samachara
www.samachara.com
‘ಗಾಂಜಾ ಕಾನೂನುಬದ್ಧ’: ಉರುಗ್ವೆ ನಂತರ ಈಗ ಕೆನಡಾ ಸರದಿ; ನಮ್ಮಲ್ಲೊಂದು ಚರ್ಚೆ ನಡೆಯಲಿ!
ಫೋಕಸ್

‘ಗಾಂಜಾ ಕಾನೂನುಬದ್ಧ’: ಉರುಗ್ವೆ ನಂತರ ಈಗ ಕೆನಡಾ ಸರದಿ; ನಮ್ಮಲ್ಲೊಂದು ಚರ್ಚೆ ನಡೆಯಲಿ!

ಮುಂದಿನ ವರ್ಷಗಳಲ್ಲಿಯೂ ಭಾರತದಲ್ಲಿ ಈ ಕುರಿತು ಪ್ರಬಲ ದನಿಯೊಂದು ಕೇಳಿಬರುವ ನಿರೀಕ್ಷೆ ಇದೆ. ಆದರೆ ಅದಕ್ಕೂ ಗಾಂಜಾ ಸಾಧಕ- ಬಾಧಕಗಳ ಕುರಿತು ಮುಕ್ತವಾದ ಚರ್ಚೆಯೊಂದಕ್ಕೆ ಸಮಾಜವನ್ನು ಅಣಿಗೊಳಿಸಬೇಕಿದೆ.

ಕಳೆದು ಒಂದು ತಿಂಗಳಿನಿಂದ ಕೆನಡಾದಲ್ಲಿ ನಡೆದುಕೊಂಡು ಬಂದ ಚರ್ಚೆಗೆ ಗುರುವಾರ ತಾರ್ಕಿಕ ಅಂತ್ಯವೊಂದು ಸಿಕ್ಕಿದ್ದು, ಇನ್ನು ಮುಂದೆ ಮರಿಜುವಾನಾ ಅರ್ಥಾತ್ ಗಾಂಜಾ ಇಲ್ಲಿ ಕಾನೂನು ಬದ್ಧಗೊಳ್ಳಲಿದೆ.

ಕೆನಡಾದ ಸೆನೆಟ್‌ನಲ್ಲಿ ಗುರುವಾರ ನಡೆದ ಅದಿವೇಶನದಲ್ಲಿ ಗಾಂಜಾವನ್ನು ಕಾನೂನುಬದ್ಧಗೊಳಿಸಲು ಭಾರಿ ಅಂತರಗಳ ಬಹುಮತದಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಟ್ಟು 83 ಜನ ಸೆನೆಟರ್‌ಗಳಲ್ಲಿ 52 ಜನ ಗಾಂಜಾಕ್ಕೆ ಕಾನೂನು ಬದ್ಧ ಮಾರುಕಟ್ಟೆ ಒದಗಿಸಲು ಒಪ್ಪಿಗೆ ಸೂಚಿಸುವ ಕಾಯ್ದೆಗೆ ಅಸ್ತು ಎಂದಿದ್ದಾರೆ. 30 ಜನಪ್ರತಿನಿಧಿಗಳು ಕಾಯ್ದೆ ವಿರುದ್ಧ ಮತ ಚಲಾವಣೆ ಮಾಡಿದ್ದರೆ, ಒಬ್ಬರು ಮಾತ್ರವೇ ತಟಸ್ಥ ನಿಲುವು ತೆಗೆದುಕೊಂಡಿದ್ದಾರೆ.

ಬಿಲ್- ಸಿ 45 ಅಥವಾ ಕ್ಯಾನಬೀಸ್ ಆಕ್ಟ್ ಎಂದು ಕರೆಸಿಕೊಂಡಿದ್ದ ಕಾಯ್ದೆಯ ಸುತ್ತ ದೇಶಾದ್ಯಂತ ದೊಡ್ಡಮಟ್ಟದ ಚರ್ಚೆ ಕಳೆದ ಒಂದು ತಿಂಗಳ ಅಂತರದಲ್ಲಿ ನಡೆದುಕೊಂಡು ಬಂದಿತ್ತು. ಕೊನೆಗೂ ಸೆನೆಟ್‌ನಲ್ಲಿ ಅಂಗೀಕಾರ ಸಿಗುವ ಮೂಲಕ ಗಾಂಜಾ ಕಾನೂನುಬದ್ಧಗೊಳಿಸುವ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. 2017ರ ನವೆಂಬರ್ ತಿಂಗಳಿನಲ್ಲಿ ಇಲ್ಲಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಕಾಯ್ದೆಗೆ ಅಂಗೀಕಾರ ಸಿಕ್ಕಿತ್ತು. ಅದಕ್ಕೆ ಸೆನೆಟರ್‌ಗಳು ಕೆಲವು ತಿದ್ದುಪಡಿಗಳನ್ನು ಸೂಚಿಸಿರುವುದರಿಂದ ಮತ್ತೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಇನ್ನೊಮ್ಮೆ ಅಂಗೀಕಾರ ಪಡೆದುಕೊಳ್ಳಬೇಕಿದೆ.

ಕೆನಡಾದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಗಾಂಜಾ ಮಾರಾಟ ಕಾನೂನು ಬದ್ಧವಾಗಿದ್ದರೂ, ಸಾಮಾನ್ಯ ಜನರ ಬಳಕೆ ಕಾನೂನು ಅಡ್ಡಿಯಾಗಿತ್ತು. 2015ರಲ್ಲಿ ಪ್ರಧಾನ ಮಂತ್ರಿ ಚುನಾವಣಾ ವೇಳೆಯಲ್ಲಿ ಜಸ್ಟಿನ್ ಟ್ರುಡೆವ್ ಗಾಂಜಾವನ್ನು ಸಂಪೂರ್ಣವಾಗಿ ಕಾನೂನುಬದ್ಧಗೊಳಿಸಲಾಗುವುದು ಎಂದು ಪ್ರಚಾರ ಮಾಡಿದ್ದರು. ಇದಕ್ಕೆ ಭಾರಿ ಜನಬೆಂಬಲ ವ್ಯಕ್ತವಾಗಿದ್ದಲ್ಲದೆ, ಜಸ್ಟಿನ್ ಆಯ್ಕೆಯೂ ಆಗಿದ್ದರು. ಇದೀಗ ಚುನಾವಣಾ ಪ್ರಚಾರ ಸಮಯದಲ್ಲಿ ನೀಡಿದ ಭರವಸೆ ಮೇರೆಗೆ ಗಾಂಜಾವನ್ನು ಕಾನೂನು ಬದ್ಧಗೊಳಿಸುವ ಪ್ರಕ್ರಿಯೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಜುಲೈ 1ರಂದು (ಕೆನಡಾದ ರಾಷ್ಟ್ರೀಯ ದಿನ) ದೇಶಾದ್ಯಂತ ಗಾಂಜಾ ಮಾರಾಟ ಕಾನೂನಿನ ನೆರಳಿನಲ್ಲಿಯೇ ನಡೆಯಲಿದೆ.

ಹೊಸ ಕಾನೂನಿನ ಪ್ರಕಾರ, 18 ವರ್ಷ ದಾಟಿದ ವಯಸ್ಕರರಿಗೆ ತಲಾ 30 ಗ್ರಾಂ ಗಾಂಜಾ ಮಾರಾಟ ಮಾಡಬಹುದಾಗಿದೆ ಅಥವಾ ವಯಸ್ಕರರು ವೈಯಕ್ತಿಕ ಬಳಕೆಗಾಗಿ 30 ಗ್ರಾಂ ಗಾಂಜಾವನ್ನು ಖರೀದಿಸಬಹುದಾಗಿದೆ. ಮಕ್ಕಳಿಗೆ ಇದನ್ನು ಮಾರಾಟ ಮಾಡಿದರೆ ಅಪರಾಧ ಎನ್ನಿಸಿಕೊಳ್ಳಲಿದೆ. ಅಂದಾಜಿನ ಪ್ರಕಾರ ಕಳೆದ ವರ್ಷವೊಂದರಲ್ಲಿಯೇ ಕೆನಡಾದಲ್ಲಿ ಒಟ್ಟು 4. 5 ಅಮೆರಿಕನ್ ಡಾಲರ್‌ನಷ್ಟು ವಹಿವಾಟು ಗಾಂಜಾ ಮಾರುಕಟ್ಟೆಯಲ್ಲಿ ನಡೆದಿತ್ತು.

ಉರುಗ್ವೆ ದೇಶ ಐದು ವರ್ಷಗಳ ಹಿಂದೆಯೇ ಗಾಂಜಾ ಬೆಳೆಯುವುದನ್ನು ಹಾಗೂ ಮಾರಾಟ ಮಾಡುವುದನ್ನು ಕಾನೂನುಬದ್ಧಗೊಳಿಸಿತ್ತು. ಅಮೆರಿಕಾ ಇನ್ನೂ 9 ರಾಜ್ಯಗಳಲ್ಲಿ ಮರಿಜುವಾನಾ ಕಾನೂನುಬದ್ಧಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ಮೂಲಕ ಲಕ್ಷಾಂತರ ಡಾಲರ್‌ಗಳ ಆದಾಯ ಮೂಲಗಳನ್ನು ಇಲ್ಲಿನ ಸರಕಾರಗಳು ಸೃಷ್ಟಿಸಿಕೊಳ್ಳುವ ದಾರಿಯಲ್ಲಿವೆ.

ಯಾಕೀ ಬೆಳವಣಿಗೆ?:

ಭಾರತದಲ್ಲಿ ಗಾಂಜಾ ಕಾನೂನುಬದ್ಧಗೊಳಿಸಲು ಒತ್ತಾಯಿಸಿ ಚಳವಳಿಯೊಂದನ್ನು ಹುಟ್ಟುಹಾಕುತ್ತಿರುವುದು ಜಿಎಲ್ಎಂ. 
ಭಾರತದಲ್ಲಿ ಗಾಂಜಾ ಕಾನೂನುಬದ್ಧಗೊಳಿಸಲು ಒತ್ತಾಯಿಸಿ ಚಳವಳಿಯೊಂದನ್ನು ಹುಟ್ಟುಹಾಕುತ್ತಿರುವುದು ಜಿಎಲ್ಎಂ. 

ಕನ್ನಡದಲ್ಲಿ ಗಾಂಜಾ ಎಂದು ಕರೆಸಿಕೊಳ್ಳುವ ನೈಸರ್ಗಿಕ ಗಿಡ ಮದ್ಯದ ರೀತಿಯಲ್ಲಿಯೇ ನಶೆಯನ್ನು ನೀಡುತ್ತದೆ. ಮನುಷ್ಯ ತನ್ನ ಉಗಮ ಹಾಗೂ ಬೆಳವಣಿಗೆಯ ಹಾದಿಯಲ್ಲಿ ಕಂಡುಕೊಂಡ ನಿಸರ್ಗದತ್ತ ನಶೆ ಮೂಲಗಳ ಪೈಕಿ ಈ ಗಿಡವೂ ಒಂದು. ಪುರಾಣ ಕತೆಗಳಿಂದ ಹಿಡಿದು ಮಂಟೆಸ್ವಾಮಿ ಕಾವ್ಯಗಳವರೆಗೆ ಗಾಂಜಾ ಬಳಕೆ ಇತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.

ಬ್ರಿಟಿಷ್ ಆಡಳಿತ ಗಾಂಜಾ ಬಳಕೆಯ ಮೇಲೆ ಕಡಿವಾಣ ಹೇರುವ ಪ್ರಕ್ರಿಯೆ 18ನೇ ಶತಮಾನದಿಂದಲೇ ಆರಂಭವಾಗಿತ್ತು. ಆದರೆ ಗ್ರಾಮೀಣ ಪರಿಸರದ ಹಲವು ಆಚರಣೆಗಳ ಭಾಗವಾಗಿದ್ದ ಗಾಂಜಾವನ್ನು ಭಾರತದಲ್ಲಿ ನಿಷೇಧಿಸಲು ಸಾಧ್ಯವಾಗಿರಲಿಲ್ಲ. 1965ನಲ್ಲಿ ನಡೆದ ಅಂತಾರಾಷ್ಟ್ರೀಯ ನಾರ್ಕೋ ಸಮ್ಮೇಳನ ಭಾಗವಾಗಿ ಭಾರತದಲ್ಲಿಯೂ ಗಾಂಜಾ ನಿಷೇಧದ ಕುರಿತು ಒಲವು ಹೆಚ್ಚಾಯಿತು. ಅಮೆರಿಕಾ ಆರಂಭಿಸಿದ ‘ಆಂಟಿ ನಾರ್ಕೊ’ ಅಭಿಯಾನ ಭಾಗವಾಗಿ ನಡೆದ ಈ ಬೆಳವಣಿಗೆಗಳು ದೇಶದ ಹಲವು ರಾಜ್ಯಗಳಲ್ಲಿ ಪ್ರತ್ಯೇಕ ಗಾಂಜಾ ನಿಷೇಧ ಕಾಯ್ದೆಗಳು ರೂಪುಗೊಳ್ಳಲು ಕಾರಣವಾದವು ಎನ್ನುತ್ತವೆ ಈ ಕುರಿತು ನಡೆದ ಕೆಲವು ಅಧ್ಯಯನಗಳು.

2015ರಲ್ಲಿ ಭಾರತದಲ್ಲಿಯೂ ಗಾಂಜಾ ಮೇಲೆ ಹೇರಿರುವ ನಿಷೇಧವನ್ನು ಹಿಂಪಡೆಯುವ ಕುರಿತು ಚರ್ಚೆಗಳು ನಡೆದವು. ಬೆಂಗಳೂರಿನಲ್ಲಿಯೂ ಒಂದು ಸಮ್ಮೇಳನ ನಡೆದಿತ್ತು.

ಇಸ್ರೇಲ್ ಸೇರಿದಂತೆ ಹಲವು ದೇಶಗಳಲ್ಲಿ ಕ್ಯಾನ್ಸರ್‌, ಪಾರ್ಕಿನ್ಸನ್‌ನಂತಹ ಮದ್ದಿಲ್ಲದ ಕಾಯಿಲೆಗಳಿಗೆ ಗಾಂಜಾ ನೋವು ನಿವಾರಕ ಔಷಧಿಯಾಗಿ, ನರ ದೌರ್ಬಲ್ಯವನ್ನು ಕಡಿಮೆ ಮಾಡುವ ಮದ್ದಾಗಿ ಪರಿಗಣಿಸಿದ ನಂತರ ಪರ್ಯಾಯ ಆಲೋಚನೆಗಳು ಹುಟ್ಟಿಕೊಂಡಿವೆ.

ಆದರೆ, ಬಾಲಿವುಡ್ ಸಿನೆಮಾಗಳು ಸೇರಿದಂತೆ ಭಾರತದ ಜನಪ್ರಿಯ ಮಾಧ್ಯಮಗಳಲ್ಲಿ ಗಾಂಜಾ ಕುರಿತು ಟ್ಯಾಬೂ ಒಂದನ್ನು ಹುಟ್ಟುಹಾಕುವ ಪ್ರಯತ್ನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕರ್ನಾಟಕದಲ್ಲಿಯೂ ಅಪರಾಧ ಪ್ರಕರಣಗಳ ಜತೆಗೆ ಗಾಂಜಾವನ್ನು ತಳಕು ಹಾಕುವುದು ಸಾಮಾನ್ಯವಾಗಿ ಪೊಲೀಸರಿಂದ ನಡೆಯುತ್ತದೆ. ಇದರ ಹಿಂದೆ ಹೊಗೆಸೊಪ್ಪಿನ ಲಾಬಿಯೊಂದು ಕೆಲಸ ಮಾಡಿಕೊಂಡು ಬಂದಿದೆ.

ಸದ್ಯ ಇವುಗಳನ್ನು ಮೀರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಾಂಜಾ ಮೇಲಿನ ನಿಷೇಧವನ್ನು ತೆರವುಗೊಳಿಸಲು ಕೋರಿಕೆ ಸಲ್ಲಿಕೆಯಾಗಿದೆ. ಮರಿಜುವಾನಾದ ವೈದ್ಯಕೀಯ ಬಳಕೆಗೆ ಸಂಶೋಧನೆಗಳಿಗೆ ಅನುವು ಮಾಡಿಕೊಡಬೇಕು ಎಂಬ ಬೇಡಿಕೆಯೂ ಇದೆ. ಮುಂದಿನ ವರ್ಷಗಳಲ್ಲಿಯೂ ಭಾರತದಲ್ಲಿ ಈ ಕುರಿತು ಪ್ರಬಲ ದನಿಯೊಂದು ಕೇಳಿಬರುವ ನಿರೀಕ್ಷೆ ಇದೆ. ಆದರೆ ಅದಕ್ಕೂ ಗಾಂಜಾ ಸಾಧಕ- ಬಾಧಕಗಳ ಕುರಿತು ಮುಕ್ತವಾದ ಚರ್ಚೆಯೊಂದಕ್ಕೆ ಸಮಾಜವನ್ನು ಅಣಿಗೊಳಿಸಬೇಕಿದೆ.