samachara
www.samachara.com
ಆಲ್ಫ್ಸ್ ಪರ್ವತ ಶ್ರೇಣಿಯಲ್ಲಿ ಸಿಕ್ಕ ‘ಓಟ್ಜಿ’ಯ ಅಧ್ಯಯನ
ಫೋಕಸ್

5,300 ವರ್ಷಗಳ ಹಿಂದಿನ ಮಾನವ ಕಳೇಬರ ಬಿಚ್ಚಿಟ್ಟಿತು ಬದುಕಿನ ಸತ್ಯ

5300 ವರ್ಷಗಳ ಹಿಂದೆ ಮನುಷ್ಯ ಹೇಗೆ ಬದುಕಿದ್ದ? ಈ ಪ್ರಶ್ನೆಗೆ ಸಾಕ್ಷಿ ಸಮೇತ ಉತ್ತರ ಕಂಡು ಕೊಂಡಿದ್ದಾರೆ ವಿಜ್ಞಾನಿಗಳು. ಈ ಉತ್ತರ ಸಿಕ್ಕಿದ್ದು ಒಬ್ಬ ಮನುಷ್ಯನ ಹೆಣದಿಂದ. ಆತನ ಹೆಸರು ಓಟ್ಜಿ. ಯಾರೀತ? 

5300 ವರ್ಷಗಳ ಹಿಂದೆ ಮನುಷ್ಯ ಹೇಗೆ ಬದುಕಿದ್ದ? ಈ ಪ್ರಶ್ನೆಗೆ ಸಾಕ್ಷಿ ಸಮೇತ ಉತ್ತರ ಕಂಡು ಕೊಂಡಿದ್ದಾರೆ ವಿಜ್ಞಾನಿಗಳು. ಈ ಉತ್ತರಕ್ಕೆ ಕಾರಣವಾಗಿದ್ದು ಒಬ್ಬ ಮನುಷ್ಯನ ಹೆಣ. ಆತನ ಹೆಸರು ಓಟ್ಜಿ. ಯಾರು ಈ ಓಟ್ಜಿ, ಆತನಿಂದ ಸಿಕ್ಕ ಮಾಹಿತಿಗಳೇನು ಎಂಬುದಕ್ಕೆ ಈ ಕುತೂಹಲಕಾರಿ ಸ್ಟೋರಿ ಓದಿ.

ಓಟ್ಜಿ, ಅದು ಆತನ ನೈಜ ಹೆಸರಲ್ಲ. ನೈಜ ಹೆಸರು ಹೇಳಲು ಆಗಿನವರು ಯಾರೂ ಈಗ ಬದುಕಿಲ್ಲ. ಅಷ್ಟಕ್ಕೂ ಈತ ಬದುಕಿ ಬಾಳಿದ್ದು, ಬದುಕಿದ್ದು ಬರೋಬ್ಬರಿ 5,300 ವರ್ಷಗಳ ಕೆಳಗೆ. ಇಷ್ಟು ವರ್ಷ ಹಿಂದೆ ಬದುಕಿದ್ದ ಈತನ ಹೆಣ 1991ರಲ್ಲಿ ಆಲ್ಫ್ಸ್ ಓಟ್ಜ್‌ಟಲ್ ಪರ್ವತ ಶ್ರೇಣಿಯಲ್ಲಿ ಪತ್ತೆಯಾಗಿತ್ತು. ಓಟ್ಜ್‌ಟಲ್ ಪರ್ವತ ಶ್ರೇಣಿಯಲ್ಲಿ ಸಿಕ್ಕಿದ್ದರಿಂದ ಈತನಿಗೆ ಓಟ್ಜಿ ಎನ್ನುವ ಹೆಸರಿಡಲಾಯಿತು; ಹಿಮಚ್ಛಾದಿತ ಪರ್ವತ ಶ್ರೇಣಿಗಳಲ್ಲಿ ಸಿಕ್ಕಿದ್ದರಿಂದ ಆತನಿಗೆ ಐಸ್‌ಮ್ಯಾನ್ ಎಂಬ ಅನ್ವರ್ಥನಾಮವೂ ಇದೆ.

ಆಸ್ಟ್ರಿಯಾದಲ್ಲಿ ಬರುವ ಆಲ್ಫ್‌ ಪರ್ವತ ಸದಾ ಹಿಮದಲ್ಲೇ ಮುಳುಗಿರುವುದರಿಂದ ಈತನ ಹೆಣವೂ ಈ ಮಂಜಿನೊಳಗೆ ಸಿಲುಕಿ ಅಂದಿನಿಂದ ಇಂದಿನವರೆಗೂ ಕೊಳೆಯದೆ ಉಳಿದುಕೊಂಡಿತ್ತು. ಆತ 5300 ವರ್ಷ ಹಿಂದೆ ಬದುಕಿದ್ದ ಎನ್ನುವುದಕ್ಕೆ ಪುರಾವೆಗಳೇನು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಇಷ್ಟೊತ್ತಿಗೆ ಸುಳಿದಿರಬಹುದು.

ಮನುಷ್ಯನ ಜೀವಿತಾವಧಿಯನ್ನು, ಅಥವಾ ವಸ್ತು ಎಷ್ಟು ಹಳೆಯದು ಎಂದು ಅಳೆಯಲು ‘ರೇಡಿಯೋ ಕಾರ್ಬನ್ ಡೇಟಿಂಗ್’ ಟೆಸ್ಟ್ ನಡೆಸಲಾಗುತ್ತದೆ. ಹಾಗೆ ಈ ಓಟ್ಜಿಯ ಹೆಣದ ಮೇಲೆ ಈ ಟೆಸ್ಟ್ ಮಾಡಿದಾಗ ಆತ ಕ್ರಿಸ್ತ ಪೂರ್ವ 3345ರಲ್ಲಿ ಹುಟ್ಟಿ ಕ್ರಿಸ್ತ ಪೂರ್ವ 3300 ಸತ್ತಿದ್ದ ಎಂದು ತಿಳಿದು ಬಂದಿತ್ತು. ಈ ಮಾಹಿತಿ ವಿಜ್ಞಾನಿಗಳನ್ನು ಬೆಕ್ಕಸ ಬೆರಗಾಗಿಸಿತ್ತು. ಮಾತ್ರವಲ್ಲ ಈತನ ದೇಹ ಇಟ್ಟುಕೊಂಡು ಆಗಿನ ಮನುಷ್ಯನ ಬಗ್ಗೆ ಅಧ್ಯಯನ ನಡೆಸಬಹುದಲ್ಲಾ ಎಂಬ ಪ್ರಶ್ನೆಯೂ ಅವರ ತಲೆಯಲ್ಲಿ ಮೊಳೆಯುವಂತೆ ಮಾಡಿತ್ತು. ಅದರ ಪರಿಣಾಮವೇ ಈಗ ಒಂದೊಂದಾಗಿ ಅಧ್ಯಯನ ವರದಿಗಳು ಹೊರಬರುತ್ತಿವೆ. ಇದರಲ್ಲಿ ಆತ ಸಾಯವುದಕ್ಕೂ ಮೊದಲು ಏನು ತಿಂದಿದ್ದ ಎಂಬ ಅಂಶಗಳೂ ಇವೆ.

ದೇಹದಲ್ಲಿದ್ದ ಕೊಬ್ಬು ಎಷ್ಟು?

ಸದ್ಯದ ನಾಗರೀಕ ಪ್ರಪಂಚದ ಮನುಷ್ಯರಲ್ಲಿ ಸರಾಸರಿ ಶೇಕಡಾ 10 ಕೊಬ್ಬಿನಂಶವಿದ್ದರೆ ಈತನಲ್ಲಿ ಇದ್ದ ಕೊಬ್ಬಿನಂಶ ಬರೋಬ್ಬರಿ ಶೇಕಡಾ 50. ‘ಆದಿ ಮಾನವ ಬೇಟೆಯಲ್ಲಿ ನಿರತವಾಗಿದ್ದಾಗ ಇಷ್ಟು ಕೊಬ್ಬು ಮನುಷ್ಯನೊಬ್ಬನಿಗೆ ಅಗತ್ಯವಾಗಿ ಬೇಕಾಗುತ್ತದೆ’ ಎಂಬುದು ಇಟಲಿಯ ಬೊಲ್ಝಾನೋದಲ್ಲಿರುವ ‘ಯುರೇಕ್ ರಿಸರ್ಚ್ ಸೆಂಟರ್ ಫಾರ್ ಮಮ್ಮೀ ಸ್ಟಡೀಸ್‌’ನ ಡಾ. ಫ್ರಾಂಕ್ ಮಿಕ್ಸ್‌ನರ್ ವಾದ. ಇದು ಆ ಕಾಲದಲ್ಲಿ ಮನುಷ್ಯರಿಗೆ ಹವಾಮಾನದ ವೈಪ್ಯರೀತ್ಯದ ಸಂದರ್ಭದಲ್ಲೂ ಬದುಕಲು ಸಹಾಯ ಮಾಡುತ್ತಿದ್ದಿರಬಹುದು ಎಂಬುದು ಅವರ ಅಂದಾಜು.

ಆತನ ಹೊಟ್ಟೆಯಲ್ಲಿ ಫ್ರೀಜ್ ಆಗಿ ಇದ್ದಿದ್ದ ಆಹಾರವನ್ನು ಆಧಾರವಾಗಿಸಿಕೊಂಡು ಅವರು ಈ ಅಧ್ಯಯನ ನಡೆಸಿ, ತಮ್ಮ ವರದಿಯನ್ನು ‘ಕರೆಂಟ್ ಬಯೋಲಜಿ’ ಎಂಬ ಅಂತರಾಷ್ಟ್ರೀಯ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

ಈ ಸುದೀರ್ಘ ಅಧ್ಯಯನ ವರದಿಯು ಆತನ ದೇಹದಲ್ಲಿದ್ದ ಕೊಬ್ಬಿನ ಮೇಲಲ್ಲದೆ ಇನ್ನೂ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಆತನ ದೇಹದಲ್ಲಿದ್ದ ಕೊಬ್ಬು ಯಾವುದೇ ಹಾಲು ಅಥವಾ ಹಾಲಿನ ಉತ್ಪನ್ನಗಳಿಂದ ಬಂದುದಲ್ಲ ಎನ್ನುತ್ತದೆ ಅಧ್ಯಯನ. ಬೆಟ್ಟಗುಡ್ಡಗಳಲ್ಲಿ ಹೆಚ್ಚಾಗಿ ವಾಸಿಸುವ ಆಲ್ಪೈನ್ ಐಬೆಕ್ಸ್ ಎಂಬ ಕಾಡು ಮೇಕೆಯ ಮಾಂಸದ ಕೊಬ್ಬು ಆತನ ದೇಹದಲ್ಲಿದೆ. ಆತನ ಆಹಾರ ಕಾರ್ಬೋಹೈಡ್ರೇಟ್, ಪ್ರೊಟೀನ್ ಮತ್ತು ಕೊಬ್ಬಿನ ಸಮತೋಲಿತ ಮಿಶ್ರಣವಾಗಿತ್ತು ಎನ್ನುತ್ತಾರೆ ಮಿಕ್ಸ್‌ನರ್.

ಓಟ್ಜಿ ಬದುಕಿದ್ದಾಗ ಹೀಗಿದ್ದಿರಬಹುದು, ಮರು ನಿರ್ಮಿತ ಚಿತ್ರ
ಓಟ್ಜಿ ಬದುಕಿದ್ದಾಗ ಹೀಗಿದ್ದಿರಬಹುದು, ಮರು ನಿರ್ಮಿತ ಚಿತ್ರ
ಚಿತ್ರ ಕೃಪೆ: ಬಿಬಿಸಿ

ಶೀತದಿಂದ ಕುಡಿದ ಆಲ್ಫ್ ಪರ್ವತ ಶ್ರೇಣಿಯಲ್ಲಿ ಓಟ್ಜಿಗೆ ಬದುಕಿಕೊಳ್ಳಲು ಈ ಸಂಯೋಜಿತ ಆಹಾರ ಸಹಾಯ ಮಾಡಿರಬಹುದು. ಆದರೆ ಅದು ಅಷ್ಟೇನು ರುಚಿಕರವಾಗಿದ್ದಿರಲಿಕ್ಕಿಲ್ಲ ಎಂಬುದು ಅಧ್ಯಯನ ನಡೆಸಿದ ತಜ್ಞರ ಅಭಿಪ್ರಾಯ. “ಇದು ಮೊದಲೇ ಮೇಕೆಯ ಮಾಂಸ ಮತ್ತು ಇದರ ರುಚಿ ಹೇಗಿದ್ದರಬಹುದು ಎಂದು ಆಲೋಚನೆ ಮಾಡುವುದೂ ಕಷ್ಟ. ನಿಸ್ಸಂಶಯವಾಗಿ ನಾವಿವತ್ತು ಸೇವಿಸುವ ಮಾಂಸದಷ್ಟು ಇದು ರುಚಿಯಾಗಿರಲಿಕ್ಕೆ ಸಾಧ್ಯವೇ ಇಲ್ಲ,” ಎನ್ನುತ್ತಾರೆ ಡಾ ಮಿಕ್ಸ್‌ನರ್.

ಒಂದೊಮ್ಮೆ ಅವತ್ತು ಉಪ್ಪು ಇರಲಿಲ್ಲ ಎಂದು ಕಲ್ಪಿಸಿಕೊಂಡರೆ, ಈ ಖಾದ್ಯವನ್ನು ನೆನಪಿಸಿಕೊಳ್ಳಲೂ ಅಸಾಧ್ಯ. ಆತ ಬದುಕಿದ್ದ ಕಾಲಕ್ಕೆ ಸಂಸ್ಕರಿಸಿದ ಆಹಾರವನ್ನೇ ಸೇವಿಸಬೇಕಾಗಿರಲಿಲ್ಲ. ಆದರೆ ಆತನ ಆಹಾರ ಕ್ರಮ ವೈರುಧ್ಯದಿಂದ ಕೂಡಿತ್ತು ಎನ್ನುವುದು ವಿಜ್ಞಾನಿಗಳ ಊಹೆ.

ಸಂಘರ್ಷದಲ್ಲಿ ಮರಣ

ಹೀಗೆ ರುಚಿಯಾಗಿಲ್ಲದಿದ್ದರೂ ಪೋಷಕಾಂಶಯುಕ್ತ ಅತ್ಯುತ್ತಮ ಆಹಾರವನ್ನೇ ಸೇವಿಸುತ್ತಿದ್ದ ಓಟ್ಜಿ ಸತ್ತಿದ್ದು ಹೇಗೆ ಎಂಬುದಕ್ಕೂ ವಿಜ್ಞಾನಿಗಳು ಉತ್ತರ ಹುಡುಕಿದ್ದಾರೆ. ಓಟ್ಜಿ ಸಂಘರ್ಷದಲ್ಲಿ ಮೃತಪಟ್ಟಿರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಆತನ ದೇಹದಲ್ಲಿರುವ ಹಲವಾರು ಗಾಯಗಳೇ ಇದಕ್ಕೆ ಸಾಕ್ಷಿ. ಜೊತೆಗೆ ಆತ ತಾಮ್ರದ ಗರಗಸ ಸಹಿತ ಶಸ್ತ್ರಗಳನ್ನು ಸಾಗಿಸುತ್ತಿದ್ದ ಎಂಬುದಕ್ಕೆ ಆತನ ದೇಹದಲ್ಲಿ ಕುರುಹುಗಳಿವೆ.

5300 ವರ್ಷ ಹಿಂದಿನ ಮನುಷ್ಯನಾದರೂ ಆತ ಕೆಲವು ಆಯುರ್ವೇದಿಕ್ ಔಷಧಗಳನ್ನು ಸೇವಿಸುತ್ತಿದ್ದ ಸಾಧ್ಯತೆಗಳೂ ಇವೆ. ಆತನ ಹೊಟ್ಟೆಯಲ್ಲಿ ಬ್ರಾಕೆನ್ ಎಂಬ ಮೂಲಿಕೆ ಗಿಡ ಸಿಕ್ಕಿರುವುದೇ ಇದಕ್ಕೆ ಆಧಾರ. ಇದರ ಜೊತೆಗೆ ಆತ ಹುಲ್ಲುಗಾವಲಿನಲ್ಲಿ ಆಹಾರ ಹುಡುಕುತ್ತಾ ವಿಷ ಬೀಜಗಳನ್ನು ಸೇವಿಸಿ ಸಾವಿಗೆ ಶರಣಾಗಿರಬಹುದು ಎಂಬ ಇನ್ನೊಂದು ವಾದವೂ ಇದೆ.

ಹೀಗೆ, ಓಟ್ಜಿಯ ಕಳೇಬರವನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ 5300 ವರ್ಷಗಳ ಹಿಂದಿನ ಮನುಷ್ಯ ಜಗತ್ತನ್ನು ವಿಜ್ಞಾನಿಗಳು ನಮ್ಮ ಮುಂದೆ ತೆರೆದಿಟ್ಟಿದ್ದಾರೆ.