ಇದು ‘ಪತಿ- ಪತ್ನಿ’ ಸಂಬಂಧ: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವೇಳೆಯಲ್ಲಿ ಮರುಕಳಿಸಿದ ಅನುಬಂಧ!
ಫೋಕಸ್

ಇದು ‘ಪತಿ- ಪತ್ನಿ’ ಸಂಬಂಧ: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವೇಳೆಯಲ್ಲಿ ಮರುಕಳಿಸಿದ ಅನುಬಂಧ!

ವೈವಾಹಿಕ ಜೀವನದ ಏಳು ಬೀಳುಗಳಿಂದ ಸಾರ್ವಜನಿಕವಾಗಿ ದೂರವೇ ಉಳಿಯುತ್ತಿದ್ದ ಈ ‘ಅಪೂರ್ವ ಪ್ರೇಮಿ’ಗಳು ಚುನಾವಣಾ ಪ್ರಚಾರದಲ್ಲಿ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಪ್ರೇಮ ಚುನಾವಣೆಯಲ್ಲಿ ಕೈ ಹಿಡಿಯಲಿದೆಯಾ?

ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಕಣ ನಿಧಾನವಾಗಿ ಕಾವೇರುತ್ತಿದೆ. ಬಲಾಢ್ಯ ರಾಷ್ಟ್ರದ ಮೊದಲ ಅಧ್ಯಕ್ಷೆಯಾಗಲು ಹೊರಟಿರುವ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅಖಾಡಕ್ಕಿಳಿದಿದ್ದಾರೆ. ಪತಿ-ಪತ್ನಿಯರ ಜುಗಲ್ ಬಂದಿ ಪ್ರಚಾರ ಅಮೆರಿಕಾದಲ್ಲೀಗ ಸದ್ದು ಮಾಡುತ್ತಿದೆ.ಚುನಾವಣೆ ಸಮೀಪಿಸುತ್ತಿದೆ. ರಿಪಬ್ಲಿಕ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಆಕ್ರಮಣಕಾರಿ ಪ್ರಚಾರಕ್ಕಿಳಿದಿದ್ದರೆ, ಆಡಳಿತರೂಢ ಡೆಮಾಕ್ರಾಟಿಕ್ ಪಕ್ಷದ ಪರವಾಗಿ ಹಿಲರಿ ಕ್ಲಿಂಟನ್ ಕಣಕ್ಕಿಳಿದ್ದಿದ್ದಾರೆ. ತಮ್ಮ ಸಹೋದ್ಯೋಗಿ ಪರ ಪ್ರಚಾರಕ್ಕೆ ಸ್ವತಃ ಅಧ್ಯಕ್ಷ ಬರಾಕ್ ಒಬಾಮ ಪ್ರಚಾರಕ್ಕಿಳಿದಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ಸುದ್ದಿಯಾಗುತ್ತಿರುವುದು ಪತ್ನಿಯ ಪರವಾಗಿ ಪ್ರಚಾರಕ್ಕಿಳಿದಿರುವ ಬಿಲ್ ಕ್ಲಿಂಟನ್. ವೈವಾಹಿಕ ಜೀವನದ ಏಳು ಬೀಳುಗಳಿಂದ ಸಾರ್ವಜನಿಕವಾಗಿ ದೂರವೇ ಉಳಿಯುತ್ತಿದ್ದ ಈ ‘ಅಪೂರ್ವ ಪ್ರೇಮಿ’ಗಳು ಚುನಾವಣಾ ಪ್ರಚಾರದಲ್ಲಿ ಮತ್ತೆ ಒಂದಾಗಿದ್ದಾರೆ.

ಅಪೂರ್ವ ಪ್ರೇಮಿಗಳು: ಬಿಲ್ ಕ್ಲಿಂಟನ್ ಮತ್ತು ಹಿಲರಿ ರೊದ್ದಂ ಇಬ್ಬರದ್ದೂ ಶಾಲಾ ದಿನಗಳ ಪ್ರೀತಿ. ಇವರಿಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದು ಲೈಬ್ರರಿಯಲ್ಲಿ. ಅದೊಂದು ದಿನ ಗ್ರಂಥಾಲಯದಲ್ಲಿ ಪುಸ್ತಕ ಕೈಗೆತ್ತಿಕೊಂಡ ಬಿಲ್ ಹರೆಯದ ಸಹಜ ಆಕರ್ಷಣೆಯಲ್ಲಿ ಹಿಲರಿ ಕಡೆ ವಾರೆ ನೋಟ ಬೀರಿದರು. ಕಣ್ಸನ್ನೆಗೆ ಮರುಳಾದ ಹಿಲರಿಯೂ ತಿರುಗಿ ನೋಡಲು ಆರಂಭಿಸುತ್ತಿದ್ದಂತೆ ‘ಲವ್ ಅಟ್ ಫರ್ಸ್ ಸೈಟ್’ ನಡೆದು ಹೋಗಿತ್ತು. ಕಣ್ಣಿನ ಸಮಾಗಮ ಮುಗಿದಾಗ ಬಿಲ್ ಧೈರ್ಯ ಮಾಡಿ ಹಿಲರಿ ಬಳಿಗೆ ತೆರಳಿ ಪರಿಚಯ ಮಾಡಿಕೊಂಡರು. ಹೀಗೆ ಇವರಿಬ್ಬರ ಪ್ರಥಮ ಭೇಟಿ ನಡೆಯಿತು.

ಅಲ್ಲಿಂದ ಪಾರ್ಕ್, ಐಸ್ ಕ್ರೀಂ ಶಾಪ್ ಅಂತ ಅವರಿಬ್ಬರ ಸುತ್ತಾಟಗಳು ಆರಂಭವಾದವು. ಇಬ್ಬರೂ ಒಳಗೆ ಪ್ರೀತಿ ಇಟ್ಟುಕೊಂಡು ಹೊರಗಡೆ ಗೆಳೆಯರಂತೆ ಸುತ್ತಾಡುತ್ತಿದ್ದರು. ಕೊನೆಗೊಂದು ದಿನ ಧೈರ್ಯ ಮಾಡಿ ಪ್ರೊಪೋಸ್ ಮಾಡುವ ಪ್ಲಾನ್ ಹಾಕಿಕೊಂಡು ಗೆಳತಿಯನ್ನು ಕರೆದುಕೊಂಡು ಬಿಲ್ ಯೂರೋಪ್ ಪ್ರವಾಸಕ್ಕೆ ಹೊರಟರು.

ಅದೊಂದು ಮುಂಜಾನೆ ಸೂರ್ಯೋದಯದ ಹೊತ್ತಲ್ಲಿ ಇಬ್ಬರೂ ಸರೋವರದ ದಂಡೆಯಲ್ಲಿ ಮರಳ ಮೇಲೆ ನಿಂತಿದ್ದರು. ಅಹ್ಲಾದಕರ ವಾತಾವರಣದಲ್ಲಿ ಧೈರ್ಯ ಮಾಡಿ ಬಿಲ್ ವಿನಮ್ರವಾಗಿ ‘ಐ ಲವ್ ಯೂ..’ ಅಂದೇ ಬಿಟ್ಟರು. ಆದರೆ ಒಪ್ಪಿಕೊಳ್ಳಲು ಹಿಂಜರಿದ ಹಿಲರಿ ನನಗೆ ಸಮಯ ನೀಡು ಎಂದಷ್ಟೇ ಹೇಳಿ ಸುಮ್ಮನಾದರು.ಯೂರೋಪ್‍ನಿಂದ ಅಮೆರಿಕಾ ಏರ್‍ಪೋರ್ಟ್‍ನಲ್ಲಿ ಇಳಿದವರಿಗೆ ಮನೆಗೆ ಹಾದಿಯಲ್ಲಿ ಕೆಂಪು ಮನೆಯೊಂದು ಕಣ್ಣಿಗೆ ಬಿತ್ತು. ‘ಫಾರ್ ಸೇಲ್’ ಬೋರ್ಡ್ ತಗುಲಿ ಹಾಕಿಕೊಂಡಿದ್ದ ಆ ಮನೆ ಹಿಲರಿಗೆ ಇಷ್ಟವಾಯಿತು. ಇದಾಗಿ ಕೆಲವೇ ದಿನದಲ್ಲಿ ಬಿಲ್ ಅದನ್ನು ಖರೀದಿಸಿ ಬಿಟ್ಟರು. ಇನ್ನೊಮ್ಮೆ ಅದೇ ದಾರಿಯಲ್ಲಿ ಏರ್‍ಪೋರ್ಟ್‍ಗೆ ಬರುವಾಗ ‘ನಿನಗೆ ಮನೆ ಇಷ್ಟವಾಗಿತ್ತಲ್ಲ, ಅದನ್ನು ಕೊಂಡುಕೊಂಡೆ. ಅಲ್ಲಿ ಒಬ್ಬನೇ ಇರಲು ಬೇಜಾರು. ನನ್ನ ಮದುವೆಯಾಗು,’ ಅಂತ ಒಂದು ಹೆಜ್ಜೆ ಮುಂದೆ ಹೋಗಿ ವಿವಾಹದ ಪ್ರಸ್ತಾಪವಿಟ್ಟರು. ಈ ಬಾರಿ ಹಿಲರಿ ಒಪ್ಪಿಕೊಂಡು ಬಿಟ್ಟರು.

ಹೀಗೆ ಪ್ರೇಮಿಗಳು ತಮ್ಮ ಸಂಬಂಧಕ್ಕೆ 1975ರಲ್ಲಿ ಅಧಿಕೃತ ಮದುವೆಯ ಮುದ್ರೆಯೊತ್ತಿದರು. ಇದಾದ ಬಳಿಕ ದಾಂಪತ್ಯದಲ್ಲಿ ಬಿರುಗಾಳಿ ಏಳುವಂತ ಘಟನೆಗಳೆಲ್ಲಾ ನಡೆದು ಹೋದವು. ಹೀಗಿದ್ದೂ ಅಮೆರಿಕಾದಂತ ಮುಕ್ತ ಸಮಾಜದಲ್ಲಿಯೂ ಈ ಜೋಡಿ 41 ವರ್ಷಗಳಿಂದ ಜೊತೆಗೇ ಇದ್ದಾರೆ ಎನ್ನುವುದೇ ಅಚ್ಚರಿಯ ವಿಷಯ.ಬಿಲ್ ಕ್ಲಿಂಟನ್ 1997ರಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾದ ಅವಧಿಯಲ್ಲಿ ಮೊನಿಕಾ ಲೆವಿನ್ಸ್ಕಿ ಎಂಬ 22 ವರ್ಷದ ಹುಡುಗಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡ ಸಂಗತಿ ಬಯಲಾಯಿತು. ಅಮೆರಿಕಾ ಅಧ್ಯಕ್ಷರ ಅಧಿಕೃತ ನಿವಾಸ, ವೈಟ್ ಹೌಸ್‍ನಲ್ಲಿ ನಡೆದಿದ್ದ ಈ ಘಟನೆ 1998ರಲ್ಲಿ ಹೊರ ಬಿದ್ದಾಗ ಅಲ್ಲಿನ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಯಿತು.‘ಲೆವಿನ್ಸ್ಕಿ ಪ್ರಕರಣ’ ಎಂದೇ ಕುಖ್ಯಾತಿ ಗಳಿಸಿದ ಘಟನೆಯಯಿಂದಾಗಿ ಬಿಲ್ ಕ್ಲಿಂಟನ್ ತನ್ನ ವಕೀಲಿ ವೃತ್ತಿಯ ಲೈಸೆನ್ಸ್ ಕಳೆದುಕೊಳ್ಬೇಕಾಯ್ತು; ದಂಡ ಕಟ್ಟಬೇಕಾಯ್ತು. ಬಿಲ್ ಮರ್ಯಾದೆ ಬೀದಿಯಲ್ಲಿ ಹರಾಜಾದ ಸಮಯವದು.

ಸಹಜವಾಗಿ ಹಿಲರಿ ಪ್ರತಿಕ್ರಿಯೆ ಏನಿರಬಹುದು ಅಂತ ಇಡೀ ವಿಶ್ವವೇ ಕಾದು ಕುಳಿತಿತ್ತು.ಎಲ್ಲರೂ ಆಕೆ ಡೈವೋರ್ಸ್ ನೀಡುತ್ತಾಳೆ ಎಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಹಿಲರಿ ಗಂಡನ ಪರವಾಗಿ ಗಟ್ಟಿಯಾಗಿ ನಿಂತು ಬಿಟ್ಟರು. ಸಾರ್ವಜನಿಕವಾಗಿ ನಿಂದನೆಗಳು, ಹಗರಣವನ್ನು ದಾಟಿ ಆಕೆ ಮನೆತನದ ಗೌರವವನ್ನು ಕಾಪಾಡಿಕೊಂಡರು. ಆದರೆ ಖಾಸಗಿಯಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂಬ ಸುದ್ದಿಗಳು ಓಡಾಡ ತೊಡಗಿದವು. ‘ಹಿಲರಿ ಬಿಲ್‍ರಿಗೆ ಹೊಡೆಯುತ್ತಾರಂತೆ, ಸ್ಟುಪಿಡ್ ಎಂದು ಬೈಯುತ್ತಾರಂತೆ. ಮೈ ಪರಚುತ್ತಾರಂತೆ,’ ಎಂದೆಲ್ಲಾ ಮಾಧ್ಯಮಗಳಲ್ಲಿ ಸೆನ್ಸೇಷನ್ ಸುದ್ದಿಯ ಜಾಗ ಪಡೆದುಕೊಂಡವು.

ಆದರೆ ಹಿಲರಿ ಗಂಡನಲ್ಲಿ ವಿಶ್ವಾಸ, ನಂಬಿಕೆಯನ್ನು ಮರು ಸ್ಥಾಪಿಸಿ, ಸಂಸಾರವನ್ನು ಮೂರಾ ಬಟ್ಟೆ ಮಾಡಲು ಮಾಧ್ಯಮಗಳಿಗೆ ಅವಕಾಶ ನೀಡಲಿಲ್ಲ.ಆದರೆ ಇದಾದ ನಂತರ ಬಿಲ್ ಮತ್ತು ಹಿಲರಿ ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದು ಕಡಿಮೆಯಾಯಿತು.ಹಿಲರಿ ನಿಧಾನವಾಗಿ ಸಾರ್ವಜನಿಕ ಜೀವನಕ್ಕೆ ಧುಮುಕಿದರು. ತಾನೂ ಅಮೆರಿಕಾ ಅಧ್ಯಕ್ಷೆಯಾಗಬೇಕು ಅಂತ 2008ರಲ್ಲೇ ಒಬಾಮಾ ವಿರುದ್ಧ ಪಕ್ಷದೊಳಗೆ ಚುನಾವಣೆಗೆ ನಿಂತರು. ಆದರೆ ಒಬಾಮ ಅಬ್ಬರದ ಮುಂದೆ ಆರಂಭಿಕ ಹಂತದಲ್ಲೇ ಸೋತರಾದರೂ, ಇದೇ ಒಬಾಮ ಸಂಪುಟದಲ್ಲಿ ‘ಸೆಕ್ರೆಟರಿ ಆಫ್ ಸ್ಟೇಟ್’ ಹುದ್ದೆಗೆ ಏರಿದರು. ವಿದೇಶಾಂಗ ಮಂತ್ರಿಗೆ ಸಮಾನವಾದ ಜವಾಬ್ದಾರಿಯುತ ಹುದ್ದೆ ಪಡೆದುಕೊಂಡು, ವಿದೇಶಾಂಗ ನೀತಿಗಳನ್ನು ಸಮರ್ಥವಾಗಿ ರೂಪಿಸಿ ದೇಶದ ಮುಂದೆ ತಮ್ಮ ಸಾಮರ್ಥ್ಯ ನಿರೂಪಿಸಿದರು.

ಇದೀಗ ಅಧ್ಯಕ್ಷೀಯ ಚುನಾವಣೆಯ ಪೈಪೋಟಿಯಲ್ಲಿ ಮುಂಚೂಣಿಯಲ್ಲಿರುವ ಹಿಲರಿ ಪ್ರಚಾರಕ್ಕೆ ಪತಿ ಬಿಲ್ ಕೂಡಾ ಸಾಥ್ ನೀಡಿದ್ದಾರೆ. ಅಕ್ರಮ ಸಂಬಂಧದ ಪ್ರಕರಣದ ನಂತರ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳದ ಅಪೂರ್ವ ಪ್ರೇಮಿಗಳು ಮತ್ತೆ ಒಂದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಹಿಲರಿ ಅಧ್ಯಕ್ಷರಾಗಿದ್ದೇ ಆದರೆ ‘ಪತಿ-ಪತ್ನಿ’ ಅಧ್ಯಕ್ಷರಾದ ಮೊದಲ ಜೋಡಿ ಎಂಬ ಇತಿಹಾಸ ಕ್ಲಿಂಟನ್ ದಂಪತಿಗಳ ಪಾಲಾಗಲಿದೆ.