‘ಪ್ರ-ವಚನ ಕ್ರಾಂತಿ- 1’: ನಿಜಗುಣ ಪ್ರಭು ಹಾಗೂ ಗೌರಿ ಹತ್ಯಾ ಪ್ರಕರಣದ ಆರೋಪಿಯ ಮುಖಾಮುಖಿ...
GROUND REPORT

‘ಪ್ರ-ವಚನ ಕ್ರಾಂತಿ- 1’: ನಿಜಗುಣ ಪ್ರಭು ಹಾಗೂ ಗೌರಿ ಹತ್ಯಾ ಪ್ರಕರಣದ ಆರೋಪಿಯ ಮುಖಾಮುಖಿ...

ಸೈದ್ಧಾಂತಿಕ ತಾಕಲಾಟ ಮೇರೆ ಮೀರಿರುವ ದಿನಗಳಲ್ಲಿ ಹುಟ್ಟಿದ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ‘ಸಮಾಚಾರ’ ಬಾಗೇವಾಡಿಗೆ ಭೇಟಿ ನೀಡಿತು. ಇದು ಅಲ್ಲಿ ಕಂಡ ವಿಚಾರಗಳನ್ನು ಮುಂದಿಡುವ ವರದಿ ಅಷ್ಟೆ.

“ಪರುಶುರಾಮ್ ವಾಗ್ಮೋರೆ (ಗೌರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ) ಸಿಂಧಗಿಯಲ್ಲಿ ಪ್ರವಚನ ನಡೆಸುತ್ತಿದ್ದಾಗ ಎದುರಿಗೆ ಬಂದು ಕುಳಿತಿರುತ್ತಿದ್ದ ಎಂಬುದು ಇತ್ತೀಚೆಗಷ್ಟೆ ಗೊತ್ತಾಯಿತು...” ಎಂದರು ನಿಜಗುಣ ಪ್ರಭು.

ಅವರ ಮುಖದಲ್ಲಿ ಆತಂಕ ಇರಲಿಲ್ಲ; ದನಿಯಲ್ಲಿ ಏರಿಳಿತಗಳಿರಲಿಲ್ಲ. ಹತ್ಯೆ ಪ್ರಕರಣದಲ್ಲಿ ಆರೋಪಿ, ಸೈದ್ಧಾಂತಿಕವಾಗಿ ತಾವು ಪ್ರತಿಪಾದಿಸುವ ವಿಚಾರಕ್ಕಿಂತ ಭಿನ್ನ ನಿಲುವನ್ನು ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪ್ರವಚನ ಕೇಳಿಯೂ ಬದಲಾಗಲಿಲ್ಲವಲ್ಲ ಎಂಬ ಬೇಸರವಿದ್ದಂತೆ ಕಾಣಿಸುತ್ತಿತ್ತು. ಬಸವಣ್ಣ ಹುಟ್ಟಿದ ಸ್ಥಳ ಬಸವನ ಬಾಗೇವಾಡಿಯ ತಾಲೂಕು ಕಚೇರಿ ಮುಂಭಾಗದ ಪದವಿ ಪೂರ್ವ ಕಾಲೇಜಿನ ಪಕ್ಕದ ಮನೆಯೊಂದರಲ್ಲಿ ಅವರು ಕಳೆದ ಒಂದು ತಿಂಗಳಿಂದ ತಾತ್ಕಾಲಿಕ ಬಿಡಾರ ಹೂಡಿದ್ದಾರೆ. ಬಾಗೇವಾಡಿಯ ಜನರಿಗೆ ಕಳೆದ 27 ದಿನಗಳ ಕಾಲ ಪ್ರತಿ ದಿನ ಸಂಜೆ 2 ಗಂಟೆಗಳ ಕಾಲ ಪ್ರವಚನ ನೀಡುತ್ತಾ ಬಂದಿದ್ದಾರೆ. ಗುರುವಾರ ‘ಸಮಾಚಾರ’ ಭೇಟಿ ನೀಡಿದ ದಿನ ಅವರ 28 ನೇ ದಿನ ಪ್ರವಚನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಅದಕ್ಕೂ ಮುಂಚೆ ‘ಎಲ್ಲರೊಳಗೊಂದಾಗಿ’ ನೆಲದ ಮೇಲೆಯೇ ‘ಪ್ರಸಾದ’ (ಊಟ) ಸ್ವೀಕರಿಸಲು ಕುಳಿತುಕೊಂಡರು ನಿಜಗುಣ ಪ್ರಭು. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಅವರು ಉತ್ತರ ಕರ್ನಾಟಕ ಭಾಗಗಳಲ್ಲಿ ನಡೆಸಿಕೊಂಡು ಬಂದ ಸಾಮಾಜಿಕ ಕೆಲಸಗಳು, ಕಟ್ಟಿದ ಸಂಘಟನೆಗಳು, ಬೆಳೆಸಿದ ಸಂಸ್ಥೆಗಳು, ಇತ್ತೀಚೆಗೆ ಕೈ ಇಟ್ಟ ಮಾಧ್ಯಮ ಪ್ರಯೋಗಗಳು ಹಾಗೂ ಭವಿಷ್ಯದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳನ್ನು ವಿವರಿಸತೊಡಗಿದರು.

“ನಾನು ಕಾವಿ, ಸ್ವಾಮೀಜಿ ಎಂಬ ಪಟ್ಟಗಳಿಂದ ಮಾನಸಿಕವಾಗಿ ಹೊರಬಂದು ಬಹಳ ಕಾಲವೇ ಆಯಿತು. ಅಗತ್ಯ ಎಂಬ ಕಾರಣಕ್ಕೆ ಕಾವಿ ಹಾಕುತ್ತಿದ್ದೇನೆ. ಜನರಿಗೆ ಇದರ ಅಗತ್ಯ ಇಲ್ಲ ಅನ್ನಿಸಿದ ದಿನ ಕಳಚಿಡಲೂ ಸಿದ್ಧ. ನಮ್ಮ ಬಾಹ್ಯ ನೋಟಗಳಿಗಿಂತ ಕೆಲಸಗಳು ಮಾತ್ರವೇ ಶಾಶ್ವತವಾಗಿ ಉಳಿಯುತ್ತವೆ,’’ ಎಂದು ತಾವು ನಂಬಿರುವ ಅಥವಾ ತಮ್ಮ ನಂಬಿಕೆಯಲ್ಲಾದ ಬದಲಾವಣೆಗಳು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದ್ದವು.

ಕನ್ನಡ ದಿನ ಪತ್ರಿಕೆಯೊಂದು, ವಿಶೇಷವಾಗಿ ಬಲಪಂಥೀಯ ನಿಲುವುಗಳನ್ನು ಪ್ರತಿಪಾದಿಸುವ ಪತ್ರಕರ್ತರ ತಂಡವೊಂದು ನಿಜಗುಣ ಪ್ರಭುಗಳ ವಿರುದ್ಧ ಅಬ್ಬರಿಸಿದ್ದು ವರ್ಷದ ಹಿಂದೆ. ಅದಕ್ಕೆ ಕಾರಣವೂ ಇತ್ತು. ಹೀಗೊಂದು ಹೊಸ ದಾಳಿ ಆರಂಭಕ್ಕೆ ಕೊಂಚ ಮೊದಲು ನಿಜಗುಣಾನಂದರ ಭಾಷಣಗಳ ವಿಡಿಯೋ ತುಣುಕುಗಳು ಯೂ-ಟ್ಯೂಬ್‌ ಅಂಗಳಕ್ಕೆ ಬಂದಿದ್ದವು. ಅಷ್ಟೆ ಅಲ್ಲ, ಅವು ಭಾಷಣಕ್ಕಾಗಿಯೇ ಹುಟ್ಟಿಕೊಂಡವರ ಮಾತುಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದ್ದವು. ಒಂದೊಂದು ವಿಡಿಯೋ ರಾಜ್ಯದ ಉದ್ದಗ್ಗಲದ ಜನರನ್ನು ಹೊಸ ಆಲೋಚನೆ ಕಡೆಗೆ ನಡೆಯುವಂತೆ ಮಾಡಿದ್ದವು.

ಉದಾಹರಣೆಗೆ, ಲಕ್ಷ್ಮೀ ಪೂಜೆ ವಿಚಾರದಲ್ಲಿ ನಿಜಗುಣಾನಂದರು ನೀಡಿದ ಪ್ರವಚನ. ಎಂತಹ ಕರ್ಮಠ ಮನಸ್ಸುಗಳೂ ಒಮ್ಮೆ ನಿಂತು ಆಲೋಚನೆ ಮಾಡುವಂತಿತ್ತು. ಇಂತಹ ಹತ್ತು ಹಲವು ಮಾತುಗಳು ನಿಜಗುಣಾನಂದ ಸ್ವಾಮಿಯನ್ನು ಹೊಸ ತಲೆಮಾರಿಗೆ ಪರಿಚಯಿಸಿದ್ದವು.

ಬಸವನ ಬಾಗೇವಾಡಿಯಲ್ಲಿ ಒಂದು ತಿಂಗಳು ಕಾಲ ನಡೆದ ಪ್ರವಚನದಲ್ಲಿ ಭಾಗವಹಿಸಿದ ಜನರ ಒಂದು ನೋಟ. ಪ್ರತಿ ದಿನ ಪ್ರೈಂ ಟೈಮ್‌ನ 2 ಗಂಟೆಗಳ ಕಾಲ ನಿಜಗುಣ ಪ್ರಭುಗಳ ಮಾತಿಗೆ ಕಿವಿಯಾಗುವ ಜನ, ದೇವರು ಧರ್ಮಗಳ ವಿಚಾರಗಳ ಹೊಸ ಆಲೋಚನೆ ಹೊತ್ತು ಮನೆ ಮರಳುತ್ತಾರೆ. 
ಬಸವನ ಬಾಗೇವಾಡಿಯಲ್ಲಿ ಒಂದು ತಿಂಗಳು ಕಾಲ ನಡೆದ ಪ್ರವಚನದಲ್ಲಿ ಭಾಗವಹಿಸಿದ ಜನರ ಒಂದು ನೋಟ. ಪ್ರತಿ ದಿನ ಪ್ರೈಂ ಟೈಮ್‌ನ 2 ಗಂಟೆಗಳ ಕಾಲ ನಿಜಗುಣ ಪ್ರಭುಗಳ ಮಾತಿಗೆ ಕಿವಿಯಾಗುವ ಜನ, ದೇವರು ಧರ್ಮಗಳ ವಿಚಾರಗಳ ಹೊಸ ಆಲೋಚನೆ ಹೊತ್ತು ಮನೆ ಮರಳುತ್ತಾರೆ. 
/ಸಮಾಚಾರ. 

ಪರಿಣಾಮ, ಸೈದ್ಧಾಂತಿಕ ವಿರೋಧಿಗಳು ಅವರನ್ನು ವೈಯಕ್ತಿಕವಾಗಿ ಹಣಿಯಲು ನಿಂತರು. ಆದರೆ ಅಂತಹ ಪ್ರಯತ್ನಗಳಿಗೆ ಬೆಲೆ ಸಿಗಲಿಲ್ಲ. ಬದಲಿಗೆ ನಿಜಗುಣಾನಂದ ಸ್ವಾಮಿ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು. ಯಾಕೆ? ಸಾಹಿತಿಗಳು, ಪ್ರಗತಿಪರರು ಎದುರಿಸಲು ಸಾಧ್ಯವಾಗದ ಸೈದ್ಧಾಂತಿಕ ಲೇಪನದ ವೈಯಕ್ತಿಕ ದಾಳಿಗಳನ್ನು ನಿಜಗುಣ ಪ್ರಭುಗಳು ಎದುರಿಸಿದ್ದು ಹೇಗೆ? ಇದನ್ನು ಹುಡುಕುವ ಪ್ರಯತ್ನದ ಭಾಗವಾಗಿಯೇ ‘ಸಮಾಚಾರ’ ಬಾಗೇವಾಡಿಗೆ ಭೇಟಿ ನೀಡಿತು. ಇದು ಅಲ್ಲಿ ಮುಂದಿನ 48 ಗಂಟೆಗಳಲ್ಲಿ ಕಂಡ ವಿಚಾರಗಳನ್ನು ಮುಂದಿಡುವ ವರದಿ ಅಷ್ಟೆ.

ದಾಳಿ ಹೊಸತಲ್ಲ:

“ನನ್ನ ಮೇಲೆ ಸನಾತನವಾದಿಗಳು ದಾಳಿ ನಡೆಸಿದ್ದು ಹೊಸತೇನಲ್ಲ. ದಶಕದ ಹಿಂದೆಯೇ ‘ಸೂಳೆಯೇ ನನ್ನ ದೇವರು’ ಎಂದು ಹೇಳಿಕೆ ನೀಡಿದ್ದೆ. ಬಸವಣ್ಣ ಸೂಳೆ ಸಂಕವ್ವಳಿಗೆ ದೀಕ್ಷೆ ನೀಡಿದ್ದರು. ಅವರಿಗೂ ಒಂದು ಸಾಮಾಜಿಕ ಮನ್ನಣೆ ನೀಡಲು ಪ್ರಯತ್ನಿಸಿದ್ದರು. ಆಗಲೂ ಇದೇ ಸನಾತನವಾದಿಗಳು ವಿರೋಧ ಮಾಡಿದ್ದರು. ನನ್ನ ವಿಚಾರದಲ್ಲಿ ಅವರಿಗೆ ವೈಯಕ್ತಿಕವಾಗಿ ಈವರೆಗೂ ಏನೂ ಸಿಗಲಿಲ್ಲ. ನಾನು ಮೂರು ದಶಕಗಳ ಕಾಲ ಎಚ್ಚರಿಕೆಯಿಂದಲೇ ಜೀವನ ನಡೆಸಿಕೊಂಡು ಬಂದವನು. ಒಳಗೊಂದು ಹೊರಗೊಂದು ಇಟ್ಟುಕೊಂಡು ಸಾರ್ವಜನಿಕ ಬದುಕು ಬದುಕುವ ಕೆಲಸ ಮಾಡಲಿಲ್ಲ. ಹೀಗಾಗಿ ನನ್ನ ಬಗ್ಗೆ ಎಷ್ಟೇ ವಿರೋಧದಿಂದ ಬರೆದರೂ ಜನ ನಂಬುವುದಿಲ್ಲ,’’ ಎನ್ನುತ್ತಾರೆ ನಿಜಗುಣ ಪ್ರಭು.

ಹಾಗೆ ನೋಡಿದರೆ, ಬಾಗೇವಾಡಿಯಂತಹ ಪುಟ್ಟ ತಾಲೂಕಿನಲ್ಲಿ ಕಳೆದ 27 ದಿನ ಸಾವಿರಾರು ಜನ ನಿತ್ಯ ಪ್ರವಚನಕ್ಕೆ ಕಿವಿ ಕೊಟ್ಟಿದ್ದರು. 28ನೇ ದಿನದ ಪ್ರವಚನದಲ್ಲಿಯೂ ನಿಜಗುಣ ಪ್ರಭು ಪ್ರತಿಪಾದಿಸಿದ ವಿಚಾರಗಳನ್ನು ಕೇಳಿಕೊಂಡರು ಜನ. “ನೀವು ಲಿಂಗಾಯತರೂ ದಲಿತರೇ,’’ ಎಂದು ಸ್ವಾಮೀಜಿ ಹೇಳಿದರೆ ಸಾವಿರಾರು ಜನ ಸೇರಿದ್ದ ಸಭೆಯಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಯಬ್ಧ ಇತ್ತು. ಮುಂದುವರಿದು ಮಾತನಾಡಿದ ಅವರು, “ಈ ದೇಶದ ವರ್ಣಾಶ್ರಮ ವ್ಯವಸ್ಥೆಯಲ್ಲಿ ಲಿಂಗಾಯತರು ಎಲ್ಲಿ ಬರುತ್ತೀರಿ ಎಂಬುದು ಗೊತ್ತಿದೆಯಾ?’’ ಎಂದು ಪ್ರಶ್ನಿಸಿದರು. ಲಿಂಗಾಯತರೂ ಕೂಡ ದಲಿತರು ಹೇಗಾಗುತ್ತಾರೆ ಎಂಬುದನ್ನು ಅವರು ವಚನಗಳ ಮೂಲಕವೇ ಮುಂದಿಡುತ್ತಾ ಹೋದರು.

ನಿಜಗುಣಾನಂದ ಸ್ವಾಮಿ ಈ ತಲೆಮಾರಿನ ಕಾವಿದಾರಿಗಳ ಪೈಕಿ ನೇರ ಹಾಗೂ ನಿಷ್ಠುರ ಮಾತುಗಳ ಕಾರಣಕ್ಕೆ ನೆನಪಿನಲ್ಲಿ ಉಳಿಯುತ್ತಾರೆ. ವಿಶೇಷ ಅಂದರೆ, ಅವರು ಪ್ರತಿಪಾದಿಸುವ ಪ್ರತಿ ವಿಚಾರಕ್ಕೂ ಹಿನ್ನೆಲೆಯಲ್ಲಿ ವಚನವೊಂದನ್ನು ಉದಾಹರಣೆಯಾಗಿ ನೀಡುತ್ತಾರೆ. ಅವರು ಏನನ್ನೂ ಹೇಳುತ್ತಿದ್ದಾರೋ, ಅವನ್ನೆಲ್ಲಾ 12ನೇ ಶತಮಾನದ ವಚನ ಚಳವಳಿ ಹೇಳಿಯಾಗಿದೆ ಎಂಬುದನ್ನು ಜನರಿಗೆ ಸರಳವಾಗಿ ಅರ್ಥ ಪಡಿಸುತ್ತಾರೆ. ಬಹುಶಃ ಈ ಕಾರಣಕ್ಕಾಗಿಯೇ ಸಾವಿರಾರು ಜನ ಸೇರಿದ ಸಭೆಗಳಲ್ಲಿ ಸಣ್ಣ ಪ್ರತಿರೋಧವೂ ಕಾಣಿಸುವುದಿಲ್ಲ. ಬದಲಿಗೆ, ಪ್ರವಚನ ಮುಗಿದ ಮೇಲೆ ಜನ ಬಂದು ಆಡಿದ ಪ್ರತಿ ಮಾತಿಗೂ ವೈಯಕ್ತಿಕ ನೆಲೆಯಲ್ಲಿ ಸಮ್ಮಿತಿ ಸೂಚಿಸುತ್ತಾರೆ.

ಅದು ಬಸವ ಸೇನೆ:

ರಾಜಧಾನಿಯಲ್ಲಿ ಕುಳಿತು ಅವರ ಭಾಷಣಗಳನ್ನು ಯೂ-ಟ್ಯೂಬ್‌ನಲ್ಲಿ ನೋಡಿದವರಿಗೆ ಅವರೊಬ್ಬ ಭಾ‍ಷಣಕಾರ ಎಂಬ ಸೀಮಿತ ಅನುಭವ ಆಗುತ್ತದೆ. ಆದರೆ ಆಳಕ್ಕಿಳಿದರೆ ನಿಜಗುಣಾನಂದ ಭಾಷಣಗಳ ಆಚೆಗೂ ಕ್ರಿಯಾತ್ಮಕ ನೆಲೆಯಲ್ಲಿ ಮಾಡಿರುವ ಕೆಲಸಗಳು ಕಣ್ಣಿಗೆ ಬೀಳುತ್ತವೆ. ಅವುಗಳಲ್ಲಿ ಗಮನ ಸೆಳೆಯುವಂತಹದ್ದು ‘ರಾಷ್ಟ್ರೀಯ ಬಸವ ಸೇನೆ’. ಬಾಗೇವಾಡಿಯೂ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ದೊಡ್ಡ ಯುವ ಪಡೆ ಬಸವ ಸೇನೆ ಅಡಿಯಲ್ಲಿ ಸಂಘಟನೆಗೊಂಡಿದೆ. ಅದರಲ್ಲಿ ಕೇವಲ ಲಿಂಗಾಯತ ಯುವಕರು ಅಷ್ಟೇ ಅಲ್ಲ, ದಲಿತರು, ಹಿಂದುಳಿದ ಜಾತಿಗಳ ಯುವಕರೂ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಯುವಕರಿದ್ದಾರೆ. ಅವರಲ್ಲೊಬ್ಬ ಅಬೂಬಕರ್.

ಕೂಡಲ ಸಂಗಮದಲ್ಲಿ ‘ರಾಷ್ಟ್ರೀಯ ಬಸವ ಸೇನೆ’ಯ ಸದಸ್ಯ, ಬಾಗೇವಾಡಿಯ ಅಬೂಬಕರ್. 
ಕೂಡಲ ಸಂಗಮದಲ್ಲಿ ‘ರಾಷ್ಟ್ರೀಯ ಬಸವ ಸೇನೆ’ಯ ಸದಸ್ಯ, ಬಾಗೇವಾಡಿಯ ಅಬೂಬಕರ್. 
/ಸಮಾಚಾರ. 

ಬಾಗೇವಾಡಿಯಿಂದ 10 ಕಿ. ಮೀ ದೂರದ ಪುಟ್ಟ ಹಳ್ಳಿಯ 23 ವರ್ಷದ ಅಬೂಬಕರ್ ಧರ್ಮದಲ್ಲಿ ಮುಸ್ಲಿಂ. ಆದರೆ ಜತೆಗಿದ್ದಷ್ಟು ಹೊತ್ತು ಆತ ಧರಿಸಿದ್ದು ಬಸವ ಸೇನೆಯ ಟೀ-ಶರ್ಟ್. “ನನಗೆ ಧರ್ಮದಿಂದ ಹೊರಗೆ ಹಾಕುವ ಬೆದರಿಕೆ ಬಂದಿತ್ತು. ಸತ್ತ ನಂತರ ಹೂಳಲು ಜಾಗ ಕೊಡುವುದಿಲ್ಲ ಎಂದು ಹೆದರಿಸಿದ್ದರು. ಆದರೆ ನನಗೆ ಅಜ್ಜಯ್ಯ (ನಿಜಗುಣ ಪ್ರಭುಗಳನ್ನು ಜನ ಪ್ರೀತಿಯಿಂದ ಅಜ್ಜಯ್ಯ ಅಂತಲೇ ಕರೆಯುತ್ತಾರೆ. ಲಿಂಗಾಯತ ಪರಂಪರೆಯ ಮಠಾಧೀಶರನ್ನು ಇದೇ ಹೆಸರಿನಿಂದ ಕರೆಯಲಾಗುತ್ತದೆ) ಅವರ ಮಾತುಗಳು ಇಷ್ಟ ಆಗುತ್ತವೆ. ಅಲ್ಲಿ ಜಾತಿ, ಧರ್ಮಗಳನ್ನು ದಾಟಿ ಮನುಷ್ಯರ ಉದ್ಧಾರದ ಬಗ್ಗೆ ಮಾತುಗಳು ಇರುತ್ತವೆ. ಹೀಗಾಗಿ ನಾನು ಬಸವ ಸೇನೆಯ ಸದಸ್ಯನಾದೆ. ಎಲ್ಲರೂ ನಾನಿರುವಂತೆಯೇ ಇಲ್ಲಿ ಒಪ್ಪಿಕೊಂಡಿದ್ದಾರೆ,’’ ಎಂದು ಅಬೂಬಕರ್ ವಿವರಿಸಿದ.

ಅಬೂಬರ್ ಹೇಳಿದ ಹಾಗೆ, ಬಸವ ಸೇನೆ ಕೇವಲ ಲಿಂಗಾಯತರನ್ನು ಮಾತ್ರವೇ ಜತೆಗಿಟ್ಟುಕೊಂಡ ಯುವ ಸಂಘಟನೆ ಆಗಿಲ್ಲ ಎಂಬುದೇ ಅದರ ಹೆಗ್ಗಳಿಕೆ. ಮತ್ತು ಅದನ್ನು ಬೆನ್ನಿತ್ತಿದರೆ ಇನ್ನಷ್ಟು ರೋಚಕ ಕತೆಗಳು ಹೊರಬೀಳುತ್ತವೆ....

(ನಾಳೆಗೆ)