‘ಕಾವ್‌ ವಾಂಗ್‌’: ಬಂಗಾರದ ಈ ಸೇತುವೆಯನ್ನು ರಕ್ಷಿಸುತ್ತಿವೆ ದೇವರ ಕೈಗಳು
ಫೋಕಸ್

‘ಕಾವ್‌ ವಾಂಗ್‌’: ಬಂಗಾರದ ಈ ಸೇತುವೆಯನ್ನು ರಕ್ಷಿಸುತ್ತಿವೆ ದೇವರ ಕೈಗಳು

ವಿಯೆಟ್ನಾಂ ದೇಶದ ಮಧ್ಯಭಾಗದಲ್ಲಿರುವ ಬಾನಾ ಗಿರಿಧಾಮ ಈಗ ಜಗತ್ತಿನ ಜನರ ಪ್ರಸಿದ್ಧ ಪ್ರವಾಸಿ ತಾಣ. ಶಿಖರದ ಮೇಲಿರುವ ದೇವರ ಕೈಗಳೇ ಇದಕ್ಕೆ ಕಾರಣ. 

ವಿಯೆಟ್ನಾಂನ ಮಧ್ಯ ಭಾಗದಲ್ಲಿರುವ ಗಿರಿ ಶಿಖರಗಳ ಮಧ್ಯದಲ್ಲಿನ ಗಿಡಮರಗಳ ನಡುವೆ ಎರಡು ದೊಡ್ಡ ಕಾಂಕ್ರಿಟ್‌ ಕೈಗಳು ರೂಪುತಳೆದಿವೆ. ಗಿರಿಯ ನೆತ್ತಿಯಲ್ಲಿನ ಬಂಗಾರದ ಸೇತುವೆಯನ್ನು ಭದ್ರವಾಗಿ ಹಿಡಿದು, ನಡೆದಾಡುವ ಜನರಿಗೆ ನಿರ್ಭೀತ ಭಾವನೆಯನ್ನು ಹುಟ್ಟುಹಾಕುವುದರ ಜತೆಗೆ ಮೊಗದಲ್ಲಿ ಮಂದಹಾಸವನ್ನೂ ಮೂಡಿಸಿವೆ.

ಇದು ವಿಯೆಟ್ನಾಂನ ‘ಬಾನಾ’ ಗಿರಿ ಶಿಖರಗಳಲ್ಲಿರುವ ಚಿನ್ನದ ಸೇತುವೆಯನ್ನು ರಕ್ಷಿಸುತ್ತಿರುವ ದೇವರ ಕೈಗಳ ಕತೆ. ಸೇತುವೆಯ ಮೇಲೆ ನಿಂತು ಸುತ್ತಲಿನ ಅಭೂತಪೂರ್ವ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜತೆಗೆ ಸೆಲ್ಫಿ ಮೂಲಕ ತಮ್ಮ ಸವಿನಯ ಅನುಭವವನ್ನು ಸೆರೆಹಿಡಿದುಕೊಳ್ಳುವ ಪ್ರವಾಸಿಗಳನ್ನು ದೇವರ ಕೈಗಳು ರಕ್ಷಿಸತ್ತಿವೆ. ಜತೆಗೆ ಸಹ್ರಾರು ಜನರನ್ನು ಬಾನಾ ಬೆಟ್ಟಗಳ ತುದಿಗೆ ಆಕರ್ಷಿಸುತ್ತಿವೆ.

‘ಕಾವ್‌ ವಾಂಗ್‌’: ಬಂಗಾರದ ಈ ಸೇತುವೆಯನ್ನು ರಕ್ಷಿಸುತ್ತಿವೆ ದೇವರ ಕೈಗಳು

ಅಂದಹಾಗೇ ಬಾನಾ ಬೆಟ್ಟದ ನೆತ್ತಿಯ ಮೇಲಿನ ದೇವರ ಕೈಯೊಳಗೆ ಸುರಕ್ಷಿತವಾಗಿರುವ ‘ಚಿನ್ನಸೇತು’ ಜನರಿಗೆ ಮುಕ್ತವಾಗಿದ್ದು ಜೂನ್‌ ತಿಂಗಳಿನಲ್ಲಿ. ಮುಕ್ತಗೊಂಡ ದಿನದಿಂದಲೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ‘ಚಿನ್ನ ಸೇತು’ವಿನ ಫೋಟೊ ಹಾಗೂ ವೀಡಿಯೋಗಳು ವೈರಲ್‌ ಆಗಿವೆ. ಎಲ್ಲೂ ಕಾಣದ ದೇವರ ಕೈಗಳು ಆಕರ್ಷಣೆಯ ಕೇಂದ್ರಬಿಂದು ಆಗಿವೆ.

ಸೇತುವಿಗೆ ಕಾಂಕ್ರಿಟ್ ಕೈಗಳ ಮೂಲಕ ಭದ್ರತೆ ಒದಗಿಸುವ ಯೋಚನೆಯನ್ನು ವಾಸ್ತವಕ್ಕಿಳಿಸಿರುವುದು ಟಿಎ ಲ್ಯಾಂಡ್‌ಸ್ಕೇಪ್‌ ವಾಸ್ತುಶಿಲ್ಪ ಸಂಸ್ಥೆಯ ಸ್ಥಾಪಕ ಹಾಗೂ ವಾಸ್ತುಶಿಲ್ಪಿ ವು ವೇಯಿಟ್‌ ಅನ್ಹ್‌. ತಮ್ಮ ಯೋಜನೆ ಸಾಕಾರಗೊಂಡು ಇಂದು ಇಡೀ ವಿಶ್ವದ ಜನರಿಂದ ಮೆಚ್ಚುಗೆಯ ಜತೆಗೆ ವೈರಲ್‌ ಕೂಡ ಆಗಿರುವುದಕ್ಕೆ ವು ವೇಯಿಟ್‌ ಸಂತಸ ವ್ಯಕ್ತಪಡಿಸಿದ್ದಾರೆ.

‘ಕಾವ್‌ ವಾಂಗ್‌’: ಬಂಗಾರದ ಈ ಸೇತುವೆಯನ್ನು ರಕ್ಷಿಸುತ್ತಿವೆ ದೇವರ ಕೈಗಳು

ಬಾನಾ ಬೆಟ್ಟಗಳನ್ನು 1919ರಲ್ಲಿ ಗಿರಿಧಾಮವನ್ನಾಗಿ ಅಭಿವೃದ್ಧಿ ಪಡಿಸಿದ ಕೀರ್ತಿ ಫ್ರೆಂಚ್‌ ವಸಹಾತುಶಾಹಿಗಳಿಗೆ ಸಲ್ಲುತ್ತದೆ. ಆ ಸಮಯದಲ್ಲಿಯೇ ಫ್ರೆಂಚರು ಬೆಟ್ಟದ ನೆತ್ತಿಯಲ್ಲಿ 150 ಮೀಟರ್‌ ಉದ್ದದ ಸೇತುವೆಯನ್ನೂ ಕೂಡ ನಿರ್ಮಿಸಿದ್ದರು. ಈಗ ದೇವರ ಕೈಗಳೂ ಕೂಡ ಸೇರಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಈಗ ಪ್ರಸಿದ್ಧ ಪ್ರವಾಸಿ ತಾಣ ಎಂದು ಗುರುತಿಸಿಕೊಂಡಿರುವ ಬಾನಾ ಬೆಟ್ಟಗಳಲ್ಲಿ ಕೇಬಲ್‌ ಕಾರ್‌, ಫ್ರೆಂಚ್‌ ವಾಸ್ತುಶಿಲ್ಪದ ಹಳ್ಳಿ, ಕೋಟೆ, ಆರಾಧನಾ ಮಂದಿರ, ವಸ್ತು ಸಂಗ್ರಹಾಲಯ, ಲೇಡಿ ಗಾನಾ ಮತ್ತು ಮೈಕಲ್‌ ಜೋರ್ಡಾನ್‌ರ ಪುತ್ಥಳಿಗಳು ಇತರೆ ಆಕರ್ಷಣೀಯ ಸ್ಥಳಗಳಾಗಿವೆ.

ಅತ್ಯದ್ಭುತ ವಾಸ್ತುಶಿಲ್ಪದಿಂದ ಕೂಡಿರುವ ಈ ಸೇತುವೆಯ ಮೇಲೆ ನಿಂತು ಡನಾಂಗ್‌ ನಗರವನ್ನು ವೀಕ್ಷಿಸಬಹುದು. ಈ ಸೇತುವೆಗೆ ಭೇಟಿ ನೀಡಿದ ಬಹುಪಾಲು ಪ್ರವಾಸಿಗರ ಪ್ರಕಾರ ಇಷ್ಟು ಸುಂದರವಾದ ಸೇತುವೆ ಇನ್ನೆಲ್ಲೂ ಇಲ್ಲ.

‘ಕಾವ್‌ ವಾಂಗ್‌’: ಬಂಗಾರದ ಈ ಸೇತುವೆಯನ್ನು ರಕ್ಷಿಸುತ್ತಿವೆ ದೇವರ ಕೈಗಳು

ಈ ಯೋಜನೆಯನ್ನು ಕೈಗೆತ್ತಿಕೊಂಡ ಸನ್‌ ಗ್ರೂಪ್‌ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರು ಹೇಳುವಂತೆ ಈ ಸೇತುವೆಯ ನಿರ್ಮಾಣದ ವೇಳೆ ಪ್ರದರ್ಶಿಸಿದ ಕಡುಧೈರ್ಯವನ್ನು ಇನ್ನೆಲ್ಲಿಯೂ ಪ್ರದರ್ಶಿಸಿಲ್ಲ. 2016ರಲ್ಲಿ ವಿಯೆಟ್ನಾಂನ ಎತ್ತರದ ಶಿಖರವಾದ ಸಾಪಾ ಪ್ರವಾಸಿ ತಾಣದಲ್ಲಿನ ಫ್ಯಾನ್ಸಿಪಾನ್‌ ಶಿಖರದಿಂದ ಕೇಬಲ್‌ ಕಾರ್‌ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಸ್ಥಳೀಯ ಜನರು ಈ ಕೇಬಲ್‌ ಕಾರ್‌ಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಟ್ಯೂರಿಸ್ಟ್‌ ಗೈಡ್‌ ಕೆಲಸ ತಪ್ಪುತ್ತದೆ ಎಂಬ ಅಳಲು ಅವರದಾಗಿತ್ತು.

ವಿಯೆಟ್ನಾಂ ಸರಕಾರ ಬಾನಾ ಶಿಖರಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅದಕ್ಕಾಗಿ ಆಗ್ನೇಯ ಏಷ್ಯಾ ಭಾಗದಲ್ಲಿ ನೋಡಲೇಬೇಕಾದ ಸ್ಥಳವೆಂದರೆ ಅದು ಬಾನಾ ಶಿಖರಗಳ ಮೇಲಿನ ಬಂಗಾರದ ಸೇತುವೆ ಎಂಬ ಪ್ರಚಾರವನ್ನೂ ಕೂಡ ನಡೆಸುತ್ತಿದೆ. ಕಳೆದ ವರ್ಷ ಬಂಗಾರ ಸೇತುವೆಯನ್ನು ವಿಶ್ವದ 1.3 ಕೋಟಿ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ನಿಮಗೆ ಯಾವಾಗಲಾದರೂ ವಿಯೆಟ್ನಾಂಗೆ ಹೋಗುವ ಅವಕಾಶ ದೊರೆತರೆ ಮರೆಯದೇ ಬಂಗಾರ ಸೇತುವೆಯ ಮೇಲೆ ನಡೆದಾಡಿ ಬನ್ನಿ.