samachara
www.samachara.com
‘ಪಬ್‌ಜಿ ಯುದ್ಧಭೂಮಿ’ಯಲ್ಲಿ ಯುವಜನತೆ; ಆನ್‌ಲೈನ್‌ ಗೇಮಿಂಗ್ ಲೋಕದಲ್ಲೊಂದು ಹೊಸ ಟ್ರೆಂಡ್‌!
ಫೋಕಸ್

‘ಪಬ್‌ಜಿ ಯುದ್ಧಭೂಮಿ’ಯಲ್ಲಿ ಯುವಜನತೆ; ಆನ್‌ಲೈನ್‌ ಗೇಮಿಂಗ್ ಲೋಕದಲ್ಲೊಂದು ಹೊಸ ಟ್ರೆಂಡ್‌!

ಅಂತರ್ಜಾಲದಲ್ಲಿ ಜನ ನಾನಾ ಕಾರಣಗಳಿಗೆ ಸಮಯ ಕಳೆಯುತ್ತಾರೆ. ಅದರಲ್ಲಿ ಗೇಮಿಂಗ್‌ ಎಂಬುದು ಪ್ರಮುಖ ಕೆಟಗರಿ. ಅದರಲ್ಲಿ ಹೊಸತೇನು ನಡೆಯುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ. 

Team Samachara

ಅವರು ನಾಲ್ವರು ವಿಮಾನದಿಂದ ಕೆಳಗೆ ಜಂಪ್ ಮಾಡುತ್ತಾರೆ. ಪ್ಯಾರಚೂಟ್ ಸಹಾಯದಿಂದ ಕೆಳಕ್ಕೆ ಇಳಿದವರೆ ಎದುರಿಗೆ ಕಾಣುವ ಮನೆಗಳತ್ತ ಓಡುತ್ತಾರೆ. ಅಲ್ಲಿ ಸಿಕ್ಕ ಶಸ್ತ್ರಗಳನ್ನು, ಮೆಡಿಕಲ್ ಕಿಟ್‌ಗಳನ್ನು, ಇನ್ನಿತರ ಯುದ್ಧಕ್ಕೆ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದುವರಿಯುತ್ತಾರೆ. ಅವರ ಇಳಿದ ಜಾಗದ ಸುತ್ತ ವೃತ್ತವೊಂದು ಸಣ್ಣದಾಗುತ್ತ ಬರುತ್ತದೆ. ಇವರು ನೂರಾರು ಜನರ ನಡುವೆ ಹೋರಾಡಿ ಬದುಕಿ ಉಳಿಯುತ್ತಾರೆ.

ಯಾವುದೋ ಹಾಲಿವುಡ್ ವಾರ್ ಸಿನೆಮಾ ಕತೆಯಂತೆ ಕಾಣುವ ಇದು ಸದ್ಯ ಟ್ರೆಂಡಿಂಗ್‌ನಲ್ಲಿರುವ ‘ಪಬ್‌ಜಿ’ ಎಂದು ಕರೆಯುವ ಆನ್‌ಲೈನ್ ಗೇಮ್‌ವೊಂದರ ಕಥಾ ಹಂದರ. ವಿಶೇಷ ಅಂದರೆ ಈ ಯುದ್ಧ ಭೂಮಿಯ ಆಟದಲ್ಲಿ ಪರಸ್ಪರ ಮಾತನಾಡಿಕೊಳ್ಳಬಹುದು. ಮುಂದಿನ ನಡೆಗಳ ಬಗ್ಗೆ ಚರ್ಚಿಸಬಹುದು. ಕೊನೆಗೆ ಬದುಕುಳಿದರೆ ‘ಗೆದ್ದೆವು’ ಎಂದು ಹಮ್ಮೆ ಪಡಬಹುದು. ಮಧ್ಯದಲ್ಲೇ ಸತ್ತು ಹೋದರೆ, “ಛೆ...’’ ಅನ್ನಬಹುದು.

ಬೆಂಗಳೂರು ಸೇರಿದಂತೆ ಇವತ್ತು ದೇಶದಲ್ಲಿ ಪಬ್‌ಜಿ ಆಡುವವರ ಸಂಖ್ಯೆ ಗಣನೀಯವಾಗಿ ಏರಿಯಾಗುತ್ತಿದೆ. 16ರಿಂದ 25ವರ್ಷ ಒಳಗಿನ ಯುವ ಸಮುದಾಯ ದಿನದಲ್ಲಿ ಹೆಚ್ಚು ಕಾಲವನ್ನು ಇದಕ್ಕಾಗಿಯೇ ಮೀಡಲಿಡುತ್ತಿದ್ದಾರೆ. 1970ರಲ್ಲಿ ಆರಂಭವಾದ ಆನ್‌ಲೈನ್‌ ಗೇಮ್ ಎಂಬ ವಿಭಾಗವೊಂದು ಇವತ್ತು ಹೊಸ ಅವತಾರದಲ್ಲಿ ನಮ್ಮೆದುರು ಬಂದು ನಿಂತಿದೆ.

ಪಬ್‌ಜಿ ಗೇಮ್‌ ಯುವಜನತೆಯ ಸಮಯವನ್ನು ತಿಂದು ಹಾಕುತ್ತಿರುವುದು ಅದರ ಒಂದು ಮುಖ ಅಷ್ಟೆ. ಇನ್ನೊಂದು ಆಯಾಮದಲ್ಲಿ ಇದು ಅನೇಕರಿಗೆ ಹಣ ಗಳಿಸುವ ಮಾರ್ಗವೂ ಆಗಿದೆ. ಮನೆಯಲ್ಲಿ ಕುಳಿತು ಗೇಮ್ ಆಡುವ ಮೂಲಕ ದುಡ್ಡು ಗಳಿಸುವ ಹೊಸ ಮಾರ್ಗವೊಂದನ್ನು ಇದು ಸೃಷ್ಟಿಸಿಕೊಟ್ಟಿದೆ.

ಇವತ್ತಿಗೆ ಯೂ- ಟ್ಯೂಬ್‌ನಲ್ಲಿ ಪಬ್‌ಜಿ ಆಡುವವರು ಲೈವ್‌ ನೀಡುತ್ತಿದ್ದಾರೆ. ಅದನ್ನು ನಮ್ಮ ಸುದ್ದಿ ವಾಹಿನಿಗಳ ಲೈವ್‌ ವೀಕ್ಷಿಸುವವರಿಗಿಂತ ಮೂರು- ನಾಲ್ಕು ಪಟ್ಟು ಹೆಚ್ಚು ಜನ ವೀಕ್ಷಿಸುತ್ತಿರುತ್ತಾರೆ. ಅವರಿಗೆ ಖುಷಿ ಆದರೆ ಆಟಗಾರರು ನೀಡುವ ಪೇಟಿಎಂಗೆ ಹಣ ನೀಡುತ್ತಾರೆ. ದಿನಕ್ಕೆ ಏನಿಲ್ಲ ಅಂದರೆ ಲಕ್ಷಾಂತರ ರೂಪಾಯಿ ಕಮಾಯಿ ಇದು. ಸ್ಯಾಂಪಲ್‌ ಒಂದು ಇಲ್ಲಿದೆ. ಇಂತಹ ಹಲವು ಚಾನಲ್‌ಗಳು ಯೂ- ಟ್ಯೂಬ್‌ನಲ್ಲಿ ಸಿಗುತ್ತವೆ.

“ಕಂಪ್ಯೂಟರ್‌ಗಳ ಇತಿಹಾಸ ಆರಂಭವಾಗುವುದೇ ಅವುಗಳ ಗೇಮ್‌ಗಳ ಮೂಲಕ. ಸಿಟ್ಟು. ಆವೇಷ, ಆಕ್ರೋಶ, ಡಾಮಿನೆನ್ಸ್ ಎಲ್ಲಾ ಭಾವನೆಗಳನ್ನು ಕೆರಳಿಸುವ ಅವುಗಳಿಗೆ ಯುವಜನರು ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ. ಒಂದು ಹಂತ ದಾಟುತ್ತಿದ್ದಂತೆ ಅದು ಚಟವಾಗಿ ಬದಲಾಗುತ್ತದೆ,’’ ಎನ್ನುತ್ತಾರೆ ಬೆಂಗಳೂರು ಮೂಲದ ಮನೋ ವಿಜ್ಞಾನಿ ಡಾ. ಅ. ಶ್ರೀಧರ.

ಆನ್‌ಲೈನ್ ಗೇಮ್‌ಗಳ ಚಟಕ್ಕೆ ಬಲಿಯಾದ ಹಲವರನ್ನು ಡಾ. ಶ್ರೀಧರ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಅವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ. “ಹೆಚ್ಚಾಗಿ ಮಧ್ಯಮ ವರ್ಗದ ಜನ ಮಕ್ಕಳು ಗೇಮ್‌ಗಳಿಗೆ ಅಡಿಕ್ಟ್ ಆಗಿದ್ದಾರೆ ಎಂಬ ದೂರು ಹೊತ್ತು ಬರುತ್ತಾರೆ. ವಿಶೇಷ ಅಂದರೆ ಮಕ್ಕಳು ಹಾಗೆ ಕಂಪ್ಯೂಟರ್, ಮೊಬೈಲ್‌ ಗೇಮ್‌ಗಳಿಗೆ ಬಲಿಯಾಗಲು ಪೋಷಕರೇ ಕಾರಣರಾಗಿರುತ್ತಾರೆ,’’ ಎಂದು ಮೂಲ ಎಳೆಯನ್ನು ಬಿಡಿಸುತ್ತಾರೆ ಡಾ. ಶ್ರೀಧರ.

ಮನೋ ವಿಜ್ಞಾನಿಗಳವರೆಗೆ ಬರುವ ವರ್ಗದ ಯುವ ಜನರು ಪಬ್‌ಜಿಯಂತಹ ಗೇಮ್‌ಗಳಲ್ಲಿ ಮುಳುಗಿ ಹೋಗಿರುತ್ತಾರೆ. ಆದರೆ ಇನ್ನೊಂದು ವರ್ಗವಿದೆ. ಅದು ಟಿವಿಗಳಲ್ಲಿ ಬರುವ ‘ರಮ್ಮಿ ಆಡಿ, ಹಣ ಗಳಿಸಿ’ ಎಂಬ ಜಾಹೀರಾತಿಗೆ ಬಲಿಯಾದ ಸಮುದಾಯ. ಬಹುತೇಕರು ತಳ ಸಮುದಾಯದವರು.

“ಬಾವ ಆಟೋ ಓಡಿಸುತ್ತಾರೆ. ನೈಟ್‌ ಡ್ಯೂಟಿಗೆ ಅಂತ ಹೇಳಿ ಮನೆಯಿಂದ ಸ್ವಲ್ಪ ದೂರದಲ್ಲಿ ಮಾಡಿಕೊಂಡು ಅಡ್ಡದಲ್ಲಿ ರಮ್ಮಿ ಆಡುತ್ತಿರುತ್ತಾರೆ. ಅವರ ರೀತಿಯ ಹಲವು ಸ್ನೇಹಿತರು ನಂದಿಷ್ಟು, ನಿಂದಿಷ್ಟು ಪಾಯಿಂಟ್ಸ್ ಎಂದು ಮಾತನಾಡುತ್ತಿರುತ್ತಾರೆ. ಮನೆಗೆ ಬಂದರೂ ಅದೇ ಮುಂದುವರಿಯುತ್ತದೆ. ಇದಕ್ಕಾಗಿ ದಿನಾ ಮನೆಯಲ್ಲಿ ಗಲಾಟೆಯಾಗುತ್ತದೆ. ಕೊನೆಗೆ ಮಕ್ಕಳಿಗೆ ಅಕ್ಕನ ಕೈಲಿ ಹೊಡೆತ ಬೀಳುತ್ತದೆ. ಈ ಕಾರಣಕ್ಕೆ ಮೊಬೈಲ್‌ನಲ್ಲಿ ಗೇಮ್ ಆಡುವವರನ್ನು ಕಂಡರೆ ನನಗೆ ಕೋಪ ಬರುತ್ತದೆ,’’ ಎನ್ನುತ್ತಾರೆ ಪತ್ರಿಕೋದ್ಯಮದ ವಿದ್ಯಾರ್ಥಿನಿಯೊಬ್ಬರು.

ಎಲೆಕ್ಟ್ರಾನಿಕ್ ಸಿಟಿ ಪಕ್ಕದ ಕೆಳ ಮಧ್ಯಮ ವರ್ಗದ ಪ್ರದೇಶದಲ್ಲಿ ವಾಸಿಸುವ ಅವರು ಆನ್‌ಲೈನ್ ಗೇಮ್‌ಗಳಿಂದ ಆಗುತ್ತಿರು ಸಾಮಾಜಿಕ ಸಮಸ್ಯೆಗಳನ್ನು ಹೀಗೆ ವಿವರಿಸುತ್ತಾರೆ.

ರಮ್ಮಿ ಆಡಿ, ಹಣ ಗಳಿಸಿ ಎಂದು ‘ರಮ್ಮಿ ಸರ್ಕಲ್’ ನೀಡಿದ ಜಾಹೀರಾತಿನ ಒಂದು ಪೋಸ್ಟರ್. 
ರಮ್ಮಿ ಆಡಿ, ಹಣ ಗಳಿಸಿ ಎಂದು ‘ರಮ್ಮಿ ಸರ್ಕಲ್’ ನೀಡಿದ ಜಾಹೀರಾತಿನ ಒಂದು ಪೋಸ್ಟರ್. 
/ಜಂಗಲ್ ರಮ್ಮಿ. 

ಹಲವು ಅಧ್ಯಯನಗಳು ಆನ್‌ಲೈನ್‌ ಗೇಮಿಂಗ್ ಎಂಬ ಕೆಟಗರಿಯ ಕುರಿತು ಅಂಕಿ ಅಂಶಗಳನ್ನು ಮುಂದಿಟ್ಟಿವೆ. ಸುಮಾರು 1.2 ಬಿಲಿಯನ್ ಜನ ಗೇಮಿಂಗ್‌ನಲ್ಲಿ ಮುಳುಗಿ ಹೋಗಿದ್ದಾರೆ ಎಂದು ಹೇಳುತ್ತವೆ ಅಧ್ಯಯನಗಳು. ವಾರದಲ್ಲಿ ಕನಿಷ್ಟ 6 ಗಂಟೆಗಳನ್ನು ಗೇಮಿಂಗ್‌ನಲ್ಲಿಯೇ ಕಳೆಯುವ ಸಂಖ್ಯೆ ಇದು. ಇನ್ನು, ಎಂತಹ ಜನ, ಯಾವ ಯಾವ ಗೇಮ್‌ಗಳನ್ನು ಆಡುತ್ತಾರೆ. ಅವುಗಳು ಅವರ ಮಾನಸಿಕ ಸ್ಥಿತಿಯ ಮೇಲೆ ಬೀರುವ ಪರಿಣಾಮಗಳೇನು ಎಂಬುದನ್ನು ಈ ಅಧ್ಯಯನಗಳ ವರದಿಗಳು ನೀಡಿವೆ. ಈ ಕುರಿತು ಆಸಕ್ತಿ ಇದ್ದವರು ಕೊಂಚ ಗೂಗಲ್ ಮಾಡಿದರೆ ಆನ್‌ಲೈನ್‌ ಗೇಮಿಂಗ್ ಗಂಭೀರತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ.

ಅಂತರ್ಜಾಲದಲ್ಲಿ ಹೆಚ್ಚು ಮಾರಾಟವಾಗುವುದು ‘ಸೆಕ್ಸ್‌’ ಎಂಬ ಜನಪ್ರಿಯ ಪ್ರತೀತಿಯೊಂದಿದೆ. ಅದು ಎಲ್ಲಾ ವಯೋಮಾನದವರು ಅಂತರ್ಜಾಲದಲ್ಲಿ ಬಯಸುವ ಕಂಟೆಂಟ್ ಅನ್ನಿಸಿಕೊಂಡಿದೆ. ಆದರೆ 16-25ರ ನಡುವಿನ ಯುವ ಜನತೆಯ ವಿಚಾರಕ್ಕೆ ಬಂದರೆ ಅವರು ಹೆಚ್ಚು ಕಾಲ ಕಳೆಯುವುದು ಗೇಮಿಂಗ್‌ ಎಂಬ ಕೆಟಗರಿಯಲ್ಲಿ. ಅವರನ್ನು ಆಕರ್ಷಿಸುವ ಸಲುವಾಗಿಯೇ ಹೊಸ ಹೊಸ ಗೇಮ್‌ಗಳು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತಿವೆ. ಅದರ ಸುತ್ತ ಕೋಟ್ಯಾಂತರ ರೂಪಾಯಿಗಳ ಮಾರುಕಟ್ಟೆಯೊಂದು ಹುಟ್ಟಿಕೊಂಡಿದೆ.

ಆಟದ ಕೌಶಲ್ಯಗಳನ್ನು ಕಲಿಯುವ ಸಣ್ಣ ಸಂಖ್ಯೆ ಆಟಗಾರರು ಅದನ್ನು ಉದ್ಯೋಗವನ್ನಾಗಿಯೂ ಸ್ವೀಕರಿಸಿದ್ದಾರೆ. ಆದರೆ ಕೋಟ್ಯಾಂತರ ಜನ ಮಾತ್ರ ನಿರರ್ಥಕವಾಗಿ ಸಮಯ ಕಳೆಯಲು ಇವು ಪ್ರೇರೇಪಿಸುತ್ತಿವೆ. ಯಾಕೆ ಹೀಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಡಾ. ಅ. ಶ್ರೀಧರ್ ಹೊಸ ಆಯಾಮವೊಂದನ್ನು ಮುಂದಿಡುತ್ತಾರೆ.

“ನಮ್ಮಲ್ಲಿ ಎಮರ್ಜೆನ್ಸಿ ಘೋಷಣೆಯಾದ ದಿನ ಇಡೀ ದೇಶ ಬಾಬಿ ಸಿನೆಮಾ ಹಿಂದೆ ಬಿದ್ದಿತ್ತು. ಮಾರನೇ ದಿನ ಪತ್ರಿಕೆಗಳು ಖಾಲಿ ಪೇಜ್‌ ನೀಡಿದಾಗಲೇ ದೇಶ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂಬುದು ಬಹುತೇಕರ ಅರಿವಿಗೆ ಬಂದಿದ್ದು. ಈ ಗೇಮ್‌ಗಳು ಕೂಡ ಹಾಗೆಯೇ. ಮಹತ್ವದ ವಿಚಾರದಿಂದ ಜನರನ್ನು ದೂರ ಇಟ್ಟು, ಕೃತಕ ಪರಿಸರದಲ್ಲಿ ಅವರನ್ನು ಎಂಗೇಜ್ ಮಾಡಿ ಇಡುವ ಕೆಲಸ ಮಾಡುತ್ತಿವೆ. ಇದು ಸಮಸ್ಯೆ ಹೌದು. ಹಾಗಂತ ಪರ್ಯಾಯ ಏನು ಎಂದರೆ ಉತ್ತರ ಅಷ್ಟು ಸುಲಭ ಅಲ್ಲ,’’ ಅನ್ನುತ್ತಾರೆ ಮನೋ ವಿಜ್ಞಾನಿ.

ಇದು ಆನ್‌ಲೈನ್‌ ಗೇಮ್‌ ಎಂಬ ಲೋಕದ ಸದ್ಯದ ಟ್ರೆಂಡ್ ಹಾಗೂ ಅವು ಬೀರುತ್ತಿರುವ ಸಾಮಾಜಿಕ ಸಮಸ್ಯೆಯ ಚಿತ್ರಣ. ಈ ಕುರಿತು ಚರ್ಚೆಯೊಂದನ್ನು ಆರಂಭಿಸುವು ಈ ಕಾಲಘಟ್ಟದ ಅಗತ್ಯ. ಇದು ಅದಕ್ಕೆ ಮುನ್ನಡಿಯಾಗಲಿ ಎಂಬುದು ‘ಸಮಾಚಾರ’ದ ಆಶಯ.