ದಿನದ 24 ಗಂಟೆ ಸಾಕಾಗ್ತಿಲ್ವಾ? ಡೋಂಟ್ ವರಿ, ‘ದಿನದ 25 ಗಂಟೆ’ ಅಂತ ಹೇಳೋ ಕಾಲವೂ ಬರುತ್ತೆ!
ಫೋಕಸ್

ದಿನದ 24 ಗಂಟೆ ಸಾಕಾಗ್ತಿಲ್ವಾ? ಡೋಂಟ್ ವರಿ, ‘ದಿನದ 25 ಗಂಟೆ’ ಅಂತ ಹೇಳೋ ಕಾಲವೂ ಬರುತ್ತೆ!

ನೂತನ ಸಮೀಕ್ಷೆಯೊಂದರ ವರದಿ ಹೇಳುವ ಪ್ರಕಾರ ಮುಂದೆ ಬರಲಿರುವ ದಿನಗಳ ಅವಧಿ ದೀರ್ಘವಾಗಲಿದೆ. ಭೂಮಿ ಒಂದು ಸುತ್ತು ಪೂರ್ಣಗೊಳಿಸಲು ಮುಂದಿನ ದಿನಗಳಲ್ಲಿ 25 ಗಂಟೆಗಳ ಸಮಯವನ್ನು ತೆಗೆದುಕೊಳ್ಳಲಿದೆ. ಇದಕ್ಕೆ ಕಾರಣ ಭೂಮಿಯ ಉಪಗ್ರಹ ಚಂದ್ರ.

ಕೆಲವರಿಗೆ ದಿನದ 24 ಗಂಟೆಗಳು ಸಾಕಾಗುವುದೇ ಇಲ್ಲ. ಸಮಯ ಸಾಲದೇ ಕೆಲಸಗಳು ನಾಳೆಗೆ ಮುಂದೂಡಲ್ಪಟ್ಟಿರುತ್ತವೆ. ಕಾಲಾವಕಾಶದ ಕೊರತೆಯಿಂದ ಕೈಗೆತ್ತಿಕೊಂಡ ಕಾರ್ಯಗಳು ಪೂರ್ಣಗೊಳ್ಳದೇ ಉಳಿದಿರುತ್ತವೆ. ಹೀಗೆ ಚಿಂತಿಸುವವರಿಗೆ ಇದು ಶುಭ ಸುದ್ದಿ. ದಿನಗಳು ನೀರಸವೆನಿಸಿದ್ದು ಕಾಲ ಕಳೆಯುತ್ತಲೇ ಇಲ್ಲ ಎನ್ನುವವರಿಗೆ ಇದನ್ನು ಓದಿ ಕೊಂಚ ಬೇಸರವಾಗಬಹುದು. ಯಾವುದಕ್ಕೂ ಸಾವರಿಸಿಕೊಂಡು ಓದಿ.

ನೂತನ ಸಮೀಕ್ಷೆಯೊಂದರ ವರದಿ ಹೇಳುವ ಪ್ರಕಾರ ಮುಂದೆ ಬರಲಿರುವ ದಿನಗಳ ಅವಧಿ ದೀರ್ಘವಾಗಲಿದೆಯಂತೆ. ಭೂಮಿ ಒಂದು ಸುತ್ತು ಪೂರ್ಣಗೊಳಿಸಲು ಮುಂದಿನ ದಿನಗಳಲ್ಲಿ 25 ಗಂಟೆಗಳ ಸಮಯವನ್ನು ತೆಗೆದುಕೊಳ್ಳಲಿದೆಯಂತೆ. ಹೀಗೆ ದಿನವೊಂದರ ಸಮಯ 24 ಗಂಟೆಗಳಿಂದ 25 ಗಂಟೆಗಳಿಗೆ ಏರಿಕೆಯಾಗಲು ಕಾರಣ ಭೂಮಿಯ ಉಪಗ್ರಹ ಚಂದ್ರ.

ಕೋಟ್ಯಾಂತರ ವರ್ಷಗಳ ಹಿಂದೆ ಭೂಮಿ ತನ್ನ ಸುತ್ತ ಒಂದು ಸುತ್ತು ಸುತ್ತಲು ಕೇವಲ 18 ಗಂಟೆ ಮತ್ತು 41 ನಿಮಿಷಗಳ ಅವಧಿಯನ್ನಷ್ಟೇ ತೆಗೆದುಕೊಳ್ಳುತ್ತಿತ್ತು. ಇದೆಲ್ಲಾ ಸುಮಾರು 1.4 ಬಿಲಿಯನ್ ವರ್ಷಗಳ ಹಿಂದಿನ ಕಥೆ. ಅವತ್ತು ಚಂದ್ರ ಭೂಗ್ರಹಕ್ಕೆ ಅತೀ ಹತ್ತಿರದಲ್ಲಿದ್ದ. ಆದರೆ ಅಂದಿನಿಂದಲೂ ಕೂಡ ಚಂದ್ರ ಭೂಮಿಯಿಂದ ದೂರ ಸಾಗುತ್ತಿದ್ದಾನೆ. ಇದು ಭೂಮಿ ತನ್ನ ಸುತ್ತ ಸುತ್ತುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ. ಸಧ್ಯ ದಿನದ ಅವಧಿ 24 ಗಂಟೆಗಳಾಗಿದ್ದು, ಮುಂದಿನ ವರ್ಷಗಳಲ್ಲಿ 25 ವರ್ಷಕ್ಕೆ ಏರಿಕೆಯಾಗಲಿದೆ. ಇದಕ್ಕೆ ಕೂಡ ಚಂದ್ರನೇ ಕಾರಣವಾಗಲಿದ್ದಾನೆ.

ಸಂಶೋಧಕರು ಏನು ಹೇಳುತ್ತಾರೆ?:

ಈ ಅಧ್ಯಯನ ನಡೆಸಿದವರು ವಿಸ್ಕೋನ್ಸಿನ್‌ ಮ್ಯಾಡಿಸನ್‌ ವಿಶ್ವ ವಿದ್ಯಾಲಯದ ಭೂವಿಜ್ಞಾನ ವಿಭಾಗದ ಸ್ಟೀಫನ್‌ ಮೇಯರ್ಸ್‌. ಭೂಮಿಯ ಸುತ್ತುವ ಸಮಯ ದೀರ್ಘವಾಗುವಲ್ಲಿ, ಭೂಮಿಯ ತಿರುಗುವಿಕೆ ಮತ್ತು ಚಂದ್ರನ ಸ್ಥಾನ ಹೇಗೆ ಪರಿಣಾಮ ಬೀರಬಲ್ಲದು ಎಂಬುದನ್ನು ಅವರು ವಿವರಿಸಿದ್ದಾರೆ.

ಈ ಪ್ರಕ್ರಿಯೆಯನ್ನು ಸ್ಟೀಫನ್‌ ಮೇಯರ್ಸ್ ಸ್ಕೇಟಿಂಗ್‌ಗೆ ಹೋಲಿಸಿದ್ದಾರೆ. ಸ್ಕೇಟರ್ ಒಬ್ಬ ಚಲಿಸುವಾಗ ತನ್ನ ವೇಗವನ್ನು ಕಡಿಮೆಗೊಳಿಸಲು ತನ್ನ ತೋಳುಗಳನ್ನು ಅಗಲಿಸಿ, ಸಮತೋಲನ ಸಾಧಿಸಿ ವೇಗವನ್ನು ನಿಯಂತ್ರಿಸುತ್ತಾನೆ. ಭೂಮಿ ಮತ್ತು ಚಂದ್ರನ ನಡುವೆ ಕೂಡ ಇದೇ ಪ್ರಕ್ರಿಯೆ ನಡೆಯುತ್ತಿದೆ. ಚಂದ್ರ ಭೂಮಿಯಿಂದ ದೂರವಾಗುತ್ತಿದ್ದು, ಭೂಮಿಯ ತಿರುಗುವ ವೇಗವನ್ನು ಕಡಿಮೆ ಮಾಡುತ್ತಿದೆ ಎನ್ನುತ್ತಾರೆ ಮೇಯರ್ಸ್‌.

ಆಕಾಶದಲ್ಲಿರುವ ಭೂಗ್ರಹ ತನ್ನ ಕಕ್ಷೆಯ ಸುತ್ತ ತನಗೆ ತಾನೇ ಸುತ್ತುವುದಿಲ್ಲ. ಭೂಮಿಯ ಈ ಚಲನೆಗೆ ಭೂಮಿಯ ಸುತ್ತ ಇರುವ ಆಕಾಶ ಕಾಯಗಳು ಬೀರುವ ಪ್ರಭಾವ ಕಾರಣವಾಗುತ್ತದೆ. ಹೀಗೆ ಪ್ರಭಾವ ಬೀರುವ ಆಕಾಶ ಕಾಯಗಳ ಪೈಕಿ ಭೂಮಿಯ ಉಪಗ್ರಹ ಚಂದ್ರನೂ ಒಂದು. ಚಂದ್ರನೂ ಸೇರಿದಂತೆ ಈ ಎಲ್ಲಾ ಆಕಾಶಕಾಯಗಳು ಭೂಮಿಯ ಚಲನೆಯ ಅವಧಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ನಿರ್ಧರಿಸುತ್ತವೆ. ಈ ಆಕಾಶ ಕಾಯಗಳಲ್ಲಿನ ಸಣ್ಣ ಬದಲಾವಣೆ ಲಕ್ಷಾಂತರ ವರ್ಷಗಳ ನಂತರ ದೊಡ್ಡ ಬದಲಾವಣೆಯೊಂದು ಸಂಭವಿಸುವುದಕ್ಕೆ ಕಾರಣವಾಗುತ್ತದೆ.

ಈ ಸಂಗತಿ ಬೆಳಕಿಗೆ ಬಂದಿದ್ದೇಗೆ?:

ಕಳೆದ ವರ್ಷ ಪ್ರೊಫೆಸರ್‌ ಮೇಯರ್ಸ್ ಮತ್ತು ಅವರ ಸಹೋದ್ಯೋಗಿಗಳು ಸುಮಾರು 90 ಮಿಲಿಯನ್‌ ವರ್ಷಗಳ ಹಿಂದಿನ ಕಲ್ಲೊಂದರ ಅಧ್ಯಯನದಲ್ಲಿ ತೊಡಗಿದ್ದರು. ಅಷ್ಟು ವರ್ಷಗಳ ಹಿಂದಿನ ಭೂಮಿಯ ಋತುಚಕ್ರದ ಕುರಿತು ಆ ಕಲ್ಲು ಮಾಹಿತಿ ನೀಡುತ್ತಿತ್ತು. ಆದರೆ ಕಾಲವನ್ನು ಲೆಕ್ಕ ಹಾಕುವ ಸಂಭರ್ಭದಲ್ಲಿ ಗಲಿಬಿಲಿ ಉಂಟಾಗಿತ್ತು. ಈ ಗಲಿಬಿಲಿ ಮತ್ತಷ್ಟು ಸೂಕ್ಷ್ಮವಾದ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿತ್ತು.

ಈ ಸೂಕ್ಷ್ಮ ಅಧ್ಯಯನ ಚಂದ್ರ ಭೂಮಿಯಿಂದ ದೂರವಾಗುತ್ತಿರುವ ಸಂಗತಿಯನ್ನು ಬೆಳಕಿಗೆ ಚೆಲ್ಲಿತ್ತು. ಈ ಅಧ್ಯಯನಕಾರರ ಪ್ರಕಾರ ಚಂದ್ರ ಪ್ರತಿವರ್ಷ ಭೂಮಿಯಿಂದ ಸುಮಾರು 3.82 ಸೆಂಟಿ ಮೀಟರ್‌ಗಳಷ್ಟು ದೂರವಾಗುತ್ತಿದ್ದಾನೆ. ಒಂದು ವರ್ಷದ ಅವಧಿ ಮಾನವರಾದ ನಮಗೆ ದೊಡ್ಡದೆನಿಸಬಹುದು. ಆದರೆ ಆಕಾಶಕಾಯಗಳಿಗಲ್ಲ. ಸುಮಾರು 1.5 ಬಿಲಿಯನ್‌ ವರ್ಷಗಳ ಚಂದ್ರ ಹೀಗೇ ದೂರ ಸರಿಯುತ್ತಾ ಬಂದಿದ್ದು, ಭೂಮಿಯ ಮೇಲೆ ಚಂದ್ರನ ಗುರುತ್ವಾಕರ್ಷಣಾ ಬಲ ಕಡಿಮೆಯಾಗುತ್ತಿದೆ. ಭೂಮಿಯ ಚಲನೆಯಲ್ಲಿ ನಿಧಾನಗತಿ ಉಂಟಾಗಲು ಕಾರಣವಾಗುತ್ತಿರುವುದು ಇದೇ ಅಂಶ.