samachara
www.samachara.com
ನಿರಾಶ್ರಿತರ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ; ಕೊಡಗಿನಲ್ಲಿ ನಿಜಕ್ಕೂ ನಡೆದಿದ್ದೇನು? 
GROUND REPORT

ನಿರಾಶ್ರಿತರ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ; ಕೊಡಗಿನಲ್ಲಿ ನಿಜಕ್ಕೂ ನಡೆದಿದ್ದೇನು? 

ಪರಿಹಾರ ಕೇಂದ್ರದಲ್ಲಿ ಮಕ್ಕಂದೂರಿನ 25 ಕುಟುಂಬಗಳ ಸಂತ್ರಸ್ತರಲ್ಲದೆ ಇನ್ನುಳಿದವರೂ ಆಶ್ರಯ ಪಡೆದುಕೊಂಡಿದ್ದಾರೆ. ಅಲ್ಲದೆ ಲೈನ್ ಮನೆಗಳಲ್ಲಿದ್ದವರು ಮನೆ ಕಟ್ಟಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಇಲ್ಲಿ ಬಂದು ಸೇರಿಕೊಂಡಿದ್ದಾರೆ.

ವಸಂತ ಕೊಡಗು

ವಸಂತ ಕೊಡಗು

ಸೋಮವಾರಪೇಟೆ ತಾಲೂಕು ಕುಶಾಲನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಸುಮಾರು 287 ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ. ಇವರು ಮಂಗಳವಾರ ರಾತ್ರಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ತಲೆಗೆ ಗಾಯ ಮಾಡಿಕೊಂಡ ತಹಶೀಲ್ದಾರ್‌ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಪಡೆದು ಇದೀಗ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.

ಅಷ್ಟಕ್ಕೂ ತಹಶೀಲ್ದಾರ್‌ ಹಲ್ಲೆಗೆ ಗುರಿಯಾಗಿದ್ದೇಕೆ ಎಂದು ಹುಡುಕಿಕೊಂಡು ಹೊರಟರೆ ಕುತೂಹಲಕಾರಿ ಕತೆಗಳು ತೆರೆದುಕೊಳ್ಳುತ್ತವೆ.

ಆಗಸ್ಟ್‌ 18ರಂದು ಕೊಡಗಿನಲ್ಲಿ ಭೀಕರ ಮಳೆ ಸುರಿದ ಸಂದರ್ಭದಲ್ಲಿ ನೂರಾರು ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಕುಶಾಲನಗರದ ಹಾರಂಗಿ ರಸ್ತೆಯಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿತ್ತು. ಜಿಲ್ಲೆಯಲ್ಲಿ ತೆರೆಯಲಾದ ಒಟ್ಟು 41 ಕೇಂದ್ರಗಳ ಪೈಕಿ ಇದು ಒಂದಾಗಿದ್ದು ಪ್ರಾರಂಭದಲ್ಲಿ ಸುಮಾರು 600 ಕ್ಕೂ ಹೆಚ್ಚು ಜನರು ಇಲ್ಲಿ ಆಶ್ರಯ ಪಡೆದಿದ್ದರು.

ಇಲ್ಲಿಗೆ ರಾಜ್ಯದ ಇತರ ಜಿಲ್ಲೆಗಳಿಂದ ಕೆಎಎಸ್ ಅಧಿಕಾರಿಗಳನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿತ್ತು. ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನ 18 ವೈದ್ಯರ ತಂಡವೂ ಕುಶಾಲನಗರದಲ್ಲೇ ಬೀಡು ಬಿಟ್ಟು ಸಂತ್ರಸ್ತ ಶಿಬಿರಗಳಿಗೆ ತೆರಳಿ ಸೇವೆ ನೀಡುತಿತ್ತು.

ಈ ತಿಂಗಳಿನಲ್ಲಿ ಮಳೆ ಕಡಿಮೆಯಾದ ಬಳಿಕ ಅನೇಕ ಸಂತ್ರಸ್ತರು ತಮ್ಮ ಸ್ವಂತ ಊರುಗಳಿಗೆ ವಾಪಸಾಗಿದ್ದರು. ಹೊರಗಿನಿಂದ ಬಂದಿದ್ದ ಮೂರು ಕೆಎಎಸ್ ಅಧಿಕಾರಿಗಳೂ ತಮ್ಮ ಜಿಲ್ಲೆಗೆ ತೆರಳಿದರು. ಆಗ ಸಹಜವಾಗೇ ಈ ಸಂತ್ರಸ್ತ ಶಿಬಿರಗಳ ಉಸ್ತುವಾರಿಯ ಹೊಣೆ ಸ್ಥಳೀಯ ತಹಶೀಲ್ದಾರ್‌ ಅವರ ಮೇಲೆ ಬಿತ್ತು.

ಒಂದಷ್ಟು ಜನರು ಮನೆಗೆ ತೆರಳಿದ ನಂತರ ವಾಲ್ಮೀಕಿ ಸಂತ್ರಸ್ತ ಶೀಬಿರದಲ್ಲಿ ಕೇವಲ 287 ಜನರು ಉಳಿದುಕೊಂಡರು. ಕಂದಾಯ ಇಲಾಖೆ ಅಧಿಕಾರಿಗಳ ಪ್ರಕಾರ, ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರ ಒಟ್ಟು ಸಂಖ್ಯೆಯೇ 287. ಹೀಗಿದ್ದೂ ಈಗಲೂ ಮಡಿಕೇರಿ ಹಾಗೂ ಕುಶಾಲನಗರದ ಸಂತ್ರಸ್ತ ಶಿಬಿರಗಳಲ್ಲಿ 1000 ಕ್ಕೂ ಅಧಿಕ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಅಂದರೆ ಶಿಬಿರಗಳಲ್ಲಿ ಇತರರೂ ಆಶ್ರಯ ಪಡೆದಿದ್ದಾರೆ ಎಂಬುದು ಕಂದಾಯ ಇಲಾಖೆ ಆರೋಪವಾಗಿತ್ತು.

ಶಿಬಿರಗಳಲ್ಲಿ ಮನೆ ಕಳೆದುಕೊಳ್ಳದಿರುವವರೂ ಆಶ್ರಯವಿದ್ದಾರೆ ಎಂಬ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಪಡೆದುಕೊಂಡು ರಾತ್ರಿ 10.45ಕ್ಕೆ ಪರಿಹಾರ ಕೇಂದ್ರಕ್ಕೆ ಬಂದಿಳಿದಿದ್ದರು ಸೋಮವಾರಪೇಟೆಯ ತಹಶೀಲ್ದಾರ್‌ ಪಿಎಸ್ ಮಹೇಶ್. ಹೀಗೆ ಬಂದವರೇ ತಲೆ ಎಣಿಕೆಗೆ ಮುಂದಾದರು. ಈ ಸಂದರ್ಭದಲ್ಲಿ ಅವರು ಮಲಗಿದ್ದ ಮಹಿಳೆಯರನ್ನು ಮೈ ಮುಟ್ಟಿ ಎಬ್ಬಿಸುತಿದ್ದರು ಎನ್ನಲಾಗಿದೆ. ಇದು ಸಂತ್ರಸ್ತರು ಮತ್ತು ತಹಶೀಲ್ದಾರ್ ಜತೆ ಮಾತಿನ ಚಕಮಕಿಗೆ ಕಾರಣವಾಗಿದೆ.

ಹಲ್ಲೆ ನಡೆದ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ. 
ಹಲ್ಲೆ ನಡೆದ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ. 

ಇದರ ಮುಂದುವರಿದ ಭಾಗವಾಗಿ ಪರಸ್ಪರ ಹಲ್ಲೆ ನಡೆದಿದೆ. ಸಂತ್ರಸ್ತರ ದಾಳಿಯಿಂದ ತಪ್ಪಿಸಿಕೊಂಡ ತಹಶೀಲ್ದಾರ್‌ ಮಹೇಶ್ ಸಮೀಪದ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡು ರಕ್ಷಣೆ ಪಡೆದುಕೊಂಡಿದ್ದಾರೆ. ಈ ಸಂಬಂಧ ದೂರು, ಪ್ರತಿದೂರು ದಾಖಲಾಗಿದ್ದು ಕುಶಾಲನಗರ ಪೋಲೀಸರು ತನಿಖೆ ನಡೆಸುತಿದ್ದಾರೆ.

ನಡು ರಾತ್ರಿ ತಹಶೀಲ್ದಾರ್‌ಗೆ ಏನು ಕೆಲಸ?:

ಇಲ್ಲಿ ಬಹುಮುಖ್ಯ ಪ್ರಶ್ನೆ ಎಂದರೆ ತಹಶೀಲ್ದಾರ್ ಅವರು ರಾತ್ರಿ 10.45 ಗಂಟೆಗೆ ಏಕೆ ತಲೆ ಎಣಿಕೆಗೆ ಮುಂದಾದರು? ಮೇಲಧಿಕಾರಿಗಳ ಸೂಚನೆ ಇದ್ದರೆ ಬೆಳಿಗ್ಗೆ ಅಥವಾ ಸಂಜೆ 8 ಗಂಟೆ ಮೊದಲು ಸಂತ್ರಸ್ತರ ಹಾಜರಾತಿ ಪಡೆಯಬಹುದಿತ್ತು. ಅದು ಬಿಟ್ಟು ಸರಿ ರಾತ್ರಿ ಸಂತ್ರಸ್ತರ ಕೇಂದ್ರಕ್ಕೆ ನುಗ್ಗಿದ ತಹಶೀಲ್ದಾರ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. “ಮಹಿಳೆಯರನ್ನು ಮುಟ್ಟಿ ಮಾತನಾಡಿಸಿದ್ದು ಮತ್ತು ವಯೋವೃದ್ದರು ಹಾಗೂ ರೋಗಿಗಳನ್ನು ರಾತ್ರಿ ಏಳುವಂತೆ ಮಾಡಿದ್ದು ಸರಿಯೇ?” ಎಂದು ಕೇಂದ್ರದಲ್ಲಿರುವ ನಿರಾಶ್ರಿತರು ಪ್ರಶ್ನಿಸಿದ್ದಾರೆ.

ಪರಿಹಾರ ಕೇಂದ್ರದಲ್ಲಿ ಮಕ್ಕಂದೂರಿನ 25 ಕುಟುಂಬಗಳ ಸಂತ್ರಸ್ತರಲ್ಲದೆ ಇನ್ನುಳಿದವರೂ ಆಶ್ರಯ ಪಡೆದುಕೊಂಡಿದ್ದಾರೆ. ಬಹುತೇಕ ಜನರು ಕೆಲಸವಿಲ್ಲ, ಊರಿಗೆ ತೆರಳಲು ರಸ್ತೆ ಇಲ್ಲ. ಅಲ್ಲದೆ ಲೈನ್ ಮನೆಗಳಲ್ಲಿದ್ದವರು ಮನೆ ಕಟ್ಟಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಇಲ್ಲಿ ಬಂದು ಸೇರಿಕೊಂಡಿದ್ದಾರೆ.

ಆದರೆ ನಿರಾಶ್ರಿತರ ಕೇಂದ್ರದಲ್ಲಿ ಇರುವವರೆಲ್ಲರಿಗೂ ಮನೆ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು. “ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತಿದ್ದೇವೆ. ಮನೆ ಕಳೆದುಕೊಂಡವರಿಗೆ ಮಾತ್ರ ಸರ್ಕಾರ ಸಂತ್ರಸ್ತರೆಂದು ಪರಿಗಣಿಸಿ ಮನೆ ಕಟ್ಟಿಸಿಕೊಡಲಿದೆ,” ಎಂದು ಸ್ಪಷ್ಟಪಡಿಸುತ್ತಾರೆ ಪುನರ್ವಸತಿ ವಿಭಾಗದ ಜಿಲ್ಲಾಧಿಕಾರಿ ಎಂ.ಕೆ. ಜಗದೀಶ್. ಮನೆ ಇದ್ದವರನ್ನು ಕೇಂದ್ರದಿಂದ ಹೊರಗೆ ಕಳಿಸಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಸಹಜವಾಗಿಯೇ ನಿರಾಶ್ರಿತರು ಯಾರು ಎಂಬುದರ ಬಗೆಗೆ ಜಿಜ್ಞಾಸೆಯೊಂದು ಹುಟ್ಟಿಕೊಂಡಿದೆ. ಇದೇ ಸಮಯದಲ್ಲಿ, ರಾತ್ರಿ ವೇಳೆ ಅಧಿಕಾರಿ ಲೆಕ್ಕಾ ಹಾಕಲು ಹೋಗಿದ್ದ ಸ್ಥಳೀಯರನ್ನು ರೊಚ್ಚಿಗೆಬ್ಬಿಸಿದೆ. ಇದೇ ಹಲ್ಲೆಗೆ ಕಾರಣ ಎನ್ನುತ್ತಾರೆ ಸ್ಥಳದಲ್ಲಿ ಇದ್ದವರು. ಒಂದು ಕಡೆ ವಿಕೋಪದ ನಂತರದ ಪುನರ್‌ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ, ಇಂತಹ ಚಿಕ್ಕ ಪುಟ್ಟ ವಿಚಾರಗಳು ಅಗತ್ಯಕ್ಕಿಂತ ಹೆಚ್ಚೇ ಗಮನ ಸೆಳೆಯುತ್ತಿವೆ. ಅಧಿಕಾರಿಗಳು ಕೊಂಚ ಎಚ್ಚರಿಕೆಯಿಂದ ಕೆಲಸ ಮಾಡಬೇಕಾದ ಅಗತ್ಯವನ್ನು ಈ ಘಟನೆ ಸಾರಿ ಹೇಳುತ್ತಿದೆ.