‘ಕಿಕಿ ಚಾಲೆಂಜ್‌’: ವಿಶ್ವಾದ್ಯಂತ ಪೊಲೀಸರ ನಿದ್ದೆ ಕೆಡಿಸಿದ ಹೊಸ ಹುಚ್ಚಾಟವಿದು!
ಫೋಕಸ್

‘ಕಿಕಿ ಚಾಲೆಂಜ್‌’: ವಿಶ್ವಾದ್ಯಂತ ಪೊಲೀಸರ ನಿದ್ದೆ ಕೆಡಿಸಿದ ಹೊಸ ಹುಚ್ಚಾಟವಿದು!

ವಿಶ್ವದ ಯುವಜನರ ಚಿತ್ತ ಈಗ ಕಿಕಿ ಚಾಲೆಂಜ್‌ನತ್ತ ಹರಿದಿದೆ. ಈ ಅಪಾಯಕಾರಿ ಚಾಲೆಂಜ್‌ ನಿಮ್ಮ ಗಮನಕ್ಕೂ ಬಂದು, ನೀವು ಪ್ರಯತ್ನಿಸುವ ಮೊದಲು ಈ ವರದಿಯನ್ನೊಮ್ಮೆ ಓದಿ...

‘ಫಿಟ್‌ನೆಸ್‌ ಚಾಲೆಂಜ್‌’ ಹೆಸರನ್ನು ಬಹುಪಾಲು ಜನ ಕೇಳಿಯೇ ಇರುತ್ತಾರೆ. ಕೆಲವು ದಿನಗಳ ಹಿಂದೆ ಭಾರತದಾದ್ಯಂತ ಪ್ರಚಲಿತಕ್ಕೆ ಬಂದಿದ್ದ ಫಿಟ್‌ನೆಸ್‌ ಚಾಲೆಂಜ್‌, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ, ರಾಜಕಾರಣಿಗಳು, ಅಧಿಕಾರಿಗಳು, ಸೆಲೆಬ್ರೆಟಿಗಳಾದಿಯಾಗಿ ದೇಶದ ಲಕ್ಷಾಂತರ ಜನ ಇದರ ಹಿಂದೆ ಸುತ್ತಿದ್ದರು. ಈಗ ಇಂತಹದ್ದೇ ಚಾಲೆಂಜ್‌ ಒಂದು ಜಗತ್ತಿನಾದ್ಯಂತ ಸುದ್ದಿಯಲ್ಲಿದೆ. ಇದರ ಹೆಸರು ‘ಕಿಕಿ ಚಾಲೆಂಜ್‌’.

ಕಳೆದ ಒಂದು ತಿಂಗಳ ಅಂತರದಲ್ಲಿ ಸದ್ದು ಮಾಡುತ್ತಿರುವ ಕಿಕಿ ಚಾಲೆಂಜ್‌ಗೆ ‘ಇನ್‌ ಮೈ ಫೀಲಿಂಗ್ಸ್‌ ಚಾಲೆಂಜ್‌’ ಎಂದೂ ಕೂಡ ಕರೆಯಲಾಗುತ್ತಿದೆ. ಚಲಿಸುತ್ತಿರುವ ಕಾರಿನಿಂದ ಹೊರಗಿಳಿದು, ಕಾರಿನ ಜತೆಗೆಯೇ ನೃತ್ಯ ಮಾಡುತ್ತಾ ಸಾಗುವುದು, ನಂತರ ಕಾರಿನೊಳಗೆ ಜಿಗಿದು ಮುಂದಕ್ಕೆ ಹೋಗುವುದು. ತಮ್ಮ ಈ ಸಾಹಸದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದೇ ಕಿಕಿ ಚಾಲೆಂಜ್‌.

ಪ್ರಾರಂಭವಾಗಿದ್ದು ಎಲ್ಲಿ?:

ಜನರಿಗೆ ಕಿಕಿ ಚಾಲೆಂಜ್‌ ಹುಚ್ಚು ಹತ್ತಿದ್ದು ‘ಕಿಕಿ, ಡು ಯು ಲವ್‌ ಮೀ?’ ಎಂಬ ಹಾಡಿನಿಂದ. ಕೆನಡಾದ ರ್ಯಾಪ್ ಹಾಡುಗಾರ ಡ್ರಾಕ್‌ ಈ ಹಾಡನ್ನು ಸಂಯೋಜನೆಗೊಳಿಸಿದ್ದರು. ಆದರೆ ಅವರಿಗೂ ಕಿಕಿ ಚಾಲೆಂಜ್‌ಗೂ ಸಂಬಂಧವಿಲ್ಲ. ಜಗತ್ತಿನ ಅನೇಕರು ಇಷ್ಟ ಪಟ್ಟ ‘ಕಿಕಿ, ಡು ಯು ಲವ್ ಮೀ?’ ಹಾಡನ್ನು ಚಾಲೆಂಜ್‌ ಹಾಗಿ ಪರಿವರ್ತಿಸಿದ್ದು ಶಿಗ್ಗಿ ಎಂಬ ಹಾಸ್ಯ ನಟ. ಜೂನ್‌ 30ರಂದು ಶಿಗ್ಗಿ ತಮ್ಮ ಕಾರಿನಿಂದ ಹೊರನೆಗೆದು ಈ ಹಾಡಿಗೆ ತಕ್ಕಂತೆ ನೃತ್ಯ ಮಾಡಿದ ವೀಡಿಯೋವನ್ನು ಇನ್ಸ್ಟ್ರಾಗ್ರಾಮ್‌ ಮೂಲಕ ಹಂಚಿಕೊಂಡಿದ್ದರು. ಈ ವೀಡಿಯೋ ವೈರಲ್‌ ಆಗಿತ್ತು.

ವೀಡಿಯೋ ನೋಡಿದ ಅಮೆರಿಕಾದ ಫೂಟ್‌ಬಾಲ್‌ ಆಟಗಾರ ಓಡೆಲ್‌ ಬೆಕ್ಯಾಮ್‌ ಕೂಡ ಕಾರಿನಿಂದ ನೆಗೆದು ನೃತ್ಯಮಾಡಿ, ವೀಡಿಯೋವನ್ನು ಹಂಚಿಕೊಂಡಿದ್ದರು. ನಂತರದಲ್ಲಿ ಹಲವಾರು ಜನ ಸೆಲೆಬ್ರೆಟಿಗಳು ಕಾರಿನಿಂದ ನೆಗೆದು ನೃತ್ಯ ಮಾಡುವ ಜಿದ್ದಾಜಿದ್ದಿಗೆ ಬಿದ್ದಿದ್ದರು. ಈಗ ಈ ನೆಗೆಯುವ ಕೆಲಸಕ್ಕೆ ಹಲವಾರು ಯುವಜನರು ಮುಂದಾಗಿದ್ದಾರೆ.

ಇದಕ್ಕೊಂದಿಷ್ಟು ಹಾಸ್ಯವನ್ನೂ ಬೆರೆಸಲು ಕೆಲವರು ಪ್ರಯತ್ನ ಮಾಡಿದ್ದಾರೆ. ಪ್ರಾಣಿಗಳನ್ನು ಬಳಸಿಕೊಂಡು ಅವುಗಳ ವಿಡಿಯೋವನ್ನೂ ಮಾಡಿ ‘ಕಿಕಿ ಚಾಲೆಂಜ್‌’ಗೇ ಚಾಲೆಂಜ್ ನೀಡಿದ್ದಾರೆ.

ಕಿಕಿ ಚಾಲೆಂಜ್‌ಗೆ ಪೊಲೀಸರ ವಾರ್ನಿಂಗ್‌:

ಕಿಕಿ ಚಾಲೆಂಜ್‌ ವೈರಲ್‌ ಆದ ನಂತರ ವಿಶ್ವಾದ್ಯಂತ ಯುವಕರು ಚಲಿಸುವ ಕಾರಿನಿಂದ ಇಳಿಯುವ, ನೃತ್ಯ ಮಾಡುವ ಸಾಹಸ ಮಾಡುತ್ತಿದ್ದಾರೆ. ಒಬ್ಬ ಯುವತಿ ಕಾರಿನಿಂದ ಇಳಿದು ನೃತ್ಯ ಮಾಡುವಾಗ ಆಕೆಯ ಪರ್ಸ್‌ ನೆಲದ ಮೇಲಿ ಬಿದ್ದಿತ್ತು. ಪರ್ಸ್‌ ತೆಗೆದುಕೊಳ್ಳಬೇಕೋ ಅಂಥವಾ ಕಾರು ಉಳಿಸಿಕೊಳ್ಳಬೇಕೋ ಎಂದು ನಿರ್ಧರಿಸುವುದರೊಳಗೆ ಕಳ್ಳರು ಆಕೆಯ ಪರ್ಸ್‌ಅನ್ನು ಲಪಟಾಯಿಸಿದ್ದರು.

ಇನ್ನೊಬ್ಬ ವ್ಯಕ್ತಿ ಕಾರಿನಿಂದ ಜಿಗಿದು ನೃತ್ಯ ಮಾಡುವ ವೇಳೆ ಎದಿರು ಬಂದ ಕಾರು ಗುದ್ದಿ ಗಾಯಗೊಂಡಿದ್ದಾನೆ. ಮತ್ತೊಬ್ಬ ವ್ಯಕ್ತಿ ರಸ್ತೆಯಲ್ಲಿದ್ದ ಕಂಬಕ್ಕೆ ಗುದ್ದಿದ್ದಾನೆ. ಇನ್ನೂ ಹಲವು ಜನ ಕಾರಿನಿಂದ ಜಿಗಿಯುವ ವೇಳೆ ಬಿದ್ದು, ನೋವು ಅನುಭವಿಸುತ್ತಿದ್ದಾರೆ. ವಿಶ್ವಾದ್ಯಂತ ಇಂತಹ ಪ್ರಕರಣಗಳು ವರದಿಯಾಗಲು ಪ್ರಾರಂಭಗೊಂಡ ನಂತರ ಹಲವಾರು ದೇಶಗಳು ಕಿಕಿ ಚಾಲೆಂಜ್‌ ಮೇಲೆ ನಿಷೇಧ ಹೇರಿವೆ. ಕೆಲವು ದೇಶಗಳಲ್ಲಿ ‘ಕಿಕಿ ಚಾಲೆಂಜ್‌’ಗೆ ಮುಂದಾಗದಂತೆ ಸ್ಥಳೀಯ ಪೊಲಿಸರು ಎಚ್ಚರಿಕೆ ನೀಡಿದ್ದಾರೆ. ಭಾರತದ ಮುಂಬೈ, ದೆಹಲಿ, ಉತ್ತರ ಪ್ರದೇಶದ ಪೊಲೀಸರು ಕೂಡ ಜನತೆಯನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.

ಕಿಕಿ ಚಾಲೆಂಜ್‌ಗೆ ಮುಂದಾಗಿ ಗಾಯ ಮಾಡಿಕೊಂಡ ಕೆಲವು ವೀಡಿಯೋಗಳು ಇಲ್ಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ಎಂತೆಂತಹ ಹುಚ್ಚಾಟಗಳು ಹುಟ್ಟುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೆ. ಅಪ್ಪತಪ್ಪಿಯೂ ಈ ಪ್ರಯೋಗಕ್ಕೆ ಇಳಿಯಬೇಡಿ ಅನ್ನೋದು ನಮ್ಮ ಕಳಕಳಿಯ ಮನವಿ.