samachara
www.samachara.com
ಕೆಲಸವಿಲ್ಲದ ಜಪಾನ್‌ ಪೊಲೀಸರ ಅವಾಂತರಗಳು
ಚಿತ್ರ ಕೃಪೆ: ಜಪಾನ್‌ ಟೈಮ್ಸ್‌
ಫೋಕಸ್

ಕೆಲಸವಿಲ್ಲದ ಜಪಾನ್‌ ಪೊಲೀಸರ ಅವಾಂತರಗಳು

ಪರಿಣಾಮ ಮದ್ಯದ ಬಾಟಲಿ ಕಳ್ಳತನದಂಥ ಸಣ್ಣಪುಟ್ಟ ಅಪರಾಧಗಳಿಗೂ ಭಾರೀ ಪ್ರಾಮುಖ್ಯತೆ ಬಂದಿದೆ. 

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಅದು ದಕ್ಷಿಣ ಜಪಾನ್‌ನಲ್ಲಿರುವ ಕಗೊಶಿಮಾ ಎಂಬ ನಗರ. ಅಲ್ಲೊಂದು ಸೂಪರ್‌ ಮಾರ್ಕೆಟ್‌. ಅದರ ಹೊರಗಡೆ ಲಾಕ್‌ ಹಾಕದ ಕಾರೊಂದು ನಿಂತಿತ್ತು. ಮಾಲಿಕ ಅದರೊಳಗೊಂದು ವಿಸ್ಕಿ ಬಾಟಲ್‌ ಬಿಟ್ಟು ಎಲ್ಲೋ ಹೋಗಿದ್ದ. ಮೊದಲೇ ಕಾರು ಲಾಕ್‌ ಹಾಕಿಲ್ಲ, ಬಾಟಲ್‌ ಕದ್ದುಕೊಂಡು ಹೋದರೆ ಏನು ಮಾಡುವುದು ಎಂಬುದು ಅಲ್ಲಿನ ಪೊಲೀಸರ ಬಹು ದೊಡ್ಡ ಚಿಂತೆ. ಸರಿ, ಅದಕ್ಕಾಗಿ ರಾತ್ರಿ ಹಗಲು ಕಾರಿನ ಸುತ್ತ ಪಹರೆ ಕಾಯುತ್ತಾ ಕುಳಿತರು. ಕೊನೆಗೊಬ್ಬ ಅವರ ಮಿತ್ರ ಬಂದ. ಬಂದವನೇ ಕಾರಿನ ಬಾಗಿಲು ತೆಗೆದು ವಿಸ್ಕಿ ಬಾಟಲ್‌ಗೆ ಕೈ ಹಾಕಿದ. ಹೀಗೊಬ್ಬ ಅಳಿದುಳಿದ ಕಳ್ಳನನ್ನು ಹಿಡಿದು ಏನೋ ಸಾಧಿಸಿದವರಂತೆ ಬೀಗಿದರು ಜಪಾನ್‌ ಪೊಲೀಸರು.

ಜಪಾನ್‌ ಎಂಬ ಪುಟ್ಟ ದೇಶ ನಿರೀಕ್ಷೆ ಮೀರಿ ಸುರಕ್ಷಿತವಾಗಿರುವಾಗ ಪೊಲೀಸರಿಗೆ 'ಕಾರ್ಯಾಚರಣೆ’ ನಡೆಸಲು ವಿಷಯಗಳೇ ಸಿಗುತ್ತಿಲ್ಲ. ಹೀಗಾಗಿ ಅಲ್ಲಿನ ಪೊಲೀಸರಿಗೆ ಇವತ್ತು ಕೆಲಸವೇ ಇಲ್ಲದಾಗಿದೆ. ಪರಿಸ್ಥಿತಿ ಎಲ್ಲಿಯವರೆಗೆ ತಲುಪಿದೆ ಎಂದರೆ ಜಪಾನ್‌ನಲ್ಲಿ ಕುಖ್ಯಾತ ‘ಯಕುಝಾ’ ಎಂಬ ಗ್ಯಾಂಗ್‌ಸ್ಟರ್‌ಗಳೂ ಏನೂ ಮಾಡುತ್ತಿಲ್ಲ; ಅಥವಾ ಮಾಡಲಾಗುತ್ತಿಲ್ಲ. ಕಠಿಣ ನಿಯಮಗಳು, ಪೊಲೀಸರ ಅತೀ ಬುದ್ಧಿವಂತೆಕೆಯಿಂದಾಗಿ ಜನರು ಕಳ್ಳತನ ಎಂಬುದನ್ನು ಮರೆತು ಬಿಟ್ಟಿದ್ದಾರೆ.

ದೇಶದಲ್ಲಿ ಕೊಲೆ ಎಂಬುದು ಅಪರೂಪದಲ್ಲಿ ಅಪರೂಪವಾಗಿ ಹೋಗಿದೆ. ಮುಂದುವರಿದ ಅಮೆರಿಕಾದಂಥ ದೇಶದಲ್ಲಿ 1,00,000 ಜನರಿಗೆ 4 ಕೊಲೆಗಳು ನಡೆದರೆ ಜಪಾನ್‌ನಲ್ಲಿ ಈ ಪ್ರಮಾಣ ಕೇವಲ ಶೇಕಡಾ 0.3. 2015ರಲ್ಲಿ ಕೇವಲ ಒಂದೇ ಒಂದು ಸಲ ಅಲ್ಲಿನ ಪೊಲೀಸರು ಗ್ಯಾಂಗ್‌ಸ್ಟರ್‌ ಒಬ್ಬನ ಮೇಲೆ ಗುಂಡು ಹಾರಿಸಿದ್ದರು. ಇದು ಬಿಟ್ಟರೆ ಮತ್ತೆ ಯಾವತ್ತೂ ಬಂದೂಕು ಮುಟ್ಟುವ ಪ್ರಸಂಗ ಬಂದಿಲ್ಲ.

ಆದರೆ, ಒಂದು ಕಾದಲ್ಲಿ ಜಪಾನ್‌ ಹೀಗಿರಲಿಲ್ಲ. ದಶಕದ ಕೆಳಗೆ ಇಲ್ಲಿ ಕೇವಲ 15,000 ಪೊಲೀಸರಿದ್ದಾಗ ಅಪರಾಧ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದವು. ಇವತ್ತು ಇದೇ ಪೊಲೀಸರ ಸಂಖ್ಯೆ 2.59 ಲಕ್ಷ ತಲುಪಿದೆ. ಒಂದು ಕಾಲದಲ್ಲಿ ಭಾರೀ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದುದರಿಂದ ಹೆಚ್ಚಿನ ಪೊಲೀಸರನ್ನು ನೇಮಿಸಿಕೊಳ್ಳಲಾಗಿತ್ತು. ಆದರೆ ಅವರಿಗಿವತ್ತು ಕೆಲಸವೇ ಇಲ್ಲದಾಗಿದೆ.

ಇವೆಲ್ಲದರ ಪರಿಣಾಮ ಮದ್ಯದ ಬಾಟಲಿ ಕಳ್ಳತನದಂಥ ಸಣ್ಣಪುಟ್ಟ ಅಪರಾಧಗಳಿಗೂ ಭಾರೀ ಪ್ರಾಮುಖ್ಯತೆ ಬಂದಿದೆ. ಇದು ಎಲ್ಲಿಗೆ ತಲುಪಿದೆ ಎಂದರೆ, ಅಪಾರ್ಟ್‌ಮೆಂಟ್‌ನಲ್ಲಿದ್ದ ಮಹಿಳೆಯೊಬ್ಬಳು ತನ್ನ ಒಳ ಉಡುಪುಗಳನ್ನು ಕದಿಯುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದಳು. ಪಾಪ ಬರಡು ಭೂಮಿಯಲ್ಲಿ ಆರಕ್ಷಕರಿಗೆ ಓಯಸಿಸ್‌ ಸಿಕ್ಕ ಹಾಗಾಗಿತ್ತು. ಮರುಕ್ಷಣದಲ್ಲಿ ಐದು ಜನರ ತಂಡವೇ ಆಕೆಯ ಮನೆ ಮುಂದೆ ಪ್ರತ್ಯಕ್ಷವಾಯಿತು. ಅಲ್ಲೆಲ್ಲೋ ಜಪಾನ್‌ನ ಮೂಲೆಯಲ್ಲಿ ತಮ್ಮ ಸ್ವಂತ ಸೇವನೆಗೆಂದು 22 ಯುವಕರು ಮರಿಜುವಾನ ಎಂಬ ಮಾದಕ ವಸ್ತು ಬೆಳೆದಿದ್ದರು. ಈ ಸುದ್ದಿ ಕಿವಿಗೆ ಬಿದ್ದಿದ್ದೇ ತಡ ಅವರನ್ನು ಹಿಡಿಯಲು ಸೈನ್ಯದ ಒಂದು ತುಕಡಿಯನ್ನೇ ಕಳುಹಿಸಲಾಯಿತು.

ಪೊಲೀಸರು ಇಷ್ಷಕ್ಕೇ ನಿಂತಿಲ್ಲ. ಯಾರೋ ಒಂದಷ್ಟು ಹುಡುಗರು ಚಿಲ್ಲರೆ ಕಾಸು ಸಂಪಾದಿಸಲು ‘ಕಾರು ಬಾಡಿಗೆಗೆ ಬೇಕಾದವರು ಸಂಪರ್ಕಿಸಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದರು. ಅಷ್ಟಕ್ಕೇ ಕಾರು ಬಾಡಿಗೆಗೆ ನೀಡಿ ಅಕ್ರಮ ಟಾಕ್ಸಿ ವ್ಯವಹಾರ ನಡೆಸುತ್ತಾರೆ ಎಂದು ಅವರ ಮೇಲೆ ಕೇಸು ಹಾಕಿದರು. ಕೆಂಪು ದೀಪ ಉರಿದ ಮೇಲೆ ಯಾರೋ ಸೈಕಲ್‌ ಓಡಿಸಿದರು. ಅವರಿಗೂ ದಂಡ ಹಾಕಿದರು. 2015ರಲ್ಲೊಮ್ಮೆ ಇಲ್ಲಿ ಓರ್ವ ಹಿಟ್ಲರ್‌ ಮೀಸೆ ಕೊಂಡೋಗಿ ಅಲ್ಲಿನ ಪ್ರಧಾನಿ ಶಿಂಜೋ ಅಬೆ ಮುಖಕ್ಕೆ ಅಂಟಿಸಿ ಬಂದ. ಅದೇ ಆತ ಮಾಡಿದ ಮಹಾಪರಾಧವಾಗಿತ್ತು. ಆತನ ಕೈಗೆ ಪೊಲೀಸರ ಕೊಳ ಬಿತ್ತು. ಹೀಗೆ ಇಲ್ಲಿನ ಪೊಲೀಸರ ವರ್ತನೆಗಳು ಕೇಳಲು ಮಜವಾಗಿರುತ್ತವೆ.

ಆದರೆ, ಹೀಗೊಂದು ಪರಿಸ್ಥಿತಿಗೆ ಅಲ್ಲಿನ ಪೊಲೀಸರು ತಲುಪಿರುವುದರ ಹಿಂದೆ ಅವರ ಶ್ರಮ, ಬುದ್ಧಿವಂತಿಕೆ, ಸೃಜನಶೀಲನೆ ಕೆಲಸ ಮಾಡಿರುವುದು ಕಾಣಿಸುತ್ತದೆ. ಇವತ್ತು ಅಲ್ಲಿ ಪೋಲಿ ಹುಡುಗರ ಚಳಿ ಬಿಡಿಸಲು ಕಾಲೇಜು, ವಿಶ್ವ ವಿದ್ಯಾಲಯಗಳಿಗೆ ಪೊಲೀಸರು ವಿದ್ಯಾರ್ಥಿಗಳ ರೂಪದಲ್ಲಿ ಬರುತ್ತಾರೆ. ಸಿಗ್ನಲ್ ದಾಟುವ ಸೈಕಲ್‌ ಸವಾರರ ಬೆನ್ನತ್ತಿ ಎಳೆವೆಯಲ್ಲೇ ಸಂಚಾರಿ ನಿಯಮದ ಪಾಠ ಮಾಡುತ್ತಾರೆ.

ಇವೆಲ್ಲದರ ಒಟ್ಟು ಪರಿಣಾಮ ಅಲ್ಲಿ ಮನೆಯ ಹೊರಗೆ ಅಪರಾಧ ಮಾಡಲು ಸಾಧ್ಯವೇ ಎಲ್ಲ ಎನ್ನುವಂತ ಪರಿಸ್ಥಿತಿ ಸೃಷ್ಟಿಯಾಗಿದೆ. ಹಾಗಂಥ ಇಷ್ಟಕ್ಕೆ ನಿಂತಿಲ್ಲ. ಪೊಲೀಸರು ಮನೆಯೊಳಗೆ ನಡೆಯುವ ಸಣ್ಣ ಸಣ್ಣ ಅಪರಾಧಗಳ ಬಗ್ಗೆಯೂ ಜಾಗ್ರತೆ ವಹಿಸುತ್ತಿದ್ದಾರೆ. ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಸುಸ್ಥಿರ ಅಪರಾಧ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಬಂಧಿಸಿದ ಅರೋಪಿಗಳನ್ನೂ ಸುಖಾ ಸುಮ್ಮನೆ ತಂದು ಜೈಲಿನಲ್ಲಿ ಕೊಳೆಯಿಸುವುದಕ್ಕೂ ಪೊಲೀಸರು ಅವಕಾಶ ನೀಡುವುದಿಲ್ಲ.

ಆದಷ್ಟು ಜನರಿಗೆ ಜೈಲು ಶಿಕ್ಷೆಯಾಗದಂತೆ ನೋಡಿಕೊಳ್ಳುತ್ತಾರೆ. ಅದರಲ್ಲೂ ಯುವಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅಲ್ಲೊಂದು ಇಲ್ಲೊಂದು ಅಪರಾಧಗಳು ನಡೆದಾಗಲೂ ಕನಿಷ್ಠ ಶಿಕ್ಷೆ, ಸಣ್ಣ ದಂಡ ಹಾಕಿ ಸರಿ ದಾರಿಗೆ ತರುವ ಯತ್ನಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಯುವಕರನ್ನು ಅವರ ತಂದೆ ತಾಯಿ ಜತೆ ಸಮಾಲೋಚನೆ ನಡೆಸಿ ಮಾಡಿರುವ ಕೃತ್ಯ ಮನವರಿಕೆಯಾಗುವಂತೆ ಮತ್ತು ಮುಂದೆ ಮಾಡದಂತೆ ತಿಳಿ ಹೇಳುತ್ತಾರೆ. ಹೀಗಾಗಿ ಅಮೆರಿಕಾದಲ್ಲಿ 1,00,000 ಕ್ಕೆ 666 ಜನ ಜೈಲು ಪಾಲಾದರೆ, ಜಪಾನ್‌ನಲ್ಲಿ ಕಂಬಿ ಎಣಿಸುವವರು ಕೇವಲ 45 ಜನ ಮಾತ್ರ.

ಹೀಗಿದ್ದು ಇಲ್ಲಿನ ಪೊಲೀಸರಿಗೆ ಕೆಟ್ಟ ಹಣೆಪಟ್ಟಿಯೊಂದಿದೆ. ನಡೆದ ಅಪರಾಧಗಳಲ್ಲಿ ಕೇವಲ ಶೇಕಡಾ 30ರಲ್ಲಿ ಮಾತ್ರ ಅಪರಾಧ ಸಾಬೀತಾಗುತ್ತದೆ ಎಂಬುದು ಇವರ ಮೇಲಿರುವ ದೂರು. ಇಲ್ಲಿನ ಹೆಚ್ಚಿನ ಪ್ರಕರಣಗಳು ತಪ್ಪೊಪ್ಪಿಗೆಯಲ್ಲೇ ಕೊನೆಯಾಗುತ್ತವೆ. ಇನ್ನುಳಿದ ಬೀರ್‌, ಒಳ ಉಡುಪಿನಂಥ ಕಳ್ಳತನ ಪ್ರಕರಣಗಳನ್ನು ಕೋರ್ಟ್‌ ಕೈ ಬಿಡುತ್ತದೆ. ಹೀಗಾಗಿ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ. ಆರಕ್ಷಕರು ಸಣ್ಣ ಪುಟ್ಟ ಪ್ರಕರಣಗಳನ್ನೂ ದಾಖಲಿಸುತ್ತಾರೆ ಎಂಬ ದೂರೊಂದನ್ನು ಬಿಟ್ಟರೆ, ಅಪರಾಧ ಮುಕ್ತ ಸಮಾಜದ ಕನಸನ್ನು ನನಸು ಮಾಡುತ್ತಿದ್ದಾರೆ ಜಪಾನ್ ಪೊಲೀಸರು.