samachara
www.samachara.com
ಪಾಳು ಬಿದ್ದ ಕಟ್ಟಡ ಹೇಳುತ್ತಿದೆ ಬಲ್ಗೇರಿಯಾದ ಕಮ್ಯೂನಿಸ್ಟ್‌ ಪಕ್ಷದ ಪತನದ ಕಥೆ
ಫೋಕಸ್

ಪಾಳು ಬಿದ್ದ ಕಟ್ಟಡ ಹೇಳುತ್ತಿದೆ ಬಲ್ಗೇರಿಯಾದ ಕಮ್ಯೂನಿಸ್ಟ್‌ ಪಕ್ಷದ ಪತನದ ಕಥೆ

1989ರಲ್ಲಿ ಪೋಲೆಂಡ್‌ನಿಂದ ಆರಂಭವಾಗಿ ಕಮ್ಯೂನಿಸ್ಟ್‌ ಚಿಂತನೆ ವಿರುದ್ಧ ಯುರೋಪ್‌ನಲ್ಲಿ ದೊಡ್ಡದೊಂದು ಅಲೆ ಎದ್ದಿತು. ಅದು ಬಲ್ಗೇರಿಯಾಗೂ ಹಬ್ಬಿ 10 ನವೆಂಬರ್‌ 1989ರಂದು ಕಮ್ಯೂನಿಸ್ಟ್‌ ಆಡಳಿತ ಕೊನೆಯಾಯಿತು.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಇದು ಮೇಲ್ನೋಟದ ನೋಡುಗರಿಗೆ ಒಂದು ಅಸಾಮಾನ್ಯ ವಿನ್ಯಾಸದ ಕಟ್ಟಡ ಮಾತ್ರ. ಆದರೆ ಆಳಕ್ಕಿಳಿದರೆ ಬಲ್ಗೇರಿಯಾ ಎಂಬ ಪುಟ್ಟ ದೇಶ, ಅದರೊಳಗಿನ ಕಮ್ಯೂನಿಸ್ಟ್‌ ಚಳುವಳಿ ಮತ್ತು ಅದರ ಪತನದ ಚರಿತ್ರೆಯನ್ನು ಹೇಳುತ್ತದೆ.

ಬಲ್ಗೇರಿಯಾ ದೇಶ ಏಷ್ಯಾ ಖಂಡದಲ್ಲಿದೆ. ದೇಶದ ಟರ್ಕಿ ಗಡಿ ಸಮೀಪದಲ್ಲಿ ಸುಂದರ ಬಾಲ್ಕನ್‌ ಬೆಟ್ಟಗಳಿದ್ದು ಅದರ ಮಧ್ಯದಲ್ಲಿ ‘ಬುಝ್ಲುಜ ಪೀಕ್‌’ನಲ್ಲಿ ಈ ಕಟ್ಟಡ ತಲೆ ಎತ್ತಿ ನಿಂತಿದೆ. ಹಾಗಾಗಿ ಇದಕ್ಕೆ ‘ಬುಝ್ಲುಜ ಸ್ಮಾರಕ’ ಎಂದು ಹೆಸರಿಡಲಾಗಿದೆ.

ಸಮುದ್ರ ಮಟ್ಟದಿಂದ ಸುಮಾರು 5,000 ಅಡಿ ಎತ್ತರದಲ್ಲಿ ಈ ಸ್ಮಾರಕವಿದೆ. ನೋಡುಗರಿಗೆ ಮಾತ್ರ ಇದು ಅಂದದ ಕಟ್ಟಡವಾದರೆ, ಇದರ ಅತೀ ಸುಂದರ ಮತ್ತು ವಿಶಿಷ್ಟ ವಿನ್ಯಾಸ ವಾಸ್ತುಶಿಲ್ಪಿಗಳೂ ತಲೆದೂಗುತ್ತಾರೆ. ಸ್ಮಾರಕದ ಹೊರ ಭಾಗದಲ್ಲಿ ಉದ್ದನೆಯ ಗೋಪುರವಿದೆ. ಅದರ ತುದಿಯಲ್ಲಿ ಕೆಂಪು ಬಣ್ಣದ ನಕ್ಷತ್ರದ ಚಿತ್ರವಿದೆ. ಈ ಗೋಪುರದ ಪಕ್ಕದಲ್ಲಿ 70 ಮೀಟರ್‌ ಎತ್ತರ, 60 ಮೀಟರ್‌ ಅಗಲದ, ಮೊಟ್ಟೆಯಾಕಾರದ ಮುಖ್ಯ ಸ್ಮಾರಕವಿದೆ.

ಕಟ್ಟಡದ ಒಳಾಂಗಣ. ಇವತ್ತಿಗೆ ಪಾಳು ಬಿದ್ದಿದೆ. 
ಕಟ್ಟಡದ ಒಳಾಂಗಣ. ಇವತ್ತಿಗೆ ಪಾಳು ಬಿದ್ದಿದೆ. 

ಸ್ಮಾರಕದ ಮಧ್ಯ ಭಾಗದಲ್ಲಿ ಅಡಿಟೋರಿಯಂ ಇದೆ. ಅಡಿಟೋರಿಯಂನ ಸೂರಿನ ಕೇಂದ್ರ ಭಾಗದಲ್ಲಿ ಕಮ್ಯೂನಿಸ್ಟ್‌ ಪಕ್ಷದ ಕತ್ತಿ ಮತ್ತು ಸುತ್ತಿಗೆಯ ಗುರುತನ್ನು ಮೂಡಿಸಲಾಗಿದೆ. ಅದರ ಸುತ್ತ ಕಮ್ಯೂನಿಸ್ಟ್‌ ಮ್ಯಾನಿಫೆಸ್ಟೋದ ಹೇಳಿಕೆಯನ್ನು ಬರೆಯಲಾಗಿದೆ. ಇನ್ನು ಅಡಿಟೋರಿಯಂನ ಸುತ್ತ ಕಮ್ಯೂನಿಸ್ಟ್‌ ಇತಿಹಾಸವನ್ನು ಸಾರುವ ಮೊಸಾಯಿಕ್‌ ಕಲ್ಲುಗಳಿಂದ ಮಾಡಿದ ಸುಂದರ ಚಿತ್ರಗಳಿವೆ.

ಬಲ್ಗೇರಿಯಾದ ಕಮ್ಯೂನಿಸ್ಟ್‌ ಇತಿಹಾಸ

ಬಲ್ಗೇರಿಯಾದ ಕಮ್ಯೂನಿಸ್ಟ್‌ ಇತಿಹಾಸವೆಂದರೆ ಅದು ಸುಮಾರು ಎರಡು ಶತಮಾನ ಆವರಿಸಿಕೊಳ್ಳುತ್ತದೆ. ಮತ್ತದು ಇದೇ ಬಾಲ್ಕನ್‌ ಬೆಟ್ಟಗಳು ಮತ್ತು ಬುಝ್ಲುಜ ಪೀಕ್‌ನ ಸುತ್ತವೇ ಗಿರಕಿ ಹೊಡೆಯುತ್ತದೆ.

ಅಟ್ಟೋಮನ್‌ ಟರ್ಕರ ವಿರುದ್ಧದ ಹೋರಾಟದೊಂದಿಗೆ ಬಲ್ಗೇರಿಯಾದ ಕಮ್ಯೂನಿಸ್ಟ್‌ ಚರಿತ್ರೆ ಆರಂಭವಾಗುತ್ತದೆ. 1396ರಿಂದ ದೇಶ ಟರ್ಕರ ವಶದಲ್ಲಿತ್ತು. ಈ ಟರ್ಕಿಯ ದೊರೆಗಳ ವಿರುದ್ಧ 19ನೇ ಶತನಮಾನದ ಮಧ್ಯ ಭಾಗದಲ್ಲಿ ಮೊದಲ ಬಾರಿಗೆ ದೊಡ್ಡಮಟ್ಟದ ವಿರೋಧದ ಅಲೆಗಳು ಏಳಲು ಆರಂಭವಾಯಿತು. ಅದಕ್ಕೊಂದು ಸಾಂಸ್ಥಿಕ ರೂಪ ನೀಡಿ ಹಝಿ ಡಿಮಿಟಾರ್‌ ಮತ್ತು ಸ್ಟೀಫನ್‌ ಕರಝ ಬಂಡುಕೋರರ ಸೇನೆ ಕಟ್ಟಿ ಅಟ್ಟೋಮನ್‌ ಟರ್ಕರ ವಿರುದ್ಧ ಯುದ್ಧಕ್ಕಿಳಿದರು. ಆದರೆ ಬಲಿಷ್ಠ ಟರ್ಕರ ವಿರುದ್ಧ ಹೋರಾಡಲಾಗದೇ ಇದೇ ಬುಝ್ಲುಜ ಪೀಕ್‌ನಲ್ಲಿ ಸೋಲೊಪ್ಪಿಕೊಂಡು, ಇಬ್ಬರೂ ತಮ್ಮ ಬಂಡುಕೋರ ಸೇನೆಯೊಂದಿಗೆ ಅಸುನೀಗಿದರು.

ಅದಾಗಿ ತಣ್ಣಗಾಗಿದ್ದ ಹೋರಾಟ 1876ರಲ್ಲಿ ಮತ್ತೆ ಚಿಗಿತುಕೊಂಡಿತು. ಇದರಲ್ಲಿಯೂ ಮತ್ತೆ ಸೋಲುವುದು ಬಲ್ಗೇರಿಯ ಜನರಿಗೆ ತಪ್ಪಲಿಲ್ಲ. ಆದರೆ ಯುದ್ಧ ಗೆದ್ದ ಟರ್ಕರ ಹಿಂಸೆ ನೋಡಲಾಗದೆ ರಷ್ಯಾದ ಝಾರ್‌ ಅಲೆಕ್ಸಾಂಡರ್-2 ತನ್ನ ಸೇನೆಯನ್ನು ಬಲ್ಗೇರಿಯಾಗೆ ನುಗ್ಗಿಸಿದ. ನಿರ್ಣಾಯಕ ಕದನ ಇದೇ ಬುಝ್ಲುಜದಿಂದ 10 ಕಿಲೋಮೀಟರ್‌ ದೂರದಲ್ಲಿರುವ ಶಿಪ್ಕಾ ಪಾಸ್‌ನಲ್ಲಿ ನಡೆಯಿತು. ಯುದ್ಧದಲ್ಲಿ ಟರ್ಕರು ಸೋತು ಹಿಮ್ಮೆಟ್ಟಿದರು.

ಇದಾದ ನಂತರ ಮತ್ತೆ ಮೂರು ಬಾರಿ ಟರ್ಕಿ ದೊರೆ ಸುಲೈಮನ್‌ ಪಾಶಾ ದಂಡೆತ್ತಿ ಬಂದ. ಕೊನೆಗೆ 1878 ಮಾರ್ಚ್ 3ರಂದು ಅಟ್ಟೋಮನ್ ಟರ್ಕರು ರಷ್ಯಾ ನೇತೃತ್ವದ ಸೇನೆಗೆ ಶರಣಾದರು. ಹೀಗೆ ಬಲ್ಗೇರಿಯಾ ಬಿಡುಗಡೆಗ ಭಾಗ್ಯ ಪಡೆಯಿತು.

ಕಮ್ಯೂನಿಸ್ಟ್‌ ಪಕ್ಷದ ಹುಟ್ಟು

ನಂತರ 1886ರ ಹೊತ್ತಿಗೆ ಬಲ್ಗೇರಿಯಾದಲ್ಲಿ ಸಮಾಜವಾದದ ಚಿಂತನೆಗಳು ಮೊಳಕೆಯೊಡೆಯಲು ಆರಂಭವಾಯಿತು. ಇದರ ಹಿಂದೆ ಇದ್ದವರು ಡಿಮಿಟಾರ್‌ ಬಲಗೋವ್‌. ಬಲ್ಗೇರಿಯಾದ ಕಮ್ಯೂನಿಸ್ಟ್‌ ಇತಿಹಾಸದ ಪಿತಾಮಹ ಇವರು. ಬಲಗೋವ್ ಕಾರ್ಲ್‌ ಮಾರ್ಕ್ಸ್‌ ಪುಸ್ತಕಗಳನ್ನು ಬಲ್ಗೇರಿಯಾ ಭಾಷೆಗೆ ತಂದು ಪ್ರಕಟಣೆ ಮಾಡಿದರು. ಅಷ್ಟೊತ್ತಿಗೆ ಹಲವು ಗುಂಪುಗಳ ಕೈಯಲ್ಲಿ ದೇಶದ ಚುಕ್ಕಾಣಿ ಇತ್ತು. ಇದನ್ನೆಲ್ಲಾ ಒಟ್ಟುಗೂಡಿಸಿ ಬಲಗೋವ್‌ 1891ರಲ್ಲಿ ‘ಬಲ್ಗೇರಿಯನ್ ಸೋಷಿಯಲಿಸ್ಟ್‌ ಆರ್ಗನೈಸೇಷನ್‌’ ಹುಟ್ಟುಹಾಕಿದರು. ಇದರ ಕೇಂದ್ರ ಸ್ಥಾನ ಇದೇ ಬುಝ್ಲುಜ. ಬುಝ್ಲುಜ ಸ್ಮಾರಕ ನಿರ್ಮಾಣವಾದ ಜಾಗದಲ್ಲೇ ಆಗಸ್ಟ್‌ 2, 1891ರಂದು ಮೊದಲ ಸಭೆಯೂ ನಡೆಯಿತು.

ಸ್ಮಾರಕಗಳ ಸರಣಿ

ಮುಂದೆ 1898ರಲ್ಲಿ ಇಲ್ಲೊಂದು ಸ್ಮಾರಕ ನಿರ್ಮಾಣವಾಗಬೇಕು. ದೇಶಕ್ಕಾಗಿ ಮಡಿದವರನ್ನು ಈ ಮೂಲಕ ನೆನಪು ಮಾಡಿಕೊಳ್ಳಬೇಕು ಎಂಬ ವಿಚಾರ ಪ್ರಸ್ತಾಪವಾಯಿತು. ಹಲವು ಅಡೆತಡೆಗಳಿಂದ ಅದು ಸಾಧ್ಯವಾಗಲಿಲ್ಲ. ಮುಂದೆ 1938ರಲ್ಲಿ ‘ಬುಝ್ಲುಜ ಲಾಡ್ಜ್‌’ ತೆರೆದುಕೊಂಡಿತು. ಬುಝ್ಲುಜ ನೋಡಲು ಬರುವವರಿಗೆ ಉಳಿದುಕೊಳ್ಳಲು ಇದರಲ್ಲಿ ವ್ಯವಸ್ಥೆ ಮಾಡಲಾಗುತ್ತಿತ್ತು.

ಇದೆಲ್ಲಾ ಘಟನಾವಳಿಗಳ ನಡುವೆ ಜರ್ಮನಿಯಲ್ಲಿ ಅಡಾಲ್ಫ್‌ ಹಿಟ್ಲರ್‌ ಎದ್ದು ಕುಳಿತ. ಬಲ್ಗೇರಿಯಾದ ಜನರಲ್ಲೂ ಬಲಪಂಥೀಯ ನಾಝಿ ಚಿಂತನೆಯ ಆಕರ್ಷಣೆ ಆರಂಭವಾಯಿತು. ಆಗ ಬಲ್ಗೇರಿಯನ್‌ ಸೋಷಿಯಲ್‌ ಡೆಮಾಕ್ರಾಟಿಕ್‌ ವರ್ಕರ್ಸ್‌ ಪಾರ್ಟಿ ಅವರ ವಿರುದ್ಧ ಸಂಘಟನೆ ಕಟ್ಟಿ ಹೋರಾಡಿತು. ಇದೇ ಬುಝ್ಲುಜ ಪೀಕ್‌ನಲ್ಲಿ ಶಸ್ತ್ರ ತರಬೇತಿ ಪಡೆಯುತ್ತಿದ್ದ ಬಲಪಂಥೀಯರನ್ನು ಒದ್ದೋಡಿಸಿತು. ಮುಂದೆ ಇದೇ ‘ಬಲ್ಗೇರಿಯನ್‌ ಕಮ್ಯೂನಿಷ್ಟ್‌ ಪಕ್ಷ’ವಾಯಿತು.

ಪಾಳು ಬಿದ್ದ ಕಟ್ಟಡ ಹೇಳುತ್ತಿದೆ ಬಲ್ಗೇರಿಯಾದ ಕಮ್ಯೂನಿಸ್ಟ್‌ ಪಕ್ಷದ ಪತನದ ಕಥೆ

1946ರಲ್ಲಿ ಬಲ್ಗೇರಿಯಾದಲ್ಲಿ ಏಕಪಕ್ಷ ಸರಕಾರ ಅಸ್ತಿತ್ವಕ್ಕೆ ಬಂತು. ಬಲ್ಗೇರಿಯಾದ ಸಮಾಜವಾದಿ ಚಳವಳಿಯ ಗೆಲುವಿನ ಸವಿ ನೆನಪಿಗೆ ಹಲವು ಸ್ಮಾರಕಗಳ ನಿರ್ಮಾಣಕ್ಕೆ ಸರಕಾರ ಕೈಹಾಕಿತು. 2ನೇ ಜುಲೈ 1961ರಂದು ಮೂರು ಸ್ಮಾರಕಗಳ ನಿರ್ಮಾಣ ಪೂರ್ಣಗೊಂಡಿತು. 1970ರಲ್ಲಿ ಆರಂಭಿಸಿದ ಬುಝ್ಲುಜ ಸ್ಮಾರಕ 1981ರಲ್ಲಿ ಉದ್ಘಾಟನೆಗೊಂಡಿತು. ಇದನ್ನು ನಾಝಿ ಸೈನದ್ಯದ ವಿರುದ್ಧ ಹೋರಾಡಿದ ಗ್ಯಬ್ರಾವೋ ಮತ್ತು ಸೆವ್ಲಿಯೋ ಎಂಬ ಇಬ್ಬರಿಗೆ ಅರ್ಪಣೆ ಮಾಡಲಾಯಿತು.

ಕಮ್ಯೂನಿಸ್ಟ್‌ ಯುಗಾಂತ್ಯ

ಆದರೆ ಈ ಖುಷಿ ಹೆಚ್ಚು ದಿನ ಉಳಿಯಲಿಲ್ಲ. 1989ರಲ್ಲಿ ಪೋಲೆಂಡ್‌ನಿಂದ ಆರಂಭವಾಗಿ ಕಮ್ಯೂನಿಸ್ಟ್‌ ಚಿಂತನೆ ವಿರುದ್ಧ ಯುರೋಪ್‌ನಲ್ಲಿ ದೊಡ್ಡದೊಂದು ಅಲೆ ಎದ್ದಿತು. ಅದು ಬಲ್ಗೇರಿಯಾಗೂ ಹಬ್ಬಿ 10 ನವೆಂಬರ್‌ 1989ರಂದು ಕಮ್ಯೂನಿಸ್ಟ್‌ ಆಡಳಿತ ಕೊನೆಯಾಯಿತು. ಬಲ್ಗೇರಿಯಾವೂ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಸೇರಿಕೊಂಡಿತು.

ಅದಾದ ನಂತರ 1990ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಮ್ಯೂನಿಸ್ಟ್‌ ಪಕ್ಷವೇ ಜಯ ಸಾಧಿಸಿತು. ಇದೇ ಪಕ್ಷ ಇವತ್ತು ಬಲ್ಗೇರಿಯನ್ ಸೋಷಿಯಲಿಸ್ಟ್‌ ಪಾರ್ಟಿ ಹೆಸರಿನಲ್ಲಿ ಅಸ್ತಿತ್ವದಲ್ಲಿದೆ. ಆದರೆ ದೇಶದಲ್ಲಿ ಕಮ್ಯೂನಿಸ್ಟ್‌ ಆಡಳಿತ ಮಾತ್ರ ಶಾಶ್ವತವಾಗಿ ಅಂತ್ಯ ಕಂಡಿತು.

ಇಡೀ ಬಲ್ಗೇರಿಯಾದ ಕಮ್ಯೂನಿಸ್ಟ್‌ ಚರಿತ್ರೆಯ ಕುರುಹಾಗಿ ಇಂದಿಗೂ ಬುಝ್ಲುಜ ಪೀಕ್‌ನಲ್ಲಿ ಈ ಸ್ಮಾರಕ ಕಾಣಸಿಗುತ್ತದೆ. ಆದರೆ ಸವಕಲಾದ ಕಮ್ಯೂನಿಸ್ಟ್‌ ಚಳುವಳಿಯಂತೆ ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಕಟ್ಟಡವೂ ಪಾಳು ಬಿದ್ದಿದೆ.

ಒಂದಷ್ಟು ಹವ್ಯಾಸಿ ಛಾಯಾಚಿತ್ರಕಾರರು ಬಿಟ್ಟರೆ ಇದನ್ನು ಇವತ್ತು ಗಮನಿಸುವವರು ಯಾರೂ ಇಲ್ಲ. ಇತ್ತೀಚೆಗೆ ಈ ಸ್ಮಾರಕವನ್ನು ಮರು ನಿರ್ಮಾಣ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಇದಕ್ಕಾಗಿ ಬುಝ್ಲುಜ ಪ್ರಾಜೆಕ್ಟ್‌ ಫೌಂಡೇಷನ್‌ ಹುಟ್ಟುಹಾಕಲಾಗಿದೆ. ಆದರೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ.