samachara
www.samachara.com
ಚಿತ್ರ ಕೃಪೆ: ಕ್ಯೂಡೋ/ರಾಯ್ಟರ್ಸ್
ಫೋಕಸ್

ಭೀಕರ ಪ್ರವಾಹಕ್ಕೆ ನಲುಗಿದ ಜಪಾನ್‌: ಕೆಲವು ಮನಕಲಕುವ ಚಿತ್ರಗಳು

ಕಳೆದ ವಾರ ಪಶ್ಚಿಮ ಜಪಾನ್‌ನಲ್ಲಿ ಸುರಿದ ಭಾರೀ ಮಳೆ, ಭೂಕುಸಿತ ಹಲವು ಮನೆಗಳನ್ನು ಆಹುತಿ ಪಡೆದುಕೊಂಡಿದೆ. ಇಲ್ಲಿಯವರೆಗೆ ಮಳೆಯಿಂದ ಸತ್ತವರ ಸಂಖ್ಯೆ 155ಕ್ಕೆ ಏರಿದ್ದು, ಇನ್ನೂ ಸುಮಾರು 60 ಜನರು ನಾಪತ್ತೆಯಾಗಿದ್ದಾರೆ.

ದ್ವೀಪ ರಾಷ್ಟ್ರ ಜಪಾನ್‌ನಲ್ಲಿ ಸಾವು-ನೋವು ಅಪರೂಪ. ಅಂತಹದ್ದರಲ್ಲಿ ಪ್ರವಾಹಕ್ಕೆ ಸಿಲುಕಿ 155 ಜನರು ಪ್ರಾಣ ಬಿಟ್ಟಿದ್ದಾರೆ. ಕಳೆದ 4 ದಶಕದಲ್ಲೇ ಕಂಡು ಕೇಳರಿಯದ ಭೀಕರ ಪ್ರವಾಹ ಪುಟ್ಟ ರಾಷ್ಟ್ರ ಜಪಾನ್‌ನ್ನು ನಲುಗುವಂತೆ ಮಾಡಿದೆ.

ಕಳೆದ ವಾರ ಪಶ್ಚಿಮ ಜಪಾನ್‌ನಲ್ಲಿ ಸುರಿದ ಭಾರೀ ಮಳೆ ಅರ್ಧ ದೇಶವನ್ನೇ ಮುಳುಗಿಸಿ ಹಾಕಿದ್ದರೆ, ಭೂಕುಸಿತ ಹಲವು ಮನೆಗಳನ್ನು ಆಹುತಿ ಪಡೆದುಕೊಂಡಿದೆ. ಇಲ್ಲಿಯವರೆಗೆ ಮಳೆಯಿಂದ ಸತ್ತವರ ಸಂಖ್ಯೆ 155ಕ್ಕೆ ಏರಿದ್ದು, ಇನ್ನೂ ಸುಮಾರು 60 ಜನರು ನಾಪತ್ತೆಯಾಗಿದ್ದಾರೆ. ಧಾರಾಕಾರವಾಗಿ ಸುರಿದ ಮಳೆ ಹಿರೋಶಿಮಾ ಭಾಗದಲ್ಲಿ ಹೆಚ್ಚಿನ ಹಾನಿಯನ್ನು ಉಂಟು ಮಾಡಿದೆ. ಇಲ್ಲಿ ಹಾಗೂ ಇತರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಮಳೆಯಿಂದಾಗಿ ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಹಲವರ ಮನೆಗಳು ಕೊಚ್ಚಿ ಹೋಗಿದ್ದು, ಇನ್ನು ಕೆಲವರ ಮನೆ ತುಂಬಾ ಕೆಸರು, ಕೊಳಚೆ ತುಂಬಿಕೊಂಡಿದೆ. ಇದನ್ನು ಹೊರ ಹಾಕುವ ಕೆಲಸ ಮತ್ತು ಪುನರ್ ನಿರ್ಮಾಣ ಕಾರ್ಯದಲ್ಲಿ ಅಲ್ಲಿನ ಸೇನೆ ಮತ್ತು ಸರಕಾರಿ ಸಿಬ್ಬಂದಿಗಳು ಸಮರೋಪಾದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿದ್ದೂ 3500 ಜನರು ವಿದ್ಯುತ್ ಇಲ್ಲದೆ, 2 ಲಕ್ಷ ಜನರು ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ.

ಪ್ರವಾಹದ ಹಿನ್ನೆಲೆಯಲ್ಲಿ ತಮ್ಮ ಸಾಗರೋತ್ತರ ಪ್ರವಾಸವನ್ನು ಅಲ್ಲಿನ ಪ್ರಧಾನಿ ಶಿಂಜೋ ಅಬೆ ರದ್ದುಗೊಳಿಸಿ ದೇಶದಲ್ಲೇ ಉಳಿದುಕೊಂಡಿದ್ದಾರೆ. ಪ್ರವಾಹದಿಂದ ತೊಂದರೆಗೆ ಒಳಗಾದವರಿಗೆ ಸರಕಾರ ಆರ್ಥಿಕ ಸಹಾಯ ಮಾಡಲಿದೆ ಎಂದವರು ಭರವಸೆ ನೀಡಿದ್ದಾರೆ.

2011 ಜಪಾನಿಗೆ ಅಪ್ಪಳಿಸಿದ ಭಾರೀ ಸುನಾಮಿ ಅಲೆಗಳು 15 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. ಇದಾಗಿ ಕೇವಲ ವರ್ಷದಲ್ಲೇ ಜಪಾನ್ ಮೈಕೊಡವಿ ಎದ್ದು ನಿಂತಿತ್ತು. ಇದೀಗ ಪ್ರವಾಹ ಜಪಾನ್‌ ದೇಶವನ್ನು ನಡುಗಿಸಿದೆ. ಇಂಥ ಪ್ರಕೃತಿ ವಿಕೋಪಗಳ ನಡುವೆಯೇ ಬದುಕು ಕಟ್ಟಿಕೊಂಡ ಜಪಾನಿಯರಿಗೆ ಮತ್ತೆ ತಲೆ ಎತ್ತಿ ನಿಲ್ಲುವುದು ಹೊಸದೇನೂ ಅಲ್ಲ. ಆದರೆ ಕಳೆದುಕೊಂಡ ಜೀವಗಳು ಮಾತ್ರ ಮತ್ತೆ ಬರಲಾರವು.

ಅಲ್ಲಿನ ಕೆಲವು ಮನಕಲಕುವ ಚಿತ್ರಗಳು ಇಲ್ಲಿವೆ.

ಭೀಕರ ಪ್ರವಾಹಕ್ಕೆ ನಲುಗಿದ ಜಪಾನ್‌: ಕೆಲವು ಮನಕಲಕುವ ಚಿತ್ರಗಳು