samachara
www.samachara.com
ಪ್ರವಾಹ ಫಾಲೋಅಪ್‌: ಇನ್ನೂ ರಚನೆಯಾಗದ ಕೊಡಗು ಪುನರ್ನಿರ್ಮಾಣ ಪ್ರಾಧಿಕಾರ
GROUND REPORT

ಪ್ರವಾಹ ಫಾಲೋಅಪ್‌: ಇನ್ನೂ ರಚನೆಯಾಗದ ಕೊಡಗು ಪುನರ್ನಿರ್ಮಾಣ ಪ್ರಾಧಿಕಾರ

ಪ್ರವಾಹದ ಪುನರ್‌ವಸತಿ ಪ್ರಕ್ರಿಯೆಯಲ್ಲಿ ಖಾಸಗಿಯವರಿಗೆ ಇರುವ ಆಸಕ್ತಿ ಸರ್ಕಾರಕ್ಕೆ ಇಲ್ಲವಾಗಿರುವುದು ನಿಜಕ್ಕೂ ದೊಡ್ಡ ದುರಂತ.

ವಸಂತ ಕೊಡಗು

ವಸಂತ ಕೊಡಗು

ಕೊಡಗಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ಬಿದ್ದ ಮಹಾ ಮಳೆ ಸಂತ್ರಸ್ಥರನ್ನು ಸೃಷ್ಟಿಸಿದೆ. ಇವರ ಕಣ್ಣೀರು ಒರಿಸಬೇಕಾದ ಸರಕಾರ ಮಾತ್ರ ನಿಧಾನಗತಿಯಲ್ಲಿದೆ. ಅಕ್ಟೋಬರ್‌ನಲ್ಲಿ ಜಿಲ್ಲೆಗೆ ಕಾವೇರಿ ತುಲಾ ಸಂಕ್ರಮಣದ ಸಮಯದಲ್ಲಿ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಶೀಘ್ರದಲ್ಲೇ ಸಂತ್ರಸ್ಥರಿಗೆ ಮನೆ ನಿರ್ಮಾಣ ಆರಂಭಿಸುವ ಭರವಸೆ ನೀಡಿದ್ದರು ಮತ್ತು ಜನತೆಯ ಬೇಡಿಕೆಯಾದ ಕೊಡಗು ಪುರ್ನಿರ್ಮಾಣ ಪ್ರಾಧಿಕಾರದ ರಚನೆಗೂ ಬೆಂಬಲ ಸೂಚಿಸಿದ್ದರು.

ಕೊಡಗಿನಲ್ಲಿ ಮನೆಗಳನ್ನು ಸಂಪೂರ್ಣ ಮತ್ತು ಭಾಗಶಃ ಕಳೆದುಕೊಂಡಿರುವ ಜನರು ಸುಮಾರು 840. ಈ ಸಂತ್ರಸ್ಥರಿಗಾಗಿ 940 ಮನೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ವಿವಿದೆಡೆಗಳಲ್ಲಿ ಸ್ಥಳವನ್ನು ಗುರುತು ಮಾಡಿದೆಯಾದರೂ ಇಂದಿನವರೆಗೂ ಕೆಲಸ ಆರಂಭವಾಗಿಲ್ಲ.

ಈ ಮದ್ಯೆ ಸಂತ್ರಸ್ಥರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ ಪೋಲೀಸ್ ಠಾಣೆ ವ್ಯಾಪ್ತಿಯ ಕಡಂದಾಳು ಎಂಬಲ್ಲಿಂದ ವರದಿ ಆಗಿದೆ. ಪೃಕೃತಿ ವಿಕೋಪದಲ್ಲಿ ನಾರಾಯಣ ನಾಯಕ್ (60) ಎಂಬುವವರ ಮನೆ ಭಾಗಶಃ ಹಾನಿಗೀಡಾಗಿದ್ದು ವಾಸಯೋಗ್ಯವಲ್ಲವಾಗಿತ್ತು. ಈ ಕುಟುಂಬ ಮೊದಲು ಕುಶಾಲನಗರದ ವಾಲ್ಮೀಕಿ ಭವನದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿತ್ತು. ನಂತರ ತಮ್ಮ ಸಂಭಂಧಿಕರ ಮನೆಗೆ ಹಿಂತಿರುಗಿದ್ದರು. ಇವರು ನಾಲ್ಕು ದಿನದ ಹಿಂದೆ ಮನೆಯಲ್ಲೇ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ‘ಸರ್ಕಾರ ಇನ್ನೂ ಮನೆ ನೀಡದಿರುವುದು ಕಾರಣ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಂತಹ ಘಟನೆಗಳ ನಂತರವೂ ಸರ್ಕಾರ ನಿದ್ರೆಯಿಂದ ಎಚ್ಚೆತ್ತಿಲ್ಲ. ಪುನರ್ವಸತಿಗಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ದರ್ಜೆ ಅಧಿಕಾರಿಯಾದ ಎಂ. ಕೆ. ಜಗದೀಶ್ ಅವರನ್ನು ಮೂರು ತಿಂಗಳ ಹಿಂದೆ ಕೊಡಗಿಗೆ ನೇಮಿಸಿತು. ಇದೇ ಸಮಯದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಪ್ರವೀಣ್ ಕುಮಾರ್ ಅವರನ್ನೂ ನೇಮಕ ಮಾಡಿತು. ಕೇವಲ ಎರಡು ತಿಂಗಳ ಕೆಲಸ ಮಾಡಿರುವ ಅವರನ್ನು ಒಂದು ವಾರದ ಹಿಂದೆ ವರ್ಗ ಮಾಡಲಾಗಿದೆ. ಈಗ ಆ ಹುದ್ದೆಯ ಹೆಚ್ಚುವರಿ ಛಾರ್ಜನ್ನೂ ಜಗದೀಶ್ ಅವರೇ ಹೊಂದಿದ್ದಾರೆ.

ಪ್ರವಾಹ ಫಾಲೋಅಪ್‌: ಇನ್ನೂ ರಚನೆಯಾಗದ ಕೊಡಗು ಪುನರ್ನಿರ್ಮಾಣ ಪ್ರಾಧಿಕಾರ

ಈ ಕುರಿತು ‘ಸಮಾಚಾರ’ದೊಂದಿಗೆ ಮಾತನಾಡಿದ ಜಿಲ್ಲೆಯ ಕಂದಾಯ ಅಧಿಕಾರಿಯೊಬ್ಬರು, "840 ಮನೆಗಳ ನಿರ್ಮಾಣಕ್ಕಾಗಿ ಲೇ ಔಟ್ ನಿರ್ಮಿಸಲು 31.35 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ವಿಧಾನ ಸೌಧಕ್ಕೆ ಕಳಿಸಿಕೊಡಲಾಗಿದೆ. ಆದರೆ ಇನ್ನೂ ಅನುಮೋದನೆ ದೊರೆತಿಲ್ಲ,” ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಅಲ್ಲದೆ ಮನೆಗಳ ನಿರ್ಮಾಣಕ್ಕೆ 9 ರಿಂದ 10 ಲಕ್ಷ ರೂಪಾಯಿ ವೆಚ್ಚದ ಮೂರು ಮಾದರಿಯ ಮನೆಗಳನ್ನು ವಿವಿಧ ಕಂಪೆನಿಗಳು ಸಿದ್ದಪಡಿಸಿ ವರದಿಯನ್ನು ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಇಡಲಾಗಿದೆ. ಆದರೆ ಅನುಮೋದನೆ ಬಾರದೆ ಯಾವುದೇ ಕೆಲಸವಾಗುತ್ತಿಲ್ಲ.

ಮನೆಗಳನ್ನು ಕಳೆದುಕೊಂಡ 840 ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿ ಹಣಕಾಸಿನ ನೆರವನ್ನೂ ನೀಡುವ ಕಾರ್ಯವೂ ಇನ್ನೂ ಮುಗಿದಿಲ್ಲ. ಈಗ ಸುಮಾರು 300 ಕುಟುಂಬಗಳಿಗೆ ಮಾತ್ರ ತಲಾ 50 ಸಾವಿರ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗಿನ ಸಂತ್ರಸ್ಥರಿಗೆ ಪರಿಹಾರ ನಿಧಿಗೆ 200 ಕೋಟಿ ರೂಪಾಯಿಗಳಿಗೂ ಮಿಕ್ಕಿ ಹಣ ಬಂದಿದೆಯಾದರೂ ಜಿಲ್ಲೆಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಇಲ್ಲ. ಕೆಎಸ್‍ಆರ್‌ಟಿಸಿ ನೌಕರರ ಒಂದು ದಿನದ ವೇತನ ಸುಮಾರು 2 ಕೋಟಿ ರೂಪಾಯಿಗಳಷ್ಟನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮಾ ಮಾಡಲಾಗಿದೆಯಾದರೂ ಇಲ್ಲಿ ಯಾವುದೇ ಮಾಹಿತಿ ಇಲ್ಲ.

ಕನಿಷ್ಟ ಪಕ್ಷ ಸರ್ಕಾರ ಹಣ ಕೊಡುವುದು ಬೇಡ , ದಾನಿಗಳು ನೀಡಿರುವ ಹಣವನ್ನಾದರೂ ವೆಚ್ಚ ಮಾಡಿದರೆ ಸಂತ್ರಸ್ಥರು ಒಂದಷ್ಟು ನೆಮ್ಮದಿ ಅನುಭವಿಸುತ್ತಾರೆ. ಈಗಾಗಲೇ ಇನ್ಫೋಸಿಸ್ 25 ಕೋಟಿ ರೂಪಾಯಿಗಳ ನೆರವನ್ನು ಘೋಷಿಸಿದೆ. ಬುಧವಾರ ಮಂಗಳೂರಿನ ಟಿಟೂಸ್ ಫೌಂಡೇಷನ್‌ ಮಾಲೀಕ ಸಂದೇಶ್ ಮಾರ್ಟಿನ್ ಎನ್ನುವ ಉದ್ಯಮಿಯೊಬ್ಬರು ಕೊಡಗಿನ ಸಂತ್ರಸ್ಥರಿಗೆ 100 ಮನೆಗಳನ್ನು ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ 7 ಎಕರೆ ಭೂಮಿಯನ್ನೂ ಕೇಳಿದ್ದಾರೆ.

ಪ್ರವಾಹದ ಪುನರ್‌ವಸತಿ ಪ್ರಕ್ರಿಯೆಯಲ್ಲಿ ಖಾಸಗಿಯವರಿಗೆ ಇರುವ ಆಸಕ್ತಿ ಸರ್ಕಾರಕ್ಕೆ ಇಲ್ಲವಾಗಿರುವುದು ನಿಜಕ್ಕೂ ದೊಡ್ಡ ದುರಂತ. ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಎಸಿ ರೂಮಿನಲ್ಲಿ ಕೆಲಸ ಮಾಡುವ ದಪ್ಪ ಚರ್ಮದ ಅಧಿಕಾರಿಗಳ ಕಿವಿ ಹಿಂಡಿ ಕೆಲಸ ಮಾಡಿಸಬೇಕಾಗಿದೆ. ಇಲ್ಲದಿದ್ದರೆ ಕೊಡಗಿನ ಸಂತ್ರಸ್ಥರಿಗೆ ಉಳಿಯುವುದು ಹೋರಾಟದ ಮಾರ್ಗವೊಂದೇ. ಈ ಹಿಂದೆ ದಿಡ್ಡಳ್ಳಿಯಲ್ಲೂ ಬಡವರು ಹೋರಾಟದ ಮೂಲಕವೇ ಮನೆಗಳನ್ನು ಪಡೆದುಕೊಂಡದ್ದು ಇದೇ ಹಾದಿಯಲ್ಲಿ. ಆಗ ಜಿಲ್ಲೆ ಅವರ ಹೋರಾಟವನ್ನು ದೂರದಿಂದ ನೋಡಿತ್ತು. ಈಗ ಅವರೇ ಹೋರಾಟ ಹಾದಿಯನ್ನು ಹಿಡಿಯಬೇಕಾಗಿ ಬಂದಿದೆ.