samachara
www.samachara.com
ಇಂಜಿನಿಯರಿಂಗ್‌ ಅದ್ಭುತ: ‘ಜಗತ್ತಿನ ಸುಂದರ ಏರ್ಪೋರ್ಟ್‌’ ಉದ್ಘಾಟಿಸಿದ ಮೋದಿ
ಫೋಕಸ್

ಇಂಜಿನಿಯರಿಂಗ್‌ ಅದ್ಭುತ: ‘ಜಗತ್ತಿನ ಸುಂದರ ಏರ್ಪೋರ್ಟ್‌’ ಉದ್ಘಾಟಿಸಿದ ಮೋದಿ

ಪರ್ವತ ಪ್ರದೇಶದ ಇಳಿಜಾರನ್ನು ಕಡಿದು ಸಮತಟ್ಟು ಮಾಡಿ, ಅದರ ಮೇಲೆ 1.75 ಕಿಲೋ ಮೀಟರ್‌ ಉದ್ದದ ರನ್‌ವೇ, ಪಾರ್ಕಿಂಗ್‌ ಪ್ರದೇಶ ಮತ್ತು ಟರ್ಮಿನಲ್‌ ನಿರ್ಮಾಣ ಮಾಡಲಾಗಿದೆ.

Team Samachara

ಭಾರತದ 100ನೇ ವಿಮಾನ ನಿಲ್ದಾಣವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಈ ವಿಮಾನ ನಿಲ್ದಾಣ ತಲೆ ಎತ್ತಿದ್ದು ಇದಕ್ಕೆ ಪಕ್ಯಾಂಗ್‌ ಎಂದು ಹೆಸರಿಡಲಾಗಿದೆ. ಅದ್ಭುತ ನಿರ್ಮಾಣ, ಸುಂದರ ದೃಶ್ಯಗಳ ಕಾರಣಕ್ಕೆ ಇದನ್ನು ‘ಜಗತ್ತಿನ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದು’ ಎಂದು ಬಣ್ಣಿಸಲಾಗುತ್ತಿದೆ. ಜತೆಗೆ ಬೆಟ್ಟ ಪ್ರದೇಶದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದ್ದು ‘ಇಂಜಿನಿಯರಿಂಗ್‌ನ ಅದ್ಭುತ’ ಎಂದು ಕರೆಯಲ್ಪಡುತ್ತಿದೆ.

ಪಕ್ಯಾಂಗ್‌ ವಿಮಾನ ನಿಲ್ದಾಣ ಪುಟ್ಟ ರಾಜ್ಯ ಸಿಕ್ಕಿಂನ ರಾಜಧಾನಿ ಗ್ಯಾಂಗ್‌ಟಕ್‌ನಿಂದ 30 ಕಿಲೋಮೀಟರ್‌ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಬರೋಬ್ಬರಿ 4,500 ಅಡಿ ಎತ್ತರದಲ್ಲಿ ಈ ವಿಮಾನ ನಿಲ್ದಾಣ ತಲೆ ಎತ್ತಿದೆ. 201 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ನಿಲ್ದಾಣ ಹರಡಿಕೊಂಡಿದ್ದು ಪೂರ್ಣ ಪ್ರಮಾಣದಲ್ಲಿ ಪರ್ವತದ ಮೇಲೆಯೇ ನಿರ್ಮಾಣ ಮಾಡಲಾಗಿದೆ.

ಪರ್ವತ ಪ್ರದೇಶದ ಇಳಿಜಾರನ್ನು ಕಡಿದು ಸಮತಟ್ಟು ಮಾಡಿ, ಅದರ ಮೇಲೆ 1.75 ಕಿಲೋ ಮೀಟರ್‌ ಉದ್ದದ ರನ್‌ವೇ, ಪಾರ್ಕಿಂಗ್‌ ಪ್ರದೇಶ ಮತ್ತು ಟರ್ಮಿನಲ್‌ ನಿರ್ಮಾಣ ಮಾಡಲಾಗಿದೆ. ಏಕಕಾಲಕ್ಕೆ 100 ಪ್ರಯಾಣಿಕರನ್ನು ಈ ಟರ್ಮಿನಲ್‌ ಮೂಲಕ ನಿರ್ವಹಣೆ ಮಾಡಬಹುದಾಗಿದೆ.

ನಿರ್ಮಾಣ ಕೆಲಸಗಳಿಗೆ ಪೂರಕವಲ್ಲದ ವಾತಾವರಣ, ಗುಡ್ಡಗಾಡು ಪ್ರದೇಶದ ಕಾರಣಕ್ಕೆ ಇಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವುದು ಎಂಜಿನಿಯರ್‌ಗಳ ಪಾಲಿಗೆ ಸವಾಲಿನದಾಗಿತ್ತು. ಅದರಲ್ಲೂ ಮಣ್ಣಿನ ಕೆಲಸಗಳಿಗೆ ಬೃಹತ್‌ ಯಂತ್ರಗಳನ್ನು ಕಿರಿದಾದ ರಸ್ತೆಗಳ ಮೂಲಕ ಸಾಗಿಸುವುದೇ ನಿರ್ಮಾಣ ಸಂಸ್ಥೆಗೆ ಕಷ್ಟಕರವಾಗಿತ್ತು. ಜತೆಗೆ ಸುರಿಯುವ ಮುಂಗಾರು ಮಳೆಗಳು ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದವು. ಕೆಲವು ಕಡೆಗಳಲ್ಲಂತೂ 263 ಅಡಿ ಆಳದವರೆಗೆ ತಡೆಗೋಡೆ ನಿರ್ಮಾಣ ಮಾಡಿ ರನ್‌ ವೇ ಮತ್ತು ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ.

ಸದ್ಯಕ್ಕೆ ವಿಮಾನ ನಿಲ್ದಾಣ ಪ್ರಾಯೋಗಿಕ ಹಾರಾಟಕ್ಕೆ ಮಾತ್ರ ತೆರೆದುಕೊಂಡಿದ್ದು ಅಕ್ಟೋಬರ್‌ 4 ರಿಂದ ವಾಣಿಜ್ಯ ವಿಮಾನಗಳ ಹಾರಾಟ ಆರಂಭವಾಗಲಿದೆ. ಅಂದ ಹಾಗೆ ಇದು ಭಾರತದ 100ನೇ ಮತ್ತು ಸಿಕ್ಕಿಂನ ಮೊದಲ ವಿಮಾನ ನಿಲ್ದಾಣವಾಗಿದೆ.

ಸುಂದರ ನಾಡು ಸಿಕ್ಕಿಂನ ಪ್ರವಾಸೋದ್ಯಮಕ್ಕೆ ಈ ವಿಮಾನ ನಿಲ್ದಾಣ ಲಾಭ ತಂದುಕೊಡಬಹುದು ಎಂದುಕೊಳ್ಳಲಾಗಿದೆ. ಸ್ವತಃ ವಿಮಾನ ನಿಲ್ದಾಣವೇ ವರ್ಣ ಚಿತ್ರದಂತಿದ್ದು ಅದರ ಕೆಲವು ಚಿತ್ರಗಳು ಇಲ್ಲಿವೆ.

ಇಂಜಿನಿಯರಿಂಗ್‌ ಅದ್ಭುತ: ‘ಜಗತ್ತಿನ ಸುಂದರ ಏರ್ಪೋರ್ಟ್‌’ ಉದ್ಘಾಟಿಸಿದ ಮೋದಿ

ಚಿತ್ರ ಕೃಪೆ: ದೂರದರ್ಶನ್, ಬಿಬಿಸಿ