8 ವರ್ಷಗಳ ಹುಡುಕಾಟದ ನಂತರ ಸೆರೆ ಸಿಕ್ಕಿತು ಆಸ್ಟ್ರೇಲಿಯಾದ 600 ಕೆಜಿಯ ‘ಕಳ್ಳ ಮೊಸಳೆ’!
ಫೋಕಸ್

8 ವರ್ಷಗಳ ಹುಡುಕಾಟದ ನಂತರ ಸೆರೆ ಸಿಕ್ಕಿತು ಆಸ್ಟ್ರೇಲಿಯಾದ 600 ಕೆಜಿಯ ‘ಕಳ್ಳ ಮೊಸಳೆ’!

ಈ ಒಂದು ಮೊಸಳೆ ಹಿಡಿಯಲು ಅಲ್ಲಿನ ತಜ್ಞರು ತೆಗೆದುಕೊಂಡ ಅವಧಿ ಎಂಟು ವರ್ಷ. ಅಂದ ಹಾಗೆ ಮೊಸಳೆಯ ತೂಕ ಬರೋಬ್ಬರಿ 600 ಕೆಜಿ. 4.7 ಮೀಟರ್ (15.4 ಅಡಿ) ಉದ್ದ. 60 ವರ್ಷ.

ಇದು ಮೊಸಳೆ ಬೇಟೆಯೊಂದರೆ ಕಥೆ. ನಡೆದಿದ್ದು ದೂರದ ಆಸ್ಟ್ರೇಲಿಯಾದಲ್ಲಿ. ಅಷ್ಟಕೂ ಈ ಒಂದು ಮೊಸಳೆ ಹಿಡಿಯಲು ಅಲ್ಲಿನ ತಜ್ಞರು ತೆಗೆದುಕೊಂಡ ಅವಧಿ ಎಂಟು ವರ್ಷ. ಅಂದ ಹಾಗೆ ಮೊಸಳೆಯ ತೂಕ ಬರೋಬ್ಬರಿ 600 ಕೆಜಿ. 4.7 ಮೀಟರ್ (15.4 ಅಡಿ) ಉದ್ದ. 60 ವರ್ಷ.

ಈ ಬೃಹತ್ ಮೊಸಳೆಯನ್ನು ಬಲೆಗೆ ಕೆಡವಲು ಎಂಟು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಹಾಗೆ ಯೋಜನೆ ರೂಪಿಸುವಾಗ ಮೊಸಳೆ ಹಿಡಿಯಲು ಇಷ್ಟೊಂದು ಸಮಯ ಹಿಡಿಯುತ್ತದೆ ಎಂಬ ಅಂದಾಜು ಯಾರಿಗೂ ಇರಲಿಲ್ಲ. ಕೊನೆಗೂ ಸತತ ಪ್ರಯತ್ನದ ನಂತರ ಇದೀಗ 600 ಕೆಜಿ ಮೊಸಳೆಯನ್ನು ಅಕ್ಷರಶಃ ಕಟ್ಟಿ ಎಳೆದು ತಂದಿದ್ದಾರೆ ಪ್ರಾಣಿಗಳ ತಜ್ಞರು. ಜುಜುಬಿ ಒಂದು ಮೊಸಳೆ ಹಿಡಿಯಲು 8 ವರ್ಷಗಳ ಶ್ರಮವನ್ನು ವ್ಯಯಸಿದ ಸಿಟ್ಟನ್ನು ಅವರು ಮೊಸಳೆ ಮೇಲೆ ಕಾರಿಕೊಂಡಿದ್ದಾರೆ. ಮೊಸಳೆ ಬಾಯಿಗೆ ಪ್ಲಾಸ್ಟರ್ ಸುತ್ತಿ, ಅಂಗಾಗಳನ್ನೆಲ್ಲಾ ಹಗ್ಗದಿಂದ ಕಟ್ಟಿ ಬಿಗಿ ಮಾಡಿದ್ದಾರೆ.

ಮೊಸಳೆ ಬೇಟೆಗೆ ಮುನ್ನುಡಿ:

2010ರಲ್ಲಿ ಉತ್ತರ ಆಸ್ಟ್ರೇಲಿಯಾದ ನಗರ ಕ್ಯಾಥರೀನ್‌ನಲ್ಲಿ ಈ ಮೊಸಳೆ ಮೊದಲ ಬಾರಿಗೆ ಕಂಡು ಬಂದಿತ್ತು. ಸುಮಾರು 60 ವರ್ಷ ವಯಸ್ಸಿನ ಈ ಮೊಸಳೆಯನ್ನು ಅಂದೇ ಹಿಡಿಯಲು ತಜ್ಞರು ಮುಂದಾಗಿದ್ದರು. ಆದರೆ ಈ ಮೊಸಳೆ ತನ್ನ ಜೀವಿತಾವಧಿಯಲ್ಲಿ ತಪ್ಪಿಸಿಕೊಳ್ಳಲು ಬೇಕಾದ ಚಾಣಾಕ್ಷ ತಂತ್ರಗಳನ್ನೆಲ್ಲಾ ಕಲಿತುಕೊಂಡಿತ್ತು. ಪರಿಣಾಮ ಹಿಡಿಯಲು ಬರೋಬ್ಬರಿ 8 ವರ್ಷಗಳೇ ಬೇಕಾಯಿತು. ಇದೀಗ ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಕಳ್ಳನನ್ನು ಮೊಸಳೆಗಳ ಜೈಲಿಗೆ ನೂಕಲಾಗಿದೆ. ಆದರೆ ಈ ಮೊಸಳೆಯ ಕಿರಾತಕ ಅವತಾರಗಳನ್ನೆಲ್ಲಾ ಕಂಡಿರುವ ವನ್ಯಪ್ರಾಣಿಗಳ ತಜ್ಞರು ಈ ಗಲಿವರ ಮೊಸಳೆಯನ್ನು ಸಾಮಾನ್ಯ ಜನರಿಂದ ದೂರವಿಡಲು ನಿರ್ಧರಿಸಿದ್ದಾರೆ.

8 ವರ್ಷಗಳ ಹುಡುಕಾಟದ ನಂತರ ಸೆರೆ ಸಿಕ್ಕಿತು ಆಸ್ಟ್ರೇಲಿಯಾದ 600 ಕೆಜಿಯ ‘ಕಳ್ಳ ಮೊಸಳೆ’!
ಚಿತ್ರ ಕೃಪೆ: ಸಿಎನ್ಎನ್

ಮೊಸಳೆ ಪ್ರಪಂಚ:

ಇಲ್ಲಿಯವರೆಗೆ ಕ್ಯಾಥರೀನ್ ನದಿಯಿಂದ ಹೊರ ತೆಗೆದ ಅತೀ ದೊಡ್ಡ ಮೊಸಳೆ ಇದು ಎಂದು ವನ್ಯಜೀವಿ ಕಾರ್ಯಾಚರಣೆಯ ಮುಖ್ಯ ಅಧಿಕಾರಿ ಟ್ರೇಸೆ ಡುಡ್ಲಿಂಗ್ ಹೇಳಿದ್ದಾರೆ. ಹಾಗೆ ನೋಡಿದರೆ ಪ್ರತಿ ವರ್ಷ ಇಲ್ಲಿನ ನದಿಗಳಿಂದ ಪುಂಡ ಪೋಕರಿಯಲ್ಲಿ ನಿರತವಾಗಿರುವ ಸುಮಾರು 250 ಮೊಸಳೆಗಳನ್ನು ಇಲ್ಲಿನ ತಜ್ಞರು ಹಿಡಿಯುತ್ತಾರೆ. ಆದರೆ ಈ ಮೊಸಳೆಯನ್ನು ಹಿಡಿಯಲು ತೆಗೆದುಕೊಂಡಷ್ಟು ಸಮಯವನ್ನು ಬೇರಾವ ಮೊಸಳೆಗೂ ನೀಡಿಲ್ಲ.

ಆಸ್ಟ್ರೇಲಿಯಾದಲ್ಲಿ ಉಪ್ಪು ನೀರಿನ ಮೊಸಳೆಗಳು ಸಾಮಾನ್ಯ. 1970ಕ್ಕೆ ಮೊದಲು ಇಲ್ಲಿ ಇವುಗಳ ಸಂತತಿ ಕ್ಷೀಣಿಸಲು ಆರಂಭವಾಗಿತ್ತು. ಆಗ ಮೊಸಳೆಗಳನ್ನು ಸಂರಕ್ಷಿತ ಪ್ರಾಣಿಗಳು ಎಂದು ಘೋಷಿಸಲಾಯಿತು. ಅಲ್ಲಿಂದ ಇವುಗಳ ಸಂಖ್ಯಾ ಸ್ಫೋಟ ಆರಂಭವಾಯಿತು.

ಇವತ್ತು ಆಸ್ಟ್ರೇಲಿಯಾದಲ್ಲಿ ಇವುಗಳ ಹಾವಳಿ ಯಾವ ಮಟ್ಟಕ್ಕೆ ಇದೆ ಎಂದರೆ ಎಲ್ಲಾ ನಿಯಂತ್ರಣ, ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡರೂ ಇಲ್ಲಿ ಪ್ರತೀ ವರ್ಷ ಇಬ್ಬರು ಮನುಷ್ಯರನ್ನು ಮೊಸಳೆಗಳು ತಿಂದು ತೇಗುತ್ತವೆ. ಇದೇ ರೀತಿ ಕಳೆದ ವರ್ಷ ಹಿರಿಯ ಮಹಿಳೆಯೊಬ್ಬರನ್ನು ಈ ಮೊಸಳೆಗಳು ಬಲಿ ಪಡೆದಿದ್ದವು. ಇದಾದ ಬಳಿಕ ಮೊಸಳೆಗಳ ಸಂತತಿಗೆ ನಿಯಂತ್ರಣ ಹೇರಬೇಕು ಎಂಬ ಕೂಗು ದೇಶದಾದ್ಯಂತ ಆರಂಭವಾಯಿತು. ಅಲ್ಲಿಂದ ಈ ಮೊಸಳೆಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದೆಲ್ಲದರ ಮಧ್ಯೆ ಈ ಭಾರೀ ಮೊಸಳೆ ಬೇಟೆಗಾರರ ಬಲೆಗೆ ಬಿದ್ದಿದೆ.