samachara
www.samachara.com
ನಾಸಾ ಮಂಗಳಯಾನ: ಕೆಂಪು ಗ್ರಹಕ್ಕೆ ನೆಗೆಯಲು ಸಜ್ಜಾಗುತ್ತಿದ್ದಾಳೆ 17ರ ಪೋರಿ
ಫೋಕಸ್

ನಾಸಾ ಮಂಗಳಯಾನ: ಕೆಂಪು ಗ್ರಹಕ್ಕೆ ನೆಗೆಯಲು ಸಜ್ಜಾಗುತ್ತಿದ್ದಾಳೆ 17ರ ಪೋರಿ

ಒಂದೊಮ್ಮೆ ಅಂದುಕೊಂಡಂತೆ ನಡೆದರೆ 2033ರ ಹೊತ್ತಿಗೆ ಮಾನವ ಕೆಂಪು ಗ್ರಹದ ಮೇಲೆ ಹೆಜ್ಜೆಯೂರಲಿದ್ದಾನೆ. ಇದಕ್ಕಾಗಿ ತನ್ನ ಕನಸಿನ ಯೋಜನೆ ರೂಪಿಸಿದೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’.

ಅಂತರಿಕ್ಷಕ್ಕೆ ಹೋಗಬೇಕು ಎಂದು ಕನಸು ಕಾಣುವವರಿಗೇನು ಕಡಿಮೆಯಿಲ್ಲ. ಕೆಲವೇ ಕೆಲವು ವಿಜ್ಞಾನಿಗಳು ಮಾತ್ರ ಹೀಗೆ ಬಾಹ್ಯಾಕಾಶಕ್ಕೆ ಹೋಗಿ ತಮ್ಮ ಕನಸು ನೆರವೇರಿಸಿಕೊಂಡಿದ್ದಾರೆ. ಆದರೆ, ಇವರು ಯಾರಿಗೂ ಸಿಗದ ಅತ್ಯಪೂರ್ವ ಅವಕಾಶವೊಂದು ಈ ಬಾಲಕಿಗೆ ಒದಗಿ ಬಂದಿದೆ; ಅದು ಮಂಗಳ ಗ್ರಹಕ್ಕೆ ತೆರಳುವ ಸುವರ್ಣಾವಕಾಶ. ಹೀಗೊಂದು ಲಾಟರಿ ಗಿಟ್ಟಿಸಿದವಳೇ ಅಮೆರಿಕಾದ ಲೂಸಿಯಾನಾ ರಾಜ್ಯದ ಹ್ಯಾಮಂಡ್‌ನ 17 ವರ್ಷದ ಬಾಲಕಿ ಅಲಿಸಾ ಕಾರ್ಸನ್; ಕೆಂಪು ಗ್ರಹದ ಮೇಲೆ ಹೆಜ್ಜೆಯೂರುವ ಚೊಚ್ಚಲ ಅವಕಾಶ ಪಡೆದ ಅದೃಷ್ಟವಂತೆ.

ಒಂದೊಮ್ಮೆ ಅಂದುಕೊಂಡಂತೆ ನಡೆದರೆ 2033ರ ಹೊತ್ತಿಗೆ ಮಾನವ ಕೆಂಪು ಗ್ರಹದ ಮೇಲೆ ಹೆಜ್ಜೆಯೂರಲಿದ್ದಾನೆ. ಇದಕ್ಕಾಗಿ ತನ್ನ ಕನಸಿನ ಯೋಜನೆ ರೂಪಿಸಿದೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’. ಅಂದು ಇಡೀ ಮಾನವ ಪರಿವಾರದ ಪ್ರತಿನಿಧಿಯಾಗಿ ಕೆಂಪು ಗ್ರಹದ ಮೇಲೆ ಮೊದಲ ಹೆಜ್ಜೆಯೂರಲಿರುವವಳೇ ಅಲಿಸಾ ಕಾರ್ಸನ್. ಈಕೆಗಿನ್ನೂ 17 ವರ್ಷ. ಹೀಗಾಗಿ ನಾಸಾದ ಮಂಗಳಯಾನಕ್ಕೆ ಆಕೆಯ ಹೆಸರು ಅಂತಿಮಗೊಂಡಿದ್ದರೂ, ಅಧಿಕೃತವಾಗಿ ಘೋಷಿಸಿಲ್ಲ. ಈಕೆಗೆ 18 ತುಂಬುತ್ತಲೇ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ.

ಮಂಗಳಯಾನ ಮಾತ್ರವಲ್ಲ ಈಕೆ ಇನ್ನೂ ಹಲವು ಪ್ರಥಮಗಳ ದಾಖಲೆ ಬರೆಯಲಿದ್ದಾಳೆ. ಅತೀ ಕಿರಿಯ ವಯಸ್ಸಿಗೆ ಬಾಹ್ಯಾಕಾಶ ಯಾತ್ರೆ ಮುಗಿಸಿದ ಶ್ರೇಯಸ್ಸೂ ಈಕೆಗೆ ದಕ್ಕಲಿದೆ. ಸದ್ಯ 2033ರ ಮಂಗಳಯಾನಕ್ಕೆ ಈಕೆಯನ್ನು ಸಜ್ಜುಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅವತ್ತಿಗೆ ಈಕೆಗೆ 32 ವರ್ಷವಾಗಿರಲಿದ್ದು, ‘ಬ್ಲ್ಯೂಬೆರ್ರಿ’ ಕೋಡ್ ನೇಮ್‌ನೊಂದಿಗೆ ಈಕೆಗೆ ತರಬೇತಿ ನೀಡುವಲ್ಲಿ ನಾಸಾ ನಿರತವಾಗಿದೆ.

ನಾಸಾ ಮಂಗಳಯಾನ: ಕೆಂಪು ಗ್ರಹಕ್ಕೆ ನೆಗೆಯಲು ಸಜ್ಜಾಗುತ್ತಿದ್ದಾಳೆ 17ರ ಪೋರಿ

ಹೀಗೆ ಮಂಗಳ ಗ್ರಹದ ಮೇಲೆ ನಡೆದಾಡುವ ಆಸೆ ಅಲಿಸಾ ಕಾರ್ಸನ್‌ಗೆ ಯಾಕೆ ಬಂತು ಎಂದು ಹುಡುಕುತ್ತಾ ಹೊರಟರೆ ಅಲ್ಲಿ ಕಾರ್ಟೂನ್ ಪ್ರಪಂಚ ಕಾಣಿಸುತ್ತಿದೆ. ಆಗ ಆಕೆಗಿನ್ನೂ ಮೂರರ ಹರೆಯ. ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಅಲಿಸಾ ‘ದಿ ಬ್ಯಾಕ್‌ಯಾರ್ಡಿಗನ್ಸ್’ ಎನ್ನುವ ಕಾರ್ಟೂನ್ ನೋಡುತ್ತಿದ್ದಳು. ಇದರಲ್ಲಿ ‘ಮಿಷನ್ ಟು ಮಾರ್ಸ್’ ಎಂಬ ಸಂಚಿಕೆ ಆಕೆಗೆ ಇಷ್ಟವಾಗಿತ್ತು. ಕೆಂಪು ಗ್ರಹಕ್ಕೆ ಒಂದಷ್ಟು ಗೆಳೆಯರ ಗುಂಪು ಸಾಹಸದ ಯಾತ್ರೆ ನಡೆಸುವ ಕಥೆಯದು. ಅದು ಅಲಿಸಾಳ ಪುಟಾಣಿ ಮೆದುಳಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿತು. ಪರಿಣಾಮ ಈಕೆ ತಾನು ಗಗನಯಾತ್ರಿಯಾಗಬೇಕು ಎಂಬ ಕನಸು ಕಾಣಲು ಆರಂಭಿಸಿದಳು.

ಹರೆಯಕ್ಕೆ ಬರುತ್ತಲೂ ಈ ಬಾಹ್ಯಾಕಾಶ, ಮಂಗಳ ಗ್ರಹ, ಮೊದಲಾದವುಗಳ ಬಗ್ಗೆಯೆಲ್ಲಾ ತಿಳಿದುಕೊಂಡ ಅಲಿಸಾಳಿಗೆ ಇವುಗಳ ಬಗ್ಗೆ ಒಂದು ತೆರನಾದ ಆಕರ್ಷಣೆ ಬೆಳೆಯಿತು. ನಾಸಾದ ಬಾಹ್ಯಾಕಾಶ ಕೇಂದ್ರಗಳಿಗೆ ಭೇಟಿ ನೀಡುವ ಪರಿಪಾಠ ಶುರುವಿಟ್ಟುಕೊಂಡಳು. ‘ಟೀನ್ ವಾಗ್’ಗೆ ನೀಡಿದ ಸಂದರ್ಶನದಲ್ಲಿ ಅಲಿಸಾ. “ನಾನೂ ಎಲ್ಲರಂತೆ ಶಿಕ್ಷಕಿಯಾಗಬೇಕು, ದೇಶದ ಅಧ್ಯಕ್ಷೆಯಾಗಬೇಕು ಎಂದು ಕನಸು ಕಂಡಿದ್ದೆ. ಆದರೆ ನಂತರ ನಾನು ಗನನಯಾತ್ರಿಯಾಗಬೇಕು, ಮಂಗಳ ಗ್ರಹಕ್ಕೆ ಹೋಗಿ ಹಿಂತಿರುಗಬೇಕು. ಆ ನಂತರ ನಾನು ಶಿಕ್ಷಕಿ ಅಥವಾ ಅಧ್ಯಕ್ಷೆಯಾಗಬೇಕು,” ಎಂದಿದ್ದಾಳೆ.

ಕಂಡ ಕನಸು ಮತ್ತು ನಾಸಾದ ಯೋಜನೆಯಂತೆ ಅಲಿಸಾಳಿಗೆ ಪೋಲಾರ್ ಆರ್ಬಿಟಲ್ ವಿಜ್ಞಾನ ಕೇಂದ್ರದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ತರಬೇತಿಗಳು ನಡೆಯುತ್ತಿವೆ. ಶೂನ್ಯ ಗುರುತ್ವಾಕರ್ಷಣಾ ಶಕ್ತಿಯ ತರಬೇತಿ, ನೀರಿನಾಳದಲ್ಲಿ ಬದುಕುಳಿಯುವ ತರಬೇತಿ ಮೊದಲಾದವುಗಳನ್ನು ಈಕೆಗೆ ನೀಡಲಾಗುತ್ತಿದೆ.

ಒರಿಯಾನ್ ಬಾಹ್ಯಾಕಾಶ ನೌಕೆಯಲ್ಲಿ ಈಕೆ ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಲಿದ್ದು ಅದಕ್ಕೆ ಬೇಕಾದ ತರಬೇತಿಗಳನ್ನು ನೀಡಲಾಗುತ್ತಿದೆ. “ಸದ್ಯದ ತಂತ್ರಜ್ಞಾನದಲ್ಲಿ ಮಂಗಳ ಗ್ರಹ ತಲುಪಲು ನೌಕೆಗೆ 6 ತಿಂಗಳ ಸಮಯ ಹಿಡಿಯಲಿದೆ. ಅಲ್ಲಿ ವರ್ಷಗಳ ಕಾಲ ನಾವು ಉಳಿಯಲಿದ್ದೇವೆ. ಕಾರಣ ಗ್ರಹಗಳು ಒಂದೇ ನೇರಕ್ಕೆ ಬರಲು ಕಾಯಬೇಕಾಗುತ್ತದೆ. ನಂತರ ನಾವು 9 ತಿಂಗಳ ಯಾತ್ರೆಯಿಂದ ವಾಪಸ್ ಬರಲಿದ್ದೇವೆ,” ಎಂದು ಈಕೆ ಸಂದರ್ಶನವೊಂದರಲ್ಲಿ ಹೇಳಿದ್ದಾಳೆ. ಮಂಗಳ ಗ್ರಹದಲ್ಲಿರುವ ಸಂಪನ್ಮೂಲಗಳು, ನೀರಿನ ಮಾದರಿಗಳು, ಮನುಷ್ಯ ಅಥವಾ ಪ್ರಾಣಿಗಳು ಬದುಕಿರಬಹುದಾದ ಕುರುಹುಗಳನ್ನು ಹುಡುಕುವುದೇ ಈ ಮಂಗಳಯಾನದ ಉದ್ದೇಶವಾಗಿದೆ.

ಸದ್ಯಕ್ಕೆ ಅಲಿಸಾ ಕಾರ್ಸನ್ ನಿರಂತರ ಬಾಹ್ಯಾಕಾಶ ತರಬೇತಿ ಪಡೆಯಬೇಕಾಗಿದೆ. 2033ಕ್ಕೆ ಮಂಗಳ ಗ್ರಹಕ್ಕೆ ಹೋಗಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಜ್ಜುಗೊಳ್ಳಬೇಕಿದೆ. ಇವೆಲ್ಲದರಾಚೆಗೆ ತಾಂತ್ರಿಕವಾಗಿ ನಾಸಾ ಕೂಡ ತಯಾರಾಗಬೇಕಿದೆ. ಆಗ ಮಾತ್ರ ಮನುಷ್ಯ ಜನಾಂಗದ ಬಹುದೊಡ್ಡ ಕನಸು ನೆರವೇರಲಿದೆ.