samachara
www.samachara.com
ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಪಾಕ್‌ನ ಈ ಮಹಿಳೆಯರು!
ಫೋಕಸ್

ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಪಾಕ್‌ನ ಈ ಮಹಿಳೆಯರು!

ಪಾಕಿಸ್ತಾನದ ಚಿಕ್ಕ ಪಟ್ಟಣ ಮೊಹ್ರಿಪುರದ ಮಹಿಳೆಯರು ಮೊದಲ ಬಾರಿಗೆ ಮತ ಹಾಕಲು ಸಿದ್ಧರಾಗಿದ್ದಾರೆ. ಪುರುಷ ವಿರೋಧ, ಸಿಟ್ಟು, ಸೆಡುವುಗಳು ಯಾವುವೂ ಅವರನ್ನು ತಡೆಯುತ್ತಿಲ್ಲ.

ಮೊಹ್ರಿಪುರ, ಪಾಕಿಸ್ತಾನದ ಖಾನೇವಾಲ್‌ ಜಿಲ್ಲೆಯ ತೆಹ್ಸಿಲ್‌ ಕಬೀರ್‌ವಾಲ್‌ ಬಳಿ ಇರುವ ಚಿಕ್ಕ ಪಟ್ಟಣ. ಸುಮಾರು 25,000 ಜನಸಂಖ್ಯೆ ಇರುವ ಈ ಪಟ್ಟಣ ಚಿಕ್ಕಪುಟ್ಟ ಸವಲತ್ತುಗಳನ್ನೂ ಕೂಡ ಹೊಂದಿದೆ. ಈ ಪಟ್ಟಣ ಈಗ ವಿಶ್ವಾದ್ಯಂತ ಸುದ್ದಿ ಮಾಡುತ್ತಿದೆ. ಕಾರಣ ಈ ಪಟ್ಟಣದ ಮಹಿಳೆಯರು ತೋರಿಸುತ್ತಿರುವ ದಿಟ್ಟತನ.

ಈ ಪಟ್ಟಣದ ಮಹಿಳೆಯರು ಪಾಕಿಸ್ತಾನ ರಾಷ್ಟ್ರ ಉದಯಿಸಿದ ಕಾಲದಿಂದಲೂ ಕೂಡ ಮತ ಹಾಕಿಲ್ಲ. 1947ರಲ್ಲಿ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗಿ ರೂಪುಗೊಂಡಾಗ ಈ ಪಟ್ಟಣದ ಪುರುಷರು ತಮ್ಮ ಮನೆಯ ಹೆಣ್ಣು ಮಕ್ಕಳು ಚುನಾವಣೆಗಳಲ್ಲಿ ಮತ ಚಲಾಯಿಸುವುದನ್ನು ನಿರಾಕರಿಸಿದ್ದರು. ಮಹಿಳೆಯರು ಮತ ಹಾಕುವುದನ್ನು ನಿಷೇಧಿಸಿದ್ದರು. ಅಂದಿನಿಂದ ಇಂದಿನವರೆಗೆ ಪಾಕಿಸ್ತಾನ ಹಲವಾರು ಬದಲಾವಣೆಗಳನ್ನು ಕಂಡಿದೆ. ಹಲವಾರು ವಿಷಯಗಳಲ್ಲಿ ಜಗತ್ತಿನ ಮುಂಚೂಣಿ ರಾಷ್ಟ್ರಗಳ ಜತೆ ಗುರುತಿಸಿಕೊಂಡಿದೆ. ಆದರೆ ಈ ಪಟ್ಟಣದ ಮಹಿಳೆಯರು ಮಾತ್ರ ಪುರುಷರ ಮಾತನ್ನು ಮೀರಿರಲಿಲ್ಲ. ತಮ್ಮ ಗಂಡಂದಿರ ಮಾತಿಗೆ ಬೆಲೆಕೊಟ್ಟು ಇಲ್ಲಿಯವರೆಗೂ ಮತ ಹಾಕಿರಲಿಲ್ಲ.

ಆದರೆ ಮೊಹ್ರಿಪುರದ ಕೆಲವು ಮಹಿಳೆಯರು ಈಗ ಮತ ಹಾಕುವ ದಿಟ್ಟತನವನ್ನು ತೋರಿಸುತ್ತಿದ್ದಾರೆ. ಜುಲೈ 25ರಂದು ನಡೆಯಲಿರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪ್ರಧಾನಿಯನ್ನ ಆರಿಸಲು ಮುಂದಾಗಿದ್ದಾರೆ. ಉರಿಯುವ ಬಿಸಿಲಿನಲ್ಲಿ ಹಳ್ಳಿಯ ಪಕ್ಕದ ನೇರಳೆ ಮರದ ನೆರಳಲ್ಲಿ ಕುಳಿತು ಸಭೆ ನಡೆಸುತ್ತಿದ್ದಾರೆ. ತಮ್ಮೊಡನೆ ಮಾತನಾಡಲು ಬಂದ ‘ಎಎಫ್‌ಪಿ’ ಸುದ್ದಿ ಸಂಸ್ಥೆಯ ಜತೆ, ‘ಇಡೀ ದೇಶ ಜುಲೈ 25ರಂದು ಮತ ಹಾಕಲಿದೆ. ನಮಗೂ ಕೂಡ ಮತ ಹಾಕುವ ಅವಕಾಶ ಕೊಡಿ’ ಎಂದಿದ್ದಾರೆ. ಮಹಿಳೆಯರ ಈ ನಡೆ ಪಟ್ಟಣದ ಗಂಡಸರ ಕೆಂಗಣ್ಣಿಗೆ ಗುರಿಯಾಗಿದೆ.

ನೇರಳೆ ಮರದಡಿ ಸಭೆ ನಡೆಸುತ್ತಿರುವ ಮಹಿಳೆಯರು.
ನೇರಳೆ ಮರದಡಿ ಸಭೆ ನಡೆಸುತ್ತಿರುವ ಮಹಿಳೆಯರು.

ಎಎಫ್‌ಪಿ ಜತೆ ಮಾತನಾಡಿರುವ 31 ವರ್ಷದ ಮಹಿಳೆ ನಾಝಿಯಾ ತಬಾಸುಮ್‌, “ಅವರು ನಮ್ಮನ್ನು ಮೂರ್ಖರು ಎಂದು ಭಾವಿಸಿದಂತಿದೆ. ಅಥವಾ ನಾವು ಮತ ಹಾಕುವುದು ಅವರಿಗೆ ಪ್ರತಿಷ್ಠೆಯ ವಿಷಯ ಆಗಿರಬಹುದು,” ಎಂದು ವ್ಯಂಗ್ಯವಾಡಿದ್ದಾರೆ. 7 ದಶಕಗಳ ಹಿಂದೆ ಈ ಪಟ್ಟಣದ ಹಿರಿಯರು ಮಹಿಳೆಯರು ಮತ ಹಾಕುವುದನ್ನು ವಿರೋಧಿಸಿ, ಮಹಿಳೆಯರು ಮತಗಟ್ಟೆಗೆ ಬಂದು ಮತ ಹಾಕುವುದು ಪುರುಷರಿಗೆ ‘ಅಗೌರವ’ ತೋರಿದಂತೆ ಎಂದಿದ್ದರು. ಈ ಮಾತಿಗೆ ಪ್ರತಿಯಾಗಿ ನಾಝಿಯಾ ತಬಾಸುಮ್‌ ಮೇಲಿನ ಮಾತುಗಳನ್ನಾಡಿದ್ದಾರೆ.

ದಕ್ಷಿಣ ಏಷ್ಯಾದ ಭಾಗದಲ್ಲಿ ಪುರುಷ ಪ್ರಾಧಾನ್ಯತೆಯ ಭಾಗವಾಗಿ ಬಂದಿರುವ ಈ ‘ಗೌರವ’ ಎನ್ನುವ ಪರಿಕಲ್ಪನೆ, ಮಹಿಳೆಯರನ್ನು ಇಂದಿಗೂ ಬಂಧಿಸಿಟ್ಟಿದೆ. ಸ್ತ್ರೀಯರು ತಮ್ಮ ಸಂಗಾತಿಯ ಆಯ್ಕೆ ಮಾಡುವುದನ್ನು, ಮನೆಯಿಂದ ಹೊರಹೋಗಿ ದುಡಿಯುವುದನ್ನು ನಿರ್ಬಂಧಿಸಿದೆ. ಈ ಕಟ್ಟುನಿಟ್ಟುಗಳನ್ನು ವಿರೋಧಿಸಿದ ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡುವುದರ ಮೂಲಕ, ಅದಕ್ಕೂ ಬಗ್ಗದಿದ್ದರೆ ಕೊಲ್ಲುವುದರ ಮೂಲಕ ಧ್ವನಿಯನ್ನು ಅಡಗಿಸುತ್ತಾ ಬರಲಾಗಿದೆ. ಇಂದಿನ ಆಧುನಿಕ ಯುಗದ ನಗರ ಭಾಗಗಳಲ್ಲಿ ಈ ಪುರುಷಾಧಿಪತ್ಯ ಸ್ವಲ್ಪ ಸಡಿಲಗೊಂಡಿರುವುದನ್ನು ಬಿಟ್ಟರೆ ಬಹುಪಾಲು ಗ್ರಾಮೀಣ ಮಹಿಳೆಯರು ಈ ‘ಗೌರವ’ದ ಪರಿಕಲ್ಪನೆಯ ಅಡಿಯಲ್ಲೇ ಬದುಕುತ್ತಿದ್ದಾರೆ.

“ಗಂಡಂದಿರು ಮನೆಯಲ್ಲಿ ಮಲಗಿ ನಿದ್ದೆ ಹೋಗಿ, ಹೆಂಗಸರು ದುಡಿದು ತಂದುಹಾಕುವಾಗ ಅವರ ಗೌರವ ಎಲ್ಲಿ ಅಡಗಿರುತ್ತದೋ?” ಎಂದು ಕಟುಮಾತುಗಳನ್ನು ಆಡುತ್ತಾರೆ ನಾಝಿಯಾ ತಬಾಸುಮ್‌.

ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಪಾಕ್‌ನ ಈ ಮಹಿಳೆಯರು!

ಮತ ಹಾಕುವ ದಿಟ್ಟತನವನ್ನು ಪ್ರದರ್ಶಿಸಿರುವ ಈ ಪಟ್ಟಣದ ಮಹಿಳೆಯರಿಗೆ ಪಾಕಿಸ್ತಾನದ ಚುನಾವಣಾ ಆಯೋಗ ತಂದಿರುವ ಕಾನೂನೂ ಕೂಡ ಬೆಂಬಲವಾಗಿ ನಿಂತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಶೇ.10ರಷ್ಟು ಮಹಿಳೆಯರು ಮತದಾನ ಮಾಡದಿದ್ದರೆ, ಚನಾವಣಾ ಫಲಿತಾಂಶವನ್ನು ರದ್ದುಗೊಳಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ವೇಗವಾಗಿ ಬೆಳೆಯುತ್ತಿರುವ ದೇಶದಲ್ಲಿ ಸುಮಾರು 2 ಕೊಟಿ ಹೊಸ ಮತದಾರರು ನೊಂದಾವಣೆಗೊಂಡಿದ್ದಾರೆ. ಅದರಲ್ಲಿ 91 ಲಕ್ಷದಷ್ಟು ಜನ ಮಹಿಳೆಯರು ಎಂದು ಚುನಾವಣಾ ಅಯೋಗ ತಿಳಿಸಿದೆ.

ಚುನಾವಣಾ ಆಯೋಗದ ಈ ಘೋಷಣೆ ಪಾಕಿಸ್ತಾನದ ಮಹಿಳಾ ಹಕ್ಕುಗಳ ಹೋರಾಟದಲ್ಲಿ ಐತಿಹಾಸಿಕ ಮೈಲಿಗಲ್ಲಾಗಿ ಕಾಣಿಸಿಕೊಂಡಿದೆ. ಪಾಕಿಸ್ತಾನದಲ್ಲಿ 2013ರಲ್ಲಿ ನಡೆದಿದ್ದ ಚುನಾವಣೆ ಒಟ್ಟು ಶೇ.55.02ರಷ್ಟು ಮತದಾನವಾಗಿ, ಇಲ್ಲಿಯವರೆಗಿನ ಚುನಾವಣೆಗಳಲ್ಲಿ ಅತಿ ಹೆಚ್ಚು ಮತ ಪಡೆದ ಚುನಾವಣೆಯಾಯಿತು. ಆದರೆ ಇದರಲ್ಲಿ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ. 17 ಚುನಾವಣಾ ಕ್ಷೇತ್ರಗಳಲ್ಲಿ ಶೇ.95ರಷ್ಟು ಮಹಿಳೆಯರು ಮತ ಹಾಕಿರಲಿಲ್ಲ. 5 ಕ್ಷೇತ್ರಗಳಲ್ಲಿ ಶೇ.1ರಷ್ಟು ಮಹಿಳೆಯರೂ ಕೂಡ ಮತಗಟ್ಟೆಗಳಿಗೆ ಬಂದಿರಲಿಲ್ಲ. ಈ ಅಂತರದ ಲೈಂಗಿಕ ಅಸಮಾನತೆಯನ್ನು ಕಂಡಾಗ ಚುನಾವಣಾ ಆಯೋಗ ತೆಗೆದುಕೊಂಡಿರುವ ನಿರ್ಧಾರ ಮಹಿಳೆಯರಿಗೆ ಹಕ್ಕುಗಳನ್ನು ಒದಗಿಸುವಲ್ಲಿ ಚಿಕ್ಕ ಪರಿಣಾಮವನ್ನಾದರೂ ಬೀರುತ್ತದೆ, ಮೊಹ್ರಿಪುರ್‌ಗಳಂತಹ ಪ್ರದೇಶಗಳಲ್ಲಿ ಬದಲಾವಣೆಯನ್ನು ತರಲಿದೆ ಎನ್ನಲಾಗುತ್ತಿದೆ.

ಹಿಂಸಾಚಾರದ ಭಯ:

“ಈ ಭಾಗಗಳಲ್ಲಿ ಮಹಿಳೆಯರನ್ನು ಮನೆಯಿಂದ ಹೊರಗೆ ಸಹ ಕಳುಹಿಸುವುದಿಲ್ಲ,” ಎನ್ನುತ್ತಾರೆ ಲೈಂಗಿಕ ತಜ್ಞೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಫರ್ಜಾನಾ ಬಾರಿ. ಚುನಾವಣಾ ಆಯೋಗದ ನಿರ್ಧಾರ ವ್ಯವಸ್ಥೆಯನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಬಹುದು ಎಂಬ ಅಭಿಪ್ರಾಯವನ್ನು ಫರ್ಜಾನಾ ವ್ಯಕ್ತಪಡಿಸುತ್ತಾರೆ.

2015ರಲ್ಲಿ ವಾಯುವ್ಯ ಭಾಗದ ಲೋಯರ್‌ ಡಿರ್‌ ಎಂಬ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಸ್ಥಳೀಯ ಮತಗಟ್ಟೆಯಲ್ಲಿ ಮಹಿಳೆ ಮತ ಚಲಾಯಿಸುವುದನ್ನು ತಡೆಗಟ್ಟಿದ್ದ. ಇದರಿಂದಾಗಿ ಚುನಾವಣಾ ಆಯೋಗ ಈ ಭಾಗದ ಚುನಾವಣಾ ಫಲಿತಾಂಶವನ್ನೇ ರದ್ದುಗೊಳಿಸಿತು. 2013ರಲ್ಲಿನ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಯರು ಮತ ಹಾಕುವುದನ್ನು ನಿಲ್ಲಿಸಿದ ಇಬ್ಬರು ವ್ಯಕ್ತಿಗಳನ್ನು ಬಂಧಿಸುವಂತೆ ಕೋರ್ಟ್ ಆದೇಶಿಸಿತ್ತು. ಆದರೆ ಮೋಹ್ರಿಪುರದಲ್ಲಿ ಇನ್ನೂ ಈಗಾಗಿಲ್ಲ.

ಮೊಹ್ರಿ ಪುರದ ಕೆಲವು ಮಹಿಳೆಯರು ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಜತೆಗೆ ಮನೆಯಿಂದ ಹೊರಬಂದು ಉದ್ಯೋಗಗಳಲ್ಲಿದ್ದಾರೆ. ಆದರೂ ಕೂಡ ಈವರೆಗೆ ಮತ ಚಲಾಯಿಸುವ ಧೈರ್ಯ ತೋರಿಲ್ಲ.

ಸದ್ಯ ನೇರಳೆ ಮರದ ನೆರಳಲ್ಲಿ ಸಭೆ ನಡೆಸುವ ಕೆಲವು ಯುವತಿಯರಷ್ಟೇ ಈಗ ನಾವು ಮತ ಹಾಕಬೇಕು ಎಂಬ ಗಟ್ಟಿತನ ತೋರಿಸುತ್ತಿರುವುದು. ಹಿರಿಯ ಮಹಿಳೆಯರಲ್ಲಿ ಇನ್ನೂ ಈ ಮನೋಸ್ಥೈರ್ಯ ಬಂದಿಲ್ಲ. ಅಥವಾ ಹಳೆಯ ಪದ್ದತಿಗಳಿಗೆ ಕಟ್ಟುಬಿದ್ದಿರುವುದರಿಂದ ಮನೆಬಿಟ್ಟು ಹೊರಬಂದು ಮತ ಹಾಕುವುದು ಅವರಿಗೇ ಇಷ್ಟವಿಲ್ಲ.

ಸುಮಾರು 60ರ ಪ್ರಾಯದ ವೃದ್ಧೆ ನಝ್ರೀನ್‌ ಮೈ ಗಂಡನನ್ನು ಕಳೆದುಕೊಂಡು ಹಲವಾರು ವರ್ಷಗಳಾಗಿವೆ. ಅವರಿಗೆ ಮಹಿಳೆಯರು ಓಟು ಚಲಾಯಿಸುವುದು ಇಷ್ಟವಿಲ್ಲ. “ಮತ ಹಾಕುವುದು ಮಹಿಳೆಯರ ಸಂಸ್ಕೃತಿಯಲ್ಲ” ಎನ್ನುತ್ತಾರೆ ನಝ್ರಿನ್‌ ಮೈ.

ನಝ್ರಿನ್‌ ಮೈ.
ನಝ್ರಿನ್‌ ಮೈ.

“ಮಹಿಳೆಯರು ಒಬ್ಬರೇ ಮತ ಚಲಾಯಿಸಲು ಹೋದರೆ ಪುರುಷರು ಅವರ ಮೇಲೆ ಶೋಷಣೆ ನಡೆಸಬಹುದು, ಹಿಂಸೆ ಕೊಡಬಹುದು ಎಂಬ ಭಯ ಕಾಡುತ್ತದೆ,” ಎನ್ನುತ್ತಾರೆ 22ರ ಪ್ರಾಯದ ಶುಮೈಲಾ ಮಜೀದ್‌. ಇದರಿಂದಾಗಿಯೇ ಮಹಿಳೆಯರು ಮತಗಟ್ಟೆಗಳ ಬಳಿ ಸುಳಿಯುವುದಿಲ್ಲ ಎನ್ನುವ ಅಭಿಪ್ರಾಯ ಅವರದ್ದು. ಮೊಹ್ರಿ ಪುರದಲ್ಲಿ ಇರುವುದು ಇರ್ಶದ್‌ ಬಿಬಿ ಎನ್ನುವ ಒಬ್ಬರೇ ಮಹಿಳಾ ಕೌನ್ಸಿಲರ್‌. ಅದೂ ಕೂಡ ಕನಿಷ್ಠ ಒಬ್ಬ ಕೌನ್ಸಿಲರ್‌ ಆದರೂ ಮಹಿಳೆಯಾರಬೇಕು ಎಂಬ ಕಾನೂನಿನ ಕಾರಣದಿಂದ ಎನ್ನುತ್ತಾರೆ ಶುಮೈಲಾ.

ಶುಮೈಲಾರ ಬಳಿ ‘ಏಕೆ ಮಹಿಳೆಯರಿಗೆ ಮತದಾನ ಮಾಡಲು ಅವಕಾಶವಿಲ್ಲ?’ ಎಂಬ ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರ ನೀಡಿದ್ದು ಶುಮೈಲಾರ ಗಂಡ ಜಾಫರ್‌ ಇಕ್ಬಾಲ್‌. “ನಮ್ಮ ಹಿರಿಯರು ಈ ಪದ್ಧತಿಯನ್ನು ಹುಟ್ಟುಹಾಕಿದ್ದಾರೆ. ನಾವೂ ಕೂಡ ಅದರಂತೆಯೇ ನಡೆಯುತ್ತಿದ್ದೇವೆ,” ಎನ್ನತ್ತಾರೆ ಇಕ್ಬಾಲ್‌.

“ಯಾವುದೇ ಒಂದು ಪ್ರಜಾಪ್ರಭುತ್ವದ ದೇಶದಲ್ಲಿ ಜನಸಂಖ್ಯೆಯ ಅರ್ಧಭಾಗವಾದ ಮಹಿಳೆಯರನ್ನು ಮತದಾನದಿಂದ ತಡೆಯಬಾರದು,” ಎನ್ನುತ್ತಾರೆ ಪತ್ರಿಕೆಯೊಂದರಲ್ಲಿ ಅಂಕಣ ಬರೆಯುವ ಹಜ್ರಾಹ್‌ ಮುಮ್ತಾಜ್‌. ಆದರೆ ಸ್ಥಳೀಯ ರಾಜಕಾರಣಿಗಳನ್ನು ಈ ಬಗ್ಗೆ ಕೇಳಿದರೆ ನಾವು ಅಸಹಾಯಕರು ಎಂಬ ಉತ್ತರ ದೊರೆಯುತ್ತದೆ ಎನ್ನುವ ಹತಾಶೆ ಅವರದ್ದು.

ಈ ಕುರಿತು ಎಎಫ್‌ಪಿ ಜತೆ ಮಾತನಾಡಿದ ಪಾಕಿಸ್ತಾನ್‌ ತೆಹ್ರೀಕ್‌-ಈ-ಇನ್ಸಾಫ್‌(ಪಿಟಿಐ)ನ ಸ್ಥಳೀಯ ನಾಯಕ ರಝಾ ಹಯತ್‌ ಹಿರಜ್‌, “ನಾವು ಜನರ ಸಂಪ್ರದಾಯಗಳನ್ನು ಮುರಿಯಲು ಸಾಧ್ಯವಿಲ್ಲ. ಮೋಹ್ರಿ ಪುರದ ಮಹಿಳೆಯರು ಮತ ಚಲಾಯಿಸಬೇಕು ಎನ್ನುವುದನ್ನು ಅಲ್ಲಿಯ ಜನರೇ ನಿರ್ಧರಿಸಬೇಕು,” ಎನ್ನುತ್ತಾರೆ.

ಮಹಿಳೆಯರು ನೇರಳೆ ಮರದ ಕೆಳಗೆ ಕುಳಿತು ಸಭೆ ನಡೆಸಲು ಅವಕಾಶ ಮಾಡಿಕೊಟ್ಟಿರುವ ಜಿಲ್ಲಾ ಸಮಿತಿಯ ಸದಸ್ಯೆ ಬಿಸ್ಮಿಲ್ಲಾ ನೂರ್‌, ಮಹಿಳೆಯರು ಮತದಾನ ಮಾಡುವಂತಾಗಲು ಹಲವಾರು ವರ್ಷಗಳಿಂದ ಶ್ರಮಿಸುತ್ತಿದ್ದಾರೆ.

“ನಾನು 2001ರಿಂದಲೂ ಕೂಡ ಈ ಕುರಿತು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ನನ್ನ ಮಾತನ್ನು ಕೇಳಲು ಜನರು ಸಿದ್ಧವಿಲ್ಲ,” ಎಂದ ಬಿಸ್ಮಿಲ್ಲಾ ನೂರ್‌, “2005ರ ವೇಳೆಯಲ್ಲಿ ಮೊಹ್ರಿಪುರದ ಪುರುಷರು ನಮ್ಮ ಮಹಿಳೆಯರಿಗೆ ಮತದಾನ ಮಾಡಲು ಇಷ್ಟವಿಲ್ಲ, ಪದೇ ಪದೇ ಅವರನ್ನು ಒತ್ತಾಯಿಸಬೇಡ ಎಂದರು,” ಎಂದು ತಮ್ಮ ವಿಫಲ ಪ್ರಯತ್ನದ ಬಗ್ಗೆ ತಿಳಿಸಿದರು. 2013ರ ಚುನಾವಣೆಯಲ್ಲೂ ಕೂಡ ಮೊಹ್ರಿ ಪುರದ ಮಹಿಳೆಯರಿಂದ ಮತ ಹಾಕಿಸಲು ಬಿಸ್ಮಿಲ್ಲಾ ನೂರ್‌ಗೆ ಸಾಧ್ಯವಾಗಿರಲಿಲ್ಲ.

2015ರ ವೇಳೆಗೆ ಬಿಸ್ಮಿಲ್ಲಾ ನೂರ್‌ರ ಪ್ರಯತ್ನ ಚಿಕ್ಕದಾಗಿ ಫಲ ಕೊಟ್ಟಿತ್ತು. ಆಗ ನಡೆದಿದ್ದ ಸ್ಥಳೀಯ ಚುನಾವಣೆಯಲ್ಲಿ ಮೊಹ್ರಿಪುರದ ಫೌಜಿಯಾ ತಾಲಿಬ್‌ ಎಂಬ ಒಬ್ಬಳೇ ಒಬ್ಬ ಮಹಿಳೆ ಮತ ಚಲಾಯಿಸಿ, ಉಳಿದವರು ಬಾಯಿಯ ಮೇಲೆ ಬೆರಳಿಡುವಂತೆ ಮಾಡಿದ್ದಳು. ಜುಲೈ 25ರಂದು ಆಕೆ ಮತ ಚಲಾಯಿಸುತ್ತಾಳೆಯೇ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಎನ್ನುತ್ತಾರೆ ಬಿಸ್ಮಿಲ್ಲಾ ನೂರ್‌.

ಫೌಜಿಯಾ ತಾಲಿಬ್‌.
ಫೌಜಿಯಾ ತಾಲಿಬ್‌.

ಆದರೆ ಈಗ ಬಿಸ್ಮಿಲ್ಲಾ ನೂರ್‌ರ ಮಾತು ಕೇಳಲು ಹಲವು ಯುವತಿಯರು ಸಿದ್ಧವಾಗಿದ್ದಾರೆ. ನೂರ್‌ಗೆ ತಾವು ಮತ ಚಲಾಯಿಸುವುದಾಗಿ ಭರವಸೆ ನೀಡಿದ್ದಾರೆ. ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಜುಲೈ 25ರಂದು ಎನಾಗುತ್ತದೆ ಎನ್ನುವುದು ಅಂದೇ ತಿಳಿಯಲಿದೆ ಎಂದ ಬಿಸ್ಮಿಲ್ಲಾ ನೂರ್‌ ಮುಖದಲ್ಲಿ ಸಂತಸ ಹಾಗೂ ಚಿಂತೆಯ ಗೆರೆಗಳು ಒಟ್ಟಾಗಿ ಕಾಣಿಸುತ್ತಿದ್ದವು.

ಮಾಹಿತಿ, ಚಿತ್ರಗಳು: ಎಎಫ್‌ಪಿ