samachara
www.samachara.com
ಗ್ರಾಮೀಣ ವಿದ್ಯುತ್ ಮಾರ್ಗ ನಿರ್ವಹಣೆ, ಗ್ರಾಹಕರನ್ನೇ ಪುಗಸಟ್ಟೆ ಬಳಸಿಕೊಳ್ಳುತ್ತಿದೆ ಹೆಸ್ಕಾಮ್
GROUND REPORT

ಗ್ರಾಮೀಣ ವಿದ್ಯುತ್ ಮಾರ್ಗ ನಿರ್ವಹಣೆ, ಗ್ರಾಹಕರನ್ನೇ ಪುಗಸಟ್ಟೆ ಬಳಸಿಕೊಳ್ಳುತ್ತಿದೆ ಹೆಸ್ಕಾಮ್

ಮಲೆನಾಡು ಪ್ರದೇಶದಲ್ಲಿ ವಿದ್ಯುತ್ ಮಾರ್ಗಗಳ ನಿರ್ವಹಣೆ ಅತ್ಯಂತ ನಾಜೂಕಾದ ಕೆಲಸ. ಇದಕ್ಕೆ ಸೂಕ್ತ ಸಿಬ್ಬಂದಿಗಳನ್ನು ನೇಮಿಸದೆ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ‘ಹೆಸ್ಕಾಮ್’ ಗ್ರಾಹಕರನ್ನೇ ಪುಗಸಟ್ಟೆ ದುಡಿಸಿಕೊಳ್ಳುತ್ತಿದೆ. 

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಕೊಳೆರೋಗಕ್ಕೆ ಔಷಧ ಸಿಂಪಡಣೆಗೆ ಕೂಲಿಯೊಡನೆ ತೋಟಕ್ಕೆ ಹೋದ ಶಂಕರಪ್ಪ (ಹೆಸರು ಬದಲಾಯಿಸಲಾಗಿದೆ) ಹಾವು ನೋಡಿದವರಂತೆ ಹೌಹಾರಿದರು. ಮೈಯೆಲ್ಲ ಬೆವೆತು, ನೆಲ ನೋಡುತ್ತ ನಿಂತುಬಿಟ್ಟರು. ತಕ್ಷಣ ಸಾವರಿಸಿಕೊಂಡು, ಕೂಲಿಯವನನ್ನು ಮುಂದೆ ಹೋಗದಂತೆ ತಡೆದು, ಹಸಿರಿನ ಮಧ್ಯೆ ಹರಿದು ಬಿದ್ದ ವಿದ್ಯುತ್ ತಂತಿ ತೋರಿಸಿದರು. “ನಮ್ಮ ನಸೀಬು ಚೆನ್ನಾಗಿದೆ. ನೋಡದೇ ತುಳಿದಿದ್ದರೆ ಸತ್ತೇ ಹೋಗುತ್ತಿದ್ದೆವು” ಎಂದು ಕೂಲಿಯವನ ಜೊತೆ ವಾಪಸ್ ಮನೆಗೆ ಬಂದರು.

ಎರಡು ಗುಡ್ಡಗಳನ್ನು ನಡುವೆ ಹೊಸೆದಿದ್ದ ವಿದ್ಯುತ್ ತಂತಿ ಶಂಕರಪ್ಪನ ತೋಟದಲ್ಲಿ ತುಂಡಾಗಿ ಬಿದ್ದಿತ್ತು. ಅದಕ್ಕೆ ಕಾರಣ ಕಂಬದಿಂದ ಕಂಬಕ್ಕಿರುವ ಅವೈಜ್ಞಾನಿಕ ಅಂತರ. ಎರಡೂ ಕಂಬಗಳ ನಡುವೆ ಬರೋಬ್ಬರಿ ನೂರು ಮೀಟರಿಗೂ ಅಧಿಕ ಅಂತರವಿರುವ ಕಾರಣ ಪದೇ ಪದೇ ತನ್ನ ಭಾರ ತಾಳಲಾರದೆ ತಂತಿ ತುಂಡಾಗಿ ಬೀಳುತ್ತಿದೆ.

ಸರಿಯಾಗಿ ಸ್ಪಂದಿಸದ ಹೆಸ್ಕಾಮ್:

ಮರುದಿನ ಮುಂಜಾನೆ ಹೆಸ್ಕಾಮ್ (ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ) ಸಿಬ್ಬಂದಿಗೆ ಶಂಕ್ರಪ್ಪ ದೂರು ನೀಡಿದರಾದರೂ ಆತ “ದುರಸ್ತಿಗೆ ಬರುವುದು ತಡವಾಗುತ್ತದ,” ಎಂದ. ಮತ್ತು “ನಿಮ್ಮ ದೂರವಾಣಿ ನಂಬರ್ ಕೊಡಿ, ನಾವು ನಿಮ್ಮೂರಿಗೆ ದುರಸ್ತಿಗೆ ಬಂದಾಗ ನಿಮಗೆ ಫೋನ್ ಮಾಡುತ್ತೇವೆ. ಆಗ ನೀವು ಒಂದು ಅಲ್ಯೂಮೀನಿಯಮ್ ಏಣಿ ಜೊತೆ 8-10 ಜನರನ್ನೂ ಕರೆದುಕೊಂಡು ಬರಬೇಕು,” ಎಂದು ಅಧಿಕಾರಯುತವಾಗಿ ಹೇಳಿದ. “ಅಲ್ಲಾ ಸರ್.. ನಮ್ಮೂರಿನ ಜನಕ್ಕೆ ತರಬೇತಿಯಿಲ್ಲ. ತುಂಡಾದ ತಂತಿ ಹೇಗೆ ಜೋಡಿಸಬೇಕೆಂದು ತಿಳಿದಿಲ್ಲ. ಅವರತ್ರ ಸಾಧ್ಯಾನಾ?” ಎಂದು ಶಂಕರಪ್ಪ ಕೇಳಿದ್ದಕ್ಕೆ, “ಇವತ್ತು ನೀವು ಊರಿನ ಜನ ಬಂದರೆ ದುರಸ್ತಿ ಮಾಡೋಣ. ಬರಲಿಲ್ಲವೆಂದರೆ ಆಗಲ್ಲ. ನಿಮ್ಮ ಸಹಾಯವಿಲ್ಲದೇ ನಮ್ಮಿಂದ ಮಾಡೋಕಾಗೊಲ್ಲ,” ಎಂದುಬಿಟ್ಟ.

ಸಾಯಂಕಾಲ ತಡವಾಗಿ ಶಂಕರಪ್ಪನಿಗೆ ಪೋನ್ ಬಂತು. ‘ನಿಮ್ಮೂರಿನ ಹರಿದ ತಂತಿ ಜೋಡಿಸಿ ಎಳೆದು ಕಟ್ಟಲು ಬಂದೀದ್ದೀವಿ. ಅಲ್ಯೂಮೀನಿಯಂ ಏಣಿ ಜತೆ 8-10 ಜನರನ್ನು ಕರೆದುಕೊಂಡು ಬನ್ನಿ’ ಎಂದರು ಹೆಸ್ಕಾಮ್‌ ಕಡೆಯವರು. ಶಂಕರಪ್ಪ ಈ ಮೊದಲೇ ಊರ ಜನರಿಗೆ ತಿಳಿಸಿದ್ದರೂ, ಸಾಯಂಕಾಲದವರೆಗೆ ಕಾದಿದ್ದ ಜನರೆಲ್ಲ ತಮ್ಮ ಕೆಲಸಕ್ಕೆ ಮರಳಿದ್ದರು. ಆದರೂ ಉಳಿದಿದ್ದ ಮೂವರನ್ನು ಕಟ್ಟಿಕೊಂಡು ಒಂದು ಏಣಿ ತೆಗೆದುಕೊಂಡು ಹರಿದ ತಂತಿಯ ಕಂಬದತ್ತ ನಡೆದರು ಶಂಕರಪ್ಪ.

ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ. 
ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ. 

ತಂತಿ ದುರಸ್ತಿ ಮಾಡಬೇಕಾದ ಸ್ಥಳಕ್ಕೆ ಹೋದಾಗ ಶಂಕ್ರಪ್ಪ ಮತ್ತು ಇತರರಿಗೆ ಆಶ್ಚರ್ಯ ಕಾದಿತ್ತು. ಅಷ್ಟೊಂದು ಉದ್ದದ ತಂತಿ ಬಿದ್ದಿದ್ದನ್ನು ಜೋಡಿಸಲು ಇಬ್ಬರೇ ಸಿಬ್ಬಂದಿ ಬೈಕ್‌ನಲ್ಲಿ ಬಂದಿದ್ದರು. ಒಂದು ನೀರು ಸೇದುವ ಗಡಗಡೆ, ಹಗ್ಗ ಅವರ ಕೈಯಲ್ಲಿದ್ದವು.

ನೂರು ಮೀಟರ್ಗೂ ಅಧಿಕ ಉದ್ದದ ತಂತಿ ಹರಿದಿದೆ ಎಂದು ತಿಳಿದಾಗ ಹೆಸ್ಕಾಮ್‌ನ ಸೆಕ್ಷನ್ ಆಫೀಸರು ಹುಡುಕಿ ಹುಡುಕಿ ಇಬ್ಬರು ಸಿಬ್ಬಂದಿಗಳನ್ನು ಒಟ್ಟು ಮಾಡಿ ಕಳುಹಿಸಿದ್ದರು. ಹಲವಾರು ಕಡೆಗಳಿಂದ ದೂರುಗಳ ಮೇಲೆ ದೂರುಗಳು. ಆದರೆ ಇರುವ ಸಿಬ್ಬಂದಿ ಮಾತ್ರ ಮೂರೋ, ನಾಲ್ಕೋ ಮಾತ್ರ. ಅವರಲ್ಲಿ ಇಬ್ಬರು ಗ್ರಿಡ್ ನಿರ್ವಹಣೆಗೆ ಬೇಕಾಗುತ್ತಾರೆ. ಇನ್ನಿಬ್ಬರನ್ನು ಇಲ್ಲಿಗೆ ಕಳುಹಿಸಲಾಗಿತ್ತು. “15-20 ಪೋಸ್ಟ್‌ಗಳು ಖಾಲಿ ಇವೆ. ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಕಾಡಿನ ಅಥವಾ ತೋಟದ ಮಧ್ಯೆ ವಿದ್ಯುತ್ ತಂತಿ ಹರಿದು ಬಿದ್ದಾಗ ಇವರಿಬ್ಬರಿಂದ ಏನೂ ಮಾಡುವುದಕ್ಕಾಗುವುದಿಲ್ಲ,” ಎನ್ನುತ್ತಾರೆ ಈ ಸೆಕ್ಷನ್‌ ಆಫೀಸರ್‌.

ನೇಮಕಾತಿಯಾದರೂ ನಿಲ್ಲಲ್ಲ:

ಗ್ರಾಮೀಣ ವಿದ್ಯುತ್ ಮಾರ್ಗ ನಿರ್ವಹಣೆ, ಗ್ರಾಹಕರನ್ನೇ ಪುಗಸಟ್ಟೆ ಬಳಸಿಕೊಳ್ಳುತ್ತಿದೆ ಹೆಸ್ಕಾಮ್

ಹಾಗೆ ನೋಡಿದರೆ, ಬಯಲುಸೀಮೆ ಪ್ರದೇಶಗಳಲ್ಲಿ ಹುದ್ದೆಗಳು ಖಾಲಿಯೇ ಇರುವುದಿಲ್ಲ. ಆದರೆ ಮಲೆನಾಡಲ್ಲಿ ಮಾತ್ರ ಯಾವಾಗ ನೋಡಿದರೆ ಪೋಸ್ಟ್‌ಗಳು ಖಾಲಿ ಇರುತ್ತವೆ. ಮಲೆನಾಡಿನಲ್ಲಿ ಖಾಲಿ ಇರುವ ಪೋಸ್ಟ್‌ಗಳಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ಸಿಬ್ಬಂದಿಗಳು ಸ್ವಲ್ಪ ಕಾಲದ ನಂತರ ರಾಜಕೀಯ ಪ್ರಭಾವ ಬಳಸಿ ತಮಗೆ ಬೇಕಾದ ಬಯಲುಸೀಮೆ ಊರಿಗೆ ವರ್ಗಾವಣೆ ಮಾಡಿಸಿಕೊಂಡು ಕಾಲ್ಕೀಳುತ್ತಾರೆ. ಏಕೆಂದರೆ ಮಲೆನಾಡಿನ ಕಾಡು, ಮಳೆಗಾಲದ ಕಾಟ ಅವರಿಂದ ತಡೆಯೋದಕ್ಕೆ ಆಗುವುದಿಲ್ಲವಂತೆ. ಹೀಗಾಗಿ ತಂತಿ ಕಡಿತ, ಮರ ಬೀಳುವುದು ಮೊದಲ ಕೇಸುಗಳು ಬೆಟ್ಟದಷ್ಟಿವೆ. ಇದಕ್ಕೆ ಮಲೆನಾಡಿಗೆ ಸ್ಥಳೀಯರನ್ನೇ ನೇಮಕಾತಿ ಮಾಡಿದರೆ ಈ ಸಮಸ್ಯೆ ನಿವಾರಣೆ ಸಾಧ್ಯ.

ಮಲೆನಾಡಿಗರು ಮೃದು ಸ್ವಭಾವದವರು. ದುರಸ್ತಿಗೆ ಬಂದ ಸಿಬ್ಬಂದಿಗಳು ಅಸಹಾಯಕತೆ ತೋಡಿಕೊಂಡರೆ ತಮ್ಮ ಕೈಲಾದ ಸಹಾಯ ಮಾಡಿ ಅವರಿಗೆ ಚಾ-ತಿಂಡಿಗೆಂದು ಒಂದಷ್ಟು ಹಣ ಕೊಟ್ಟು ಕಳುಹಿಸುತ್ತಾರೆ. ಇಂಥ ಸ್ವಭಾವದ ರುಚಿ ಕಂಡ ಸಿಬ್ಬಂದಿಗಳು ಮಲೆನಾಡಿನ ಗ್ರಾಮೀಣ ಭಾಗದ ಗ್ರಾಹಕರು ಮತ್ತು ಅವರ ಪರಿಕರಗಳನ್ನೇ ಪುಗಸಟ್ಟೆ ಬಳಸಿ, ದುರಸ್ತಿ ಮಾಡಿ ವಾಪಸಾಗುತ್ತಾರೆ. ನಗರ ಭಾಗಗಳಲ್ಲಿ ಸಣ್ಣ ಕೆಲಸಕ್ಕೂ ಲಾರಿ, ಜೀಪ್ ತುಂಬ ಸಿಬ್ಬಂದಿಗಳು ಬಂದು ರಿಪೇರಿ ಮಾಡುತ್ತಾರೆ. ಆದರೆ ‘ಗ್ರಾಮೀಣ ಭಾಗವೆಂದರೆ ಅಸಡ್ಡೆ, ನಿಯತ್ತಾಗಿ ಕೆಲಸ ಮಾಡುವವರು ಎಲ್ಲೋ ವಿರಳ’ ಎನ್ನುತ್ತಾರೆ ಸ್ಥಳೀಯ ರೈತರು. ಒಂದೊಮ್ಮೆ ದುರಸ್ತಿ ಕೆಲಸಕ್ಕೆ ಸ್ಥಳೀಯರು ಬರದಿದ್ದರೆ ವಾಪಸ್ ಹೋಗುತ್ತೇವೆ ಎನ್ನುತ್ತಾರೆ ಎಂದು ತಮ್ಮ ಗೋಳು ಹಂಚಿಕೊಳ್ಳುತ್ತಾರೆ.

ಸರಕಾರ ಮತ್ತು ಅದರ ಅಂಗ ಸಂಸ್ಥೆಗಳೆಲ್ಲ ಗ್ರಾಮೀಣ ಭಾಗಗಳ ಗ್ರಾಹಕರನ್ನೇ ಹೀಗೆ ಪುಕ್ಕಟೆ ಬಳಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಈ ಬಗ್ಗೆ ಜನರಿಗೇನು ಅಂತಹ ಬೇಜಾರೇನೂ ಇಲ್ಲ. ಹೀಗಿದ್ದೂ ಇಂಥ ಸಂಸ್ಥೆಗಳಿಗೆ ಗ್ರಾಮೀಣ ಗ್ರಾಹಕರಿಗೆ ಒದಗಿಸಲೇಬೇಕಾದ ಸೇವೆಗಳ ಬಗೆಗೆ ಮಾತ್ರ ಅರಿವಿಲ್ಲ. ಪಂಚಾಯತ್ ಗ್ರಾಮ ಸಭೆಗಳಿಗೆ ಅಧಿಕಾರಿಗಳನ್ನು ಕರೆಸಿ ಒಂದಷ್ಟು ಮನವಿಗಳನ್ನು ನೀಡಲಾಗುತ್ತಾದರೂ ಅವೆಲ್ಲಾ ಕೇವಲ ಆಶ್ವಾಸನೆಗಳಲ್ಲೇ ಉಳಿದು ಬಿಡುತ್ತವೆ. ವಿದ್ಯುತ್ ಬಿಲ್ ಪಡೆಯುವ ಇಂಧನ ಇಲಾಖೆ, ಸೇವೆ ನೀಡುವ ಬಗೆಗೂ ವೃತ್ತಿಪರತೆಯಿಂದ ಕೆಲಸ ನಿರ್ವಹಿಸಬೇಕಿದೆ.