samachara
www.samachara.com
ಸಹಕಾರಿ ಸಂಘಗಳಲ್ಲಿ ರೈತರ ಸಾಲ ಮನ್ನಾ; ಕುಮಾರಸ್ವಾಮಿ ಕೊಟ್ರೂ ಸರ್ವರ್‌ಗಳು ಬಿಡುತ್ತಿಲ್ಲ! 
GROUND REPORT

ಸಹಕಾರಿ ಸಂಘಗಳಲ್ಲಿ ರೈತರ ಸಾಲ ಮನ್ನಾ; ಕುಮಾರಸ್ವಾಮಿ ಕೊಟ್ರೂ ಸರ್ವರ್‌ಗಳು ಬಿಡುತ್ತಿಲ್ಲ! 

ಪ್ರತಿ ದಿನ ಸಾಲಗಾರ ರೈತರು ತಮ್ಮ ಊರಿನ ಪ್ರಾಥಮಿಕ ಸಹಕಾರಿ ಸಂಘಕ್ಕೆ ಎಡತಾಕುತ್ತಿದ್ದಾರೆ. ಅಲ್ಲಿನ ಸಮಸ್ಯೆ ನೋಡಿದ ಅವರಿಗೆ ತಮ್ಮ ಸಾಲ ಮನ್ನಾ ಆಗುವ ವಿಶ್ವಾಸವೇ ಕಳೆದುಹೋಗಿದೆ.

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಕರ್ನಾಟಕ ಸರಕಾರ ರೈತರ ಬೆಳೆ ಸಾಲ ಮನ್ನಾ ಘೋಷಿಸಿ ಹಲವು ತಿಂಗಳುಗಳು ಕಳೆದಿವೆ. ಮೊನ್ನೆ ನವೆಂಬರ್ 25ರೊಳಗೆ ರೈತರಿಂದ ಅಗತ್ಯ ದಾಖಲೆಗಳನ್ನು ಪ್ರಾಥಮಿಕ ಸಹಕಾರಿ ಸಂಘಗಳು ಸಂಗ್ರಹಿಸಿ ಸರಕಾರ ಹೇಳಿದ ಸರ್ವರ್‌ಗೆ ಅಪ್ಲೋಡ್ ಮಾಡಬೇಕಾಗಿತ್ತು. ಆದರೆ ಸರ್ವರ್ ನೀಡುತ್ತಿರುವ ಸಮಸ್ಯೆಯಿಂದ ನಿಗದಿತ ಸಮಯದಲ್ಲಿ ಅಪ್ಲೋಡ್ ಮಾಡಲಾಗದೇ ಸಹಕಾರಿ ಸಂಘಗಳು ಪರದಾಡುತ್ತಿವೆ.

ಆರೋಪಗಳ ಹಿನ್ನೆಲೆಯಲ್ಲಿ ‘ಸಮಾಚಾರ’ ಪ್ರಾಥಮಿಕ ಸಂಘಗಳಿಗೆ ಭೇಟಿ ನೀಡಿದಾಗ ಕಂಡಿದ್ದು ಇಷ್ಟು.

ಸಾಲಮನ್ನಕ್ಕಾಗಿ ಸಂಘಗಳು ಸಾಲಗಾರ ಕುಟುಂಬದ ಯಜಮಾನ ಒದಗಿಸಿದ ರೇಷನ್ ಕಾರ್ಡ್‌ನಲ್ಲಿ ನಮೂದಿಸಲಾದ ಕುಟುಂಬ ಸದಸ್ಯರೆಲ್ಲರ ಪಾನ್ ಕಾರ್ಡ್ (ಇದ್ದರೆ), ಆಧಾರ್ ನಂಬರ್ ಹಾಗೂ ಜಿಲ್ಲಾ ಮಧ್ಯವರ್ತಿ ಬ್ಯಾಂಕಲ್ಲಿ ತೆರೆಯಲಾದ ಖಾತೆ ಸಂಖ್ಯೆ ಇವುಗಳನ್ನು ಪಡೆದು ಸರಕಾರದ ಇಲಾಖೆ ನೀಡಿದ ಸರ್ವರ್‌ಗೆ ಅಪ್ಲೋಡ್ ಮಾಡಬೇಕು. ಕುಟುಂಬ ಸದಸ್ಯರು ಬೇರೆ ಊರಿನಲ್ಲಿ ಕೆಲಸದಲ್ಲಿದ್ದರೆ ಅವರ ಎಲ್ಲಾ ವಿವರಗಳನ್ನೂ ಸಂಗ್ರಹಿಸಬೇಕು. ಇದರ ಜತೆಗೆ ಪ್ರಾರಂಭದಿಂದಲೂ ಸರ್ವರ್ ಸಮಸ್ಯೆ ಕಾಡುತ್ತಿದೆ. ಅಲ್ಲದೇ ಸರಕಾರ ಪದೇ ಪದೇ ವೆಬ್‌ಸೈಟ್‌ ಅಡ್ರಸ್ ಬದಲಾಯಿಸಿದ್ದೂ ತಲೆನೋವಾಗಿ ಪರಿಣಮಿಸಿದೆ.

ಹಲವು ಸಮಸ್ಯೆಗಳು

ರೈತರಿಂದ ಸಂಗ್ರಹಿಸಿದ ಅಂಕಿ ಅಂಶಗಳನ್ನು ಮೊದಲು ನಿಗದಿತ ಅರ್ಜಿ ನಮೂನೆಯಲ್ಲಿ ತುಂಬಿ ನಂತರ ಅದರ ಮೇಲೆ ಯಜಮಾನನ ಸಹಿ ಪಡೆಯಬೇಕು. ಈ ರೀತಿ ಪ್ರತಿ ಸಾಲಗಾರ ರೈತನ ಅರ್ಜಿ ಭರ್ತಿ ಮಾಡಲು ಏನಿಲ್ಲವೆಂದರೂ ಅರ್ಧದಿಂದ ಮುಕ್ಕಾಲು ಗಂಟೆ ಸಮಯ ಬೇಕು. ನಂತರ ವೆಬ್‌ಸೈಟಿನಲ್ಲಿ ಫಾರ್ಮ್ ಭರ್ತಿ ಮಾಡಬೇಕು. ಕೊನೆಯಲ್ಲಿ ರೈತನ ಫೋಟೊ ಹಾಗೂ ಹಸ್ತಾಕ್ಷರ ಇರುವ ಅರ್ಜಿ ನಮೂನೆಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಕೊನೆಯ ಹಂತದಲ್ಲಿ ಇನ್ನೇನು ಅಪ್ಲೋಡ್ ಮಾಡಬೇಕು ಎಂದಾಗ ಗಿರಕಿ ಹೊಡೆದು ಹೊಡೆದು ‘ನಾಟ್ ವೆರಿಫೈಡ್’ ಎಂದು ಮತ್ತೆ ಖಾಲಿ ಫಾರಂ ಎದುರಾಗುತ್ತದೆ. ಮತ್ತೆ ಮೊದಲಿಂದ ಭರ್ತಿ ಮಾಡಬೇಕು. ಈ ಸರ್ಕಸ್ ಹಲವು ದಿನಗಳಿಂದ ನಡೆಯುತ್ತಿದ್ದರೂ ಒಂದೂ ಫಾರ್ಮ್ ಕೂಡ ಅಪ್ಲೋಡ್ ಆಗದಿರುವುದು ಸರಕಾರದ ಡಿಜಿಟಲ್ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಪ್ರಾಥಮಿಕ ಸಂಘಗಳ ತಲೆನೋವೇನು?

ಪ್ರತಿ ಪ್ರಾಥಮಿಕ ಸಂಘಕ್ಕೂ ಒಂದು ‘ಕೋಡ್’ ಕೊಡಲಾಗಿದೆ. ಈ ಕೋಡ್‌ ಹಾಕಿ ವೆಬ್‌ಸೈಟ್‌ ತೆರೆದು ಅದರಲ್ಲಿ ಮೊದಲು ಮೂಲಭೂತ ಮಾಹಿತಿ ತುಂಬುವ ಪೇಜ್ ತೆರೆದುಕೊಳ್ಳುತ್ತದೆ. ಈ ಪೇಜ್ ತಕ್ಷಣಕ್ಕೆ ತೆರೆದುಕೊಳ್ಳುವುದಿಲ್ಲ. ಒಮ್ಮೊಮ್ಮೆ ಕಾದು ಕಾದು ರಾತ್ರಿ ತೆರೆದುಕೊಂಡಿದ್ದೂ ಇದೆ! ಮತ್ತು ಯಾವಾಗ ಬೇಕಾದರೂ ಡಿಸ್ಕನೆಕ್ಟ್ ಆಗಬಹುದು. ಇನ್ನೇನು ಎಲ್ಲವನ್ನೂ ಭರ್ತಿ ಮಾಡಿ ಓಕೆ ಕೊಡುವ ಸಂದರ್ಭದಲ್ಲಿ ಸರ್ವರ್ ಕೈಕೊಡುವುದೂ ಇದೆ. ಹಾಗಾದಲ್ಲಿ ಮತ್ತೆ ಪುನಃ ಎಲ್ಲ ಮಾಹಿತಿಗಳನ್ನೂ ತುಂಬಬೇಕು. ಒಂದು ದಿನದಲ್ಲಿ ಅಬ್ಬಬ್ಬಾ ಎಂದರೆ 8-10 ಫಾರ್ಮ್‌ಗಳನ್ನು ಭರ್ತಿ ಮಾಡಿದರೆ ಅದೇ ದೊಡ್ಡ ಸಾಧನೆ.

ಗ್ರಾಮೀಣ ಭಾಗದ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿ 2-3 ಸಾವಿರ ರೈತರಿರುತ್ತಾರೆ. ‘ಸಮಾಚಾರ’ ಭೇಟಿ ನೀಡಿದ ಉತ್ತರ ಕನ್ನಡದ ಈ ಸಂಘದಲ್ಲಿ ಸಾಲ ಮನ್ನಾಕ್ಕೆ ಅರ್ಹತೆ ಪಡೆದ 586 ರೈತರಿದ್ದಾರೆ. ಹೀಗೆ ದಿನಕ್ಕೆ 8-10 ಅರ್ಜಿಗಳನ್ನು ತುಂಬುತ್ತಿದ್ದರೆ ಇದು ಪೂರ್ತಿಯಾಗಲು ಎರಡು ತಿಂಗಳುಗಳೇ ಬೇಕು.

ಹಾಗೂ ಹೀಗೂ ಈ ಅರ್ಜಿ ತುಂಬಿದಿರಿ ಅಂದುಕೊಳ್ಳಿ, ಮುಂದೆ ಆಧಾರ್ ಲಿಂಕ್ ಒದಗಿಸುವ ಪುಟ ತೆರೆದುಕೊಳ್ಳುತ್ತದೆ. ಮಾಹಿತಿ ಒದಗಿಸಿದ ನಂತರ ವೆರಿಫಿಕೇಶನ್‌ಗೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ಕೊನೆಗೆ ‘ನಾಟ್ ವೆರಿಫೈಡ್’ ಎಂದು ಒಂದು ಕಡೆ ತೋರಿಸುತ್ತದೆ, ಇನ್ನೊಂದು ಕಡೆ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿ 100% ಸರಿ ಹೊಂದಿದೆ ಎಂದೂ ಇಂಗ್ಲಿಷ್‌ನಲ್ಲಿ ಕೆಂಪಕ್ಷರದಲ್ಲಿ ತೋರಿಸುತ್ತದೆ. ಆದರೆ ಸರಿಯಾಗಿ ಸೇವ್ ಆಗದೇ ಮತ್ತೆ ಮಾಹಿತಿ ತುಂಬಬೇಕಾಗುತ್ತದೆ.

ಆರು ಹಂತಗಳು:

ಮೇಲಿನ ಎರಡು ಹಂತಗಳಾದ ನಂತರ ಮೂರನೇ ಹಂತದಲ್ಲಿ ವಿಳಾಸ, ನಾಲ್ಕನೇ ಹಂತದಲ್ಲಿ ರೇಶನ್ ಕಾರ್ಡ್, ಐದನೇ ಹಂತದಲ್ಲಿ ಪಹಣಿ ಪತ್ರದ ಮಾಹಿತಿ ಭರ್ತಿ ಮಾಡಬೇಕಿದೆ. ಮತ್ತು ಆರನೇ ಹಂತದಲ್ಲಿ ರೈತರ ಸ್ವಘೋಷಿತ ನಮೂನೆಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಒಂದೊಮ್ಮೆ ರೈತರಿಂದ ಬೆಳೆ ವಿಮೆ ಕಂತು ಬಾಕಿಯಿದ್ದಲ್ಲಿ ಅದನ್ನು ಭರಿಸಿಕೊಂಡು ಮುಂದುವರಿಯಬೇಕು.

ರೈತರ ಸ್ವಘೋಷಿತ ನಮೂನೆಯಂತೂ ಒಬ್ಬರದ್ದೂ ಅಪ್ಲೋಡ್ ಆಗದೇ ಈ ವರೆಗೆ ಯಾವ ರೈತನೂ ಸಾಲ ಮನ್ನಾದ ಅರ್ಹತೆ ಪಡೆದಿಲ್ಲ. ಇದಕ್ಕೆ ಕಾರಣ ಸರಿಯಾದ ಸಮಯದಲ್ಲಿ ಕೈಕೊಡುತ್ತಿರುವ ಸರ್ವರ್.

ಬದಲಿ ವ್ಯವಸ್ಥೆ ಸಾಧ್ಯವಾಗುತ್ತಿಲ್ಲ:

ಒಂದೊಮ್ಮೆ ಸಹಕಾರಿ ಸಂಘಗಳಲ್ಲಿನ ಸೀಮಿತ ಕೆಲಸಗಾರರಿಂದ ಮಾಹಿತಿ ತುಂಬುವುದು ಸಾಧ್ಯವಾಗದಿದ್ದಲ್ಲಿ ಅಥವಾ ಇಂಟರನೆಟ್ ಸಮಸ್ಯೆ ಬಂದಲ್ಲಿ ಹತ್ತಿರದ ಸೈಬರ್ ಕೆಫೆಗೆ ಹೋಗಿ ಕೆಲಸ ಪೂರೈಸಲು ಸೂಚನೆ ಇದೆ. ಆದರೆ ಅದಕ್ಕೆ ಹಚ್ಚುವರಿ ಸಿಬ್ಬಂದಿಗಳನ್ನು ತೆಗೆದುಕೊಳ್ಳುವಂತಿಲ್ಲ. ಅಲ್ಲದೇ ರೈತರ ಹಲವು ಅಮೂಲ್ಯ ದಾಖಲೆಗಳನ್ನು ಕೊಂಡೊಯ್ಯುವುದೂ ಕಷ್ಟ ಎಂಬುದು ಪ್ರಾಥಮಿಕ ಸಂಘಗಳ ಅಭಿಪ್ರಾಯ. ಈ ಕಾರಣಕ್ಕೆ ಅದೇ ಸರ್ವರ್‌ಗೆ ಜೋತು ಬಿದ್ದು ಕೀ ಬೋರ್ಡ್‌ ಕುಟ್ಟುತ್ತಾ ಕೂತಿದ್ದಾರೆ.

ಸರ್ವರ್ ಸಮಸ್ಯೆ ಕುರಿತು ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಗೆ ಹಲವು ಸಲ ದೂರು ಸಲ್ಲಿಸಿದರೂ ಯಾವುದೇ ಪರಿಹಾರ ಈ ವರೆಗೆ ದೊರಕಿಲ್ಲ. ಇಷ್ಟೆಲ್ಲಾ ದೂರುಗಳನ್ನು ನೋಡಿಯೂ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮಾತ್ರ ಕಣ್ಣುಮುಚ್ಚಿ ಕುಳಿತಿದೆ. ಭೇಸತ್ತು ಪ್ರಾಥಮಿಕ ಸಂಘಗಳ ಒಕ್ಕೂಟ ಈ ಬಗ್ಗೆ ಕ್ರಮ ಕೈಗೊಳ್ಳಲು ಸಚಿವರಿಗೆ ಮನವಿ ಸಲ್ಲಿಸಿದರೆ ಅವರಿಂದಲೂ ಸೂಕ್ತ ಸ್ಪಂದನೆ ದೊರೆತಿಲ್ಲ.

ದೂರವಾಗುತ್ತಿಲ್ಲ ರೈತರ ಆತಂಕ:

ಇವೆಲ್ಲಾ ಅಡೆ ತಡೆಗಳ ಮಧ್ಯೆ ಪ್ರತಿ ದಿನ ಸಾಲಗಾರ ರೈತರು ತಮ್ಮ ಊರಿನ ಪ್ರಾಥಮಿಕ ಸಹಕಾರಿ ಸಂಘಕ್ಕೆ ಎಡತಾಕುತ್ತಿದ್ದಾರೆ. ಅಲ್ಲಿನ ಸಮಸ್ಯೆ ನೋಡಿದ ಅವರಿಗೆ ತಮ್ಮ ಸಾಲ ಮನ್ನಾ ಆಗುವ ವಿಶ್ವಾಸವೇ ಕಳೆದುಹೋಗಿದೆ. ಇವೆಲ್ಲಾ ಪ್ರಕ್ರಿಯೆಗಳು ನಡೆಯುತ್ತಿದ್ದರೆ ಆತಂಕಿತ ಮತ್ತು ಪ್ರಶ್ನಾರ್ಥಕ ಮುಖ ಹೊತ್ತು ದೃಷ್ಟಿಸುತ್ತಿರುತ್ತಾರೆ. ಕೊನೆಗೆ ಇವೆಲ್ಲಾ ಶೂನ್ಯ ಫಲಿತಾಂಶದತ್ತಲೇ ವಾಲುತ್ತಿರುವುದು ಅವರಲ್ಲಿ ಮತ್ತಷ್ಟು ಆತಂಕವನ್ನು ಹುಟ್ಟಿದೆ. ಹತಾಶದ ಕೆಲವು ರೈತರು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ತಕ್ಷಣ ಸ್ಪಂದಿಸಬೇಕಾಗಿದೆ. ಈ ಬಗ್ಗೆ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್‌ ಗಮನ ಹರಿಸಬೇಕಿದೆ.