samachara
www.samachara.com
‘ಇಹಾ ಡಾ ಕ್ಯೂಮಡಾ ಗ್ರಾಂಡೇ’: ಇದು ಹಾವುಗಳ ಸಾಮ್ರಾಜ್ಯ; ಮನುಷ್ಯನಿಗೆ ನೋ ಎಂಟ್ರಿ!
ಫೋಕಸ್

‘ಇಹಾ ಡಾ ಕ್ಯೂಮಡಾ ಗ್ರಾಂಡೇ’: ಇದು ಹಾವುಗಳ ಸಾಮ್ರಾಜ್ಯ; ಮನುಷ್ಯನಿಗೆ ನೋ ಎಂಟ್ರಿ!

ಬ್ರಝಿಲ್‌ನ ಕರಾವಳಿ ತೀರದಿಂದ 25 ಮೈಲು ದೂರದಲ್ಲಿರುವ ಈ ದ್ವೀಪ ವಿಷಪೂರಿತ ಹಾವುಗಳ ಆವಾಸ ತಾಣ. ಮಾನವ ಈ ದ್ವೀಪದಲ್ಲಿ ವಾಸಿಸುವುದನ್ನು ಬಿಟ್ಟು ಶತಮಾನವೇ ಕಳೆಯುತ್ತ ಬಂತು.

ದಕ್ಷಿಣ ಅಮೆರಿಕಾ ಖಂಡದ ದೊಡ್ಡ ಜನಸಂಖ್ಯೆಯುಳ್ಳ ದೇಶ ಬ್ರಝಿಲ್‌. ಬ್ರಝಿಲ್‌ನ ಕರಾವಳಿ ತೀರದಿಂದ ಸರಿಸುಮಾರು 25 ಮೈಲಿಗಳಷ್ಟು ದೂರದಲ್ಲಿ ಚಿಕ್ಕ ದ್ವೀಪವೊಂದಿದೆ. ಈ ದ್ವೀಪದಲ್ಲಿ ಮನುಷ್ಯರು ಬದುಕಿದ ಯಾವ ಉದಾಹರಣೆಯೂ ಇಲ್ಲ. ಉದಾಹರಣೆ ದೊರೆಯುವುದು ಜನರ ದಂತಕಥೆಗಳಲ್ಲಿ ಅಷ್ಟೇ. ಸುತ್ತ ಮುತ್ತಲಿನ ಜನರಲ್ಲಿ ಜೀವಂತವಾಗಿರುವ ದಂತ ಕತೆಯೊಂದು ಹೇಳುವಂತೆ, ಒಮ್ಮೆ ಒಬ್ಬ ಮೀನುಗಾರ ಈ ದ್ವೀಪ ಪ್ರದೇಶದ ಹತ್ತಿರಕ್ಕೆ ತನ್ನ ಸ್ವಂತ ದೋಣಿಯಲ್ಲಿ ತೆರಳಿದ್ದ. ಆದರೆ ಕೆಲವು ದಿನಗಳ ನಂತರ ಅವನದೇ ದೋಣಿಯಲ್ಲಿ ಅವನ ಹೆಣ ಬಿದ್ದಿತ್ತು. ದೋಣಿಯ ತುಂಬೆಲ್ಲಾ ಆತನ ರಕ್ತ ಹರಿದಿತ್ತು.

ಕುತೂಹಲ ಮೂಡಿಸುವ ಈ ದ್ವೀಪದ ಹೆಸರು ‘ಇಹಾ ಡಾ ಕ್ಯೂಮಡಾ ಗ್ರಾಂಡೇ’. ಮಾನವನಷ್ಟೇ ಅಲ್ಲದೇ ಬಹುತೇಕ ಜೀವಿಗಳು ಬದುಕು ನಡೆಸಲು ಸಾಧ್ಯವೇ ಇಲ್ಲ ಎನ್ನುವಷ್ಟು ಅಪಾಯಕಾರಿ ಎಂದು ಗುರುತಿಸಿಕೊಂಡಿರುವ ಈ ಪ್ರದೇಶಕ್ಕೆ ಭೇಟಿ ನೀಡುವುದನ್ನು ಬ್ರಝಿಲ್‌ ಸರಕಾರ ನಿಷೇಧಿಸಿದೆ. ಕೇವಲ ವಿಜ್ಞಾನಿಗಳಿಗಷ್ಟೇ ಈ ದ್ವೀಪಕ್ಕೆ ತೆರಳಿ ಅಧ್ಯಯನ ನಡೆಸಲು ಬ್ರಝಿಲ್‌ ಸರಕಾರ ಅನುಮತಿ ನೀಡಿದೆ. ಒಂದೊಮ್ಮೆ ಸರಕಾರದ ಈ ನಿಷೇಧವನ್ನೂ ಕೂಡ ಮೀರಿ ಯಾವ ಎಚ್ಚರಿಕೆಗಳನ್ನೂ ತೆಗೆದುಕೊಳ್ಳದೆ ಈ ದ್ವೀಪಕ್ಕೆ ಕಾಲಿಟ್ಟವನು ಬದುಕಿ ಬರುವುದೇ ಅಸಾಧ್ಯ. ಕಾರಣ ಈ ದ್ವೀಪದಲ್ಲಿ ನೆಲೆಸಿರುವ ಹಾವುಗಳು.

ಇಹಾ ಡಾ ಕ್ಯೂಮಡಾ ಗ್ರಾಂಡೇ ದ್ವೀಪ.
ಇಹಾ ಡಾ ಕ್ಯೂಮಡಾ ಗ್ರಾಂಡೇ ದ್ವೀಪ.

ಈ ದ್ವೀಪ ಗೋಲ್ಡನ್‌ ಲ್ಯಾನ್ಸ್‌ಹೆಡ್‌ (ಭರ್ಜಿ ತಲೆ) ಹಾವುಗಳ ಆವಾಸ ತಾಣ. ಪಿಟ್‌ ವೈಪರ್‌ (ಮಂಡಲದ ಹಾವು) ತಳಿ ಪ್ರಬೇಧಕ್ಕೆ ಸೇರುವ ಈ ಹಾವುಗಳು ಜಗತ್ತಿನಲ್ಲಿಯೇ ಅತೀ ಮಾರಣಾಂತಿಕ ಹಾವುಗಳ ಸಾಲಿನಲ್ಲಿವೆ. ಈ ಭರ್ಜಿ ತಲೆಯ ಹಾವುಗಳು ಸರಿ ಸುಮಾರು ಒಂದುವರೆ ಅಡಿಯಷ್ಟು ಉದ್ದ ಬೆಳಯಬಲ್ಲವು. ಇಹಾ ಡಾ ಕ್ಯೂಮಡಾ ಗ್ರಾಂಡೇ ದ್ವೀಪದಲ್ಲಿ ಸುಮಾರು 2,000ದಿಂದ 4,000 ಭರ್ಜಿ ತಲೆಯ ಹಾವುಗಳಿವೆ ಎಂದು ಅಂದಾಜಿಸಲಾಗಿದೆ. ಸಂಪೂರ್ಣವಾಗಿ ವಿಷದಿಂದ ಕೂಡಿರುವ ಈ ಹಾವುಗಳಿಂದ ಕಚ್ಚಿಸಿಕೊಂಡ ವ್ಯಕ್ತಿ ಅಬ್ಬಬ್ಬಾ ಎಂದರೆ ಒಂದು ಗಂಟೆಯಷ್ಟೇ ಬದುಕಬಲ್ಲ.

ಹಾವುಗಳ ದ್ವೀಪ ಎಂದೇ ಕರೆಸಿಕೊಂಡಿರುವ ಈ ಭೂಭಾಗದಲ್ಲಿ ಮಾನವರೇ ಇಲ್ಲ. ಕೊನೆಯದಾಗಿ ಈ ಭೂಭಾಗದ ಮೇಲೆ ಮಾನವವು ಇದ್ದ ಎಂಬ ವರದಿಯಾಗಿದ್ದು 1920ರಲ್ಲಿ ಅಷ್ಟೇ. ಸ್ಥಳೀಯರ ಮತ್ತೊಂದು ದಂತಕತೆ ಹೇಳುವಂತೆ ದ್ವೀಪದಲ್ಲಿರುವ ‘ಲೈಟ್‌ಹೌಸ್‌’(ದ್ವೀಪದಲ್ಲಿರುವ ಕಟ್ಟಡ)ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕುಟುಂಬದ ಜತೆ ಈ ದ್ವೀಪದಲ್ಲಿ ವಾಸವಿದ್ದ. ಆದರೆ ಕಿಟಕಿಯೊಳಗಿಂದ ತೂರಿಬಂದಿದ್ದ ಮಂಡಲದ ಹಾವುಗಳು ಆತನ ಕುಟುಂಬವನ್ನು ಕೊಂದಿದ್ದವು. ಪ್ರಸ್ತುತ ದಿನಗಳಲ್ಲಿ ಬ್ರಝಿಲ್‌ನ ನೌಕಾಪಡೆಯ ಕೆಲವು ಸೈನಿಕರು ನಿಗಧಿತ ಸಮಯಕ್ಕೊಮ್ಮೆ ಈ ಲೈಟ್‌ಹೌಸ್‌ಗೆ ಭೇಟಿ ನೀಡುತ್ತಾರೆ. ಅದೂ ಕೂಡ ಯಾರಾದರೂ ಸಾಹಸಿಗಳು ದ್ವೀಪಕ್ಕೆ ಕಾಲಿಟ್ಟು, ಕಟ್ಟಡದೊಳಗೆ ಸತ್ತು ಬಿದ್ದಿದ್ದಾರೆಯೇ ಎಂದು ಪರೀಕ್ಷಿಸುವ ಸಲುವಾಗಿ ಮಾತ್ರ!

ದ್ವೀಪದಲ್ಲಿರುವ ‘ಲೈಟ್‌ಹೌಸ್‌’
ದ್ವೀಪದಲ್ಲಿರುವ ‘ಲೈಟ್‌ಹೌಸ್‌’

ಸ್ಥಳೀಯರಲ್ಲಿರುವ ಮತ್ತೊಂದು ದಂತಕತೆಯ ಪ್ರಕಾರ, ಕಡಲ್ಗಳ್ಳರು ತಾವು ಕೊಳ್ಳೆ ಹೊಡೆದ ಸಂಪತ್ತನ್ನೆಲ್ಲಾ ಈ ದ್ವೀಪದಲ್ಲಿ ಹುದುಗಿಸಿಟ್ಟಿದ್ದರು. ಆ ಸಂಪತ್ತನ್ನು ಕಾಯುವ ಸಲುವಾಗಿ ಹಾವುಗಳನ್ನು ತಂದು ಈ ದ್ವೀಪದಲ್ಲಿ ಬಿಟ್ಟಿದ್ದರು.

ಆದರೆ ವಿಜ್ಞಾನಿಗಳು ಹೇಳುವಂತೆ, ಸಮುದ್ರದ ಮಟ್ಟ ಹೆಚ್ಚಾದ ಕಾರಣದಿಂದಾಗಿ ವಿಷಕಾರಿ ಭರ್ಜಿ ತಲೆಯ ಹಾವುಗಳು ಈ ದ್ವೀಪದಲ್ಲಿ ಬೀಡುಬಿಟ್ಟಿವೆ. ಆದರೆ ಇದಕ್ಕೂ ಕೂಡ ಸರಿಯಾದ ಸ್ಪಷ್ಟತೆಗಳಿಲ್ಲ. ಸುಮಾರು 10,000 ವರ್ಷಗಳ ಹಿಂದೆ ಈ ದ್ವೀಪವೂ ಕೂಡ ಬ್ರಝಿಲ್‌ ನ ಮುಖ್ಯ ನೆಲಕ್ಕೆ ಹೊಂದಿಕೊಂಡಿತ್ತು. ಆದರೆ ಸಮುದ್ರದ ಮಟ್ಟ ಹೆಚ್ಚಾಗಿದ್ದರಿಂದ ದ್ವೀಪವಾಗಿ ಮಾರ್ಪಟ್ಟಿತು.

ಬ್ರಝಿಲ್‌ನಿಂದ ದೂರವಾದ ಈ ಭೂಭಾಗದಲ್ಲಿ ವಿಕಸಿತಗೊಂಡ ಜೀವಿಗಳು ಮುಖ್ಯ ಭೂಮಿಗಿಂತ ವಿಭಿನ್ನವಾಗಿದ್ದವು. ಮುಖ್ಯವಾಗಿ 10,000 ವರ್ಷಗಳ ಅವಧಿಯಲ್ಲಿ ಬಂಗಾರದ ಭರ್ಜಿ ತಲೆಯ ಹಾವುಗಳು ಹೆಚ್ಚಿನ ವಿಕಾಸಕ್ಕೆ ಒಳಪಟ್ಟವು. ಈ ಹಾವುಗಳ ಸಂಖ್ಯೆ ಹೆಚ್ಚಾದಂತೆಲ್ಲಾ, ಅವುಗಳಿಗೆ ಆಹಾರದ ಸಮಸ್ಯೆ ಎದುರಾಯಿತು. ಹಾವುಗಳಿಗೆ ಭೇಟೆಯಾಡಲು ದೊರೆಯುತ್ತಿದ್ದ ಜೀವಿಗಳೆಂದರೆ ಸ್ಥಳೀಯ ಪಕ್ಷಿಗಳು ಮಾತ್ರ.

ಆಕಾಶದಲ್ಲಿ ಹಾರುತ್ತಿದ್ದ ಪಕ್ಷಿಗಳನ್ನು ಕೊಲ್ಲಲು ಇನ್ನೂ ಹೆಚ್ಚಿನ ಶಕ್ತಿ ಹಾವುಗಳಿಗೆ ಅಗತ್ಯವಾಯಿತು. ಅಗತ್ಯತೆಗೆ ತಕ್ಕಂತೆ ಹಾವುಗಳಲ್ಲಿನ ವಿಷದ ಶಕ್ತಿಯೂ ಹೆಚ್ಚಾಗಿ ಕ್ಷಣಾರ್ಧದಲ್ಲಿಯೇ ಹಾವುಗಳು ಹಕ್ಕಿ ಪಕ್ಷಿಗಳನ್ನು ಕೊಲ್ಲುವಂತಾದವು. ಹಾವುಗಳ ಶಕ್ತಿ ಹೆಚ್ಚಾದಂತೆ ಸ್ಥಳೀಯ ಪಕ್ಷಿಗಳು ಕೂಡ ತಮ್ಮ ಜೀವ ರಕ್ಷಣೆಯ ಅಗತ್ಯಕ್ಕೆ ತಕ್ಕಂತೆ ವಿಕಾಸಗೊಂಡವು. ಆದ್ದರಿಂದ ಹಾವುಗಳಿಗೆ ಭೇಟೆ ದೊರೆಯುವುದು ಕಷ್ಟವಾಯಿತು. ಸುಮ್ಮನೇ ಸ್ಥಳೀಯ ಪಕ್ಷಿಗಳ ಹಿಂದೆ ಅಲೆಯುವುದನ್ನು ಬಿಟ್ಟ ಬಂಗಾರದ ಭರ್ಜಿ ತಲೆಯ ಹಾವುಗಳು, ದೂರದಿಂದ ಬರುವ, ತಮ್ಮ ಬಗ್ಗೆ ಅರಿವಿಲ್ಲದ ಪ್ರವಾಸಿ ಪಕ್ಷಿಗಳ ಮೇಲೆ ತಮ್ಮ ಪ್ರಹಾರವನ್ನು ತೋರಿ ಹೊಟ್ಟೆಪಾಡಿಗೆ ದಾರಿ ಮಾಡಿಕೊಂಡವು.

ಬಂಗಾರದ ಭರ್ಜಿ ತಲೆಯ ಹಾವು.
ಬಂಗಾರದ ಭರ್ಜಿ ತಲೆಯ ಹಾವು.

ಬ್ರಝಿಲ್‌ ಮುಖ್ಯ ಭೂಮಿಯಲ್ಲೂ ಕೂಡ ಭರ್ಜಿ ತಲೆಯ ಹಾವುಗಳಿವೆ. ಆದರೆ ಬಂಗಾರದ ಬಣ್ಣದ ತಲೆಯನ್ನು ಹೊಂದಿಲ್ಲ. ಈ ಮುಖ್ಯ ಭೂಮಿಯಲ್ಲಿ ಬದುಕುತ್ತಿರುವ ಹಾವುಗಳಿಗಿಂತ ಭಂಗಾರದ ಭರ್ಜಿ ತಲೆಯ ಹಾವುಗಳು 5 ಪಟ್ಟು ಹೆಚ್ಚು ಅಪಾಯಕಾರಿ. ಬ್ರಝಿಲ್‌ನಲ್ಲಿ ಹಾವು ಕಚ್ಚಿ ಸಾಯುವವರಲ್ಲಿ ಶೇ.90ರಷ್ಟು ಮಂದಿ ಈ ಹಾವುಗಳಿಂದಲೇ ಸಾವನ್ನಪ್ಪುತ್ತಾರೆ. ಭೂಖಂಡ ಬೇರೆ ಬೇರೆಯಾಗಿ ವಿಭಿನ್ನ ರೀತಿಯಲ್ಲಿ ವಿಕಾಸಗೊಂಡಿದ್ದೇ ಈ ಭಿನ್ನತೆಗೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮಾನವರು ಭರ್ಜಿ ತಲೆಯ ಹಾವುಗಳ ಭಯದಿಂದ ಈ ದ್ವೀಪವನ್ನು ಬಿಟ್ಟುಬಂದ ನಂತರ, ಭರ್ಜಿ ತಲೆಯ ಹಾವುಗಳು ಕೊಂದ ಜನರ ಸಂಖ್ಯೆ ಎಷ್ಟು ಎನ್ನುವುದರ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲ.

ಕೆಲವು ಅಧ್ಯಯನಕಾರರು ಹೇಳುವಂತೆ ಈ ಬಂಗಾರದ ಭರ್ಜಿ ತಲೆಯ ಹಾವುಗಳಲ್ಲಿನ ವಿಷ ಹಲವಾರು ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದಂತೆ. ಈ ಹಾವುಗಳ ಅಪಾಯಕಾರಿ ವಿಷ ಹೃದಯ ಸಂಬಂಧಿ ರೋಗಗಳಿಗೆ ಉತ್ತಮವಾದ ಮದ್ದು ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಈ ಹಾವುಗಳ ವಿಷಕ್ಕೆ ಬ್ಲಾಕ್‌ ಮಾರ್ಕೆಟ್‌ ಕೂಡ ಸೃಷ್ಟಿಯಾಗಿದ್ದು, ಕೋಟ್ಯಾಂತರ ರೂಪಾಯಿ ಆದಾಯದ ಮೂಲವಾಗಿದೆ. ಈ ದುಡ್ಡಿಗೆ ಆಸೆಪಟ್ಟು ಹಲವಾರು ಜನ ‘ಇಹಾ ಡಾ ಕ್ಯೂಮಾಡಾ ಗ್ರಾಂಡೇ’ ದ್ವೀಪಕ್ಕೆ ಹೋಗಿ, ಬಂಗಾರದ ಭರ್ಜಿ ತಲೆಯ ಹಾವುಗಳಿಂದ ಕಚ್ಚಿಸಿಕೊಂಡು ಸಾಯುತ್ತಿದ್ದಾರೆ.