samachara
www.samachara.com
‘ಪ್ರ-ವಚನ ಕ್ರಾಂತಿ- 2’: ಲಿಂಗಾಯತ ಸ್ವತಂತ್ರ ಧರ್ಮ ಹಾಗೂ ವೈಚಾರಿಕ ಪ್ರಜ್ಞೆಯ ಸವಾಲುಗಳು...
GROUND REPORT

‘ಪ್ರ-ವಚನ ಕ್ರಾಂತಿ- 2’: ಲಿಂಗಾಯತ ಸ್ವತಂತ್ರ ಧರ್ಮ ಹಾಗೂ ವೈಚಾರಿಕ ಪ್ರಜ್ಞೆಯ ಸವಾಲುಗಳು...

1905ರಲ್ಲಿ ದಾವಣಗೆರೆಯಲ್ಲಿ ‘ಧನುರ್ಧಾರಿ’ ಎಂಬ ಪತ್ರಿಕೆಯನ್ನು ಆರಂಭಿಸಿದವರು ಹರ್ಡೆಕರ್ ಮಂಜಪ್ಪನವರು. ಮೊಟ್ಟಮೊದಲ ಬಾರಿಗೆ ಬಸವ ಜಯಂತಿಯನ್ನು ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಸ್ವತಂತ್ರ ಲಿಂಗಾಯತ ಧರ್ಮ; ಹೀಗೊಂದು ವಿಚಾರ ಮುನ್ನೆಲೆ ಬಂದಿದ್ದು ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ. ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ವೀರಶೈವ- ಲಿಂಗಾಯತರ ನಡುವೆ ಎಂದೋ ನಡೆದ ಸಂಕರವೊಂದನ್ನು ಒಡೆಯುವ, ಆ ಮೂಲಕ 12ನೇ ಶತಮಾನದಲ್ಲಿ ಬಸವಣ್ಣ ಹುಟ್ಟು ಹಾಕಿದ ಲಿಂಗಾಯತ ಧರ್ಮವನ್ನು ಎತ್ತಿ ಹಿಡಿಯುವ ಪ್ರಯತ್ನದ ಭಾಗವಾಗಿ ವಿರಕ್ತ ಮಠಗಳ ನೇತೃತ್ವದಲ್ಲಿ ಉರುಳಿದ ದಾಳವೇ ಸ್ವತಂತ್ರ ಲಿಂಗಾಯತ ಧರ್ಮವಾಗಿತ್ತು.

ಹೀಗೊಂದು ಪ್ರಯತ್ನದ ಫಲಾಫಲಗಳು 2018ರ ವಿಧಾನಸಭಾ ಚುನಾವಣೆಗೆ ಮುಂಚೆ ಢಾಳಾಗಿ ಕಾಣಿಸಿಕೊಂಡಿತಾದರೂ, ಉತ್ತರ ಕರ್ನಾಟಕ ಭಾಗದಲ್ಲಿ ವೀರಶೈವ ಮತ್ತು ಲಿಂಗಾಯತ ಎಂಬ ಎರಡು ಪ್ರತ್ಯೇಕ ಆಲೋಚನಾ ಕ್ರಮಗಳನ್ನು ಗುರುತಿಸುವ ಕೆಲಸ ಆರಂಭವಾಗಿ ದಶಕಗಳೇ ಉರುಳಿವೆ.

1905ರಲ್ಲಿ ದಾವಣಗೆರೆಯಲ್ಲಿ 'ಧನುರ್ಧಾರಿ' ಎಂಬ ಪತ್ರಿಕೆಯನ್ನು ಆರಂಭಿಸಿದವರು ಹರ್ಡೆಕರ್ ಮಂಜಪ್ಪನವರು. ಮೊಟ್ಟಮೊದಲ ಬಾರಿಗೆ ಬಸವ ಜಯಂತಿಯನ್ನು ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದರ ಜತೆಗೆ, ಕೂಡಲ ಸಂಗಮದಿಂದ ಉಳಿವಿವರೆಗೆ ಹೋರಾಟದ ಮೂಲಕ ಉಳಿಸಿಕೊಂಡು ಬಂದ ವಚನಗಳನ್ನು ಹೊಸ ತಲೆಮಾರಿಗೆ ಮುದ್ರಣ ರೂಪದಲ್ಲಿ ನೀಡಿದವರು ಮಂಜಪ್ಪನವರು. ಸೇವಾ ದಳವನ್ನು ಹುಟ್ಟುಹಾಕುವ ಮೂಲಕ ಕಾಲದ ಓಘದಲ್ಲಿ ವೀರಶೈವರ ಪ್ರಾಬಲ್ಯದಲ್ಲಿ ಮರೆಯಾಗಿದ್ದ ಲಿಂಗಾಯತ ಪ್ರಜ್ಞೆಗೆ ಜೀವ ಕೊಟ್ಟವರು ಹರ್ಡೆಕರ ಮಂಜಪ್ಪ. ಅವರ ಆಶಯಗಳ ಮುಂದುವರಿದ ಭಾಗ ಎಂಬಂತೆ ಹಲವು ವಿರಕ್ತ ಮಠಗಳು ಲಿಂಗಾಯತ ಧರ್ಮದ ಪ್ರತಿಪಾದನೆಗೆ ಪ್ರವಚನವೂ ಸೇರಿದಂತೆ ಹಲವು ಕ್ರೀಯಾಶೀಲ ಮಾರ್ಗಗಳನ್ನು ಅನುಸರಿಸಿಕೊಂಡು ಬರುತ್ತಿವೆ.

ಹೀಗಿದ್ದೂ, ವೀರಶೈವ ಲಿಂಗಾಯತರು ರಾಜಕಾರಣಕ್ಕೆ ಬಂದರೆ ಭಾರತೀಯ ಜನತಾ ಪಕ್ಷದ ಜತೆಗೆ ನಿಂತರು. ಹಳೇ ಮೈಸೂರು ಭಾಗದಿಂದ ಬಂದು ಶಿವಮೊಗ್ಗದಲ್ಲಿ ನೆಲೆ ಕಂಡುಕೊಂಡ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಉತ್ತರ ಕರ್ನಾಟಕದ ವೀರಶೈವ- ಲಿಂಗಾಯತರ ಪಾಲಿಗೆ ಹೊಸ ನಾಯಕರಾಗಿ ರೂಪುಗೊಂಡರು. ಒಂದು ಕಾಲದಲ್ಲಿ ರಾಮಕೃಷ್ಣ ಹೆಗಡೆ ಹೊಂದಿದ್ದ ಸ್ಥಾನಮಾನ ಯಡಿಯೂರಪ್ಪನವರಿಗೆ ಸಿಕ್ಕಿತು.

ಒಂದು ಕಡೆ ಬಿಜೆಪಿ ಮತ್ತು ಅದರ ಹಿಂದುತ್ವದ ಸಿದ್ಧಾಂತ, ಮತ್ತೊಂದು ಕಡೆ ಲಿಂಗಾಯತ ಪ್ರಜ್ಞೆ ಮತ್ತು ಬಸವಣ್ಣ ಪ್ರತಿಪಾದಿಸಿದ ವಿಚಾರಗಳ ನಡುವಿನ ವೈರುಧ್ಯ ಆಳದಲ್ಲಿ ಇದ್ದೇ ಇತ್ತು. ಯಾವಾಗ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದನ್ನು ಬಳಸಿಕೊಳ್ಳಲು ಅಖಾಡಕ್ಕೆ ಇಳಿಯಿತೋ, ಧಾರ್ಮಿಕ ವೈರುಧ್ಯ ದೊಡ್ಡ ಮಟ್ಟದಲ್ಲಿ ಸ್ಫೋಟಗೊಳ್ಳಲು ಕಾರಣವಾಯಿತು.

ಇಡಗಂದಿ ಸಮೀಪ ಆಲಮಟ್ಟಿ ಜಲಾಶಯದ ತಪ್ಪಲಿನಲ್ಲಿ ಇರುವ ಹರ್ಡೆಕರ ಮಂಜಪ್ಪ ಸ್ಮಾರಕ. 
ಇಡಗಂದಿ ಸಮೀಪ ಆಲಮಟ್ಟಿ ಜಲಾಶಯದ ತಪ್ಪಲಿನಲ್ಲಿ ಇರುವ ಹರ್ಡೆಕರ ಮಂಜಪ್ಪ ಸ್ಮಾರಕ. 
/ಸಮಾಚಾರ. 

ಇವತ್ತಿಗೆ ಚುನಾವಣೆ ಮುಗಿದಿದೆ. ಲಿಂಗಾಯತ ಧರ್ಮ ಪ್ರತಿಪಾದನೆಗೆ ಇಳಿದ ಹಲವು ಕಾಂಗ್ರೆಸ್ ನಾಯಕರು ಸೋಲುಂಡಿದ್ದಾರೆ. ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಆದರೆ, ಹರ್ಡೆಕರ ಮಂಜಪ್ಪ ಅವರಿಂದ ಆರಂಭಗೊಂಡ ಸ್ವತಂತ್ರ ಲಿಂಗಾಯತ ಧರ್ಮ ಪ್ರತಿಪಾದನೆ ಮಾತ್ರ ಹೊಸ ಆಯಾಮದಲ್ಲಿ ಇನ್ನೂ ಜೀವಂತವಾಗಿದೆ. 'ರಾಷ್ಟ್ರೀಯ ಬಸವ ಸೈನ್ಯ'ದಂತಹ ಯುವ ಸಂಘಟನೆಗಳು ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿವೆ.

"ಒಂದು ಕಾಲದಲ್ಲಿ ಬಾಗೇವಾಡಿಯಲ್ಲಿ ಆರ್‌ಎಸ್‌ಎಸ್‌ ಶಾಖೆ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಅದನ್ನು ಬಂದ್ ಮಾಡಿಸಿದ್ದೀವಿ. ರಾಜಕೀಯ ಬಂದಾಗ ಯಾರು ಯಾವ ಪಕ್ಷದ ಜತೆ ನಿಲ್ಲುತ್ತಾರೆ ಎಂಬುದು ಅವರವರಿಗೆ ಬಿಟ್ಟ ಸ್ವಾತಂತ್ರ್ಯ. ಆದರೆ ಧರ್ಮದ ವಿಚಾರಕ್ಕೆ ಬಂದರೆ ಗುಡಿ- ಗುಂಡಾರಗಳನ್ನು ಸುತ್ತುವುದು ಲಿಂಗಾಯತರಿಗೆ ಸರಿ ಕಾಣುವುದಿಲ್ಲ. ಮನೆಯಲ್ಲಿ ಲಕ್ಷ್ಮೀ ಪೂಜೆಯಂತಹ ವೈದಿಕ ಆಚರಣೆಗಳನ್ನು ರೂಢಿಸಿಕೊಂಡು ಬಂದ ಲಿಂಗಾಯತರನ್ನು ಅದರಿಂದ ಹೊರತರಬೇಕಿದೆ. ಅದು ನಮ್ಮ ಮುಂದಿರುವ ಸವಾಲು,'' ಎನ್ನುತ್ತಾರೆ ಬಾಗೇವಾಡಿಯ ಹಿರಿಯ ಬಿಜೆಪಿ ನಾಯಕರಾಗಿದ್ದ, ಸಾಹಿತಿ ಹಳಕಟ್ಟಿಯವರು.

'ಸಮಾಚಾರ'ದ ಜತೆ ಮಾತನಾಡಿದ ಅವರು, "ಒಂದು ಕಾಲದಲ್ಲಿ ವೀರಶೈವ- ಲಿಂಗಾಯತರಿಗೆ ಆಯ್ಕೆಗಳು ಇರಲಿಲ್ಲ. ಬಿಜೆಪಿ ಜತೆಗೆ ನಿಂತರು. ಆದರೆ ಇವತ್ತು ಪರಿಸ್ಥಿತಿ ಬದಲಾಗುತ್ತಿದೆ. ನಾವು ಅಧಿಕಾರ ರಾಜಕಾರಣಕ್ಕಿಂತ ಹೊರತಾದ ವೈಚಾರಿಕ ರಾಜಕಾರಣದ ಕಡೆಗೆ ಹೆಚ್ಚು ಆಲೋಚನೆ ಮಾಡುತ್ತಿದ್ದೀವಿ. 2018ರ ವಿಧಾನ ಸಭಾ ಚುನಾವಣೆ ನಮಗೆ ಮೊದಲ ಪ್ರಯೋಗ ಅಷ್ಟೆ,'' ಎಂದರು.

ಹಳಕಟ್ಟಿಯಂತಹ ಹಿರಿಯ ಸಾಹಿತಿಗಳು, ನಿಜಗುಣ ಪ್ರಭುಗಳಂತಹ ಸ್ವಾಮಿಗಳ ನೇತೃತ್ವದಲ್ಲಿ ಯುವ ಲಿಂಗಾಯತ ಪಡೆಯೊಂದು ಇಲ್ಲಿ ತಯಾರಾಗಿದೆ. "ನಮ್ಮ ಯುವಕರು ಸಂಘಟನೆ ವಿಚಾರಕ್ಕೆ ಬಂದರೆ ಬಜರಂಗ ದಳ, ಶ್ರೀರಾಮ ಸೇನೆಯಂತಹ ಮತೀಯ ಸಂಘಟನೆಗಳಲ್ಲಿ ಸೇರಿಕೊಂಡಿದ್ದರು. ಅಂತವರಿಗಾಗಿ ರಾಷ್ಟ್ರೀಯ ಬಸವ ಸೈನ್ಯ ಆರಂಭಿಸಿದ್ದು 2001ರಲ್ಲಿ. ಈಗ ಸುಮಾರು 6 ಸಾವಿರ ಕಾರ್ಯಕರ್ತರಿದ್ದಾರೆ. ಜಾತಿ, ಧರ್ಮಗಳ ಆಚೆಗೆ ಇಲ್ಲಿ ಸದಸ್ಯತ್ವ ನೀಡಲಾಗುತ್ತಿದೆ. ಬಸವಣ್ಣ ಪ್ರತಿಪಾದಿಸಿದ ವಿಚಾರಗಳನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ,'' ಎನ್ನುತ್ತಾರೆ ರಾಷ್ಟ್ರೀಯ ಬಸವ ಸೈನ್ಯದ ಸ್ಥಳೀಯ ಅಧ್ಯಕ್ಷ ಶಂಕರ್ ಗೌಡ ಬಿರಾದಾರ್.

ಇದರ ಜತೆಗೆ ಲಿಂಗಾಯತ ಧರ್ಮ ಪ್ರತಿಪಾದನೆ ಮುನ್ನೆಲೆ ಬರುತ್ತಲೇ ಹಲವು ಹೊಸ ಸಂಘಟನೆಗಳು ಈ ನಿಟ್ಟಿನಲ್ಲಿ ಇಲ್ಲಿ ಹುಟ್ಟಿಕೊಂಡಿವೆ. ಜಾಗತಿಕ ಲಿಂಗಾಯತ ಮಹಾ ಸಭಾ ಕೂಡ ಅದರಲ್ಲೊಂದು. ಇವುಗಳಲ್ಲಿನ ಒಂದು ಸಮಸ್ಯೆ ಏನೆಂದರೆ, ಈ ಸಂಘಟನೆಗಳು ವೈಚಾರಿಕತೆಗಿಂತ ಹೆಚ್ಚಾಗಿ ಅಧಿಕಾರ ರಾಜಕಾರಣದ ನೆಲೆಯನ್ನು ಹೆಚ್ಚು ನೆಚ್ಚಿಕೊಂಡಂತೆ ಕಾಣಿಸುತ್ತದೆ. ಹೀಗಾಗಿ ಇಂತಹ ಸಂಘಟನೆಗಳ ಕಾರ್ಯಕರ್ತರಲ್ಲಿ ಇನ್ನೂ ಜಾತಿಯತೆಯಾಗಲೀ, ಸನಾತನ ಮನಸ್ಥಿತಿಯಾಗಲೀ ಸಂಪೂರ್ಣವಾಗಿ ಮರೆಯಾಗಿಲ್ಲ.

“ಬಣ್ಣಗಳನ್ನು ಇಟ್ಟುಕೊಂಡು ಅವರು- ಇವರು ಎಂದು ಗುರುತಿಸುತ್ತಾರೆ. ಹಸಿರು ಎಂದರೆ ಮುಸ್ಲಿಂರು, ಕೇಸರಿ ಎಂದರೆ ಹಿಂದೂಗಳು ಎಂದು ಸಂಕೇತಗಳು ಹುಟ್ಟಿಕೊಂಡಿವೆ. ನಮ್ಮಲ್ಲೇ ಸವದತ್ತಿ ಎಲ್ಲಮ್ಮಗೆ ಹಸಿರು ಬಟ್ಟೆ ಧರಿಸಬೇಕು. ದರ್ಗಾಗಳಿಗೆ ಕೇಸರಿ ಚಾದರ ಹೊದಿಸುತ್ತಾರೆ. ಹೀಗಿರುವಾಗ ಬಣ್ಣಗಳನ್ನು ಇಟ್ಟುಕೊಂಡು ಎಷ್ಟು ದಿನ ರಾಜಕೀಯ ಮಾಡಲು ಸಾಧ್ಯ ಇದೆ. ಇದು ಮೊದಲು ಲಿಂಗಾಯತ ಧರ್ಮಕ್ಕಾಗಿ ಹೊರಬಂದ ಹೊಸ ತಲೆಮಾರಿನ ಯುವಕರಿಗೆ ಅರ್ಥವಾಗಬೇಕು,” ಎಂದರು ಕೂಡಲ ಸಂಗಮದಲ್ಲಿ ಸಿಕ್ಕ ಲಿಂಗಾಯತ ಧರ್ಮ ಪ್ರತಿಪಾದಕರೊಬ್ಬರು. ಅಧಿಕಾರ ರಾಜಕಾರಣ ಸುಲಭ, ಆದರೆ ವೈಚಾರಿಕತೆ ಸಮಯ ಬೇಡುವ ಪ್ರಕ್ರಿಯೆ. ಇದನ್ನು ಈ ಸಂಘಟನೆಗಳ ಕಾರ್ಯಕರ್ತರಿಗೆ ಅರ್ಥ ಪಡಿಸುವ ಅಗತ್ಯ ಹೆಚ್ಚಿದೆ.

ಒಂದು ಆಯಾಮದಲ್ಲಿ ಲಿಂಗಾಯತ ಪ್ರಜ್ಞೆ ಎಂಬುದು ಕಾಂಗ್ರೆಸ್ ಪ್ರಾಯೋಜಿತ, ಹಿಂದೂ ಧರ್ಮವನ್ನು ಒಡೆಯುವ ಪ್ರಕ್ರಿಯೆ ಎನ್ನಿಸುತ್ತದೆ. ಆದರೆ ಆಳಕ್ಕಿಳಿದರೆ ಅದರ ವೈಚಾರಿಕ ಪರಿಣಾಮಗಳು ನಿಧಾನವಾಗಿ ಉತ್ತರ ಕರ್ನಾಟಕದಲ್ಲಿ ಹರಡುತ್ತಿರುವ ವಿಚಾರ ಕಾಣಿಸುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ, ಪ್ರವಚನ ವೇಳೆಯಲ್ಲಿ ನಿಜಗುಣ ಪ್ರಭು, "ನಿಮ್ಮಲ್ಲಿ ಎಷ್ಟು ಜನ ಲಕ್ಷ್ಮೀ ಪೂಜೆಯನ್ನು ಬಿಟ್ಟಿದ್ದೀರಾ?'' ಎಂದು ಮಹಿಳೆಯರನ್ನು ಪ್ರಶ್ನಿಸಿದರು. ಬಹುತೇಕ ಮಹಿಳೆಯರೇ ತುಂಬಿದ್ದ ಪ್ರೇಕ್ಷಕರಲ್ಲಿ ಗಣನೀಯ ಪ್ರಮಾಣದ ಮೇಲೆತ್ತಿದ ಕೈಗಳು ಕಾಣಿಸಿದವು.

ಇದು ಸ್ವತಂತ್ರ ಧರ್ಮ ಪ್ರತಿಪಾದನೆ ರಾಜಕಾರಣದ ದೂರಗಾಮಿ ಪರಿಣಾಮಕ್ಕೆ ಒಂದು ಉದಾಹರಣೆ ಅಷ್ಟೆ. ವೈದಿಕ ಪೂಜೆ ಪುನಸ್ಕಾರಗಳನ್ನು ತ್ಯಜಿಸುವುದು, ಗುಡಿ- ಗುಂಡಾರಗಳನ್ನು ಸುತ್ತುವುದು ನಿಲ್ಲಿಸುವುದು ಮತ್ತು ಅಂತರಂಗ ಶುದ್ಧಿ ಎಡೆಗೆ ನಡೆಯುವುದು ಸ್ವತಂತ್ರ ಧರ್ಮದ ಮೂಲ ಉದ್ದೇಶದಂತೆ ಕಾಣಿಸುತ್ತಿದೆ. ಇದರ ರಾಜಕೀಯ ವಸೂಲಿಬಾಜಿಗಳೇನೆ ಇರಲಿ, ಆಳದಲ್ಲಿ ಜನರ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ವೈದಿಕ ಸಂಪ್ರದಾಯದ ಕೊಳೆಯನ್ನು ಇವು ತೊಳೆಯುವ ಸಾಧ್ಯತೆಗಳು ಕಾಣಿಸುತ್ತಿವೆ. ಇದರಿಂದ ಸಾಮಾನ್ಯ ಜನರ ಜೀವನ ಶೈಲಿಯಲ್ಲಿಯೂ ಇಲ್ಲಿ ಬದಲಾವಣೆಗಳು ಕಾಣಿಸುತ್ತಿವೆ...