samachara
www.samachara.com
ಮಕ್ಕಳಿಗಾಗಿ ಊಟ ಬಿಡುತ್ತಿರುವ ತಾಯಂದಿರು & ಭೂಲೋಕದ ನರಕ ಯಮೆನ್
ಫೋಕಸ್

ಮಕ್ಕಳಿಗಾಗಿ ಊಟ ಬಿಡುತ್ತಿರುವ ತಾಯಂದಿರು & ಭೂಲೋಕದ ನರಕ ಯಮೆನ್

ಕಚ್ಚಾ ತೈಲ, ಕಾಟನ್ ಉದ್ಯಮ, ಒಣ ಮೀನು, ಗುಡಿ ಕೈಗಾರಿಕೆಗಳು ಸೇರಿಯೂ ಉದ್ಯಮ ವ್ಯವಹಾರ ಮತ್ತು ಆದಾಯ ಅಷ್ಟಕಷ್ಟೆ. ಇಂಥ ಯೆಮನ್‌ ಹಸಿವಿನ ಬಲೆಯಲ್ಲಿ ಸಿಲುಕಿ ಬೇಯುತ್ತಿದೆ.

ಎಂಟು ಮಕ್ಕಳ ಹಸಿವು ನೀಗಿಸಲು ತಾಯಿಯೊಬ್ಬಳು ಊಟವನ್ನೇ ಬಿಟ್ಟ ಭೀಕರ ಘಟನೆಗೆ ಯಮೆನ್ ದೇಶ ಸಾಕ್ಷಿಯಾಗಿದೆ.

ಸಾಕಷ್ಟು ಶ್ರೀಮಂತವಾಗಿರುವ ಅರಬ್ ರಾಷ್ಟ್ರಗಳಲ್ಲಿ ಮೀನು, ಮಾಂಸ, ಮೊಟ್ಟೆ ಇತ್ಯಾದಿಗಳಿರುವ ಊಟವನ್ನು ಪರಿಪೂರ್ಣ ಊಟ ಎಂದು ಪರಿಗಣಿಸಲಾಗುತ್ತದೆ. ಆದರೆ ಯೆಮನ್ ಆಡೆನ್ ನಗರದ ಹೊರ ಭಾಗದ ಹಳ್ಳಿಯೊಂದರ ಇರುವ ಬಸುರಿ ತಾಯಿ ಉಮ್ ಮಿಜ್ರಾ ತನ್ನ 8 ಮಕ್ಕಳ ಹಸಿವು ನೀಗಿಸುವ ಸಲುವಾಗಿ ತಾನು ಊಟ ಬಿಟ್ಟಿದ್ದಾಳೆ.

ಮಿಜ್ರಾ ಆಡೆನ್ ನಲ್ಲಿನ ಅಲ್ ಸದಾಖ್ ಆಸ್ಪತ್ರೆಯ ವೈದ್ಯರಲ್ಲಿಗೆ ಹೋದಾಗ ಆಸ್ಪತ್ರೆಯಲ್ಲಿ ಹಸಿವಿನಿಂದ ನಿಸ್ತೇಜಗೊಂಡ ನೂರಾರು ಮಕ್ಕಳು ತುಂಬಿಕೊಂಡಿದ್ದರು. ತನ್ನ ಸರದಿ ಬಂದಾಗ ಉಮ್ ಮಿಜ್ರಾ ತೂಕ ಮಾಡುವ ಮೆಷಿನ್ ಮೇಲೆ ನಿಂತಾಗ ಅವಳ ತೂಕ 84 ಪೌಂಡ್( 38 ಕೆಜಿ)ಗಳಷ್ಟಿತ್ತು. ಅದು ಆರೋಗ್ಯವಂತ ಬಸುರಿ ಇರಬೇಕಾದ ತೂಕದಲ್ಲಿ ಅರ್ಧಕ್ಕಿಂತಲೂ ಕಡಿಮೆ.

ಯಮೆನ್‌ ದೇಶದಲ್ಲಿ ಕಳೆದ ಮೂರು ವರ್ಷದಿಂದ ನಡೆಯುತ್ತಿರುವ ಯುದ್ಧದ ಪರಿಣಾಮ ಇದು. ಇಲ್ಲೀಗ ಹಸಿವು ಸಾಮಾನ್ಯ ಜನರ ಬದುಕನ್ನು ಕಿತ್ತುಕೊಳ್ಳುತ್ತಿದೆ.

ಯೆಮನ್ 22 ಅರಬ್ ರಾಷ್ಟ್ರಗಳಲ್ಲಿ ಒಂದು . ಏಷ್ಯಾದ ಪಶ್ಚಿಮ ಭಾಗದಲ್ಲಿ ಅತ್ತ ಆಫ್ರಿಕಾ ಇತ್ತ ಏಷ್ಯಾವನ್ನೂ ಪ್ರತ್ಯೇಕಿಸುವ ಅರೆಬಿಯನ್ ಸಮುದ್ರದ ತೀರ ಪ್ರದೇಶದಲ್ಲಿ ನೆಲೆಗೊಂಡಿದೆ. ದೇಶದ ಒಟ್ಟು ಭೂ ಭಾಗದಲ್ಲಿ ಶೇ.96ರಷ್ಟು ಪ್ರದೇಶ ಬೆಟ್ಟ ಗುಡ್ಡಗಳು ಮತ್ತು ಮರುಭೂಮಿಯಿಂದ ಕೂಡಿದೆ. ಕೃಷಿ ಎನ್ನುವುದು ಇಲ್ಲಿನ ಜನರ ಪಾಲಿಗೆ ಮರೀಚಿಕೆ.

ಕಚ್ಚಾ ತೈಲ, ಕಾಟನ್ ಉದ್ಯಮ, ಒಣ ಮೀನು, ಗುಡಿ ಕೈಗಾರಿಕೆಗಳು ಸೇರಿಯೂ ಉದ್ಯಮ ವ್ಯವಹಾರ ಮತ್ತು ಆದಾಯ ಅಷ್ಟಕಷ್ಟೆ. ಇಂಥ ಯೆಮನ್‌ ಹಸಿವಿನ ಬಲೆಯಲ್ಲಿ ಸಿಲುಕಿ ಬೇಯುತ್ತಿದೆ.

ಮೊದಲೇ ಬಡರಾಷ್ಟ್ರವಾದ ಇಲ್ಲಿ ಉಪ್ಪು ಮೆಣಸಿನ ಕಾಯಿಯಿಂದ ಹಿಡಿದು ಎಲ್ಲ ಆಹಾರ ಪದಾರ್ಥಗಳನ್ನ ಆಮದು ಮಾಡಿಕೊಳ್ಳಬೇಕು. ಯುದ್ಧದ ಹಿನ್ನೆಲೆಯಲ್ಲಿ ಕನಿಷ್ಟ ನಿತ್ಯ ಅಗತ್ಯವಸ್ತುಗಳು ಜನರಿಗೆ ಸಿಗುತ್ತಿಲ್ಲ. ಹೀಗಾಗಿ ಮಿಜ್ರಾಳಂತ ಲಕ್ಷಾಂತರ ತಾಯಂದಿರುವ ಇಲ್ಲಿ ಹಸಿವು ನುಂಗಿಕೊಂಡು ಬದುಕುತ್ತಿದ್ದಾರೆ.

ಯಮೆನ್ ತಾಯಂದಿರ ಹಾಗೂ ಮಕ್ಕಳ ಸ್ಥಿತಿ ಹೀಗಿದೆ. 
ಯಮೆನ್ ತಾಯಂದಿರ ಹಾಗೂ ಮಕ್ಕಳ ಸ್ಥಿತಿ ಹೀಗಿದೆ. 

ಕಳೆದ ಮೂರು ವರ್ಷಗಳಿಂದ ಸರ್ಕಾರ ಮತ್ತು ಬಂಡುಕೋರರ ಯುದ್ಧದಿಂದ ಯೆಮನ್ ಆರ್ಥಿಕತೆ, ಸಾಮಾಜಿಕತೆ, ಆರೋಗ್ಯ, ಶಿಕ್ಷಣ ಇತ್ಯಾದಿಗಳು ಸಂಪೂರ್ಣ ನೆಲಕಚ್ಚಿವೆ. 90ರ ದಶಕದಲ್ಲಿ ನಡೆದ ಇರಾಕ್ ಗಲ್ಫ್ ಯುದ್ಧ ಅದರ ಬೆನ್ನು ಮೂಳೆ ಮುರಿದಿತ್ತು. ಈಗ ಸೌದಿ, ಕುವೈತ್ ಇತ್ಯಾದಿ ರಾಷ್ಟ್ರಗಳ ಮೈತ್ರಿಕೂಟ ಸೇನೆ ಹಾಗೂ ಹೌತಿ ಬಂಡುಕೋರರ ನಡುವೆ ನಡೆಯುತ್ತಿರುವ ಯುದ್ಧ ಅದನ್ನು ಇನ್ನಿಲ್ಲದಂತೆ ಮುಗಿಸುವ ಹಂತಕ್ಕೆ ತಂದು ನಿಲ್ಲಿಸಿದೆ.

ಹಸಿವು ತಾಳುವ ಹೋರಾಟದಲ್ಲಿ ಮಿಜ್ರಾಳಂತ ಸಾವಿರಾರು ತಾಯಂದಿರು ಕೊನೆಗೆ ಸೋಲುತ್ತಾರೆ ಅಂದರೆ ಸಾವನ್ನಪ್ಪುತ್ತಿದ್ದಾರೆ. ಅವರು ಊಟ ಬಿಡುತ್ತಾರೆ, ಹಸಿವಿನಿಂದ ತಪ್ಪಿಸಿಕೊಳ್ಳಲು ನಿದ್ರೆ ಹೋಗುತ್ತಾರೆ. ಮೂಳೆ ಚರ್ಮದ ದೇಹ ಕಾಣದಂತೆ ಉಟ್ಟ ಬಟ್ಟೆಯನ್ನು ಸುತ್ತಿಕೊಂಡಿರುತ್ತಾರೆ.

ಸುಮಾರು 2.9 ಲಕ್ಷ ತಾಯಂದಿರು ಮತ್ತು ಮಕ್ಕಳು ಯೆಮನ್ ನಲ್ಲಿ ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. 4 ಲಕ್ಷ ಮಕ್ಕಳು ಹಸಿವಿನಿಂದಾಗಿ ಸಾವು ಮತ್ತು ಬದುಕಿನ ಜೊತೆ ಮಿಜ್ರಾಳಂತೆ ಹೋರಾಟ ಮಾಡುತ್ತಿದ್ದಾರೆ. ಯೆಮನ್ ನ 29 ಮಿಲಿನಯನ್ (2ಕೋಟಿ 90 ಲಕ್ಷ ) ಜನಸಂಖ್ಯೆಯಲ್ಲಿ 84 ಲಕ್ಷ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಜಾಗತಿಕ ಸಂಸ್ಥೆಗಳು ನೀಡುತ್ತಿರುವ ಸಹಾಯಧನಗಳ ನೆರವು ಕೂಡ ಯೆಮನ್ ಸರ್ಕಾರಕ್ಕೆ ಸಾಲದಾಗಿದೆ. ಮಹಿಳೆಯರು ಮಕ್ಕಳು ಹಸಿವಿನ ಬಾಯಿಗೆ ತುತ್ತಾಗುತ್ತಿದ್ದಾರೆ.

ಯೆಮೆನ್ ದೇಶದ ಶಿಯಾ ಹೌತಿ ಬಂಡುಕೋರರ ವಿರುದ್ಧ ಸೌದಿ, ಅಮೆರಿಕಾ, ಕುವೈತ್ ಮೈತ್ರಿಕೂಟ ಹೋರಾಟ ಮಾಡುತ್ತಿದೆ. ದೇಶದ ಉತ್ತರ ಬಾಗವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ಬಂಡುಕೋರರನ್ನು ಮಣಿಸಲು ಮೈತ್ರಿಕೂಟ ಸೇನೆ ವಾಯು ದಾಳಿ ಮಾಡುತ್ತಿದೆ. ಯೆಮನ್ ಸೇನೆ ಇದಕ್ಕೆ ಬೆಂಬಲ ನೀಡಲೇಬೇಕಾಗಿದೆ.

ತೀವ್ರ ಯುದ್ಧ ಪೀಡಿತ ಯೆಮನ್ ನಲ್ಲಿ ಎಷ್ಟು ಮಕ್ಕಳು ಹಸಿವಿನಿಂದ ಅಸುನೀಗಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಆದರೂ ಕಳೆದ ವರ್ಷವೊಂದರಲ್ಲೇ ಕನಿಷ್ಠ 50 ಸಾವಿರ ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಅಂದಾಜಿಸಲಾಗಿದೆ. ದೇಶದ ಮಕ್ಕಳಲ್ಲಿ ಶೇ.30 ರಷ್ಟು ಮಕ್ಕಳು ತೀವ್ರ ಅಪೌಷ್ಠಿಕತೆಯೊಂದಿಗೆ ಹೋರಾಟ ಮಾಡುತ್ತಿದ್ದಾರೆ.

ಹಸಿವು ನೀಗಿಸಲು ಯೆಮನ್ ಗೆ ತುರ್ತು ನೆರವು ನೀಡುತ್ತಿರುವ ಜಾಗತಿಕ ಸಂಸ್ಥೆ ವರ್ಲ್ಡ್ ಫುಡ್ ಪ್ರೊಗ್ರಾಂನ ಮುಖ್ಯಸ್ಥ ಸ್ಟೀಫನ್ ಆಂಡರ್ಸನ್, ಸುಮಾರು 1 ಕೋಟಿ 80 ಲಕ್ಷ ಮಂದಿಗೆ ತಮ್ಮ ಮುಂದಿನ ಊಟ ಯಾವಾಗ, ಹೇಗೆ, ಎಲ್ಲಿ ಎಂದು ತಿಳಿದಿಲ್ಲ ಅನ್ನುತ್ತಾರೆ.

ಯುದ್ಧ ಇಲ್ಲದೆ ಇದ್ದಾಗಲೇ ಆಹಾರ ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ದೇಶದ ಸ್ಥಿತಿ ಈಗ ಇನ್ನಷ್ಟು ಹಾಳಾಗಿದೆ. ಮೈತ್ರಿ ಕೂಟದ ವಾಯು ದಾಳಿ ಆಸ್ಪತ್ರೆ, ರಸ್ತೆ, ಶಾಲೆ, ಕಾರ್ಖಾನೆ, ಅಷ್ಟಿಷ್ಟಿದ್ದ ಕೃಷಿ, ಸೇತುವೆ ಇತ್ಯಾದಿ ಎಲ್ಲವನ್ನೂ ಉಡಾಯಿಸಿವೆ.

ಅನ್ಯ ದೇಶಗಳಿಂದ ಆಮದು ವಸ್ತುಗಳು ಬಂದಿಳಿಯುವ ಬಂದರುಗಳು, ಭೂ ಮತ್ತು ವಾಯು ಪ್ರದೇಶಗಳನ್ನು ಮೈತ್ರಿಕೂಟ ಸೇನೆ ಹಿಡಿತದಲ್ಲಿ ಇಟ್ಟುಕೊಂಡಿದೆ. ಹೀಗಾಗಿ ಆಮದು ಆಗುತ್ತಿರುವ ವಸ್ತುಗಳ ಪ್ರಮಾಣ ತೀವ್ರವಾಗಿ ಕುಸಿದಿದೆ. ಮಾರುಕಟ್ಟೆ ಮತ್ತು ನಗರದ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳಿವೆ. ಆದರೆ ಅವುಗಳನ್ನು ಖರೀದಿಸುವಷ್ಟು ಶಕ್ತಿ ಜನರ ಬಳಿ ಇಲ್ಲ. ದೇಶದ ಯೆಮನ್ ರಿಯಲ್ ಮೌಲ್ಯ ತೀವ್ರವಾಗಿ ಕುಸಿದಿದ್ದು, ಸಣ್ಣ ಪುಟ್ಟ ಕೆಲಸಗಳಿಂದ ಗಳಿಸಿದ ಹಣದಿಂದ ದಿನಸಿ ಸಾಮಾನುಗಳನ್ನು ಖರೀದಿಸಲು ಜನರಿಗೆ ಸಾಧ್ಯವಾಗುತ್ತಿಲ್ಲ.