samachara
www.samachara.com
ಕೊಡಗು ವಿಕೋಪ ಪೀಡಿತ ಜನರ ರಕ್ತ ಹೀರಲು ನಿಂತಿದೆ ಮೈಕ್ರೋ ಫೈನಾನ್ಸ್ ‘ಮೀಟರ್ ಬಡ್ಡಿ’ ದಂಧೆ
GROUND REPORT

ಕೊಡಗು ವಿಕೋಪ ಪೀಡಿತ ಜನರ ರಕ್ತ ಹೀರಲು ನಿಂತಿದೆ ಮೈಕ್ರೋ ಫೈನಾನ್ಸ್ ‘ಮೀಟರ್ ಬಡ್ಡಿ’ ದಂಧೆ

15 ದಿನಗಳ ಅಂತರದಲ್ಲಿ ಮೈಕ್ರೋ ಫೈನಾನ್ಸ್‌ಗಳು ಕೊಡಗಿನಲ್ಲಿ ಇಬ್ಬರ ಜೀವವನ್ನು ಬಲಿ ಪಡೆದಿವೆ. ಇದರ ಹಿಂದೆ ದಕ್ಷಿಣ ಕನ್ನಡ ಮತ್ತು ಆಂಧ್ರ ಪ್ರದೇಶ ಮೂಲದ ಮೈಕ್ರೋ ಫೈನಾನ್ಸ್‌ ಕಂಪನಿಗಳ ಹೆಸರು ಕೇಳಿ ಬರುತ್ತಿದೆ. 

ವಸಂತ ಕೊಡಗು

ವಸಂತ ಕೊಡಗು

ಅಂದು ಪ್ರಕೃತಿ, ಇಂದು ಮೈಕ್ರೋ ಫೈನಾನ್ಸ್...

ಕೊಡಗಿನ ಕೆಳವರ್ಗದ ಜನರ ಸಂಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಕಳೆದ 15 ದಿನಗಳ ಅಂತರದಲ್ಲಿ ಸಣ್ಣ ಹಣಕಾಸು ಸಂಸ್ಥೆಗಳಲ್ಲಿ ಮಾಡಿದ ಸಾಲ ತೀರಿಸಲಾಗದೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಗಂಭೀರ ಘಟನೆಗೆ ಜಿಲ್ಲೆ ಸಾಕ್ಷಿಯಾಗಿದೆ.

ಭೀಕರ ಪ್ರವಾಹ, ಭೂಕುಸಿತಕ್ಕೆ ಸಿಕ್ಕಿ ನಲುಗಿದ ಕೊಡಗು ಜಿಲ್ಲೆಯ ಜನ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲವರು ಪರಿಹಾರ ಕೇಂದ್ರಗಳಿಂದ ಮನೆಯತ್ತ ನಡೆದಿದ್ದರೆ, ಇನ್ನೂ ಸಾವಿರಾರು ಜನರು ಸಂತ್ರಸ್ತರ ಕೇಂದ್ರದಲ್ಲೇ ಉಳಿದುಕೊಂಡಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಕೊಡಗಿನ ಜನತೆಯನ್ನು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಮೈಕ್ರೋ ಫೈನಾನ್ಸ್ ಕಂಪೆನಿಗಳು ಕಿತ್ತು ತಿನ್ನುತ್ತಿವೆ. ಅದರ ಪರಿಣಾಮಗಳೀಗ ನಿಧಾನವಾಗಿ ಆತ್ಮಹತ್ಯೆ ರೂಪದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ.

ವಾರದ ಹಿಂದೆ ಮರಗೋಡಿನ ಆಶಾ ಎಂಬ ಕಾರ್ಮಿಕ ಮಹಿಳೆ ಸಾಲದ ಕಂತು ಕಟ್ಟಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. “ಆಶಾ ದಕ್ಷಿಣ ಕನ್ನಡ ಮೂಲದ ಸಂಘವೊಂದರಿಂದ ಸುಮಾರು ಎರಡು ಲಕ್ಷ ಸಾಲ ಪಡೆದುಕೊಂಡಿದ್ದರು. ಈ ಸಾಲಕ್ಕೆ ಅವರು ವಾರಕ್ಕೆ 2 ಸಾವಿರ ರೂಪಾಯಿ ಕಂತು ಕಟ್ಟಬೇಕಾಗಿತ್ತು. ವಿಕೋಪದ ನಂತರ ಸಾಲ ಕಟ್ಟಲಾಗದೇ ಕಂತುಗಳು ಬಾಕಿಯಾಗಿದ್ದವು. ಇದಕ್ಕಾಗಿ ಸಂಘದ ಇತರರಿಂದ ಸಾಲ ಪಡೆದುಕೊಂಡಿದ್ದರು. ಈ ಸಾಲವನ್ನು ಆಶಾ ವಾಪಸ್‌ ನೀಡದ ಹಿನ್ನೆಲೆಯಲ್ಲಿ ನಮ್ಮ ಸಾಲವನ್ನೂ ನೀವೇ ಕಟ್ಟಿ ಎಂದು ಆಶಾ ತಲೆಗೆ ಕಟ್ಟಿದ್ದರು,” ಎಂದು ನಡೆದ ಘಟನೆಯ ಹಿನ್ನೆಲೆಯಲ್ಲಿ ‘ಸಮಾಚಾರ’ಕ್ಕೆ ವಿವರಿಸಿದರು ಮೃತ ಆಶಾ ಸಹೋದರಿ ಉಷಾ.

“ಪ್ರತಿ ಗುರುವಾರ ಈ ಸಂಘದವರು ಸಭೆ ನಡೆಸುತ್ತಾರೆ. ಮುಂಜಾನೆ 7 ಗಂಟೆಗೆ ಸಭೆ ಸೇರುವ ವೇಳೆ ಅವರು ಸಾಲದ ಕಂತು ಕಟ್ಟಬೇಕಾಗಿತ್ತು. ಇತರರ ಸಾಲದ ಹೊರೆಯನ್ನೂ ಹೊತ್ತಿದ್ದರಿಂದ ಸುಮಾರು 4,500 ರೂಪಾಯಿಗಳನ್ನು ಅವರು ಪಾವತಿಸಬೇಕಾಗಿತ್ತು. ಆಶಾ ಬಳಿ ಹಣವಿಲ್ಲದ್ದರಿಂದ ಒಂದಷ್ಟು ಮಹಿಳೆಯರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು,” ಎಂದು ವಿವರಿಸುತ್ತಾರೆ ಉಷಾ. ಇದಲ್ಲದೆ, “ಆಂಧ್ರ ಪ್ರದೇಶ ಮೂಲದ ಎಸ್‌ಕೆಎಸ್‌ ಮೈಕ್ರೋ ಫೈನಾನ್ಸ್‌ನಿಂದಲೂ ಸಾಲ ಪಡೆದುಕೊಂಡಿದ್ದಳು. ಅದರ ವಾರದ ಕಂತನ್ನು ಕಟ್ಟಲಾಗದ ಪರಿಸ್ಥಿತಿ ಎದುರಾದಾಗ ಜೀವವನ್ನೇ ಕಳೆದುಕೊಂಡಳು,’’ ಎಂದು ಕಣ್ಣೀರಾದರು ಉಷಾ.

ಈ ಘಟನೆ ಬೆನ್ನಲ್ಲೇ ಮಂಗಳವಾರ ಕುಶಾಲನಗರ ಸಮೀಪದ ಮುಳ್ಳು ಸೋಗೆ ಗ್ರಾಮದಲ್ಲಿ ಇದೇ ರೀತಿ ಮೈಕ್ರೋ ಫೈನಾನ್ಸ್‌ ಸಾಲದ ಕಂತು ಕಟ್ಟಲಾಗದೇ ಮಂಜುಳ ಎಂಬ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. "ಈಕೆ ಎಸ್‌ಕೆಎಸ್‌ ಮೈಕ್ರೋ ಫೈನಾನ್ಸ್‌ನಲ್ಲಿ 25 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದುಳು. ಅದರ ಕಂತು ಪಾವತಿಸಲಾಗದೆ ನೇಣಿಗೆ ಕೊರಳೊಡ್ಡಿದ್ದಾಳೆ,’’ ಎಂದು ಆಕೆಯ ಪತಿ ಸಂತೋಷ್ ಕುಶಾಲನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ಮಂಜುಳಾ ಮೃತ ದೇಹದೆದುರು ಗೋಳಿಡುತ್ತಿರುವ ಕುಟುಂಬಸ್ಥರು
ಆತ್ಮಹತ್ಯೆಗೆ ಶರಣಾದ ಮಂಜುಳಾ ಮೃತ ದೇಹದೆದುರು ಗೋಳಿಡುತ್ತಿರುವ ಕುಟುಂಬಸ್ಥರು

ಮೈಕ್ರೋಫೈನಾನ್ಸ್ ಒಂದರ ಕೆಲ ಏಜೆಂಟರು ಸೋಮವಾರ ಸಂಜೆ ನಾಲ್ಕು ಗಂಟೆಗೆ ಮಂಜುಳಾ ಮನೆಗೆ ಬಂದು ಸಾಲದ ಮರುಪಾವತಿಗೆ ಒತ್ತಾಯಿಸಿದ್ದರು. ಅಲ್ಲದೆ ಬಾಯಿಗೆ ಬಂದಂತೆ ಬೈದು ಹೋಗಿದ್ದರು. “ದುಡಿಯುವ ವರ್ಗ ಕೆಲಸ ಸರಿಯಾಗಿ ಸಿಗದೇ ಕಷ್ಟದಲ್ಲಿದೆ. ಹೀಗಿರುವಾಗ ಪ್ರತಿ ವಾರದ ಕಂತು ಕಟ್ಟದಿದ್ದರೆ ಮನೆಗೇ ಬಂದು ಅವಾಚ್ಯವಾಗಿ ನಿಂದಿಸುವ ಏಜೆಂಟರ ಹಾವಳಿಯಿಂದ ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದಾಳೆ,” ಎನ್ನುತ್ತಾರೆ ಅದೇ ಊರಿನ ಎನ್‌. ಹೂವಯ್ಯ.

ಕೊಡಗಿನ ಭೀಕರ ದುರಂತದ ನಂತರ ಸರ್ಕಾರ ಸಾಲ ವಸೂಲಾತಿಯನ್ನು ಮೂರು ತಿಂಗಳು ಮುಂದೂಡುವಂತೆ ಬ್ಯಾಂಕುಗಳು, ಸಹಕಾರಿ ಸಂಘಗಳು ಮತ್ತು ಮೈಕ್ರೋ ಫೈನಾನ್ಸ್‌ ಸೇರಿದಂತೆ ಇತರ ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಸಂಸದ ಪ್ರತಾಪ ಸಿಂಹ ಈ ಸಂಬಂಧ ನಬಾರ್ಡ್‌ಗೆ ಪತ್ರವನ್ನೂ ಬರೆದಿದ್ದರು. ಒಂದೊಮ್ಮೆ ಸಾಲ ವಸೂಲಾತಿಗೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳುವ ಸ್ಪಷ್ಟ ಎಚ್ಚರಿಕೆಯನ್ನೂ ಜಿಲ್ಲಾಧಿಕಾರಿ ಶ್ರೀವಿದ್ಯಾ ನೀಡಿದ್ದಾರೆ.

ಹೀಗಿದ್ದರೂ ಕೂಡ ಕೊಡಗಿನಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಮೈಕ್ರೋ ಫೈನಾನ್ಸ್ ಕಂಪನಿಗಳು ಬಡ ಜನತೆಗೆ ಸಾಲ ತೀರಿಸುವಂತೆ ಕಿರುಕುಳ ನೀಡುತ್ತಿರುವುದು ಮಾತ್ರ ನಿಂತಿಲ್ಲ. ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯಲ್ಲಿ ಹಣಕಾಸು ವ್ಯವಹಾರ ಹಾಗೂ ವ್ಯಾಪಾರ ವಹಿವಾಟು ಸಂಪೂರ್ಣ ನೆಲಕಚ್ಚಿದ್ದು ವರ್ತಕರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಕಾಫಿ ಬೆಳೆಯು ಶೇಕಡಾ 50ರಷ್ಟು ನಷ್ಟವಾಗಿದ್ದು ಈ ವರ್ಷ ಹೇಗೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಕೂಲಿ ನೀಡುವವರೇ ನಿರಾಶ್ರಿತರಾಗಿರುವಾಗ, ಕೂಲಿಯಾಳುಗಳು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದರೆ ಜನರ ರಕ್ತ ಹೀರುವ ಮೈಕ್ರೋ ಫೈನಾನ್ಸ್‌ಗಳಿಗೆ ಮಾತ್ರ ಇದು ಯಾವುದೂ ತಟ್ಟಿಲ್ಲ. ಅಡೆ ತಡೆಯಿಲ್ಲದೆ ತಮ್ಮ ವಸೂಲಾತಿಯನ್ನು ಮುಂದುವರೆಸಿರುವ ಇವರು ಜನರ ಪ್ರಾಣಕ್ಕೂ ಸಂಚಕಾರ ತರುತ್ತಿದ್ದಾರೆ.

ಈ ಆತ್ಮಹತ್ಯೆಗಳ ಬಗ್ಗೆ ‘ಸಮಾಚಾರ’ಕ್ಕೆ ಪ್ರತಿಕ್ರಿಯೆ ನೀಡಿದ ಡಿವೈಎಸ್ಪಿ ಮುರಳೀಧರ್, “ಈ ಆತ್ಮಹತ್ಯೆಗಳ ಬಗ್ಗೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ತನಿಖೆ ಪೂರ್ಣಗೊಂಡ ಬಳಿಕ ನಿಖರ ಕಾರಣ ತಿಳಿಯಲಿದೆ,” ಎಂದರು.