ಭೂಮಿಯಿಂದ 470 ಜ್ಯೋತಿರ್ವರ್ಷಗಳಷ್ಟು ದೂರವಿರುವ ಈ ಗ್ರಹ ಇದ್ದಲಿಗಿಂತಲೂ ಕಪ್ಪು!
ಫೋಕಸ್

ಭೂಮಿಯಿಂದ 470 ಜ್ಯೋತಿರ್ವರ್ಷಗಳಷ್ಟು ದೂರವಿರುವ ಈ ಗ್ರಹ ಇದ್ದಲಿಗಿಂತಲೂ ಕಪ್ಪು!

ಲಂಡನ್‌ನ ವಿಜ್ಞಾನಿಗಳು ಅತೀ ಕಪ್ಪು ಬಣ್ಣವನ್ನು ಹೊಂದಿರುವ ಗ್ರಹವೊಂದನ್ನು ಗುರುತಿಸಿದ್ದಾರೆ. ಅನಿಲಗಳಿಂದ ನಿರ್ಮಿತವಾಗಿರುವ ಈ ಗ್ರಹದ ಪರಿಭ್ರಮಣಾ ಅವಧಿ 1.76 ದಿನ ಮಾತ್ರ. 

ಇದುವರೆಗೂ ಪತ್ತೆಯಾಗಿರುವ ಕಪ್ಪು ಗ್ರಹಗಳ ಪೈಕಿ 4 ವರ್ಷಗಳ ಹಿಂದೆ ಕಂಡುಹಿಡಿಲಯಲ್ಪಟ್ಟ ಗ್ರಹವೇ ಅತೀ ಹೆಚ್ಚು ಕಪ್ಪು ಬಣ್ಣವನ್ನು ಹೊಂದಿದೆ ಎಂದು ಲಂಡನ್‌ನ ಕೀಲೆ ವಿಶ್ವವಿದ್ಯಾಲಯದ ಆಸ್ಟ್ರೋಫಿಸಿಕ್ಸ್‌ ವಿಭಾಗದ ತಂಡ ತಿಳಿಸಿದೆ. 2014ರ ವೇಳೆಯಲ್ಲಿ ಪತ್ತೆಯಾಗಿದ್ದ ಈ ಗ್ರಹ ಇದ್ದಲಿಗಿಂತಲೂ ಹೆಚ್ಚಿನ ಕಪ್ಪು ಬಣ್ಣವನ್ನು ಹೊಂದಿದೆ ಎಂದು ಅಸ್ಟ್ರೋಫಿಸಿಕ್ಸ್‌ ವಿಭಾದ ಸಂಶೋಧನ ತಂಡ ಮಾಹಿತಿ ನೀಡಿದೆ.

ಭೂಮಿಯಿಂದ ಸುಮಾರು 470 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ಗ್ರಹ ನಮ್ಮ ಸೌರ ಮಂಡಲದಲ್ಲಿನ ಗುರು ಗ್ರಹದಷ್ಟು ದೊಡ್ಡದಾಗಿದೆ. ವಿಜ್ಞಾನಿಗಳು ಈ ಗ್ರಹಕ್ಕೆ WASP-104b ಎಂದು ನಾಮಕರಣ ಮಾಡಿದ್ದಾರೆ. ಈ ಗ್ರಹ ತನ್ನ ಮೇಲ್ಮೈಯನ್ನು ಮುಟ್ಟುವ ನಕ್ಷತ್ರದ ಬೆಳಕಿನಲ್ಲಿ ಶೇ.97ರಿಂದ ಶೇ.99ರಷ್ಟು ಭಾಗವನ್ನು ಹೀರಿಕೊಳ್ಳುತ್ತವೆ. ಈ ಗ್ರಹದಿಂದ ಪ್ರತಿಫಲನಗೊಳ್ಳುವ ನಕ್ಷತ್ರದ ಬೆಳಕು ಕೇವಲ ಶೇ.1ರಿಂದ 3ರಷ್ಟು ಮಾತ್ರ. ಇಷ್ಟು ಪ್ರಮಾಣದ ಬೆಳಕನ್ನು ಹೀರಿಕೊಳ್ಳುವುದರ ಕಾರಣದಿಂದಾಗಿ ಈ ಗ್ರಹ ಇಷ್ಟು ಕಪ್ಪಾಗಿದೆ ಎಂಬುದು ವಿಜ್ಞಾನಿಗಳ ಅಭಿಮತ.

ಇದುವರೆಗೂ ಪತ್ತೆಯಾಗಿರು ಕಪ್ಪುಗ್ರಹಗಳ ಪೈಕಿ ಮೊದಲ 3 ಅತೀ ಕಪ್ಪು ಗ್ರಹಗಳಲ್ಲಿ WASP-104b ಕೂಡ ಸ್ಥಾನವನ್ನು ಪಡೆದುಕೊಂಡಿದೆ. ಕಪ್ಪು ಬಣ್ಣದ ಕಾರಣದಿಂದಾಗಿ ಈ ಗ್ರಹವನ್ನು ಪತ್ತೆ ಹಚ್ಚುವುದೇ ಕಷ್ಟ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Phys.org ಜಾಲತಾಣದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಈ ಗ್ರಹವು ಬಹುಶಃ ನೇರಳೆ ಬಣ್ಣವನ್ನು ಹೊಂದಿದ್ದು ನಂದುತ್ತಿರುವ ಕೆಂಡದಂತಿದೆ. ಈ ಗ್ರಹವನ್ನು ವಿಜ್ಞಾನಿಗಳು ನಾಸಾದ ಕೆಪ್ಲರ್‌ ಟೆಲಿಸ್ಕೋಪ್‌ ಬಳಸಿ ಪತ್ತೆ ಹಚ್ಚಿದ್ದಾರೆ.

ಹಾಟ್‌ ಜ್ಯುಪಿಟರ್:

ಈ ಗ್ರಹವೂ ಕೂಡ ನಮ್ಮ ಸೌರ ಮಂಡಲದಲ್ಲಿನ ಗುರು ಗ್ರಹದಂತೆ ಅನಿಲಗಳಿಂದ ನಿರ್ಮಿತವಾಗಿದೆ. ಸಾಮಾನ್ಯವಾಗಿ ನಕ್ಷತ್ರಗಳಿಗೆ ಹತ್ತಿರವಿರುವ ಜ್ಯುಪಿಟರ್‌ಗಳನ್ನು ಹಾಟ್‌ ಜ್ಯುಪಿಟರ್‌ಗಳೆಂದು ಕರೆಯಲಾಗುತ್ತದೆ.

ಈ ಜ್ಯುಪಿಟರ್‌ಗಳು ತಮ್ಮ ನಕ್ಷತ್ರದ ಸುತ್ತ ಒಂದು ಸುತ್ತುನ ತಿರುಗಿ ಬರಲು 10 ದಿನಕ್ಕಿಂತಲೂ ಕಡಿಮೆ ಅವಧಿಯನ್ನು ತೆಗೆದುಕೊಳ್ಳುತ್ತವೆ. ಅಂದರೆ ನಕ್ಷತ್ರಗಳಿಗೆ ಈ ಗ್ರಹಗಳು ಅಷ್ಟು ಹತ್ತಿರದಲ್ಲಿರುತ್ತವೆ. ಹತ್ತಿರದಲ್ಲಿರುವ ಕಾರಣದಿಂದ ಈ ಗ್ರಹಗಳ ಮೇಲ್ಮೈಯನ್ನು ತಲುಪುವ ಉಷ್ಣಾಂಶದ ಪ್ರಮಾಣವೂ ಹೆಚ್ಚು.

ಜತೆಗೆ ತಮ್ಮ ಮೇಲೆ ಬೀಳುವ ಬೆಳಕಿನಲ್ಲಿ ಶೇ.40ಕ್ಕಿಂತಲೂ ಕಡಿಮೆ ಮೊತ್ತದ ಬೆಳಕನ್ನು ಮಾತ್ರ ಪ್ರತಿಫಲನಗೊಳಿಸುತ್ತವೆ. ಆದಕಾರಣ ಈ ಗ್ರಹಗಳು ಯಾವಾಗಲೂ ಕೆಂಡದ ಉಂಡೆಗಳಂತೆ ಗೋಚರಿಸುತ್ತವೆ.

WASP-104b ಕೂಡ ಒಂದು ಹಾಟ್‌ ಜ್ಯುಪಿಟರ್‌. ಅನಿಲಗಳಿಂದ ನಿರ್ಮಿತವಾಗಿರುವ ಈ ಗ್ರಹಕ್ಕೆ ತನ್ನ ನಕ್ಷತ್ರದ ಸುತ್ತ ಒಂದು ಸುತ್ತು ಬರಲು (ಪರಿಭ್ರಮಣೆ) ತಗಲುವ ಸಮಯ ಕೇವಲ 1.76 ದಿನ. ನಕ್ಷತ್ರಕ್ಕೆ ಈ ಪರಿ ಹತ್ತಿರವಿದ್ದು, ತನ್ನ ಮೇಲ್ಮೈಯನ್ನು ತಲುಪುವ ಬೆಳಕಿನ ಭಾಗಶಃ ಅಂಶವನ್ನು ಹೀರಿಕೊಳ್ಳುವ ಗುಣ ಹೊಂದಿರುವ ಕಾರಣದಿಂದಾಗಿ WASP-104b ಇದ್ದಲಿಗಿಂತಲೂ ಹೆಚ್ಚು ಕಪ್ಪಾಗಿ ಕಾಣಿಸುತ್ತದೆ.

ಈ ಗ್ರಹದ ಇನ್ನೊಂದು ವಿಶೇಷತೆ ಏನೆಂದರೆ ಗ್ರಹದ ಒಂದು ಮುಖ ಮಾತ್ರ ಯಾವಾಗಲೂ ನಕ್ಷತ್ರಕ್ಕೆ ಅಭಿಮುಖವಾಗಿರುತ್ತದೆ. ಮತ್ತೊಂದು ಭಾಗ ನಕ್ಷತ್ರದ ಬೆಳಕನ್ನು ನೇರವಾಗಿ ಪಡೆಯುವುದಿಲ್ಲ. ಆದ್ದರಿಂದ ಒಂದು ಭಾಗ ತಂಪಾಗಿದ್ದು ಕಪ್ಪಾಗಿ ಕಾಣುತ್ತದೆ.

ವರದಿಗಳು ಹೇಳುವ ಪ್ರಕಾರ, ಇದುವರೆಗೂ ಪತ್ತೆಯಾಗಿರುವ ಗ್ರಹಗಳ ಪೈಕಿ ಅತೀ ಕಡಿಮೆ ಬೆಳಕನ್ನು ಈ ಗ್ರಹ ಪ್ರತಿಫಲಿಸುತ್ತದೆ. ನಕ್ಷತ್ರದ ಶಾಖದ ಕಾರಣದಿಂದಾಗಿ WASP-104b ಸುತ್ತಲಿನ ಮೋಡಗಳೆಲ್ಲವೂ ಸುಟ್ಟು ಹೋಗುತ್ತವೆ. ಆದ ಕಾರಣ ಈ ಗ್ರಹಕ್ಕೆ ಬೆಳಕನ್ನು ಪ್ರತಿಫಲಿಸುವ ಶಕ್ತಿಯಿಲ್ಲ.

ಈ ಗ್ರಹದ ಸುತ್ತ ಮಬ್ಬುಗವಿದ ದಪ್ಪನೆಯ ಪದರವಿದ್ದು ಆಟಾಮಿಕ್‌ ಸೋಡಿಯಮ್‌ ಮತ್ತು ಪೊಟ್ಯಾಷಿಯಮ್‌ನಿಂದ ಈ ಪದರ ನಿರ್ಮಿಸಲ್ಪಟ್ಟಿದೆ. ಈ ಸೋಡಿಯಮ್‌ ಮತ್ತು ಪೊಟ್ಯಾಷಿಯಮ್‌ಗಳು ತಮ್ಮ ಸುತ್ತಲಿನ ಬೆಳಕನ್ನು ಹೆಚ್ಚಾಗಿ ಹೀರಿಕೊಳ್ಳುತ್ತವೆ. ಒಂದೆಡೆ ಅತೀ ಸಮೀಪದಲ್ಲಿರುವ ನಕ್ಷತ್ರ, ಮತ್ತೊಂಡೆದೆ ಸೋಡಿಯಮ್‌ ಮತ್ತು ಪೊಟ್ಯಾಷಿಯಮ್‌ ಪದರ, ಈ ಎರಡರ ಕಾರಣದಿಂದಾಗಿ WASP-104b ಇದ್ದಲಿನಂತೆ ಕಾಣುತ್ತದೆ.

“ಸಧ್ಯದವರೆಗೂ ಪತ್ತೆ ಹಚ್ಚಲಾಗಿರುವ ಕಡುಗಪ್ಪು ಬಣ್ಣದ ಗ್ರಹಗಳಲ್ಲಿ ಇದೇ ಅತಿಹೆಚ್ಚು ಕಪ್ಪು ಬಣ್ಣವನ್ನು ಹೊಂದಿರುವ ಗ್ರಹವಾಗಿದೆ. WASP-104b ಗ್ರಹವನ್ನು ಗುರುತಿಸುವುದೇ ಕಷ್ಟ ಸಾಧ್ಯ. ಅದ್ದರಿಂದಲೇ ಈ ಗ್ರಹ ವಿಶಿಷ್ಟವೆನಿಸುತ್ತದೆ. ಕೆಪ್ಲರ್‌ ಟೆಲಿಸ್ಕೋಲ್‌ ಮೂಲಕ ದ್ಯುತಿಮಾಪನದ ಕುರಿತಾದ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದ್ದ ವೇಳೆಯಲ್ಲಿ WASP-104b ಗ್ರಹದಿಂದ ಬೆಳಕಿನ ಪ್ರತಿಫಲನ ಆಗದೇ ಇರುವುದು ಪತ್ತೆಯಾಯಿತು,” ಎಂದು ಸಂಶೋಧನಾ ತಂಡದ ಟಿಯೋ ಮೋಕ್ನಿಕ್‌ ತಿಳಿಸಿದ್ದಾರೆ.

ಈ ಹಿಂದೆ 2011ರಲ್ಲಿ ಪತ್ತೆಯಾಗಿದ್ದ ಕಪ್ಪು ಗ್ರಹವೊಂದು WASP-104b­ ಗ್ರಹದ ಕೆಲವು ಗುಣ ಲಕ್ಷಣಗಳನ್ನು ಹೊಂದಿತ್ತು. ಕೇವಲ ಶೇ.1ರಷ್ಟು ಬೆಳಕನ್ನು ಮಾತ್ರ ಪ್ರತಿಫಲಿಸುತ್ತಿದ್ದ ಈ ಗ್ರಹ ತನ್ನ ನಕ್ಷತ್ರದಿಂದ ಸುಮಾರು 3 ಮಿಲಿಯನ್‌ ಮೈಲಿಗಳಷ್ಟು ದೂರವಿದೆ ಎಂದು ಅಂದಾಜಿಸಲಾಗಿತ್ತು. ವಿಜ್ಞಾನಿಗಳು ಈ ಗ್ರಹಕ್ಕೆ TrES-2b ಎಂದು ನಾಮಕರಣ ಮಾಡಿದ್ದರು.