samachara
www.samachara.com
‘ಒಂದು ಕೆಜಿ ಟೀ ಪುಡಿಗೆ 39,001 ರೂ.’: ದಾಖಲೆ ಬೆಲೆಗೆ ಮಾರಾಟವಾದ ಚಿನ್ನದ ಬಣ್ಣದ ಎಲೆಗಳು!
ಫೋಕಸ್

‘ಒಂದು ಕೆಜಿ ಟೀ ಪುಡಿಗೆ 39,001 ರೂ.’: ದಾಖಲೆ ಬೆಲೆಗೆ ಮಾರಾಟವಾದ ಚಿನ್ನದ ಬಣ್ಣದ ಎಲೆಗಳು!

ದಾಖಲೆ ಬೆಲೆಗೆ ಮಾರಾಟವಾದ ಟೀ ಚಿನ್ನದ ಬಣ್ಣದ ಎಲೆಯ ಸಾಂಪ್ರದಾಯಿಕ ಚಹಾ. ಇದಕ್ಕೆ ‘ಆರ್ಥೊಡಾಕ್ಸ್‌ ಟೀ’ ಎನ್ನುತ್ತಾರೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಗುರುವಾರ ಬೆಳಿಗ್ಗೆ 8.54ರ ಸಮಯ. ಅಸ್ಸಾಂನ ಗುವಾಹಟಿಯಲ್ಲಿ ಮಂಜು ಕರಗುತ್ತಾ ಸೂರ್ಯ ಮೆಲ್ಲನೆ ಮೇಲಕ್ಕೇರಲು ಆರಂಭಿಸಿದ್ದ. ನಗರದ ಜನರು ತಮ್ಮ ಮನೆ, ಹೋಟೆಲ್‌ಗಳಲ್ಲಿ ಚುಮು ಚುಮು ಚಳಿಗೆ ಚಹಾವನ್ನು ಆಸ್ವಾದಿಸುತ್ತಾ ಕುಳಿತಿದ್ದರು. ಅದೇ ಹೊತ್ತಿಗೆ ಇಲ್ಲಿನ ಗುವಾಹಟಿ ಹರಾಜು ಕೇಂದ್ರದಲ್ಲಿ ಅದೇ ಚಹಾ ಹೊಸ ದಾಖಲೆಯೊಂದನ್ನು ಬರೆದಿತ್ತು.

ಇಡೀ ವಿಶ್ವದಲ್ಲೇ ಅತೀ ಹೆಚ್ಚಿನ ಬೆಲೆಗೆ ಒಂದು ಕಿಲೋ ಚಹಾ ಮಾರಾಟವಾಗಿತ್ತು. ಕಂಪ್ಯೂಟರ್‌ ಮುಂದೆ ಕುಳಿತಿದ್ದ ಸೌರಭ್‌‌ ಟ್ರೇಡಿಂಗ್‌ ಕಂಪನಿಯ ಮಂಗಿಲಾಲ್‌ ಮಹೇಶ್ವರಿ ಒಂದು ಕಿಲೋ ಚಹಾಕ್ಕೆ 39,001 ರೂಪಾಯಿ ಬಿಡ್‌ ಮಾಡಿ ಎಲ್ಲರ ಹುಬ್ಬೇರಿಸಿದ್ದರು. ಅಸ್ಸಾಂನ ಮನೋಹರಿ ಟೀ ಎಸ್ಟೇಟ್‌ನಲ್ಲಿ ಬೆಳೆದ ಚಹಾವನ್ನು ಅವರು ವಿಶ್ವದಲ್ಲೇ ದಾಖಲೆ ಬೆಲೆಗೆ ಖರೀದಿಸಿದ್ದರು. ಈ ಹಿಂದೆ 18,801 ರೂಪಾಯಿಗೆ ಅರುಣಾಚಲ ಪ್ರದೇಶದ ದೊನ್ಯಿ ಪೋಲೋ ಎಸ್ಟೇಟ್‌ನ ಚಹಾವನ್ನು ಅವರು ಇದೇ ರೀತಿ ಖರೀದಿಸಿದ್ದು ದಾಖಲೆಯಾಗಿತ್ತು.

ಸನ್‌ಟಾಕ್‌  ಟೀ ಕಂಪನಿಯ ಮನೋಹರಿ ಟೀ ಎಸ್ಟೇಟ್. ಕಂಪನಿಗೆ ಸನ್‌ಟಾಕ್‌ ಗಾರ್ಡನ್‌ ಎಂಬ ಇನ್ನೊಂದು ಎಸ್ಟೇಟ್‌ ಇದೆ.
ಸನ್‌ಟಾಕ್‌  ಟೀ ಕಂಪನಿಯ ಮನೋಹರಿ ಟೀ ಎಸ್ಟೇಟ್. ಕಂಪನಿಗೆ ಸನ್‌ಟಾಕ್‌ ಗಾರ್ಡನ್‌ ಎಂಬ ಇನ್ನೊಂದು ಎಸ್ಟೇಟ್‌ ಇದೆ.

ದಾಖಲೆ ಬೆಲೆಗೆ ಮಾರಾಟವಾದ ಟೀ ಚಿನ್ನದ ಬಣ್ಣದ ಎಲೆಯ ಸಾಂಪ್ರದಾಯಿಕ ಚಹಾ. ಇದಕ್ಕೆ ‘ಆರ್ಥೊಡಾಕ್ಸ್‌ ಟೀ’ ಎನ್ನುತ್ತಾರೆ. ವಿಶೇಷ ತಳಿಯ ಗಿಡಗಳಿಂದ ಎಳೆ ಚಿಗುರನ್ನು ಕಿತ್ತು ಕೈಯಿಂದಲೇ ಸುರುಳಿ ಸುತ್ತಿ ಈ ದುಬಾರಿ ಚಹಾ ತಯಾರಿಸಲಾಗುತ್ತದೆ. “ಇದನ್ನು ತಯಾರಿಸಲು ಭಾರೀ ಶ್ರಮ ಮತ್ತು ಬದ್ಧತೆಯ ಹೂಡಿಕೆ ಮಾಡಲಾಗಿರುತ್ತದೆ. ಇದು ನೋಡಲು ಶುದ್ಧ 24 ಕ್ಯಾರೆಟ್‌ ಚಿನ್ನದ ರೀತಿ ಕಾಣಿಸುತ್ತದೆ,” ಎನ್ನುತ್ತಾರೆ ಸನ್‌ಟಾಕ್‌ ಟೀ ಕಂಪನಿಯ ರಂಜನ್ ಲೋಹಿಯಾ. ಈ ಚಹಾದಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಜತೆಗೆ ಚಿನ್ನದ ಬಣ್ಣದ ಡಿಕಾಕ್ಷನ್‌ನ್ನು ಈ ಚಹಾ ನೀಡುತ್ತದೆ. ವಿಶೇಷ ಸ್ವಾದವೂ ಇದಕ್ಕಿರುತ್ತದೆ. ಈ ಕಾರಣಕ್ಕೆ ಇದಕ್ಕೆ ಚಿನ್ನದ ಬೆಲೆ ಬಂದಿದೆ ಎನ್ನುತ್ತಾರೆ ಅವರು.

“ಗುಣಮಟ್ಟದ ಚಹಾಕ್ಕೆ ಬೆಲೆ ಇದೆ ಮತ್ತು ಚಹಾ ಪ್ರೀಯರು ಸೃಜನಶೀಲ ಮತ್ತು ಐಷಾರಾಮಿ ದರ್ಜೆಯ ಚಹಾಕ್ಕೆ ಎಷ್ಟೇ ಹಣವನ್ನು ನೀಡಲು ತಯಾರಿದ್ದಾರೆ ಎಂಬುದನ್ನು ದಾಖಲೆ ಬೆಲೆ ತೋರಿಸುತ್ತದೆ. ಕಳೆದುಕೊಂಡ ಅಸ್ಸಾಂ ಚಹಾದ ವೈಭವವನ್ನು ಮರಳಿ ಪಡೆಯಲು ಇದು ಸಹಾಯ ಮಾಡಲಿದೆ. ನಾವು ಇನ್ನೂ ಹಲವು ವಿಶೇಷ ಬಗೆಯ ಚಹಾ ಉತ್ಪಾದನೆಯನ್ನು ಮುಂದುವರಿಸಲಿದ್ದೇವೆ,” ಎನ್ನುತ್ತಾರೆ ಲೋಹಿಯಾ.

ಆರ್ಥೊಡಾಕ್ಸ್‌ ಎಂಬ ದುಬಾರಿ ಚಹಾ

ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸುವ ಆರ್ಥೊಡಾಕ್ಸ್‌ ಚಹಾ ತನ್ನ ವಿಶಿಷ್ಟ ಗುಣಗಳಿಗಾಗಿ ಇತಿಹಾಸದ ತುಂಬಾ ದುಬಾರಿ ವಸ್ತುವಾಗಿಯೇ ಉಳಿದುಕೊಂಡಿದೆ. ಈ ಹಿಂದೆ ಇದರ ಗರಿಷ್ಠ ಮಾರಾಟ ಬೆಲೆಯನ್ನು 20,000 ಸಾವಿರ ರೂಪಾಯಿಗೆ ಚಹಾ ಮಂಡಳಿ ಮಿತಿಗೊಳಿಸಿತ್ತು. ಕಳೆದ ತಿಂಗಳು ಮೊದಲ ಬಾರಿಗೆ 18,801 ರೂಪಾಯಿಗೆ ಈ ಚಹಾ ಮಾರಾಟವಾದ ನಂತರ ಇಲ್ಲಿನ ಬೆಳೆಗಾರರು ಮಿತಿ ಹೆಚ್ಚಳ ಮಾಡುವಂತೆ ಮಂಡಳಿಯನ್ನು ಒತ್ತಾಯಿಸಿದ್ದರು. ನಂತರ ಇದನ್ನು 40,000 ಸಾವಿರಕ್ಕೆ ಏರಿಕೆ ಮಾಡಲಾಗಿತ್ತು. ಹಾಗೆ ಏರಿಕೆ ಮಾಡಿದ ಒಂದು ತಿಂಗಳಲ್ಲೇ ಚಹಾಕ್ಕೆ ಚಿನ್ನದ ಬೆಲೆ ಸಿಕ್ಕಿದೆ.

ಚಿನ್ನದ ಬಣ್ನದ ಸಾಂಪ್ರದಾಯಿಕ ಚಹಾ (ಆರ್ಥೊಡಾಕ್ಸ್‌ ಗೋಲ್ಡನ್ ಹ್ಯೂ ಟೀ)
ಚಿನ್ನದ ಬಣ್ನದ ಸಾಂಪ್ರದಾಯಿಕ ಚಹಾ (ಆರ್ಥೊಡಾಕ್ಸ್‌ ಗೋಲ್ಡನ್ ಹ್ಯೂ ಟೀ)

“ಎಲ್ಲಾ ಟೀ ಉತ್ಪಾದಕರೂ ಈ ರೀತಿಯ ಅತ್ಯುತ್ತಮ ಗುಣಮಟ್ಟದ ಚಹಾವನ್ನು ತಯಾರಿಸಬೇಕು. ಆಗ ಬೆಲೆ ಸಮಸ್ಯೆಯೇ ಆಗುವುದಿಲ್ಲ,” ಎನ್ನುತ್ತಾರೆ ಈ ದುಬಾರಿ ಚಹಾ ಖರೀದಿಸಿದ ಮಂಗಿಲಾಲ್‌ ಮಹೇಶ್ವರಿ. ಅವರು ಈ ಚಹಾವನ್ನು ಅಹಮದಾಬಾದ್, ಜೈಪುರ ಮತ್ತು ಕಲ್ಕತ್ತಾದ ಮೂವರಿಗೆ ಮಾರಿದ್ದಾರೆ. ಒಬ್ಬರು ಚಹಾದ ಅಂಗಡಿ ಇಟ್ಟುಕೊಂಡಿದ್ದರೆ, ಇನ್ನಿಬ್ಬರು ಕಾರ್ಪೊರೇಟ್‌ ಗಿಫ್ಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಹಾ ಮ್ಯಾನ್

ಈ ಅಧ್ಬುತ ಚಹಾದ ಹಿಂದೆ ಇರುವವರು ಸಿ. ಕೆ. ಪರಾಶೆರ್ ಎಂಬ 84 ವರ್ಷದ ಅಜ್ಜ. ಸುತ್ತ ಮುತ್ತ ‘ಟೀ ಮ್ಯಾನ್‌’ ಎಂದೇ ಪ್ರಸಿದ್ಧರಾಗಿರುವ ಅವರ ಕಲ್ಪನೆಯಲ್ಲಿ ಅರಳಿದ ಚಹಾ ಇವತ್ತು ಜಾಗತಿಕ ದಾಖಲೆಯನ್ನು ಬರೆದಿದೆ. ಇವರು ದಿಬ್ರುಗಡ್ ಜಿಲ್ಲೆಯಲ್ಲಿರುವ ಮನೋಹರಿ ಟೀ ಎಸ್ಟೇಟ್‌ನ ಏಜೆಂಟರಾಗಿದ್ದಾರೆ. ಇಳಿ ವಯಸ್ಸಲ್ಲೂ ಬತ್ತದ ಉತ್ಸಾಹದ ಚಿಲುಮೆಯಂತಿರುವ ಪರಾಶೆರ್‌ “ನಾನು ಟೀ ಮ್ಯಾನ್‌ ಮತ್ತು ಉತ್ತಮ ಚಹಾ ಮಾಡುವುದೇ ನನ್ನ ಕಸುಬು,” ಎಂದು ನಗು ಬೀರುತ್ತಾರೆ.

ದಾಖಲೆ ಬೆಲೆಗೆ ಮಾರಾಟವಾದ ಚಹಾದ ಹಿಂದೆ ಪರಾಶೆರ್‌ ಕೈ ಚಳಕ ಎಷ್ಟಿದೆಯೋ ಅಸ್ಸಾಂನ ಮಣ್ಣಿನ ಕೊಡುಗೆಯೂ ಇದಕ್ಕೆ ಕಾರಣವಾಗಿದೆ. ಚಹಾ ಉತ್ಪಾದನೆಯಾದ ಮನೋಹರಿ ಟೀ ಎಸ್ಟೇಟ್‌ ಸಮುದ್ರ ಮಟ್ಟದಿಂದ 390 ಅಡಿ ಎತ್ತರದಲ್ಲಿದೆ. ಸುಮಾರು 1,800 ಎಕರೆ ಹರಡಿಕೊಂಡಿರುವ ಈ ಎಸ್ಟೇಟ್‌ನಲ್ಲಿ 1000 ಎಕರೆ ಟೀ ಪ್ಲಾಂಟೇಷನ್‌ ಇದೆ.

ಇಲ್ಲಿನ ಮಣ್ಣು, ವಾತಾವರಣ ಮತ್ತು ಸ್ಥಳೀಯ ಚಹಾದ ತಳಿ ವಿಶೇಷವಾಗಿದ್ದು ಅದ್ಭುತ ಚಹಾದ ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವುಗಳಿಂದಾಗಿಯೇ ಅಸ್ಸಾಂನ ಚಹಾಕ್ಕೆ ಟೀ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ಸಾಂಪ್ರದಾಯಿಕ ಚಹಾ ತಯಾರಿಕೆಗೆ ಅಸ್ಸಾಂ ಜಗತ್ಪ್ರಸಿದ್ಧಿ ಪಡೆದಿದೆ.