samachara
www.samachara.com
‘ಮತ್ತೇರಿದ ಜಗತ್ತು’: ವಿಶ್ವದ ಟಾಪ್‌  10 ‘ಮಹಾ ಕುಡುಕ’ರಿರೋ ದೇಶಗಳಿವು
ಫೋಕಸ್

‘ಮತ್ತೇರಿದ ಜಗತ್ತು’: ವಿಶ್ವದ ಟಾಪ್‌ 10 ‘ಮಹಾ ಕುಡುಕ’ರಿರೋ ದೇಶಗಳಿವು

ಕುಡಿತ ಎನ್ನುವುದು ವಿಶ್ವಕ್ಕೆ ಅಂಟಿಕೊಂಡಿರುವ ವ್ಯಸನ ಎನ್ನುವುದೇನೋ ನಿಜ. ಆದರೆ ಈ ರಾಷ್ಟ್ರಗಳು ತಾವೇ ಮದ್ಯಕ್ಕೆ ಅಂಟಿಕೊಂಡಿವೆ. ಈ ದೇಶಗಳ ಸರಕಾರಗಳು ವ್ಯಸನವನ್ನು ಬಿಡಿಸಲು ನಡೆಸುತ್ತಿರುವ ಪ್ರಯತ್ನಗಳೆಲ್ಲಾ ವ್ಯರ್ಥವೆನಿಸುತ್ತಿವೆ. 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

‘ಮದ್ಯಪಾನ’ - ಭಾರತದಲ್ಲಿ ಕಾನೂನುಬದ್ಧವಾದರೂ, ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಕುಡುಕರ ಸಂಖ್ಯೆ ಕಡಿಮೆಯೇ. ಕಾರಣವೂ ಅಷ್ಟೇ ಸ್ಪಷ್ಟ, ಭಾರತೀಯ ವಾಯುಗುಣಕ್ಕೆ ಅತಿಯಾದ ಮದ್ಯಪಾನ ಒಗ್ಗುವುದಿಲ್ಲ. ಆದರೆ ಮದ್ಯವಿಲ್ಲದೇ ಬದುಕುವುದೇ ಕಷ್ಟ ಎಂಬ ಸ್ಥಿತಿಯಲ್ಲಿ ಹಲವು ದೇಶಗಳಿವೆ. 

ಸದ್ಯ ಅತಿ ಹೆಚ್ಚು ಆಲ್ಕೋಹಾಲ್‌ ಬಳಸುವ ಬಹುಪಾಲು ದೇಶಗಳು ಯುರೋಪ್‌ ಖಂಡದವು. ಇದಕ್ಕೆ ಅಲ್ಲಿನ ವಾತಾವರಣ ಹಾಗೂ ಸಂಸ್ಕೃತಿ ಎರಡೂ ಕೂಡ ಕಾರಣವಾಗಿವೆ. ರಷ್ಯಾದಲ್ಲಿ ವೊಡ್ಕಾ ಸಾಂಪ್ರದಾಯಿಕ ಪಾನೀಯ ಎಂದು ಕರೆಸಿಕೊಂಡಿದೆ. ಇದಕ್ಕೆ ಸಾಂಸ್ಕೃತಿಕ ಕಾರಣ ಒಂದು ಕಡೆಗಾದರೆ, ರಷ್ಯಾದ ತಂಪು ಹವೆ ಅಲ್ಲಿನ ಜನರು ಆಲ್ಕೋಹಾಲ್‌ ಕುಡಿಯಲು ಪ್ರೇರೇಪಿಸುತ್ತದೆ. ಉಳಿದ ರಾಷ್ಟ್ರಗಳ ಕತೆಯೂ ಕೂಡ ಇದೇ. ಕಡಿಮೆ ಪ್ರಮಾಣ ಆಲ್ಕೋಹಾಲ್‌ ಬಳಸುವ ಹೆಚ್ಚಿನ ರಾಷ್ಟ್ರಗಳು ಏಷ್ಯಾ ಮತ್ತು ಆಫ್ರಿಕಾ ಖಂಡದವು. ಇದಕ್ಕೆ ಕಾರಣವಾಗಿರುವುದು ಇಲ್ಲಿನ ಹವಾಮಾನ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ದೇಶದ ಆಲ್ಕೋಹಾಲ್‌ ಪ್ರಮಾಣ ಅಳೆಯುವುದು ಹೇಗೆ?:

ದೇಶದೊಳಗಿನ ಕುಡುಕರೆಷ್ಟು ಎಂದು ಅಳೆಯಲು ಹಲವಾರು ಮಾನದಂಡಗಳಿವೆ. ಆದರೆ ಲೆಕ್ಕಾಚಾರದ ವೇಳೆ ಉಂಟಾಗುವ ಗೊಂದಲಗಳು ಸ್ಪಷ್ಟವಾದ ಅಂಕಿ ಅಂಶಗಳನ್ನು ನೀಡುವುದಿಲ್ಲ. ಬಳಕೆಯಲ್ಲಿರುವ ಮಾನದಂಡಗಳಲ್ಲಿ ತಲಾ ಆಲ್ಕೋಹಾಲ್‌ ಮಾನದಂಡವೇ ಉತ್ತಮ ಎನಿಸಿದೆ. ಇದೂ ಕೂಡ ದೇಶದ ತಲಾ ಆದಾಯವನ್ನು ಅಳೆಯುವ ರೀತಿಯಲ್ಲಿಯೇ ಅಳತೆ ಮಾಡಲಾಗುತ್ತದೆ. ದೇಶದಲ್ಲಿ ವರ್ಷವೊಂದಕ್ಕೆ ಬಳಕೆಯಾಗುವ ಶುದ್ಧ ಆಲ್ಕೋಹಾಲ್‌ (ಯಾವುದೇ ರೀತಿಯ ಕಲಬೆರಕೆ ಇಲ್ಲದ) ಪ್ರಮಾಣವನ್ನು ದೇಶದ ಜನಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಅಂಕಿ ಅಂಶಗಳೇ ತಲಾ ಆಲ್ಕೋಹಾಲ್‌ ಪ್ರಮಾಣ. ಹಣದ ವಿಚಾರಕ್ಕೆ ಬಂದಾಗ ಕರೆನ್ಸಿ ಲೆಕ್ಕದಲ್ಲಿ ಅಳತೆ ಮಾಡಿದರೆ, ಆಲ್ಕೋಹಾಲ್‌ ವಿಷಯದಲ್ಲಿ ಲೀಟರ್‌ ಲೆಕ್ಕದಲ್ಲಿ ಅಳೆಯಲಾಗುತ್ತದೆ.

ಅತಿಹೆಚ್ಚು ಮದ್ಯ ಬಳಸುವ ಟಾಪ್‌ 10 ರಾಷ್ಟ್ರಗಳು ಹೀಗಿವೆ:

1. ಬೆಲಾರಸ್‌:

ಈ ಹೆಸರನ್ನು ಕೇಳಿರುವವರೇ ಕಡಿಮೆ. ಈ ರಾಷ್ಟ್ರ ತೀರಾ ಹಿಂದುಳಿದ ದೇಶಗಳ ಪಟ್ಟಿಯಲ್ಲಿದೆ. ಯುರೋಪ್‌ ಖಂಡದ ಪೂರ್ವ ಭಾಗದಲ್ಲಿರುವ ಈ ರಾಷ್ಟ್ರ ಹಿಂದೆ ಸೋವಿಯತ್‌ ಒಕ್ಕೂಟದ ಭಾಗವಾಗಿತ್ತು. 1990ರ ದಶಕದಲ್ಲಿ ಸ್ವಾತಂತ್ರ್ಯ ಪಡೆದ ಈ ರಾಷ್ಟ್ರ ಸದ್ಯ ವಿಶ್ವದಲ್ಲೇ ಮುಂಚೂಣಿಯಲ್ಲಿರುವುದು ಕುಡಿತದಲ್ಲಿ ಮಾತ್ರ. ಈ ದೇಶದ ಪ್ರತಿಯೊಬ್ಬ ಪ್ರಜೆ ವರ್ಷಕ್ಕೆ ಸರಾಸರಿ 17.5 ಲೀಟರ್‌ನಷ್ಟು ಶುದ್ಧ ಆಲ್ಕೋಹಾಲ್‌ ಸೇವಿಸುತ್ತಾನೆ! ಈ ದೇಶದ ಶೇ.35ರಷ್ಟು ಜನರ ಸಾವಿಗೆ ಕುಡಿತವೇ ಕಾರಣ. ದೊಡ್ಡ ಮಟ್ಟದ ಹಣದುಬ್ಬರದಿಂದ ಬಳಲುತ್ತಿರುವ ಈ ದೇಶದ ಜನರ ದುಡ್ಡು ಹೆಚ್ಚಾಗಿ ಕುಡಿತಕ್ಕೆಂದೇ ಖರ್ಚಾಗುತ್ತದೆ.

2. ರಿಪಬ್ಲಿಕ್‌ ಆಫ್‌ ಮಾಲ್ಡೋವಾ:

ಇದೂ ಕೂಡ ಪೂರ್ವ ಯುರೋಪಿನ ರಾಷ್ಟ್ರ. ಸೋವಿಯತ್‌ ಒಕ್ಕೂಟದ ಸದಸ್ಯ ರಾಷ್ಟ್ರವಾಗಿತ್ತು. ವಿಶ್ವದ ಬಡರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಮಾಲ್ಡೋವಾದಲ್ಲಿ ಶೇ.16.6ರಷ್ಟು ಜನ ಕಡುಬಡತನದಲ್ಲಿ ನರಳುತ್ತಿದ್ದಾರೆ. ಯುರೋಪ್‌ ಖಂಡದಲ್ಲಿಯೇ ಅತಿಹೆಚ್ಚು ಬಡತನ ಹೊಂದಿರುವ ರಾಷ್ಟ್ರವಿದು. ಆದರೆ ಕುಡಿತದಲ್ಲಿ ಮಾತ್ರ ವಿಶ್ವದಲ್ಲೇ 2ನೇ ಸ್ಥಾನವನ್ನು ಹೊಂದಿದೆ.

ಇಲ್ಲಿನ ಸರಕಾರ ಆಲ್ಕೋಹಾಲ್‌ ಸೇವನೆಗೆ ಮಿತಿಯನ್ನು ವಿಧಿಸಿದ್ದರೂ ಕೂಡ ಜನ ತಲೆಕೆಡಿಸಿಕೊಂಡಿಲ್ಲ. ಸರಕಾರ ವಿಧಿಸಿರುವ ಮಿತಿಯನ್ನು ಮೀರಿ ಈ ದೇಶದ ಪ್ರತಿ ವ್ಯಕ್ತಿ ವರ್ಷಕ್ಕೆ ಸರಾಸರಿ 10.5 ಲೀಟರ್‌ ಮದ್ಯವನ್ನು ಅಕ್ರಮವಾಗಿ ಕುಡಿಯುತ್ತಾನೆ. ಈ ದೇಶದಲ್ಲಿ ಸಾಯುವವರ ಪೈಕಿ ಶೇ.33.1ರಷ್ಟು ಮಂದಿ ಆಲ್ಕೋಹಾಲ್‌ ರೋಗಗಳಿಂದಲೇ ಮೃತರಾಗುತ್ತಾರೆ. ಸದ್ಯದಲ್ಲೇ ಈ ರಾಷ್ಟ್ರ ಬೆಲಾರಸ್‌ಅನ್ನು ಹಿಂದಿಟ್ಟು ವಿಶ್ವದ ಮಹಾ ಕುಡುಕ ರಾಷ್ಟ್ರವಾಗುವ ಪೈಪೋಟಿಯಲ್ಲಿದೆ.

3. ಲಿಥುವೇನಿಯಾ:

ಈ ಹೆಸರನ್ನೂ ಕೂಡ ಕೇಳಿದವರ ಸಂಖ್ಯೆ ಕಡಿಮೆಯೇ. ಯುರೋಪ್‌ ಖಂಡದ ದಕ್ಷಿಣ ಭಾಗದಲ್ಲಿರುವ ಈ ರಾಷ್ಟ್ರವೂ ಕೂಡ ಸೋವಿಯತ್‌ ಒಕ್ಕೂಟದ ಭಾಗವಾಗಿತ್ತು. ಈ ರಾಷ್ಟ್ರದ ಹೆಸರೂ ಕೂಡ ಕೇಳಿಬರುವುದು ಕುಡುಕರ ಕಾರಣಕ್ಕಷ್ಟೇ.

ವಿಶೇಷವೆಂದರೆ ದೇಶದ ಶೇ. 33ಕ್ಕೂ ಹೆಚ್ಚು ಮಹಿಳೆಯರು ಮಹಾಕುಡುಕರು. ದೇಶದ ಪ್ರತಿಯೊಬ್ಬ ಜನರು ಪ್ರತಿವರ್ಷಕ್ಕೆ 15.4 ಲಿಟರ್‌ನಷ್ಟು ಶುದ್ಧ ಆಲ್ಕೋಹಾಲ್‌ಅನ್ನು ಸೇವಿಸುತ್ತಾರೆ. ಕುಡಿತವನ್ನು ದೇಶದ ದೊಡ್ಡ ಸಮಸ್ಯೆ ಎಂದು ಭಾವಿಸಿರುವ ಲಿಥುವೇನಿಯಾದಲ್ಲಿ ಶೇ.30ರಷ್ಟು ಜನ ಸಾಯುವುದು ಕುಡಿತದಿಂದಲೇ. ದೇಶದ ಶೇ.10ರಷ್ಟು ಜನ ಮದ್ಯಸಂಬಂಧಿ ರೋಗಗಳಿಂದ ನರಳುತ್ತಿದ್ದಾರೆ. ಕುಡಿತವನ್ನು ಬಿಡಿಸಲು ಸರಕಾರಗಳು ಸರ್ಕಸ್‌ ಮಾಡುತ್ತಲೇ ಬಂದಿವೆಯಾದರೂ ಕೂಡ ಜನರನ್ನು ಸರಿದಾರಿಗೆ ತರಲು ಸಾಧ್ಯವಾಗಿಲ್ಲ.

4. ರಷ್ಯಾ:

ಬಹುಪಾಲು ವಿಷಯಗಳಲ್ಲಿ ಜಗತ್ತಿನ ಮುಂಚೂಣಿ ರಾಷ್ಟ್ರಗಳ ಪೈಕಿ ಗುರುತಿಸಿಕೊಂಡಿರುವ ರಷ್ಯಾ ಕುಡಿತದಲ್ಲೂ ಕೂಡ ಮುನ್ನಡೆ ಕಾಯ್ದುಕೊಂಡಿದೆ. ರಷ್ಯಾದ ಪ್ರತಿಯೊಬ್ಬ ಪ್ರಜೆ ವರ್ಷವೊಂದಕ್ಕೆ 15.1 ಲೀಟರ್‌ನಷ್ಟು ಶುದ್ಧ ಹಾಲ್ಕೋಹಾಲ್‌ ಕುಡಿಯುತ್ತಾನೆ. ದೇಶದ ಶೇ.18.2ರಷ್ಟು ಮಂದಿ ಆಲ್ಕೋಹಾಲ್‌ ಸಂಬಂಧಿ ರೋಗಗಳಿಂದ ನರಳುತ್ತಿದ್ದಾರೆ.

ಜನಸಂಖ್ಯೆಯ ದೃಷ್ಠಿಯಿಂದ ನೋಡಿದರೆ ಹೆಚ್ಚು ಕುಡಿಯುವವರು, ಹೆಚ್ಚು ಸಾಯುವವರು ಈ ದೇಶದವರೇ ಆಗಿದ್ದಾರೆ. ಶೇ.30.5ರಷ್ಟು ರಷ್ಯನ್‌ ಮಂದಿ ಕುಡಿತದ ಕಾರಣಕ್ಕಾಗಿಯೇ ಸಾಯುತ್ತಾರೆ. ಇತ್ತಿಚಿನ ವರದಿಗಳ ಪ್ರಕಾರ ರಷ್ಯಾದ ಯುವಜನತೆ ವೋಡ್ಕಾ ಪ್ರಿಯರಾಗಿ ರೂಪುಗೊಳ್ಳುತ್ತಿದ್ದಾರೆ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

5. ರುಮೇನಿಯಾ:

ಇದು ಯುರೋಪ್‌ ಖಂಡದ ಆಗ್ನೇಯ ಭಾಗದಲ್ಲಿರುವ ದೇಶ. ಇಲ್ಲಿನ 15ರಿಂದ 19 ವರ್ಷದೊಳಗಿನ ಶೇ.37ರಷ್ಟು ಯುವಜನರು ಕುಡುಕರು. ಇದರಲ್ಲಿ ಯುವಕರ ಸಂಖ್ಯೆ ಶೇ.55ರಷ್ಟು. ಉಳಿದ ಶೇ.45ರಷ್ಟು ಜನ ಯುವತಿಯರು. ಹೆಚ್ಚಿನ ಯುವ ಕುಡುಕರನ್ನು ಹೊಂದಿರುವ ದೇಶಗಳ ಪೈಕಿ ರುಮೇನಿಯಾ ಮೊದಲನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿ ಪ್ರಜೆ ವರ್ಷಕ್ಕೆ 14.4 ಲೀಟರ್‌ನಷ್ಟು ಶುದ್ಧ ಆಲ್ಕೋಹಾಲ್‌ ಸೇವಿಸುತ್ತಾನೆ. ದೇಶದ ಶೇ.9ರಷ್ಟು ಜನ ಕುಡಿತದಿಂದಲೇ ಸಾಯುತ್ತಾರೆ.

6. ಉಕ್ರೇನ್‌:

ಆಂತರಿಕ ಬಿಕ್ಕಟ್ಟುಗಳಿಂದಲೇ ಹೆಸರುವಾಸಿಯಾಗಿರುವ ದೇಶ ಉಕ್ರೇನ್‌. ಯುರೋಪ್‌ ಖಂಡದ ಪೂರ್ವ ಭಾಗದಲ್ಲಿರುವ ಈ ದೇಶವೂ ಕೂಡ ಸೋವಿಯತ್‌ ಒಕ್ಕೂಟದ ಭಾಗವಾಗಿತ್ತು. ಈಗಲೂ ಸಹ ಈ ದೇಶದ ಅರ್ಧದಷ್ಟು ಜನ ರಷ್ಯಾವನ್ನು ಸೇರುವ ಇಂಗಿತ ಹೊಂದಿದ್ದಾರೆ. ಆಂತರಿಕ ಘರ್ಷಣೆಯ ಜತೆಗೆ ಕುಡಿತದ ಕಾರಣದಿಂದಲೂ ಕೂಡ ಉಕ್ರೇನ್‌ ಹೆಸರು ಗಳಿಸಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆ ವರ್ಷಕ್ಕೆ 13.9 ಲೀಟರ್‌ನಷ್ಟು ಶುದ್ಧ ಹಾಲ್ಕೋಹಾಲ್‌ ಸೇವಿಸುತ್ತಾನೆ. ಕುಡಿತದಿಂದ ಸಾಯುವವರ ಸಂಖ್ಯೆ ಶೇ.32ರಷ್ಟಿದೆ. ಜನಸಂಖ್ಯೆ ಹಿಡಿದು ನೋಡಿದರೆ ಆಲ್ಕೋಹಾಲ್‌ನಿಂದ ಮೃತಪಡುವವರ ಸಂಖ್ಯೆಯಲ್ಲಿ ಉಕ್ರೇನ್‌ 2ನೇ ಸ್ಥಾನದಲ್ಲಿದೆ. 15ರಿಂದ 19ವರ್ಷದ ಕುಡುಕರ ಸಂಖ್ಯೆಯಲ್ಲಿ ಈ ದೇಶವೂ ಕೂಡ ಮುಂಚೂಣಿಯಲ್ಲಿದೆ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

7. ಅಂಡೋರಾ:

ಈ ದೇಶದ ಹೆಸರನ್ನು ಕೇಳಿರುವವರೂ ಕೂಡ ಅಪರೂಪ. ಸುಮಾರು 77,500 ಜನಸಂಖ್ಯೆಯನ್ನು ಹೊಂದಿರುವ ಅಂಡೋರಾ ಕುಡುಕ ರಾಷ್ಟ್ರಗಳ ಪೈಕಿ 7ನೇ ಸ್ಥಾನ ಹೊಂದಿದೆ. ಇಲ್ಲಿನ ಪ್ರಜೆ ಪ್ರತಿವರ್ಷಕ್ಕೆ 13.8 ಲೀಟರ್‌ ಶುದ್ಧ ಆಲ್ಕೋಹಾಲ್‌ ಸೇವಿಸುತ್ತಾನೆ. ಬೆಂಗಳೂರಿನ ಅರ್ಧದಷ್ಟಿರುವ ಈ ರಾಷ್ಟ್ರದ ಆದಾಯದ ಮೂಲ ಪ್ರವಾಸೋದ್ಯಮ. ಮೊದಲ ಸ್ಥಾನಗಳಲ್ಲಿರುವ ಇತರೆ ದೇಶಗಳಿಗೆ ಹೋಲಿಸಿದರೆ ಈ ದೇಶದಲ್ಲಿ ಅಕ್ರಮವಾಗಿ ಆಲ್ಕೋಹಾಲ್‌ ಸೇವಿಸುವ ಶೇಕಡವಾರು ಪ್ರಮಾಣ ತುಂಬಾ ಕಡಿಮೆ. ದೇಶದ 15ರಿಂದ 19 ವಯಸ್ಸಿನ ಒಳಗಿನವರಲ್ಲಿ ಶೇ. 4.2ರಷ್ಟು ಜನ ಮಾತ್ರ ಕುಡಿತಕ್ಕೆ ಒಳಗಾಗಿದ್ದಾರೆ. ಶೇಕಡವಾರು ದೃಷ್ಟಿಯಿಂದಷ್ಟೇ ಈ ದೇಶ ಮೊದಲ 10 ರಾಷ್ಟ್ರಗಳ ಪೈಕಿ ಒಂದಾಗಿದೆ.

8. ಹಂಗೇರಿ:

ಮಧ್ಯ ಯುರೋಪ್‌ ಭಾಗದ ಈ ರಾಷ್ಟ್ರ 8ನೇ ದೊಡ್ಡ ಕುಡುಕ ರಾಷ್ಟ್ರ ಎನಿಸಿದೆ. ಈ ರಾಷ್ಟ್ರವೂ ಕೂಡ ಹಿಂದೆ ಸೋವಿಯತ್‌ ಒಕ್ಕೂಟದ ಭಾಗವಾಗಿತ್ತು. ಈಗ ಸ್ವತಂತ್ರವಾಗಿರುವ ಹಂಗೇರಿಯ ಪ್ರತಿಪ್ರಜೆ ವರ್ಷಕ್ಕೆ 13.3 ಲೀಟರ್‌ನಷ್ಟು ಆಲ್ಕೋಹಾಲ್‌ ಸೇವಿಸುತ್ತಾನೆ. ಆಲ್ಕೋಹಾಲ್‌ ಸಂಬಂಧಿತ ರೋಗಗಳಿಂದ ಬಳಲುತ್ತಿರುವವರ ಪೈಕಿ ಹಂಗೇರಿ ಮೊದಲನೇ ಸ್ಥಾನದಲ್ಲಿದೆ. ದೇಶದ ಶೇ. 19.3ರಷ್ಟು ಮಂದಿ ಕುಡಿತದ ರೋಗಗಳಿಂದ ಬಳಲುತ್ತಿದ್ದಾರೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.32ರಷ್ಟು ಪುರುಷರು ಹಾಗೂ ಶೇ.6.8ರಷ್ಟು ಮಹಿಳೆಯರು ಮದ್ಯವ್ಯಸನಿಗಳಾಗಿದ್ದಾರೆ. ಶೇ.5.8ರಷ್ಟು ಜನ ಕುಡಿತದ ಕಾರಣದಿಂದ ಸಾಯುತ್ತಾರೆ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

9. ಜೆಕ್‌ ಗಣರಾಜ್ಯ:

ಮಧ್ಯ ಯುರೋಪ್‌ ಭಾಗದ ರಾಷ್ಟ್ರವಾಗಿರುವ ಜೆಕ್‌ ಗಣರಾಜ್ಯ ಸ್ಥಳೀಯ ಬಿಯರ್‌ಗಳಿಂದಲೂ ಕೂಡ ಪ್ರಖ್ಯಾತಿ ಪಡೆದಿದೆ. ಇಲ್ಲಿನ ಜನ ಇತರೆ ಆಲ್ಕೋಹಾಲ್‌ಗಳಿಗಿಂತ ಬಿಯರ್‌ಅನ್ನು ಹೆಚ್ಚಾಗಿ ಬಳಸುತ್ತಾರೆ. ಹೆಚ್ಚು ಆಲ್ಕೋಹಾಲ್‌ ಅಂಶ ಹೊಂದಿರುವ ಮದ್ಯಗಳ ಬಳಕೆಯ ಮೇಲೆ ಸರಕಾರ ಹಲವು ನಿಷೇಧಗಳನ್ನು ಹೇರಿರುವುದರಿಂದ ಜನ ಬಿಯರ್‌ಗೆ ಅಂಟಿಕೊಂಡಿದ್ದಾರೆ. ದೇಶದ ಪ್ರತಿ ಪ್ರಜೆ ವರ್ಷಕ್ಕೆ 13 ಲೀಟರ್‌ನಷ್ಟು ಶುದ್ಧ ಆಲ್ಕೋಹಾಲ್‌ ಸೇವಿಸುತ್ತಾನೆ. ಪುರುಷ ಹಾಗೂ ಮಹಿಳಾ ಕುಡುಕರ ಸಂಖ್ಯೆ ಸರಿಸುಮಾರು ಸಮನಾಗಿಯೇ ಇದೆ. ಈ ದೇಶದಲ್ಲಿ ಮದ್ಯದಿಂದಾಗಿ ಸಾಯುವವರ ಸಂಖ್ಯೆ ಶೇ.8.5ರಷ್ಟು.

10. ಸ್ಲೋವಾಕಿಯಾ:

ಸ್ಲೋವಾಕಿಯಾ ಕೂಡ ಮಧ್ಯ ಯುರೋಪಿಯನ್‌ ರಾಷ್ಟ್ರ. ಕುಡುಕ ರಾಷ್ಟ್ರಗಳ ಪಟ್ಟಿಯಲ್ಲಿ 10 ಸ್ಥಾನ ಪಡೆದುಕೊಂಡಿದೆ. 15ನೇ ವಯಸ್ಸಿನಿಂದಲೂ ಕೂಡ ಈ ರಾಷ್ಟ್ರದಲ್ಲಿ ಕುಡಿತ ಆರಂಭಗೊಳ್ಳುತ್ತದೆ. ದೇಶದ ಪ್ರತಿ ಪ್ರಜೆ ವರ್ಷಕ್ಕೆ 13 ಲೀಟರ್‌ನಷ್ಟು ಆಲ್ಕೋಹಾಲ್‌ ಕುಡಿಯುತ್ತಾನೆ. ಇವರೂ ಕೂಡ ವೋಡ್ಕಾ ಪ್ರಿಯರು. ಈ ದೇಶದ ಶೇ.7.7ರಷ್ಟು ಜನರು ಕುಡಿತದ ರೋಗಗಳಿಂದ ಸಾಯುತ್ತಾರೆ.

ವಿಶ್ವದ ಕೆಲವು ರಾಷ್ಟ್ರಗಳು ಮದ್ಯವನ್ನು ನಿಷೇಧಿಸಿವೆ. ಕೆಲವು ರಾಷ್ಟ್ರಗಳು ಮದ್ಯಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಿದ್ದರೆ ಇನ್ನುಕೆಲವು ರಾಷ್ಟ್ರಗಳು ಕೆಲವರಿಗೆ ಮಾತ್ರ ನಿಷೇಧವನ್ನು ವಿಧಿಸಿವೆ.

ಸಾಂಧರ್ಭಿಕ ಚಿತ್ರ.
ಸಾಂಧರ್ಭಿಕ ಚಿತ್ರ.

ಆಫ್ಘಾನಿಸ್ತಾನ, ಬ್ರೂನೆ, ಇರಾನ್‌, ಇರಾಕ್‌, ಲಿಬಿಯಾ ಸೇರಿದಂತೆ ಕೆಲವು ಮುಸ್ಲಿಂ ರಾಷ್ಟ್ರಗಳು ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಪಾಕಿಸ್ತಾನ, ಮಾಲ್ಡೀವ್ಸ್, ಕತಾರ್‌, ಬಾಂಗ್ಲಾ ದೇಶಗಳಲ್ಲಿ ಮುಸ್ಲಿಮೇತರರಿಗೆ ಮಾತ್ರ ಕುಡಿಯುವ ಅವಕಾಶ ನೀಡಲಾಗಿದೆ. ಶ್ರೀಲಂಕಾದಲ್ಲಿ ಮಹಿಳೆಯರಿಗೆ ಮಾತ್ರ ಮದ್ಯ ಬಳಕೆಯ ಮೇಲೆ ನಿಷೇಧ ಹೇರಲಾಗಿದೆ. ಭಾರತದಲ್ಲಿ ಗುಜರಾತ್‌, ಬಿಹಾರ್‌, ನಾಗಲ್ಯಾಂಡ್‌, ಮಣಿಪುರ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಮಾತ್ರ ಮದ್ಯ ನಿಷೇಧ ಜಾರಿಯಲ್ಲಿದೆ. ಉಳಿದ ರಾಷ್ಟ್ರಗಳಲ್ಲಿ ಮದ್ಯಪಾನ ಕಾನೂನುಬದ್ಧ.

ಪರ್‌ಕ್ಯಾಪಿಟಾ ದೃಷ್ಠಿಯಿಂದ ನೋಡಿದರೆ ಕುಡುಕ ರಾಷ್ಟ್ರಗಳ ಸಾಲಿನಲ್ಲಿ ಭಾರತ 119ನೇ ಸ್ಥಾನದಲ್ಲಿದೆ. ಭಾರತದ ಪ್ರತಿಪ್ರಜೆ ವರ್ಷಕ್ಕೆ 4.3 ಲೀಟರ್‌ ಶುದ್ಧ ಹಾಲ್ಕೋಹಾಲ್‌ ಸೇವಿಸುತ್ತಾನೆ. ಭಾರತ ಮದ್ಯಪಾನದಲ್ಲಿ ಇಷ್ಟು ಹಿಂದುಳಿದಿರುವುದು ಸಂತಸದ ವಿಚಾರ, ಅಲ್ವಾ?