samachara
www.samachara.com
‘ನೆಮ್ಮದಿ ತರದ ಹಣ, ಸಾವಿಗೆ ಸಿಗದ ನ್ಯಾಯ’: ಟಿಪ್ಪು ಜಯಂತಿಗೆ ಬಲಿಯಾದ 2 ಕುಟುಂಬಗಳ ಕತೆ
GROUND REPORT

‘ನೆಮ್ಮದಿ ತರದ ಹಣ, ಸಾವಿಗೆ ಸಿಗದ ನ್ಯಾಯ’: ಟಿಪ್ಪು ಜಯಂತಿಗೆ ಬಲಿಯಾದ 2 ಕುಟುಂಬಗಳ ಕತೆ

ಕುಟ್ಟಪ್ಪ ಕೆಲಸದಿಂದ ಅಮಾನತುಗೊಂಡು ಕೆಲ ವರ್ಷಗಳ ಕಾಲ ಅಂದಿನ ಸೋಮವಾರಪೇಟೆ ಕ್ಷೇತ್ರದ ಶಾಸಕರೂ ಆಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಅವರ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. 10 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ ನಂತರ...

ಕೊಡಗು ಜಿಲ್ಲೆಯ ಚುಮು ಚುಮು ಚಳಿಯಲ್ಲಿ, ಸ್ವೆಟರ್‌ ಹಾಕಿಕೊಂಡ ‘ಸಮಾಚಾರ’ ತಂಡ ಸೋಮವಾರ ಪೇಟೆಯಿಂದ ಹೊರಟಿದ್ದು ಮಂಗಳವಾರ.

ಮಾದಾಪುರ ದಾಟಿ ಎರಡು ಕಿಲೋಮೀಟರ್‌ ದೂರದಲ್ಲಿದ್ದ ದಿವಂಗತ ದೇವಪಂಡ ಕುಟ್ಟಪ್ಪ ಮನೆಯ ಹಾದಿಯಲ್ಲಿದ್ದಾಗ ಬೆಳಗ್ಗೆ 7 ಗಂಟೆ. ಆ ಚಳಿಯಲ್ಲೂ ಮನೆಯ ದಾರಿಯಲ್ಲಿ ಕೊಡವ ಸಂಪ್ರದಾಯದಂತೆ ಸೀರೆ ಉಟ್ಟಿದ್ದ ವೃದ್ಧೆಯೊಬ್ಬರು ನಿಂತಿದ್ದರು. ಕಾರಿನ ಗ್ಲಾಸು ಇಳಿಸಿ, ನುಗ್ಗಿ ಬರುತ್ತಿದ್ದ ಶೀತ ಗಾಳಿಯಲ್ಲಿ ‘ಕುಟ್ಟಪ್ಪ ಅವರ ಮನೆಗೆ ದಾರಿ ಯಾವುದು?’ ಎಂದು ಕೇಳಿದಾಗ, “ಅವರ ಪತ್ನಿ ನಾನೇ” ಎಂದು ನೋವಿನ ನಗು ಬೀರಿದರು. ಕಾರು ಹತ್ತಿದ ಆಕೆ, ತಮ್ಮ ಮನೆಗೆ ನಮ್ಮನ್ನು ಕರೆದೊಯ್ದರು.

ಹೀಗೆ, ಟಿಪ್ಪು ಜಯಂತಿ ನೆಪದಲ್ಲಿ ಜೀವ ಕಳೆದುಕೊಂಡ ದೇವಪಂಡ ಕುಟ್ಟಪ್ಪ ಅವರ ಕುಟುಂಬದ ಮುಖಾಮುಖಿಯಾಯಿತು. ಸರಿಯಾಗಿ ಮೂರು ವರ್ಷದ ಹಿಂದೆ ಇದೇ ತಿಂಗಳಿನ 10ನೇ ತಾರೀಕು ಇದೇ ದಾರಿಯಲ್ಲಿ ಮಡಿಕೇರಿ ಕಡೆ ಹೊರಟಿದ್ದರು ಕುಟ್ಟಪ್ಪ. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದ ಅವರು ಮಡಿಕೇರಿಗೆ ಹೋಗಿ ಬರುವುದಾಗಿ ಹೇಳಿ, ಬೆಳಿಗ್ಗೆ 8 ಗಂಟೆಗೆ ಮನೆ ಬಿಟ್ಟವರು ವಾಪಸ್‌ ಬರಲೇ ಇಲ್ಲ.

“ಮಧ್ಯಾಹ್ನದ ಊಟಕ್ಕೆ ಬರುವುದಾಗಿ ಹೇಳಿ ನನ್ನತ್ತ 2-3 ಬಾರಿ ತಿರುಗಿ ತಿರುಗಿ ನೋಡಿಕೊಂಡು ಹೋಗಿದ್ದರು. ಆದರೆ ಆ ನೋಟವೇ ಕೊನೆಯಾಯಿತು. ಕ್ಷುಲ್ಲಕ ಕಾರಣಕ್ಕೆ ನನ್ನ ಗಂಡ ಬಲಿಯಾಗಬೇಕಾಯಿತು,” ಎಂದರು ಚಿಣ್ಣವ್ವ. ಚಿಣ್ಣವ್ವ ಕುಟ್ಟಪ್ಪ ಅವರ ಪತ್ನಿ ಹಾಗೂ ಹೀಗನ್ನುವಾಗ ಅವರ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು.

ಚಿಣ್ಣವ್ವ, ಕುಟ್ಟಪ್ಪ ಪತ್ನಿ. 
ಚಿಣ್ಣವ್ವ, ಕುಟ್ಟಪ್ಪ ಪತ್ನಿ. 
/ಸಮಾಚಾರ. 

ಸರ್ಕಾರಿ ನೌಕರಿ, ಆರ್‌ಎಸ್‌ಎಸ್‌ ಸಹವಾಸ, & ಸಾವು

ಕುಟ್ಟಪ್ಪ ಹುಟ್ಟಿ ಬೆಳೆದಿದ್ದೆಲ್ಲಾ ಮಾದಾಪುರ ಸಮೀಪದ ಇಗ್ಗೋಡ್ಲುವಿನಲ್ಲಿ. ಸಣ್ಣ ರೈತ ಕುಟುಂಬದಲ್ಲಿ ಹುಟ್ಟಿದ ಕುಟ್ಟಪ್ಪ ಜೀವನೋಪಾಯಕ್ಕಾಗಿ ತೋಟಗಾರಿಕಾ ಇಲಾಖೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಸೇರಿಕೊಂಡಿದ್ದರು.

“ಅವರಿಗೆ ಮೊದಲಿನಿಂದಲೂ ಹಿಂದುತ್ವದ ಬಗ್ಗೆ ಒಲವು ಜಾಸ್ತಿ. ಆರ್‌ಎಸ್ಎಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ನಮ್ಮಪ್ಪ ಇದೇ ಕಾರಣಕ್ಕೆ ಮೂರು ಬಾರಿ ಕೆಲಸದಿಂದಲೂ ಅಮಾನತ್ತುಗೊಂಡಿದ್ದರು,” ಎಂದು ತಮ್ಮ ತಂದೆಯ ಚರಿತ್ರೆ ತೆರೆದಿಡುತ್ತಾರೆ ಅವರ ಪುತ್ರ ಡಾಲಿ.

ಕುಟ್ಟಪ್ಪ ಕೆಲಸದಿಂದ ಅಮಾನತುಗೊಂಡು ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲ ವರ್ಷಗಳ ಕಾಲ ಅಂದಿನ ಸೋಮವಾರಪೇಟೆ ಕ್ಷೇತ್ರದ ಶಾಸಕರೂ ಆಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಅವರ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. 10 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ ನಂತರ ಅವರು ವಿಹೆಚ್‍ಪಿಯ ಪೂರ್ಣಾವಧಿ ಕಾರ್ಯಕರ್ತರಾಗಿ ಸೇರಿಕೊಂಡಿದ್ದರು. ತಮ್ಮ ಪುತ್ರ ಡಾಲಿಯನ್ನೂ ಆರ್‌ಎಸ್‍ಎಸ್‌ಗೆ ಸೇರಿಸಿ ತಮ್ಮ ಹಿಂದುತ್ವದೆಡೆಗಿನ ಒಲವನ್ನು ಮಗನಿಗೂ ದಾಟಿಸಿದ್ದರು.

ಇಂಥಹ ಕುಟ್ಟಪ್ಪ ತಾವು ಸಾಯುವಾಗ ತಮ್ಮ ಕುಟುಂಬಸ್ಥರಿಗೆಂದು 4 ಎಕರೆ ಕಾಫಿ ತೋಟವನ್ನು ಬಿಟ್ಟು ಹೋಗಿದ್ದಾರೆ. ಅವರು ಮಗ ಡಾಲಿ ಈಗಲೂ ಮಡಿಕೇರಿಯ ಖಾಸಗಿ ಅಂಗಡಿಯೊಂದರಲ್ಲಿ ತಿಂಗಳಿಗೆ 13 ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದಾರೆ. “ತಂದೆ ಮೃತಪಟ್ಟಾಗ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ, ಕೊಡವ ಸಮಾಜ ಮತ್ತು ದಾನಿಗಳಿಂದ 4 ಲಕ್ಷ ರೂಪಾಯಿ ನೆರವು ಬಂತು. ಬಿಟ್ಟರೆ ಇನ್ನೇನೂ ಬರಲಿಲ್ಲ. ಆದರೆ ಹೊರಗೆ ಮಾತ್ರ 70 - 80 ಲಕ್ಷ ರೂಪಾಯಿ ಸಹಾಯ ಹರಿದು ಬಂದಿದೆ ಎಂಬ ಗುಲ್ಲು ಹಬ್ಬಿದೆ,” ಎಂದು ವಿಷಾಧಿಸಿದರು ಅವರು.

ತಂದೆಯ ಫಿಕ್ಸ್ಡ್‌ ಡಿಪಾಸಿಟ್ ಹಾಗೂ ನಿವೃತ್ತಿ ಸೌಲಭ್ಯದಿಂದ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯೊಂದನ್ನು ನಿರ್ಮಿಸಿಕೊಂಡಿದ್ದೇವೆ ಎನ್ನುತ್ತಾರೆ ಡಾಲಿ. ಆದರೆ ಮನೆಯಲ್ಲಿ ಯಜಮಾನನೇ ಇಲ್ಲದ ಕಾರಣದಿಂದ ತಾಯಿ ಮಗನ ನಡುವೆ ಬಾಂಧವ್ಯವೇ ಸರಿ ಇಲ್ಲ. ಸಂಘಪರಿವಾರದ ನಾಯಕರು ಅನೇಕ ಬಾರಿ ಆರ್ಥಿಕ ತಳಹದಿಯ ಮೇಲೆ ನಿಂತಿರುವ ವ್ಯಾಜ್ಯ ಪರಿಹರಿಸುವ ವಿಫಲ ಯತ್ನ ನಡೆಸಿದ್ದಾರೆ.

ನೆಮ್ಮದಿ ಕಳೆದ ಹಣ, ಸಿದ್ಧಾಂತ:

“ಮಗ ಹಣ ಬಚ್ಚಿಟ್ಟಿದ್ದಾನೆ,” ಎಂದು ತಾಯಿ ನೇರವಾಗಿಯೇ ಆರೋಪಿಸುತ್ತಿದ್ದಾರೆ. ಈ ಸಮಯದಲ್ಲಿ ಅವರು ಮಾನಸಿಕ ರೋಗಿಗಳಂತೆ ವರ್ತಿಸುತ್ತಾರೆ. ಮಗ ಡಾಲಿ ಇದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ‘ಸಮಾಚಾರ’ದ ಈ ವರದಿಗಾರನ ಮುಂದೆಯೇ ಇಂತಹದೊಂದು ಬಿಕ್ಕಟ್ಟಿನ ವಿಚಾರ ಹೊರಬಂದಾಗ, ‘ತಂದೆ ಬದುಕಿದ್ದಿದ್ದರೆ ಇದಕ್ಕೆಲ್ಲ ಅವಕಾಶವೇ ಇರುತ್ತಿರಲಿಲ್ಲ’ ಎಂದು ಸಪ್ಪೆ ಮೋರೆ ಹಾಕಿದರು ಡಾಲಿ.

ಇದು ಕುಟುಂಬದ ಇವತ್ತಿನ ಪರಿಸ್ಥಿತಿ. ಕುಟ್ಟಪ್ಪ ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅವರ ಮಗನನ್ನೂ ಅದೇ ಹಾದಿಗೆ ಕರೆತಂದಿದ್ದರು. ನಡುವೆ, ತೀರಿಕೊಂಡ ನಂತರ ಅವರ ಕುಟುಂಬವೇ ವ್ಯಾಜ್ಯಗಳಿಗೆ ಸಿಲುಕಿಕೊಂಡಿದೆ. ಅಲ್ಲೀಗ ಮುಖ್ಯ ಅಂತ ಅನ್ನಿಸಿಕೊಳ್ಳುತ್ತಿರುವುದು ಹಣ ಮತ್ತು ಹಣ ಅಷ್ಟೆ. ಕುಟ್ಟಪ್ಪ ಸಾವಿನ ಮೊಕದ್ದಮೆ ಈಗಲೂ ಮಡಿಕೇರಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದು 42 ಸಾಕ್ಷಿದಾರರ ವಿಚಾರಣೆ ಮುಂದುವರೆದಿದೆ. ಅದಕ್ಕೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆಯೂ ಕುಟುಂಬದಲ್ಲಿದೆ. ಆದರೆ ಕಳೆದು ಹೋಗಿರುವ ನೆಮ್ಮದಿ ಸಿಗುವ ಸಾಧ್ಯತೆಗಳು ಮಾತ್ರ ಇಲ್ಲಿ ಕಾಣಿಸುತ್ತಿಲ್ಲ.

ಕೊಡಗಿನಲ್ಲಿ ಸಾವಿರ ದಿನಗಳ ಹಿಂದೆ ನಡೆದ ಘಟನಾವಳಿಗಳು, ಕುಟ್ಟಪ್ಪ, ಶಾಹುಲ್ ಹಮೀದ್ ಕುಟುಂಬದವರ ಚಿತ್ರಗಳು. 
ಕೊಡಗಿನಲ್ಲಿ ಸಾವಿರ ದಿನಗಳ ಹಿಂದೆ ನಡೆದ ಘಟನಾವಳಿಗಳು, ಕುಟ್ಟಪ್ಪ, ಶಾಹುಲ್ ಹಮೀದ್ ಕುಟುಂಬದವರ ಚಿತ್ರಗಳು. 
/ಸಮಾಚಾರ. 

ಇನ್ನೊಂದು ಮಗ್ಗುಲಿನಲ್ಲಿ:

ಒಂದು ಕಡೆ ಕುಟ್ಟಪ್ಪ ಕುಟುಂಬದ ಕಥೆ ಹೀಗಾದರೆ, ಇದೇ ಟಿಪ್ಪು ಜಯಂತಿ ಹೆಸರಿನಲ್ಲಿ ಸಾವನ್ನಪ್ಪಿದ ಸಿದ್ಧಾಪುರದ ಶಾಹುಲ್‌ ಹಮೀದ್‌ ಕತೆ ಇನ್ನೂ ಘೋರವಾಗಿದೆ.

ಟಿಪ್ಪು ಜಯಂತಿ ಸಂದರ್ಭದಲ್ಲಿ ಕುಟ್ಟಪ್ಪ ಅವರ ಸಾವಿಗೆ ಪ್ರತೀಕಾರವಾಗಿ ಕೊಲೆಯಾದವರು ಶಾಹುಲ್ ಹಮೀದ್. ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಸಂಬಂಧ ಗಲಾಟೆ ನಡೆದ ದಿನವೇ 20 ವರ್ಷದ ಬಾಲಕ ಶಾಹುಲ್‌ ಮಂಗಳೂರಿನಿಂದ ವಾಪಸಾಗಿದ್ದ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯನ್ನು ನೋಡಿಕೊಂಡು ಮನೆಗೆ ಹಿಂತಿರುಗುತಿದ್ದಾಗ, ಆತನ ಮೇಲೆ ದುಷ್ಕರ್ಮಿಗಳು ತೋಟದಲ್ಲಿ ನಿಂತು ಗುಂಡು ಹಾರಿಸಿದ್ದರು. ಈ ಗುಂಡು ತಗುಲಿ ಶಾಹುಲ್‌ ಅಸುನೀಗಿದ.

‘ಶಾಹುಲ್‌ ಮನೆಗೆ ಏಕೈಕ ಪುತ್ರನಾಗಿದ್ದ’ ಎನ್ನುತ್ತಲೇ ಅಂದಿನ ದಿನವನ್ನು ನೆನೆಸಿಕೊಂಡು ಮಾತನಾಡಲಾಗದೆ ಕಣ್ಣೀರಿಟ್ಟರು ಅವರ ತಾಯಿ ಉಮ್ಮಾ ಖುಲ್ಸುಮ್‌. ಶಾಹುಲ್‌ ತಂದೆ ಉಮ್ಮರ್ ದುಬೈನಲ್ಲಿ ಡ್ರೈವರ್ ಆಗಿದ್ದರು. ಸದ್ಯ ಸಿದ್ದಾಪುರದಲ್ಲೇ ಪಿಕಪ್ ಓಡಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ.

“ಮಗನನ್ನು ಕಳೆದುಕೊಂಡೆ. ಆದರೆ ಮಗನನ್ನು ಕೊಲೆಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದುಕೊಂಡರೆ ಅದೂ ಆಗಲಿಲ್ಲ. ಸಾಕ್ಷ್ಯಾಧಾರದ ಕೊರತೆಯಿಂದ ಆರೋಪಿಗಳನ್ನು ನ್ಯಾಯಾಲಯ ಖುಲಾಸೆ ಮಾಡಿದೆ. ಮಗನ ಸಾವಿಗೆ ಕಾರಣರಾದವರು ಏನೂ ತೊಂದರೆ ಇಲ್ಲದೆ ಓಡಾಡಿಕೊಂಡಿರುವುದನ್ನು ನನ್ನಿಂದ ನೋಡಲಾಗುತ್ತಿಲ್ಲ,” ಎಂದಾಗ ಖುಲ್ಸುಮ್‌ ಕಣ್ಣುಗಳಿಂದ ನೀರು ಕೆನ್ನೆ ಮೇಲೆ ಇಳಿಯುತ್ತಿತ್ತು.

ಇದು ಒಂದೇ ಮಾದರಿಯ ನೋವು ಅನುಭವಿಸಿದ ಮತ್ತೊಂದು ಕುಟುಂಬ ಇವತ್ತು ಬಂದು ನಿಂತಿರುವ ಸ್ಥಿತಿ. ಇಲ್ಲಿ ಇದ್ದ ಬದುಕು ಕಳೆದು ಹೋಗಿದೆ. ವಿದೇಶದ ದುಡಿಮೆ ನಿಂತು ಹೋಗಿದೆ. ಇದ್ದ ಮಗನೂ ಇಲ್ಲ, ಆತನ ಸಾವಿಗೆ ನ್ಯಾಯದ ನಿರೀಕ್ಷೆಯೂ ಉಳಿದಿಲ್ಲ. ಕುಟುಂಬ ಮಾತ್ರ ಒಟ್ಟಾಗಿ ನಿಂತು ಬದುಕನ್ನು ಎದುರಿಸುತ್ತಿದೆ.

ಈ ನಡುವೆ ಮತ್ತೊಮ್ಮೆ ಟಿಪ್ಪು ಜಯಂತಿ ಬಂದಿದೆ. ಸರಕಾರ ಜಯಂತಿಯನ್ನು ಮಾಡಿಯೇ ತೀರುತ್ತೇನೆ ಎಂದು ಹೊರಟಿದೆ. ಪ್ರತಿಪಕ್ಷ ಬಿಜೆಪಿ ತಡೆಯುತ್ತೇವೆ ಎಂದು ಅಖಾಡಕ್ಕೆ ಇಳಿದಿದೆ. ಮೂರು ವರ್ಷಗಳ ಕೆಳಗೆ ಇದೇ ರಾಜಕಾರಣಿಗಳ ಆಲೋಚನೆಯ ಕಾರಣಕ್ಕೆ, ಟಿಪ್ಪು ಹೆಸರಿನಲ್ಲಿ ಎರಡೂ ಧರ್ಮಗಳ ಒಂದೊಂದು ಕುಟುಂಬಗಳು ಅನಗತ್ಯ ಬಲಿದಾನ ಮಾಡಿವೆ. ಸಾವಿರ ದಿನಗಳ ನಂತರ ಅವುಗಳ ಪರಿಸ್ಥಿತಿ ಏನಾಗಿದೆ? ಅದರಿಂದ ಸರಕಾರ, ಪ್ರತಿ ಪಕ್ಷ ಕಲಿತ ಪಾಠಗಳೇನು?

ಇದಕ್ಕೆ ಉತ್ತರ ಗೊತ್ತಿಲ್ಲ. ಆದರೆ, ಮೇಲ್ಮಟ್ಟದ ರಾಜಕೀಯ ಪರಿಣಾಮಗಳನ್ನಷ್ಟೆ ಮಾನದಂಡ ಮಾಡಿಕೊಂಡವರು ಆಚರಿಸುವ ಜಯಂತಿ ಉಳಿಸಿ ಹೋಗುವ ಕಹಿ ನೆನಪುಗಳು ಹೇಗಿರುತ್ತವೆ ಎಂಬುದಕ್ಕೆ ಈ ವರದಿ ಸಾಕ್ಷಿ ಅಷ್ಟೆ.