samachara
www.samachara.com
ಈ ಅನಾಮಿಕ ‘ಜೋಡಿ ಹಕ್ಕಿ’ ಬಗ್ಗೆ ನಿಮಗೇನಾದರೂ ಗೊತ್ತಾ?
ಫೋಕಸ್

ಈ ಅನಾಮಿಕ ‘ಜೋಡಿ ಹಕ್ಕಿ’ ಬಗ್ಗೆ ನಿಮಗೇನಾದರೂ ಗೊತ್ತಾ?

ಅದೊಂದು ಅದ್ಭುತ ಜಾಗ. ಅಲ್ಲಿನ ಬೆಟ್ಟವೊಂದರ ತುತ್ತ ತುದಿಯಲ್ಲಿ ಹುಡುಗನೊಬ್ಬ ಮಂಡಿಯೂರಿ ತನ್ನ ಹುಡುಗಿಗೆ ಪ್ರಪೋಸ್‌ ಮಾಡುತ್ತಿದ್ದ. ಅಂದ ಹಾಗೆ ಈ ಹುಡುಗ-ಹುಡುಗಿ ಯಾರು ಎಂಬುದೇ ಮಿಲಿಯನ್‌ ಡಾಲರ್‌ ಪ್ರಶ್ನೆ!

ಆತ ಮ್ಯಾಥ್ಯೂ ಡಿಪ್ಪಲ್. 24 ವರ್ಷ ವಯಸ್ಸಿನ ಅಮೆರಿಕಾದ ಓರ್ವ ಸಾಮಾನ್ಯ ಫ್ರೀಲಾನ್ಸ್‌ ಛಾಯಾಗ್ರಾಹಕ. ಅದೊಂದು ದಿನ ತನ್ನ ಗೆಳೆಯನೊಂದಿಗೆ ಆತ ಕ್ಯಾಲಿಫೋರ್ನಿಯಾದಲ್ಲಿರುವ ‘ಯೊಸಮೈಟ್‌ ನ್ಯಾಷನಲ್‌ ಪಾರ್ಕ್‌’ಗೆ ಪ್ರವಾಸ ಹೊರಟ.

ಅಲ್ಲೊಂದು 3,500 ಅಡಿ ಎತ್ತರದ ಕಡಿದಾದ ಸುಂದರ ಬೆಟ್ಟವಿದೆ. ‘ಆ ಬೆಟ್ಟವನ್ನು ನಾನು ಹತ್ತುತ್ತೇನೆ. ನೀನು ಇಲ್ಲಿಂದ ಚಿತ್ರ ತೆಗೆ’ ಎಂದು ಹೇಳಿ ಆತನ ಗೆಳೆಯ ಜೋಶ್‌ ಬೆಟ್ಟ ಏರಲು ಹೊರಟಿದ್ದ. ಗೆಳೆಯ ಬೆಟ್ಟ ಏರುವುದನ್ನೇ ಕಾಯುತ್ತಾ ಕುಳಿತ ಮ್ಯಾಥ್ಯೂ ಡಿಪ್ಪಲ್‌ ಹಾಗೇ ಸುಮ್ಮನೆ ಬೆಟ್ಟದ ಚಿತ್ರವೊಂದನ್ನು ಸೆರೆ ಹಿಡಿದಿದ್ದ.

ಚಿತ್ರ ಅದ್ಭುತವಾಗಿತ್ತು. ಮುಸ್ಸಂಜೆಯ ಸೂರ್ಯನ ಕೆಂಪಾದ ಕಿರಣಗಳು ಬೆಟ್ಟವನ್ನು ಹಾದು ಕಣಿವೆಯತ್ತ ಇಳಿಯುತ್ತಿದ್ದವು. ಸಂಜೆಯ ಬೆಳಕು ಚಿತ್ತಾರ ಬಿಡಿಸಿತ್ತು. ಕೆಳಗಡೆ ಕಣಿವೆಯಲ್ಲಿ ನದಿ ಹೊಳೆಯುತ್ತಾ ಹರಿಯುತ್ತಿತ್ತು. ಇವೆಲ್ಲದರ ನಡುವೆ ಬೆಟ್ಟದ ತುತ್ತ ತುದಿಯಲ್ಲಿ ಹುಡುಗನೊಬ್ಬ ಮಂಡಿಯೂರಿ ತನ್ನ ಹುಡುಗಿಗೆ ಪ್ರಪೋಸ್‌ ಮಾಡುತ್ತಿದ್ದ. ಫೊಟೋ ಫ್ರೇಮ್‌ನೊಳಗೆ ಇದು ಸೆರೆಯಾಗಿತ್ತು. ಸುಂದರ ಬೆಳಕಿನ ಹಿನ್ನೆಲೆ... ಅತ್ಯಧ್ಭುತ ಜಾಗ... ಅಲ್ಲೊಂದು ಜೋಡಿ ಹಕ್ಕಿ... ಅವರ ಪ್ರಪೋಸಲ್... ಸೂಕ್ತ ಸಮಯಕ್ಕೊಂದು ಕ್ಯಾಮೆರಾ ಕ್ಲಿಕ್‌. ಅಪರೂಪದ ಚಿತ್ರವೊಂದು ಸೆರೆಯಾಗಲು ಅಷ್ಟು ಸಾಕಿತ್ತು.

ಈ ಅದ್ಭುತ ಚಿತ್ರ ಸೆರೆಯಾದ ಬೆನ್ನಲ್ಲೇ ಆ ಪ್ರಣಯ ಪಕ್ಷಿಗಳು ಯಾರಿರಬಹುದು ಎಂಬ ಸಹಜ ಕುತೂಹಲ ಡಿಪ್ಪಲ್‌ ತಲೆಯಲ್ಲಿ ಮೊಳಕೆಯೊಡೆಯಿತು. ಸರಿ ಅವರನ್ನು ಹುಡುಕಲು ಹೊರಟರು. ಆದರೆ ಅವರು ಪತ್ತೆಯಾಗಲಿಲ್ಲ. ಕೊನೆಗೆ ಅವರು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದು ಈ ಜೋಡಿಯ ಬಗ್ಗೆ ಮಾಹಿತಿ ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ ಅವರ ದುರಾದೃಷ್ಟಕ್ಕೆ ಈ ಜೋಡಿಗಳು ಇನ್ನೂ ಪತ್ತೆಯಾಗಿಲ್ಲ.

ಅಕ್ಟೋಬರ್‌ 6ರ ಸಂಜೆ ಅವರು ಈ ಚಿತ್ರವನ್ನು ಸೆರೆ ಹಿಡಿದಿದ್ದರು. ಇದನ್ನವರು ಟ್ವಿಟ್ಟರ್‌, ಪೇಸ್ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಅಲ್ಲಿಂದ ಸಾವಿರಾರು ಜನರು ಅದನ್ನು ಶೇರ್‌ ಮಾಡಿದ್ದಾರೆ. ಸದ್ಯಕ್ಕೆ ಅಮೆರಿಕಾದ ಸಾಮಾಜಿಕ ಜಾಲತಾಣಗಳ ಚರ್ಚೆಯಲ್ಲಿ ಈ ಚಿತ್ರವೇ ಹಾಟ್‌ ಟಾಪಿಕ್‌.

ಫೊಟೋ ಕಥನ ಬಿಚ್ಚಿಟ್ಟ ಡಿಪ್ಪಲ್‌

‘ಯೊಸಮೈಟ್‌’ ಅತ್ಯುತ್ತಮ ಸ್ಥಳಗಳಲ್ಲಿ ಒಂದು. “ನಾನು ತುತ್ತತುದಿಯಿಂದ ತೆಗೆದ ಇಲ್ಲಿನ ಹಲವಾರು ಚಿತ್ರಗಳನ್ನು ನೋಡಿದ್ದೆ. ಹಾಗಾಗಿ ಅದನ್ನು ನಾನು ಕಣ್ಣಾರೇ ನೋಡಬೇಕು ಎಂದುಕೊಂಡಿದ್ದೆ. ಸೂರ್ಯಾಸ್ತಮಾನಕ್ಕೆ ನಾವು ಅಲ್ಲಿಗೆ ಹೋಗಬೇಕು ಎಂಬ ಯೋಜನೆ ಹಾಕಿಕೊಂಡೆವು. ನಂತರ ಏನಾಯಿತು ಎಂಬುದು ನಿಮಗೆ ಗೊತ್ತೇ ಇದೆಯಲ್ಲ,” ಎನ್ನುತ್ತಾರೆ ಮ್ಯಾಥ್ಯೂ ಡಿಪ್ಪಲ್.

ಬಿಬಿಸಿ ಜತೆ ಮಾತನಾಡಿರುವ ಅವರು, ನಾನು ನನ್ನ ಗೆಳೆಯನ ಫೊಟೋ ತೆಗೆಯಲು ಕ್ಯಾಮೆರಾ ಸಿದ್ದಪಡಿಸಿಟ್ಟುಕೊಂಡಿದ್ದೆ. ನಾನು ಸಮಯಕ್ಕೆ ಸರಿಯಾಗಿ ಜಸ್ಟ್‌ ಕ್ಲಿಕ್‌ ಮಾಡಿದೆ ಅಷ್ಟೇ ಎಂದಿದ್ದಾರೆ. ನಾನು ಸರಿಯಾದ ಜಾಗದಲ್ಲಿ ಸರಿಯಾದ ಸಮಯಕ್ಕೆ ಇದ್ದೆ ಎನ್ನುವುದು ಡಿಪ್ಪಲ್‌ ಖಚಿತ ಅಭಿಪ್ರಾಯ. ಅದು ನಿಜ ಕೂಡು.

ನಂತರ ಜೋಶ್‌ ಬೆಟ್ಟ ಹತ್ತಿ ಸರಿಯಾದ ಜಾಗಕ್ಕೆ ಬಂದರು. ಅವರ ಫೊಟೋ ತೆಗೆದ ನಂತರ ಡಿಪ್ಪಲ್‌ ನೇರವಾಗಿ ತಾವೂ ಬೆಟ್ಟದ ದಾರಿಯಲ್ಲಿ ಓಡಿದರಂತೆ. ಚಿತ್ರದಲ್ಲಿದ್ದ ಜೋಡಿಗೆ ಅವರ ಚಿತ್ರವನ್ನು ತೋರಿಸುವುದು ಅವರ ಉದ್ದೇಶವಾಗಿತ್ತು. ದಾರಿಯಲ್ಲಿ ಅವರಿಗೆ ಸುಮಾರು ಜನರೂ ಸಿಕ್ಕರು. ಅದರಲ್ಲಿ ಕೆಲವು ಜೋಡಿಗಳೂ ಇದ್ದರು. ಆದರೆ ಅವರ್ಯಾರೂ ಈ ಚಿತ್ರದಲ್ಲಿರುವುದು ನಾವೇ ಎಂದು ಒಪ್ಪಿಕೊಳ್ಳಲಿಲ್ಲವಂತೆ. ಹೀಗಾಗಿ ಜೋಡಿ ಸಿಗದೆ ಅವರು ನಿರಾಶರಾಗಿದ್ದಾರೆ.

ಕೊನೆಗೆ ದಾರಿ ಕಾಣದೆ ಪ್ರವಾಸ ಮುಗಿಸಿ ಬಂದವರೇ ಸಾಮಾಜಿಕ ಜಾಲತಾಣಗಳಿಗೆ ಈ ಚಿತ್ರವನ್ನು ಅಪ್ಲೋಡ್‌ ಮಾಡಿದ್ದಾರೆ. ಮಾಡಿ ‘ನಿಮಗೇನಾದರೂ ಇವರು ಗೊತ್ತಾ?’ ಎಂದು ಕೇಳಿದ್ದಾರೆ. “ಈ ಫೊಟೋವನ್ನು ಅವರಿಗೆ ತಲುಪಿಸಬೇಕು ಎಂದು ನಾನು ಪ್ರಾಮಾಣಿಕವಾಗಿ ಬಯಸುತ್ತಿದ್ದೇನೆ. ಏಕೆಂದರೆ ಇದು ಅವರಿಗೆ ವಿಶೇಷವಾದ, ವಿಶೇಷ ಕ್ಷಣವಾಗಿದೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಸಾವಿರಾರು ಜನರು ಅವರ ಈ ಪೋಸ್ಟ್‌ ಶೇರ್‌ ಮಾಡಿ ಡಿಪ್ಪಲ್‌ ಪ್ರಶ್ನೆ ಮತ್ತು ಚಿತ್ರವನ್ನು ಇನ್ನೂ ಹಲವಾರು ಜನಕ್ಕೆ ತಲುಪಿಸಿದ್ದಾರೆ. ಆದರೇನು ಮಾಡುವುದು ಇನ್ನೂ ಆ ಚಿತ್ರದಲ್ಲಿರುವ ಜೋಡಿ ಹಕ್ಕಿಗಳು ಸಿಕ್ಕಿಲ್ಲ.

ನಿಮಗೇನಾದರೂ ಗೊತ್ತಿದ್ದರೆ ಹೇಳಿ ಅಥವಾ ನೀವೇ ಆಗಿದ್ದರೆ ಒಪ್ಪಿಕೊಳ್ಳಿ; ಡಿಪ್ಪಲ್‌ನ ಕುತೂಹಲಕ್ಕೊಂದು ಪೂರ್ಣ ವಿರಾಮ ಹಾಕಿ.