samachara
www.samachara.com
‘ಆಹಾರ- ಸಂಸ್ಕೃತಿ’: ಹಸಿ ಮಾಂಸದ ರುಚಿ ಉಂಡವರಿಗೇ ಗೊತ್ತು!
ಫೋಕಸ್

‘ಆಹಾರ- ಸಂಸ್ಕೃತಿ’: ಹಸಿ ಮಾಂಸದ ರುಚಿ ಉಂಡವರಿಗೇ ಗೊತ್ತು!

ಆಫ್ರಿಕಾ ಖಂಡದಲ್ಲಿನ ಇಥಿಯೋಪಿಯಾ ರಾಷ್ಟ್ರದ ಜನರಿಗೆ ಹಸಿ ಮಾಂಸವೆಂದರೆ ಪಂಚಪ್ರಾಣ. ಆರೋಗ್ಯವನ್ನು ಬದಿಗೊತ್ತಿ ಪ್ರತಿನಿತ್ಯ ಹಸಿಮಾಂಸಕ್ಕಾಗಿ ಇಲ್ಲಿನ ಜನರು ಹಾತೊರೆಯುತ್ತಾರೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಇಥಿಯೋಪಿಯಾ, ಸುಮಾರು 8.8 ಕೋಟಿ ಜನಸಂಖ್ಯೆ ಇರುವ ಆಫ್ರಿಕಾ ಖಂಡದ ರಾಷ್ಟ್ರ. ಅಭಿವೃದ್ಧಿ ಶೀಲ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಈ ದೇಶ ತನ್ನ ಅಹಾರ ಪದ್ಧತಿಯಿಂದಲೂ ವಿಭಿನ್ನವಾದ ಸ್ಥಾನ ಪಡೆದಿದೆ. ಇಲ್ಲಿಯ ಜನರಿಗೆ ಬೇಯಿಸಿದ ಪದಾರ್ಥಗಳಿಗಿಂತ ಹಸಿ ಮಾಂಸವೇ ಇಷ್ಟ.

ಇಥಿಯೋಪಿಯನ್ನರು ಇಥಿಯೋಪಿಯಾದಲ್ಲೇ ಇರಲಿ ಅಥವಾ ಹೊರ ದೇಶಗಳಲ್ಲಿ ವಾಸಿಸುತ್ತಿರಲಿ, ಅವರಿಗೆ ಹಸಿ ಮಾಂಸವೇ ಬೇಕು. ಚಿಕ್ಕ ಪುಟ್ಟ ಹಳ್ಳಿಗಳಿಂದ ಹಿಡಿದು ದೊಡ್ಡ ದೊಡ್ಡ ನಗರಗಳವರೆಗೂ ಇಥಿಯೋಪಿಯ ಜನರು ದನ, ಮೇಕೆ, ಕುರಿ, ಕೋಳಿಗಳ ಹಸಿ ಮಾಂಸವನ್ನು ಸವಿಯಲು ಇಚ್ಛಿಸುತ್ತಾರೆ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

ಇಥಿಯೋಪಿಯಾದ ರಾಜಧಾನಿ ಅಡೀಸ್‌ ಅಬಾಬಾಕ್ಕೆ ಹೋದರೆ ದಿನದ 24 ಗಂಟೆಯೂ ಹಸಿ ಮಾಂಸ ದೊರೆಯುತ್ತದೆ. ಒಂದು ಕೆಜಿ ಹಸಿ ಮಾಂಸದ ಬೆಲೆ 6 ರಿಂದ 10 ಡಾಲರ್‌. ಇಲ್ಲಿನ ಜನರು ಹೆಚ್ಚಾಗಿ ಮಧ್ಯಾಹ್ನದ ಹೊತ್ತು ಹಸಿ ಮಾಂಸವನ್ನು ತಿನ್ನಲು ಇಚ್ಛಿಸುತ್ತಾರೆ. ಅದರಲ್ಲೂ ಸರಕಾರಿ ರಜೆ ಮತ್ತು ಹಬ್ಬ ಹರಿದಿನಗಳಲ್ಲಿ ಹಸಿ ಮಾಂಸ ತಿನ್ನಲು ಇಥಿಯೋಪಿಯನ್ನರು ಮುಗಿ ಬೀಳುತ್ತಾರೆ.

“ಈ ಹಸಿ ಮಾಂಸದ ಆಹಾರ ಪದ್ಧತಿಯಿಂದಾಗಿ ಇಲ್ಲಿನ ಜನರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ,” ಎನ್ನುತ್ತಾರೆ ಇಲ್ಲಿನ ವೈದ್ಯರು. ಆದರೆ, “ಹಸಿ ಮಾಂಸದಿಂದ ನಮ್ಮಲ್ಲಿ ಹೊಸತನ ಉಂಟಾಗುತ್ತದೆ,” ಎಂಬ ಉತ್ತರ ನೀಡುವ ಇಥಿಯೋಪಿಯನ್ನರು ಇದನ್ನು ತ್ಯಜಿಸಲು ಸಿದ್ಧರಿಲ್ಲ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

ಜನರ ಈ ಅಹಾರ ಪದ್ಧತಿಗೆ ಅಲ್ಲಿನ ಸಾಂಸ್ಕೃತಿಕ ಹಿನ್ನೆಲೆಯೂ ಇದೆ. ಈ ಹಿಂದೆ ಇಲ್ಲಿನ ‘ಗುಜೆರಾ’ ಎಂಬ ಪುಟ್ಟ ಧಾರ್ಮಿಕ ಸಮುದಾಯ ಹಸಿ ಮಾಂಸವನ್ನು ತನ್ನ ಜೀವನ ಶೈಲಿಯ ಭಾಗವಾಗಿಸಿಕೊಂಡಿತ್ತು. ಇವರಿಂದ ಆರಂಭವಾದ ಹಸಿ ಮಾಂಸದ ಊಟ ಹಂತ ಹಂತವಾಗಿ ಇಡೀ ಇಥಿಯೋಪಿಯಾಗೆ ಹರಡಿಕೊಂಡಿತು. 16ನೇ ಶತಮಾನದ ಹೊತ್ತಿಗೆ ಹಸಿ ಮಾಂಸ ತಿನ್ನುವವರು ಇಥಿಯೋಪಿಯಾದ ತುಂಬೆಲ್ಲಾ ಇದ್ದರು. ಅದೇ ಇಂದು ಇಥಿಯೋಪಿಯಾದಲ್ಲಿ ಹಸಿ ಮಾಂಸದೂಟ ಎನ್ನುವುದು ಅತ್ಯಂತ ಸಾಮಾನ್ಯ ಮತ್ತು ಸಂತಸದಾಯಕ ಸಂಗತಿಯಾಗಿ ಬೆಳೆದು ನಿಂತಿದೆ.

ಇದು ಎಷ್ಟರ ಮಟ್ಟಿಗೆ ಸಾಮಾನ್ಯ ಸಂಗತಿಯಾಗಿದೆ ಎಂದರೆ ಧರ್ಮ, ಜಾತಿಗಳ ಎಲ್ಲೆಯನ್ನೂ ಮೀರಿ ಹಸಿ ಮಾಂಸ ಸೇವನೆ ಇಥಿಯೋಪಿಯಾದ ತುಂಬೆಲ್ಲಾ ಹರಡಿಕೊಂಡಿದೆ. ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ.62ರಷ್ಟು ಜನರು ಕ್ರಿಶ್ಚಿಯನ್ನರು. ಇದರಲ್ಲಿ ಶೇ.43.5ರಷ್ಟು ಜನ ಸಂಪ್ರದಾಯವಾದಿ ಕ್ರೈಸ್ತರಾದರೆ, ಶೇ.18.6ರಷ್ಟು ಜನ ಪ್ರೊಟೆಸ್ಟೆಂಟ್‌ ಕ್ರೈಸ್ತರು. ಉಳಿದ 0.7ರಷ್ಟು ಜನ ಕ್ಯಾಥೋಲಿಕ್‌ ಕ್ರೈಸ್ತರು. ಶೇ.33.9ರಷ್ಟು ಮಂದಿ ಮುಸಲ್ಮಾನರು. ಉಳಿದ ಒಂದಷ್ಟು ಸಮುದಾಯದ ಜನರೂ ಇಲ್ಲಿದ್ದಾರೆ. ಬೇರೆ ಬೇರೆ ಸಮುದಾಯದವರಾದರೂ ತಮ್ಮ ಧರ್ಮ, ಆಚಾರ, ವಿಚಾರಗಳ ಹಂಗು ತೊರೆದು ಇಲ್ಲಿನ ಜನ ಹಸಿ ಮಾಂಸಕ್ಕಾಗಿ ಹಾತೊರೆಯುತ್ತಾರೆ.

‘ಆಹಾರ- ಸಂಸ್ಕೃತಿ’: ಹಸಿ ಮಾಂಸದ ರುಚಿ ಉಂಡವರಿಗೇ ಗೊತ್ತು!

ಸಾಮಾನ್ಯವಾಗಿ ಇಥಿಯೋಪಿಯನ್ನರ ವಿಶೇಷ ಆಹಾರವೆಂದರೆ ಇಂಜೆರಾ, ಕ್ರಿಫ್ಟೋ ಎಂಬ ಮಾಂಸದ ಖಾದ್ಯ ಮತ್ತು ಮಿಟ್ಮಿಟಾ. ಇವು ಮೂರನ್ನೂ ಒಟ್ಟಾಗಿ ಸೇರಿಸಿ ಇಲ್ಲಿನ ಜನರು ತಿನ್ನುತ್ತಾರೆ. ಮಾಂಸವೆಲ್ಲಾ ಮುಗಿದ ಮೇಲೆ ವೈನ್‌, ಬಿಯರ್‌ ಅಥವಾ ಸೋಡಾ ಮೂಲಕ ಊಟವನ್ನು ಪರಿಸಮಾಪ್ತಿಗೊಳಿಸಲಾಗುತ್ತದೆ.

ಇಥಿಯೋಪಿಯನ್ನರ ಎಲ್ಲಾ ಆಹಾರಗಳಲ್ಲೂ ಕೂಡ ಸಾಮಾನ್ಯವಾಗಿ ಕಂಡುಬರುವುದು ‘ಇಂಜೆರಾ’, ಅಹಾರ ಧ್ಯಾನಗಳಿಂದ ಮಾಡಿದ ಪದಾರ್ಥವಿದು. ನಮ್ಮಲ್ಲಿ ಚಿಕನ್‌ ರೋಲ್‌ನಲ್ಲಿ ಚಪಾತಿ ಬಳಸಿದಂತೆ ಇಲ್ಲಿ ‘ಇಂಜೆರಾ’ ಬಳಕೆಯಾಗುತ್ತದೆ. ಇನ್ನು ‘ಕ್ರಿಫ್ಟೋ’, ಇದು ಇಥಿಯೋಪಿಯನ್ನರ ಮುಖದಲ್ಲಿ ಮಂದಹಾಸ ಮೂಡಿಸುವ ಹೆಸರು. ಕಿಫ್ಟೋ ಎಂದರೆ ಮತ್ತೇನಿಲ್ಲ; ದನದ ಹಸಿ ಮಾಂಸ. ಇದನ್ನು ಮಸಾಲೆ ಮಿಶ್ರಿತ ಬೆಣ್ಣೆಯಲ್ಲಿ ಕಲೆಸಿರಲಾಗುತ್ತದೆ. ಕ್ರಿಫ್ಟೋವನ್ನು ಇಂಜೆರಾದಲ್ಲಿ ಸುತ್ತಿ ಅದನ್ನು ಮೆಣಸಿನ ಕಾಯಿ, ಸಾಂಬಾರ ಪದಾರ್ಥಗಳನ್ನು ರುಬ್ಬಿ ಮಾಡಿದ ‘ಮಿಟ್ಮಿಟಾ’ ಹೆಸರಿನ ಚಟ್ನಿಯಲ್ಲಿ ಅದ್ದಿ ತಿನ್ನುವುದೇ ಈಥಿಯೋಪಿಯನ್ನರಿಗೆ ಸ್ವರ್ಗ ಸುಖ. ಕ್ರಿಫ್ಟೋನಲ್ಲಿ ಎರಡು ವಿಧವಿದೆ. ಒಂದು ಸಂಪೂರ್ಣ ಹಸಿ ಮಾಂಸ . ಮತ್ತೊಂದು ಅರ್ಧಂಬರ್ಧ ಬೇಯಿಸಿದ ಮಾಂಸ. ಎರಡೂ ಕೂಡ ಇಥಿಯೋಪಿಯನ್ನರ ನೆಚ್ಚಿನ ಖಾದ್ಯಗಳು.

ಇಂಜೆರಾ, ಕ್ರಿಫ್ಟೋ ಮತ್ತು ಮಿಟ್ಮಿಟಾ (ಸಾಂಧರ್ಭಿಕ ಚಿತ್ರ)
ಇಂಜೆರಾ, ಕ್ರಿಫ್ಟೋ ಮತ್ತು ಮಿಟ್ಮಿಟಾ (ಸಾಂಧರ್ಭಿಕ ಚಿತ್ರ)

ಹಸಿ ಮಾಂಸಗಳನ್ನು ಸವಿಯುವ ಸಲುವಾಗಿಯೇ ಇಥಿಯೋಪಿಯನ್ನರು ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಶತಮಾನಗಳ ಕಾಲದಿಂದಲೂ ಕೂಡ ಈ ಹಬ್ಬಗಳು ಆಚರಣೆಯಲ್ಲಿವೆ. ಈ ಹಬ್ಬಗಳಲ್ಲಿ ಹೆಚ್ಚು ಅದ್ಧೂರಿಯಾಗಿ ಆಚರಿಸಲ್ಪಡುವುದು ‘ಕ್ರಿಫ್ಟೋ ಹಬ್ಬ’. ಈ ಹಬ್ಬದಲ್ಲಿ ವಿಧ ವಿಧವಾದ ಕ್ರಿಫ್ಟೋಗಳು ತಯಾರಾಗುತ್ತವೆ. ಮಾತ್ರವಲ್ಲದೇ ಹೊಸ ಹೊಸ ಕ್ರಿಫ್ಟೋಗಳ ಅನ್ವೇಷಣೆ ಕೂಡ ನಡೆಯುತ್ತದೆ.

ಇವನ್ನು ಬಿಟ್ಟರೆ ‘ತೇರೆ ಸಾಗಾ’ ಎಂಬ ಮದುವೆಗಳಲ್ಲಿ ಬಳಸುವ ಆಹಾರ ಖಾದ್ಯವೂ ಕೂಡ ಇಥಿಯೋಪಿಯನ್ನರಿಗೆ ಪಂಚಪ್ರಾಣ. ಇದೂ ಕೂಡ ಹಸಿ ಮಾಂಸವೇ. ಆದರೆ ಇಲ್ಲಿ ಬಳಸುವ ಮಿಟ್ಮಿಟಾದಲ್ಲಿ 16ಕ್ಕೂ ಹೆಚ್ಚು ತರಹದ ಆಹಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಇವುಗಳನ್ನು ಬಿಟ್ಟು ಹೆಚ್ಚು ಸಂತಸ ನೀಡುವ ಖಾದ್ಯವೆಂದರೆ ‘ವಾಟ್‌’. ಇದು ಕುರಿ, ಮೇಕೆ ಅಥವಾ ದನದ ಮಾಂಸದಿಂದ ಮಾಡುವ ಮೇಲೋಗರ (ಕರ್ರಿ). ಇದರಲ್ಲಿಯೂ ಕೂಡ ತರಹಾವೇರಿ ಮಸಾಲೆ ಪದಾರ್ಥಗಳು ಬಳಕೆಯಾಗಿರುತ್ತವೆ.

ಜಗತ್ತಿನ ಇತರೆ ಭಾಗಗಳ ಜನರೂ ಕೂಡ ಹಸಿ ಮಾಂಸವನ್ನು ತಿನ್ನುತ್ತಾರೆ. ಜಪಾನಿಯನ್ನರು ಹೆಚ್ಚಾಗಿ ಹಸಿ ಮೀನುಗಳನ್ನು ತಿನ್ನುತ್ತಾರೆ. ಪ್ಯಾರಿಸ್‌ನ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ಹಸಿ ಮಾಂಸ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ಆದರೆ ಇಥಿಯೋಪಿಯಾ ಇವೆಲ್ಲವಕ್ಕಿಂತ ಮುಂದೆ ಸಾಗಿ ಹಸಿ ಮಾಂಸವನ್ನು ತನ್ನ ಸಂಸ್ಕೃತಿಯ ಭಾಗವಾಗಿಸಿಕೊಂಡಿರುವುದು ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ವಿಭಿನ್ನವಾಗಿ ಕಾಣಿಸಲು ಕಾರಣವಾಗಿದೆ.