samachara
www.samachara.com
2019ರಲ್ಲಾದರೂ ಸೂರು ಕೊಡಿ: ಆದಿವಾಸಿಗಳ ನಾಡಿನೂರಿನಲ್ಲಿ 20 ತಿಂಗಳಿಗೆ 24 ಸಾವು! 
GROUND REPORT

2019ರಲ್ಲಾದರೂ ಸೂರು ಕೊಡಿ: ಆದಿವಾಸಿಗಳ ನಾಡಿನೂರಿನಲ್ಲಿ 20 ತಿಂಗಳಿಗೆ 24 ಸಾವು! 

ಕೊಡಗಿನ ಪ್ರವಾಹದ ವೇಳೆ ಸಮರೋಪಾದಿಯಲ್ಲಿ ನೆರವಿಗೆ ದಾವಿಸಿದ್ದ ಸರಕಾರ ದಿಡ್ಡಳ್ಳಿಯ ನಿರಾಶ್ರಿತ ಆದಿವಾಸಿಗಳ ಸರಣಿ ಸಾವುಗಳ ಬಗ್ಗೆ ಗಂಭೀರವಾದಂತಿಲ್ಲ.

ಗೋಣಿಕೊಪ್ಪ ಸಮೀಪದ ಕಾಫಿ ತೋಟವೊಂದರ ‘ಲೈನ್ ಮನೆ’ಯಲ್ಲಿ ವಾಸವಿದ್ದ ಮಧು (29) ಮತ್ತು ಬೇಬಿ (24) ದಂಪತಿಗೆ ಹಂಗಿನ ಮಾರು ತೊರೆದು ತಮ್ಮದೇ ಸ್ವಂತ ಗೂಡೊಂದನ್ನು ಕಟ್ಟಿಕೊಳ್ಳುವ ಬಯಕೆ ಶುರುವಾಗಿದ್ದು 2016ರಲ್ಲಿ. ಅದೇ ಸಮಯಕ್ಕೆ ಸಿದ್ದಾಪುರ ಸಮೀಪದ ದಿಡ್ಡಳ್ಳಿಯಲ್ಲಿ ತಮ್ಮದೇ ವರ್ಗದ ಹಲವರು ಗುಡಿಸಲು ಕಟ್ಟಿಕೊಳ್ಳುತ್ತಿರುವ ಸುದ್ದಿ ಹೇಗೋ ದಂಪತಿಗೆ ತಿಳಿಯಿತು. ರಾತ್ರೋರಾತ್ರಿ ಲೈನ್ ಮನೆ ತೊರೆದು ದಿಡ್ಡಳ್ಳಿ ಎಂಬ ಕಾಡಿನೂರಿಗೆ ಬಂದರು.

ಅಲ್ಲೊಂದು ಪುಟ್ಟ ಮನೆಯನ್ನು ಅವರೇ ಕಟ್ಟಿಕೊಂಡು ಸಂಸಾರ ಶುರುಮಾಡಿದರು. ಎರಡು ತಿಂಗಳಾಗಿತ್ತಷ್ಟೆ; ಪೋಲೀಸರು ಮತ್ತು ಅರಣ್ಯ ಇಲಾಖೆಯವರು ಜೆಸಿಬಿ ಸಮೇತ ದಿಡ್ಡಳ್ಳಿಗೆ ಬಂದು ಹಕ್ಕು ಸ್ಥಾಪಿಸಲು ನಿಂತರು. ಅವತ್ತು ಆಡಳಿತ ನಡೆಸುತ್ತಿದ್ದ ನಾಗರಿಕ ಸರಕಾರ ಹೇಗೆ ನಡೆದುಕೊಂಡಿತು, ನಾಗರಿಕ ಒತ್ತಡ ಗುಂಪುಗಳು ಹೇಗೆ ಪ್ರತಿರೋಧ ತೋರಿಸಿದವು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಪರಿಣಾಮ, ಕರ್ನಾಟಕ ಹಿಂದೆ ಇಂತಹ ಸಾಕಷ್ಟು ಸರಕಾರಿ ಪ್ರಾಯೋಜಿತ ಒಕ್ಕಲೆಬ್ಬಿಸುವಿಕೆಯನ್ನು ನೋಡಿದ್ದರೂ, ಇದೊಂದು ಪ್ರಕರಣದಲ್ಲಿ ಪುನರ್ವಸತಿ ಕಲ್ಪಿಸಲು ಸರಕಾರ ತಕ್ಷಣ ಕ್ರಮ ಕೈಗೊಂಡಿತು. ಅದಕ್ಕೂ ಮುಂಚೆ ತಾತ್ಕಾಲಿಕ ನೆಲೆಯಲ್ಲಿ ಟೆಂಟ್‌ಗಳನ್ನು ನಿರ್ಮಿಸಿ ನೀಡಲಾಯಿತು.

ಅವತ್ತು ಹಾಗೆ ತಮ್ಮ ಸೂರನ್ನು ಕಳೆದುಕೊಂಡು ಹೊರಬಿದ್ದ ಮಧು ಮತ್ತು ಬೇಬಿ ಸೇರಿದಂತೆ ಒಟ್ಟು 577 ಕುಟುಂಬಗಳು ಬ್ಯಾಡಗೊಟ್ಟದ ಮೇಲಿನ ಟೆಂಟ್‌ಗಳಿಗೆ ಸ್ಥಳಾಂತರಗೊಂಡರು. ಹಾಗಂತ ದಂಪತಿ ಎದೆ ಗುಂದಲಿಲ್ಲ. ಹೊಸ ಬದುಕು ಕಟ್ಟಿಕೊಳ್ಳಲುನಿಂತರು. ಪುಟ್ಟ ಕುಟುಂಬದ ಹೊಸ ಅತಿಥಿಯೊಬ್ಬನ ಆಗಮನಕ್ಕೆ ಕಾಲವೂ ಕೂಡಿ ಬಂತು. ಬೇಬಿಗೆ ಹೊಳೆಯುವ ಕಂಗಳ ಹೆಣ್ಣು ಮಗುವೊಂದು ಜನಿಸಿತು. ದಂಪತಿ ಸಡಗರ, ಸಂಭ್ರಮಕ್ಕೆ ಇನ್ನೇನು ಬೇಕಿತ್ತು?

ಮಗು ಜನಿಸಿ ಸರಿಯಾಗಿ 84 ದಿನಗಳಾಗಿತ್ತು. ಅಂದು ಸೋಮವಾರ. ಅವತ್ತು ಮಗುವಿನ ಮೈ ಬೆಚ್ಚಗಿದ್ದು ಬೆಳಗಿನಿಂದಲೇ ಅಳುತಿತ್ತು. ಹಾಲು ನೀಡಿದರೂ ಅಳು ನಿಲ್ಲಲಿಲ್ಲ. ಮಾರನೇ ದಿನ ಮಂಗಳವಾರ ಕುಶಾಲನಗರದಲ್ಲಿ ನಡೆಯುವ ಸಂತೆಯ ಕಾರಣದಿಂದ ಆಳುಗಳ ವಾರದ ರಜೆ. ಮಗುವನ್ನು ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರಲ್ಲಿ ತೋರಿಸಿದಾಗ ವೈದ್ಯರು ಜ್ವರಕ್ಕೆ ಚುಚ್ಚುಮದ್ದು ನೀಡಿದರು. ಮಾರನೇ ದಿನವೂ ಜ್ವರ ಕಡಿಮೆ ಆಗಲಿಲ್ಲ. ಬೇಧಿ ಶುರುವಾಯಿತು. ಮಗು ಅಳುವುದರ ಜತೆಗೇ ಮೈ ಬಿಸಿಯೂ ಏರಿತು. ಮನೆ ಮದ್ದು, ದೇವರಿಗೆ ಹರಕೆ ಯಾವುದೂ ಫಲಿಸಲಿಲ್ಲ. ಜ್ವರ ಕಾಣಿಸಿಕೊಂಡ 5ನೇ ದಿನಕ್ಕೆ ಮಗುವಿನ ಮೈ ತಣ್ಣಗಾಯಿತು.

ದಿಡ್ಡಳ್ಳಿಯಿಂದ ಸ್ಥಳಾಂತರಗೊಂಡು, ಈಗ ಮಗುವನ್ನು ಕಳೆದುಕೊಂಡ ಬೇಬಿ- ಆದಿವಾಸಿ ಮಹಿಳೆ. 
ದಿಡ್ಡಳ್ಳಿಯಿಂದ ಸ್ಥಳಾಂತರಗೊಂಡು, ಈಗ ಮಗುವನ್ನು ಕಳೆದುಕೊಂಡ ಬೇಬಿ- ಆದಿವಾಸಿ ಮಹಿಳೆ. 

ಸರಕಾರ ಆದಿವಾಸಿಗಳನ್ನು ಒಕ್ಕಲೆಬ್ಬಿಸಿಕೊಂಡು ಕರೆ ತಂದು ನಾಗರಿಕ ಸಮಾಜಕ್ಕೆ ಬಿಟ್ಟ 20 ತಿಂಗಳಲ್ಲಿ ಬೇಬಿ ಮಗುವನ್ನು ಕಳೆದುಕೊಂಡರು. ಅವರ ಹಾಗೆಯೇ ಇನ್ನೂ 15 ಕುಟುಂಬಗಳು ತಮ್ಮ ಸದಸ್ಯರನ್ನು ಇಲ್ಲಿಗೆ ಬಂದ ನಂತರ ಕಳೆದುಕೊಂಡಿವೆ. “ಕಾಡಿನಲ್ಲಿದ್ದಾಗ ನಮ್ಮ ಮೇಲೆ ಒಂದು ಕೊಂಬೆಯೂ ಬೀಳಲಿಲ್ಲ. ಕಾಡು ಪ್ರಾಣಿಗಳೂ ನಮ್ಮನ್ನು ನುಂಗಲಿಲ್ಲ, ಕಚ್ಚಿ ಸಾಯಿಸಲಿಲ್ಲ. ಆದರೆ ಇಲ್ಲಿ ಬಂದ ಮೇಲೆ ತಿಂಗಳಿಗೊಬ್ಬರಾದರೂ ಸಾಯುತ್ತಿದ್ದಾರೆ. ವೈದ್ಯರೇನೋ ಬರುತ್ತಾರೆ, ಔಷಧಿ ಮಾತ್ರೆಗಳನ್ನೂ ಕೊಡುತ್ತಾರೆ. ಆದರೆ ಜೀವ ಉಳಿಸಲು ಆಗುತ್ತಿಲ್ಲವಲ್ಲ,” ಎನ್ನುತ್ತಾರೆ ಗೌರಮ್ಮ.

ಗೌರಮ್ಮ ಹೇಳಿದಂತೆ ಇಲ್ಲಿಗೆ ವಾರಕ್ಕೊಮ್ಮೆ ವೈದ್ಯರು ನಿಯಮಿತವಾಗಿ ಭೇಟಿ ಕೊಡುತ್ತಾರೆ. ಖಾಯಿಲೆ ಇದ್ದವರಿಗೆ ಔಷಧಿ ಮಾತ್ರೆಗಳನ್ನೂ ಕೊಡುತ್ತಾರೆ. ಸಾವಿಗೆ ಕಾರಣಗಳೇನಿರಬಹುದು? ಉತ್ತರಕ್ಕಾಗಿ ಸಮುದಾಯ ನಾನಾ ಆಯಾಮಗಳಲ್ಲಿ ಆಲೋಚನೆ ಮಾಡಿದೆ.

“ಇಲ್ಲಿ ತಾತ್ಕಾಲಿಕ ಶೌಚಾಲಯ ಕಟ್ಟಿ ಕೊಟಿದ್ದಾರೆ. ಅದು ತುಂಬಿ ಹರಿದರೂ ಕೇಳುವವರಿಲ್ಲ. ಕೂಡಿಗೆ ಗ್ರಾಮ ಪಂಚಾಯ್ತಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಜನಪ್ರತಿನಿದಿಗಳೂ ಇತ್ತ ತಿರುಗಿ ನೋಡಿಲ್ಲ. ಅದು ಕಾಯಿಲೆಯ ಮೂಲ,” ಎನ್ನುತ್ತಾರೆ ಇಲ್ಲಿನ ಆದಿವಾಸಿ ಮುಖಂಡ ಮಲ್ಲಪ್ಪ. “ಇಲ್ಲಿಗೆ ಭೇಟಿ ನೀಡಿದ್ದ ಡಿಸಿ (ಜಿಲ್ಲಾಧಿಕಾರಿ) ಗಮನಕ್ಕೆ ಇದನ್ನೆಲ್ಲಾ ತಂದಿದ್ದೆವು. ಅಷ್ಟೆ ಅಲ್ಲ, ನಮಗೆಲ್ಲಾ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡು ಮಾಡಿಸಿಕೊಡಿ ಎಂದು ನಮ್ಮೆದುರಿಗೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಇದಾಗಿ ತಿಂಗಳುಗಳೇ ಕಳೆಯುತ್ತಿವೆ,” ಎನ್ನುತ್ತಾರೆ ಮಲ್ಲಪ್ಪ.

ಮಲ್ಲಪ್ಪ ಮಾತನಾಡುತ್ತಿದ್ದ ಟೆಂಟ್‌ ಬಳಿಯೇ ಚರಂಡಿ ಇತ್ತು. ಅದರಿಂದ ದುರ್ವಾಸನೆ ಬರುತ್ತಿತ್ತು. ಅಲ್ಲಲ್ಲಿ ಪಾಚಿಕಟ್ಟಿ ನಿಂತಿರುವ ನೀರು, ಅದರ ಮೇಲೆ ನೊಣಗಳು, ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದೆ ಎಂಬುದು ಕಣ್ಣಿಗೆ ಕಾಣಿಸುತ್ತಿತ್ತು.

“ಬಹುತೇಕರು ಖಾಯಿಲೆಯ ಕೊನೆ ಹಂತದಲ್ಲಿ ಚಿಕಿತ್ಸೆಗೆ ಬರುತ್ತಾರೆ. ಅಷ್ಟರಲ್ಲಿ ರೋಗ ಉಲ್ಪಣಗೊಂಡಿರುತ್ತದೆ. ನಾವು ಬೇರೆ ದೊಡ್ಡ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದರೂ ಅವರಿಂದ ಅದು ಸಾಧ್ಯವಾಗುವುದಿಲ್ಲ. ಹಣ ಇಲ್ಲದೆ ಹೆಚ್ಚಿನ ಚಿಕಿತ್ಸೆ ಸಿಗದೆ ಆದ ಸಾವುಗಳು ಇವು,” ಎನ್ನುತ್ತಾರೆ ಕುಶಾಲನಗರದ ಆರೋಗ್ಯಾಧಿಕಾರಿ ಡಾ. ದೇವರಾಜ್.

“ವಯಸ್ಕರು ಜಾಂಡೀಸ್‌, ಲಿವರ್‌ ಸಮಸ್ಯೆಗಳ ಕಾರಣಕ್ಕೆ ಹಾಗೂ ಮಕ್ಕಳು ಅತಿಯಾದ ಜ್ವರದಿಂದ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ಪೌಷ್ಟಿಕಾಂಶದ ಕೊರತೆ, ಸರಕಾರದಿಂದ ನೀಡುತ್ತಿರುವ ಆಹಾರ ಪದಾರ್ಥಗಳ ಅಸಮರ್ಪಕ ಬಳಕೆ ಹಾಗೂ ನೈರ್ಮಲ್ಯದ ಕೊರತೆ” ಎಂದು ಆರೋಗ್ಯಾಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಒಂದು ಕಡೆ ಸ್ವಚ್ಚತೆ ಕೊರತೆ, ‘ನಿಧಾನಸೌಧ’ದ ಪರಿಣಾಮಗಳು ಸಮಸ್ಯೆ ತಂದೊಡ್ಡಿವೆ. ಇನ್ನೊಂದು ಕಡೆ ಆದಿವಾಸಿಗಳಲ್ಲಿ ಈ ಸಾವುಗಳು ನಾಡಿನ ದೈವಗಳ ನಂಬಿಕೆಯನ್ನು ಕೆಣಕಿವೆ. “ನಮಗೆ ಕೂಡಿಗೆ ಗ್ರಾಮ ಪಂಚಾಯ್ತಿ ಸ್ಮಶಾನಕ್ಕೆಂದು ಊರ ದೈವ ಮುನೀಶ್ವರನ ದೇವಸ್ಥಾನದ ಎದುರಿಗೇ ಒಂದು ಎಕರೆ ಜಾಗ ನೀಡಿದೆ. ಈವರೆಗೆ ಹೋದ ಎಲ್ಲರನ್ನೂ ಅಲ್ಲೇ ಮಣ್ಣು ಮಾಡಿದ್ದೇವೆ. ಎದುರಿಗೆ ಇರುವ ಮುನೀಶ್ವರ ಮುನಿಸಿಕೊಂಡಿದ್ದಾನೆ. ಮೊದಲು ಸ್ಮಶಾನ ಬದಲಾವಣೆ ಮಾಡಬೇಕು,” ಎಂದು ಸಾವುಗಳ ಸರಣಿ ತಪ್ಪಿಸಲು ಸಲಹೆ ನೀಡಿದರು ಸುಮಾರು 42 ವರ್ಷ ವಯಸ್ಸಿನ ಭೈರ.

ಕಾಡಿನಿಂದ ನಾಡಿಗೆ ಸ್ಥಳಾಂತರಗೊಂಡ ಆದಿವಾಸಿ ಸಮುದಾಯ ಒಟ್ಟು ಸಂಖ್ಯೆ 650-700 ದಾಟುವುದಿಲ್ಲ. ಇವರಲ್ಲಿ ಚೋಮ (40) ಎಂಬುವವರು ಮರದಿಂದ ಬಿದ್ದು ಸತ್ತರು. ಕಾವೇರಿ(36)ಗೆ ಹೃದಯಾಘಾತವಾಯಿತು. ರವಿ (30) ಕಿಡ್ನಿ ಸಮಸ್ಯೆಯಿಂದ ಸತ್ತರೆ, ಅಕ್ಷತಾ (2) ಒಂದು ಪುಟಾಣಿಯ ಸಾವಿಗೆ ವಾತಾವರಣವೇ ಕಾರಣವಾಯಿತು. ಇನ್ನು, ಶಶಿ (28), ಶಿವು (35), ಕಿಟ್ಟು (55), ಮಣಿ (81), ನಾಗಪ್ಪ (41) ಸಾವುಗಳಿಗೆ ಅನಾರೋಗ್ಯ ಕಾರಣ ಎಂದುಕೊಳ್ಳಲಾಯಿತು. ಮಂಜು (45) ಎಂಬ ನಡು ವಯಸ್ಸಿನ ವ್ಯಕ್ತಿ ಜಾಂಡೀಸ್ ಕಾಯಿಲೆಯಿಂದ ಸಾವನ್ನಪ್ಪಿದರೆ, ಇನ್ನೂ ಮೂವರ ಸಾವಿಗೆ ನಿಖರ ಕಾರಣವೂ ಇಲ್ಲ. ಶವಗಳನ್ನು ಗೋಣಿಕೊಪ್ಪ ಮತ್ತು ತಿತಿಮತಿಗೆ ಒಯ್ದು ಮಣ್ಣು ಮಾಡಲಾಗಿದೆ. ಮೃತಪಟ್ಟಿರುವವರಲ್ಲಿ ಎಲ್ಲಾ ಸಾವೂ ಆಸ್ಪತ್ರೆಗಳಲ್ಲಿ ಆಗಿದ್ದು, ಇಬ್ಬರು ತಾತ್ಕಾಲಿಕ ಶೆಡ್‌ನಲ್ಲಿ ಮೃತಪಟ್ಟಿದ್ದಾರೆ.

ಬ್ಯಾಡಗೊಟ್ಟದಲ್ಲಿ 18 ಜನ ಹಾಗೂ ಬಸವನಳ್ಳಿಯಲ್ಲಿ 6 ಜನ ಒಟ್ಟು 24 ಜನ ಆದಿವಾಸಿಗಳು ನಿರಾಶ್ರಿತರ ತಾತ್ಕಾಲಿಕ ಶಿಬಿರದಲ್ಲಿ ಸಾಲುಸಾಲಾಗಿ ಸಾವನ್ನಪ್ಪುತ್ತಿದ್ದಾರೆ. ಈಗಾಗಲೇ ಕಡಿಮೆಯಾಗಿರುವ ಆದಿವಾಸಿಗಳ ಜನಸಂಖ್ಯೆಯ ಪೈಕಿ ಹೀಗೆ ಸಾಲು ಸಾಲು ಸಾವುಗಳು ಸಹಜವಾಗಿಯೇ ಆದಿವಾಸಿಗಳಲ್ಲಿ ಆತಂಕ ಮೂಡಿಸಿವೆ.

ಸ್ಥಳಾಂತರಗೊಂಡ ಆದಿವಾಸಿಗಳಿಗೆ ಸರ್ಕಾರ ನೀಡುವ ಬಿಪಿಎಲ್ ಪಡಿತರ ಅಲ್ಲದೆ, ಐಟಿಡಿಪಿ ಇಲಾಖೆಯಿಂದ ವರ್ಷದ ಆರು ತಿಂಗಳು ಪೌಷ್ಟಿಕಾಂಶ ಆಹಾರದ ಕಿಟ್‌ಗಳನ್ನು ವಿತರಿಸಲಾಗುತ್ತದೆ. ಇದರಲ್ಲಿ 15 ಕೆಜಿ ಅಕ್ಕಿ, 5 ಕೆಜಿ ಬೇಳೆ, 5 ಕೆಜಿ ಹುರುಳಿ, 2 ಕೆಜಿ ಹೆಸರು ಕಾಳು, 45 ಮೊಟ್ಟೆ, 4 ಕೆಜಿ ಸಕ್ಕರೆ , 1 ಕೆಜಿ ನಂದಿನಿ ತುಪ್ಪ, 2 ಲೀಟರ್ ಅಡುಗೆ ಎಣ್ಣೆ ನೀಡಲಾಗುತ್ತಿದೆ. ಆದರೆ, ಈ ಪೌಷ್ಟಿಕಾಂಶ ಆಹಾರದ ಕಿಟ್‌ಗಳ ವಿತರಣೆಯೂ ಸರಿಯಾಗಿ ಆಗುತ್ತಿಲ್ಲ ಎಂಬ ದೂರಿದೆ. “ಎರಡು ತಿಂಗಳಿನಿಂದ ಪೌಷ್ಟಿಕಾಂಶ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಿಲ್ಲ. ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಈಗ ಕಿಟ್‌ಗಳು ಬಂದಿವೆ. ಆದರೆ, ಇನ್ನೂ ವಿತರಣೆಯಾಗಿಲ್ಲ” ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಈಗ ಆದಿವಾಸಿಗಳು ನೆಲೆಸಿರುವ ತಾತ್ಕಾಲಿಕ ಶೆಡ್ ಗಳಿಗೆ ಬೆಳಕಿನ ವ್ಯವಸ್ಥೆಯೇ ಇಲ್ಲ. ಇವು ಪೂರ್ಣ ಕಬ್ಬಿಣದಲ್ಲಿ ನಿರ್ಮಿಸಿರುವುದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಅನಾಹುತ ಸಂಬವಿಸುತ್ತದೆ ಎಂದು ನೆಪ ಇಟ್ಟುಕೊಂಡು ಸಂಪರ್ಕವನ್ನು ಇನ್ನೂ ನೀಡಿಲ್ಲ. ಇದರಿಂದಾಗಿ ಶಾಲೆಗೆ ತೆರಳುತ್ತಿರುವ ಆದಿವಾಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಸೋಲಾರ್ ದೀಪಗಳಾದರೂ ಬೇಕು ಎಂಬುದು ಇಲ್ಲಿನ ಜನರ ಬಹುದಿನಗಳ ಬೇಡಿಕೆ.

ಇನ್ನೂ ಹಂಚಿಕೆಯಾಗದ ಹೊಸ ಮನೆಗಳು. 
ಇನ್ನೂ ಹಂಚಿಕೆಯಾಗದ ಹೊಸ ಮನೆಗಳು. 
- ಸಮಾಚಾರ.ಕಾಂ

ಬ್ಯಾಡಗೊಟ್ಟ, ಬಸವನಳ್ಳಿಗಳಲ್ಲಿ ಒಟ್ಟು 174 ಮನೆಗಳು ನಿರ್ಮಾಣದ ಹಂತದಲ್ಲಿವೆ. ಆದಿವಾಸಿಗಳಿಗೆ ಇನ್ನೂ ಹಂಚಿಕೆಯಾಗಿಲ್ಲ. ಇಷ್ಟೊತ್ತಿಗಾಗಲೇ ಸುಪರ್ದಿಗೆ ನೀಡಬೇಕಿತ್ತು. ‘ಮುಂದಿನ ತಿಂಗಳು ಹಂಚಿಕೆ ಮಾಡುವುದಾಗಿ’ ಅಧಿಕಾರಿಗಳು ಭರವಸೆ ನೀಡಿಕೊಂಡು ಬರುತ್ತಿದ್ದಾರೆ. ಹೊಸ ಆದಿವಾಸಿ ಕುಟುಂಬಗಳೂ ಈಗ ಇಲ್ಲಿಗೆ ಬಂದು ಸೇರಿಕೊಳ್ಳುತ್ತಿವೆ. ಈ ಹಿಂದೆ ಪ್ರತಿ ಕುಟುಂಬಕ್ಕೆ ಕೃಷಿಗಾಗಿ ತಲಾ ಎರಡು ಎಕರೆ ಜಮೀನು ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಎರಡು ವರ್ಷಗಳ ನಂತರ ಭೂಮಿ ಬಿಡಿ, ಮೊದಲು ಸಮರ್ಪಕ ಸೂರು ನೀಡಿ ಎನ್ನುತ್ತಿದ್ದಾರೆ ಆದಿವಾಸಿಗಳು. ಇಲ್ಲಿನ ಸರಣಿ ಸಾವುಗಳನ್ನು ತಡೆಯಲು ತುರ್ತಾಗಿ ಆಗಬೇಕಿರುವ ಕೆಲಸ ಇದು.

ತಿಂಗಳುಗಳ ಹಿಂದೆ ಮಹಾಮಳೆಗೆ ಕೊಡಗಿನಲ್ಲಿ ಉಂಟಾದ ಪ್ರವಾಹದಿಂದ ನೂರಾರು ಮಂದಿ ನೆಲೆ ಕಳೆದುಕೊಂಡಿದ್ದರು. ಕೊಡಗಿನ ಪ್ರವಾಹಕ್ಕೆ ಮರುಗಿದ ನಾಡಿನ ಜನ ಹಾಗೂ ಸರಕಾರ ನೆಲೆ ಕಳೆದುಕೊಂಡವರ ಪುನರ್ವಸತಿಗೆ ಹಾಗೂ ತಾತ್ಕಾಲಿಕ ಸೂರಿಗೆ ಸಮರೋಪಾದಿಯಲ್ಲಿ ನೆರವಿಗೆ ದಾವಿಸಿತ್ತು. ಆದರೆ, ದಿಡ್ಡಳ್ಳಿಯಿಂದ ನೆಲೆ ಕಳೆದುಕೊಂಡು ಹಂದಿಗೂಡುಗಳಂಥ ತಾತ್ಕಾಲಿಕ ಟೆಂಟ್‌ಗಳಲ್ಲಿ ಬದುಕುತ್ತಲೇ ಸಾವಿನ ದಾರಿಯಲ್ಲಿರುವ ಆದಿವಾಸಿಗಳ ನಿಕೃಷ್ಟ ಬದುಕಿನ ಬಗ್ಗೆ ಸರಕಾರಕ್ಕೂ ಕಾಳಜಿ ಇದ್ದಂತಿಲ್ಲ. ದಡ್ಡಳ್ಳಿ ಹೋರಾಟದಲ್ಲಿ ಸುದ್ದಿಕೇಂದ್ರದಲ್ಲಿದ್ದ ‘ಹೋರಾಟಗಾರ’ರೂ ಈಗ ಇವರನ್ನು ಮರೆತಂತಿದೆ. ಸರಕಾರ ಕೂಡಲೇ ಇಲ್ಲಿನ ಸಾವುಗಳನ್ನು ತಡೆಯಲು ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸಿ, ಮನೆಗಳನ್ನು ಆದಷ್ಟು ಬೇಗ ನಿರ್ಮಿಸಿ ಇಲ್ಲಿನ ಶುಚಿತ್ವದ ಬಗ್ಗೆ ಗಮನ ನೀಡಬೇಕಿದೆ.