samachara
www.samachara.com
ಜಾವೇದ್ ಅಬಿದಿ ( ಚಿತ್ರಕೃಪೆ: www.thehansindia.com) 
ಜಾವೇದ್ ಅಬಿದಿ ( ಚಿತ್ರಕೃಪೆ: www.thehansindia.com) 
ಫೋಕಸ್

48 ವರ್ಷಗಳ ಬಳಿಕ ಆ ಒಂದು ಕಾನೂನು: ವಿಕಲ ಚೇತನರ ಬಾಳ ಬೆಳಕು ಅಬಿದಿ ನೆನಪು

ವಿಶ್ವನಾಥ್ ಬಿ. ಎಂ

ವಿಶ್ವನಾಥ್ ಬಿ. ಎಂ

ವಿಶೇಷ ಚೇತನರ ಹಕ್ಕುಗಳ ಕಾರ್ಯಕರ್ತರಾಗಿದ್ದ ಜಾವೇದ್‌ ಅಬಿದಿ ಕಳೆದ ಭಾನುವಾರ ಎದೆಯ ಸೋಂಕಿನ ಕಾರಣದಿಂದ ದೆಹಲಿಯಲ್ಲಿ ನಿಧನರಾಗಿದ್ದಾರೆ. 53 ವರ್ಷದ ಅವರು, ಇನ್ನಷ್ಟು ವರ್ಷಗಳ ಕಾಲ ಬದುಕಬೇಕಿತ್ತು ಎಂಬುದು ಕೇವಲ ವಿಶೇಷ ಚೇತನರದ್ದಷ್ಟೇ ಅಲ್ಲದೇ, ಉಳಿದವರ ಅಭಿಲಾಷೆಯೂ ಆಗಿತ್ತು. ಸ್ವತಃ ಅಂಗವೈಕಲ್ಯದಿಂದ ಬಳಲಿ ಅದರ ಸಮಸ್ಯೆಗಳನ್ನು ಅನುಭವಿಸಿದ್ದ ಜಾವೇದ್ ಅಬಿದಿ, ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾನೂನಿನ ಮೂಲಕ ಸಾಕಷ್ಟು ಪರಿಶ್ರಮ ಪಟ್ಟಿದ್ದರು.

ಜಾವೇದ್ ಅಬಿದಿ:

ಜಾವೇದ್ ಅಬಿದಿ ಅವರು ಜನಿಸಿದ್ದು 1965ರಲ್ಲಿ. ದೇಶದ ರಾಜಧಾನಿ ದೆಹಲಿಯಿಂದ 145 ಕಿ.ಮೀ ದೂರವಿರುವ ಅಲಿಗಡ್‌ದಲ್ಲಿ. ಅಲಿಘಡ ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದ್ದು. ಅವರು ಬಾಲ್ಯದಿಂದಲೇ ಸ್ಪಿನಾ ಬೈಫಿಡಾ (spina bifida) ಎಂಬ ಖಾಯಿಲೆಗೆ ತುತ್ತಾದರು. spina bifida ಎಂದರೆ ಬೆನ್ನುಮೂಳೆ ಮತ್ತು ಬೆನ್ನು ಹುರಿಯು ಹುಟ್ಟಿನಿಂದಲೇ ಸರಿಯಾಗಿ ಬೆಳೆಯದಿರುವುದು. ಈ ಖಾಯಿಲೆಗೆ ಜಾವೇದ್ ಅವರಿಗೆ ಬಾಲ್ಯದ ಆರಂಭದ ವರ್ಷಗಳಲ್ಲಿ ಸರಿಯಾದ ಚಿಕಿತ್ಸೆ ನೀಡಲಾಗಲಿಲ್ಲ. ಹೀಗಾಗಿ ನರಗಳ ದೌರ್ಬಲ್ಯಕ್ಕೂ ತುತ್ತಾಗಬೇಕಾಯಿತು. 10 ವರ್ಷದವರಿದ್ದಾಗಲೇ ಜಾವೇದ್ ಶಸ್ತ್ರ ಚಿಕಿತ್ಸಗೆ ಒಳಗಾದವರು. ಆದರೂ ಅವರ ಸಮಸ್ಯೆ ಪರಿಹಾರವಾಗಲಿಲ್ಲ.

ಇದಾದ ನಂತರ , ಜಾವೇದ್ ಪೋಷಕರು ಭಾರತವನ್ನು ಬಿಟ್ಟು ದೂರದ ಅಮೇರಿಕಕ್ಕೆ ತೆರಳಿದರು. ಅಲ್ಲಿನ ಬಾಸ್ಟನ್ ಚಿಲ್ಡ್ರನ್ಸ್ ಹಾಸ್ಪಿಟಲ್ ಮತ್ತು ಚಿಕಾಗೋದ ಪುನರ್ವಸತಿ ಸಂಸ್ಥೆಯಲ್ಲಿ ಜಾವೇದ್ ಬೆಳೆದರು. ಇಲ್ಲಿ ಅವರಿಗೆ ವಿಶೇಷವಾಗಿ ಕಾಳಜಿಯನ್ನು ವಹಿಸಲಾಯಿತು. ತಮ್ಮ ಹದಿನೈದನೇ ವಯಸ್ಸಿನಲ್ಲಿ ಅವರು ಬೇರೆ ಕಡೆಗೆ ಓಡಾಡಲು ‘ವ್ಹೀಲ್ ಚೇರ್‌’ಗಳನ್ನು ಬಳಸಿದರು. ಬಹುತೇಕ ಕಷ್ಟದ ಪರಿಸ್ಥಿತಿಯಲ್ಲಿಯೇ ಬೆಳೆದ ಅವರು, ಅಮೇರಿಕದ ‘ರೈಟ್ ಸ್ಟೇಟ್ ಯೂನಿವರ್ಸಿಟಿ’ಯಲ್ಲಿ ಪತ್ರಿಕೋಧ್ಯಮ ಅಧ್ಯಯನ ಮಾಡಿದರು. ತದನಂತರ 1989ರಲ್ಲಿ ವೃತ್ತಿಜೀವನಕ್ಕಾಗಿ ವಾಪಾಸ್ ಬಂದಿದ್ದು ಭಾರತಕ್ಕೆ.

1993ರಲ್ಲಿ ಜಾವೇದ್, ಸೋನಿಯಾ ಗಾಂಧಿಯವರ ಆಹ್ವಾನದ ಮೇರೆಗೆ ‘ರಾಜೀವ್ ಗಾಂಧಿ ಫೌಂಡೇಶನ್‌’ ಅಡಿಯಲ್ಲಿ ‘Disabilities Unit’ ಪ್ರಾರಂಭಿಸಿದರು. ಒಂದು ವರ್ಷದ ನಂತರ, 'ವಿಕಲ ಚೇತನರ ಹಕ್ಕುಗಳ ಗುಂಪು' ಎಂಬ ವಕೀಲರ ತಂಡಕ್ಕೆ ಸೇರಿದರು. ಭಾರತದ ವಿಶೇಷ ಚೇತನರಿಗೆ ದೊರೆಯಬೇಕಾದ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಆರಂಭಿಸಿದರು. ಅವರಿಗಾಗಿಯೇ ವಿಶೇಷ ಮಸೂದೆ ಜಾರಿಗೆ ತರಲು ಶತ ಪ್ರಯತ್ನ ನಡೆಸಿದರು. ಇದಕ್ಕಾಗಿಯೇ 1995ರ ಡಿಸೆಂಬರ್ 19ರಂದು ಸಂಸತ್ ಎದುರು ಅವರು ಹೋರಾಟ ಆರಂಭಿಸಿದರು. ಇದರ ಪ್ರತಿಫಲಾಗಿ 1995ರ ಡಿಸೆಂಬರ್ 22ರಂದು ‘ Persons with Disabilities Act’ ಅನ್ನು ಸಂಸತ್‌ನಲ್ಲಿ ಯಾವುದೇ ವಿರೋಧ ಇಲ್ಲದೇ ಅನುಮೋದನೆ ಮಾಡಲಾಯಿತು.

National Centre for Promotion of Employment for Disabled People (NCPEDP)

ರಾಜೀವ್ ಗಾಂಧಿ ಫೌಂಡೇಶನ್ ವತಿಯಿಂದ ಅಂಗವಿಕಲರಿಗಾಗಿ ಉದ್ಯೋಗ ಉತ್ತೇಜನ ಮಾಡುವ ರಾಷ್ಟ್ರೀಯ ಕೇಂದ್ರವೊಂದನ್ನು ಸ್ಥಾಪಿಸಿ, ಜಾವೇದ್ ಅಬಿದಿ ಅವರೇ ಇದರ ನಿರ್ದೇಶಕರಾಗಿ ನೇಮಕವಾದರು. ಐಬಿಎಂ, ಆಪಲ್, ಒರಾಕಲ್ ಕಾರ್ಪೋರೇಶನ್, ಸಿಸ್ಕೊ ಸಿಸ್ಟಮ್ಸ್, ಮೈಕ್ರೋಸಾಫ್ಟ್ ಮತ್ತು ಹೆಚ್‌ಪಿಯಂತಹ ಹೈಟೆಕ್ ಕಂಪನಿಗಳಲ್ಲಿಯೂ ಅಂಗವಿಕಲರನ್ನು ನೇಮಿಸಿಕೊಳ್ಳಬೇಕು. ಅವರಿಗೆ ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿದರು.

ಅಷ್ಟೇ ಅಲ್ಲದೇ ಸರಕಾರಿ ಕಚೇರಿಗಳು, ಶಾಲೆಗಳು, ಸಾರ್ವಜನಿಕ ಸ್ಥಳ, ಸಾರಿಗೆ ಮತ್ತು ಮತದಾನದ ಬೂತ್‌ಗಳಲ್ಲಿ ವಿಶೇಷ ಚೇತನರ ಪ್ರವೇಶಕ್ಕೆ ಅನುಕೂಲ ಕಲ್ಪಸಿಕೊಟ್ಟರು. ಅನೇಕ ಕಟ್ಟಡಗಳಲ್ಲಿ ಇಳಿಜಾರುಗಳ ರೂಪದಲ್ಲಿ ನಿರ್ಮಿಸಲಾದ ಕೆಲವು ಮಾದರಿಗಳು ಸ್ಥಾಪನೆಯಾಗಲು ಕಾರಣರಾದವರೇ ಜಾವೇದ್ ಅಬಿದಿ.

2000ರಲ್ಲಿ ಜಗತ್ತಿನ ಪ್ರಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಭಾರತದ ಪ್ರವಾಸಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯುನ್ ಸಮಾಧಿ ಮತ್ತು ಜಂತರ್ ಮಂತರ್‌ಗಳ ಪ್ರಸಿದ್ಧ ಸ್ಮಾರಕಗಳಲ್ಲಿ ‘ವ್ಲೀಲ್‌ ಚೇರ್‌ ರ್ಯಾಂಪ್’ ಸೌಲಭ್ಯವನ್ನು ನಿರ್ಮಿಸಬೇಕು ಎಂದು ಭಾರತ ಪುರಾತತ್ವ ಇಲಾಖೆಯನ್ನು (Archaeological Survey of India) ಒತ್ತಾಯಿಸಿದರು. ಜೊತೆಗೆ, ಮುಂದಿನ 2 ವರ್ಷಗಳಲ್ಲಿ ವಿಶೇಷ ಚೇತನರ ಸಮಸ್ಯೆಗಳು ಮತ್ತು ಕೆಲಸಗಳ ಅವಕಾಶಗಳ ಬಗ್ಗೆ ಜಾವೇದ್ ಹೆಚ್ಚಿನ ಗಮನ ಹರಿಸಿದರು.

THE PERSONS WITH DISABILITIES (EQUAL OPPORTUNITIES, PROTECTION OF RIGHTS AND FULL PARTICIPATION) ACT, 1995

ಜಾವೇದ್ ಅಬಿಬ್ ಅವರ ಹೋರಾಟದ ಫಲವಾಗಿ ವಿಶೇಷ ಚೇತನ ವ್ಯಕ್ತಿಗಳಿಗೂ ಸಮಾಜದಲ್ಲಿ ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಭಾರತ ಸರಕಾರವು 1996ರ ಫೆಬ್ರುವರಿ 7 ರಂದು The Persons with Disabilities (Equal Opportunities, Protection of Rights and Full Participation) Act ಜಾರಿಗೆ ತಂದಿತು. ಈ ಅಧಿನಿಯಮದ ಪ್ರಕಾರ, ವಿಶೇಷ ಚೇತನರನ್ನು ಗುರುತಿಸಿ ಅಂತಹ ವ್ಯಕ್ತಿಗಳಿಗೆ ಕೆಲವು ವಿಶೇಷ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಒದಗಿಸಲಾಯಿತು.

ಶಿಕ್ಷಣ, ಉದ್ಯೋಗ ಮತ್ತು ವೃತ್ತಿ ತರಬೇತಿ, ಮೀಸಲಾತಿ, ಸಂಶೋಧನೆ, ಪುನರ್ವಸತಿ, ನಿರುದ್ಯೋಗ ಭತ್ಯೆ, ವಿಶೇಷ ವಿಮೆ ಯೋಜನೆ ಹೀಗೆ ಹಲವು ಸೌಲಭ್ಯಗಳನ್ನು ವಿಶೇ‍ಷ ಚೇತನರಿಗಾಗಿ ಜಾರಿಗೆ ತರಲಾಯಿತು. ಈ ಅಧಿನಿಯಮದ ಪ್ರಮುಖ ಅಂಶಗಳು ಹೀಗಿವೆ:

 • ವಿಕಲಾಂಗತೆಯನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು ಮತ್ತು ಅದನ್ನು ಸಾಧ್ಯವಾದಷ್ಟು ತಡೆಯುವುದು
 • ವಿಕಲಾಂಗತೆ ಉಂಟಾಗುವ ಕಾರಣವನ್ನು ಸರಿಯಾಗಿ ಪತ್ತೆ ಹಚ್ಚಲು ಸಂಶೋಧನೆಗಳನ್ನು ನಡೆಸಬೇಕು
 • ವಿಕಲಾಂಗತೆಯನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಸಿಬ್ಬಂದಿಗೆ ಈ ಕೆಲಸದಲ್ಲಿ ಸಹಾಯ ಮಾಡಲು ತರಬೇತಿ ನೀಡಬೇಕು
 • ತುಂಬ ಗಂಭೀರ ಸ್ಥಿಯಲ್ಲಿರುವ ವಿಶೇಷ ಚೇತನರನ್ನು ಗುರುತಿಸಿ ಪ್ರತಿವರ್ಷವೂ ವರದಿ ಸಲ್ಲಿಸಬೇಕು
 • ವಿಕಲಾಂಗತೆಯ ಬಗ್ಗೆ ಜಾಗೃತಿ ಅಭಿಯಾನಗಳನ್ನು ಮಾಡಬೇಕು
 • ಅಭಿಯಾನಗಳಲ್ಲಿ ಮಾಹಿತಿ ಪ್ರಸಾರ ಮಾಡಲು ಸರಕಾರವೇ ಪ್ರಾಯೋಜಕತ್ವ ನೀಡಬೇಕು

ವಿಶೇಷ ಚೇತನರು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿಯದಂತೆ ನೋಡಿಕೊಳ್ಳಬೇಕು. ಅವರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ‘ದಿ ಪರ್ಸನ್‌ ವಿಥ್ ಡಿಸೆಬಿಲಿಟಿ ಆಕ್ಟ್’ ನಲ್ಲಿ ಹೇಳಲಾಗಿದೆ. ವಿಶೇಷ ಚೇತನರಿಗೆ ನೀಡಿದ ಸೌಲಬ್ಯ ಮತ್ತು ಹಕ್ಕುಗಳು ಇಂತಿವೆ....

 • ವಿಶೇ‍ಷ ಚೇತನರು ಉಚಿತ ಶಿಕ್ಷಣ ಪಡೆಯುವ ಹಕ್ಕನ್ನು ಹೊಂದಿದ್ದಾರೆ
 • ಸಾರಿಗೆ ಸಮಯದಲ್ಲಿ ಸೂಕ್ತ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು
 • ಪರೀಕ್ಷೆಯ ವಿಧಾನದಲ್ಲಿ ಮಾರ್ಪಾಡುಗಳನ್ನು ಮಾಡಿ ವಿಶೇ‍ಷವಾಗಿ ಅವರಿಗೆ ಪರೀಕ್ಷೆ ನಡೆಸಬೇಕು.
 • ಉಚಿತ ಪುಸ್ತಕ, ವಿದ್ಯಾರ್ಥಿ ವೇತನ, ಸಮವಸ್ತ್ರ ಮತ್ತು ಇತರ ಕಲಿಕೆಯ ವಸ್ತುಗಳನ್ನು ಪೂರೈಸಬೇಕು.
 • ವಿಶೇಷ ಚೇತನರಿಗಾಗಿಯೇ ವಿಶೇ‍ಷ ಶಾಲೆಗಳನ್ನು ತೆರೆಯಬೇಕು.
 • ವೃತ್ತಿಪರ ತರಬೇತಿ ಸೌಲಭ್ಯಗಳನ್ನು ವಿಶೇಷಚೇತನರಿಗೆ ನೀಡಬೇಕು.
 • ಔಪಚಾರಿಕ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣವನ್ನೂ ವಿಶೇಷ ಚೇತನರಿಗೆ ನೀಡಬೇಕು.
 • ವಿಶೇಷ ಚೇತನರಿಗೆ ಶಿಕ್ಷಣ ನೀಡುವಂತ ಅಗತ್ಯ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಬೇಕು.
 • ವಿಶೇಷ ಚೇತನರಿಗೆ ಶಿಕ್ಷಣ ನೀಡಲು ಶಿಕ್ಷಕರ ತರಬೇತಿ ಸಂಸ್ಥೆಗಳು ಸ್ಥಾಪಿಸಲ್ಪಡಬೇಕು

ಉದ್ಯೋಗ ವಿಚಾರದಲ್ಲಿ ಅನೇಕ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ನೀಡಲಾಯಿತು. ಅವು....

 • ಸರ್ಕಾರಿ ಉದ್ಯೋಗದಲ್ಲಿ ಒಟ್ಟಾರೆ 3% ರಷ್ಟು ಹುದ್ದೆಗಳನ್ನು ಮೀಸಲಿಡಬೇಕು.
 • ಕಡಿಮೆ ದೃಷ್ಟಿದೋಷ, ಶ್ರವಣ ದೋಷ, ಸೆರೆಬ್ರಲ್ ಪಾಲ್ಸಿಯಂತಹ ಖಾಯಿಲೆಯಿಂದ ಬಳಲುವ ವಿಶೇಷ ಚೇತನರಿಗೆ 1% ನಷ್ಟು ಕಡ್ಡಾಯವಾಗಿ ಪ್ರತಿ ಇಲಾಖೆಯಲ್ಲಿ ಮೀಸಲಾತಿ ನೀಡಬೇಕು.
 • ಸರ್ಕಾರದ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರದ ಅನುದಾನವನ್ನು ಪಡೆಯುವ ಇತರ ಶೈಕ್ಷಣಿಕ ಸಂಸ್ಥೆಗಳು ವಿಶೇಷ ಚೇತನರಿಗಾಗಿಯೇ ಕನಿಷ್ಠ 3% ಸ್ಥಾನಗಳನ್ನು ಕಾಯ್ದಿರಿಸಬೇಕು.
 • ಸೇವೆಯ ಸಮಯದಲ್ಲಿ ಸಮಸ್ಯೆಯಾದರೆ (ಅಂಗವೈಕಲ್ಯ) ಉದ್ಯೋಗಿಯನ್ನು ವಜಾ ಮಾಡಬಾರದು. ಅವರಿಗೆ ಅದೇ ವೇತನವನ್ನು ನೀಡಿ ಬೇರೆ ಹುದ್ದೆಗೆ ವರ್ಗಾಯಿಸಬೇಕು. ದೈಹಿಕ ದುರ್ಬಲತೆಯ ಕಾರಣದಿಂದಲೇ ಯಾವುದೇ ಭಡ್ತಿಯನ್ನು ಕಡಿತಗೊಳಿಸಬಾರದು.
 • ವಿಶೇ‍ಷ ಚೇತನ ಸರಕಾರಿ ನೌಕರರಿಗೆ ವಿಮಾ ರಕ್ಷಣೆ ನೀಡಬೇಕು.

ಇತರೆ ಸೌಲಭ್ಯಗಳು....

 • ವಿಶೇ‍ಷ ಚೇತನರಿಗೆ ಮನೆ ಕಟ್ಟಲು ರಿಯಾಯಿತಿ ದರದಲ್ಲಿ ಭೂಮಿಯನ್ನು ಹಂಚಬೇಕು.
 • ವಿಶೇ‍ಷ ಚೇತನರಿಗಾಗಿಯೇ ಮನೋರಂಜನಾ ಕೇಂದ್ರಗಳನ್ನು ತೆರೆಯಲು, ವಿಶೇಷ ಶಾಲೆಗಳನ್ನು ತೆರೆಯಲು ಮತ್ತು ಸಂಶೋಧನಾ ಕೇಂದ್ರಗಳನ್ನು ನಿರ್ಮಿಸಲು ರಿಯಾಯಿತಿ ದರದಲ್ಲಿ ಭೂಮಿ ನೀಡಬೇಕು.
 • ಸಾರ್ವಜನಿಕ ಕಟ್ಟಡ, ರೈಲು, ಬಸ್ಸು, ಹಡಗುಗಳು ಮತ್ತು ಇತರೆ ಕಡೆಗಳಲ್ಲಿ ವಿಶೇ‍ಷ ಚೇತನರಿಗೆ ಸುಲಭವಾಗಿ ಪ್ರವೇಶ ಪಡೆಯುವುವಂತೆ ವಿನ್ಯಾಸ ಮಾಡಬೇಕು.
 • ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಕಾಯ್ದಿರಿಸಿದ ಕೊಠಡಿಗಳಲ್ಲಿ ಮತ್ತು ಶೌಚಾಲಯಗಳು ‘ವೀಲ್ ಚೇರ್’ ಗಳ ಸೌಲಭ್ಯಗಳನ್ನು ಒದಗಿಸಬೇಕು.
 • ಎಲ್ಲಾ ಎಲಿವೇಟರ್ಗಳಲ್ಲಿ (ಲಿಫ್ಟ್) ಬ್ರೈಲ್ ಮತ್ತು ಧ್ವನಿ ಚಿಹ್ನೆಗಳನ್ನು ಸಹ ಒದಗಿಸಬೇಕು.

ಯಾವುದೇ ಸಂದರ್ಭದಲ್ಲಿ ವಿಶೇ‍ಷ ಚೇತನರಿಗೆ ಯಾವುದೇ ಅಧಿಕಾರಿ ಅಥವಾ ಇಲಾಖೆಯೂ ಈ ಸವಲತ್ತುಗಳ ನಿರಾಕರಣೆಯನ್ನು ಮಾಡಕೂಡದು. ಒಂದು ವೇಳೆ ಈ ಸವಲತ್ತುಗಳು ಅವರಿಗೆ ದೊರೆಯದಿದ್ದರೆ, ಸಂಬಂಧಪಟ್ಟ ಇಲಾಖೆಯ ಆಯುಕ್ತರ ಮುಖಾಂತರ ತಮಗೆ ದೊರೆಯಬೇಕಾದ ಸೌಲಭ್ಯ ಮತ್ತು ಹಕ್ಕುಗಳನ್ನು ಅವರು ಪಡೆಬಹುದಾಗಿದೆ. ಆದರೆ ವಾಸ್ತವದಲ್ಲಿ ಈ ಕಾನೂನು ವ್ಯವಸ್ಥಿತ ರೀತಿಯಲ್ಲಿ ಜಾರಿಯಾಗಲಿಲ್ಲ ಎನ್ನುವ ಆರೋಪಗಳೂ ಕೇಳಿ ಬಂದಿವೆ. ಅಂಗವಿಕಲರಿಗೆ ಸರಿಯಾದ ಶಿಕ್ಷಣ, ಸೌಲಭ್ಯ, ಸಮಾನ ಅವಕಾಶಗಳು ಕಾನೂನಿನಲ್ಲಿ ಹೇಳುವ ಮಟ್ಟಿಗೆ ದೊರಕುತ್ತಿಲ್ಲ ಎಂಬ ಟೀಕೆಗಳನ್ನು ಇಂದಿಗೂ ಸರಕಾರಗಳು ಎದುರಿಸುತ್ತಿವೆ.