samachara
www.samachara.com
ನಾಯಿ ಸಾಕಿದ್ದೀರಾ? ನೆಕ್ಕಿಸಿಕೊಳ್ಳುವ ಮುನ್ನ ಎಚ್ಚರದಿಂದಿರಿ!
ಫೋಕಸ್

ನಾಯಿ ಸಾಕಿದ್ದೀರಾ? ನೆಕ್ಕಿಸಿಕೊಳ್ಳುವ ಮುನ್ನ ಎಚ್ಚರದಿಂದಿರಿ!

ನಿಮ್ಮ ಸಾಕು ನಾಯಿ ನಿಮಗೆ ತುಂಬಾ ಆಪ್ತವೇ? ಹಾದರೆ ಸ್ವಲ್ಪ ಎಚ್ಚರವಾಗಿರಿ. ಹೀಗೆ ತನ್ನ ಸಾಕು ನಾಯಿಯನ್ನು ಹಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಈಗ ತನ್ನ ಕೈ ಕಾಲುಗಳೆರಡನ್ನು ಕಳೆದುಕೊಂಡು ಹಾಸಿಗೆ ಹಿಡಿದಿದ್ದಾನೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಸಾಕು ಪ್ರಾಣಿಗಳೆಂದರೆ ಬಹುಪಾಲು ಜನರಿಗೆ ಇಷ್ಟ. ಹಲವರು ಮಾನವ ಜಗತ್ತಿಗಿಂತ ಸಾಕು ಪ್ರಾಣಿಗಳ ಸಾಂಗತ್ಯವನ್ನೇ ಹೆಚ್ಚಾಗಿ ಹಚ್ಚಿಕೊಂಡಿರುತ್ತಾರೆ. ಅದೇನೂ ತಪ್ಪಲ್ಲ, ಆದರೆ ಕೆಲವು ಸೂಕ್ತ ಮುನ್ನೆಚ್ಚರಿಕೆಗಳೂ ಅಗತ್ಯ. ಇಲ್ಲವಾದರೆ ಬದುಕು ಈ ಕೆಳಗಿನ ಕತೆಯಂತಾಗುತ್ತದೆ...

ಅಮೆರಿಕಾದ ವಿಸ್ಕಾನ್ಸಿನ್‌ ಪ್ರಾಂತ್ಯದೊಳಗಿನ ನಾಯಿ ಪ್ರೇಮಿಯೊಬ್ಬನ ಕತೆಯಿದು. ಈತನ ಹೆಸರು ಗ್ರೇಗ್‌ ಮಾಂಟ್ಯುಫೆಲ್‌. ಜೂನ್‌ ತಿಂಗಳ ಅಂತ್ಯದಲ್ಲಿ ಗ್ರೇಗ್‌ ಅತಿಯಾದ ಜ್ವರಕ್ಕೆ ತುತ್ತಾಗಿ, ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದ. ಅದೇ ಸಂದರ್ಭದಲ್ಲಿ ವಿಸ್ಕಾನ್ಸಿನ್ ಪ್ರದೇಶದಲ್ಲಿ ವೈರಾಣುಗಳಿಂದ ಹರಡಿದ್ದ ಶೀತ ಜ್ವರ ಎಲ್ಲಡೆಯೂ ಆಕ್ರಮಿಸಿಕೊಂಡಿತ್ತು. ತಾರಕಕ್ಕೇರಿದ್ದ ಜ್ವರ ಮತ್ತು ವಾಂತಿ ಎರಡೂ ಕೂಡ ಇದೇ ಶೀತ ಜ್ವರದ ಭಾಗ ಎಂದೇ ಗ್ರೇಗ್‌ ಭಾವಿಸಿದ್ದ.

ಆದರೆ ದಿನ ಕಳೆದಂತೆ ಗ್ರೇಗ್‌ನನ್ನು ಆಕ್ರಮಿಸಿದ್ದ ಜ್ವರ ತೀವ್ರ ಸ್ವರೂಪವನ್ನು ಪಡೆಯುತ್ತಾ ಸಾಗಿತು. ಶೀತ ಜ್ವರದ ಲಕ್ಷಣಗಳ ಜತೆ ಹೋಲಿಕೆಯಾಗದ ಹೊಸ ರೀತಿಯ ಜ್ವರವನ್ನು ಕಂಡು ಗ್ರೇಗ್‌ನ ಪತ್ನಿ ಡಾವನ್‌ ಚಿಂತಿತಳಾದಳು. ಗ್ರೇಗ್‌ನನ್ನು ದೊಡ್ಡ ಆಸ್ಪತ್ರೆಯೊಂದಕ್ಕೆ ಕರೆದೊಯ್ದಳು. ಅಲ್ಲಿನ ವೈದ್ಯರು ಹೇಳಿದಂತೆ ಗ್ರೇಗ್‌ನ ಈ ಅನಾರೋಗ್ಯಕ್ಕೆ ಕಾರಣವಾಗಿದ್ದು ‘ಕ್ಯಾಪ್ನೋಸಿಟೋಫಾಗಾ ಕ್ಯಾನಿಮೋರಸಸ್' ಎಂಬ ವೈರಾಣು.

‘ಕ್ಯಾಪ್ನೋಸಿಟೋಫಾಗಾ ಕ್ಯಾನಿಮೋರಸಸ್’ ವೈರಾಣು
‘ಕ್ಯಾಪ್ನೋಸಿಟೋಫಾಗಾ ಕ್ಯಾನಿಮೋರಸಸ್’ ವೈರಾಣು
/vorply

ಈ ವೈರಾಣುವನ್ನು ಗ್ರೇಗ್‌ ದೇಹದೊಳಕ್ಕೆ ಸಾಗಿಸಿದ್ದು ಆತನ ಮುದ್ದಿನ ನಾಯಿ. ನಾಯಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗ್ರೇಗ್‌ನನ್ನು ಕಂಡರೆ ನಾಯಿ ಕೂಡ ಅಷ್ಟೇ ಪ್ರೀತಿಯನ್ನು ತೋರಿಸುತ್ತಿತ್ತು. ಮನಃಪೂರ್ತಿಯಾಗಿ ಗ್ರೇಗ್‌ನನ್ನು ನೆಕ್ಕುತ್ತಿತ್ತು. ಗ್ರೇಗ್‌ ನಾಯಿಯಿಂದ ನೆಕ್ಕಿಸಿಕೊಂಡಿದ್ದರ ಪರಿಣಾಮವಾಗಿಯೇ ಈ ಜ್ವರ ಬಂದಿತ್ತು.

ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಸಂಸ್ಥೆ ಹೇಳುವ ಪ್ರಕಾರ ‘ಕ್ಯಾಪ್ನೋಸಿಟೋಫಾಗಾ’ ವೈರಾಣುಗಳು ಕೆಲ ಮನುಷ್ಯರ ಬಾಯಿಗಳಲ್ಲೂ ಇರುತ್ತವೆ. ಆದರೆ ಹೆಚ್ಚಾಗಿ ಪತ್ತೆಯಾಗಿರುವುದು ನಾಯಿ ಮತ್ತು ಬೆಕ್ಕುಗಳಲ್ಲಿ. ಶೇ.74ರಷ್ಟು ನಾಯಿಗಳ ಬಾಯಿಯಲ್ಲಿ ಈ ವೈರಾಣು ಕಂಡು ಬಂದರೆ, ಶೇ.54ರಷ್ಟು ಬೆಕ್ಕುಗಳು ತಮ್ಮ ಬಾಯಿಯಲ್ಲಿ ಈ ವೈರಾಣುಗಳನ್ನು ಹೊಂದಿರುತ್ತವೆ. ನಾಯಿ, ಬೆಕ್ಕುಗಳ ದೇಹದಲ್ಲಿರುವ ಬ್ಯಾಕ್ಟೀರಿಯಾಗಳು ಮನುಷ್ಯನ ದೇಹವನ್ನು ಹೊಕ್ಕಿದವಾದರೆ, ಮನುಷ್ಯನ ರೋಗ ನಿರೋಧಕ ಶಕ್ತಿ ಗಣನೀಯವಾಗಿ ಕುಸಿಯುತ್ತದೆ. ಪರಿಣಾಮವಾಗಿ ಮನುಷ್ಯ ಸಾಯಲೂಬಹುದು.

ಆದರೆ ಡಾವನ್‌ ತನ್ನ ಗಂಡ ಗ್ರೇಗ್‌ನನ್ನು ಆಸ್ಪತ್ರೆ ಕೊಂಡೊಯ್ಯುವಲ್ಲಿ ತಡ ಮಾಡದ ಕಾರಣ ಗ್ರೇಗ್‌ ಸಾವಿನ ಮುಂದೆ ನಿಲ್ಲುವಂತಾಗಲಿಲ್ಲ. ಡಾವನ್‌ ಹೇಳುವಂತೆ, “ಯಾರೋ ಗ್ರೇಗ್‌ ಮೇಲೆ ಪ್ರತಿಕಾರ ತೀರಿಸಿಕೊಳ್ಳುವ ಸಲುವಾಗಿ ಬೇಸ್‌ಬಾಲ್‌ ಆಡುವ ಬ್ಯಾಟ್‌ನಿಂದ ಹೊಡೆದು ನಜ್ಜುಗುಜ್ಜು ಮಾಡಿದ್ದಾರೇನೋ ಎನ್ನುವಂತೆ ಗ್ರೇಗ್‌ ಕಾಣಿಸುತ್ತಿದ್ದಾನೆ.”

ಗ್ರೇಗ್‌ ‘ಕ್ಯಾಪ್ನೋಸಿಟೋಫಾಗಾ’ ಎಂಬ ಭಯಂಕರ ವೈರಾಣುವಿಂದ ಬದುಕುಳಿದ, ಆದರೆ ಗ್ರೇಗ್‌ನನ್ನು ಉಳಿಸಿಕೊಳ್ಳಲು ಡಾವನ್‌ ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡಬೇಕಾಯಿತು. ಜೀವವೇನೂ ಇದೆ. ಆದರೆ ಗ್ರೇಗ್‌ ಈಗ ಇರುವ ಜಾಗವನ್ನು ಬಿಟ್ಟು ಮೇಲೇಳಲು ಸಾಧ್ಯವಿಲ್ಲ, ಕಾರಣ ವೈದ್ಯರು ಅವರ ಎರಡು ಕೈ ಮತ್ತು ಎರಡು ಕಾಲುಗಳನ್ನೂ ಕೂಡ ಕತ್ತರಿಸಿ ಹಾಕಿದ್ದಾರೆ. ಗ್ರೇಗ್‌ ಬದುಕುಳಿಯಲು ಸಾಧ್ಯವಾಗಿದ್ದು ಕೈ ಮತ್ತು ಕಾಲುಗಳನ್ನು ಕತ್ತರಿಸಿದ್ದರಿಂದಲೇ.

ಕೈ ಕಾಲು ಕಳೆದುಕೊಂಡು ಜರ್ಜರಿತನಾದ ಗ್ರೇಗ್‌.
ಕೈ ಕಾಲು ಕಳೆದುಕೊಂಡು ಜರ್ಜರಿತನಾದ ಗ್ರೇಗ್‌.

ವೈದ್ಯರು ಹೇಳುವ ಪ್ರಕಾರ ನಾಯಿಯ ಜೊಲ್ಲಿನ ಮೂಲಕ ವೈರಾಣು ಗ್ರೇಗ್‌ನ ದೇಹಕ್ಕೆ ಪ್ರವೇಶಿಸಿದೆ. ಬಹುಶಃ ನಾಯಿ ನೆಕ್ಕಿದ್ದರಿಂದಲೇ ವೈರಾಣು ಪ್ರವೇಶ ಪಡೆಯಲು ಸಾಧ್ಯವಾಗಿದೆ. ‘ಕ್ಯಾಪ್ನೋಸಿಟೋಫಾಗಾ ಕ್ಯಾನಿಮೋರಸಸ್‌’ ಎಂಬ ವೈರಾಣು ಗ್ರೇಗ್‌ನ ನರಮಂಡಲ ಪ್ರವೇಶಿಸಿದ ಬಳಿಕ, ಆತನ ದೇಹದೊಳಗಿನ ರಕ್ತವೆಲ್ಲಾ ನಂಜಾಗಿದೆ. ಇಷ್ಟೆಲ್ಲಾ ಆಗಿಯೂ ಕೂಡ ಆತ ಬದುಕುಳಿದಿದ್ದೇ ಹೆಚ್ಚು.

ಡಾವನ್‌ ಹೇಳುವಂತೆ ಇಂತಹದ್ದೊಂದು ವೈರಾಣು ನಾಯಿ ಮತ್ತು ಬೆಕ್ಕುಗಳ ಬಾಯಲ್ಲಿದ್ದು, ಇಷ್ಟು ಬೀಕರವಾದ ಆನೋರೋಗ್ಯಕ್ಕೆ ದುಡುತ್ತದೆ ಎಂಬ ಕಲ್ಪನೆಯೂ ಕೂಡ ಆಕೆಗೆ ಇರಲಿಲ್ಲ. ಇದೆಲ್ಲವೂ ಕೂಡ ಆಕೆಯ ಕಲ್ಪನೆಯನ್ನು ಮೀರಿ ನಡೆದಿತ್ತು. 48 ವರ್ಷ ಪ್ರಾಯದ ಗ್ರೇಗ್‌ ಮುಂಚೆಯಿಂದಲು ಕೂಡ ಸಾಕು ಪ್ರಾಣಿಗಳ ಸಖ್ಯ ಬೆಳೆಸಿಕೊಂಡಿದ್ದ. ಆದರೆ ಕೊನೆಗೆ ಆತನ ಪ್ರಾಣಿ ಪ್ರೀತಿಯೇ ಅವನಿಗೆ ಮುಳುವಾಯಿತು. ಗ್ರೇಗ್‌ಗೂ ಕೂಡ ಇಂತಹದ್ದೊಂದು ವೈರಾಣುವಿದೆ ಎಂಬ ಮಾಹಿತಿಯೇ ಇರಲಿಲ್ಲ.

ವೈದ್ಯರು ಗ್ರೇಗ್‌ನ ರಕ್ತದಲ್ಲಿದ್ದ ನಂಜನ್ನು ತಡೆಯುವ ಸಲುವಾಗಿ ಹಲವಾರು ಚಿಕಿತ್ಸೆಗಳನ್ನು ನೀಡುತ್ತಲೇ ಇದ್ದರು. ಆದರೆ ರಕ್ತ ಸಂಚಾರ ಸರಿಯಾಗಿ ಆಗದೆ, ಆತನ ಕೈಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟತೊಡಗಿತ್ತು. ಈ ಹೆಪ್ಪುಗಟ್ಟುವಿಕೆ ಗ್ರೇಗ್‌ನ ಅಂಗಚ್ಛೇದನಕ್ಕೆ ಕಾರಣವಾಯಿತು.

ಗ್ರೇಗ್‌ ತನ್ನ ಸಾಕು ಪ್ರಾಣಿಗಳಷ್ಟೇ ಹೆಚ್ಚಾಗಿ ಬೈಕ್‌ ಸವಾರಿಯನ್ನೂ ಕೂಡ ಪ್ರೀತಿಸುತ್ತಿದ್ದ. ಸದಾ ಕಾಲ ಸುತ್ತುತ್ತಲೇ ಇರಬೇಕೆಂಬ ಆಸೆ ಅವನಲ್ಲಿ ಅಗಾಧವಾಗಿತ್ತು. ಆದರೆ ತನ್ನ ನಾಯಿಯ ಬಾಯಿಯೊಳಗಿನ ತೊಟ್ಟು ಲಾಲಾರಸ, ಅವನ ಕೈಕಾಲುಗಳ ಜತೆಗೆ ಅವನೆಲ್ಲಾ ಕನಸುಗಳನ್ನು ಕತ್ತರಿಸಿ ಹಾಕಿತು.

ದಾಖಲೆಗಳ ಪ್ರಕಾರ ‘ಕ್ಯಾಪ್ನೋಸಿಟೋಫಾಗಾ ಕ್ಯಾನಿಮೋರಸಸ್‌’ ವೈರಾಣುವಿನಿಂದ ನರಕ ಕಂಡ 2ನೇ ವ್ಯಕ್ತಿ ಗ್ರೇಗ್‌. ಈ ಮುಂಚೆ 2016ರಲ್ಲಿ 70ರ ಪ್ರಾಯದ ವೃದ್ಧೆಯೊಬ್ಬರು ತಮ್ಮ ಇಟಾಲಿಯನ್‌ ಗ್ರೇಹೌಂಡ್‌ ನಾಯಿಯಿಂದ ಈ ವೈರಾಣು ಸೋಂಕಿಗೆ ಒಳಗಾಗಿದ್ದರು. ಆಕೆಯ ರಕ್ತದಲ್ಲೂ ಕೂಡ ನಂಜು ತುಂಬಿ, ಅಂಗಾಗಗಳು ಚಲನೆಯನ್ನು ಕಳೆದುಕೊಂಡಿದ್ದವು. ಆದರೆ ಎರಡು ವಾರಗಳ ಕಾಲ ಸತತವಾಗಿ ಆಂಟಿಬಯೋಟಿಕ್‌ ಔಷಧಿಗಳನ್ನು ನೀಡಿ ಆಕೆಯನ್ನು ಬದುಕಿಸಲಾಯಿತು.

ನಮ್ಮಲ್ಲೂ ಹಲವರಿಗೆ ಸಾಕು ಪ್ರಾಣಿಗಳು ಎಂದರೆ ಗ್ರೇಗ್‌ನಷ್ಟೇ ಇಷ್ಟ. ಅವುಗಳ ಜತೆ ಕುಳಿತು ಒಂದೇ ತಟ್ಟೆಯಲ್ಲಿ ಊಟ ಮಾಡುವುದಕ್ಕೂ ಕೂಡ ನಮ್ಮಲ್ಲಿನ ಎಷ್ಟೋ ಮಂದಿಗೆ ಹಿಂಜರಿಕೆಯಿಲ್ಲ. ಎಲ್ಲವೂ ಸರಿಯೇ. ಆದರೆ ಅದಕ್ಕೂ ಮುಂಚೆ ಸೂಕ್ತ ಗಮನವನ್ನು ಹರಿಸಿವುದು ಮುಖ್ಯ. ಇಲ್ಲವಾದರೆ ಮುಂದೊಂದು ದಿನ ನಾವೂ ಕೂಡ ಗ್ರೇಗ್‌ನಂತೆ ಕೈ ಕಾಲುಗಳ ಜತೆಗೆ ಕನಸುಗಳನ್ನೂ ಕೂಡ ಕತ್ತರಿಸಿಕೊಳ್ಳುವ ದಿನಗಳು ಬರಬಹುದೇನೋ.