samachara
www.samachara.com
‘ಉದ್ರೇಕಗೊಳ್ಳದಿರಿ’: ನ್ಯೂಸ್‌ ರೂಂನಿಂದ ಹೊರಬಿದ್ದ ‘ಕುಂದಾಪುರದ ಕಬಾಲಿ’; ಚೈತ್ರಾ ನಾಯಕ್ ನಿಜಕ್ಕೂ ಯಾರು? 
GROUND REPORT

‘ಉದ್ರೇಕಗೊಳ್ಳದಿರಿ’: ನ್ಯೂಸ್‌ ರೂಂನಿಂದ ಹೊರಬಿದ್ದ ‘ಕುಂದಾಪುರದ ಕಬಾಲಿ’; ಚೈತ್ರಾ ನಾಯಕ್ ನಿಜಕ್ಕೂ ಯಾರು? 

ಹೀಗೊಂದು ಶೀರ್ಷಿಕೆಯೊಂದಿಗೆ ‘ಸಮಾಚಾರ’ ಕುಂದಾಪುರದ ಚೈತ್ರಾ ನಾಯಕ್‌ಳನ್ನು ನಿಮಗೆ ಪರಿಚಯಿಸುತ್ತಿದೆ. ಅದಕ್ಕೆ ಕಾರಣವೂ ಇದೆ.

ಈಕೆ ಎಲ್ಲರಂತೆಯೇ ಆಲೋಚನೆ ಮಾಡಿದ್ದಿದ್ದರೆ, 26ನೇ ವಯಸ್ಸಿನಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೇಬಲ್ ವಾಹಿನಿಯಲ್ಲಿ ವಾರ್ತೆ ಓದಿಕೊಂಡು ಇರಬೇಕಾಗುತ್ತಿತ್ತು. ದಿನಕ್ಕೊಂದು ಗಂಟೆ ಫೋನ್‌ ಇನ್ ಕಾರ್ಯಕ್ರಮದಲ್ಲಿ ಹಾಡುಗಳನ್ನು ಪ್ಲೇ ಮಾಡಿಸಬೇಕಾಗಿತ್ತು. ಆದರೆ, ಆಕೆ ಇವತ್ತು ಸಣಕಲು ದೇಹವನ್ನು ಜತೆಗಿಟ್ಟುಕೊಂಡು, ಗಟ್ಟಿ ಗಂಟಲು ನಂಬಿಕೊಂಡು ಬೀದಿಗೆ ಇಳಿದಿದ್ದಾಳೆ. ಕುಂದಾಪುರ ಎಂಬ ಪುಟ್ಟ ತಾಲೂಕಿನಲ್ಲಿ ತನ್ನ ಇರುವಿಕೆಯನ್ನು ಹೊಸ ಅವತಾರದಲ್ಲಿ ಸಾರಲು ಹೊರಟಿದ್ದಾಳೆ. ಇತ್ತೀಚೆಗೆ ಆಕೆಯ ಮೇಲೆ ‘ರಾಜಕೀಯ ಹಲ್ಲೆ’ ನಡೆದಿದೆ. ಅದನ್ನು ಕೇಂದ್ರ ಸಚಿವೆಯೊಬ್ಬರು ಖಂಡಿಸಿದ್ದಾರೆ.

ಹೀಗೊಂದು ಪೀಠಿಕೆಯೊಂದಿಗೆ ‘ಸಮಾಚಾರ’ ಕುಂದಾಪುರದ ಚೈತ್ರಾ ನಾಯಕ್‌ಳನ್ನು ನಿಮಗೆ ಪರಿಚಯಿಸುತ್ತಿದೆ. ಅದಕ್ಕೆ ಕಾರಣವೂ ಇದೆ. ಕರ್ನಾಟಕದಲ್ಲಿಯೂ ದಶಕದ ಹಿಂದೆ ಹೊಸ ತಲೆಮಾರಿನ ಯುವಕರ ಗುಂಪೊಂದು ಉಘ್ರ ಭಾಷಣಗಳ ಮೂಲಕ ‘ಹಿಂದೂ ರಾಷ್ಟ್ರ’ ನಿರ್ಮಾಣಕ್ಕೆ ಹೊರಟಿತು. ಅದರ ಪರಿಣಾಮ ಎರಡು ಮತ್ತು ಮೂರನೇ ತಲೆಮಾರಿನ ಉಘ್ರ ಭಾಷಣಕಾರರು ನಮ್ಮ ನಡುವೆ ಹುಟ್ಟಿಕೊಂಡಿದ್ದಾರೆ. ಅವರೊಲ್ಲೊಬ್ಬಾಕೆ ಚೈತ್ರಾ ನಾಯಕ್ ಅಲಿಯಾಸ್ ಚೈತ್ರಾ ಕುಂದಾಪುರ. ಇದು ಆಕೆಯ ಇತ್ತೀಚಿನ ಸೋ ಕಾಲ್ಡ್ ವೈರಲ್ ಭಾಷಣ.

ನೀವು ಮೇಲಿನ ವಿಡಿಯೋವನ್ನು ಕೇಳಿಸಿಕೊಂಡಿದ್ದರೆ, ಮೊದಲ 25 ಸೆಕೆಂಡುಗಳಲ್ಲೇ ಚೈತ್ರಾ, ಬೆಂಗಳೂರಿನಲ್ಲಿ ಕಳೆದ ವರ್ಷ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ ವಿಚಾರವನ್ನು ಪ್ರಸ್ತಾಪಿಸುತ್ತಾಳೆ. ಗೌರಿ ಕುರಿತು ಮುಖ್ಯವಾಹಿನಿಯ ಪತ್ರಕರ್ತ ವಿಶ್ವೇಶ್ವರ ಭಟ್ ಬರೆದ ಕಾಮೆಂಟ್‌ ಒಂದನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಾಳೆ. ಮುಂದಿನದು ಉಘ್ರ ಭಾಷಣ. ಮಧ್ಯೆ ಮಧ್ಯೆ ಉಸಿರೆಳೆದುಕೊಳ್ಳುತ್ತಾ, ಒಂದೊಂದು ಪಂಚಿಂಗ್ ಡೈಲಾಗ್ ಹೊಡೆಯುತ್ತಾಳೆ ಚೈತ್ರಾ. ಬಹುಶಃ ಈ ಕಾರಣಕ್ಕೇ ಈ ವಿಡಿಯೋವನ್ನು ಯೂ-ಟ್ಯೂಬ್‌ಗೆ ಹರಿಯಬಿಟ್ಟ ‘ಮಂಗಳೂರು ಮಿರರ್‌’ ಕೂಡ ‘ಹಿಂದೂ ಫೈರ್‌ ಬ್ರಾಂಡ್‌’ ಎಂದು ಪಟ್ಟ ಕಟ್ಟಿದೆ.

ಪತ್ರಕರ್ತೆಯ ಸಾವು ಮತ್ತು ಆಕೆ ಬಗ್ಗೆ ಬರೆದ ಪತ್ರಕರ್ತನೊಬ್ಬನ ಉದಾಹರಣೆ ನೀಡುವ ಚೈತ್ರಾ ನಾಯಕ್ ಓದಿದ್ದು ಪತ್ರಿಕೋದ್ಯಮ. ಆರಿಸಿಕೊಂಡಿದ್ದು ವಾರ್ತೆ ಓದುವ ಕೆಲಸ. ವಿಪರ್ಯಾಸ ಏನೆಂದರೆ, ಈಕೆ ಮೊದಲ ಬಾರಿಗೆ ಸುದ್ದಿಕೇಂದ್ರಕ್ಕೆ ಬಂದಿದ್ದೂ ಮಾಜಿ ಪತ್ರಕರ್ತರೊಬ್ಬರ ಬಗ್ಗೆ ಕಾಮೆಂಟ್ ಮಾಡುವ ಮೂಲಕ.

ಬಿಗ್‌ ಬಾಸ್‌ ಸ್ಪರ್ಧೆಯಲ್ಲಿ ರನ್ನರ್‌ಅಪ್‌ ಆಗಿದ್ದ ಕನ್ನಡದ ಅಭಿಮಾನಿ, ಹಾಸ್ಯ ಕಲಾವಿದ ಕೀರ್ತಿ ಶಂಕರಘಟ್ಟರನ್ನು ಡೋಂಗಿ ಹೋರಾಟಗಾರ ಎನ್ನುವ ಮೂಲಕ ಚೈತ್ರಾ ಕುಂದಾಪುರ ಹೆಸರು ಮೊದಲ ಬಾರಿಗೆ ಕರಾವಳಿಯ ಫೇಸ್‌ಬುಕ್‌ ಪೇಜ್‌ ಮತ್ತು ಗ್ರೂಪ್‌ಗಳಾಚೆಗೂ ಹರಿದಾಡಿತ್ತು. ಅದಾದ ನಂತರ ಈಕೆಯ ಹೆಸರು ಕೇಳಿ ಬಂದಿದ್ದು ಗಂಗಾವತಿಯಲ್ಲಿ.

2018ರ ವಿಧಾನಸಭೆ ಚುನಾವಣೆಗೂ ಮೊದಲು ಕೊಪ್ಪಳ ತಾಲೂಕಿನ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಂಡಾದಲ್ಲಿ ಭಾಷಣ ಮಾಡಿದ್ದಳು ಚೈತ್ರಾ. “ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರ ಮಾಡಲು ಮಸೀದಿಗಳಲ್ಲಿ ರೇಟ್ ಫಿಕ್ಸ್ ಮಾಡುತ್ತಾರೆ. ಬ್ರಾಹ್ಮಣರಿಗೆ 5 ಲಕ್ಷ , ಕ್ಷತ್ರಿಯರಿಗೆ 4 ಲಕ್ಷ, ಕುರುಬರಿಗೆ 3.5 ಲಕ್ಷ, ವಾಲ್ಮೀಕಿ ಸಮುದಾಯದವರಿಗೆ 3 ಲಕ್ಷ ರೇಟ್ ಫಿಕ್ಸ್ ಮಾಡಿದ್ದಾರೆ,” ಎಂದು ಸಾಮಾನ್ಯ ಜನರ ಮುಂದೆ ‘ವಿವಾದಿತ’ ಉಘ್ರ ಭಾಷಣ ಮಾಡಿದ್ದಳು.

ಭಾಷಣದಲ್ಲಿ ಆಗಿನ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಆರೋಪಗಳ ಸುರಿಮಳೆಯಾಗಿದ್ದು ಹೈಲೈಟ್ಸ್ (ಅದರಾಚೆಗೆ ಆಸಕ್ತಿ ಇದ್ದರೆ ಪೂರ್ತಿ ವಿಡಿಯೊ ನೋಡಿ). ಅನ್ಸಾರಿ ಹೆಣ್ಣುಮಕ್ಕಳನ್ನು ಇಟ್ಟುಕೊಂಡು ಬಿಜಿನೆಸ್ ಮಾಡ್ತಾರೆ. ಡೀಲ್ ಮಾಡ್ತಾರೆ ಎಂದಿದ್ದಳು. ಹೀಗೊಂದು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಂತೆ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡು ಅನ್ಸಾರಿ ಕಾರಿನ ಮೇಲೆ ಕೆಲ ಯುವಕರು ಕಲ್ಲು ತೂರಿ ಗಾಜುಗಳನ್ನು ಪುಡಿಗಟ್ಟಿದ್ದರು. ಬಳಿಕ ತನ್ನ ಮೇಲೆ ವೈಯಕ್ತಿಕ ತೇಜೋವಧೆ ನಡೆಯುತ್ತಿದೆ ಎಂದು ಚೈತ್ರಾ ದೂರು ದಾಖಲಿಸಿದ್ದೂ ನಡೆದಿತ್ತು.

“ಮೊದಲಿನಿಂದಲೂ ಪ್ರಚಾರದಲ್ಲಿರಬೇಕು ಎಂಬ ಮನಸ್ಥಿತಿ ಚೈತ್ರಾಳದ್ದು. ಆ ಕಾರಣಕ್ಕೆ ವಾರ್ತೆ ಓದುವುದು ಒಂದು ಮಾರ್ಗ ಎಂದುಕೊಂಡಿದ್ದಳು. ನಂತರ ಹಿಂದುತ್ವದ ರಕ್ಷಣೆ ಹೆಸರಿನಲ್ಲಿ ಭಾಷಣ ಮಾಡಿದರೆ ಪ್ರಚಾರ ಸಿಗುತ್ತದೆ ಎಂಬುದು ಗೊತ್ತಾಯಿತು. ಆಕೆಯ ಆಲೋಚನೆಗೆ ಇದು ಒಗ್ಗುತ್ತದೆ,’’ ಎನ್ನುತ್ತಾರೆ ಆಕೆಯ ಸಹಪಾಠಿಯೊಬ್ಬರು. ಅವರ ಹೆಸರನ್ನು ಚೈತ್ರಾ ಕುಂದಾಪುರ ಜತೆ ಪ್ರಕಟಿಸಲು ನಿರಾಕರಿಸಿದ ಅವರು, “ದಯವಿಟ್ಟು ನನ್ನ ಹೆಸರು ಹಾಕಬೇಡಿ. ಮನೆಯಲ್ಲಿ ಸಮಸ್ಯೆಯಾಗುತ್ತದೆ,’’ ಎಂದರು.

ಇತ್ತೀಚೆಗೆ ನ್ಯೂಸ್ 18 ಕನ್ನಡದಂತಹ ಕಾರ್ಪೊರೇಟ್ ವಾಹಿನಿಗಳೂ ಈಕೆಯನ್ನು ಪ್ಯಾನಲಿಸ್ಟ್ ಆಗಿ ಕರೆಯುತ್ತಿದ್ದಾರೆ. ಒಂದು ಕಾಲದಲ್ಲಿ ಸುದ್ದಿ ಮಾಡುತ್ತಿದ್ದವಳು ಇವತ್ತು ಅವಳೇ ಸುದ್ದಿಯಾಗುತ್ತಿದ್ದಾಳೆ. ಅದಕ್ಕಾಗಿ ನಿರಂತರ ಪ್ರಯತ್ನ ಜಾರಿಯಲ್ಲಿದೆ.

ಸೆಪ್ಟೆಂಬರ್‌ 10; ಭಾರತ್ ಬಂದ್. ದೇಶಾದ್ಯಂತ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ, ಹರತಾಳಗಳು ನಡೆಯುತ್ತಿದ್ದವು. ಹಾಗೆಯೇ ಉಡುಪಿಯಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಉಡುಪಿ ನಗರದಾದ್ಯಂತ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಾ ಬರುತ್ತಿದ್ದರು. ಬಿಜೆಪಿ ಪ್ರಾಬಲ್ಯವಿರುವ ನಗರದ ಕಡಿಯಾಳಿಯಲ್ಲಿ ಅಂಗಡಿಗಳನ್ನು ಬಂದ್ ಮಾಡುವಂತೆ ಹೇಳುತ್ತಿದ್ದರು. ತಕ್ಷಣ ಅಲ್ಲಿ ಪ್ರತ್ಯಕ್ಷಳಾದ ಚೈತ್ರಾ, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ನುಸುಳಿ ‘ಮೋದಿ.. ಮೋದಿ.. ಮೋದಿ..’ ಅಂತ ಜೈಕಾರ ಹಾಕಿದಳು. ಇದು ಆಕೆಯ ಮನಸ್ಥಿತಿಗೆ ತಾಜಾ ಉದಾಹರಣೆ.

ಕೊನೆಗೆ, ವಾತಾವರಣ ಉದ್ವಿಗ್ನಗೊಂಡು ಎಸ್ಪಿ ಕಚೇರಿಯ ಮುಂಭಾಗದಲ್ಲೇ ಹೊಡೆದಾಟ ನಡೆಯಿತು. ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಗಿ ಬಂತು. ಉಡುಪಿಯಲ್ಲಿ ಒಂದು ದಿನ ನಿಷೇಧಾಜ್ಞೆ ಜಾರಿಯಾಯಿತು. ತನ್ನ ಮೇಲೆ ಹಲ್ಲೆ ನಡೆಯಿತು ಅಂತ ಚೈತ್ರಾ ದೂರಿದಳು. ಅಂತಿಮವಾಗಿ ಚೈತ್ರಾ ಕುಂದಾಪುರ ಹೆಸರು ಮತ್ತೆ ಚಾಲ್ತಿಗೆ ಬಂತು. ಇದಕ್ಕೆ ಕೇಂದ್ರ ಸಚಿವೆಯ ಪ್ರತಿಕ್ರಿಯೆಯೂ ಟ್ವೀಟ್‌ ರೂಪದಲ್ಲಿ ಬಂತು.

ಉಘ್ರ ಭಾಷಣಕ್ಕೆ ತೆರುತ್ತಿರುವ ಬೆಲೆ:

ಅತ್ತ ಸಾಮಾಜಿಕ ಮಾಧ್ಯಮಗಳಲ್ಲಿ, ರಾಜಕೀಯ ಕೇಂದ್ರಗಳಲ್ಲಿ ಸದ್ದು ಮಾಡುತ್ತಿರುವ ಚೈತ್ರಾ ವೈಯಕ್ತಿಕವಾಗಿ ಬೆಲೆ ತೆರುತ್ತಿದ್ದಾಳೆ ಎನ್ನುತ್ತಾರೆ ಆಕೆಯ ಹಿತವನ್ನು ಬಯಸುವವರೊಬ್ಬರು. “ಮನೆಯವರಿಗೆ ಚೈತ್ರಾ ಹಿಡಿದ ಮಾರ್ಗ ಇಷ್ಟ ಇಲ್ಲ. ಇತ್ತೀಚೆಗೆ ಆಕೆ ಸರಿಯಾಗಿ ಮನೆಗೂ ಹೋಗುತ್ತಿಲ್ಲ. ರಾಷ್ಟ್ರ ರಕ್ಷಣೆ, ಹಿಂದುತ್ವ ಎಂದು ಆಕೆ ನೌಕರಿಯನ್ನೂ ಬಿಟ್ಟಿದ್ದಾಳೆ,’’ ಎಂದು ‘ಸಮಾಚಾರ’ಕ್ಕೆ ನೊಂದು ನುಡಿದರು.

ಕುಂದಾಪುರದ ಚಿಕ್ಕಮ್ಮನ ಸಾಲು ಎಂಬಲ್ಲಿ ಈಕೆಯ ಮನೆ ಇದೆ. ಬಡ ಕುಟುಂಬದ ಹಿನ್ನೆಲೆಯಲ್ಲಿ ಈಕೆ ಅಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ, ಪದವಿ ಮುಗಿಸಿ, ನಂತರ ಹಿಂದುತ್ವದ ಪ್ರಯೋಗಶಾಲೆಯಂತಾಗಿದ್ದ ಮಂಗಳೂರಿಗೆ ಬರುತ್ತಾಳೆ. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಕೋರ್ಸ್‌ಗೆ ಸೇರಿಕೊಳ್ಳುತ್ತಾಳೆ.

“ಕಾಲೇಜು ದಿನಗಳಲ್ಲಿ ಈಕೆ ಪ್ರತಿಭಾವಂತೆ. ಕಾಲೇಜು ಚುನಾವಣೆ, ಭಾಷಣ ಸ್ಪರ್ಧೆಗಳಲ್ಲಿ ಸದಾ ಮುಂದೆ ಇರುತ್ತಿದ್ದಳು,” ಎಂದು ನೆನಪಿಸಿಕೊಳ್ಳುತ್ತಾರೆ ಈಕೆಯ ಸಹಪಾಠಿಗಳು. “ಆ ದಿನಗಳಲ್ಲಿ ಆಕೆ ಹಿಂದೂ-ಮುಸ್ಲಿಂ ಎನ್ನದೆ ಎಲ್ಲರೊಳಗೆ ಒಂದಾಗಿ ಬೆರೆಯುತ್ತಿದ್ದಳು. ಹಾಗೆ ನೋಡಿದರೆ ಈಕೆಯ ಸಹಪಾಠಿಗಳಲ್ಲಿ ಹೆಚ್ಚು ಇದ್ದದ್ದು ಮುಸ್ಲಿಂ ಸ್ನೇಹಿತರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಂಬ ವಿದ್ಯಾರ್ಥಿ ಸಂಘಟನೆ ಬಂದ ನಂತರ ಚೈತ್ರಾಳಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಯಿತು. ಹಿಂದುತ್ವದ ಅಸಲಿ ಉಘ್ರ ಭಾಷಣಗಳು ಶುರುವಾಗಿದ್ದು ಅಲ್ಲಿಂದಲೇ,’’ ಎಂಬ ಮಾಹಿತಿ ನೀಡುತ್ತಾರೆ ಚೈತ್ರಾ ಮುಸ್ಲಿಂ ಸಹಪಾಠಿಯೊಬ್ಬರು.

ನಾಲ್ಕು ವರ್ಷದ ಹಿಂದೆ ಮಂಗಳೂರು ಕಾಲೇಜಿನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯೊಂದಿಗೆ ಹೊರಬಿದ್ದ ಚೈತ್ರಾ ನಾಯಕ್, ಉಡುಪಿಯ ಸ್ಥಳೀಯ ಚಾನಲ್‌ನಲ್ಲಿ ನೌಕರಿಗೆ ಸೇರಿಕೊಂಡಿದ್ದಳು. ಈಕೆಯ ಜಗಳಗಂಟ ಸ್ವಭಾವವದಿಂದಾಗಿ ಬೇಸತ್ತು ಕೆಲವೇ ದಿನಗಳಲ್ಲಿ ಚಾನಲ್‌ನವರು ಕೆಲಸ ಬಿಡಿಸಿದ್ದರು. ಮುಂದೆ ‘ಸ್ಪಂದನ’ ಮತ್ತು ‘ಮುಕ್ತ’ ಎಂಬ ಸ್ಥಳೀಯ ವಾಹಿನಿಗಳಲ್ಲಿ ಆಕೆ ನೌಕರಿ ಮುಂದುವರಿಸಿದ್ದಳು.

ಚೈತ್ರ ಕುಂದಾಪುರಳ ‘ಸ್ಪಂದನ’ದ ದಿನಗಳು..
ಚೈತ್ರ ಕುಂದಾಪುರಳ ‘ಸ್ಪಂದನ’ದ ದಿನಗಳು..

“ಸೋಶಿಯಲ್ ಮೀಡಿಯಾ ಈಕೆಯ ಅಸ್ತ್ರ. ವೃತ್ತಿಪರ ಪತ್ರಿಕೋದ್ಯಮ ಆಕೆಯಿಂದ ಸಾಧ್ಯವಾಗಲಿಲ್ಲ,’’ ಎನ್ನುತ್ತಾರೆ ಸ್ಥಳೀಯ ವಾಹಿನಿಯೊಂದರ ಮಾಜಿ ಸಹೋದ್ಯೋಗಿಯೊಬ್ಬರು.

“ಮುಕ್ತ ವಾಹಿನಿಯಲ್ಲಿ ಈಕೆಗೆ ಅವಕಾಶ ಕೊಟ್ಟಾಗ ಅಲ್ಲಿನ ಅಷ್ಟೂ ಸಹೋದ್ಯೋಗಿಗಳನ್ನು ಈಕೆ ಎದುರು ಹಾಕಿಕೊಂಡಿದ್ದಳು. ಕೊನೆಗೆ ಗ್ರೀನ್‌ ರೂಂನಲ್ಲಿ ಸೀರೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗವನ್ನೂ ನಡೆಸಿದ್ದಳು. ಹೀಗೆ ಸಂಸ್ಥೆಯಿಂದ ಹೊರದಬ್ಬಿಸಿಕೊಂಡ ಬಳಿಕ ಅದೇ ಚಾನಲ್‌ನ ಮುಖ್ಯಸ್ಥರ ವಿರುದ್ಧವೇ ಟ್ಯಾಬ್ಲಾಯ್ಡ್ ಪತ್ರಿಕೆಯಲ್ಲಿ ಇಲ್ಲಸಲ್ಲದ ಆರೋಪ ಮಾಡಿ ಲೇಖನ ಬರೆಸಿದಳು. ಆ ಪ್ರಕರಣವೀಗ ಕೋರ್ಟ್‌ನಲ್ಲಿದೆ,’’ ಅವರು ಮಾಹಿತಿ ನೀಡುತ್ತಾರೆ.

ಹೀಗೆ, 26ನೇ ವಯಸ್ಸಿಗೆ ನಾನಾ ಹಾದಿಗಳನ್ನು ಕಂಡ ಚೈತ್ರಾ ಉಘ್ರ ಭಾಷಣಗಳ ಮಂಚಕ್ಕೆ ಬಂದು ನಿಂತಿದ್ದು ಯಾಕೆ? ಇಂತಹದೊಂದು ಪ್ರಶ್ನೆಗೆ ಸಿದ್ಧ ಮಾದರಿಯ ಉತ್ತರವೂ ಕೂಡ ಕುಂದಾಪುರದಲ್ಲಿ ಲಭ್ಯ ಇದೆ. ಉಡುಪಿ-ಚಿಕ್ಕಮಗಳೂರು ಅಥವಾ ಕೊಪ್ಪಳದಲ್ಲಿ ಲೋಕಸಭೆಗೆ ಅಭ್ಯರ್ಥಿಯಾಗುವ ಕನಸು ಚೈತ್ರಾಳದ್ದು ಎನ್ನುತ್ತಾರೆ ಇಲ್ಲಿನ ಬಿಜೆಪಿ ಕೆಲವು ನಾಯಕರು.

ಸದ್ಯ ಉಡುಪಿ-ಚಿಕ್ಕಮಗಳೂರಿನಲ್ಲಿ ಎಂಪಿ ಟಿಕೆಟ್‌ಗೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಆದರೆ ಈ ಬಾರಿ ಗಂಗಾವತಿಯಲ್ಲಿ ಸಂಗಣ್ಣ ಕರಡಿಗೆ ಟಿಕೆಟ್ ಇಲ್ಲ ಎಂಬ ಮಾಹಿತಿಯನ್ನು ಪಡೆದುಕೊಂಡಿರುವ ಈಕೆ ಪದೇ ಪದೆ ಅಲ್ಲಿಗೆ ಹೋಗಿ ಕೋಮು ಪ್ರಚೋದಕ ಭಾಷಣ ಮಾಡುತ್ತಿದ್ದಾಳೆ ಎಂಬ ಮಾಹಿತಿಯೂ ಇಲ್ಲಿ ಲಭ್ಯವಾಗುತ್ತದೆ. ಅದಕ್ಕೆ ಪೂರಕವಾಗಿ ಚೈತ್ರಾ ನಡೆಗಳೂ ಇವೆ.

ಅದೇನೇ ಇರಲಿ, “ಆಕೆ ಮಾತಿಗೂ ಕೃತಿಗೂ ವ್ಯತ್ಯಾಸ ಇದೆ. ಹೊರಗೆ ಎಷ್ಟೇ ಅನ್ಯ ಧರ್ಮೀಯ ದ್ವೇಷದ ಭಾಷಣ ಮಾಡಿದರೂ, ಮುಸ್ಲಿಂ ಸಮುದಾಯದ ನಡುವೆ ಒಳ್ಳೆಯ ಸ್ನೇಹಿತರು ಈಕೆಗೆ ಇದ್ದಾರೆ ಎನ್ನುತ್ತಾರೆ,” ಚೈತ್ರಾ ಮಾಜಿ ಸ್ನೇಹಿತರೊಬ್ಬರು.

ಆಕೆಯ ಬಗೆಗೆ ಏನೇ ಪ್ರತಿಪಾದಿಸಿದರೂ, ಅಂತಿಮವಾಗಿ ಚೈತ್ರಾ ನಾಯಕ್‌ಳ ಸಾರ್ವಜನಿಕ ವರ್ತನೆಯ ಪರಿಣಾಮಗಳು ಕಾನೂನಿನ ಚೌಕಟ್ಟಿನಲ್ಲಿ ಮಾತ್ರವೇ ಮುಖ್ಯವಾಗುತ್ತವೆ. ಈಗಾಗಲೇ ಆಕೆಯ ಭಾಷಣ ಹಾಗೂ ಚಟುವಟಿಕೆಗಳಿಂದ ಸಂಘರ್ಷಗಳು ನಡೆದಿವೆ. ಕೋಮು ದ್ವೇಷದ ಬೆಂಕಿಗೆ ಚೈತ್ರಾ ಮಾತುಗಳು ತುಪ್ಪ ಸುರಿಯುತ್ತಿವೆ. ಬಿಜೆಪಿ ನಾಯಕರ ಟ್ವೀಟ್‌ಗಳು ಸಹಮತವಾಗುವ ಅಪಾಯಗಳಿವೆ.

ಬಡ ಕುಟುಂಬದ ಹುಡುಗಿ ನೌಕರಿ ಬಿಟ್ಟು, ಉದ್ರೇಕಕಾರಿ ಭಾಷಣವನ್ನೇ ಬದುಕಿನ ಮೆಟ್ಟಿಲು ಮಾಡಿಕೊಳ್ಳಲು ಹೊರಟಿದ್ದರೂ, ಇದು ಒಬ್ಬಂಟಿ ಪಯಣವಂತೂ ಆಗಿಲು ಸಾಧ್ಯವಿಲ್ಲ. ಸುತ್ತ ವ್ಯವಸ್ಥಿತವಾದ ಬಲವೊಂದು ಕೆಲಸ ಮಾಡುತ್ತಿರುವ ಸಾಧ್ಯತೆಯಿದ್ದು, ತನಿಖೆಯೊಂದು ನಡೆಯಬೇಕಿದೆ. ಅದಕ್ಕಾಗಿ ಗೃಹ ಇಲಾಖೆಯ ಹೊಣೆ ಹೊತ್ತಿರುವ ಸಚಿವ ಜಿ. ಪರಮೇಶ್ವರ್ ಈ ಕಡೆಗೂ ಕೊಂಚ ಗಮನ ಹರಿಸಬೇಕಿದೆ.