samachara
www.samachara.com
ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಳಸುತ್ತಿದ್ದ ವ್ಹೀಲ್ ಚೇರ್‌ 2. 82 ಕೋಟಿಗೆ ಹರಾಜು
ಫೋಕಸ್

ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಳಸುತ್ತಿದ್ದ ವ್ಹೀಲ್ ಚೇರ್‌ 2. 82 ಕೋಟಿಗೆ ಹರಾಜು

ಆಧುನಿಕ ಜಗತ್ತು ಕಂಡ ಮೇಧಾವಿ, ಬಾಹ್ಯಾಕಾಶ ವಿಜ್ಞಾನಕ್ಕೆ ಮಹತ್ವ ತಂದುಕೊಟ್ಟ ಸ್ವೀಫನ್ ಹಾಕಿಂಗ್ ಬಳಸುತ್ತಿದ್ದ ವ್ಹೀಲ್ ಚೇರ್‌ 2,82,19,363 ರೂಪಾಯಿಗಳಿಗೆ ಮಾರಾಟವಾಗಿದೆ.

Team Samachara

ಆಧುನಿಕ ಜಗತ್ತು ಕಂಡ ಮೇಧಾವಿ, ಬಾಹ್ಯಾಕಾಶ ವಿಜ್ಞಾನಕ್ಕೆ ಮಹತ್ವ ತಂದುಕೊಟ್ಟ ಸ್ವೀಫನ್ ಹಾಕಿಂಗ್ ಬಳಸುತ್ತಿದ್ದ ವ್ಹೀಲ್ ಚೇರ್‌ 2,82,19,363 ರೂಪಾಯಿಗಳಿಗೆ ಮಾರಾಟವಾಗಿದೆ.

ಆನ್‌ಲೈನ್‌ ಹರಾಜು ಪ್ರಕ್ರಿಯೆಯಲ್ಲಿ ವ್ಹೀಲ್‌ಚೇರ್ ಸೇರಿದಂತೆ ಸ್ವೀಫನ್ ಹಾಕಿಂಗ್ ಪ್ರಬಂಧ, ಹಸ್ತ ಪ್ರತಿಗಳು, ಪುಸ್ತಕಗಳು ಹಾಗೂ ಇನ್ನಿತರ ವಸ್ತುಗಳನ್ನು ಹರಾಜಿಗೆ ಇಡಲಾಗಿತ್ತು. ಒಟ್ಟು 9 ದಿನಗಳ ಹರಾಜು ಪ್ರಕ್ರಿಯೆಯಲ್ಲಿ ಮೋಟಾರ್ ನ್ಯೂರಾನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ವಿಜ್ಞಾನಿಯ ಪರಿಕರಗಳನ್ನು ಮಾರಾಟ ಮಾಡಲಾಯಿತು.

ಹಾಕಿಂಗ್ ಬರೆದಿದ್ದ 117 ಪುಟಗಳ ಪ್ರಬಂಧ ‘ಪ್ರಾಪರ್ಟಿಸ್ ಆಫ್ ಎಕ್ಸ್‌ಪಾಂಡಿಂಗ್ ಯೂನಿವರ್ಸ್‌’ ಒಟ್ಟು 5,50,04,242 ರೂಪಾಯಿಗೆ ಕೊಂಡುಕೊಳ್ಳಲಾಗಿದೆ. ಸ್ಟೀಫನ್ ಹಾಕಿಂಗ್ ಪ್ರಶಸ್ತಿಗಳನ್ನೂ ಹರಾಜು ಹಾಕಲಾಗಿದ್ದು, ಇವು 2,96,750 ರೂಪಾಯಿಗಳಿಗೆ ಮಾರಾಟವಾಗಿವೆ.

‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್‌’ ಪುಸ್ತಕದ ಲೇಖಕ ಹಾಗೂ ಜಗತ್ತಿನ ಶ್ರೇಷ್ಠ ಭೌತ ವಿಜ್ಞಾನಿ ಸ್ಟೀಫನ್‌ ವಿಲಿಯಂ ಹಾಕಿಂಗ್ ತಮ್ಮ 76 ವಯಸ್ಸಿನಲ್ಲಿ ಇದೇ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದರು. ರಿಲೇಟಿವಿಟಿ, ಸ್ಪೇಸ್ ಮತ್ತು ಟೈಮ್‌ನ ಸ್ವರೂಪ, ಕ್ವಾಂಟಂ ಸಿದ್ಧಾಂತ, ಜಗತ್ತಿನಲ್ಲಿ ಅತೀ ಸಣ್ಣ ಕಣಗಳು ಹೇಗೆ ವರ್ತಿಸುತ್ತವೆ, ಈ ಜಗತ್ತು ಸೃಷ್ಟಿಯಾಗಿದ್ದು ಹೇಗೆ, ಜಗತ್ತಿನ ರಚನೆ ಹೇಗಿದೆ. ಹೀಗೆ ಹತ್ತು ಹಲವು ಭೌತ ವಿಜ್ಞಾನದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ ವಿಖ್ಯಾತ ವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್.

ಹಾಕಿಂಗ್ ಜನಿಸಿದ್ದು 1942ರ ಜನವರಿ 8ರಂದು; ಇಂಗ್ಲೆಂಡ್ ನ ಆಕ್ಸ್ ಫರ್ಡ್ ನಲ್ಲಿ. ವಿಶೇಷವೆಂದರೆ ಅವತ್ತು ಗೆಲಿಲಿಯೋ ಗೆಲಿಲಿ ಸತ್ತು ಅವತ್ತಿಗೆ ಭರ್ತಿ 300 ವರ್ಷಗಳಾಗಿತ್ತು. ಹಾಕಿಂಗ್ ತಂದೆ ಜೀವಶಾಸ್ತ್ರ ವಿಜ್ಞಾನಿಯಾಗಿದ್ದರು. ಲಂಡನ್ ನಲ್ಲಿ ಪುಟ್ಟ ಬಾಲಕ ಹಾಕಿಂಗ್ ಬೆಳೆಯುತ್ತಿದ್ದ. ಅದೇ ಹೊತ್ತಿಗೆ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅಬ್ಬರ ಜೋರಾಗಿತ್ತು. ಬಾಂಬ್ ದಾಳಿಗೆ ಬೆದರಿ ಹಾಕಿಂಗ್ ಕುಟುಂಬ ಲಂಡನ್ ತೊರೆಯಿತು. ಮುಂದೆ ಸೈಂಟ್ ಆಲ್ಬಾನ್ಸ್ ನಲ್ಲಿ ತಮ್ಮ ಪ್ರೌಢಾವಸ್ಥೆಯನ್ನು ಹಾಕಿಂಗ್ ಕಳೆದರು.

ತನ್ನ ಪ್ರೌಢ ವಯಸ್ಸಲ್ಲಿ ಹಾಕಿಂಗ್ ಈಗಿರುವ ಹಾಗಿರಲಿಲ್ಲ. ಆಗ ಅವರು ಕುದುರೆ ಸವಾರಿ ಮಾಡುವಷ್ಟು ಗಟ್ಟಿಮುಟ್ಟಾಗಿದ್ದರು. ನಂತರದ ದಿನಗಳಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಮುಂದಿನ ಓದಿಗಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸೇರಿಕೊಂಡರು. ಸ್ನಾತಕೋತ್ತರ ಅಧ್ಯಯನಕ್ಕೆ ಕಾಸ್ಮಾಲಜಿ ವಿಷಯವನ್ನು ಆಯ್ಕೆ ಮಾಡಿಕೊಂಡು ಕೇಂಬ್ರಿಡ್ಜ್ ವಿವಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಭಯಾನಕ ‘ಮೋಟರ್ ನ್ಯೂರಾನ್’ ಖಾಯಿಲೆ ಅವರಿಗೆ ಕಾಣಿಸಿಕೊಂಡಿತ್ತು. 1964ರಲ್ಲಿ ತಮ್ಮ ಮೊದಲ ಪತ್ನಿ ಜೇನ್ ರನ್ನು ಮದುವೆಯಾಗಲು ಸಿದ್ದವಾಗುತ್ತಿರುವ ಹೊತ್ತಿಗೆ ವೈದ್ಯರು ಅವರಿಗೆ ನೀಡಿದ್ದ ಸಮಯ ಕೇವಲ ಎರಡರಿಂದ ಮೂರು ವರ್ಷ ಮಾತ್ರ.

ಮೋಟಾರ್ ನ್ಯೂರಾನ್ ಖಾಯಿಲೆ ಪೀಡಿತ ವ್ಯಕ್ತಿಯಲ್ಲಿ ಆಗುವ ಬದಲಾವಣೆ ಎಂದರೆ ನರನಾಡಿಗಳನ್ನು ನಿಯಂತ್ರಿಸುವ ಕೇಂದ್ರ ನರಮಂಡಲ ಕೊಂಚ ಕೊಂಚವಾಗಿಯೇ ತನ್ನ ವ್ಯಾಪ್ತಿಯ ಕಾರ್ಯವನ್ನು ಸ್ಥಗಿತಗೊಳಿಸುತ್ತಾ ಸಾಗುತ್ತದೆ. ದಿನಕಳೆದಂತೆ ಈ ಖಾಯಿಲೆ ಪೀಡಿತನಾದ ವ್ಯಕ್ತಿಯ ದೇಹದ ಪ್ರತಿಯೊಂದು ಅಂಗಗಳೂ ಚಲನೆಯನ್ನು ಕಳೆದುಕೊಳ್ಳುತ್ತವೆ. ನಿಶ್ಯಕ್ತನಾಗುತ್ತಾ ಸಾಗುವ ವ್ಯಕ್ತಿ ಕೊನೆಗೊಂದು ದಿನ ಪಾರ್ಶ್ವವಾಯುವಿಗೆ ತುತ್ತಾಗುತ್ತಾನೆ. ಹೀಗೆ ಕೋಟಿಯಲ್ಲಿ ಒಬ್ಬರಿಗೆ ಅಪರೂಪಕ್ಕೆ ಬರುವ ಖಾಯಿಲೆಗೆ ತುತ್ತಾಗಿದ್ದರು ಸ್ಟೀಫನ್ ಹಾಕಿಂಗ್.

ವೈದ್ಯರು ಹೇಳಿದ ಮೂರು ವರ್ಷಗಳ ಗಡುವು ದಾಟಿದರೂ ಹಾಕಿಂಗ್ ಗೆ ಏನೂ ಆಗಲಿಲ್ಲ. ಕಾರಣ ಅಂದುಕೊಂಡಿದ್ದಕ್ಕಿಂತ ನಿಧಾನಕ್ಕೆ ರೋಗ ಹರಡಲು ಆರಂಭಿಸಿತ್ತು. ಜೇನ್ ಜತೆ ಹಾಕಿಂಗ್ ಮೂರು ಮಕ್ಕಳನ್ನು ಪಡೆದರು. ಆದರೆ ಅಷ್ಟೊತ್ತಿಗಾಗಲೇ ಅವರು ಹಾಸಿಗೆ ಹಿಡಿಯಲು ಸಜ್ಜಾಗಿದ್ದರು. 1988ರ ಹೊತ್ತಿಗೆ ಮಾತನಾಡಲು ಮಾತ್ರ ಹಾಕಿಂಗ್ ಗೆ ಸಾಧ್ಯವಿತ್ತು. ಇದರ ನಡುವೆಯೇ ಅವರು ತಮ್ಮ ಜನಪ್ರಿಯ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಬರೆದು ಮುಗಿಸಿದರು. ಈ ಪುಸ್ತಕದ ಒಂದು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾದವು. ಆದರೆ ಈ ಬಗ್ಗೆ ಹಾಕಿಂಗ್ ಹೇಳಿದ್ದು ಏನು ಗೊತ್ತಾ? “ಅತೀ ಹೆಚ್ಚು ಮಾರಾಟವಾದ ಪುಸ್ತಕಗಳನ್ನು ಜನ ಓದುವುದಿಲ್ಲ,” ಎಂದು. ಹೀಗೊಂದು ಹಾಸ್ಯ ಪ್ರಜ್ಞೆ ಅವರಿಗೆ ಜೀವನದುದ್ದಕ್ಕೂ ಇತ್ತು.

ಹಾಕಿಂಗ್ ಏನೇ ಹೇಳಲಿ ಅವರ ಪುಸ್ತಕ ಬಿಸಿ ದೋಸೆಯಂತೆ ಖರ್ಚಾಯಿತು. ಶ್ರೀಸಾಮಾನ್ಯರ ತಲೆಯೊಳಗೆ ಕಾಸ್ಮಾಲಜಿಯಂಥ ಕ್ಲಿಷ್ಟ ವಿಚಾರವನ್ನು ಹಾಕಿಂಗ್ ದಾಟಿಸಿದರು. ಇದೊಂದೇ ವಿಷಯದಲ್ಲಿ ಅಲ್ಲ, ಕಬ್ಬಿಣದ ಕಡಲೆ ಎಂದೇ ಕರೆಯುವ ವಿಜ್ಞಾನದ ಹಲವು ವಿವರಣೆಗಳನ್ನು ಸರಳ, ಸುಂದರವಾಗಿ ಪೋಣಿಸಿ ಜನರಿಗೆ ಉಣಬಡಿಸುವ ಕಲೆ ಅವರಿಗೆ ಒಲಿದಿತ್ತು. ಹಾಕಿಂಗ್ ಬರವಣಿಗೆ, ಸಿದ್ಧಾಂತಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಬಿಬಿಸಿಯ ಹಾಸ್ಯ ಸರಣಿ ‘ರೆಡ್ ಡ್ವಾರ್ಫ್’ನಲ್ಲಿ ಮಿಂಚಿದರು. ಜತೆಗೆ ಹಲವು ಟಿವಿ ಕಾರ್ಯಕ್ರಮಗಳಲ್ಲೂ ಅವರು ಕಾಣಿಸಿಕೊಂಡರು. ಈ ಕಾರಣಕ್ಕೆ ಅವರಿಗೆ ಸೆಲೆಬ್ರಿಟಿ ಇಮೇಜ್ ತಾನಾಗಿಯೇ ಬಂದೊದಗಿತ್ತು. ನಾಸಾ ಸೇರಿದಂತೆ ಹಲವರು ಬಣ್ಣಸಿದಂತೆ; ಅವರು ವಿಜ್ಞಾನ ಕ್ಷೇತ್ರದ ಅಘೋಷಿತ ರಾಯಭಾರಿಯಾಗಿ ರೂಪುಗೊಂಡಿದ್ದರು.

ಹೀಗೊಂದು ಸೆಲೆಬ್ರೆಟಿ ಇಮೇಜ್ ಅವರಿಗೆ ಒಲಿದು ಬರಲು ಬೇರೆ ಕಾರಣಗಳೂ ಇದ್ದವು. ವಿಜ್ಞಾನದ ಒಗಟುಗಳಿಗೆ ಲೆಕ್ಕಾಚಾರಗಳನ್ನು ಹಾಕದೆ, ಪ್ರಯೋಗಗಳನ್ನು ಮಾಡದೆ ಉತ್ತರ ನೀಡುವ ವಿಶಿಷ್ಟ ಶಕ್ತಿ ಸ್ಟೀಫನ್ ಹಾಕಿಂಗ್‌ಗೆ ಒಲಿದಿತ್ತು. ಕಪ್ಪು ರಂಧ್ರಗಳು ಶಕ್ತಿಯನ್ನು ಹೊರಬಿಟ್ಟು ಏನೂ ಇಲ್ಲದ ನಿರ್ವಾತಗಳಾಗುತ್ತವೆ ಎಂದು ಹಾಕಿಂಗ್‌ ಪ್ರತಿಪಾದಿಸಿದರು. ಇದಕ್ಕೆ ‘ಹಾಕಿಂಗ್ ರೇಡಿಯೇಷನ್’ ಎನ್ನಲಾಗುತ್ತದೆ. ಈ ಭೂಮಿ, ನಕ್ಷತ್ರ, ಜಗತ್ತು ಸಿದ್ಧ ಸೂತ್ರಗಳ ಪ್ರಕಾರವೇ ರಚನೆಯಾಗಿದೆ ಎಂದು ಸ್ಟೀಫನ್ ಹಾಕಿಂಗ್ ಕುಂತ ಕುರ್ಚಿಯಲ್ಲೇ ಹೇಳಿದಾಗ ಹಲವರು ಅವರತ್ತ ತಿರುಗಿ ನೋಡಿದರು. ಹೀಗೆ ಕುಂತಲ್ಲೇ ಕೂತು ಅವರು ವಿಜ್ಞಾನದ ಆಳಕ್ಕೆ ಇಳಿಯುತ್ತಿದ್ದರು.

ಹಾಗಂಥ ಅವರಿಗೆ ತಾವು ಜೀವಮಾನವಿಡಿ ಕುರ್ಚಿಗೆ ಅಂಟಿಕೊಂಡು ಕೂರಬೇಕಾಯಿತಲ್ಲ ಎಂದು ಬೇಸರವಿರಲಿಲ್ಲ. ತಾವು ರೋಗಕ್ಕೆ ಒಳಗಾಗಿದ್ದರಿಂದ ತಮಗೆ ಲಾಭವಾಗಿದೆ ಎಂದು ಹಾಕಿಂಗ್ ನಂಬಿಕೊಂಡಿದ್ದರು. ತಮಗೆ ಖಾಯಿಲೆ ಬರುವ ಮೊದಲು ಜೀವನ ವೈರಾಗ್ಯ ಮೂಡಿಸಿತ್ತು ಎಂದು ಅವರು ಹೇಳುತ್ತಿದ್ದರು. ತಮ್ಮ ಧನಾತ್ಮಕ ಚಿಂತನೆಗಳಾಚೆಗೆ ದೈಹಿಕ ನ್ಯೂನ್ಯತೆಗಳ ಕಾರಣಕ್ಕೆ ಅವರು ಇತರರ ಮೇಲೆ ಅವಲಂಬಿತರಾಗಬೇಕಾಗಿ ಬಂತು. ಹಾಕಿಂಗ್ ಹಾಸಿಗೆ ಹಿಡಿದ ನಂತರ ಸುಮಾರು 20 ವರ್ಷಗಳ ವರೆಗೆ ಮೊದಲ ಹೆಂಡತಿ ಜೇನ್ ಅವರನ್ನು ನೋಡಿಕೊಳ್ಳುತ್ತಿದ್ದರು. ಜೇನ್ 20 ವರ್ಷಗಳ ಕಾಲ ಪತಿ ಹಾಕಿಂಗ್ ಸೇವೆ ಮಾಡಿದರು. ಇದರ ಮಧ್ಯದಲ್ಲೇ ಪತ್ನಿಗೆ ಅವರು ಅಘಾತಕಾರಿ ಸುದ್ದಿ ನೀಡಿದ್ದರು. ಅದು ಅವರ ವಿಚ್ಛೇದನ.

ತನ್ನನ್ನು ನೋಡಿಕೊಳ್ಳುತ್ತಿದ್ದ ದಾದಿಗಾಗಿ ಹೆಂಡತಿಯನ್ನು ಹಾಕಿಂಗ್ ಬಿಟ್ಟಾಗ ಅವರ ಗೆಳೆಯರು ಮತ್ತು ಮಕ್ಕಳು ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದರು. ಮುಂದೆ 1995ರಲ್ಲಿ ಹಾಕಿಂಗ್ ನರ್ಸ್ ಒಬ್ಬರನ್ನು ಮದುವೆಯಾದರು. ಇದೆಲ್ಲಾ ನಡೆದ ನಂತರ 2000ನೇ ಇಸವಿ ಹೊತ್ತಿಗೆ ಹಾಕಿಂಗ್ ಪದೇ ಪದೇ ಕೇಂಬ್ರಿಡ್ಜ್ ನಲ್ಲಿರುವ ಆಸ್ಪತೆಗೆ ಭೇಟಿ ನೀಡಬೇಕಾಗಿ ಬರುತ್ತಿತ್ತು. ವಿವಿಧ ಗಾಯಗಳಿಗೆ ಚಿಕಿತ್ಸೆ ತೆಗೆದುಕೊಳ್ಳಲು ಅವರು ಆಸ್ಪತ್ರೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಹಾಕಿಂಗ್ ತಮ್ಮ ಮೇಲೆ ಯಾರೋ ದೈಹಿಕ ಹಲ್ಲೆ ಮಾಡುತ್ತಿದ್ದಾರೆ, ಬೈಯುತ್ತಿದ್ದಾರೆ ಎನ್ನುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಿಚಾರಣೆಗೂ ಒಳಪಡಿಸಿದ್ದರು. ಆದರೆ ಗೊತ್ತಾಗಿದ್ದೇನೆಂದರೆ ಹಾಕಿಂಗ್ ತಮ್ಮ ವೀಲ್ ಚೇರ್ ನಲ್ಲೇ ಅಜಾಗರೂಕತೆಯಿಂದ ಓಡಾಡುತ್ತಿದ್ದರು. ಇದರಿಂದ ಅವರಿಗೆ ಗಾಯಗಳಾಗುತ್ತಿದ್ದವು. ಮುಂದೆ ಪೊಲೀಸರು ಈ ಬಗ್ಗೆ ಯಾರ ಮೇಲೂ ದೂರು ದಾಖಲಿಸಲಿಲ್ಲ.

ಹಾಕಿಂಗ್ ಪಾರ್ಶವಾಯ ಪೀಡಿತರಾಗಿದ್ದರೂ ಕೇಂಬ್ರಿಡ್ಜ್ ವಿವಿಯಲ್ಲಿ ಗಣಿತ ಪ್ರಾಧ್ಯಾಪಕರಾಗಿ ಮುಂದುವರಿದಿದ್ದರು. ಅವರು ಎಷ್ಟಮಟ್ಟಿಗೆ ದೈಹಿಕ ನ್ಯೂನ್ಯತೆ ಒಳಗಾಗಿದ್ದರು ಎಂದರೆ ಅವರ ಧ್ವನಿಪೆಟ್ಟಿಗೆಯಿಂದ ಶಬ್ದವೂ ಹೊರಬರುತ್ತಿರಲಿಲ್ಲ. ಅದಕ್ಕಾಗಿ ಗಂಟಲಿಗೆ ಧ್ವನಿವರ್ಧಕವನ್ನು ಜೋಡಿಸಲಾಗಿತ್ತು. ಆದರೆ ಹಾಕಿಂಗ್ ಗೆ ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ. ಈ ಸಂದರ್ಭದಲ್ಲೆಲ್ಲಾ ಅವರ ಗಾಲಿ ಕುರ್ಚಿಗೆ ಜೋಡಿಸಲಾದ ಕಂಪ್ಯೂಟರ್ ಸಹಾಯ ಮಾಡುತ್ತಿತ್ತು. ಹಾಕಿಂಗ್ ಮಾತನಾಡುವ ಶಬ್ದವನ್ನು ಗ್ರಹಿಸಿ ಸರಿಯಾದ ಪದವನ್ನು ಅದು ಉಚ್ಚರಿಸುತ್ತಿತ್ತು. ಈ ಎಲ್ಲಾ ಸಂಕಷ್ಟಗಳ ನಡುವೆ 2001ರಲ್ಲಿ ಅವರ ಎರಡನೇ ಪುಸ್ತಕ ‘ಯುನಿವರ್ಸ್ ಇನ್ ಎ ನಟ್‌ ಶೆಲ್‌’ ಪ್ರಕಟವಾಯಿತು. ಇದಕ್ಕೂ ಉತ್ತಮ ಪ್ರತಿಕ್ರಿಯೆ ಬಂತು. ಅವರೇ ಒಮ್ಮೆ ಬರೆದುಕೊಂಡಂತೆ ಮೋಟರ್ ನ್ಯೂರಾನ್ ಖಾಯಿಲೆ ಅವರ ವಯಸ್ಕ ಜೀವನವನ್ನು ಕಿತ್ತುಕೊಂಡರೂ, ಆಕರ್ಷಕ ಕುಟುಂಬ ಮತ್ತು ಯಶಸ್ವಿ ಜೀವನ ಸಾಗಿಸುವುದನ್ನು ಅದರಿಂದ ತಡೆಯಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ತಮ್ಮ ಖಾಯಿಲೆ ಬಗ್ಗೆ ಮಾತನಾಡುತ್ತಿದ್ದ ಹಾಕಿಂಗ್ “ಯಾರೂ ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ,” ಎನ್ನುತ್ತಿದ್ದರು.

ಹಾಕಿಂಗ್ ಹಲವು ಬಾರಿ ಭವಿಷ್ಯಗಳನ್ನೂ ನುಡಿಯುತ್ತಿದ್ದರು. ಇನ್ನು 30 ವರ್ಷಗಳಲ್ಲಿ ಮನುಷ್ಯ ಚಂದ್ರನ ಮೇಲೆ ವಾಸ್ತವ್ಯ ಹೂಡಬಹುದು. 50 ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಸರಾಗವಾಗಿ ಹೋಗಿ ಬರಬಹುದು. 200 ವರ್ಷಗಳಲ್ಲಿ ಇತರ ಗ್ರಹಗಳ ಮೇಲೂ ಪ್ರಾಬಲ್ಯ ಸಾಧಿಸಬಹುದು. ಕ್ವಾಂಟಂ ಮೆಕಾನಿಕ್ಸ್ ಸಮರ್ಪಕವಾಗಿ ಬಳಸಿಕೊಂಡಲ್ಲಿ ನೀವು ಈಗ ಮುದುಕರಾಗಿದ್ದರೆ ನಿಮ್ಮ ಯೌವ್ವನದ ದಿನಗಳಿಗೊಮ್ಮೆ ಹೋಗಿ ಬರಬಹುದು.. ಹೀಗೆ ಅವರ ಭವಿಷ್ಯಗಳ ಸರಣಿ ಮುಂದುವರಿಯುತ್ತಿತ್ತು. ಭವಿಷ್ಯ ನುಡಿದು ನಮ್ಮನ್ನೆಲ್ಲಾ ಅನಾಥವಾಗಿ ಬಿಟ್ಟು ಹಾಕಿಂಗ್ ಹೊರಟು ಹೋಗಿದ್ದರು.

ಇದೀಗ ಅವರ ಹೆಸರಿನ ಫೌಂಡೇಶನ್‌ಗಾಗಿ ಅವರು ಬಳಸುತ್ತಿದ್ದ ವಸ್ತುಗಳನ್ನು ಹರಾಜು ಹಾಕಲಾಗಿದ್ದು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಹಣವನ್ನು ಕೊಟ್ಟು ಜನ ಕೊಂಡುಕೊಂಡಿದ್ದಾರೆ. ಕಾಲದ ಓಘದಲ್ಲಿ ಸ್ಥಬ್ಧಗೊಂಡ ವಿಜ್ಞಾನಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.