ಕೊಡಗಿನ ‘ಪುಣ್ಯಕೋಟಿ’ ಕಥೆ; ಪ್ರವಾಹ ತಗ್ಗುತ್ತಲೇ ಹಸುಗಳ ಮೇಲೆರಗಿದ ವ್ಯಾಘ್ರಗಳು
GROUND REPORT

ಕೊಡಗಿನ ‘ಪುಣ್ಯಕೋಟಿ’ ಕಥೆ; ಪ್ರವಾಹ ತಗ್ಗುತ್ತಲೇ ಹಸುಗಳ ಮೇಲೆರಗಿದ ವ್ಯಾಘ್ರಗಳು

“ವನ್ಯಜೀವಿಗಳು ಮನುಷ್ಯರನ್ನು ಕೊಲ್ಲಲೇಬೇಕೆಂಬ ಉದ್ದೇಶದಿಂದೇನೂ ಕಾಡಿನಿಂದ ಹೊರಗೆ ಬರುವುದಿಲ್ಲ...

ಕೊಡಗಿನ ವಿರಾಜಪೇಟೆಯ ನಾಗರಹೊಳೆ ಅಭಯಾರಣ್ಯದ ಅಂಚಿನ ಹಾತೂರಿನಲ್ಲಿ ಕೆಲ ದಿನಗಳ ಹಿಂದೆ ಗಬ್ಬದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಹುಲಿ ದಾಳಿಯಿಂದ ತಪ್ಪಿಸಿಕೊಂಡಿರುವ ಹಸುವಿನ ಕಿವಿ ತುಂಡಾಗಿದೆ, ಕುತ್ತಿಗೆ ಹಾಗೂ ಹಿಂಭಾಗದಲ್ಲೂ ಹುಲಿ ಪರಚಿದ ಗಾಯಗಳಾಗಿವೆ. ಹುಲಿ ದಾಳಿಯಿಂದ ಹಸುವೇನೋ ಪಾರಾಗಿದೆ. ಆದರೆ, ಹುಲಿಯಿಂದ ಭೀತಿಗೊಂಡಿರುವ ಜನ ಹುಲಿಯನ್ನು ಸದ್ಯ ಶತ್ರುವಿನಂತೆ ನೋಡುತ್ತಿದ್ದಾರೆ.

ಹಸುಗಳ ಮೇಲೆ ದಾಳಿ ನಡೆಸಿರುವುದು ಹುಲಿಯೇ ಎಂಬುದು ಖಚಿತವಾಗಿದೆ. ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾಗಳಲ್ಲೂ ಹುಲಿಗಳ ಓಡಾಟ ದಾಖಲಾಗಿದೆ. ಹುಲಿ ಉಪಟಳ ಹೆಚ್ಚಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಬೋನ್‌ ಇಟ್ಟು ಕಾಯುತ್ತಲೂ ಇದ್ದಾರೆ. ಹುಲಿ ಸಂಚಾರದಿಂದ ಇಲ್ಲಿನ ಜನರು ಸಹಜವಾಗಿಯೇ ಭಯಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ 13 ಜನರನ್ನು ಕೊಂದು ಹಾಕಿತು ಎಂಬ ಕಾರಣಕ್ಕೆ ಹುಲಿ ‘ಅವನಿ’ಯನ್ನು ಭೇಟಿಯಾಡಿ ಕೊಲ್ಲಲಾಗಿದೆ. ಹುಲಿ ಕೊಂದ ಸರಕಾರ ಸುಪ್ರೀಂಕೋರ್ಟ್ ಆದೇಶವನ್ನು ಗುರಾಣಿಯಂತೆ ಇಟ್ಟುಕೊಂಡಿದೆ. ಆದರೆ, ಹುಲಿಯನ್ನು ಹೊಡೆದು ಕೊಂದಿದ್ದು ಮಾನವ ಕುಲ ತಲೆ ತಗ್ಗಿಸುವಂಥ ಸಂಗತಿ ಎನ್ನುತ್ತಿದ್ದಾರೆ ವನ್ಯಪ್ರೇಮಿಗಳು.

ಒಂದು ವೇಳೆ ವಿರಾಜಪೇಟೆಯಲ್ಲಿ ಹುಲಿ ಮಾನವರ ಮೇಲೆ ಎರಗಿದರೆ, ಸ್ಥಳೀಯರ ಒತ್ತಡ ಹೆಚ್ಚಾದರೆ ರಾಜ್ಯ ಸರಕಾರ ಕೂಡಾ ಬೋನ್‌ ಇಟ್ಟು ಕಾಯುವ ತಾಳ್ಮೆ ತೋರದೆ ಹುಲಿಗಳ ಕಡೆಗೆ ಬಂದೂಕಿನ ಗುರಿ ಇಡಬಹುದು. ವನ್ಯಜೀವಿ ಕಾರಿಡಾರ್‌ನಲ್ಲಿ ಮಾನವ ಚಟುವಟಿಕೆ ಹೆಚ್ಚಾಗಿ, ಮನುಷ್ಯರಿಂದ ಪ್ರಾಣಿಗಳಿಗೇ ತೊಂದರೆಯಾಗುತ್ತಿದ್ದರೂ ಖಳನಂತೆ ನೋಡುವುದು ವನ್ಯಜೀವಿಗಳನ್ನೇ.

ಕೊಡಗಿನಲ್ಲಿ ಕಾಡಾನೆಗಳ ಸಂಘರ್ಷದ ಜತೆಗೆ ಈಗ ಹುಲಿಗಳ ಸಂಘರ್ಷವೂ ಸೇರಿದೆ. ವಿರಾಜಪೇಟೆ ತಾಲ್ಲೂಕಿನ ಗಡಿ ಭಾಗ ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಇಲ್ಲಿ ಮಾನವ – ಮನ್ಯಜೀವಿ ಸಂಘರ್ಷ ಸಹಜ. ಕಳೆದ 6 ತಿಂಗಳಿನಿಂದ ಹುಲಿಗಳ ದಾಳಿಯಿಂದ ಸುಮಾರು 10 ಜಾನುವಾರುಗಳು ಸತ್ತಿವೆ ಎನ್ನಲಾಗುತ್ತಿದೆ. ಸುಮಾರು 15 ದಿನಗಳಿಂದ ಹುಲಿ ಭಯದಿಂದ ಗ್ರಾಮಸ್ಥರು ಜಾನುವಾರುಗಳನ್ನು ಮೇಯಲು ಬಿಡಲೂ ಹಿಂದೇಟು ಹಾಕುತ್ತಿದ್ದಾರೆ.

ಹಾತೂರಿನ ಪೊನ್ನಚನ ಉತ್ತಯ್ಯ ಎಂಬುವವರು ಗದ್ದೆಯಲ್ಲಿ ಕಟ್ಟಿದ್ದ ಗಬ್ಬದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ ಹಗ್ಗ ಕಿತ್ತುಕೊಂಡು ತಪ್ಪಿಸಿಕೊಂಡಿರುವ ಹಸು ಪ್ರಾಣ ಉಳಿಸಿಕೊಂಡಿದೆ. ಈ ಭಾಗದಲ್ಲಿ ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವವರಿಗೆ ಹುಲಿಯ ಭೀತಿ ಅವರ ಬದುಕಿನ ಬಗ್ಗೆಯೇ ಅಭದ್ರತೆ ಕಾಡುವಂತೆ ಮಾಡಿದೆ.

“ಹುಲಿ ಪತ್ತೆಗಾಗಿ ಹಲವು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಿದ್ದೇವೆ. ರ್ಯಾಪಿಡ್ ರೆಸ್ಪಾನ್ಸ್ ಟೀಮ್ (ಆರ್‌ಆರ್‌ಟಿ ) ಸಿಬ್ಬಂದಿ ಹುಲಿ ಕಾಣಿಸಿಕೊಂಡ ಕೂಡಲೇ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಹುಲಿ ಪತ್ತೆ ಆಗುತ್ತಿಲ್ಲ” ಎಂದಿದ್ದಾರೆ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ರಾಜ.

ಹಸುವಿನ ಮೇಲೆ ಹುಲಿ ಎರಗಿ ಆಗಿರುವ ಗಾಯ
ಹಸುವಿನ ಮೇಲೆ ಹುಲಿ ಎರಗಿ ಆಗಿರುವ ಗಾಯ
/ಸಮಾಚಾರ
ವಯಸ್ಸಾದ ಹುಲಿಗಳು ಭೇಟೆ ಕಷ್ಟವಾಗಿ ಸುಲಭ ಆಹಾರಕ್ಕಾಗಿ ಜಾನುವಾರುಗಳ ಮೇಲೆ ಎರಗುತ್ತಿರಬಹುದು. ಜಾನುವಾರನ್ನು ಕೊಂದಾಗ ಮನುಷ್ಯರ ಓಡಾಟದ ಕಾರಣದಿಂದ ಬೇಟೆಯನ್ನು ಹೊಟ್ಟೆ ತುಂಬಾ ತಿನ್ನಲು ಆಗದೆ ಹುಲಿ ಅರ್ಧಕ್ಕೆ ಬಿಟ್ಟು ಹೋಗುತ್ತಿರಬಹುದು. ಹೀಗಾಗಿ ಮತ್ತೆ ಮತ್ತೆ ದಾಳಿ ನಡೆಸುತ್ತಿವೆ.
- ಕಾರಿಯಪ್ಪ, ವನ್ಯ ಜೀವಿ ತಜ್ಞ

ವನ್ಯಜೀವಿ- ಮಾನವ ಸಂಘರ್ಷ ಕಾಡು, ಕಾಡು ಪ್ರಾಣಿಗಳು ಹಾಗೂ ಮನುಷ್ಯರಿರುವವರೆಗೂ ತಪ್ಪಿದ್ದಲ್ಲ. ಪ್ರಾಣಿಗಳ ಆವಾಸ ಹಾಗೂ ಅವುಗಳ ಕಾರಿಡಾರ್‌ನಲ್ಲಿ ಮನುಷ್ಯ ಸಂಚಾರ ಹೆಚ್ಚಾದಾಗ ಇದ್ದಾಗ ಅಥವಾ ಮನುಷ್ಯರ ವಾಸಸ್ಥಾನಗಳಿಗೆ ಕಾಡುಪ್ರಾಣಿಗಳು ನುಗ್ಗಿದಾಗ ಇಂಥ ಸಂಘರ್ಷ ಸಹಜ. ಆದರೆ, ಸ್ಥಳೀಯಮಟ್ಟದ ಈ ಸಮಸ್ಯೆಯ ಪರಿಹಾರಕ್ಕೆ ರಾಜಧಾನಿಗಳಲ್ಲಿರುವ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು. ಸಾವಿರಾರು ವರ್ಷಗಳಿಂದ ವನ್ಯಜೀವಿಗಳು ಇದ್ದ ಪ್ರದೇಶದಲ್ಲಿ ಈಗ ಮಾನವ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಸಂಘರ್ಷ ಹೆಚ್ಚಾಗಿದೆ ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯ.

ಕಾಡಂಚಿನ ಪ್ರದೇಶಗಳಲ್ಲಿ ಮನುಷ್ಯ- ವನ್ಯಜೀವಿ ಸಂಘರ್ಷವನ್ನು ಪೂರ್ತಿಯಾಗಿ ನಿಲ್ಲಿಸಲು ಸಾಧ್ಯವಿಲ್ಲ. ವನ್ಯಜೀವಿಗಳು ಸಂಚರಿಸುವ ಕಾರಿಡಾರ್‌ನಲ್ಲಿ ಮಾನವನ ಚಟುವಟಿಕೆಗಳು ಹೆಚ್ಚಾದಾಗ ಸಹಜವಾಗಿಯೇ ಇಂಥ ಸಂಘರ್ಷಗಳು ಹೆಚ್ಚಾಗುತ್ತವೆ. ಸಾವಿರಾರು ವರ್ಷಗಳಿಂದ ವನ್ಯಜೀವಿಗಳ ಸಂಚಾರದ ಪ್ರದೇಶಗಳಾಗಿರುವ ಕಾರಿಡಾರ್‌ಗಳಲ್ಲಿ ಈಗ ಮನುಷ್ಯರು ಬಂದು ವನ್ಯಜೀವಿಗಳಿಂದ ನಮಗೆ ತೊಂದರೆ ಎಂದು ಹೇಳುವುದು ಸರಿಯಲ್ಲ. ಅರಣ್ಯದಂಚಿನ ಪ್ರದೇಶಗಳಲ್ಲಿ ವನ್ಯಜೀವಿಗಳು ಗ್ರಾಮಗಳಿಗೆ ಬಂದು ಹೋಗುವುದು ಸಾಮಾನ್ಯ.
- ಪ್ರವೀಣ್‌ ಭಾರ್ಗವ್, ಮ್ಯಾನೇಜಿಂಗ್ ಟ್ರಸ್ಟಿ, ವೈಲ್ಟ್‌ ಲೈಫ್‌ ಫಸ್ಟ್‌ ಸಂಸ್ಥೆ

“ಅರಣ್ಯದಲ್ಲಿ ಭೇಟೆ ಪ್ರಾಣಿಗಳು ಸಿಗದ ಸಂದರ್ಭಗಳಲ್ಲಿ ಮಾತ್ರ ವನ್ಯಜೀವಿಗಳು ಕಾಡಿನಿಂದ ಹೊರಗೆ ಬರುತ್ತವೆ. ಆದರೆ, ನಾಗರಹೊಳೆ ಅಂಚಿನ ವಿರಾಜಪೇಟೆಯಲ್ಲಿ ಸದ್ಯಕ್ಕೆ ಆ ಪರಿಸ್ಥಿತಿ ಇಲ್ಲ. ಅಲ್ಲಿ ಹಸಿರು ಹೆಚ್ಚಾಗಿದ್ದು, ಭೇಟಿ ಪ್ರಾಣಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ವನ್ಯಜೀವಿ ಕಾರಿಡಾರ್‌ಗಳಲ್ಲಿ ತೋಟ, ಮನೆಗಳನ್ನು ಕಟ್ಟಿಕೊಂಡಿರುವವರು ಸಾಕು ಪ್ರಾಣಿಗಳನ್ನು ಭದ್ರವಾದ ಕೊಟ್ಟಿಗೆಗಳಲ್ಲಿ ಕಟ್ಟಿಕೊಳ್ಳುವುದು, ತಾವು ಸುರಕ್ಷಿತವಾಗಿರುವುದು ಅನಿವಾರ್ಯ. ವನ್ಯಜೀವಿಗಳು ಮನುಷ್ಯರನ್ನು ಕೊಲ್ಲಲೇಬೇಕೆಂಬ ಉದ್ದೇಶದಿಂದೇನೂ ಕಾಡಿನಿಂದ ಹೊರಗೆ ಬರುವುದಿಲ್ಲ” ಎನ್ನುತ್ತಾರೆ ಪ್ರವೀಣ್‌ ಭಾರ್ಗವ್‌.

ವನ್ಯಜೀವಿಗಳಿಂದ ದಾಳಿಯಾಗಿ ಜಾನುವಾರುಗಳು ಸಾವನ್ನಪ್ಪಿದರೆ ತಕ್ಷಣ ಪರಿಹಾರ ಸಿಗುವ ವ್ಯವಸ್ಥೆ ಈಗಿದೆ. ಮನುಷ್ಯರ ಪ್ರಾಣ ಹಾನಿಯಾದರೂ ಪರಿಹಾರ ಸಿಗುತ್ತದೆ. ಆದರೆ, ಹೋದ ಜೀವವನ್ನು ಪರಿಹಾರ ವಾಪಸ್‌ ತಂದುಕೊಡಲು ಸಾಧ್ಯವಿಲ್ಲ. ಹೀಗಾಗಿ ಕಾಡಂಚಿನ ಪ್ರದೇಶಗಳಲ್ಲಿರುವವರು ತಮ್ಮ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಅಪಘಾತದಿಂದ ಸಾವು ಉಂಟಾಗಬಹುದು. ಅದೇ ರೀತಿ ವನ್ಯಜೀವಿ ದಾಳಿಯಿಂದಲೂ ಪ್ರಾಣ ಹಾನಿಯಾಗಬಹುದು. ಈ ಕಾರಣಕ್ಕೆ ವನ್ಯ ಸಂಕುಲವನ್ನೇ ದೂರುವುದು ಸರಿಯಲ್ಲ ಎನ್ನುತ್ತಾರೆ ಅವರು.

ರಸ್ತೆಯಲ್ಲಿ ಸಂಚರಿಸುವಾಗ ಅಪಘಾತಗಳು ಹೇಗೆ ಆಕಸ್ಮಿಕವೋ, ಅರಣ್ಯದ ಅಂಚಿನಲ್ಲಿ, ವನ್ಯಜೀವಿ ಕಾರಿಡಾರ್‌ಗಳಲ್ಲಿ ಮಾನವ ಚಟುವಟಿಕೆಗಳು ಇದ್ದಾಗ ವನ್ಯಜೀವಿ ದಾಳಿಗಳೂ ಸಹಜ. ಭೂಮಿಯ ಮೇಲಿರುವುದೆಲ್ಲವೂ ತನ್ನ ಉಪಯೋಗಕ್ಕೆ ಮಾತ್ರ ಎಂದುಕೊಂಡಿರುವ ಮನುಷ್ಯ ವನ್ಯವೀವಿಗಳ ವಿಚಾರದಲ್ಲಿ ತನ್ನ ತಪ್ಪಿದ್ದರೂ ದೂರುವುದು ಮೂಖ ಪ್ರಾಣಿಗಳ ಮೇಲೆಯೇ. ಪದೇ ಪದೇ ಹುಲಿ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದರೆ ಜನರಿರುವ ಜಾಗಕ್ಕೆ ಹುಲಿ ಬರುತ್ತಿಲ್ಲ, ಹುಲಿ ತಿರುಗಾಡುವ ಜಾಗದಲ್ಲಿ ನಾವು ತೋಟ, ಮನೆ ಮಾಡಿಕೊಂಡಿದ್ದೇವೆ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು.

ವನ್ಯಜೀವಿ ಕಾರಿಡಾರ್‌ನಲ್ಲಿ ತೋಟ, ಮನೆ ಮಾಡಿಕೊಂಡಿರುವ ಜನ ತಾವು ಸುರಕ್ಷಿತರಾಗಿರುವ ಜತೆಗೆ ಸಾಕುಪ್ರಾಣಿಗಳು ಹಾಗೂ ವನ್ಯಜೀವಿಗಳ ಸುರಕ್ಷತೆಯ ಬಗ್ಗೆಯೂ ಯೋಚಿಸಬೇಕು. ಏಕೆಂದರೆ ನಿಜಕ್ಕೂ ಹೆಚ್ಚಿನ ಅಪಾಯ ಇರುವುದು ವನ್ಯಜೀವಿಗಳಿಂದ ಮಾನವನಿಗಲ್ಲ, ಮಾನವನಿಂದ ವನ್ಯಜೀವಿಗಳಿಗೆ. ಕೊಡಗಿನ ವಿಚಾರದಲ್ಲಿ ನಿಜಕ್ಕೂ ದಾಳಿ ನಡೆದಿರುವುದು ಹಸುವಿನ ಮೇಲೋ, ಹುಲಿಯ ಮೇಲೋ ಎಂಬುದನ್ನು ಜನ ಚಿಂತಿಸಬೇಕು.