samachara
www.samachara.com
‘ಬಿಲಾಲ್ ಮತ್ತು ಟೋಟಿ’: ಒಂದು ನಿರಾಶ್ರಿತ ಕುಟುಂಬದ ಕತೆ
ಫೋಕಸ್

‘ಬಿಲಾಲ್ ಮತ್ತು ಟೋಟಿ’: ಒಂದು ನಿರಾಶ್ರಿತ ಕುಟುಂಬದ ಕತೆ

ಬಿಲಾಲ್‌ 6 ವರ್ಷದ ಪುಟ್ಟ ಹುಡುಗ. ತಾತ ದವ್ರನ್‌‌ ಶಾ ಜತೆಗೆ ತಾನೂ ಕೂಡ ಟ್ರಕ್‌ನಿಂದ ಕೆಳಗಿಳಿದ. ಕುಟುಂಬವನ್ನು ಬಿಟ್ಟರೆ ಅವನಿಗೆ ಆಪ್ತ ಜೀವಿ ಎನಿಸಿದ್ದು ‘ಟೋಟಿ’- ಬಿಲಾಲ್‌ ಸಾಕಿದ್ದ ಮುದ್ದು ಗಿಳಿ. ಗಿಳಿಯ ಜತೆ ಗೊತ್ತಿಲ್ಲ ನಾಡಿಗೆ ಬಂದಿದ್ದ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಅದು ಅಫ್ಘಾನಿಸ್ತಾನದ ಗುಡ್ಡಗಾಡು ಪ್ರದೇಶ. ಪರ್ವತಗಳ ಸಾಲಿನಲ್ಲಿ ನಿಧಾನವಾಗಿ ಹಾದು ಬಂದ ಟ್ರಕ್‌, ಅದರೊಳಗಿದ್ದ ಎಲ್ಲರನ್ನೂ ಕೆಳಗಿಳಿಸಿತು. ಬರೀ ಮನುಷ್ಯರಲ್ಲದೇ, ಅವರ ಸಾಕು ಪ್ರಾಣಿಗಳು ಟ್ರಕ್‌ನಿಂದ ಕೆಳಗಿಳಿದವು. ಬಟ್ಟೆ, ಚಿಕ್ಕ ಪುಟ್ಟ ಪಾತ್ರೆಗಳು, ಹಾಸಿಗೆ ಇನ್ನಿತ್ಯಾದಿ ವಸ್ತುಗಳೂ ತಮ್ಮ ಸುದೀರ್ಘ ಪ್ರಯಾಣವನ್ನು ಮುಗಿಸಿ, ಭೂಮಿಯನ್ನು ಸ್ಪರ್ಶಿಸಿದವು. 

ಬಡತನದ ಮಧ್ಯೆಯೇ ಕೈ ತೊಳೆಯುತ್ತಿದ್ದ ದವ್ರನ್‌ ಶಾ ಕುಟುಂಬ ಇದೇ ಆಫ್ಘಾನಿಸ್ತಾನದ ನೆಲವನ್ನು ಬಿಟ್ಟು ಪಾಕಿಸ್ತಾನಕ್ಕೆ ವಲಸೆ ಹೋಗಿತ್ತು. ಆಫ್ಘಾನಿಸ್ತಾನ ಮತ್ತು ರಷ್ಯಾ ಸಂಯುಕ್ತ ಸಂಸ್ಥಾನಗಳು ನಡೆಸಿದ ಯುದ್ಧದಲ್ಲಿ ಇದ್ದ ಬದುಕನ್ನೂ ಕಳೆದುಕೊಂಡಿದ್ದ ಶಾ, ಯಾವ ಪರವಾನಗಿಯೂ ಇಲ್ಲದೇ ಪಾಕಿಸ್ತಾನ ಪ್ರವೇಶಿಸಿ ನೆಲೆ ಕಲ್ಪಿಸಿಕೊಳ್ಳಲು ಪರದಾಡುತ್ತಿದ್ದರು. ಬರೋಬ್ಬರಿ 30 ವರ್ಷಗಳು ಕಳೆದರೂ ಕೂಡ ಶಾ ಕುಟುಂಬದ ಬದುಕು ಸುಸೂತ್ರವಾಗಿಯೇನೂ ಸಾಗುತ್ತಿರಲಿಲ್ಲ. ಬದುಕು ಸರಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ವೇಳೆಯಲ್ಲಿಯೇ ಪಾಕಿಸ್ತಾನ ಅಕ್ರಮ ವಲಸಿಗರನ್ನು ದೇಶದಿಂದ ಹೊರಗಟ್ಟುವ ಕಾರ್ಯಕ್ಕೆ ನಿಂತಿತ್ತು. ಸರಕಾರದ ಕಣ್ಣು ಶಾ ಕುಟುಂಬದ ಮೇಲೂ ಬಿದ್ದಿತ್ತು. ಅನಿವಾರ್ಯವಾಗಿ ಶಾ ಮತ್ತೆ ಆಫ್ಘಾನ್‌ ಮಣ್ಣಿಗೆ ಮರಳಬೇಕಾಯಿತು.

ಹೀಗೆ ಪಾಕಿಸ್ತಾನದಿಂದ ಹೊರದಬ್ಬಿಸಿಕೊಂಡದ್ದು ಶಾ ಕುಟುಂಬ ಮಾತ್ರವೇನಲ್ಲ. ಹಲವಾರು ಓರಗೆಯವರೂ ಕೂಡ ಶಾ ಕುಟುಂಬದ ಜತೆ ಆಫ್ಘಾನಿಸ್ತಾನಕ್ಕೆ ಮರಳಿದ್ದರು. ಸುಮಾರು 1,00,000 ಜನರನ್ನು ಪಾಕಿಸ್ತಾನ ಹೊರಕ್ಕೆ ತಳ್ಳಿತ್ತು. ಕೆಲವು ಕುಟುಂಬಗಳು ಸ್ವ ಇಚ್ಛೆಯಿಂದ ಹೊರಟು ಬಂದರೆ ಇನ್ನೂ ಕೆಲವು ಕುಟುಂಬಗಳನ್ನು ಪಾಕಿಸ್ತಾನ ಬಲವಂತವಾಗಿ ದಬ್ಬಿತ್ತು. ಹಠ ಹಿಡಿದು ಕುಳಿತವರ ಮೇಲೆ ಪೊಲೀಸರು ಪ್ರಹಾರ ನಡೆಸಿದ್ದರು. ಇನ್ನೂ ಪಾಕಿಸ್ತಾನದಲ್ಲಿ ಇದ್ದರೆ ಬದುಕುವುದೇ ದುಸ್ಥರ ಎಂಬ ಭಾವ ಈ ವಲಸಿಗರ ಮನಸ್ಸಿನಲ್ಲಿ ಮೂಡಿತ್ತು. ಈ ಭಾವ ಬಲಿತೊಡನೆ ವಲಸಿಗರು ಆಫ್ಘಾನ್‌ನತ್ತ ಮುಖ ಮಾಡಿದ್ದರು.

ಹೀಗೆ ದಬ್ಬಿಸಿಕೊಂಡವರ ಸಾಲಿನಲ್ಲಿ ಶಾ ಕುಟುಂಬವೂ ಒಂದು. ಟ್ರಕ್ ಏರಿದ 20ಕ್ಕೂ ಹೆಚ್ಚು ಜನರ ದವ್ರನ್ ಶಾ ಕುಟುಂಬ ಬಟ್ಟೆ ಗಂಟುಗಳು, ಮುದುರಿ ಸುತ್ತಿದ ಕಂಬಳಿಗಳು, ಪಾತ್ರೆಗಳು, 40 ಕೋಳಿ ಮರಿಗಳು, 2 ಪಾರಿವಾಳಗಳು, 1 ಮೇಕೆ ಸೇರಿದಂತೆ ಇನ್ನೂ ಹತ್ತು ಹಲವು ವಸ್ತುಗಳ ಸಮೇತ ಟ್ರಕ್‌ನಿಂದ ಇಳಿದಿತ್ತು.

ಟ್ರಕ್‌ನಲ್ಲಿ ತಮ್ಮ ಸರಕು ಸರಂಜಾಮುಗಳನ್ನು ಹೇರಿಕೊಂಡು ಬಂದ ದವ್ರನ್ ಶಾ ಕುಟುಂಬ.
ಟ್ರಕ್‌ನಲ್ಲಿ ತಮ್ಮ ಸರಕು ಸರಂಜಾಮುಗಳನ್ನು ಹೇರಿಕೊಂಡು ಬಂದ ದವ್ರನ್ ಶಾ ಕುಟುಂಬ.

ಬಿಲಾಲ್‌, 6 ವರ್ಷದ ಪುಟ್ಟ ಹುಡುಗ. ತಾತ ದವ್ರನ್‌‌ ಶಾ ಜತೆಗೆ ತಾನೂ ಕೂಡ ಟ್ರಕ್‌ನಿಂದ ಕೆಳಗಿಳಿದ. ಕುಟುಂಬವನ್ನು ಬಿಟ್ಟರೆ ಅವನಿಗೆ ಆಪ್ತ ಜೀವಿ ಎನಿಸಿದ್ದು ‘ಟೋಟಿ’- ಬಿಲಾಲ್‌ ಸಾಕಿದ್ದ ಮುದ್ದು ಗಿಳಿ. ಇದು ತನ್ನ ಪೂರ್ವಜರು ಹುಟ್ಟಿ ಬೆಳೆದ ನೆಲ ಎಂಬ ಯಾವ ಮಾಹಿತಿಯೂ ಅವನ ತಲೆಯಲ್ಲಿರಲಿಲ್ಲ. ಗೆಳೆಯರೇ ಇಲ್ಲದ ಜಾಗಕ್ಕೆ ಬಿಲಾಲ್‌ ಬಂದಿದ್ದ.

ಪಾಕಿಸ್ತಾನದಲ್ಲೂ ಕೂಡ ಬಿಲಾಲ್‌ಗೆ ಆತ್ಮೀಯರೆನಿಸುವ ಗೆಳೆಯರೇನೂ ಇರಲಿಲ್ಲ. ಅವನ ಟೋಟಿಯೇ ಅವನಿಗೆಲ್ಲಾ. ‘ಟೋಟಿ, ಟೋಟಿ’- ಎಂದರೆ ‘ಟೋಟಿ’ ಎಂದು ಮರು ಉತ್ತರ ನೀಡುತ್ತಿದ್ದ ಗಿಳಿಯೇ ಅವನ ಹಗಲಿನ ಮಿತ್ರನಾಗಿರುತ್ತಿತ್ತು. ಆಟ ಊಟ ಎಲ್ಲ ಕೂಡ ಟೋಟಿ ಜತೆಯೇ ನೆರವೇರುತ್ತಿತ್ತು. ಈಗ ಅದರ ಜತೆಗೆ ಮತ್ತಾವುದೋ ಅರಿಯದ ನೆಲದಲ್ಲಿ ಕಾಲೂರಿದ್ದ. ಮನೆಯವರ ಕೈಗಳಲ್ಲಿ ತಾವು ಹೊತ್ತು ತಂದಿದ್ದ ಸರಂಜಾಮುಗಳಿದ್ದರೆ, ಬಿಲಾಲ್‌ ಕೈನಲ್ಲಿ ಟೋಟಿಯ ಪಂಜರವಿತ್ತು.

ದವ್ರನ್‌ ಶಾ ಬಂದದ್ದು ಪೂರ್ವ ಆಫ್ಘಾನಿಸ್ತಾನದ ನಂಗರ್‌ಹಾರ್‌ ಎಂಬ ಪ್ರದೇಶಕ್ಕೆ. ಇಲ್ಲಿಯೇ ಮತ್ತೊಮ್ಮೆ ಬದುಕು ಕಟ್ಟಿಕೊಳ್ಳಬೇಕು ಎಂದು ಇಳಿವಯಸ್ಸಿನ ದವ್ರನ್‌‌ ಶಾ ನಿರ್ಧರಿಸಿಕೊಂಡಿದ್ದರು. ದವ್ರನ್‌ ಶಾರಂತೆಯೇ ನಿರಾಶ್ರಿತರಾಗಿ ಹೊರಟ 3 ಜನರಲ್ಲಿ ಇಬ್ಬರು ಇದೇ ನಂಗರ್‌ಹಾರ್‌ ಪ್ರದೇಶಕ್ಕೆ ಬರುತ್ತಿದ್ದರು.

ಮನೆ ಕಟ್ಟಿಕೊಳ್ಳಲು ದವ್ರನ್‌ ಶಾ ಕುಟುಂಬಕ್ಕೆ ದೊರೆತ ಖಾಲಿ ಜಾಗ.
ಮನೆ ಕಟ್ಟಿಕೊಳ್ಳಲು ದವ್ರನ್‌ ಶಾ ಕುಟುಂಬಕ್ಕೆ ದೊರೆತ ಖಾಲಿ ಜಾಗ.

ನಂಗರ್‌ಹಾರ್‌ ಪ್ರದೇಶವೇನೂ ಅದ್ಭುತವಾದ ಜಾಗವೇನಲ್ಲ. ಬೃಹದಾಕಾರದ ಬೆಟ್ಟ ಗುಡ್ಡಗಳಿಂದ ತುಂಬಿ ನಿರ್ಜನ ಎನ್ನುವಂತಿದ್ದ ಜಾಗವದು. ಗಿರಿ ಕಂದರಗಳ ನಡುವೆ ಅಲ್ಲೊಂದು ಇಲ್ಲೊಂದು ಮನೆಗಳಷ್ಟೇ ಇದ್ದವು. ಇಂತಹದ್ದೊಂದು ಜಾಗಕ್ಕೆ ಬಂದಿಳಿದಾಗ ಶಾ ಕುಟುಂಬದ ಕಣ್ಣಂಚಿನಲ್ಲಿ ನೀರು ತುಂಬಿತ್ತು.

ಅಲ್ಲಿದ್ದ ಮನೆಗಳೆಲ್ಲಿ ಬಹುಪಾಲು ಮನೆಗಳು ನಿರಾಶ್ರಿತರಿಗಾಗಿ ಕೆಲಸ ನಿರ್ವಹಿಸುತ್ತಿದ್ದ ನಾರ್ವೇ ದೇಶದ ನಿರಾಶ್ರಿತ ಸಮಿತಿಯೊಂದು ಕಟ್ಟಿಕೊಟ್ಟಿತ್ತು. ಶಾ ಕುಟುಂಬವನ್ನೂ ಕೂಡ ಕೈ ಹಿಡಿದಿದ್ದು ಈ ಸಮಿತಿಯೇ. ಶಾ ಕುಟುಂಬಕ್ಕೆ ಮನೆಯೊಂದು ಸಿದ್ಧವಾದ ನಂತರದಲ್ಲಿ, ಹೆಗಲ ಮೇಲೆ ಗಿಳಿಯನ್ನು ಕೂರಿಸಿಕೊಂಡು ಕೈಯಲ್ಲಿ ಖಾಲಿ ಹಿಡಿದು ಹೊರಬಂದ ಬಿಲಾಲ್‌ನ ಪೋಟೊಗ್ರಾಫರ್‌ನ ಕ್ಯಾಮರಾದಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದ.

ಬಿಲಾಲ್ ಮತ್ತು ಟೋಟಿ
ಬಿಲಾಲ್ ಮತ್ತು ಟೋಟಿ

‘ಅಲ್ಲಿದ್ದಾಗ ನಮ್ಮ ಮನೆಯಲ್ಲಿ ಬಾಲ್ಕನಿಯಿತ್ತು. ಮೂರು ಕೊಠಡಿಗಳಿದ್ದವು. ಅದಲ್ಲದೇ ಅಥಿತಿಗಳಿಗೆಂದು ಪ್ರತ್ಯೇಕ ಕೊಠಡಿಯೊಂದಿತ್ತು. ಇಲ್ಲಿ ಇರುವುದು 2 ಕೊಠಡಿಗಳು. ಆ ಕೊಠಡಿಗಳಿಗೆ ಬಾಗಿಲುಗಳಿಲ್ಲ. ಅದನ್ನು ಬಿಟ್ಟರೆ ಈಗ ನಮ್ಮ ಬಳಿ 2 ಟೆಂಟ್‌ಗಳಿವೆ” ಎಂದು ಬಿಲಾಲ್‌ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದ ಬದುಕಿನ ಬಗ್ಗೆ ವಿವರಿಸುತ್ತಿದ್ದ.

ದವ್ರನ್‌ ಶಾ ಕಟ್ಟಿಕೊಂಡ ಮನೆ.
ದವ್ರನ್‌ ಶಾ ಕಟ್ಟಿಕೊಂಡ ಮನೆ.

ನಿನಗೆ ಗಿಳಿ ಹೇಗೆ ಸಿಕ್ಕಿತು? ಎನ್ನುವ ಪ್ರಶ್ನೆಗೆ ‘ಅದ್ಯಾವುದೋ ಬೇರೆಯ ದೇಶದಿಂದ’ ಎಂಬ ಉತ್ತರವನ್ನು ಬಿಲಾಲ್‌ ನೀಡಿದ್ದ. ಬಿಲಾಲ್‌ ಪ್ರಕಾರ ಆ ದೇಶ ಸುತ್ತಮುತ್ತ ಎಲ್ಲಕಡೆಯೂ ಕೂಡ ಹಸಿರಿನಿಂದ ಕಂಗೊಳಿಸುತ್ತಿತ್ತು. ಅಗಾಧ ಸಂಖ್ಯೆಯಲ್ಲಿ ಪ್ರಾಣಿ ಪಕ್ಷಿ ಇತ್ಯಾದಿ ಜೀವಿಗಳು ಅಲ್ಲಿ ವಾಸಿಸುತ್ತಿದ್ದವು. ಈ ಮಾತುಗಳನ್ನು ಹೇಳುವಾಗ ಬಿಲಾಲ್‌ ಕಣ್ಣುಗಳು ಅರಳುತ್ತಿದ್ದವು. ಆದರೆ ನಾವಿರುವ ಪ್ರದೇಶ ಅದರಂತಿಲ್ಲ ಎಂಬ ನಿರಾಸೆಯೂ ಅವನ ಕಣ್ಣುಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು.

ದವ್ರನ್ ಶಾ ಈಶಾನ್ಯ ಪಾಕಿಸ್ಥಾನದ ಪ್ರದೇಶವೊಂದರಲ್ಲಿ ಮನೆ ಕಟ್ಟಿಕೊಂಡಿದ್ದರು. 30 ವರ್ಷಗಳ ಕಾಲ ಸುತ್ತ ಮುತ್ತಲಿನ ಜಾಗದಲ್ಲಿ ಟಮೋಟೋ ಹಾಗೂ ಕುಂಬಳಕಾಯಿಯನ್ನು ಹೋಲುವ ತರಕಾರಿಯೊಂದನ್ನು ಬೆಳೆಯುತ್ತಿದ್ದರು. ಜತೆಗೆ ಅವರ ಕುಟುಂಬವೂ ದೊಡ್ಡದಾಗಿ ಬೆಳೆದಿತ್ತು.

ತನ್ನ ತಂದೆ ಜಮ್ಶದ್‌ ಜತೆ ಬಿಲಾಲ್‌ ಸುತ್ತ ಮುತ್ತಲೆಲ್ಲಾ ತಿರುಗಾಡುತ್ತಿದ್ದ. ಒಂದು ದಿನ ಹತ್ತಿರದಲ್ಲೇ ಇದ್ದ ಮರದ ಮೇಲೆ ಗಿಳಿ ಮರಿಯೊಂದು ಕೂತಿತ್ತು. ಅದನ್ನು ಕಂಡ ಬಿಲಾಲ್‌ ತಂದೆಯ ಬಳಿ ಆ ಗಿಳಿ ಮರಿ ಬೇಕು ಎಂದು ಹಠ ಹಿಡಿದಿದ್ದ. ದಾರಿ ಕಾಣದೇ ಜಮ್ಶದ್‌ ಆ ಗಿಳಿಮರಿಯನ್ನು ಕೆಳಗೆ ಬೀಳಿಸಿದ್ದರು.

ಮರದಿಂದ ಕೆಳಗೆ ಬಿದ್ದ ಗಿಳಿ ಮರಿಯನ್ನು ಕೈಗೆತ್ತಿಕೊಂಡ ಬಿಲಾಲ್‌ ತನ್ನ ಕರವಸ್ತ್ರದಿಂದ ಅದನ್ನು ಮುಚ್ಚಿ, ಮನೆಗೆ ಕೊಂಡೊಯ್ದಿದ್ದ. ನಿನಗೆ ಈ ಗಿಳಿ ಸಿಕ್ಕಾಗ ಅದು ಎಷ್ಟು ದೊಡ್ಡದಿತ್ತು ಎಂಬ ಪ್ರಶ್ನೆಗೆ , “ ಅದು ಆಗ ಚಿಕ್ಕ ಮಗು. ಇಷ್ಟು ದೊಡ್ಡದಿತ್ತು,” ಎಂದು ತನ್ನ ಪುಟ್ಟ ಬೆರಳುಗಳಲ್ಲಿ ಅದರ ಪುಟ್ಟ ಗಾತ್ರವನ್ನು ಸೂಚಿಸುತ್ತಿದ್ದ.

ಮನೆಯಲ್ಲಿದ್ದಾಗ, ಹೊರಗಡೆ ತಿರುಗಾಡಲು ಹೋದಾಗ, ಮೈದಾನದಲ್ಲಿ ಓರಗೆಯ ಮಕ್ಕಳೊಂದಿಗೆ ಆಡುವಾಗ ಎಲ್ಲಾ ಸಮಯದಲ್ಲೂ ಟೋಟಿ ಬಿಲಾಲ್‌ನ ಹೆಗಲ ಮೇಲಿರಬೇಕಿತ್ತು. ಟೋಟಿ ಬಿಲಾಲ್‌ನ ಹೆಗಲಿಂದ ಕೆಳಗಿಳಿಯುತ್ತಿದ್ದದ್ದು ಎರಡೇ ಸಮಯದಲ್ಲಿ. ಒಂದು ಬಿಲಾಲ್‌ ಟೊಟಿಗೆ ತಿನ್ನಲೆಂದು ಕಾಳುಗಳನ್ನು ಕೊಡುತ್ತಿದ್ದಾಗ ಮತ್ತು ರಾತ್ರಿ ಮಗಲುವ ಮುಂಚೆ ಟೋಟಿಯನ್ನು ಪಂಜರದೊಳಕ್ಕೆ ಸೇರಿಸಿದಾಗ.

ಬಿಲಾಲ್‌ ಯಾವುದೇ ಚಿಂತೆಯಿಲ್ಲದೇ ತಿರುಗಾಡಿಕೊಂಡಿದ್ದ. ಆದರೆ ಆತನ ತಂದೆ ಜಮ್ಶದ್‌ ಅತಿ ಬೇಗನೆ ಕೆಲಸವೊಂದನ್ನು ಹುಡುಕಿಕೊಳ್ಳಬೇಕಿತ್ತು. ಹೆಚ್ಚು ಜನ ಸಂಖ್ಯೆಯೇ ಇಲ್ಲದಿದ್ದ ಆ ಜಾಗದಲ್ಲಿ ಯಾರು ಕರೆದು ಕೆಲಸ ಕೊಟ್ಟಾರು? ಪ್ರತಿ ದಿನವೂ ಬರಿಗೈನಲ್ಲಿ ಹಿಂತಿರುಗಿ ಬರುವುದೇ ಆಗಿತ್ತು. ಕೆಲಸಕ್ಕಾಗಿ ತಂಗಿದ್ದ ಸ್ಥಳವನ್ನು ಬಿಟ್ಟು ದೂರ ಹೋಗಬೇಕಾದ ಅನಿವಾರ್ಯತೆ ಜಮ್ಶದ್‌ ಮುಂದಿತ್ತು. ತಂದೆ ದವ್ರನ್‌‌ ಶಾ ಅನುಮತಿ ಪಡೆದು ಜಮ್ಶದ್‌ ಸೇನೆಯಲ್ಲಿ ಕೆಲಸ ಹುಡುಕಿಕೊಂಡು ಹೊರಟರು.

ಅಲ್ಲಿ ಯುದ್ಧ ನಡೆಯದಿದ್ದ ದಿನವೇ ಇಲ್ಲ. ಪ್ರತಿ ದಿನವೂ ಸುಮಾರು 50 ಜನರ ಬಲಿಯನ್ನು ಈ ಯುದ್ಧ ಭೂಮಿ ಬೇಡುತ್ತಿತ್ತು. ಭಯವಿದ್ದರೂ ಕೂಡ ಹೊಟ್ಟೆ ತುಂಬಿಸಿಕೊಳ್ಳಲೇಬೇಕಾದ ಅನಿವಾರ್ಯದಿಂದ ದವ್ರನ್‌ ಶಾ ಮಗನಿಗೆ ಸೈನ್ಯ ಸೇರಲು ಅನುಮತಿ ಕೊಟ್ಟಿದ್ದರು. ಆದರೆ ಮಗ ಹೋದ ಕೆಲವೇ ದಿನಗಳಲ್ಲಿ ದವ್ರನ್‌ ಶಾ ಮಡದಿ ಮಧುಮೇಹದಿಂದ ಕೊನೆಯುಸಿರೆಳೆದರು. ಬಿಲಾಲ್‌ಗಿಂತಲೂ ಚಿಕ್ಕ 3 ಹೆಣ್ಣು ಮಕ್ಕಳು ಮನೆಯಲ್ಲಿದ್ದರು. ಅವರಲ್ಲಿ ಒಬ್ಬ ಚಿಕ್ಕ ಹುಡುಗಿ ಲಾಲ್ಮಿನಾ ಪೋಲಿಯೋ ಕಾಯಿಲೆಗೆ ತುತ್ತಾಗಿದ್ದಳು.

ಪಾಕಿಸ್ತಾನದಿಂದ ಬಂದ ಶಾ ಕುಟುಂಬಕ್ಕೆ ಆಫ್ಘಾನಿಸ್ತಾನದ ವಾತಾವರಣಕ್ಕೆ ಹೊಂದುಕೊಳ್ಳುವುದೇ ಕಷ್ಟವಾಗಿತ್ತು. ಬಿಲಾಲ್‌ನನ್ನೂ ಕೂಡ ಪದೇ ಪದೇ ಜ್ವರ ಕಾಡುತ್ತಿತ್ತು. ಆತನ ಕಣ್ಣುಗಳು ಊದಿಕೊಳ್ಳುತ್ತಿದ್ದವು. ಆದರೆ ಟೋಟಿ ಆ ನೋವನ್ನೆಲ್ಲಾ ಮರೆಸುತ್ತಿತ್ತು.

ಸುಮಾರು 2 ತಿಂಗಳ ಹಿಂದಿನ ಒಂದು ರಾತ್ರಿ ಪ್ರತಿ ದಿನದಂತೆಯೇ ಬಿಲಾಲ್‌ ಟೋಟಿಯನ್ನು ಪಂಜರದಲ್ಲಿರಿಸಿ, ಮಂಚದ ಕೆಳಗಿಟ್ಟು ತಾನೂ ಮಲಗಿ ನಿದ್ದೆ ಹೋಗಿದ್ದ. ಬೆಳಗ್ಗೆ ಎದ್ದು ನೋಡಿದಾಗ ಟೋಟಿ ಪಂಜರದ ನೆಲದ ಮೇಲೆ ಹೊರಳಾಡದೇ ಬಿದ್ದತ್ತು. ಭಯ ಭೀತನಾಗಿದ್ದ ಬಿಲಾತ್‌ ತಾತನನ್ನು ಕರೆದು ಪರೀಕ್ಷಿಸುವಂತೆ ಸೂಚಿಸಿದ್ದ. ಆದರೆ ಶಾ ಪಂಜರ ತೆಗೆದು ನೋಡುವ ವೇಳೆಗಾಗಲೇ ಟೋಟಿ ಮೈ ಮರಗಟ್ಟಿತ್ತು. ಮಂಕಾದ ಬಿಲಾಲ್‌ ಅಂದಿನಿಂದ ಸರಿಯಾಗಿ ಮಾತೇ ಆಡುತ್ತಿರಲಿಲ್ಲ. ಆಫ್ಘಾನ್‌ನ ವಾತಾರವರಣಕ್ಕೆ ಹೊಂದಿಕೊಳ್ಳಲಾಗದೆ ಟೋಟಿಯ ಜತೆಗೆ ಪಾರಿವಾಳ ಹಾಗೂ ಕೋಳಿ ಮರಿಗಳೂ ಕೂಡ ಮೃತಪಟ್ಟಿದ್ದವು. ಟೋಟಿಯ ಪಂಜರ ಖಾಲಿ ಉಳಿದಿತ್ತು.

ಖಾಲಿಯಾದ ಟೋಟಿ ಪಂಜರ.
ಖಾಲಿಯಾದ ಟೋಟಿ ಪಂಜರ.

ಟೋಟಿ ಮೃತದೇಹದ ಫೋಟೊ ತೆಗೆಸಿದ ಬಿಲಾಲ್‌, ತನ್ನ ತಂದೆಗೆ ಇಂಟರ್‌ನೆಟ್‌ ಮೂಲಕ ಫೋಟೊ ಕಳಿಸಿದ್ದ. ಬೇಸರವನ್ನು ವ್ಯಕ್ತ ಪಡಿಸಿದ್ದ ಜಮ್ಶದ್‌ ಮತ್ತೊಂದು ಟೋಟಿಯನ್ನು ತಂದುಕೊಡುವುದಾಗಿ ಭರವಸೆ ನೀಡಿದ್ದರು. ಟೋಟಿಯ ಸಾವು ಒಬ್ಬೊಂಟಿಯಾದ ಬಿಲಾಲ್‌ನ ನೆಮ್ಮದಿಯನ್ನು ಧ್ವಂಸ ಮಾಡಿತ್ತು. ಹೀಗೆ ಬಿಟ್ಟರೆ ಬಿಲಾಲ್‌ ಅಸ್ವಸ್ತನಾಗುತ್ತಾನೆ ಎಂದೆನಿಸಿದ ಶಾ, ಅವನನ್ನು ಶಾಲೆ ಸೇರಿಸುವ ಯೋಚನೆ ಮಾಡಿದ್ದರು.

ಶಾ ಮನೆಯಿಂದ ಸುಮಾರು 20 ನಿಮಿಷಗಳಷ್ಟು ನಡಿಗೆಯ ದೂರದಲ್ಲಿದ್ದ ಅಸಾದುಲ್ಲಾ ಸಫಿಯ ಮನೆಯೇ ಪಾಠ ಶಾಲೆಯಾಗಿತ್ತು. ಸಫಿಯೇ ನಡೆಸುತ್ತಿದ್ದ ಶಾಲೆಗೆ ಸ್ವಯಂ ಸೇವಾ ಸಂಸ್ಥೆಯೊಂದು ಹಣ ನೀಡುತ್ತಿತ್ತು. ನಿರಾಶ್ರಿತರ ಮಕ್ಕಳೇ ಬರುತ್ತಿದ್ದ ಆ ಶಾಲೆಗೆ ಬಿಲಾಲ್‌ ಸೇರಿಕೊಂಡ. ಅವನಿಗೆ ಸಂಗಾತಿಯಾಗಿ ಸಂಬಂಧಿಕರ ಹುಡುಗ ಯಾಸೀರ್‌ನನ್ನೂ ಕೂಡ ಶಾಲೆಗೆ ಸೇರಿಸಲಾಯಿತು.

ಪಾಠಶಾಲೆಗೆ ನಡೆದು ಹೋಗುತ್ತಿರುವ ಬಿಲಾಲ್‌ ಮತ್ತು ಯಾಸೀರ್
ಪಾಠಶಾಲೆಗೆ ನಡೆದು ಹೋಗುತ್ತಿರುವ ಬಿಲಾಲ್‌ ಮತ್ತು ಯಾಸೀರ್

ಬಿಲಾಲ್‌ಗೆ ಪಾಠಿ ಚೀಲ ದೊರೆಯಿತ್ತು. ಪುಸ್ತಕ, ಲೇಖನಿಗಳು ದೊರೆತವು. ಜತೆಗೆ ಬಿಲಾಲ್‌ ಹೆಸರಿನ್ನೇ ಹೊಂದಿದ್ದ ಹಲವಾರು ಗೆಳೆಯರು ದೊರೆತರು. ಯಾಸೀರ್ ಜತೆ ಸೇರಿ ಶಾಲೆಗೆ ಹೋಗುತ್ತಿದ್ದ ಬಿಲಾಲ್‌ ಹಲವಾರು ಹುಡುಗರೊಂದು ಆಟವಾಡುತ್ತಾ, ಪಾಠ ಕಲಿಯುತ್ತಾ ಟೋಟಿಯನ್ನು ಮರೆತ.

ಬಿಲಾಲ್‌ ಬದುಕಿನಲ್ಲಿ ಸಂತಸ ಕಂಡು ಬಂತು. ಆದರೆ ದವ್ರನ್‌ ಶಾ ಕುಟುಂಬದ ಬದುಕು ಮಾತ್ರ ಬದಲಾಗಿರಲಿಲ್ಲ. ಸೈನ್ಯ ಸೇರಿದ ಮಗ ಎಂದು ಬರುವನೋ ಎಂಬ ಚಿಂತೆ ಒಂದು ಕಡೆಯಾದರೆ ದೊಡ್ಡ ಕುಟುಂಬದ ಹೊಟ್ಟೆ ತುಂಬಿಸುವ ದಾರಿಯಾವುದು ಎಂಬ ಚಿಂತೆ ಶಾ ಮುಖದಲ್ಲಿ ದಟ್ಟವಾಗಿ ಕಾಣಿಸುತ್ತಲೇ ಇತ್ತು.

ಬದುಕು ಎಂಬುದು ಸುಂದರ ಹೋರಾಟ ಎನ್ನುತ್ತಾರೆ. ಅದರಲ್ಲೂ ಗಡಿಗಳಾಗಿ ವಿಭಜನೆಗೊಂಡಿರುವ ಭೂಮಿಯ ಮೇಲೆ ನಿರಾಶ್ರಿತರಾದರೆ ಬದುಕು ಎಂತಹ ಹೋರಾಟವನ್ನು ಕರುಣಿಸುತ್ತದೆ ಎಂಬುದನ್ನು ಬಿಲಾಲ್ ಕುಟುಂಬದ ಈ ಕತೆ ಬಿಚ್ಚಿಡುತ್ತದೆ.

ಚಿತ್ರ, ಮಾಹಿತಿ: The NewYork Times.