಗು ಬಡಿಸುವ ಈ ಸಾಲುಗಳನ್ನು ಓದಿದ ನಂತರ ನಡುಕ ಶುರುವಾಗಲೇಬೇಕು. ಜೋತಿಷ್ಯವನ್ನು ನಂಬದವರಲ್ಲಿಯೂ ಸಹ ಒಮ್ಮೆ ಮುಂದಕ್ಕೆ ಕಣ್ಣಾಡಿಸಿಬೇಕೆಂಬ ಆಕಾಂಕ್ಷೆಯನ್ನು ಈ ಬರಹ ಉಂಟುಮಾಡುತ್ತದೆ.ಇಂದಿನ ಚಂದ್ರಗ್ರಹಣ ಅತೀ ಕ್ರೂರವಂತೆ. ಹಲವು ರಾಶಿಗಳಿಗೆ ಶುಭಪ್ರದವು, ಕೆಲವಕ್ಕೆ ಅಶುಭವೂ, ಉಳಿದವುಗಳಿಗೆ ಮಿಶ್ರಫಲವೂ ದೊರೆಯಲಿದೆ ಎಂಬುದು ಜ್ಯೋತಿಷಿಗಳ ಅಂಬೋಣ. ಗ್ರಹಣದ ಪ್ರಾರಂಭದಲ್ಲಿ ಸ್ನಾನ ಮಾಡಿದರೆ ಲಕ್ಷಬಾರಿ ಸ್ನಾನ ಮಾಡಿದಂತೆ. ಗ್ರಹಣದ ಕೊನೆಯ ಭಾಗದಲ್ಲಿ ಸ್ನಾನ ಮಾಡಿದರೆ ಅನಂತ ಸ್ನಾನಗಳ ಫಲ ದೊರೆಯುತ್ತದೆಯಂತೆ. ಗ್ರಹಣದ ಸಮಯದಲ್ಲಿ ನಡೆಸುವ ಹೋಮವು ಕೋಟಿ ಹೋಮಗಳಿಗೆ ಸಮವಂತೆ. ಇದನ್ನು ಹೇಳುವುದು ಜ್ಯೋತಿಷ್ಯ ಶಾಸ್ತ್ರ, ನಂಬುವುದು ನಮ್ಮಂತ ಸಾಮಾನ್ಯ ಜನರು.

ಜ್ಯೋತಿಷ್ಯಶಾಸ್ತ್ರ; ಹಾಗೆಂದರೇನು?

ಬಾಹ್ಯಾಕಾಶದಲ್ಲಿ ಆಕಾಶಕಾಯಗಳ ಸ್ಥಾನ ಬದಲಾವಣೆಯು ಮಾನವನ ವ್ಯಕ್ತಿತ್ವ ಮತ್ತು ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬದನ್ನು ತಿಳಿಸುವುದೇ ಜ್ಯೋತಿಷ್ಯಶಾಸ್ತ್ರ. ಇಷ್ಟೇ ಅಲ್ಲದೇ ಜ್ಯೋತಿಷ್ಯ ಇಂದು ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ ಹೀಗೆ ಹತ್ತು ಹಲವು ವಿಚಾರಗಳನ್ನು ಮೊದಲೇ ತಿಳಿಯುವ ಮಾನದಂಡವಾಗಿ ಬಳಕೆಯಾಗುತ್ತಿದೆ.ಜೋತಿಷ್ಯ ಎನ್ನುವುದಕ್ಕಿಂತ ಪಂಚಾಂಗ ಎಂಬ ಪದಬಳಕೆ ಸೂಕ್ತ ಎಂದು ವಿಕಿಪೀಡಿಯಾ ಹೇಳುತ್ತದೆ. ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎಂಬ ಐದು ಅಂಶಗಳೂ ಸೇರಿ ಈ ಪಂಚಾಂಗ ಸಿದ್ಧವಾಗುತ್ತದೆ. 15 ತಿಥಿಗಳು, 7 ವಾರಗಳು, 27 ನಕ್ಷತ್ರಗಳು, 27 ಯೋಗಗಳು, 18 ಕರಣಗಳು, 12 ರಾಶಿಗಳು, 9 ಗ್ರಹಗಳು, ಇವೆಲ್ಲವುಗಳಿಂದ ಉಂಟಾಗುವ ಫಲಾಫಲಗಳು – ಇದಿಷ್ಟರ ಸುತ್ತ ಜ್ಯೋತಿಷ್ಯ ಶಾಸ್ತ್ರ ನಿಂತಿದೆ.

ಜ್ಯೋತಿಷ್ಯ ಎಂದರೆ ಇಷ್ಟೇ ಎನ್ನಲು ಸಾಧ್ಯವಿಲ್ಲ. ಇದರಲ್ಲಿ ಸಿದ್ಧಾಂತ, ಸಂಹಿತಾ ಮತ್ತು ಹೋರಾ ಎಂಬ ಮೂರು ಭಾಗಗಳಿವೆ. ಸಿದ್ಧಾಂತ ಭಾಗವು ಭಾರತೀಯ ಖಗೋಳಶಾಸ್ತ್ರವನ್ನು ಪರಿಚಯಿಸುತ್ತದೆ. ಸಂಹಿತೆಯು ಒಂದು ರೀತಿಯ ಕಾಲಜ್ಞಾನ. ಭೂಕಂಪಗಳಂತ ಪ್ರಾಕೃತಿಕ ವಿಕೋಪಗಳು, ಯುದ್ಧ, ರಾಜಕೀಯ, ಮಳೆ-ಬೆಳೆ, ವಾಸ್ತುಗಳ ಬಗ್ಗೆ ಮಾತನಾಡುತ್ತದೆ. ಕೊನೆಯ ಹೋರಾಶಾಸ್ತ್ರವು ಕುಂಡಲಿಗಳ ಆಧಾರದ ಮೇಲೆ ಮಾನವನ ಭವಿಷ್ಯವನ್ನು ವಿವರಿಸುವ ಶಾಸ್ತ್ರವಾಗಿದೆ.ಜ್ಯೋತಿಷ್ಯ ಶಾಸ್ತ್ರದ ಎಲ್ಲವನ್ನೂ ತಿಳಿಯಬೇಕೆಂದರೆ ಬೃಹತ್ ಜಾತಕ, ದೈವಜ್ಞ ವಲ್ಲಭ, ಲಘು ಜಾತಕ, ಯೋಗ ಯಾತ್ರಾ, ವಿವಾಹ ಪಲಟ, ಹೋರಸಾರ ಎಂಬ ಆರು ಗ್ರಂಥಗಳನ್ನು ಅಧ್ಯಯನ ಮಾಡಬೇಕು. ಈ ಪುಸ್ತಕಗಳ ಅಧ್ಯಯನ ಯಾವುದೇ ವಿಶ್ವವಿದ್ಯಾಲಯದ ಅತಿಕಷ್ಟದ ಕೋರ್ಸ್‌ಗಳಿಗಿಂತೇನೂ ಕಡಿಮೆಯಿಲ್ಲ. ಇದನ್ನು ಪೂರ್ತಿಯಾಗಿ ಓದಿ ಅರ್ಥೈಸಲು ನಾವು ದೊಡ್ಡ ಪಂಡಿತರೇ ಅಗಿರಬೇಕು.

ಈ ಜೋತಿಷ್ಯ ಗ್ರಂಥಗಳು ನಿಜವಾಗಿಯೂ ಅದ್ಭುತ ರಚನೆಗಳು. ಅದರೆ ವಿಜ್ಞಾನದ ವಿಷಯಕ್ಕೆ ಬಂದಾಗ ತಾಳಮೇಳ ಇಲ್ಲದಂತೆನಿಸುತ್ತವೆ. ಜ್ಯೋತಿಷ್ಯ ಹೇಳುವಂತೆ ಎಲ್ಲಾ ಗ್ರಹಗಳು ಭೂಮಿಯ ಜೀವಜಂತುಗಳ ಮೇಲೆ ಪ್ರಭಾವ ಬೀರುತ್ತವೆ. ಆದರೆ, ಸೂರ್ಯ ಮತ್ತು ಚಂದ್ರರನ್ನು ಬಿಟ್ಟರೆ ಸೌರ ಮಂಡಲದ ಇನ್ಯಾವ ಗ್ರಹಗಳ ಗುರುತ್ವಾಕರ್ಷಣೆಗೆ ಭೂಮಿಯ ಮೇಲೆ ಪ್ರಭಾವ ಬೀರುವಷ್ಟು ಶಕ್ತಿಯಿಲ್ಲ ಎಂದು ವಿಜ್ಞಾನ ಹೇಳುತ್ತದೆ. ತಾನು ಹೇಳುತ್ತಿರುವುದು ನಿಜ ಎಂದು ವಾದಿಸಲು ಜ್ಯೋತಿಷ್ಯದ ಬಳಿ ಯಾವುದೇ ಪುರಾವೆಗಳಿಲ್ಲ. ಜ್ಯೋತಿಷ್ಯ ಒಂದು ವಿಧಿಶಾಸ್ತ್ರ. ಋಷಿಮುನಿಗಳು ರಚಿಸಿರುವ ಈ ಗ್ರಂಥಗಳ ನಿಯಮಾವಳಿಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಹೀಗೆ ಪ್ರಶ್ನಿಸದೇ ಒಪ್ಪಿಕೊಳ್ಳಬೇಕೆಂಬ ಫಲಶಾಸ್ತ್ರವನ್ನು ವಿಜ್ನಾನವು ‘ವೈಜ್ಞಾನಿಕ’ ಎಂದು ಒಪ್ಪಿಕ್ಕೊಳ್ಳುವುದಿಲ್ಲ.

ಫಲಾಫಲಗಳು ಕೆಲಸ ಮಾಡುತ್ತವೆಯೇ?:

ಇದು ಕಾಗೆ ಬಂದು ಕೂರುವುದಕ್ಕೂ, ಕೊಂಬೆ ಮುರಿದು ಬೀಳುವುದಕ್ಕೂ ಇರುವ ಸಂಬಂಧ ಅಷ್ಟೇ. ಜ್ಯೋತಿಷ್ಯಶಾಸ್ತ್ರದಲ್ಲೇ ಹಲವು ತೊಡಕುಗಳಿವೆ. ಇದು ಹೀಗೆಯೇ ಎಂದು ಯಾವ ಜ್ಯೋತಿಷ್ಯ ಶಾಸ್ತ್ರಜ್ಞರಿಗೂ ನಿರ್ಧರಿಸಲು ಸಾಧ್ಯವಿಲ್ಲ. ‘ಕೋ ವೇತ್ತಾ ತಾರತಮ್ಯಸ್ಯ ತಮೇಕಂ ವೇಧಸಂ ವಿನಾ’ ಎಂದು ಈ ಶಾಸ್ತ್ರವೇ ಹೇಳುತ್ತದೆ. ಈ ಸಾಲು ಬ್ರಹ್ಮನ ಕುರಿತಾಗಿ ಹೇಳಿರುವುದಾಗಿದ್ದು, ನಿನ್ನನ್ನು ಬಿಟ್ಟು ಬೆರೆ ಯಾರಿಗೂ ಫಲ ತಾರತಮ್ಯವನ್ನು ಹೇಳವುದು ಸಾಧ್ಯವಿಲ್ಲ ಎನ್ನುವುದು ಇದರ ಭಾವಾರ್ಥ. ಮತ್ತೇಗೆ ಈ ಶಾಸ್ತ್ರ ಮುಂದಿನ ಬದುಕಿನ ಬಗ್ಗೆ ಮಾಹಿತಿ ನೀಡಬಲ್ಲದು? ಇದು ಶಾಸ್ತ್ರದೊಳಗಿರುವ ಗೊಂದಲಕ್ಕೆ ಸ್ಪಷ್ಟ ಉದಾಹರಣೆ. ಮಾನವನೊಬ್ಬನ ಜೀವನದಲ್ಲಿ ಎನಾಗುತ್ತದೆ ಎಂಬುದು ಬ್ರಹ್ಮ ಬರೆದ ಹಣೆಬರಹದಲ್ಲೇ ನಿರ್ದಾರ ಆಗಿತ್ತದೆಂದಾದರೆ ಜೀವನ ಅದರಂತೆಯೇ ನಡೆಯುತ್ತದಲ್ಲವೇ? ಈ ಜ್ಯೋತಿಷ್ಯಶಾಸ್ತ್ರವೇಗೆ ಅದನ್ನು ಬದಲಿಸಬಲ್ಲದು? ಉತ್ತರ ಇಲ್ಲದ, ತರ್ಕಕ್ಕೂ ಸಿಗದ ಪ್ರಶ್ನೆಗಳಿವು. ಆದರೂ, ಜನ ನಿತ್ಯ ಟಿವಿಗಳಲ್ಲಿ ಭವಿಷ್ಯನ್ನು ಕೇಳಬೇಕಿದೆ, ನಂಬಬೇಕಿದೆ

.ಶಾಸ್ತ್ರದ ಮಾತು ಒಂದು ಕಡೆಯಿರಲಿ. ಶಾಸ್ತ್ರ ಹೇಳುವ ಜ್ಯೋತಿಷಿಗಳ ಅಭಿಮತಗಳು ಸಹ ಒಂದೇ ಆಗಿರುವುದಿಲ್ಲ. ಬೇರೆ ಬೇರೆಯವರು ಹೇಳುವ ಫಲಾಫಲಗಳು ಬೇರೆ ಬೇರೆಯದೇ ಆಗಿರುತ್ತದೆ. ಜ್ಯೋತಿಷ್ಯಶಾಸ್ತ್ರ ಕರಾರುವಕ್ಕಾಗಿ ಇರುವುದಾದರೆ ಹೀಗೇಕಾಗಬೇಕು? ಹೇಳುವುದೆಲ್ಲಾ ಸಂಭವಿಸುವ ಹಾಗಿದ್ದರೆ 2012ರಲ್ಲಿ ಪ್ರಳಯ ಆಗಿಯೇ ತೀರಬೇಕಿತ್ತು. ಆದರೆ, ಆಗಾಗಲಿಲ್ಲ.  ಶಾಸ್ತ್ರ ಪುರಾಣಗಳ ನಂಬುವವರಾದರೆ ಅಂದು ನಡೆದ ಹೋಮ ಹವನಗಳ ಕಾರಣದಿಂದಾಗಿಯೇ ಪ್ರಳಯ ಸಂಭವಿಸಲಿಲ್ಲ ಎಂಬ ಉತ್ತರ ಬರಬಹುದು.ಇದು ಒಟ್ಟಾರೆ ಜ್ಯೋತಿಷ್ಯದ್ದಾಯಿತು. ಇಂದು ಖಗೋಳದಲ್ಲಿ ನಡೆಯುತ್ತಿರುವ ಕೌತುಕಕ್ಕೆ ಅದಾಗಲೇ ದೊಡ್ಡ ದೊಡ್ಡ ಲೇಖನಗಳು ಬಂದಾಗಿದೆ. ಯಾವ ರಾಶಿಯವರಿಗೆ ಏನೇನಾಗಲಿದೆ? ಪರಿಹಾರ ಕ್ರಮಗಳೇನಿದೆ? ಯಾವ ವಸ್ತುವನ್ನು ದಾನ ಮಾಡಬೆಕು? ಯಾವ ದೇವರ ಮಂತ್ರ ಪಠಿಸಬೇಕು? ಯಾವ ದೇವಸ್ಥಾನಕ್ಕೆ ಹೋಗಬೇಕು ಎಂದು ಬೆಳಗ್ಗೆಯ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳು ತಿಳಸಿಯಾಗಿದೆ. ಸಂಜೆ ಗ್ರಹಣದ ಸಮಯದಲ್ಲಿ ಹಲವಾರು ಚಾನೆಲ್‌ಗಳು ಜ್ಯೋಷಿಗಳನ್ನು ಕರೆದು ಕೂರಿಸಿ ಲೈವ್ ನಿಡಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿವೆ. ಈಗಾಗಲೇ ರಾಶಿ ಫಲಗಳ ಆಧಾರದ ಮೇಲೆ ವಿವರಣೆಗಳನ್ನು ನೀಡುವ ಕೆಲಸ ಆಗಿದೆ.

ಜ್ಯೋತಿಷ್ಯ ಮತ್ತು ಗ್ರಹಣ – ಎತ್ತಣದಿಂದೆತ್ತಣ ಸಂಬಂಧವಯ್ಯ?:

ಗ್ರಹಣದ ಕುರಿತಾದಂತೆ ಭಾರತೀಯ ಸಮಾಜದಲ್ಲಿ ಹಲವಾರು ನಂಬಿಕೆಗಳಿವೆ. ಪುರಾಣದ ಪ್ರಕಾರ ಸೂರ್ಯ-ಚಂದ್ರರನ್ನು ರಾಹು-ಕೇತುಗಳೆಂಬ ದುಷ್ಟ ಗ್ರಹಗಳು ನುಂಗುವುದನ್ನೆ ಅಥವಾ ಹಿಡಿಯುವುದನ್ನೇ ಗ್ರಹಣ ಎನ್ನಲಾಗುತ್ತದೆ. ಗ್ರಹಣದ ಸಮಯದಲ್ಲಿ ಯಾವುದೋ ದೈತ್ಯ ಮೃಗವೊಂದು ಆಕಾಶಕಾಯಗಳನ್ನು ಕಬಳಿಸುತ್ತದೆಂದೂ, ಅದನ್ನು ಹೊಡೆದೋಡಿಸಲು ಆಕಾಶದೆಡೆಗೆ ಬಾಣಗಳನ್ನು ಎಸೆಯುತ್ತಿದ್ದರೆಂದೂ ಅಭಿಪ್ರಾಯಗಳಿವೆ. ರಾಹು ಎಂಬ ಸರ್ಪವು ಗ್ರಹಣಕಾಲದಲ್ಲಿ ಸೂರ್ಯ ಚಂದ್ರರನ್ನು ನುಂಗುತ್ತದೆಂಬ ನಂಬಿಕೆಯೂ ಇದೆ.ಕ್ಷೀರ ಸಾಗರದ ಮಂಥನ ನಡೆದ ಮೇಲೆ ಅಮೃತವು ದೇವತೆಗಳ ಪಾಲಾಯಿತು. ರಾಹು ಎಂಬ ದಾನವನು ಅಮೃತದ ಸಲುವಾಗಿ ವೇಷ ಮರೆಸಿಕೊಂಡ ದೇವತೆಗಳ ಸಾಲಿನಲ್ಲಿ ಬಂದು ಕೂರುತ್ತಾನೆ. ಅದನ್ನು ಕಂಡ ಸೂರ್ಯ ಚಂದ್ರರು ಈ ವಿಷಯವನ್ನು ವಿಷ್ಣುವಿಗೆ ತಿಳಿಸುತ್ತಾರೆ. ಆಗ ವಿಷ್ಣು ತನ್ನ ಚಕ್ರಾಯುಧವನ್ನು ಬಳಸಿ ರಾಹುವಿನ ತಲೆ ಕಡೆಯುತ್ತಾನೆ. ರಾಹುವಿನ ರುಂಡ ಮುಂಡಗಳು ಬೇರೆ ಬೇರೆಯಾಗುತ್ತವೆ. ಆ ವೇಳೆಗಾಗಲೇ ರಾಹು ಅಮೃತವನ್ನು ಸೇವಿಸಿದ್ದ ಕಾರಣ, ಜೀವ ಉಳಿಯುತ್ತದೆ. ಸಜೀವವಾದ ರುಂಡ ಮುಂಡಗಳೆರಡು ರಾಹು-ಕೇತು ಎಂಬ ಹೆಸರು ಪಡೆಯುತ್ತವೆ. ಸೂರ್ಯ ಚಂದ್ರರು ತನ್ನ ಮೇಲೆ ದೂರು ಹೇಳಿದರೆಂಬ ಕಾರಣಕ್ಕಾಗಿ ಅವರ ಮೆಲೆ ದ್ವೇಷ ಹೊಂದಿರುವ ರಾಹು ಆಗಾಗ್ಗೆ ಅವರಿಬ್ಬರನ್ನು ಪೀಡಿಸುತ್ತಾನೆ ಎಂಬುದು ಪುರಾಣದ ಕತೆ. ವಾಸ್ತವದ ಜೊತೆ ಹೋಲಿಸಿದರೆ ಈ ಕತೆಯಲ್ಲಿ ಯಾವ ಹುರುಳೂ ಇಲ್ಲ

“ಲಕ್ಷಾಂತರ ಕಿಮೀಗಳಷ್ಟು ದೂರ ಇರುವ ಗ್ರಹಗಳ ಮತ್ತು ಭೂಮಿಯ ಸಂಬಂಧವೇನು ಎಂಬುದನ್ನು ವಿಜ್ಞಾನ ಇದಾಗಲೇ ಅಧ್ಯಯನ ಮಾಡಿದೆ. ಅ ಗ್ರಹಗಳು ಮಾನವನ ದೈನಂದಿನ ಬದುಕಿನ ಮೇಲೆ ಯಾವ ರೀತಿಯ ಪರಿಣಾಮವನ್ನೂ ಬೀರಲಾರವು. ಜ್ಯೋತಿಷ್ಯಕ್ಕೆ ಸರಿಯಾದ ಅಡಿಪಾಯವೇ ಇಲ್ಲ, ಅದರ ಮೇಲೆ ಕಟ್ಟುತ್ತ ಹೋದ ಕಲ್ಪನೆಯ ಕತೆಗಳೆಲ್ಲವೂ ಅವೈಜ್ಞಾನಿಕ. ಮನುಷ್ಯನ ಜೀವನವನ್ನು ನಿರ್ಧಾರ ಮಾಡುವಲ್ಲಿ ಗ್ರಹಗಳ ಪಾತ್ರ ಏನೇನೂ ಇಲ್ಲ ಎನ್ನುವುದನ್ನು ನಾನು ಗಂಟಾಘೋಷವಾಗಿ ಹೇಳುತ್ತೇನೆ,”
ರಾಮಕೃಷ್ಣ, ಜಂಟಿ ಕಾರ್ಯದರ್ಶಿ, ಭಾರತೀಯ ಜ್ಯಾನ ವಿಜ್ಞಾನ ಸಮಿತಿ
“ಗ್ರಹಣವನ್ನು ವಿಜ್ಞಾನ ಅನ್ನುವುದಕ್ಕಿಂತ ವಿಚಾರ ಎನ್ನುವ ದೃಷ್ಟಿಯಿಂದ ನೋಡಬೇಕಿದೆ. ಇದು ಸರಿ ಇದು ತಪ್ಪು ಎಂದು ನಾವು ಗೆರೆ ಎಳೆದಂತೆ ಹೇಳುವುದಕ್ಕಿಂದ ಇದರ ಬಗ್ಗೆ ಇನ್ನಷ್ಟು ವೈಜ್ಞಾನಿಕವಾದ ಅಧ್ಯಯನಗಳು ನಡೆಯಬೇಕಿದೆ. ಜ್ಯೋತಿಷ್ಯಶಾಸ್ತ್ರದಲ್ಲೂ ಜ್ಞಾನವಿದೆ. ಜ್ಯೋತಿಷ್ಯವನ್ನು ನಾವು ಚಿಕಿತ್ಸಕ ಎಂಬ ದೃಷ್ಟಿಯಲ್ಲಿ ನೋಡಬೇಕಿದೆ.”
ಶ್ರೀನಿವಾಸ್, ಜ್ಯೋತಿಷಿಗಳು

ಒಟ್ಟಾರೆಯಾಗಿ ವಿಜ್ಞಾನಿಗಳು ಹೇಳುವಂತೆ ವೈಜ್ಞಾನಿಕವಾಗಿ ಸರಿಯಾದ ತಳಹದಿ ಇಲ್ಲದ, ನಕ್ಷತ್ರ, ಉಪಗ್ರಹಗಳಾದ ಸೂರ್ಯ ಮತ್ತು ಚಂದ್ರರನ್ನು ಗ್ರಹಳೆನ್ನುವ, ಅಸ್ತಿತ್ವದಲ್ಲೇ ಇಲ್ಲದ ರಾಹುಕೇತುಗಳಗೆ ಅಭೂತಪೂರ್ವವಾದ ಶಕ್ತಿಯನ್ನು ನೀಡುವ ಜ್ಯೋತಿಷ್ಯಶಾಸ್ತ್ರವು ಜ್ಯೋತಿಷಿಗಳ ಪ್ರಕಾರ ತನ್ನದೇ ಆದ ಜ್ಞಾನವನ್ನು ಹೊಂದಿದೆ. ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಾಧಾನ್ಯತೆ ಪಡೆಯುತ್ತಿದ್ದು, ಈ ನಂಬಿಕೆಗಳನ್ನು ಸಂಪೂರ್ಣವಾಗಿ ವಿರೋಧಿಸುವವರೂ ಸಹ ಒಮ್ಮೆ ಅದರತ್ತ ಗಮನ ಹರಿಸುವಂತೆ ಮಾಡುತ್ತಿದೆ. ಜ್ಯೋತಿಷ್ಯಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು (ಸ್ಲಾಟ್‌ಗಳು) ಮಾರಿಕೊಳ್ಳುತ್ತಿರುವ ಮೀಡಿಯಾಗಳು ಇಲ್ಲ ಸಲ್ಲದ ವಿಚಾರಗಳನ್ನು ಜನರ ತಲೆಯೊಳಗೆ ಬಿತ್ತುತ್ತಿವೆ. ಎಲ್ಲೊ ಇದ್ದ ಜ್ಯೋತಿಷಿಯನ್ನು ರಾತ್ರೋರಾತ್ರಿ ಕರೆತಂದು ಬೆಳಗಾಗುವುದರೊಳಗೆ ದೇವಮಾನವರನ್ನಾಗಿ ಮಾಡುತ್ತಿವೆ. ಒಂಡೆದೆ ವಿಜ್ಞಾನದ ವಿಶೇಷ ಕಾರ್ಯಕ್ರಮಗಳು, ಮತ್ತೊಂದೆಡೆ ಅದೇ ವಿಜ್ಞಾನಕ್ಕೆ ವಿರುದ್ಧವಾದ ಜ್ಯೋತಿಷ್ಯದ ನೇರಪ್ರಸಾರ – ಇದು ಇಂದಿನ ಮೀಡಿಯಾಗಳ ಧ್ವಂಧ್ವ ನಿಲುವಿಗೆ ಸ್ಪಷ್ಟ ಉದಾಹರಣೆ. ಇವೆಲ್ಲಕ್ಕೆ ಇವತ್ತು ಸಂಜೆ ಕಾಣಿಸಲಿರುವ 'ಸೂಪರ್ ಬ್ಲೂ ಬ್ಲಡ್ ಮೂನ್‌' ಕೂಡ ಸಾಕ್ಷಿಯಾಗಲಿದ್ದಾನೆ.