samachara
www.samachara.com
ಸಾಲಮನ್ನಾಕ್ಕೆ ಎದುರಾಗಿದೆ ‘ತಾಂತ್ರಿಕ ಸಮಸ್ಯೆ’; ಸ್ಥಳೀಯ ವಿಚಾರಣೆಯ ಮಾರ್ಗ ಅನಿವಾರ್ಯ
GROUND REPORT

ಸಾಲಮನ್ನಾಕ್ಕೆ ಎದುರಾಗಿದೆ ‘ತಾಂತ್ರಿಕ ಸಮಸ್ಯೆ’; ಸ್ಥಳೀಯ ವಿಚಾರಣೆಯ ಮಾರ್ಗ ಅನಿವಾರ್ಯ

ಸಾಲದ ಹೊರೆಯಿಂದ ಬಳಲುತ್ತಿರುವ ರೈತರಿಗೆ ಸಾಲಮನ್ನಾ ಯೋಜನೆಯಿಂದ ನೆಮ್ಮದಿ ಸಿಗುವ ನಿರೀಕ್ಷೆ ಇತ್ತು. ಆದರೆ, ಸಾಲಮನ್ನಾ ಯೋಜನೆಗೆ ತಳಹಂತದ ತಾಂತ್ರಿಕ ಸಮಸ್ಯೆ ತೊಡಕಾಗಿದೆ.

ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರಕಾರದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರೈತರ ಸಾಲಮನ್ನಾ ಘೋಷಣೆ ಮಾಡಿ ಆರು ತಿಂಗಳು ಕಳೆದಿವೆ. ಆದರೆ, ಇನ್ನೂ ಸಾಲಮನ್ನಾದ ಪ್ರಯೋಜನ ರೈತರಿಗೆ ಸಂಪೂರ್ಣವಾಗಿ ತಲುಪಿಲ್ಲ. ಇದಕ್ಕೆ ಕಾರಣ ಸಾಲಮನ್ನಾ ಜಾರಿಗೆ ಸರಕಾರ ರೂಪಿಸಿರುವ ಮಾನದಂಡ ಹಾಗೂ ಪ್ರಕ್ರಿಯೆಯಲ್ಲಿನ ‘ತಾಂತ್ರಿಕ ಸಮಸ್ಯೆ’ಗಳು.

ಸಾಲಮನ್ನಾ ಪ್ರಯೋಜನ ನೈಜ ಫಲಾನುಭವಿಗಳಿಗೇ ತಲುಪಬೇಕೆಂಬ ಉದ್ದೇಶದಿಂದಲೇ ಸರಕಾರ ರೂಪಿಸಿರುವ ಕಠಿಣ ಮಾನದಂಡಗಳು ಈಗ ಸಾಮಾನ್ಯರ ರೈತರಿಗೆ ಸಾಲಮನ್ನಾ ಪ್ರಯೋಜನ ಸಿಗದಂತೆ ಮಾಡಿದೆ. ರಾಜ್ಯದ ಹಲವು ಕಡೆಗಳಲ್ಲಿ ಈ ರೈತರನ್ನು ಈ ತಾಂತ್ರಿಕ ಸಮಸ್ಯೆ ಬಾಧಿಸುತ್ತಿದೆ.

ಸರಕಾರದ ಸೌಲಭ್ಯಗಳ ಪ್ರಯೋಜನ ಪಡೆಯಲು ಮಧ್ಯವರ್ತಿ ಬ್ಯಾಂಕ್‌ಗಳನ್ನಾಗಿ ಜಿಲ್ಲಾ ಮಟ್ಟದ ಡಿಸಿಸಿ ಬ್ಯಾಂಕ್‌ಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಹೊಸದಾಗಿ ರಚನೆಯಾಗಿರುವ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ಗಳೇ ಇಲ್ಲ. ಹಾವೇರಿ, ಕೊಪ್ಪಳ, ಗದಗ, ಚಾಮರಾಜನಗರ, ಯಾದಗಿರಿ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಧ್ಯವರ್ತಿ ಬ್ಯಾಂಕ್‌ ಆಗಿ ಕಾರ್ಯ ನಿರ್ವಹಿಸಬೇಕಾದ ಡಿಸಿಸಿ ಬ್ಯಾಂಕ್‌ಗಳಿಲ್ಲದ ಕಾರಣ ಇಲ್ಲಿನ ರೈತರು ಸೌಲಭ್ಯಗಳಿಗಾಗಿ ನೆರೆಯ ಜಿಲ್ಲಾ ಕೇಂದ್ರಕ್ಕೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಲೆದಾಟದ ಹೈರಾಣ
ಸಾಲಮನ್ನಾ ಸೇರಿದಂತೆ ಸರಕಾರದ ಯಾವುದೇ ಸೌಲಭ್ಯ ಪಡೆಯಲು ಈ ಹೊಸ ಜಿಲ್ಲೆಗಳ ರೈತರು ಹಾಗೂ ಜನಸಾಮಾನ್ಯರು ಈ ಹಿಂದಿದ್ದ ಜಿಲ್ಲಾ ಕೇಂದ್ರದ ಡಿಸಿಸಿ ಬ್ಯಾಂಕ್‌ಗೆ ಅಲೆಯಬೇಕಾಗಿದೆ. 1997ರ ಆಗಸ್ಟ್‌ 15ರಂದು ಹೊಸದಾಗಿ ರಚನೆಯಾದ ಹಾವೇರಿ ಜಿಲ್ಲೆಯ ಉದಾಹರಣೆಯನ್ನೇ ತೆಗೆದುಕೊಂಡರೆ ಇಲ್ಲಿನ ಜನರು ಸರಕಾರಿ ಸೌಲಭ್ಯಕ್ಕಾಗಿ ಮಧ್ಯವರ್ತಿ ಬ್ಯಾಂಕ್‌ಗಾಗಿ ಧಾರವಾಡಕ್ಕೆ ಹೋಗಬೇಕು.

ಒಟ್ಟು 7 ತಾಲೂಕುಗಳನ್ನು ಹೊ0ದಿರುವ ಹಾವೇರಿ ಜಿಲ್ಲೆಯಲ್ಲಿ ಒಟ್ಟು 228 ಪ್ರಾಥಮಿಕ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ರಾಜ್ಯದ ಆಡಳಿತ ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಜಿಲ್ಲೆಯಲ್ಲಿನ್ನೂ ಮಧ್ಯವರ್ತಿ ಬ್ಯಾಂಕ್ ರಚನೆಯಾಗದಿರುವುದೇ ಸಾಕ್ಷಿ. ಮಧ್ಯವರ್ತಿ ಬ್ಯಾಂಕ್ ಸೌಲಭ್ಯ ಪಡೆಯಲು ಜಿಲ್ಲೆಯ ಜನ ಸುಮಾರು ನೂರು ಕಿ.ಮೀ. ಅಂತರದ ಧಾರವಾಡಕ್ಕೆ ಹೋಗಬೇಕು. ಒಂದು ದಿನದಲ್ಲಿ ಕೆಲಸವಾಗದಿದ್ದರೆ ಅಲ್ಲಿಯೇ ಉಳಿಯಬೇಕು. ಅಗತ್ಯ ದಾಖಲೆಗಳಿಗೆ ಮಹಿಳೆಯರ, ವೃದ್ಧರ ಸಹಿ ಬೇಕಾದಲ್ಲಿ ಅವರನ್ನೂ ಜೊತೆಗೊಯ್ಯಬೇಕು.

ಅನಗತ್ಯ ಖರ್ಚು, ಅಪರಿಚಿತ ಊರಿನಲ್ಲಿ ರಾತ್ರಿ ಕಳೆಯುವುದು ಕಷ್ಟ ಎಂಬ ಕಾರಣಕ್ಕೆ ರೈತರು ಚಿಕ್ಕ ಪರಿಹಾರ ಮೊತ್ತಗಳನ್ನು ನಿರಾಕರಿಸುವ ಮಟ್ಟಕ್ಕೆ ಬಂದಿದ್ದಾರೆ. ಆದರೆ, ಸಾಲಮನ್ನಾ ಹಣವೂ ಈಗ ರೈತರ ಮಧ್ಯವರ್ತಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿರುವುದರಿಂದ ರೈತರು ಹಿಂದಿನ ಜಿಲ್ಲಾ ಕೇಂದ್ರಕ್ಕೆ ಅಲೆದಾಡಬೇಕಾಗಿದೆ.

ಪೋಡಿಯೂ ಇಲ್ಲ, ರೇಶನ್‌ ಕಾರ್ಡೂ ಇಲ್ಲ!
“ಸರಕಾರ ಒಂದು ರೇಶನ್ ಕಾರ್ಡ್‌ಗೆ ಗರಿಷ್ಠ 1 ಲಕ್ಷ ರೂಪಾಯಿ ಸಾಲಮನ್ನಾ ಘೋಷಿಸಿದೆ. ಆದರೆ ಕೆಲವು ಕಡೆ ರೈತ ಸಹೋದರರು ಆಸ್ತಿ ಪಾಲು ಮಾಡಿಕೊಂಡಿದ್ದರೂ ಬೇರೆ ಬೇರೆ ರೇಶನ್ ಕಾರ್ಡ್ ಮಾಡಿಕೊಂಡಿಲ್ಲ. ಆದರೆ, ಅಣ್ಣ- ತಮ್ಮಂದಿರಿಬ್ಬರೂ ಸಹಕಾರಿ ಸಂಘದಲ್ಲಿ ತಲಾ 1 ಲಕ್ಷ ರೂಪಾಯಿ ಸಾಲ ಹೊಂದಿದ್ದರೆ, ರೇಶನ್ ಕಾರ್ಡ್ ಆಧರಿಸಿ ಸಾಲಮನ್ನಾ ಮಾಡಿದಲ್ಲಿ ಯಾರದಾದರೂ ಒಬ್ಬರ ಸಾಲ ಮನ್ನಾ ಆಗುತ್ತದೆ. ಇದು ಕುಟುಂಬಗಳಲ್ಲಿ ದಾಯಾದಿ ಕಲಹಕ್ಕೂ ಕಾರಣವಾಗುತ್ತದೆ” ಎಂಬುದು ಸಂಘದ ಕಾರ್ಯದರ್ಶಿಯೊಬ್ಬರ ಅಭಿಪ್ರಾಯ.

‘ಸಮಾಚಾರ’ ಹಾವೇರಿ ಜಿಲ್ಲೆಯ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸರ್ವರ್ ಸಮಸ್ಯೆಯೇ ದೊಡ್ಡ ತಲೆನೋವಾಗಿರುವುದು ಕಂಡುಬಂತು. ಅಲ್ಲಿನ ವ್ಯವಸ್ಥಾಪಕ ಮತ್ತು ಕಾರ್ಯದರ್ಶಿ ಪಕ್ಕದ ಹಳ್ಳಿಯ ಪ್ರಾಥಮಿಕ ಸಂಘಕ್ಕೆ ಭೇಟಿ ಇತ್ತು ವೆಬ್‌ಸೈಟ್‌ಗೆ ಸ್ವಘೋಷಣಾ ಪತ್ರದ ನಮೂನೆ ಅಪ್‌ಲೋಡ್‌ ಮಾಡುವ ಮಾಡಲು ಅಗತ್ಯವಿರುವ ಮಾಹಿತಿ ಕಲೆಹಾಕುವ ಗಡಿಬಿಡಿಯಲ್ಲಿದ್ದರು. ಅವರ ಪ್ರಕಾರ ಸಂಘಗಳಿಗೆ ಸ್ವಘೋಷಿತ ನಮೂನೆಯನ್ನೂ ಅಪ್‌ಲೋಡ್‌ ಮಾಡಬೇಕೆಂದು ತಿಳಿದಿದ್ದೇ ಅಂತಿಮ ದಿನಾಂಕದ ಎರಡು ದಿನ ಮೊದಲು.

ಬೇರೆ ಜಿಲ್ಲೆಗಳಲ್ಲಿ ಒಂದೇ ಪುಟದ ಸ್ವಘೋಷಿತ ನಮೂನೆಯ ಮಾದರಿ ರಚಿಸಿದ್ದರೆ, ಹಾವೇರಿ ಜಿಲ್ಲೆಯ ಸಂಘಗಳು ಎರಡು ಪುಟಗಳಲ್ಲಿ ಮಾಹಿತಿ ಪೂರೈಸ ಹೊರಟಿವೆ. ಈ ಎರಡು ಪುಟಗಳ ಘೋಷಣಾ ನಮೂನೆ ಅಪ್‌ಲೋಡ್‌ ಆಗಲು ಬಹಳ ಸಮಯ ತಿನ್ನುತ್ತಿದೆ ಎನ್ನಲಾಗಿದೆ. ಇದೂ ಕೂಡಾ ಸಾಲಮನ್ನಾ ಜಾರಿಯ ಪ್ರಕ್ರಿಯೆಯನ್ನು ನಿಧಾನಗೊಳಿಸಿದೆ.

50% ರೈತರಿಗೂ ‘ಸಾಲಮನ್ನಾ’ ಅನುಮಾನ!
ಸಹಕಾರಿ ಸಂಘಗಳ ಸಾಲಮನ್ನಾಕ್ಕೆ ಅರ್ಹರಾದ ಸದಸ್ಯರಲ್ಲಿ ಸುಮಾರು 50% ರೈತರ ದಾಖಲೆಗಳು ಸರಿಹೊಂದುತ್ತಿಲ್ಲ. ಆಧಾರ ಕಾರ್ಡ್, ರೇಶನ್ ಕಾರ್ಡ್, ಪಹಣಿ ಪತ್ರ ಮ್ಯಾಚ್ ಆಗುತ್ತಿಲ್ಲ. ಇಂಥ ಸಮಸ್ಯೆಗಳ ಪರಿಹಾರಕ್ಕೆ ತಹಶೀಲ್ದಾರ್‌, ಬ್ಯಾಂಕ್ ಇನ್‌ಸ್ಪೆಕ್ಟರ್‌, ಸಹಕಾರಿ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ಮೂರು ಜನರ ಸಮಿತಿ ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೂ ನಿಗದಿತ ಅವಧಿಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ರೈತರ ದಾಖಲಾತಿಗಳನ್ನು ಪರಿಶೀಲಿಸಿ ಅಗತ್ಯ ವ್ಯವಸ್ಥೆ ಕಲ್ಪಿಸುವುದು ಅಸಾಧ್ಯ ಎಂಬ ಮಾತೂ ಕೇಳಿಬರುತ್ತಿದೆ. ಹೀಗಾಗಿ ಎಲ್ಲಾ ರೈತರ ಸಾಲಮನ್ನಾಕ್ಕೆ ಈ ತೊಡಕೂ ಉಂಟಾಗಲಿದೆ.

ಡಿಸಿಸಿ ಬ್ಯಾಂಕ್‌ ಸಮಸ್ಯೆ, ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಪೋಡಿಯಾಗದ ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ರೈತರಿಗೆ ಸಾಲಮನ್ನಾದ ಪ್ರಯೋಜನ ಕೈತಪ್ಪಬಾರದು. ಹೊಸ ಜಿಲ್ಲೆಗಳ ಡಿಸಿಸಿ ಬ್ಯಾಂಕ್‌ಗಳ ಕೊರತೆ ಸರಿದೂಗಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮಾನದಂಡಗಳ ಪರಿಶೀಲನೆಗೆ ಸ್ಥಳೀಯ ಅಧಿಕಾರಿಗಳನ್ನು ಬಳಸಿಕೊಂಡು ವರದಿ ಪಡೆದು ಅರ್ಹ ಫಲಾನುಭವಿಗಳಿಗೆ ಪ್ರಯೋಜನ ಸಿಗುವಂತೆ ಮಾಡಬೇಕು. ಕೂಡಲೇ ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
- ಚಾಮರಸ ಮಾಲಿ ಪಾಟೀಲ್‌, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ

ಪೋಡಿ ಆಗದಿದ್ದರೂ ಮನ್ನಾ ಇಲ್ಲ
ಎಷ್ಟೋ ರೈತ ಕುಟುಂಬಗಳು ಹಲವು ವರ್ಷ ಹಿಂದೆಯೇ ತಮ್ಮ ಆಸ್ತಿ ವಿಭಾಗಿಸಿ ಬೇರೆ ಬೇರೆಯಾಗಿ ನೋಡಿಕೊಂಡು ಬರುತ್ತಿವೆ. ಆದರೆ, ಕಂದಾಯ ಇಲಾಖೆ ಮೂಲಕ ಆಗಬೇಕಿದ್ದ ಪೋಡಿ ಇನ್ನೂ ಆಗಿಲ್ಲ. ಆದ್ದರಿಂದ ಪಹಣಿ ಪತ್ರದಲ್ಲಿ ಸಾಮೂಹಿಕ ಎಂದು ತೋರಿಸುತ್ತದೆ. ಪೋಡಿಯಾಗದ ಜಮೀನುಗಳ ಮೇಲಿನ ಸಾಲವು ಸಾಲಮನ್ನಾಕ್ಕೆ ಅರ್ಹವಲ್ಲ ಎನ್ನಲಾಗುತ್ತಿದೆ. ಹೀಗಾಗಿ ಪೋಡಿಯಾಗದೇ ಉಳಿದಿರುವ ಜಮೀನುಗಳ ರೈತರಿಗೆ ಹೊಸ ತಲೆನೋವು ಶುರುವಾಗಿದೆ.

ಸಾಲದ ಹೊರೆಯಿಂದ ಬಳಲುತ್ತಿರುವ ರೈತರಿಗೆ ಸಾಲಮನ್ನಾ ಯೋಜನೆಯಿಂದ ನೆಮ್ಮದಿ ಸಿಗುವ ನಿರೀಕ್ಷೆ ಇತ್ತು. ಆದರೆ, ಸಾಲಮನ್ನಾ ಯೋಜನೆಗೆ ತಳಹಂತದ ತಾಂತ್ರಿಕ ಸಮಸ್ಯೆ ತೊಡಕಾಗಿದೆ. ಶೀಘ್ರವೇ ಈ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಎಲ್ಲಾ ರೈತರಿಗೂ ಯೋಜನೆಯ ಪ್ರಯೋಜನ ಸಿಗುವಂತೆ ಮಾಡಬೇಕಾದ್ದು ಸರಕಾರದ ಕರ್ತವ್ಯ. ಇಲ್ಲವಾದರೆ ಜನಪ್ರಿಯ ಯೋಜನೆಗಳೆಲ್ಲಾ ಕೇವಲ ಘೋಷಣೆಯಲ್ಲೇ ಉಳಿದುಬಿಡುವ ಅಪಾಯವಿದೆ.