samachara
www.samachara.com
ಎಷ್ಟು ಪ್ರಮಾಣದ ಆಲ್ಕೋಹಾಲ್‌ ಆರೋಗ್ಯಕ್ಕೆ ಒಳ್ಳೆಯದು?; ಎಳ್ಳಷ್ಟು ಅಲ್ಲ ಎನ್ನುತ್ತದೆ ಈ ವರದಿ...
ಫೋಕಸ್

ಎಷ್ಟು ಪ್ರಮಾಣದ ಆಲ್ಕೋಹಾಲ್‌ ಆರೋಗ್ಯಕ್ಕೆ ಒಳ್ಳೆಯದು?; ಎಳ್ಳಷ್ಟು ಅಲ್ಲ ಎನ್ನುತ್ತದೆ ಈ ವರದಿ...

ನಿಯಮಿತ ಬಿಯರ್‌ ಸೇವನೆಯಿಂದ ಹೃದ್ರೋಗಗಳು ಕಡಿಮೆಯಾಗುತ್ತವೆ, ತೆಳ್ಳಗಿರುವ ವ್ಯಕ್ತಿಗಳು ದಪ್ಪಗಾಗುತ್ತಾರೆ ಎಂಬೆಲ್ಲಾ ನಂಬಿಕೆಗಳಿವೆ. ಆದರೆ ಇವೆಲ್ಲಾ ನಮ್ಮ ಮದ್ಯ ವ್ಯಸನವನ್ನು ಸಮರ್ಥಿಸಿಕೊಳ್ಳಲು ಬಳಸುವ ಸಮಜಾಯಿಷಿ ಎನ್ನುತ್ತದೆ ವರದಿ.

ಪ್ರತಿನಿತ್ಯ ಕೇವಲ ಒಂದು ಬಾರಿ ಆಲ್ಕೋಹಾಲ್‌ ಸೇವಸಿದರೂ ಕೂಡ ವೈಯಕ್ತಿಕ ಅನಾರೋಗ್ಯಕ್ಕೆ ನಾವೇ ದಾರಿ ಮಾಡಿಕೊಟ್ಟಂತೆ. ಇದು ಬೃಹತ್‌ ಅಧ್ಯಯನವೊಂದರ ವರದಿ.

ಈ ಅಧ್ಯಯನದಕ್ಕಾಗಿ ಅಧ್ಯಯನಕಾರರು ತೆಗೆದುಕೊಂಡ ಅವಧಿ ಬರೋಬ್ಬರಿ 22 ವರ್ಷ. ವರದಿ ತಯಾರಿಕೆಯ ಸಲುವಾಗಿ ಅಧ್ಯಯನಕಾರರು 195 ದೇಶಗಳನ್ನು ಸುತ್ತಿದ್ದಾರೆ. 694 ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆಲ್ಕೋಹಾಲ್ ಅಂಶದಿಂದ ಉಂಟಾಗುವ ಅನಾರೋಗ್ಯಗಳ ಬಗ್ಗೆ ಮುಂಚೆಯೇ ಪ್ರಕಟಗೊಂಡಿದ್ದ 592 ಅಧ್ಯಯನ ವರದಿಗಳನ್ನು ಅಭ್ಯಸಿಸಿದ್ದಾರೆ. ಇಷ್ಟೆಲ್ಲಾ ಪರಿಶ್ರಮದಿಂದ ತಿಳಿದು ಬಂದಿರುವುದೇನೆಂದರೆ ‘ಎಷ್ಟು ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ’.

ಈ ವರದಿಯ ಕೊನೆಯ ಸಾಲುಗಳನ್ನು ಬರೆದಿರುವುದು ಕೆಂಬ್ರಿಡ್ಜ್ ವಿಶ್ವ ವಿದ್ಯಾಲಯದ ಸಂಖ್ಯಾಶಾಸ್ತ್ರಜ್ಞ ದೇವಿಡ್‌ ಸ್ಪೀಗೆಲ್ಟರ್‌. ದೇವಿಡ್‌ ಹೇಳುವಂತೆ ಇಂತಿಷ್ಟು ಪ್ರಮಾಣದ ಆಲ್ಕೋಹಾಲ್‌ ಸೇವಿಸಿದರೆ ಸಮಸ್ಯೆಯೇನಿಲ್ಲ ಎನ್ನುವಂತೆಯೇ ಇಲ್ಲ. ಎಷ್ಟೇ ಪ್ರಮಾಣದ ಆಲ್ಕೋಹಾಲ್‌ ಆಗಿರಲಿ, ಅದು ಆರೋಗ್ಯಕ್ಕೆ ಮಾರಕ.

ಅಧ್ಯಯನಕಾರರು ಯಾವ್ಯಾವ ದೇಶದ ಜನರು ಎಷ್ಟೆಷ್ಟು ಆಲ್ಕೋಹಾಲ್‌ ಸೇವಿಸುತ್ತಾರೆ ಎನ್ನುವ ಅಂದಾಜು ಲೆಕ್ಕಕ್ಕಾಗಿ, ಆಯಾ ದೇಶಗಳಲ್ಲಿ ಮಾರಾಟವಾದ ಮದ್ಯವನ್ನು ಮಾನದಂಡವಾಗಿ ಬಳಸಿದ್ದಾರೆ. ವಿಶ್ವದಲ್ಲಿ ಬಳಕೆಯಾಗುವ ಮದ್ಯವನ್ನು ಮತ್ತು ಜನಸಂಖ್ಯೆಯಿಂದ ವಿಭಾಗಿಸಿದರೆ, ಪ್ರತಿ ವ್ಯಕ್ತಿ ದಿನವೊಂದಕ್ಕೆ 10 ಗ್ರಾಂನಷ್ಟು ಶುದ್ಧ ಆಲ್ಕೋಹಾಲ್‌ಅನ್ನು ಹೊಟ್ಟೆಗೆ ಸೇರಿಸಿಕೊಳ್ಳುತ್ತಾನೆ. ವೈನ್‌ ಮೂಲಕ 10 ಗ್ರಾಂ ಆಲ್ಕೋಹಾಲ್‌ ದೇಹ ಸೇರಬೇಕು ಎಂದರೆ 100 ಗ್ರಾಂ ವೈನ್‌ ಕುಡಿಯಬೇಕು. ಬಿಯರ್‌ ಮೂಲಕವಾದರೆ 340 ಗ್ರಾಂ ಬಿಯರ್‌ ಮತ್ತು ವಿಸ್ಕಿ ಮೂಲಕವಾದರೆ 28 ಗ್ರಾಂ ವಿಸ್ಕಿ ಸೇವಿಸಬೇಕು.

ವರದಿ ಹೇಳುವಂತೆ, 2016ರಲ್ಲಿ ಶೇ.25ರಷ್ಟು ಮಹಿಳೆಯರು ಮತ್ತು ಶೇ.39ರಷ್ಟು ಪುರುಷರು ರೆಗ್ಯುಲರ್‌ ಕುಡುಕರಾಗಿದ್ದರು. ವಿಶ್ವದ 700 ಕೋಟಿ ಜನರ ಪೈಕಿ 240 ಕೋಟಿ ಜನರು ಪ್ರತಿನಿತ್ಯ ಆಲ್ಕೋಹಾಲ್‌ ಸೇವಿಸುತ್ತಿದ್ದರು. ದೇಶದ ಎಷ್ಟು ಜನ ಎಷ್ಟು ಪ್ರಮಾಣದಲ್ಲಿ ಮದ್ಯ ವ್ಯಸನಿಗಳಾಗಿದ್ದಾರೆ ಎನ್ನುವುದು ಆ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಮೇಲೆ ನಿರ್ಧರಿಸಲ್ಪಟ್ಟಿವೆ. ಹೆಚ್ಚು ವರಮಾನ ಇರುವ ದೇಶಗಳ ಜನರು ಹೆಚ್ಚು ಆಲ್ಕೋಹಾಲ್‌ ಸೇವಿಸುತ್ತಿದ್ದಾರೆ.

ಎಷ್ಟು ಪ್ರಮಾಣದ ಆಲ್ಕೋಹಾಲ್‌ ಆರೋಗ್ಯಕ್ಕೆ ಒಳ್ಳೆಯದು?; ಎಳ್ಳಷ್ಟು ಅಲ್ಲ ಎನ್ನುತ್ತದೆ ಈ ವರದಿ...

‘ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಹೇಳುವಂತೆ, ಪ್ರತಿ ವರ್ಷ ಆಲ್ಕೋಹಾಲ್‌ನಿಂದಾಗಿ 28 ಲಕ್ಷ ಜನ ಮೃತರಾಗುತ್ತಿದ್ದಾರೆ. ಪ್ರತಿ ವರ್ಷ ಹೆಚ್ಚು ಜನರನ್ನು ಬಲಿ ಪಡೆಯುತ್ತಿರುವ ಜಾಗತಿಕ ಸಮಸ್ಯೆಗಳ ಪೈಕಿ ಆಲ್ಕೋಹಾಲ್‌ 7ನೇ ಸ್ಥಾನದಲ್ಲಿದೆ. 2016ರಲ್ಲಿ ಮೃತಪಟ್ಟ ಮಹಿಳೆಯರ ಪೈಕಿ ಶೇ. 2.2 ಮತ್ತು ಪುರುಷರ ಪೈಕಿ ಶೇ. 6.8 ಮಂದಿ ಆಲ್ಕೋಹಾಲ್‌ನಿಂದಲೇ ಸಾವನ್ನಪ್ಪಿದ್ದರು. 15ರಿಂದ 49ರ ವಯಸ್ಸಿನ ವ್ಯಕ್ತಿಗಳ ಅನಾರೋಗ್ಯಕ್ಕೆ ಆಲ್ಕೋಹಾಲ್‌ ಸೇವನೆ ಮುಖ್ಯ ಕಾರಣವಾಗಿ ಪರಿಣಮಿಸಿದೆ.

‘ನ್ಯೂಯಾರ್ಕ್‌ ಟೈಮ್ಸ್’ ಸುದ್ದಿ ಸಂಸ್ಥೆ ಜತೆ ಮಾತನಾಡಿರುವ ವಾಷಿಂಗ್‌ಟನ್‌ ವಿಶ್ವ ವಿದ್ಯಾಲಯದ ಹೆಲ್ತ್‌ ಮೆಟ್ರಿಕ್‌ ಸೈನ್ಸಸ್‌ ಪ್ರಾಧ್ಯಾಪಕ ಎಮ್ಯಾನುಯೆಲಾ ಗಕಿಡೊ, “ಆಲ್ಕೋಹಾಲ್‌ ಸೇವನೆ ಮತ್ತು ಧೂಮಪಾನಗಳ ನಡುವೆ ಪ್ರಮುಖವಾದ ವ್ಯತ್ಯಾಸವಿದೆ. ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ಬಹುಪಾಲು ಜನ ಒಪ್ಪುತ್ತಾರೆ. ಆದರೆ ಆಲ್ಕೋಹಾಲ್‌ ಬಗ್ಗೆ ಹೀಗೆ ಹೇಳಿದರೆ ನಂಬುವುದಿಲ್ಲ. ನಿಯಮಿತವಾದ ಮದ್ಯ ಸೇವನೆ ಆರೋಗ್ಯಕ್ಕೆ ಉತ್ತಮ ಎಂದೇ ಜನ ನಂಬಿದ್ದಾರೆ. ಮದ್ಯದಿಂದ ಹೃದಯದ ಸಮಸ್ಯೆಗಳು ಉಂಟಾಗುವುದಿಲ್ಲ ಎಂದೇ ಜನ ತಿಳಿದಿದ್ದಾರೆ.”

ಈವರೆಗಿನ ಹಲವಾರು ಸಂಶೋಧನೆಗಳೂ ಕೂಡ ಅದನ್ನೇ ಹೇಳಿವೆ. ನಿರ್ದಿಷ್ಟ ಪ್ರಮಾಣದ ಆಲ್ಕೋಹಾಲ್‌ಅನ್ನು ದಿನನಿತ್ಯ ಸೇವಿಸುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದೇ ವಾದಿಸಿವೆ. ಆಲ್ಕೋಹಾಲ್‌ ವ್ಯಸನಿಗಳು ಅದನ್ನೇ ತಮ್ಮ ವಾದಕ್ಕೆ ಪೂರಕ ಸಾಕ್ಷಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

ಆದರೆ ಇದು ತಪ್ಪು ಎನ್ನುತ್ತಾರೆ ಡಾ. ಗಕಿಡೊ. ಪ್ರತಿನಿತ್ಯ ಸ್ವಲ್ಪವೇ ಪ್ರಮಾಣದ ಆಲ್ಕೋಹಾಲ್‌ಅನ್ನು ಒಂದು ವರ್ಷ ಸತತವಾಗಿ ಸೇವಿಸಿದರೆ, ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಜತಗೆ, ಆಲ್ಕೋಹಾಲ್‌ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ಗಕಿಡೊ ಅವರ ಅಭಿಪ್ರಾಯ. ವರದಿ ಕೂಡ ಈ ಅಂಶವನ್ನು ಸ್ಪಷ್ಟ ಪಡಿಸಿದೆ. ವರದಿ ಹೇಳುವಂತೆ ಈ ಹಿಂದೆ ಆಲ್ಕೋಹಾಲ್‌ ಸೇವಿಸುವ 1,00,000 ಮಂದಿ ಪೈಕಿ 914 ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಈಗ ಈ ಸಂಖ್ಯೆ 918ಕ್ಕೆ ಏರಿಕೆಯಾಗಿದೆ.

ಭಾರತದಲ್ಲೂ ಕೂಡ ನಿಯಮಿತ ಬಿಯರ್‌ ಸೇವನೆಯಿಂದ ಹೃದ್ರೋಗಗಳು ಕಡಿಮೆಯಾಗುತ್ತವೆ, ತೆಳ್ಳಗಿರುವ ವ್ಯಕ್ತಿಗಳು ದಪ್ಪಗಾಗುತ್ತಾರೆ ಎಂಬೆಲ್ಲಾ ನಂಬಿಕೆಗಳಿವೆ. ಆದರೆ ಇವೆಲ್ಲಾ ನಮ್ಮ ಮದ್ಯ ವ್ಯಸನವನ್ನು ಸಮರ್ಥಿಸಿಕೊಳ್ಳಲು ಬಳಸುವ ಪರಿಕರಗಳು ಎನ್ನುತ್ತದೆ ವರದಿ. ನೀವೂ ಕೂಡ ರೆಗ್ಯುಲರ್‌ ಕುಡುಕರಾಗಿದ್ದರೆ, ಎಷ್ಟು ಪ್ರಮಾಣದ ಆಲ್ಕೋಹಾಲ್‌ ಸೇವಿಸುತ್ತಿದ್ದೀರಿ ಎನ್ನುವುದನ್ನೊಮ್ಮೆ ಲೆಕ್ಕ ಹಾಕಿಕೊಳ್ಳಿ. ಹಾಗೂ, ಅದು ಯಾವುದೇ ಕಾರಣಕ್ಕೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಮನಗಾಣಿರಿ.